ಗೋಧ್ರಾದಿಂದ ಉನಾವರೆಗೆ... ಆ ದಲಿತ ಮುಖ!
ಅಹ್ಮದಾಬಾದ್‌ನ ಬೀದಿಬದಿಯಲ್ಲಿ ಚಪ್ಪಲಿ ಹೊಲಿಯುವ ಈ ಮಧ್ಯವಯಸ್ಕ ವ್ಯಕ್ತಿ ಹಲವು ವರ್ಷಗಳಿಂದ ಫುಟ್‌ಪಾತ್‌ನಲ್ಲೇ ಹಾಯಾಗಿ ನಿದ್ರಿಸುತ್ತಿದ್ದವರು. ಉನಾದಲ್ಲಿ ಸತ್ತ ಹಸುವಿನ ಚರ್ಮ ಸುಲಿಯುತ್ತಿದ್ದವರ ಮೇಲೆ ಗೋರಕ್ಷಕರು ನಡೆಸಿದ ಅಮಾನವೀಯ ದಾಳಿಯನ್ನು ವಿರೋಸಿ ಅಹ್ಮದಾಬಾದ್ ನಗರದಲ್ಲಿ ನಡೆದ ಆಝಾದಿ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ನೂರಾರು ಮಂದಿಯಲ್ಲಿ ಇವರು ಕೂಡಾ ಸೇರಿದ್ದರು. ದಲಿತ- ಮುಸ್ಲಿಂ ಏಕತೆಗಾಗಿ ಶ್ರಮಿಸುವುದಾಗಿ ಘೋಷಿಸಿದ ಈ ವ್ಯಕ್ತಿಯ ಹೆಸರು ಅಶೋಕ್ ಮೋಚಿ.
‘‘ಬಹುತೇಕ ಮಂದಿ ಹಿಂದೂಗಳು ಗಡ್ಡ ಬೆಳೆಸುವುದಿಲ್ಲ. ಗಡ್ಡಧಾರಿಯಾಗಿದ್ದರೆ ಹಿಂದೂಗಳು ನನ್ನನ್ನು ಮುಸ್ಲಿಂ ಎಂದುಕೊಂಡು ಹಲ್ಲೆ ಮಾಡುವ ಭೀತಿಯಿಂದ ಗಡ್ಡ ತೆಗೆಸಲು ಕ್ಷೌರಿಕನನ್ನು ಹುಡುಕಿದೆ. ಅದರೆ ಎಲ್ಲವೂ ಮುಚ್ಚಿತ್ತು. ಆದ್ದರಿಂದ ಹಿಂದೂ ಎಂದು ಗೊತ್ತಾಗಲು ಹಣೆಗೆ ಕೇಸರಿ ಬಟ್ಟೆ ಕಟ್ಟಿಕೊಂಡು ಇತರ ಹಿಂದೂ ಯುವಕರ ಜತೆ ಸೇರಿಕೊಂಡೆ’’
ಹದಿನಾಲ್ಕು ವರ್ಷ ಮೊದಲು ಉದ್ರಿಕ್ತ ಗುಂಪುಗಳು ಅಹ್ಮದಾಬಾದ್‌ನ ಬೀದಿಗಳಲ್ಲಿ ರಂಪಾಟ ನಡೆಸಿ, ತಮ್ಮ ನೆರೆಹೊರೆಯ ಮುಸ್ಲಿಮರ ಮನೆ ಹಾಗೂ ಅಂಗಡಿಗಳನ್ನು ಕೊಳ್ಳೆಹೊಡೆದು, ಬೆಂಕಿ ಹಚ್ಚಿ, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿದ ದೃಶ್ಯಗಳು ಇಂದಿಗೂ ಇವರ ಮನಸ್ಸಿನಲ್ಲಿ ಅಚ್ಚಳಿಯದ ಮುದ್ರೆಯೊತ್ತಿದ್ದವು. ಅಷ್ಟೇ ಬೇಗ ಅವರು ಮರೆವಿಗೆ ಜಾರಿದರು. ಇತ್ತೀಚೆಗೆ ಮತ್ತೆ ನೆನಪುಗಳು ಮರುಕಳಿಸಿದವು. ಇದರ ಹಿಂದೆ ದೊಡ್ಡ ಕಥೆಯೇ ಇದೆ.
