ಕಾಲ ಕೆಳಗಣ ಬೆಂಕಿ...
ನರಸಿಂಹಾಚಾರ್ಯರ ‘ಶಬ್ದಮಣಿ ದರ್ಪಣ’ವನ್ನು 1965ರಷ್ಟು ಹಿಂದೆಯೇ ಕೂಲಂಕಷವಾಗಿ ವಿಮರ್ಶಿಸಿ ವಿದ್ವತ್ ವಲಯದಲ್ಲಿ ಕೋಲಾಹಲವನ್ನುಂಟುಮಾಡಿದ್ದ ಕಲಬುರ್ಗಿಯವರು ಮಹತ್ವದ ಸಂಶೋಧಕರಾಗಿ ಕನ್ನಡ ವಿದ್ವತ್ ಪರಂಪರೆಯನ್ನು ಬೆಳೆಸಿದವರು. ತಾವು ಕಂಡ ‘ಕಣ್ಣ ಮುಂದಿನ ಬೆಳಕನ್ನು’ ಲೋಕಕ್ಕೆ ಹಂಚಿದ ಕಲಬುರ್ಗಿಯವರು ‘ಕಾಲ ಕೆಳಗಿನ ಬೆಂಕಿಗೆ’ ಆಹುತಿಯಾದದ್ದು ಬದುಕಿನ ಒಂದು ಕ್ರೂರ ವ್ಯಂಗ್ಯ.
‘‘ಕಾಲ ಕೆಳಗಿನ ಬೆಂಕಿಗಿಂತ ಕಣ್ಣ ಮುಂದಿನ ಬೆಳಕು ದೊಡ್ಡದು’’
ಈ ಚಿಂತನೆಯನ್ನೇ ತಮ್ಮ ಬದುಕಿನ ಧ್ಯೇಯವಾಗಿ ಸ್ವೀಕರಿಸಿ ಸತ್ಯಶೋಧಕ್ಕೆ ಆಯುಷ್ಯವನ್ನು ಮುಡುಪಾಗಿಸಿದ ಪ್ರೊ. ಎಂ.ಎಂ.ಕಲಬುರ್ಗಿಯವರು, ಕನ್ನಡ ಪಾಂಡಿತ್ಯ ಪ್ರಪಂಚದಲ್ಲಿ ದಿವಂಗತ ಡಿ.ಎಲ್. ನರಸಿಂಹಾಚಾರ್ಯರ ನಂತರದ ದೊಡ್ಡ ಹೆಸರು. ನರಸಿಂಹಾಚಾರ್ಯರ ‘ಶಬ್ದಮಣಿ ದರ್ಪಣ’ವನ್ನು 1965ರಷ್ಟು ಹಿಂದೆಯೇ ಕೂಲಂಕಷವಾಗಿ ವಿಮರ್ಶಿಸಿ ವಿದ್ವತ್ ವಲಯದಲ್ಲಿ ಕೋಲಾಹಲವನ್ನುಂಟುಮಾಡಿದ್ದ ಕಲಬುರ್ಗಿಯವರು ಮಹತ್ವದ ಸಂಶೋಧಕರಾಗಿ ಕನ್ನಡ ವಿದ್ವತ್ ಪರಂಪರೆಯನ್ನು ಬೆಳೆಸಿದವರು.ತಾವು ಕಂಡ ‘ಕಣ್ಣ ಮುಂದಿನ ಬೆಳಕನ್ನು’ ಲೋಕಕ್ಕೆ ಹಂಚಿದ ಕಲಬುರ್ಗಿಯವರು ‘ಕಾಲ ಕೆಳಗಿನ ಬೆಂಕಿಗೆ’ ಆಹುತಿಯಾದದ್ದು ಬದುಕಿನ ಒಂದು ಕ್ರೂರ ವ್ಯಂಗ್ಯ. ಶಿವಶರಣರ ಚರಿತ್ರೆ ಮತ್ತು ವೀರಶೈವ ಧರ್ಮ ಕುರಿತ ಅವರ ಕೆಲವು ಲೇಖನಗಳ ಬಗ್ಗೆ ಸ್ವಲ್ಪಕಾಲದ ಹಿಂದೆ ಧಾರ್ಮಿಕ ಪಟ್ಟಭದ್ರಹಿತಾಸಕ್ತಿಗಳ ಆಕ್ರೋಶ ಭುಗಿಲೆದ್ದದ್ದು ಈಗ ಇತಿಹಾಸ. ಈ ಆಕ್ರೋಶದ ಪರಾಕಾಷ್ಠೆ ಎಂಬಂತೆ ಕಳೆದ ವರ್ಷ ಅವರ ಬರ್ಬರ ಹತ್ಯೆ ಸಂಭವಿಸಿತು.
