ಏಕಾಗ್ರತೆ
ಆಸಕ್ತಿಯೇ ಕಲಿಯುವ ಆ ಶಕ್ತಿಯನ್ನು ಹುಟ್ಟುಹಾಕುವುದು. ಸಾಚಾ ಉದ್ದೇಶದಿಂದ ಆಸಕ್ತಿಯು ತಾಜಾ ಆಗಿರುತ್ತದೆ. ಆಸಕ್ತಿಯು ದೃಢವಾಗುತ್ತಿದ್ದಂತೆ ನಮ್ಮ ಉದ್ದೇಶಕ್ಕೆ ಪೂರಕವಾಗಿರುವಂತಹ ಮಾಹಿತಿಗಳೆಲ್ಲಾ ನಮಗೆ ಎದುರಾಗುತ್ತಲೇ ಇರುತ್ತದೆ ಅಥವಾ ಎದುರಾಗುವ ವಿಷಯಗಳಲ್ಲೆಲ್ಲಾ ಪೂರಕ ಮಾಹಿತಿಗಳು ಗೋಚರವಾಗುತ್ತಿರುತ್ತವೆ. ಇಷ್ಟೂ ದಿನ ಅಗೋಚರವಾಗಿದ್ದ ಸಂಗತಿಗಳೆಲ್ಲಾ ತೆರೆದುಕೊಳ್ಳಲು ಆರಂಭಿಸುತ್ತವೆ.
ಬೇಕಾದುದ ಕಾಣು
ಏಕಾಗ್ರತೆಯ ಬಗ್ಗೆ ಮಹಾಭಾರತದಲ್ಲೊಂದು ಸನ್ನಿವೇಶವಿದೆ. ಪಾಂಡವರು ಮತ್ತು ಕೌರವರು ತಮ್ಮ ಕಲಿಕೆಯ ಹಂತದಲ್ಲಿ ಗುರು ದ್ರೋಣರಿಂದ ಶಸವಿದ್ಯೆಗಳನ್ನು ಕಲಿಯುತ್ತಿರುತ್ತಾರೆ. ಎಲ್ಲರೂ ಎಲ್ಲಾ ಆಯುಧಗಳ ಬಳಕೆಯನ್ನೂ ಕಲಿಯಬೇಕು. ಆದರೆ ಅವರ ಆಸಕ್ತಿ ಮತ್ತು ಸಾಮರ್ಥ್ಯದ ಪ್ರಕಾರ ಅವರು ಯಾವುದೋ ಒಂದು ಆಯುಧದಲ್ಲಿ ಪರಿಣಿತರಾಗುತ್ತಾರೆ. ಹಾಗೆಯೇ ಧನುರ್ವಿದ್ಯೆಯನ್ನೂ ಗುರು ದ್ರೋಣ ಹೇಳಿಕೊಡುತ್ತಿರುತ್ತಾನೆ. ಬಿಲ್ಲಿಗೆ ಬಾಣವನ್ನು ಹೂಡಿ ಬಿಡುವುದೆಂದರೆ ಏಕಾಗ್ರತೆಯ ಆವಶ್ಯಕತೆ ಬಹಳವಿರುತ್ತದೆ. ಗುರಿಯ ಕಡೆಗೆ ಗಮನ, ಬಾಣವನ್ನು ಹಿಡಿದೆಳೆಯುವ ಕಡೆಗೂ ನಿಯಂತ್ರಣ ಇರಬೇಕು. ಅದೊಂದು ರೀತಿಯಲ್ಲಿ ಹದವರಿತ ಕ್ರಿಯೆ.
