ಮಂಗಳೂರಿನಲ್ಲಿ ಮದರ್ ತೆರೇಸಾ
ಒಂದು ನೆನಪು
ಮಂಗಳೂರಿಗೆ ಆಗಮಿಸುವಾಗ ಅವರು 85ರ ಇಳಿವಯಸ್ಸಿನಲ್ಲಿದ್ದರೂ ಉತ್ಸಾಹದ ಚಿಲುಮೆಯಾಗಿದ್ದರು ಮದರ್
ಮಾನವತೆಯ ಮಾತೆ ಮದರ್ ತೆರೇಸಾರವರಿಗೆ ಇಂದು ಸಂತ ಪದವಿ ಪ್ರದಾನವಾಗಲಿದೆ
‘‘ಮದರ್ ತೆರೇಸಾರವರು ಸರಳ ಜೀವನಕ್ಕೊಂದು ಮಾದರಿ. ಅವರು 1995ರಲ್ಲಿ ಮಂಗಳೂರಿಗೆ ಬಂದಿದ್ದಾಗ ಅವರಿಗೆ 85 ವರ್ಷಗಳಾಗಿತ್ತು. ಆ ಒಂದು ವರ್ಷದಲ್ಲಿ 2 ಬಾರಿ ಮಂಗಳೂರಿಗೆ ಆಗಮಿಸಿದ್ದಾಗಲೂ ಅವರನ್ನು ನೋಡಲು ನೂಕುನುಗ್ಗಲು, ಸರತಿ ಸಾಲು. ಪ್ರತಿಯೊಬ್ಬರನ್ನು ಹರಸಬೇಕು. ಪ್ರತಿಯೊಬ್ಬರನ್ನೂ ತಾನು ನೋಡಬೇಕೆಂಬ ತವಕ ಹೊಂದಿದ್ದ ಮದರ್ ತೆರೇಸಾ, ಆ ಪ್ರಾಯದಲ್ಲೂ ಉತ್ಸಾಹದ ಚಿಲುಮೆಯಾಗಿದ್ದರು.’’
ಇದು ಭಾರತ ರತ್ನ, ಇಡೀ ವಿಶ್ವವೇ ಪ್ರೀತಿಯಿಂದ ತಲೆಬಾಗುವ, ಮಾನವೀಯತೆಗೆ ಜಗತ್ಪ್ರಸಿದ್ಧರಾಗಿರುವ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮದರ್ ತೆರೇಸಾ ಅವರು ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಅವರ ಒಡನಾಟದಲ್ಲಿದ್ದ ಸೈಂಟ್ ಆ್ಯಗ್ನೆಸ್ ಕಾನ್ವೆಂಟ್‌ನ ಸುಪೀರಿಯರ್ ಆಗಿದ್ದ ಸಿಸ್ಟರ್ ಶಾಲಿನಿ ಎ.ಸಿ.ಯವರ ಮನದಾಳದ ಮಾತು. ಮದರ್ ತೆರೇಸಾರವರು ಸಂತ ಪದವಿಯನ್ನು ಪಡೆಯಲಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ತೆರೇಸಾ ಅವರ ಅವಿಸ್ಮರಣೀಯ ಭೇಟಿಯ ಕ್ಷಣಗಳ ಬಗ್ಗೆ ‘ವಾರ್ತಾಭಾರತಿ’ ನೆನಪಿಸುವ ಸಣ್ಣ ಪ್ರಯತ್ನವನ್ನು ಈ ಮೂಲಕ ಮಾಡಿದೆ. ಮದರ್ ತೆರೇಸಾ ಅವರು 1960 ಹಾಗೂ 1970ರಲ್ಲಿ ಎರಡು ಬಾರಿ ಭಗಿನಿಯರಿಗೆ ಸಂಬಂಸಿದ ಸಭೆಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಆಗ ಅವರು, ಮಂಗಳೂರಿನ ಮೇರಿಹಿಲ್‌ನ ಅಪೊಸ್ಟೊಲಿಕ್ ಕಾರ್ಮೆಲ್ (ಎಸಿ)ನಲ್ಲಿ ತಂಗಿದ್ದರು. ಅದಾದ ನಂತರ 1995ರ ಜನವರಿ 28ರಂದು ಮಂಗಳೂರಿಗೆ ಮದರ್ ತೆರೇಸಾರವರ ತೃತೀಯ ಭೇಟಿ. ಅಂದು ಬಜ್ಪೆ ವಿಮಾನ ನಿಲ್ದಾಣದಲ್ಲಿ ಆಗ ಮಂಗಳೂರಿನ ಬಿಷಪ್ ಆಗಿದ್ದ ರೆ.