ಎಂ.ಎಂ.ಕಲಬುರ್ಗಿಯವರ ಹತ್ಯೆ ಸಂಭವಿಸಿ ಒಂದು ವರ್ಷ ಕಳೆದಿದೆ. ಕಲಬುರ್ಗಿಯವರು ಇಲ್ಲದ ಈ ಒಂದು ವರ್ಷದಲ್ಲಿ ನಾಡಿನ ಸಾಂಸ್ಕೃತಿಕ ಜಗತ್ತು ಅನುಭವಿಸಿದ ತಲ್ಲಣ ತವಕಗಳು ಅವರ್ಣನೀಯ. ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪನ್ಸಾರೆ ಅವರುಗಳ ಹತ್ಯೆಯಿಂದ ಕಂಗೆಟ್ಟಿದ್ದ ಈ ದೇಶದ ಮಾನವೀಯ ಮುಖಕ್ಕೆ ಅಳಿಸಲಾಗದ ಕಳಂಕವಾಗಿ ಬಂತು ಕಲಬುರ್ಗಿಯವರ ಹತ್ಯೆ. ಸಾಂಸ್ಕೃತಿಕ ಲೋಕದ ತಲ್ಲಣ ತಳಮಳಗಳ ತಾರಕವೆಂಬಂತೆ ಕಂಡಿತು ಇತ್ತೀಚೆಗೆ ಧಾರವಾಡದಲ್ಲಿ ನಡೆದ ‘ಬಂದೂಕಿನೆದುರು ಜನಧ್ವನಿ-ರಾಷ್ಟ್ರೀಯ ಜನಜಾಗೃತಿ ಜಾಥಾ’ದಲ್ಲಿ ಕೇಳಿಬಂದ ಸಾಹಿತಿ ಕಲಾವಿದರ ಎದೆಯಾಳದಿಂದ ಹೊರಟ ಎಚ್ಚರಿಕೆಯ ಮಾತುಗಳು. ಸಾಹಿತಿ ಕಲಾವಿದರ ಈ ಸಮಾವೇಶ ಕಲಬುರ್ಗಿಯವರ ಹಂತಕರ ಬಂಧನಕ್ಕೆ ಒಂದು ತಿಂಗಳ ಗಡುವು ನೀಡಿದೆ. ಇಲ್ಲವಾದಲ್ಲಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವುದಾಗಿಯೂ ಘೋಷಿಸಿದೆ. ಕೋಮುವಾದಿ ಶಕ್ತಿಗಳು ತನಿಖೆಯ ದಿಕ್ಕು ತಪ್ಪಿಸುತ್ತಿವೆ ಎಂಬ ಆರೋಪದ ಬಗೆಗೆ ಕಳವಳ ವ್ಯಕ್ತಪಡಿಸಿರುವ ಸಮಾವೇಶ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ಪಷ್ಟನೆಗೂ ಆಗ್ರಹಪಡಿಸಿದೆ. ಮುಖ್ಯಮಂತ್ರಿಯವರಿಂದ ಸ್ಪಷ್ಟೀಕರಣವೇನೂ ಬಂದಂತಿಲ್ಲ. ಏತನ್ಮಧ್ಯೆ, ಸಿಬಿಐ ಸ್ಕಾಟ್ಲೆಂಡ್ ಪೊಲೀಸ್ ತನಿಖಾ ದಳದ ನೆರವಿಗೆ ಧಾವಿಸಿರುವುದು ಹಲವಾರು ಪ್ರಶ್ನೆಗಳಿಗೆಡೆ ಮಾಡಿ ಕೊಟ್ಟಿದೆ. ಪುಣೆಯಲ್ಲಿ 2013ರ ಆಗಸ್ಟ್ 20ರಂದು ಸಂಭವಿಸಿದ ನರೇಂದ್ರ ದಾಭೋಲ್ಕರ್ ಹತ್ಯೆ ಮತ್ತು 2015ರ ಫೆಬ್ರವರಿ 20ರಂದು ಕೊಲ್ಲಾಪುರದಲ್ಲಿ ನಡೆದ ಗೋವಿಂದ ಪನ್ಸಾರೆಯವರ ಹತ್ಯೆಗಳಲ್ಲಿ ಒಂದೇ ಮಾದರಿಯ ದೇಶೀ ನಿರ್ಮಿತ 7.56 ಎಂ.ಎಂ. ಪಿಸ್ತೂಲು ಬಳಸಲಾಗಿದೆ ಎಂದು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸಾಬೀತು ಪಡಿಸಿದೆ. ಈ ಮೂವರ ಹತ್ಯೆಗಳಲ್ಲಿ ಬಳಸಿರುವ ತೋಟಾಗಳು ಏಕರೀತಿಯದಾಗಿರುವುದನ್ನು ಸಿಐಡಿ ಪೊಲೀಸರು ಪತ್ತೆಹಚ್ಚಿದ್ದಾರೆ. ಮೂರೂ ಪ್ರಕರಣಗಳಲ್ಲಿ ಸಾಮ್ಯತೆಯನ್ನು ಕಂಡಿರುವ ತನಿಖಾಧಿಕಾರಿಗಳು ಕಲಬುರ್ಗಿಯವರ ಹತ್ಯೆಗೆ ಬಳಸಲಾದ ಗುಂಡುಗಳ ಮಾದರಿಗಳನ್ನು ಕರ್ನಾಟಕದ ಸಿ.ಐ.ಡಿ ಪೊಲೀಸರಿಂದ ಪಡೆದುಕೊಂಡು ಪರೀಕ್ಷೆಗಾಗಿ ಸ್ಕಾಟ್ಲೆಂಡ್‌ಯಾರ್ಡ್ ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿ ಕೊಟ್ಟಿದ್ದಾರೆ. ಇದೆಲ್ಲದರಿಂದಾಗಿ ಕಲಬುರ್ಗಿ ಹತ್ಯೆ ದಿನದಿಂದ ದಿನಕ್ಕೆ ನಿಗೂಢವಾಗುತ್ತಿದೆ. ಕಾಲ ಕೆಳಗಿನ ಬೆಂಕಿಯ ನಿಗೂಢ ಬಲ್ಲವರ್ಯಾರು? ರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾಹಿತಿ ಗಳು, ಕಲಾವಿದರು ಮತ್ತು ಹೋರಾಟಗಾರರ ಸಮಾ ವೇಶದಲ್ಲಿ ವ್ಯಕ್ತವಾಗಿರುವ ಕಳವಳದ ಭಾವನೆಗಳನ್ನು ಮತ್ತು ನೀಡಿರುವ ಎಚ್ಚರಿಕೆಯ ಗಡುವನ್ನು ಅಲಕ್ಷಿಸಲಾಗದು. ಸಾಹಿತಿಗಳು, ಕಲಾವಿದರು ವ್ಯಕ್ತಪಡಿಸಿರುವ ಅಭಿಪ್ರಾಯಗಳು, ಆತಂಕ, ಕೋಪಗಳು ಅಕಾರಣವಾದು ದೇನಲ್ಲ. ಕಳೆದ ಒಂದೆರಡು ವರ್ಷಗಳಿಂದ ರಾಷ್ಟ್ರದ ವಿವಿಧೆಡೆಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆಯ್ಕೆ ಸ್ವಾತಂತ್ರ್ಯಗಳ ಮೇಲೆ ನಡೆದಿರುವ ಹಲ್ಲೆಗಳನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ. ಗೋಮಾಂಸ ಸಂಗ್ರಹಿಸಿದ ಆರೋಪದಿಂದ 2015ರ ಸೆಪ್ಟಂಬರ್‌ನಲ್ಲಿ ನಡೆದ ಮುಹಮ್ಮದ್ ಅಖ್ಲಾಕ್ ಹತ್ಯೆ, ಈ ವರ್ಷದ ಮಾರ್ಚ್‌ನಲ್ಲಿ ಜಾರ್ಖಂಡ್‌ನಲ್ಲಿ ವ್ಯಾಪಾರಕ್ಕಾಗಿ ದನಗಳನ್ನು ಸಾಗಿಸುತ್ತ್ತಿದ್ದ ಅರೋಪ ಹೊರಿಸಿ ನಡೆಸಿದ ಮಜ್ಲುಂ ಅನ್ಸಾರಿ ಮತ್ತು ಇಮ್ತಿಯಾಝ್ ಖಾನ್ ಕಗ್ಗೊಲೆ, ದಲಿತ ರೋಹಿತ್ ವೇಮುಲಾ ಆತ್ಮಹತ್ಯೆಗೆ ಕಾರಣೀಭೂತವಾದ ಘಟನೆಗಳು ಮತ್ತು ನಂತರದ ವಿದ್ಯಮಾನಗಳು, ದಿಲ್ಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಾಯಕ ಕನ್ಹಯ್ಯಾನ ವಿರುದ್ಧ ಹೂಡಿರುವ ರಾಷ್ಟ್ರ ದ್ರೋಹದ ಮೊಕದ್ದಮೆ, ಜುಲೈನಲ್ಲಿ ಗುಜರಾತಿನ ಉನಾದಲ್ಲಿ ದಲಿತರ ಮೇಲೆ ನಡೆದ ಹಲ್ಲೆ ಮೊದಲಾದ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಬಹುತ್ವ ಸಾಂಸ್ಕೃತಿಕ ಲಕ್ಷಣಗಳು ಮತ್ತು ಭಿನ್ನತೆಗಳನ್ನು ಹತ್ತಿಕ್ಕುವ ವ್ಯವಸ್ಥಿತ ಹುನ್ನಾರ ನಡೆದಿರುವುದನ್ನು ಕಾಣಬಹುದಾಗಿದೆ. ಇವೆಲ್ಲವೂ, ಸ್ವಾತಂತ್ರ್ಯ, ಸಮಾನತೆ, ವ್ಯಕ್ತಿ ಮತ್ತು ಸಮುದಾಯಗಳ ಘನತೆಗೌರವ, ಸಂವಿಧಾನದ ಮೌಲ್ಯಗಳು ಮತ್ತು ನಮ್ಮ ಸಂವಿಧಾನದತ್ತ ಹಕ್ಕುಗಳು ಎಲ್ಲದಕ್ಕೂ ಭಂಗ ಉಂಟುಮಾಡುವಂಥ, ಹಾನಿಯುಂಟು ಮಾಡುವಂಥ ಪ್ರಯತ್ನಗಳು ಎಂದೇ ತೀರ್ಮಾನಕ್ಕೆ ಬರಬೇಕಾಗುತ್ತದೆ. ಇಂಥ ಕೃತ್ಯಗಳಲ್ಲಿ ತೊಡಗಿರುವವರಿಗೆ ಸಂವಿಧಾನ, ನ್ಯಾಯಾಂಗಗಳ ಬಗ್ಗೆ ದಿವ್ಯ ತಿರಸ್ಕಾರವಿರುವುದೂ ವೇದ್ಯವಾಗುತ್ತದೆ.