ಪಾಂಡು ಮತ್ತು ಕುರು ರಾಜಕುಮಾರರಲ್ಲಿ ಈ ಏಕಾಗ್ರತೆಯ ಸಾಮರ್ಥ್ಯವನ್ನು ತಿಳಿಯಲು ದ್ರೋಣ ಎಲ್ಲರನ್ನೂ ಪರೀಕ್ಷಿಸುತ್ತಾನೆ. ಒಂದು ಮರದ ಮೇಲೆ ಕೃತಕ ಪಕ್ಷಿಯೊಂದನ್ನು ನೇತು ಹಾಕಿರಲಾಗಿರುತ್ತದೆ. ಕೆಳಗಿನಿಂದ ರಾಜಕುಮಾರರು ಹಕ್ಕಿಯ ಕಣ್ಣಿಗೆ ಬಾಣ ಪ್ರಯೋಗವನ್ನು ಮಾಡಬೇಕು. ಸುಯೋದನನನ್ನು ಕರೆದು ಗುರಿಯಿಡಲು ಹೇಳಿದಾಗ, ಅವನು ಮರ, ಅದರ ಹಿನ್ನೆಲೆಯಲ್ಲಿರುವ ಆಕಾಶ, ಹಕ್ಕಿ ಹೀಗೆ ತನ್ನ ಕಣ್ಣಿಗೆ ಕಾಣುತ್ತಿರುವು ದನ್ನೆಲ್ಲಾ ಹೇಳಿದ. ದ್ರೋಣನಿಗೆ ಸಮಾಧಾನವಾಗಲಿಲ್ಲ. ಏಕಾಗ್ರತೆಯಿಂದ ನೋಡುವಾಗ ನೂರೊಂದು ವಸ್ತುಗಳು ಅವನಿಗೆ ಕಾಣಕೂಡದು ಎಂಬುದು ದ್ರೋಣನ ಅಭಿಪ್ರಾಯ. ಅದಕ್ಕೆ ಅವನು ಬಾಣ ಪ್ರಯೋಗ ಮಾಡಲು ಬಿಡಲಿಲ್ಲ. ನಂತರ ಯುಷ್ಟಿರನನ್ನು ಕರೆದ. ಅವನು ಮರ, ಕೊಂಬೆ, ಎಲೆ, ಹಣ್ಣು ಮತ್ತು ಹಕ್ಕಿಗಳನ್ನು ನೋಡಿದ. ದ್ರೋಣ ಮತ್ತೆ ಅತೃಪ್ತನಾಗಿ ಭೀಮನ ಕರೆದರೆ, ಅವನು ಬರಿಯ ಹಕ್ಕಿಯನ್ನು ನೋಡುತ್ತಿದ್ದೇನೆ ಎಂದ. ಅದಕ್ಕೂ ಸಮಾಧಾನಗೊಳ್ಳದ ದ್ರೋಣ ಅರ್ಜುನನ್ನು ಕರೆದ. ಅವನೂ ಕೂಡ ಹಕ್ಕಿಯ ಕಣ್ಣಿಗೆ ಗುರಿಯಿಟ್ಟು ಬಾಣ ಪ್ರಯೋಗಕ್ಕೆ ಸಿದ್ಧನಾದ. ಅಲ್ಲಿ ಏನು ನೋಡುತ್ತಿದ್ದೀಯಾ ಎಂದು ಕೇಳಿದಾಗ ಅವನು ಹಕ್ಕಿಯ ಕಣ್ಣೊಂದೇ ಎಂದು ಹೇಳಿದ. ದ್ರೋಣನಿಗೆ ಈಗ ಸಂತೋಷವಾಯಿತು. ಅರ್ಜುನ ಬಾಣ ಪ್ರಯೋಗ ಮಾಡಿದ. ಯಶಸ್ವಿಯಾಗಿಯೂ ತನ್ನ ಗುರಿಯನ್ನು ಹೊಡೆದ.
ಹಕ್ಕಿಯ ಕಣ್ಣಿಗೆ ಗುರಿಯಿಟ್ಟಾಗ ಹಕ್ಕಿಯ ಕಣ್ಣಲ್ಲದೇ ಬೇರಿನ್ನೇನನ್ನೂ ಕಾಣದೇ ಇರುವುದೇ ಏಕಾಗ್ರತೆ. ಇದು ದ್ರೋಣನ ಪಾಠ. ಹಕ್ಕಿಯ ಕಣ್ಣಲ್ಲದೇ ಇತರ ವಸ್ತುಗಳನ್ನೂ ಕಾಣುತ್ತಿದ್ದರೆ ಗುರಿಯ ಸ್ಥಾನ ಛಿದ್ರವಾಗಿದೆ ಎಂದೇ ಅರ್ಥ. ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ ಎಂದು ಅನುಭವಿ ಗುರು ದ್ರೋಣನ ಪಾಠ. ಬೇಕಾದುದನಷ್ಟೇ ಕಾಣುವುದು ಗುರಿ.
ಏಕಾಗ್ರತೆ ಎಂದರೇನು?