ಫಾ. ಡಾ. ಬಾಸಿಲ್ ಡಿಸೋಜಾ, ವಿಕಾರ್ ಜನರಲ್ ಅಲೋಶಿಯಸ್ ಡಿಸೋಜಾ, ಕಾರ್ಯದರ್ಶಿ ಫಾ. ಜೆ.ಬಿ. ಸಲ್ಡಾನಾ, ಸೈಂಟ್ ಆ್ಯಗ್ನೆಸ್ ಕಾನ್ವೆಂಟ್‌ನ ಸುಪೀರಿಯರ್ ಸಿಸ್ಟರ್ ಶಾಲಿನಿ ಸೇರಿದಂತೆ ಇತರ ಗಣ್ಯರು ಅವರನ್ನು ಆದರಪೂರ್ವಕವಾಗಿ ಸ್ವಾಗತಿಸಿದರು. ಜನವರಿ 30ರಂದು (1995) ಸೈಂಟ್ ಆ್ಯಗ್ನೆಸ್ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿದ್ದರು. ಜನವರಿ 31ರಂದು ಹಿಂದಿರುಗಿದ್ದರು. ಮೂರು ದಿನಗಳ ಕಾಲ ಅವರು ಸೈಂಟ್ ಆ್ಯಗ್ನೆಸ್ ಕಾಲೇಜಿನ ಅತಿಥಿಗೃಹದಲ್ಲಿ ತಂಗಿದ್ದರು. ಈ ಸಂದರ್ಭ ಅವರನ್ನು ನೋಡಲು, ಆಶೀರ್ವಾದ ಪಡೆಯಲು ಸರತಿಯಲ್ಲಿ ಜನ ಬಂದಿದ್ದರು. ಅವರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕಾನ್ವೆಂಟ್‌ನ ಅತಿಥಿಗೃಹದಲ್ಲಿ ಕಿಟಕಿ ಮೂಲಕ ಸಾರ್ವಜನಿಕರಿಗೆ ಅವರನ್ನು ನೋಡಲು, ಆಶೀರ್ವಾದ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿ ಆಗಮಿಸಿದ್ದ ಸಾವಿರಾರು ಜನರಿಗೆ ಅವರು ಆಶೀರ್ವಾದ ನೀಡಿದ್ದರು.
ನನ್ನ ಜನರನ್ನು ತೋರಿಸಬೇಕೆಂದು ಹಠ ಹಿಡಿದಿದ್ದರು...!
ಈ ಭೇಟಿಯ ವೇಳೆ ಅವರಿದ್ದಿದ್ದು ಕೇವಲ ಮೂರು ದಿನಗಳು. ಕುಷ್ಠ ರೋಗಿಗಳ ಬಗ್ಗೆ ಅತ್ಯಕ ಪ್ರೀತಿ, ಮಮತೆ, ಕಾಳಜಿ ಹೊಂದಿದ್ದ ಅವರು, ಬಂದ ದಿನದಿಂದ ನನ್ನ ಜನರನ್ನು ನೋಡಬೇಕೆಂದು ಹಠ ಹಿಡಿದಿದ್ದರು. ಆದರೆ ಅವರನ್ನು ಹೊರಗಡೆ ಕರೆದೊಯ್ಯುವುದು ಅಷ್ಟು ಸುಲಭವಾಗಿರಲಿಲ್ಲ. ಅವರು ಹೊರ ಹೋಗುತ್ತಾರೆಂಬ ಸುದ್ದಿ ತಿಳಿದಾಕ್ಷಣ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಅವರ ಆರೋಗ್ಯದ ಹಿತದೃಷ್ಟಿಯಿಂದ ನಾವು ಸಾಕಷ್ಟು ಕಾಳಜಿ ವಹಿಸಬೇಕಾದ ಕಾರಣ, ಅವರ ಬೇಡಿಕೆಯನ್ನು ಈಡೇರಿಸುವ ಸಲುವಾಗಿ, ಅವರನ್ನು ಅತ್ಯಂತ ಗೌಪ್ಯವಾಗಿ, ಭದ್ರತಾ ವ್ಯವಸ್ಥೆಯೊಂದಿಗೆ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಲೆಪ್ರಸಿ ಕೇಂದ್ರ (ಕುಷ್ಠರೋಗಿಗಳ ಚಿಕಿತ್ಸಾ ಕೇಂದ್ರ)ಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿದ್ದ 14 ಮಂದಿ ರೋಗಿಗಳನ್ನು ತಾವೇ ಭೇಟಿ ಮಾಡಿ ಮಾತನಾಡಿ ಅವರನ್ನು ಹರಸಿದ ಬಳಿಕ ಅವರು ಸಮಾಧಾನ ಚಿತ್ತರಾಗಿದ್ದರು. ಅಂದು ಅದು ಹೇಗೋ ಅವರನ್ನು ಆಸ್ಪತ್ರೆಗೆ ಅತ್ಯಂತ ಗೌಪ್ಯವಾಗಿ ಕರೆದೊಯ್ಯಲಾಗಿತ್ತು. ಆದರೆ, ಹೊರ ಬರುವಾಗ ಆಸ್ಪತ್ರೆಯ ಪ್ರಾಂಗಣದ ಇಕ್ಕೆಲಗಳಲ್ಲೂ ಅವರನ್ನು ನೋಡಲು ಜನಸಮೂಹ. ಇದು ಅವರ ಮೇಲಿನ ಅಭಿಮಾನ, ಪ್ರೀತಿಗೆ ಸಾಕ್ಷಿಯಾಗಿತ್ತು. ಬಳಿಕ ಅವರು ಅದೇ ವರ್ಷ ಅಂದರೆ 1995ರ ಆಗಸ್ಟ್ 11ರಂದು ಮತ್ತೆ ಮಂಗಳೂರಿಗೆ ಭೇಟಿ ನೀಡಿದ್ದರು. ಆ ಸಂದರ್ಭ ಸುಮಾರು ಆರು ದಿನಗಳ ಕಾಲ ಮಂಗಳೂರಿನಲ್ಲಿದ್ದರು. ನಗರದ ಸಿಸ್ಟರ್ಸ್ ಆ್ ಚಾರಿಟಿ ಗೃಹವನ್ನು ಉದ್ಘಾಟಿಸುವ ಸಲುವಾಗಿ ಅವರು ಮಂಗಳೂರಿಗೆ ಬಂದಿದ್ದರು. ಆ ಸಂದರ್ಭದಲ್ಲೂ ಅವರು ಸೈಂಟ್ ಆ್ಯಗ್ನೆಸ್ ಕಾನ್ವೆಂಟ್‌ನಲ್ಲಿದ್ದರು. ಆ ಸಂದರ್ಭ ನೆಹರೂ ಮೈದಾನದಲ್ಲಿ ನಡೆದ ಸ್ವಾತಂತ್ರೋತ್ಸವ (1995, ಆಗಸ್ಟ್ 15) ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಂದೇಶವನ್ನೂ ನೀಡಿದ್ದರು. ಶಾಂತಿ, ಐಕ್ಯತೆ, ಸಹೋದರತ್ವದ ಸಂದೇಶ
ಸಾವಿರಾರು ಜನರು ಭಾಗವಹಿಸಿದ್ದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಮದರ್ ತೆರೇಸಾ, ಶಾಂತಿ, ಐಕ್ಯತೆ ಹಾಗೂ ಸಹೋದರತ್ವದ ಸಂದೇಶ ನೀಡಿದ್ದರು.
ಪ್ರತಿಯೊಂದು ಜೀವಿಯಲ್ಲೂ ಪ್ರೀತಿಯನ್ನು ಕಾಣಿರಿ...