ಸಂವಿಧಾನದತ್ತ ಹಕ್ಕು, ಸ್ವಾತಂತ್ರ್ಯಗಳ ಬಗ್ಗೆ ಪ್ರಶ್ನಿಸಲಾಗದು. ಯಾವುದು ಸರಿಯಾದ ನಡಾವಳಿ, ಯಾವುದು ಸರಿಯಾದ ತಿಳಿವಳಿಕೆ, ಯಾವುದು ಸದ್ವಿವೇಕ, ಯಾವುದು ಸರಿಯಾದ ಇತಿಹಾಸ, ಯಾವುದು ಸೂಕ್ತ ಆಹಾರ, ಯಾವುದು ಸೂಕ್ತ ಆಯ್ಕೆ ಇತ್ಯಾದಿಗಳನ್ನು ಬಹುಸಂಖ್ಯಾತರ ಧಾರ್ಮಿಕ ಮಾದರಿಗಳಿಂದಾಗಲೀ, ಕೆಲವೊಂದು ಸಂಘಟನೆಗಳ, ಗುಂಪುಗಳ ಬೇಕುಬೇಡಗಳ ಖಯಾಲಿಗಳಿಂದಾಗಲೀ ನಿರ್ಧರಿಸಲಾಗದು. ಇವೆಲ್ಲವೂ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ, ಸದಸದ್ವಿವೇಕ, ಔಚಿತ್ಯ ಜ್ಞಾನ-ಪ್ರಜ್ಞೆಗಳ ಮೂಲಕ, ರಾಷ್ಟ್ರವ್ಯಾಪಿ ಚರ್ಚೆ ಮೂಲಕ ಒಂದು ನಿಶ್ಚಿತ ರೂಪವನ್ನು ಪಡೆಯಬೇಕು. ಆದರೆ ಕಳೆದ ಎರಡು ಮೂರು ವರ್ಷಗಳಿಂದ ರಾಷ್ಟ್ರದಲ್ಲಿ ಇಂಥ ಸಮನ್ವಯದ ವಾತಾವರಣ ಇಲ್ಲವಾಗಿದೆ. ಭಿನ್ನಮತ, ಸಮಾನತೆಗಳನ್ನು ಗೌರವಿಸುವಂಥ ವಾತಾವರಣ ಕ್ಷೀಣಿಸುತ್ತಿದ್ದು ಅಸಹನೆ ಹೆಚ್ಚುತ್ತಿದೆ. ಕಾರ್ಯ-ಕಾರಣ-ಕಾನೂನು, ತರ್ಕ ಇದಾವುದನ್ನೂ ಮಾನ್ಯಮಾಡದಂಥ ಅಸಹನೆ. ಸತ್ಯಕ್ಕೆ, ಸತ್ಯಶೋಧನೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಸಂವಿಧಾನಬದ್ಧ ಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವೀಯ ಹಕ್ಕುಗಳು ಇಂಥ ಮೌಲ್ಯಗಳ ಬಗ್ಗೆಯೂ, ಒಂದು ಸರ್ವತಂತ್ರ ಸ್ವತಂತ್ರ ಗಣರಾಜ್ಯವಾಗಿ ಆತ್ಮಾವಲೋಕನ ಮಾಡಿಕೊಳ್ಳುವಷ್ಟು ಪ್ರಬುದ್ಧತೆಯೂ ಇಲ್ಲವಾಗಿದೆ. ದೇಶ, ಪ್ರಜಾಪ್ರಭುತ್ವ, ಸಂವಿಧಾನಗಳಲ್ಲಿ ನೈಜ ಕಳಕಳಿ ಉಳ್ಳ ಮನಸ್ಸುಗಳ ಪ್ರಜ್ಞೆ-ಪ್ರಾಮಾಣಿಕತೆಗಳನ್ನು, ರಾಷ್ಟ್ರ ಪ್ರೇಮವನ್ನು ಸಂಶಯಿಸಲಾಗುತ್ತಿದೆ. ಮತ್ತೊಬ್ಬರನ್ನು ದ್ವೇಷಿಸಿಯೇ ದೇಶಭಕ್ತಿ, ರಾಷ್ಟ್ರ ಪ್ರೇಮಗಳನ್ನು ಸಾಬೀತು ಪಡಿಸಬೇಕಾದಂಥ ಪರಿಸ್ಥಿತಿಯನ್ನು ಸೃಷ್ಟಿಸಲಾಗುತ್ತಿದೆ. ಪ್ರಜೆಗಳು ವ್ಯಕ್ತಪಡಿಸುವ ಸ್ವಂತ ಅಭಿಪ್ರಾಯದ ಮೇಲೆ ರಾಷ್ಟ್ರದ್ರೋಹದ ಆರೋಪ/ಮೊಕದ್ದಮೆಗಳ ಕತ್ತಿ ತೂಗಾಡುತ್ತಿರುವ ಭೀತಿ. ಇಂಥ ಪರಿಸ್ಥಿತಿಯಿಂದಾಗಿಯೇ ರಾಷ್ಟ್ರದ ಪ್ರಜ್ಞಾವಂತರು ಚಿಂತಾಕ್ರಾಂತರಾಗಿದ್ದಾರೆ. ಬುದ್ಧಿಜೀವಿಗಳ ವಲಯದಲ್ಲಿ ಆತಂಕ, ಭೀತಿ ತಲೆದೋರಿದೆ.