ಕರಾಳ ಅಧ್ಯಾಯ
ಅದು 2002ರ ಫೆಬ್ರವರಿ 28ರ ಮುಂಜಾನೆ. ಪಕ್ಕದ ಗೋಧ್ರಾ ನಿಲ್ದಾಣದಲ್ಲಿ 58 ಮಂದಿಯನ್ನು ರೈಲಿಗೆ ಬೆಂಕಿ ಹಚ್ಚಿ ಜೀವಂತವಾಗಿ ದಹಿಸಿದ ಮರುದಿನ. ಈ ಜೀವಂತದಹನ ಹಾಗೂ ಅದರ ಕಿಡಿ ಮುಂದಿನ ಹಲವು ವಾರಗಳ ಕಾಲ ಮುಂದುವರಿಯುವ ಎಲ್ಲ ಸೂಚನೆಯೂ ಇತ್ತು.
ಅಶೋಕ್ ಮೋಚಿಯ ಚಿತ್ರ, ಆ ಭಯಾನಕ ಹಿಂಸಾಕೃತ್ಯದ ದಿನಗಳನ್ನು ಸಾಂಕೇತಿಸುವಂತಿತ್ತು. ಕ್ಯಾಮರಾ ಒಬ್ಬ ಸಣಕಲು, ಗಡ್ಡಧಾರಿ ಯುವಕನನ್ನು ಸೆರೆಹಿಡಿದಿತ್ತು. ಖಾಲಿ ಪ್ಯಾಂಟ್ ಹಾಗೂ ಸಡಿಲವಾದ ಕಪ್ಪುಬಣ್ಣದ ಟಿ-ಶರ್ಟ್ ಧರಿಸಿದ್ದ ಈ ವ್ಯಕ್ತಿ ತೋಳುಗಳನ್ನು ಮಡಚಿದ್ದ. ಕೇಸರಿ ಬ್ಯಾಂಡ್‌ನಿಂದ ಕೂದಲನ್ನು ಹಣೆಯ ಮೇಲೆ ಕಟ್ಟಿಕೊಂಡಿದ್ದ. ಎತ್ತಿದ ಕೈಗಳ ಪೈಕಿ ಒಂದರಲ್ಲಿ ಝಳಪಿಸುತ್ತಿದ್ದ ಕಬ್ಬಿಣದ ರಾಡ್, ಮತ್ತೊಂದು ಕೈ ಮುಷ್ಟಿ ಬಿಗಿಹಿಡಿದಿದ್ದ. ಘೋಷಣೆ ಕೂಗುತ್ತಿದ್ದ ಆತನ ಬಾಯಿ ತೆರೆದುಕೊಂಡಿತ್ತು. ಹಿಂಬದಿಯಿಂದ ಒಬ್ಬ ವ್ಯಕ್ತಿಯ ಮಬ್ಬು ಚಿತ್ರ ಕಾಣಿಸುತ್ತಿತ್ತು. ಆ ಉದ್ರಿಕ್ತ ಗುಂಪು ಬೆಂಕಿ ಹಚ್ಚಿದ ವಸ್ತುಗಳು ಉರಿಯುತ್ತಿದ್ದ ದೃಶ್ಯ ಕಣ್ಣಿಗೆ ರಾಚುತ್ತಿತ್ತು. ಆತನ ಹಿಂದೆ ಉರಿಯುತ್ತಿದ್ದ ಮನೆ, ಮಳಿಗೆ ಹಾಗೂ ವಾಹನಗಳಿಂದ ಏಳುವ ಕಪ್ಪುಹೊಗೆ ದಟ್ಟವಾಗಿ ವ್ಯಾಪಿಸಿತ್ತು.
ಸೆಬಾಸ್ಟಿಯನ್ ಡಿಸೋಜಾ ಅವರ ಈ ಫೋಟೊ ವಿಶ್ವಾದ್ಯಂತ ಬಹುತೇಕ ಎಲ್ಲ ಪತ್ರಿಕೆಗಳಲ್ಲಿ ಮುದ್ರಣವಾದವು. ಬಳಿಕ ನಿಯತಕಾಲಿಕಗಳ ಮುಖಪುಟದಲ್ಲಿ ಇದು ರಾರಾಜಿಸಿತು. ಈ ಹತ್ಯಾಕಾಂಡದ ಕುರಿತ ಪುಸ್ತಕಗಳಿಗೂ ಈ ಚಿತ್ರ ಪ್ರಮುಖ ಆಕರ್ಷಣೆಯಾಯಿತು. ಅದು ಶೀಘ್ರದಲ್ಲೇ ಆ ಕರಾಳ, ಭಯಾನಕ ದಿನಗಳ ಉಪಮೆಯಾಗಿ ಬೆಳೆಯಿತು. ದೇಶ ವಿಭಜನೆ ಬಳಿಕ ಸಂಭವಿಸಿದ ಅತ್ಯಂತ ಭೀಕರ ಕೋಮುದಳ್ಳುರಿಯ ಚಿತ್ರಣವನ್ನು ಈ ಚಿತ್ರ ಅನಾವರಣಗೊಳಿಸುವಂತಿತ್ತು.
ಆ ಬಳಿಕ ಒಂದು ದಶಕ ನ್ಯಾಯಕ್ಕೆ ಮತ್ತು ಪುನರ್ವಸತಿಗಾಗಿ ಹೋರಾಟ ನಡೆಯಿತು. ಈ ಹತ್ಯಾಕಾಂಡದಲ್ಲಿ ಬದುಕಿ ಉಳಿದ ಸಂತ್ರಸ್ತರ ಭವಿಷ್ಯ ನನಗೆ ಮಾತ್ರವಲ್ಲ, ಹಲವಾರು ಮಂದಿ ಸ್ನೇಹಿತರು ಹಾಗೂ ಸಹೋದ್ಯೋಗಿಗಳ ಕಳಕಳಿಯಾಯಿತು. ಎಲ್ಲರೂ ಒಟ್ಟಾಗಿ ವಿವಿಧ ಕೋರ್ಟ್‌ಗಳಲ್ಲಿ ನೂರಾರು ಪ್ರಕರಣಗಳಲ್ಲಿ ಹೋರಾಡಿದೆವು. ಈ ರಕ್ತಪಾತಕ್ಕೆ ಕಾರಣರಾದವರನ್ನು ಕೋರ್ಟ್ ಕಟಕಟೆಗೆ ಎಳೆಯುವುದು ನಮ್ಮ ಉದ್ದೇಶವಾಗಿತ್ತು. ಕೆಲ ಪ್ರಕರಣಗಳಲ್ಲಿ ನಾವು ಗೆದ್ದೆವು. ಹಲವು ಪ್ರಕರಣಗಳಲ್ಲಿ ಆರೋಪಿಗಳನ್ನು ನಿರ್ದೋಷಿಗಳು ಎಂದು ಘೋಷಿಸಲಾಯಿತು. ಇಷ್ಟಾಗಿಯೂ ಇದು ದೇಶದ ಇತಿಹಾಸದಲ್ಲೇ ಕರಾಳ ಎನಿಸಿದ ಹತ್ಯಾಕಾಂಡ ವಿರುದ್ಧದ ಸಂಘಟಿತ ಪ್ರಯತ್ನ.