ಅಂದು (1995ರ ಆಗಸ್ಟ್ 15) ಸಿಸ್ಟರ್ಸ್ ಆ್ ಚಾರಿಟೀಸ್ ಗೃಹವನ್ನು ಉದ್ಘಾಟಿಸಿ ಮಾತನಾಡಿದ್ದ ಅವರು, ಪ್ರತಿಯೊಂದು ಜೀವಿಯನ್ನೂ ಪ್ರೀತಿಯಿಂದ ಕಾಣಬೇಕು ಎಂಬ ಯೇಸುಕ್ರಿಸ್ತನ ಸಂದೇಶವನ್ನು ಸಾರಿದ್ದರು. ಈ ಸಂದೇಶವನ್ನು ಎಲ್ಲರೂ ಪಾಲಿಸಬೇಕೆಂದು ಕರೆ ನೀಡಿದ್ದ ಅವರು, ಸೇವಾ ಕಾರ್ಯದ ಮೂಲ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂಬುದಾಗಿ ಹೇಳಿದ್ದರು. ಆಗಿನ ಬಿಷಪ್ ರೆ.ಡಾ. ಬಾಸಿಲ್ ಡಿಸೋಜಾ ಅಧ್ಯಕ್ಷತೆಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಆಗಿನ ಮೀನುಗಾರಿಕಾ ಸಚಿವರಾಗಿದ್ದ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕರಾಗಿದ್ದ ಯೋಗೀಶ್ ಭಟ್, ಉಡುಪಿ ಸಂಸತ್ ಸದಸ್ಯರಾಗಿದ್ದ ಆಸ್ಕರ್ ೆರ್ನಾಂಡಿಸ್, ವಿಧಾನ ಪರಿಷತ್ ಮುಖ್ಯ ಸಚೇತಕರಾಗಿದ್ದ ಬಿ.ಎ. ಮೊಹಿದಿನ್ ಮುಖ್ಯ ಅತಿಥಿಗಳಾಗಿದ್ದರು.
ನನ್ನ ಮನೆಗೆ ಬಂದಿದ್ದೇನೆ ಎಂದಿದ್ದರು!
ಮಂಗಳೂರಿನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು ಮದರ್ ತೆರೇಸಾ. ಎರಡು ಸಂದರ್ಭಗಳಲ್ಲಿಯೂ ಅವರು ಮಂಗಳೂರಿಗೆ ಭೇಟಿ ನೀಡಿದ ವೇಳೆ ಅವರ ಜತೆಗೇ ಕಾಲ ಕಳೆಯುವ ಅವಕಾಶ ನನಗೆ ದೊರಕಿದ್ದು ನನ್ನ ಪಾಲಿನ ಪುಣ್ಯ. ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ‘ನನ್ನ ಮನೆಗೆ ಬಂದಿದ್ದೇನೆ’ ಎಂಬ ಪ್ರೀತಿ, ಅಭಿಮಾನದ ಮಾತನ್ನಾಡಿದ್ದರು. ಸೇವಾ ಮನೋಭಾವ, ನಿಷ್ಕಲ್ಮಶ ಮನಸ್ಸಿನ ಮದರ್ ತೆರೇಸಾರವರು ಯಾರದೇ ಹೊಗಳಿಕೆಗೆ ಬೀಗಿದವರಲ್ಲ. ಟೀಕೆ, ಟಿಪ್ಪಣಿಗಳಿಗೆ ನೊಂದವರಲ್ಲ. ತಮ್ಮ ಕಾರ್ಯದಲ್ಲಿ ತೃಪ್ತಿ ಪಟ್ಟವರು. 85ರ ಹರೆಯದಲ್ಲಿ ನೆರಿಗೆಗಟ್ಟಿದ್ದ ಅವರ ಮುಖದಲ್ಲಿನ ಮುಗ್ಧ ನಗು, ಅವರ ಮಾತುಗಳು, ಅವರ ಒಡನಾಟ ಮರೆಯಲಾಗದ ನೆನಪುಗಳು. ಮಾನವತೆಯೇ ಮೂರ್ತಿವೆತ್ತಂತಿದ್ದ ಮದರ್ ತೆರೇಸಾ, ಜನರ ಸೇವೆಯಲ್ಲಿಯೇ ಜೀವನದ ಸಾರ್ಥ ಕತೆಯನ್ನು ಕಂಡವರು. ಎಲ್ಲರನ್ನೂ ಪ್ರೀತಿಸುವ, ದೇವರ ಪ್ರೀತಿ ಮತ್ತು ನೆರೆಹೊರೆಯವರ ಸೇವೆಯನ್ನು ತಾವು ಮಾಡುವುದಲ್ಲದೆ, ಇತರರಿಗೂ ಸೇವೆಗೆ ಪ್ರೇರಣೆ ನೀಡಿ ದವರು. ಅವರಿಗೆ ಸಂತ ಪದವಿ ಸಿಕ್ಕೇ ಸಿಗುತ್ತದೆ ಎಂಬ ಆತ್ಮವಿಶ್ವಾಸ ನನ್ನದಾಗಿತ್ತು. ಅದು ನಿಜವಾಗಿದೆ.