ಏಕ (ಒಂದು) ಅಗ್ರ (ತುದಿ), ಒಂದು ತುದಿಯನ್ನು ಹೊಂದುವುದು. ಅಂದರೆ ಒಂದೇ ಕಡೆಗೆ ಸಂಪೂರ್ಣ ಗಮನಿಸುವುದು. ಸಾಮಾನ್ಯವಾಗಿ ಮನಸ್ಸಿನ ಹರಿವಿನ ಮೇಲೆ ಗಮನವು ಸಾಗುತ್ತಿರುವುದು. ವಿವಿಧ ವಸ್ತುಗಳ ಮೇಲೆ, ವಿವಿಧ ವಿಷಯಗಳ ಕುರಿತು ಚಂಚಲಿತವಾಗಿರುವಂತಹ ಮನಸ್ಸಿನ ಗಮನವನ್ನು ಒಂದೇ ಕಡೆಗೆ ಹರಿಸುವುದೇ ಏಕಾಗ್ರತೆ. ‘ಗಮನವನ್ನು ಹರಿಸುವುದು’ ಎಂಬುದು ಬಹಳ ಸೂಕ್ತವಾದ ನುಡಿಗಟ್ಟಾಗಿದೆ. ಗಮನವೆಂಬುದು ನಿಂತಿರುವುದಂತಲ್ಲ. ಅದು ಹರಿಯುತ್ತಿರುತ್ತದೆ ನೀರಿನಂತೆ. ಅದನ್ನು ಮುಕ್ತವಾಗಿ ಬಿಟ್ಟಲ್ಲಿ ಅದೆತ್ತೆತ್ತಲೋ ತನ್ನ ಪಾಡಿಗೆ ತಾನು ಹರಿದುಕೊಂಡು ಹೋಗುತ್ತಿರುತ್ತದೆ. ಹಾಗಾಗಿ, ಅದನ್ನು ನಾವೇ ಉದ್ದೇಶ ಪೂರ್ವಕವಾಗಿ ನಮಗೆ ಬೇಕಾದ ಕಡೆಗೆ ಹರಿಯುವಂತೆ ಮಾಡುವುದು. ‘ಗಮನ ನೀಡು’ ಅಥವಾ ‘ಗಮನ ಕೊಡು’ ಎನ್ನುವುದು ಬಹಳ ತಾಂತ್ರಿಕವಾಗಿದೆ. ಆದರೆ ಗಮನ ಹರಿಸು ಎನ್ನುವುದು ಗಮನದ ಸ್ವಭಾವವನ್ನು ಹೇಳುವಂತಹ ನುಡಿಗಟ್ಟಾಗಿದೆ.
ಕಲಿಕೆಯಲ್ಲಂತೂ ಈ ಗಮನ ಹರಿಸಿ ಏಕಾಗ್ರತೆಯನ್ನು ಸಾಸುವುದು ಅತ್ಯಂತ ಅವಶ್ಯವಾದ ಸಂಗತಿಯಾಗಿದೆ. ಮನೆಯಲ್ಲಿ ಪೋಷಕರು ಮತ್ತು ಶಾಲೆಯಲ್ಲಿ ಶಿಕ್ಷಕರು ಮಕ್ಕಳು ಅಲ್ಲಿ ಇಲ್ಲಿ ನೋಡುವಾಗ, ಗಮನ ಕೊಡು ಎಂದು ಮಕ್ಕಳ ಮುಖ ಪುಸ್ತಕದ ಕಡೆಗೆ ತಿರುಗಿರುವಂತೆ ಮಾಡುತ್ತಾರೆ. ಅಷ್ಟಾದರೆ ಅಲ್ಲಿ ಅವರು ಗಮನ ಹರಿಸಿದ್ದಾರೆಂದೋ ಅಥವಾ ಏಕಾಗ್ರತೆಯಿಂದ ಲಕ್ಷವಿಟ್ಟಿದ್ದಾರೆಂದೋ ಅರ್ಥವಲ್ಲ. ಬಹಳಷ್ಟು ಜನ ಮಕ್ಕಳ ಬಗ್ಗೆ ದೂರುವುದು ಏಕಾಗ್ರತೆ ಇಲ್ಲವೆಂದು. ಕಾನ್‌ಸೆಟ್ರೇಟ್ ಮಾಡು ಎಂದು ಮಕ್ಕಳನ್ನು ಒತ್ತಾಯಿಸುತ್ತಾರೆ. ಒತ್ತಾಯದಿಂದ ಏಕಾಗ್ರತೆ ಬರುವುದಿಲ್ಲ. ಅವರು ಅದರ ಕಡೆಗೆ ನೋಡಬಹುದು. ಆದರೆ ಒಂದು ವಸ್ತುವನ್ನು ಕೇಂದ್ರವಾಗಿಟ್ಟುಕೊಂಡು ಗಮನ ಹರಿಸಲು ಸಾಧ್ಯವಿಲ್ಲ. ಒಂದು ವಸ್ತು ಅಥವಾ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ತನ್ನ ಗಮನವನ್ನು ಹರಿಸುವುದು ಹೇಗೆ ಮತ್ತು ಏಕೆ ಎಂಬುದು ಅವರಿಗೆ ತಿಳಿದಿಲ್ಲ. ಕಾನ್‌ಸೆಟ್ರೇಟ್ ಮಾಡು ಅಥವಾ ಕೇಂದ್ರೀಕರಿಸು ಎಂದು ಮಕ್ಕಳಿಗೆ ಹೇಳಿಬಿಟ್ಟರೆ ಅವರು ಮಾಡಿಬಿಡಲಾಗುವುದಿಲ್ಲ. ಗಮನ ಹರಿಯುವುದು ಸಹಜವಾದ ಸಾಮರ್ಥ್ಯವೇ ಆಗಿದ್ದರೂ, ಏಕ ಕೇಂದ್ರಿತವಾಗಿ, ಒಮ್ಮುಖವಾಗಿ ಹರಿಯಲು ಅದಕ್ಕೆ ತರಬೇತಿ ಕೊಡಬೇಕು. ಆ ತರಬೇತಿಯನ್ನು ಮಕ್ಕಳಿಗೆ ಕೊಡದೇ ಮಕ್ಕಳಲ್ಲಿ ಏಕಾಗ್ರತೆ ಇಲ್ಲ ಎಂದು ದೂರುವುದರಲ್ಲಿ ಯಾವ ಅರ್ಥವೂ ಇಲ್ಲ.