ಕಲಬುರ್ಗಿ ಹತ್ಯೆಯ ನಂತರ ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳು, ಸಿನೆಮಾರಂಗದ ಗಣ್ಯರು ಸರಕಾರದ ಪ್ರಶಸ್ತಿಗಳನ್ನು ಹಿಂದಿರುಗಿಸುವ ಮೂಲಕ ದೇಶದಲ್ಲಿ ಹೆಚ್ಚುತ್ತಿರುವ ಇಂಥ ಪ್ರವೃತ್ತಿ, ಪರಿಸ್ಥಿತಿಗಳ ವಿರುದ್ಧ ಸಾತ್ವಿಕ ಪ್ರತಿಭಟನೆ ವ್ಯಕ್ತಪಡಿಸಿದ್ದು ಜನಮನದಲ್ಲಿ ಇನ್ನೂ ಹಸಿರಾಗಿಯೇ ಇದೆ. ಸಾಹಿತಿ ಕಲಾವಿದರ ಪ್ರತಿಭಟನೆ ಈಗ ಒಂದು ಆಂದೋಲನದ ರೂಪ ಪಡೆಯುತ್ತಿರುವುದರ ಜ್ವಲಂತ ನಿದರ್ಶನ ಧಾರವಾಡದಲ್ಲಿ ನಡೆದ ‘ಬಂದೂಕಿನೆದುರು ಜನಧ್ವನಿ’ ರಾಷ್ಟ್ರೀಯ ಜಾಥಾ. ಆದರೆ ಇದಾವುದರಿಂದಲೂ ಸರಕಾರ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಗೋಮಾಂಸ ತಿನ್ನುವ ಕೆಲವು ಸಮುದಾಯಗಳ ಆಹಾರ ಪದ್ಧತಿ, ಗೋರಕ್ಷಣೆ, ರಾಷ್ಟ್ರೀಯತೆ-ರಾಷ್ಟ್ರಪ್ರೇಮ ಇತ್ಯಾದಿ ಸೂಕ್ಷ್ಮಸಂವೇದಿ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಒಂದಲ್ಲ ಒಂದು ವಿವಾದ ಸೃಷ್ಟಿಯಾಗುತ್ತಲೇ ಇದೆ. ಕೆಲವೊಂದು ಸಂಘಟನೆಗಳು ಬಹುಸಂಖ್ಯಾತರ ಜೀವನ ಮೌಲ್ಯಗಳನ್ನು, ಸಂಪ್ರದಾಯ- ಆಚರಣೆ ಗಳನ್ನು ಬದುಕಿನ ಪರಮ ಆದರ್ಶಗಳಂತೆ ಬಿಂಬಿಸುತ್ತಿ ರುವುದರಿಂದಾಗಿ ಸಮಾಜದಲ್ಲಿ ಘರ್ಷಣೆಯ ವಾತಾ ವರಣ ಉಂಟಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ, ಸಂವಿಧಾನದ ಜಾತ್ಯತೀತ ತತ್ವಗಳಿಗೆ ಹಾನಿಯುಂಟುಮಾಡುವಂಥ ಈ ಅಪಾಯಕಾರಿ ಬೆಳವಣಿಗೆಗೆ ಕೇಂದ್ರ ಸರಕಾರ ಕಡಿವಾಣ ಹಾಕಲೇ ಬೇಕು. ಕಾನೂನು ಸುವ್ಯವಸ್ಥೆ ರಾಜ್ಯ ಸರಕಾರಗಳಿಗೆ ಸೇರದ್ದು ಎಂದು ಅದು ಮೂಕಪ್ರೇಕ್ಷಕ ನಂತಿರಲಾಗದು. ಹಾಗೆ ಮಾಡಿದಲ್ಲಿ ತನ್ನನ್ನು ಭರ್ಜರಿ ಬಹುಮತದೊಂದಿಗೆ ಆಯ್ಕೆಮಾಡಿರುವ ಮತದಾರರು ಕ್ಷಮಿಸುವುದಿಲ್ಲ ಎಂಬುದನ್ನು ಕೇಂದ್ರದ ಬಿಜೆಪಿ ಸರಕಾರ ಅರಿತುಕೊಳ್ಳಬೇಕು.