ಮದರ್ ತೆರೇಸಾ ಗೃಹದಲ್ಲಿ ಮನೆ ಮಾಡಿದ ಸಂಭ್ರಮ
ಮದರ್ ತೆರೇಸಾರವರಿಗೆ ರೋಮ್‌ನಲ್ಲಿ ಸೆಪ್ಟಂಬರ್ 4ರಂದು ದೊರೆಯಲಿರುವ ‘ಸಂತ ಪದವಿ’ಯ ಹಿನ್ನೆಲೆಯಲ್ಲಿ ನಗರದ ಳ್ನೀರ್‌ನಲ್ಲಿರುವ ಮದರ್ ತೆರೇಸಾ ಗೃಹದಲ್ಲೂ ಸಂಭ್ರಮ ತುಂಬಿದೆ. ಮದರ್ ತೆರೇಸಾ ಕೇಂದ್ರವು ತಳಿರು ತೋರಣಗಳಿಂದ ಸಿಂಗಾರಗೊಳ್ಳುತ್ತಿದೆ. ಸೆ. 4ರಂದು ಈ ಕೇಂದ್ರದಿಂದ ಸಂಜೆ 4:15ರ ವೇಳೆಗೆ ಮದರ್ ತೆರೇಸಾರವರ ಪ್ರತಿಮೆಯ ಬೃಹತ್ ಮೆರವಣಿಗೆ ಮಿಲಾಗ್ರಿಸ್ ಚರ್ಚ್‌ವರೆಗೆ ನಡೆಯಲಿದೆ. ಬಳಿಕ ಅಲ್ಲಿ ಮದರ್ ತೆರೇಸಾ ಅವರ ಸೇವಾ ಕಾರ್ಯಗಳ ಕಿರು ಚಿತ್ರವೂ ಪ್ರದರ್ಶನಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ಮದರ್ ತೆರೇಸಾ ಹೋಮ್‌ನ (ಕಾನ್ವೆಂಟ್)ನ ಸುಪೀರಿಯರ್ ಸಿಸ್ಟರ್ ಬೆನೆಡಿಕ್ಟ್ ಬರೆಟ್ಟೊ ತಿಳಿಸಿದ್ದಾರೆ. 1998ರಿಂದ ವಾಸ್‌ಲೇನ್ ಬಳಿ ಮದರ್ ತೆರೇಸಾ ಹೆಸರಿನಲ್ಲಿ ನಿರ್ವಸಿತರಿಗೆ ಆಶ್ರಯ ತಾಣವಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಮದರ್ ತೆರೇಸಾ ಕಾನ್ವೆಂಟ್ 2013ರ ಅಕ್ಟೋಬರ್ 29ರಂದು ಳ್ನೀರ್‌ಗೆ ವಿಶಾಲವಾದ ಕೇಂದ್ರಕ್ಕೆ ಸ್ಥಳಾಂತರಗೊಂಡು ಉದ್ಘಾಟನೆಯಾಗಿತ್ತು. ಪ್ರಸ್ತುತ ಅಲ್ಲಿ 35 ಮಂದಿ ನಿರ್ವಸಿತರಿಗೆ ಆಶ್ರಯ ನೀಡಲಾಗುತ್ತಿದ್ದು, ಐದು ಮಂದಿ ಮದರ್ ತೆರೇಸಾ ಭಗಿನಿಯರು ಈ ನಿರ್ವಸಿತರ ಯೋಗ ಕ್ಷೇಮವನ್ನು ನೋಡಿಕೊಳ್ಳುತ್ತಿದ್ದಾರೆ.
ಚಾರಿಟಿ ಗೃಹವನ್ನು ತಾವೇ ಸ್ವಚ್ಛಗೊಳಿಸಿದ್ದರು!