ತಾಂತ್ರಿಕವಾಗಿ ಸಾಧಾರಣ ಮನಸ್ಸಿಗೂ ಮತ್ತು ಸಮರ್ಥ ಮನಸ್ಸಿಗೂ ಇರುವ ವ್ಯತ್ಯಾಸವೆಂದರೆ, ಗಮನ ಹರಿಸುವ ಸಾಮರ್ಥ್ಯವನ್ನು ಹೊಂದಿರುವುದು. ಗಮನ ಎನ್ನುವುದು ವಿವಿಧ ದಿಕ್ಕುಗಳಲ್ಲಿ ಹರಿಯುವಂತಹದ್ದು. ಆದರೆ ಅದನ್ನು ಸಂಪೂರ್ಣವಾಗಿ ಒಂದೇ ಕಡೆ ಕೇಂದ್ರೀಕೃತಗೊಳಿಸಲು ಸಾಧ್ಯವಾಗುವುದೇ ಸಮರ್ಥ ಮನಸ್ಸಿನ ಲಕ್ಷಣ. ಸಾಧಾರಣ ಮನಸ್ಸು ತನ್ನ ಗಮನವನ್ನು ಕೇಂದ್ರೀಕರಿಸಲಾಗದೇ ವಿವಿಧ ಕೇಂದ್ರಗಳ ಕಡೆಗೆ ಸಾಗಿ ಮತ್ತೆ ಮತ್ತೆ ಹಿಂದಕ್ಕೆ ಬರುತ್ತಿರುತ್ತದೆ. ಒಂದು ಸಮಯದಲ್ಲಿ, ಒಂದೇ ಕಡೆ, ಸಂಪೂರ್ಣವಾಗಿ ಗಮನಕೊಟ್ಟು ಚಂಚಲವಾಗಿರದೆ ನೋಡುವುದೇ ಏಕಾಗ್ರತೆ. ಇನ್ನೂ ಮುಂದುವರಿದು ಹೇಳಬೇಕಾದರೆ, ಏಕಾಗ್ರತೆ ಎಂದರೆ ಚಂಚಲಿತವಾಗದ, ಪದೇ ಪದೇ ಬದಲಿಸದ ಗಮನ. ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ, ಒಂದು ವಸ್ತುವಿನಿಂದ ಮತ್ತೊಂದು ವಸ್ತುವಿಗೆ ಪದೇ ಪದೇ ಬದಲಿಸುತ್ತಾ ಹೋಗುವುದು ಸಾಧಾರಣ.
ಏಕಾಗ್ರತೆ ಅಭ್ಯಾಸದ ಫಲ
ಏಕಾಗ್ರತೆ ಎಂಬುದು ಹುಟ್ಟುತ್ತಿದ್ದಂತೆ ಎಲ್ಲರಿಗೂ ಇರುವಂತಹ ಸಾಧಾರಣ ಸಾಮರ್ಥ್ಯವೇ. ಸಣ್ಣ ಮಗುವೂ ಕೂಡ ತನ್ನ ಗಮನವನ್ನು ಅನುದ್ದೇಶದಿಂದ ವಿವಿಧ ವಸ್ತುಗಳ ಕಡೆಗೆ ಹರಿಸುತ್ತಿರುತ್ತದೆ. ಮತ್ತೆ ತನ್ನ ಗಮನ ಸೆಳೆಯುವಂತಹ ಹೊರಗಿನ ಪ್ರಭಾವಕ್ಕೆ ಒಳಗಾಗುವವರೆಗೂ ಅಥವಾ ತಾನೇ ತಾನಾಗಿ ಗಮನವನ್ನು ಮತ್ತೊಂದು ಕಡೆಗೆ ನೀಡುತ್ತದೆ. ಹೀಗೆ ಗಮನ ಹರಿಸುವುದು ಸಹಜವಾದ ಪ್ರಕ್ರಿಯೆಯಾಗಿದೆ. ಆದರೆ, ಅದನ್ನು ಹೆಚ್ಚು ಕಾಲ ಒಂದೇ ಕಡೆ ನಿಲ್ಲಿಸುವುದು ಒಂದು ಸವಾಲಿನ ಕೆಲಸ. ಅದರಲ್ಲೂ ಮಕ್ಕಳಲ್ಲಿ ಅದನ್ನು ಸಾಸುವುದು ಇನ್ನೂ ಹೆಚ್ಚಿನ ಸವಾಲು ಮತ್ತು ಅಗತ್ಯ. ಒಂದು ಕಡೆಗೆ ಗಮನವನ್ನು ಕೇಂದ್ರೀಕೃತ ಮಾಡುವುದು ತರಬೇತಿಯಿಂದ ಸಾಧ್ಯವಾಗುತ್ತದೆ. ಅದೊಂದು ಅಭ್ಯಾಸದಿಂದ ಸಾಸಬಹುದಾದಂತಹ ಸಾಮರ್ಥ್ಯ. ಗಮನ ಕೊಡುವ ಕಲೆಯನ್ನು ರೂಢಿಗೊಳಿಸಿಕೊಳ್ಳುವುದರಿಂದ ಹೆಚ್ಚಿನ ಕಾಲ ಏಕಾಗ್ರತೆಯನ್ನು ಸಾಸಲು ಸಾಧ್ಯವಾಗುತ್ತದೆ.