ಸಂಶೋಧನೆ, ಸಮಾಜ ಸುಧಾರಣೆ ಮತ್ತು ವೈಚಾರಿಕತೆಯ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಈ ಮೂವರು ಮಹನೀಯರ ಹತ್ಯೆಯ ತನಿಖೆ ಮಂದಗತಿಯಲ್ಲಿ ಸಾಗಿದ್ದು ಕೊಲೆಪಾತಕಿಗಳು ಸಜ್ಜನರಂತೆ ರಾಜಾರೋಷವಾಗಿ ತಿರುಗಾಡಿಕೊಂಡಿದ್ದಾರೆ. ಆರೋಪದ ತೋರುಬೆರಳುಗಳು ಕೆಲವೊಂದು ಸನಾತನ ಸಂಸ್ಥೆಗಳತ್ತ ಚಾಚಿಕೊಂಡಿವೆ. ಆದರೆ ತನಿಖೆಯ ಜಾಡಿನಲ್ಲಿ ಹಲವಾರು ತೊಡಕುಗಳನ್ನು, ಪ್ರತ್ಯಾರೋಪಗಳನ್ನು ಸೃಷ್ಟಿಸುವ ಹುನ್ನಾರಗಳು ನಡೆದಿವೆ ಎಂಬ ಆರೋಪವೂ ಕೇಳಿಬರುತ್ತಿದೆ. ಹತ್ಯೆಗೊಳಗಾದವರ ಹೆಸರುಗಳನ್ನು ವಿದೇಶಿ ನೆರವು ಪಡೆಯುತ್ತಿರುವ ಸರಕಾರೇತರ ಸಂಸ್ಥೆಗಳೊಂದಿಗೆ, ನಕ್ಸಲೀಯರಂಥ ಹಿಂಸಾಮಾರ್ಗದ ಸಂಘಟನೆಗಳೊಂದಿಗೆ ತಳಕು ಹಾಕುವ ಪ್ರಯತ್ನಗಳೂ ನಡೆದಿವೆ. ಕೇಂದ್ರ ಅರ್ಥ ಸಚಿವಾಲಯದ ವಿದೇಶಿ ನೆರವಿಗೆ ಸಂಬಂಧಿಸಿದ ಇಲಾಖೆಗಳು ಇತ್ತೀಚೆಗೆ ಜರಗಿಸಿರುವ ಕೆಲವೊಂದು ಕ್ರಮಗಳನ್ನು ಇದಕ್ಕೆ ನಿದರ್ಶನವಾಗಿ ನೋಡಬಹುದು. ಒಂದು ವೇಳೆ ವಿದೇಶೀ ಮೂಲಗಳಿಂದ ಹಣ ಪಡೆದಿದ್ದರೂ ಅಂಥ ಸಂಸ್ಥೆಗಳು ಅಥವಾ ವ್ಯಕ್ತಿಗಳು ಬಹಿರಂಗಪಡಿಸಿರುವ ಕಟು ವಾಸ್ತವಗಳು,ಸತ್ಯ ಸಂಗತಿಗಳು ಸುಳ್ಳಾಗುತ್ತವೆಯೇ ಎಂಬ ಪ್ರಶ್ನೆ ಸುಲಭವಾಗಿ ತಳ್ಳಿಹಾಕಿವಂಥಾದ್ದಲ್ಲ.