85ರ ಹರೆಯದಲ್ಲೂ ಅವರ ಸೇವಾಕಾರ್ಯ ಅದ್ಭುತ. ಸಿಸ್ಟರ್ಸ್ ಆ್ ಚಾರಿಟೀಸ್ ಗೃಹವನ್ನು ಉದ್ಘಾಟಿಸಲು ಬಂದಿದ್ದ ಅವರು, 1995ರ ಆಗಸ್ಟ್ 13 ಮತ್ತು 14ರಂದು ತಾವೇ ಮುಂದೆ ನಿಂತು ಎರಡು ದಿನಗಳ ಕಾಲ ಅದನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಿದ್ದರು. ನಾನು ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತೇನೆಂದರೂ ಬಿಟ್ಟಿರಲಿಲ್ಲ. ಮನೆಯನ್ನು ಗುಡಿಸಿ ಶೌಚಾಲಯ ಕ್ಲೀನ್ ಮಾಡಿದ್ದರವರು ಎಂದು ಸಿಸ್ಟರ್ ಶಾಲಿನಿ ಎ.ಸಿ.ಯವರು ಮದರ್ ತೆರೇಸಾರವರ ಸೇವಾ ವೈಖರಿಯನ್ನು ಬಣ್ಣಿಸುತ್ತಾರೆ. ‘‘ದೇವರ ಪ್ರಾರ್ಥನೆ, ಸೇವೆ ಇವು ಮದರ್ ತೆರೇಸಾ ಅವರ ಪ್ರಮುಖ ಆದ್ಯತೆಗಳಾಗಿದ್ದವು. ಬಡವರು, ದೀನ ದಲಿತರು, ಶ್ರೀಮಂತರು, ಜಾತಿ, ಧರ್ಮ ಯಾವುದೇ ರೀತಿಯ ಭೇದ ಭಾವ ಅವರಲ್ಲಿರಲಿಲ್ಲ. ಎಲ್ಲರನ್ನೂ ಪ್ರೀತಿಸುವ, ಎಲ್ಲರನ್ನೂ ತಮ್ಮವರೆಂದುಕೊಳ್ಳುವ ಅವರು ಮಾತ್ರ ಸರಳ ಜೀವಿಯಾಗಿದ್ದರು. ಆರು ದಿನಗಳ ಕಾಲ ಮಂಗಳೂರಿಗೆ ಬಂದಿದ್ದ ಅವರ ಸಣ್ಣದಾದ ಸೂಟ್‌ಕೇಸ್‌ನಲ್ಲಿ ಇದ್ದಿದ್ದು ಎರಡು ಸೀರೆಗಳು ಮಾತ್ರ’’ ಎಂದು ನೆನಪಿಸಿಕೊಳ್ಳುತ್ತಾರೆ ಸಿಸ್ಟರ್ ಶಾಲಿನಿ ಎ.ಸಿ.
ಸಿಸ್ಟರ್ ಶಾಲಿನಿ ಎ.ಸಿ.
ತೆರೇಸಾರನ್ನು ಭೇಟಿಯಾದವರ ನೆನಪುಗಳು...
ಶ್ರೇಷ್ಠ ಮಾತೆಗೆ ಅರ್ಹವಾಗಿಯೇ ಸಲ್ಲಬೇಕಾದ ಗೌರವ
‘‘ಶ್ರೇಷ್ಠ ಮಾನವೀಯ ವೌಲ್ಯಗಳನ್ನು ತನ್ನಲ್ಲಿ ಹೊತ್ತುಕೊಂಡಿದ್ದ ಮಾತೆ ಅವರು. ಅವರಿಗೆ ಅರ್ಹವಾಗಿಯೇ ಆ ಪದವಿ ದೊರೆಯುತ್ತಿದೆ. ಯಾರೂ ಮಾಡಲು ಹಿಂದೇಟು ಹಾಕುತ್ತಿದ್ದ ಸಮಾಜ ಸೇವೆಯನ್ನು ಅವರು ಮಾನವೀಯ ವೌಲ್ಯಗಳ ಅಡಿಯಲ್ಲಿ ಮಾಡುತ್ತಾ ಸಮಾಜ ಕಾರ್ಯದ ವೈಖರಿಯನ್ನು ಜಗತ್ತಿಗೆ ತೋರಿಸಿದ್ದಾರೆ. ಅವರು 1995ರಲ್ಲಿ ಮಂಗಳೂರಿಗೆ ಬಂದಾಗ ಜಗತ್ತಿನ ಓರ್ವ ಶ್ರೇಷ್ಠ ಮಹಿಳೆಯನ್ನು ಭೇಟಿಯಾಗಿ, ಮಾತನಾಡುವ ಅವಕಾಶ ನನಗೆ ದೊರಕಿತ್ತು. ಅವರನ್ನು ಭೇಟಿಯಾಗುವ ಸಲುವಾಗಿ ನಾನು ನನ್ನೆಲ್ಲಾ ಕೆಲಸವನ್ನು ಬಿಟ್ಟು ಮಂಗಳೂರಿಗೆ ಅಂದು ಆಗಮಿಸಿದ್ದೆ. ಆ ಭೇಟಿ ಅವಿಸ್ಮರಣೀಯ.’’