ಏಕಾಗ್ರತೆ ಸಾಸುವಲ್ಲಿ ಮೂರು ಅಂಶಗಳನ್ನು ಪರಿಗಣಿಸಬೇಕು. ಉದ್ದೇಶ, ಗಮನ ಮತ್ತು ಪ್ರಜ್ಞಾಪೂರ್ವಕವಾಗಿ ಮಾಡುವಂತಹ ಆಲೋಚನೆಗಳು. ಕಲಿಕೆಯಲ್ಲಿ ಏಕಾಗ್ರತೆಯನ್ನು ಸಾಸಲೂ ಕೂಡ ಈ ಮೂರು ಅಂಶಗಳನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು.
1. ಉದ್ದೇಶ
ಮಕ್ಕಳಿಗೆ ಅವರು ಕಲಿಯಲಿರುವ ವಿಷಯವನ್ನು, ಅದು ಯಾವುದೇ ಆಗಿರಲಿ, ಅದನ್ನು ಏಕೆ ಕಲಿಯಬೇಕು. ಅದರಿಂದ ಮಗುವಿಗೆ ಏನು ಲಾಭ ಎನ್ನುವುದನ್ನು ಮನದಟ್ಟು ಮಾಡಿಕೊಡಬೇಕು. ಕಲಿಕೆಯಿಂದ ನಮಗಾಗುವ ಅನುಕೂಲಗಳನ್ನು ತಿಳಿಸುವುದರಿಂದ ಆ ವಿಷಯ ತಮಗೆ ಏಕೆ ಬೇಕೆಂದು, ತಮ್ಮ ಕಲಿಕೆಯ ಉದ್ದೇಶ ಏನೆಂದು ಅದಕ್ಕೆ ಅರಿವಾಗುತ್ತದೆ. ಇದು ಶಿಕ್ಷಕರು ಅಥವಾ ಪೋಷಕರು ತಮ್ಮ ಮಕ್ಕಳನ್ನು ಕಲಿಕೆಗೆ ತೊಡಗಿಸುವಾಗ. ಆದರೆ, ಬೆಳೆದ ಮಕ್ಕಳು, ಅಥವಾ ನಮ್ಮಂತವರು ಯಾರೇ ಆಗಲಿ ಕಲಿಕೆಗೆ ತೊಡಗುವಾಗ ನಾವಾಗಿ ಮಾಡಿಕೊಳ್ಳಬೇಕಾದುದೇನೆಂದರೆ ಈ ಕಲಿಕೆ ಅಥವಾ ಈ ವಿಷಯವಸ್ತು ನಮಗೆ ಏಕೆ ಬೇಕು ಎಂಬ ಉದ್ದೇಶವನ್ನು ಸ್ಪಷ್ಟಗೊಳಿಸಿಕೊಳ್ಳಬೇಕು. ಏಕೆಂದರೆ ಉದ್ದೇಶ ಸ್ಪಷ್ಟವಾಗಿದ್ದ ಪಕ್ಷದಲ್ಲಿ ಕಲಿಕೆಯ ಹಾದಿಯಲ್ಲಿ ನಮ್ಮ ಉದ್ದೇಶಕ್ಕೆ ಪೂರಕವಾಗಿರುವಂತಹ ಅನೇಕ ಸಂಗತಿಗಳು ಎದುರಾಗುತ್ತವೆ. ಆಗ ಅವುಗಳನ್ನು ಗಮನಿಸುತ್ತೇವೆ. ಉದ್ದೇಶ ಸ್ಪಷ್ಟವಿಲ್ಲದೇ ಹೋದ ಪಕ್ಷದಲ್ಲಿ ನಮಗೆ ಬೇಕಾಗುವ ಸಂಗತಿಗಳನ್ನೂ, ವಿಷಯಗಳನ್ನೂ ಗಮನಿಸದೇ ಹೋಗಿಬಿಡುತ್ತೇವೆ. ಆಗ ಮುಂದೆಂದಾದರೂ ನಾವು ಅದನ್ನೂ ನಮ್ಮ ದಾಖಲೆಯಲ್ಲಿ ಇರಿಸಿಕೊಳ್ಳಬೇಕಿತ್ತು ಅಥವಾ ಇನ್ನಷ್ಟು ಹೊಕ್ಕು ನೋಡಬೇಕಿತ್ತು ಎಂದು ಮಿಂಚಿಹೋದ ಕಾರ್ಯಕ್ಕೆ ಲವಿಲ್ಲದೆ ಚಿಂತಿಸುವಂತಾಗುತ್ತದೆ. ಆದ್ದರಿಂದಲೇ ಕಲಿಕೆಯ ಅಥವಾ ಅಧ್ಯಯನದ ವಿಷಯದಲ್ಲಿ ನಮ್ಮ ಉದ್ದೇಶವನ್ನು ಸ್ಪಷ್ಟಗೊಳಿಸಿಕೊಳ್ಳಬೇಕು. ನಮ್ಮ ಸ್ಪಷ್ಟವಾದ ಉದ್ದೇಶ ಆಸಕ್ತಿಯನ್ನು ಹುಟ್ಟಿಹಾಕುತ್ತದೆ. ಆಸಕ್ತಿಯು ಹುಟ್ಟಿದ ಮೇಲೆ ಗಮನ ತಾನಾಗಿಯೇ ಅತ್ತ ಹರಿಯುತ್ತದೆ. ಕಲಿಕೆಯ ಅಗತ್ಯವನ್ನು ಗಟ್ಟಿಗೊಳಿಸುತ್ತದೆ.