ನರಮೇಧದ ಬಳಿಕ ನೂರಾರು ಕ್ರಿಮಿನಲ್ ಪ್ರಕರಣಗಳಲ್ಲಿ ಹೋರಾಡಿದ ಅಮನ್ ಬಿರಾದಾರಿಯಲ್ಲಿ ನನ್ನ ಸಹೋದ್ಯೋಗಿಗಳಾಗಿದ್ದವರು ಸಿದ್ಧಾಂತಗಳನ್ನು ಇಟ್ಟುಕೊಂಡಿದ್ದ ಯುವ ವಕೀಲರು ಹಾಗೂ ದೌರ್ಜನ್ಯಕ್ಕೆ ಒಳಗಾದ ಸಮುದಾಯ ಗಳ ಶ್ರಮಿಕವರ್ಗದ ಮಹಿಳೆಯರು ಮತ್ತು ಪುರುಷರು. ಇಷ್ಟಾಗಿಯೂ ವರ್ಷಗಳು ಕಳೆದಂತೆ, ಈ ಕಾನೂನು ಸಮರದಲ್ಲಿ ನಾವು ಎಳೆದ ಬಹುತೇಕ ಮಂದಿ ನರಮೇಧದ ಕಾಲಾಳುಗಳೇ ವಿನಃ ಮುಖಂಡರಲ್ಲ ಎನ್ನುವ ವಾಸ್ತವ ನಮ್ಮ ಅರಿವಿಗೆ ಬಂತು. ನಾವು ಜೈಲಿಗೆ ಕಳುಹಿಸಿದ, ನ್ಯಾಯಾಲಯದ ಕಟಕಟೆಗೆ ಎಳೆದುತಂದ ಇವರು ಯಾರು? ಎನ್ನುವುದು ನಮಗೆ ಅಚ್ಚರಿಯಾಯಿತು. ನರಮೇಧದ ನಂತರದ ವರ್ಷಗಳಲ್ಲಿ ಇವರಿಗೆ ಏನಾಗಿದೆ?
ಚಿತ್ರದಲ್ಲಿದ್ದ ವ್ಯಕ್ತಿ
ಇಂಥ ಪ್ರಶ್ನೆಗಳು ನನಗೆ ನರಮೇಧ ನಡೆದ ಹಲವು ವರ್ಷಗಳ ಬಳಿಕ ಈ ಕ್ರೌರ್ಯದ ಸಂಕೇತವಾಗಿದ್ದ ವ್ಯಕ್ತಿಯ ಹುಡುಕಾಟಕ್ಕೆ ಪ್ರೇರಣೆಯಾಯಿತು. ಬದ್ಧತೆಯ ಸಹೋದ್ಯೋಗಿ ಕಿಶೋರ್ ಬಾಯ್, ಆತನ ಅಪರಾಧ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ನಿರ್ವಹಿಸಿದ್ದರು. ಆ ಚಿತ್ರದಲ್ಲಿದ್ದ ವ್ಯಕ್ತಿ ಅಶೋಕ್ ಮೋಚಿ; ಅಹ್ಮದಾಬಾದ್‌ನ ಶಹಾಪುರ ಕಾಲನಿಯ ಬೀದಿಬದಿಯ ಚಮ್ಮಾರ ಎಂಬ ವಿವರ ನೀಡಿದರು. ಆತನ ಪೂರ್ಣ ಹೆಸರು ಅಶೋಕ್ ಕುಮಾರ್ ಭಗವಾನ್ ಬಾಯ್ ಪರ್ಮಾರ್.