-ಬಿ.ಎ. ಮೊಹಿದಿನ್, ಮಾಜಿ ಸಚಿವರು.
(ಮದರ್ ತೆರೇಸಾ ಮಂಗಳೂರಿಗೆ 1995ರಲ್ಲಿ ಭೇಟಿ ನೀಡಿದ್ದ ವೇಳೆ ವಿಧಾನ ಪರಿಷತ್ ಮುಖ್ಯ ಸಚೇತಕರಾಗಿದ್ದರು.)
ಅವರ ಸ್ಪರ್ಶದಲ್ಲಿತ್ತು ಅದ್ಭುತ ಶಕ್ತಿ
‘‘ನನಗಿಂದೂ ನೆನಪಿದೆ. ದ.ಕ. ಜಿಲ್ಲಾಕಾರಿಯಾ ಗಿದ್ದ ವೇಳೆ ಅವರನ್ನು ಅತೀ ಸಮೀಪದಿಂದ ಮಾತನಾಡಿಸುವ ಅವಕಾಶ ನನಗೆ ಲಭಿಸಿತ್ತು. ಅವರು ತಮ್ಮ ಕೈಗಳಿಂದ ಸ್ಪರ್ಶಿಸಿ, ಆತ್ಮೀಯತೆಯಿಂದ ನನ್ನಲ್ಲಿ ಮಾತನಾಡಿದ್ದರು. ಅವರ ಸ್ಪರ್ಶದಲ್ಲಿ ಎಲ್ಲಾ ನೋವು, ಸಮಸ್ಯೆ, ದುಗುಡಗಳನ್ನು ಮಾಯವಾಗಿಸುವ ಅದ್ಭುತ ಶಕ್ತಿ ಇತ್ತು. ಅವರೊಬ್ಬ ಮಹಾನ್ ಶಕ್ತಿ.’’
-ಭರತ್ ಲಾಲ್ ಮೀನಾ,
ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಶಿಕ್ಷಣ ಇಲಾಖೆ. (1995ರಲ್ಲಿ ದ.ಕ. ಜಿಲ್ಲಾಕಾರಿಯಾಗಿದ್ದವರು)
‘ಗಾಡ್ ಬ್ಲೆಸ್ ಯೂ’ ಎಂದು ಹರಸಿದ್ದರು
‘‘ಸಂದೇಶ ಶಿಕ್ಷಣ ಪ್ರತಿಷ್ಠಾನದಲ್ಲಿ ನಡೆದ ಪತ್ರಿಕೋದ್ಯಮ ಶಿಬಿರದಲ್ಲಿ ನಾನು ಭಾಗವಹಿಸಿದ್ದ ಸಂದರ್ಭ ಮದರ್ ತೆರೇಸಾ ಮಂಗಳೂರಿಗೆ ಬಂದಿದ್ದರು. ಆ ಸಂದರ್ಭ ಅವರು ಸಂದೇಶಕ್ಕೂ ಭೇಟಿ ನೀಡಿ ನಮಗೆ ಬಹುಮಾನ ವಿತರಿಸಿದ್ದರು. ಅದೊಂದು ರೋಮಾಂಚಕಾರಿ ಸಂದರ್ಭ. ಜೀವನಪರ್ಯಂತ ಮರೆಯಲಾದ ಅನುಭವ. ಅಪರೂಪದ ಅವಕಾಶವೊಂದು ನನಗೆ ಲಭಿಸಿತ್ತು ಎಂದು ನಾನಿವತ್ತು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆ. ಅವರು ಬಹುಮಾನ ನೀಡಿ ‘ಗಾಡ್ ಬ್ಲೆಸ್ ಯೂ’ ಎಂದು ಆಶೀರ್ವದಿಸಿದ್ದರು. ನನ್ನ ಜೀವನದಲ್ಲಿ ಎಂದೆಂದಿಗೂ ಅದೊಂದು ಅರ್ಥಗರ್ಭಿತವಾದ ಹಾರೈಕೆ.’’