ಕಲಬುರ್ಗಿಯವರ ಹತ್ಯೆಯೂ ಸೇರಿದಂತೆ ಈ ಮೂರು ಹತ್ಯಾ ಪ್ರಕರಣಗಳ ತನಿಖೆಯ ಪ್ರಗತಿ ಆಮೆಗತಿಯಲ್ಲಿ ಸಾಗಿರುವುದು ಸಾರ್ವಜನಿಕರಲ್ಲಿ ಈ ತನಿಖಾ ಸಂಸ್ಥೆಗಳ ಪ್ರಾಮಾಣಿಕತೆ ಮತ್ತು ಕಾರ್ಯವೈಖರಿ ಬಗ್ಗೆಯೇ ಸಂಶಯಕ್ಕೆಡೆಮಾಡಿಕೊಡುವ ರೀತಿಯದಾಗಿದೆ. ಪುಣೆಯ ನರೇಂದ್ರ ದಾಭೋಲ್ಕರ್ ಹತ್ಯೆಪ್ರಕರಣದ ತನಿಖೆಯ ವಿಪರೀತ ವಿಳಂಬದ ಬಗ್ಗೆ, ತನಿಖಾಧಿಕಾರಿ ಗಳ ಕಾರ್ಯ ನಿರ್ವಹಣೆ ಬಗ್ಗೆ ಮಹಾರಾಷ್ಟ್ರ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ ನಂತರವೇ ಸನಾತನ ಸಂಸ್ಥೆಯೊಂದರ ವೀರೇಂದ್ರ ತಾವಡೆ ಎಂಬಾತನನ್ನು ಬಂಧಿಸಲಾಯಿತು. ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸುವವರೆಗೆ ತನಿಖೆಯಲ್ಲಿ ಪ್ರಗತಿಯೇ ಆಗಿರಲಿಲ್ಲ ಎಂಬ ದಾಭೋಲ್ಕರ್ ಕುಟುಂಬದವರ ಮಾತು ನಮ್ಮ ತನಿಖಾ ವ್ಯವಸ್ಥೆಯಲ್ಲಿನ ದೌರ್ಬಲ್ಯಗಳು ಮತ್ತು ಲೋಪದೋಷಗಳಿಗೆ ಬರೆದ ಕಟು ಭಾಷ್ಯವಾಗಿದೆ. ಇನ್ನಾದರೂ ಕೇಂದ್ರ ಮತ್ತು ಸಂಬಂಧಿಸಿದ ರಾಜ್ಯ ಸರಕಾರಗಳು ಎಚ್ಚೆತ್ತುಕೊಳ್ಳಬೇಕು. ಸಾಹಿತಿ ಕಲಾವಿದರು ಕೊಟ್ಟಿರುವ ಗಡುವಿನ ಹಿಂದಿರುವ ನೋವು, ಅಸಮಾಧಾನ, ಆಕ್ರೋಶಗಳನ್ನು ಅರ್ಥಮಾಡಿಕೊಂಡು ಕಲಬುರ್ಗಿಯವರನ್ನು ಹತ್ಯೆಗೈದ ಅಪರಾಧಿಗಳನ್ನೂ ಇದರ ಹಿಂದಿರಬಹುದಾದ ಪಿತೂರಿಗಾರರನ್ನೂ ತ್ವರಿತಗತಿಯಲ್ಲಿ ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸ ಬೇಕು.ಇಲ್ಲವಾದಲ್ಲಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತದಲ್ಲಿ ನ್ಯಾಯವೆನ್ನುವುದು ನಗೆಪಾಟಲಿನ ವಿಷಯವಾಗಿದೆ ಎಂದು ಜಗತ್ತು ಭಾವಿಸಿದಲ್ಲಿ ನಾವು ತಲೆತಗ್ಗಿಸಬೇಕಾಗುತ್ತದೆ, ಅಷ್ಟೇ ಅಲ್ಲ ಪ್ರಪಂಚದ ಕಟಕಟೆ ಯಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾದ ದಿನಗಳು ದೂರವಿರಲಾರವು.