2. ಗಮನ
ಆಸಕ್ತಿಯೇ ಕಲಿಯುವ ಆ ಶಕ್ತಿಯನ್ನು ಹುಟ್ಟುಹಾಕುವುದು. ಸಾಚಾ ಉದ್ದೇಶದಿಂದ ಆಸಕ್ತಿಯು ತಾಜಾ ಆಗಿರುತ್ತದೆ. ಆಸಕ್ತಿಯು ದೃಢವಾಗುತ್ತಿದ್ದಂತೆ ನಮ್ಮ ಉದ್ದೇಶಕ್ಕೆ ಪೂರಕವಾಗಿರುವಂತಹ ಮಾಹಿತಿಗಳೆಲ್ಲಾ ನಮಗೆ ಎದುರಾಗುತ್ತಲೇ ಇರುತ್ತದೆ ಅಥವಾ ಎದುರಾಗುವ ವಿಷಯಗಳಲ್ಲೆಲ್ಲಾ ಪೂರಕ ಮಾಹಿತಿಗಳು ಗೋಚರವಾಗುತ್ತಿರುತ್ತವೆ. ಇಷ್ಟೂ ದಿನ ಅಗೋಚರವಾಗಿದ್ದ ಸಂಗತಿಗಳೆಲ್ಲಾ ತೆರೆದುಕೊಳ್ಳಲು ಆರಂಭಿಸುತ್ತವೆ. ಇನ್ನು ಮಕ್ಕಳ ವಿಷಯದಲ್ಲಿ ಕಲಿಕೆಯ ಉದ್ದೇಶವನ್ನು ಅವರಿಗೆ ಮನದಟ್ಟು ಮಾಡಿದ ಮೇಲೆ ಆ ವಿಷಯದ ಕಡೆಗೆ ಗಮನ ಸೆಳೆಯಬೇಕು. ವಿಷಯವಸ್ತುವು ಎಷ್ಟೇ ವೌಲ್ಯದ್ದಾಗಿರಲಿ, ಅದು ನೀರಸವಾಗಿದ್ದರೆ, ಸ್ವಾರಸ್ಯದಿಂದ ಕೂಡಿರದಿದ್ದರೆ ಅದು ಗಮನ ಸೆಳೆಯುವಲ್ಲಿ ವಿಲವಾಗುತ್ತದೆ.
ಹಾಗಾಗಿ ಮಕ್ಕಳ ಗಮನವನ್ನು ಸೆಳೆಯಲು ವಿಷಯವನ್ನು ಸ್ವಾರಸ್ಯವಾಗಿ ನಿರೂಪಿಸಬೇಕು. ಇನ್ನು ಸ್ವಾಧ್ಯಾಯದಲ್ಲಿ ಗಮನ ಸೆಳೆಯುವ ಬದಲಾಗಿ ನಾವೇ ಗಮನ ಕೊಡಬೇಕಾದ ಪ್ರಸಂಗ ಬರುವುದು. ಗಮನ ಹರಿಸುವುದು ಅಂದರೆ ಏನು? ಉದ್ದೇಶ ಸ್ಥಿರವಾಗಿರುವ ಕಾರಣದಿಂದ ನಾವು ಕೈಗೆಟುಕಿರುವ ವಿಷಯದ ಪಠ್ಯವನ್ನಾಗಲಿ, ದಾಖಲೆಯನ್ನಾಗಲಿ ಸಾಲು ಸಾಲೂ ನೋಡಬೇಕು. ಹಾಗೆ ನೋಡುವಾಗ ಪೆನ್ಸಿಲ್ ಅಥವಾ ಹೈಲೈಟರ್‌ನಿಂದ ಮುಖ್ಯಾಂಶಗಳಿಗೆ ಗುರುತು ಹಾಕಿಕೊಳ್ಳಬೇಕು. ಮೊದಲೊಮ್ಮೆ ಓದಿ ನಂತರ ಗುರುತು ಹಾಕಿಕೊಳ್ಳುವುದು ಗಮನ ಹರಿಸುವ ವಿಷಯವೇ ಆಗಿರುತ್ತದೆ. ಹಾಗೆ ಗುರುತು ಹಾಕಿರುವುದರಿಂದ ಪುಸ್ತಕ ತೆಗೆದು ಪುಟ ತಿರುವಿದ ತಕ್ಷಣವೇ ಅದು ನಮ್ಮ ಗಮನ ಸೆಳೆಯುತ್ತದೆ.