-ಉಮ್ಮರ್ ಫಾರೂಕ್ ಪುತ್ತಿಗೆ, ಉದ್ಯಮಿ.
ನಿಜವಾದ ಅರ್ಥದ ಮಾತೆ ಮದರ್ ತೆರೇಸಾ
‘‘1995ರಲ್ಲಿ ಜನವರಿ ಮತ್ತು ಆಗಸ್ಟ್ ತಿಂಗಳಲ್ಲಿ ಎರಡು ಬಾರಿ ಬಂದಾಗಲೂ ಅವರನ್ನು ಭೇಟಿಯಾಗುವ, ಮಾತನಾಡುವ ಅವಕಾಶ ದೊರಕಿತ್ತು. ಜನವರಿಯಲ್ಲಿ ಬಂದಾಗ ವಿಮಾನ ನಿಲ್ದಾಣದಲ್ಲಿಯೇ ಅವರನ್ನು ನಾನು ಸ್ವಾಗತಿಸಿದ್ದೆ. ಮಾತ್ರವಲ್ಲ ಮರುದಿನ ಅವರ ಸಂದರ್ಶನವನ್ನೂ ಮಾಡಿದ್ದೆ. ಮಂಗಳೂರು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುತ್ತಿದೆ ಎಂದು ಹೇಳಿದ್ದ ಅವರು, ಶಿಕ್ಷಣದಿಂದ ಮಾತ್ರವೇ ಸಾಮಾಜಿಕ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬ ಅಭಿಪ್ರಾಯ ಅವರದ್ದಾಗಿತ್ತು. ಆ ಸಂದರ್ಭ ಸಂದೇಶ ಪ್ರತಿಷ್ಠಾನ ಏರ್ಪಡಿಸಿದ್ದ ಪತ್ರಿಕೋದ್ಯಮ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಎಲ್ಲರಿಗೂ ಪ್ರಮಾಣ ಪತ್ರ ನೀಡಿದ್ದರು. ಅದಾಗಲೇ ನನ್ನ ಪರಿಚಯವಾಗಿದ್ದರಿಂದ ಆ ಕಾರ್ಯಕ್ರಮದಲ್ಲಿ ನನ್ನನ್ನುದ್ದೇಶಿಸಿ ‘ಪತ್ರಕಾರ್ ಕಮ್ ಹಿಯರ್, ವೇರ್ ಇಸ್ ಯುವರ್ ಪೆನ್’ ಎಂದು ಕರೆದಾಗ ನನಗೆ ಮಾತ್ರವಲ್ಲ, ಅಲ್ಲಿದ್ದವರಿಗೆಲ್ಲಾ ಒಂದು ಕ್ಷಣ ಅಚ್ಚರಿಯಾಗಿತ್ತು. ನನ್ನ ಹೆಸರು ನೆನಪಿರದಿದ್ದರೂ ನನ್ನನ್ನು ಗುರುತಿಸಿದ್ದರು. ಅದೊಂದು ಥ್ರಿಲ್ಲಿಂಗ್ ಅನುಭವ ನನ್ನ ಪಾಲಿಗೆ. ಬಳಿಕ ಮತ್ತೆ 1995ರ ಆಗಸ್ಟ್‌ನಲ್ಲಿ ಬಂದಿದ್ದ ವೇಳೆ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲಾಗಿತ್ತು. ಆ ದಿನ ಅವರು ಅಲ್ಲಿ ಸೇರಿದ್ದವರ ಜತೆ ಮಕ್ಕಳಾಗಿ ಬೆರೆತು ಮಾತನಾಡುತ್ತಿದ್ದರು. ಎಲ್ಲರ ತಲೆ ನೇವರಿಸಿ ಮಾತನಾಡುತ್ತಿದ್ದ ಅವರನ್ನು ಕಂಡಾಗ ನಿಜವಾದ ಅರ್ಥದ ಮಾತೆಯನ್ನು ಕಂಡಂತಾಗಿತ್ತು. ಅವರ ಮಾತು ಕೂಡಾ ಹೃದಯಸ್ಪರ್ಶಿಯಾಗಿತ್ತು.’’
-ಮನೋಹರ್ ಪ್ರಸಾದ್,
ಹಿರಿಯ ಪತ್ರಕರ್ತರು.