ಸ್ವಾಧ್ಯಾಯದಲ್ಲಿ ಗಮನವನ್ನು ಗಾಢಗೊಳಿಸಿ ಕೊಳ್ಳಲು ಇನ್ನೂ ಒಂದು ಕೆಲಸ ಮಾಡಬಹುದು. ಅದೇನೆಂದರೆ, ಒಮ್ಮೆ ಪುಸ್ತಕದಲ್ಲಿ ಮುಖ್ಯಾಂಶಗಳನ್ನು ಗುರುತಿಸಿದ ಮೇಲೆ ಸಂಪೂರ್ಣ ಓದಿದ ನಂತರ ಅದೇ ಅಂಶಗಳನ್ನು ಬೇರೊಂದು ಪುಸ್ತಕದಲ್ಲಿ ಅಥವಾ ಡೈರಿಯಲ್ಲಿ ಪುಸ್ತಕದ ಹೆಸರು, ಲೇಖಕ ಮತ್ತು ಪ್ರಕಾಶಕರ ಹೆಸರು ಬರೆದು ನಮ್ಮ ಗಮನ ಸೆಳೆದ ಅಂಶಗಳನ್ನು ಬರೆದು ಅದರ ಮುಂದೆ ಪುಟ ಸಂಖ್ಯೆ ನಮೂದಿಸಬೇಕು. ಕಂಪ್ಯೂಟರ್ ಸೌಲಭ್ಯವಿರುವವರು ಒಂದು ೆಲ್ಡರ್‌ನಲ್ಲಿ ಅಧ್ಯಯನ ಮಾಡಿದ ಪುಸ್ತಕ ಹೆಸರಿನ ೈಲ್‌ನ್ನು ತೆಗೆದು ಅದರಲ್ಲಿ ವಿಷಯವನ್ನು ಪುಟ ಸಂಖ್ಯೆಯ ಸಮೇತ ದಾಖಲಿಸಬೇಕು. ಒಂದೇ ವಿಷಯವನ್ನು ಹೀಗೆ ಹಲವು ಬಾರಿ ಗಮನಿಸುವುದರಿಂದ ವಿಷಯದ ಬಗ್ಗೆ ನಮಗೆ ಏಕಾಗ್ರತೆ ಉಂಟಾಗುತ್ತದೆ. ಏಕೆಂದರೆ ಕ್ರಿಯೆಗಳು ಬದಲಾಗಿರುತ್ತವೆ. ಆದರೆ ಗಮನ ಮಾತ್ರ ಅದರ ಕಡೆಗೇ ಇರುತ್ತದೆ. ಇದೇ ಕೆಲಸವನ್ನು ಮಕ್ಕಳಿಂದಲೂ ಮಾಡಿಸುವುದರಿಂದ ಅವರು ವಿಷಯದ ಕಡೆಗೆ ಗಮನ ನೀಡಲು ಸಾಧ್ಯವಾಗುತ್ತದೆ.
3. ಪ್ರಜ್ಞಾಪೂರ್ವಕವಾಗಿ ಮಾಡುವ ಆಲೋಚನೆಗಳು
ಕಲಿಕೆಯಲ್ಲಿ ಪ್ರಜ್ಞೆ ಎಂದರೆ ಎಚ್ಚರದಿಂದ, ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಮಾಡುವಂತಹ ಆಲೋಚನೆ. ಮಕ್ಕಳಿಗೆ ಏಕಾಗ್ರತೆಯನ್ನು ಉಂಟು ಮಾಡಲು ಉದ್ದೇಶವನ್ನು ತಿಳಿಸಿದಂತೆ, ಸ್ವಾರಸ್ಯಕರವಾಗಿ ಗಮನ ಸೆಳೆದಂತೆ ಕಲಿಕೆಯ ಸಮಯದಲ್ಲಿ ಹೊರಗಿನ ಮತ್ತು ಮನಸ್ಸಿನ ಒಳಗೆ ಯಾವುದೋ ಒಂದು ಪ್ರಭಾವವು ಕಲಿಯುವವರ ಅರಿವಿಗೆ ಬರದಂತೆ ಕ್ರಿಯೆಯಲ್ಲಿ ತೊಡಗಿರುತ್ತದೆ. ಅದನ್ನು ಎಚ್ಚರದಿಂದ ಗಮನಿಸಿ ಕೂಡಲೇ ಕಲಿಕೆಯ ಕಡೆಗೆ ಅಥವಾ ಅಧ್ಯಯನದ ಕಡೆಗೆ ಗಮನ ಹರಿಸುವುದು ಏಕಾಗ್ರತೆಯನ್ನು ಸಾಸುವ ಕಡೆಗೆ ಮತ್ತೊಂದು ಮಹತ್ತರ ಹೆಜ್ಜೆ. ಉದಾಹರಣೆಗೆ ಓದುತ್ತಲೋ ಅಥವಾ ಬರೆಯುತ್ತಲೋ ಇರುವಾಗ ಅನಗತ್ಯವಾಗಿ ಕಾಲುಗಳನ್ನು ಅಲ್ಲಾಡಿಸುತ್ತಿರುವುದು, ಉದ್ದ ಕೂದಲಿದ್ದರೆ, ಒಂದು ಕೈಯ ಬೆರಳಿನಿಂದ ಕೂದಲ ಗುಚ್ಛವನ್ನು ಸುರುಳಿಸುತ್ತುತ್ತಾ ಇರುವುದು, ತಲೆ ಕೆರೆದುಕೊಂಡಿರುವುದು ಇತ್ಯಾದಿ ಅಂಗಚೇಷ್ಟೆಗಳನ್ನು ಮಾಡಬಾರದು. ಹಾಗಾದಾಗ ಕಲಿಕೆ ಅಥವಾ ಅಧ್ಯಯನ ಯಾಂತ್ರಿಕ ಸ್ವರೂಪವನ್ನು ಪಡೆದುಕೊಂಡು ಏಕಾಗ್ರತೆಗೆ ಭಂಗವಾಗುತ್ತದೆ.
ಓದುತ್ತಿದ್ದರೆ ಸಾಲುಗಳ ಮೇಲೆ ಕಣ್ಣುಗಳು ಹಾದು ಹೋಗಿರುತ್ತವೆಯೇ ಹೊರತು ಅವುಗಳನ್ನು ಗ್ರಹಿಸಿರುವುದಿಲ್ಲ. ಆದ್ದರಿಂದ ಮಕ್ಕಳು ಓದುವಾಗ ಯಾವುದೇ ಅಂಗ ಚೇಷ್ಟೆ ಮಾಡಿದರೂ ಕೂಡಲೇ ಆ ಚೇಷ್ಟೆಯನ್ನು ಅವರ ಗಮನಕ್ಕೆ ತರಬೇಕು. ಆಗ ಅವರು ಅದನ್ನು ನಿಲ್ಲಿಸುತ್ತಾರೆ. ಮತ್ತೆ ಸ್ವಲ್ಪ ಹಿಂದಿನಿಂದ ಓದುವುದನ್ನು ಮಾಡಿಸಬೇಕು. ಕಲಿಕೆಯ ಅಥವಾ ಅಧ್ಯಯನದ ಸಮಯದಲ್ಲಿ ಎತ್ತೆತ್ತಲೋ ನೋಡುತ್ತಿರುವುದು, ಯಾವುದೋ ಹಾಡನ್ನೋ ಮತ್ತೊಂದನ್ನೋ ಕೇಳುವುದು ಮಾಡಿದರೆ, ನಿಶಬ್ದವಾಗಿ ಸಾಲುಗಳ ಮೇಲೆ ಕಣ್ಣುಗಳು ಸಾಗಿದ್ದರೂ ಅಲ್ಲಿ ಕಲಿಕೆಯೂ ಇಲ್ಲ, ಗ್ರಹಿಕೆಯೂ ಇರುವುದಿಲ್ಲ. ಆದ್ದರಿಂದ ಪ್ರಜ್ಞಾಪೂರ್ವಕವಾಗಿ ನಮ್ಮ ಆಲೋಚನೆಗಳನ್ನು ವಿಷಯ ವಸ್ತುವಿನ ಕಡೆಗೆ ತಿರುಗಿಸಬೇಕು. ಇಷ್ಟಕ್ಕೆ ಏಕಾಗ್ರತೆ ಸಾಸಿದಂತಲ್ಲ. ಕೊಂಬೆಯಿಂದ ಕೊಂಬೆಗೆ ಹಾರುವ ಮಂಗನಂತೆ ಮನಸ್ಸು ಅನೇಕಾನೇಕ ವಿಷಯಗಳ ಕಡೆಗೆ ತನ್ನ ಮುಖ ಮಾಡುತ್ತಲೇ ಇರುತ್ತದೆ. ಅದು ಏಕಾಗ್ರತೆಗೆ ಬಹುದೊಡ್ಡ ಭಂಗವೇ. ಆದರೆ ಹಲವು ವಿಧಾನಗಳಿಂದ ಅದನ್ನು ನಿಯಂತ್ರಣಕ್ಕೆ ತರಬಹುದು. ಅವುಗಳೇನೆಂದು ಮುಂದೆ ನೋಡೋಣ.