ಆರಂಭದ ದೂರುಗಳಲ್ಲಿ ಆತನ ಹೆಸರು ಕಾಣಿಸಿಕೊಳ್ಳಲಿಲ್ಲ. ಏಕೆಂದರೆ ದಾಳಿ ಮಾಡಿದ ಗುಂಪುಗಳಲ್ಲಿದ್ದ ಹೆಸರುಗಳನ್ನು ಪೊಲೀಸರು ನಮೂದಿಸಿರಲಿಲ್ಲ. ಬಳಿಕ ತನಿಖೆಯ ವೇಳೆ ಅಶೋಕ್ ಮೋಚಿ ಹೆಸರು ಕೂಡಾ ಪೊಲೀಸ್ ದಾಖಲೆಗಳಲ್ಲಿ ಸೇರಿಕೊಂಡಿತು.
ಸ್ಥಳೀಯರಾದ ಮುಹಮ್ಮದ್ ಹುಸೈನ್ ರಮಝಾನ್ ಬಾಯ್ ಶೇಕ್, ಮಾಧೇಪುರ ಪೊಲೀಸರಿಗೆ ಏಳು ತಿಂಗಳ ಬಳಿಕ ನೀಡಿದ ಹೇಳಿಕೆಯಲ್ಲಿ, ‘ಫೆಬ್ರುವರಿ 28ರಂದು ದೊಂಬಿ ನಡೆಸಿದ ಗುಂಪಿನಲ್ಲಿ ಅಶೋಕ್ ಮೋಚಿ ಕೂಡಾ ಇದ್ದರು. ವಿಶ್ವ ಹಿಂದೂ ಪರಿಷತ್ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಬಹುತೇಕ ಮುಸ್ಲಿಮರು ಮನೆಗಳಲ್ಲೇ ಉಳಿದಿದ್ದರು’’ ಎಂದು ವಿವರಿಸಿದ್ದರು.
ಶಹಾಪುರ ಚೌಕದಲ್ಲಿ ಸೇರಿದ್ದ ಗುಂಪಿನಲ್ಲಿ ಅಶೋಕ್ ಮೋಚಿ ಇದ್ದುದನ್ನು ಎಚ್ಚರಿಕೆಯಿಂದ ಗಮನಿಸಿದ್ದರು. ಈ ಗುಂಪು ಹಲವು ಆಟೊ ರಿಕ್ಷಾಗಳಿಗೆ ಬೆಂಕಿ ಹಚ್ಚಿತ್ತು. ಈ ಗುಂಪು ನನ್ನ ಸಹೋದರನ ಮನೆ ಪ್ರವೇಶಿಸಿ, ಸೂಟ್‌ಕೇಸ್ ಲೂಟಿ ಮಾಡಿ, ಗ್ಯಾಸ್ ಸಿಲಿಂಡರ್ ಹಾಗೂ ಟೆಲಿವಿಷನ್ ಸೆಟ್ ಮತ್ತಿತರ ಅಮೂಲ್ಯ ವಸ್ತುಗಳನ್ನು ದೋಚಿತು. ಬಳಿಕ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿತು. ಎತ್ತರದ ಕಟ್ಟಡಗಳಿಗೆ ಆ್ಯಸಿಡ್ ಬಲ್ಬ್‌ಗಳನ್ನು ತೂರಲಾಯಿತು. ಸಂಜೆಯ ವೇಳೆಗೆ ಪರಿಹಾರ ಶಿಬಿರಗಳಲ್ಲಿದ್ದ ಎಲ್ಲರನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು. ಇವರು ಹಲವು ತಿಂಗಳ ಕಾಲ ಇಂಥ ಶಿಬಿರಗಳಲ್ಲೇ ಉಳಿದರು ಎಂದು ಶೇಕ್ ಘಟನೆಯ ವಿವರ ನೀಡಿದ್ದರು.
ಇಷ್ಟಾಗಿಯೂ ಪೊಲೀಸರು ಮೋಚಿಯನ್ನು ಬಂಸಲೂ ಇಲ್ಲ; ವಿಚಾರಣೆಗೆ ಗುರಿಪಡಿಸಲೂ ಇಲ್ಲ. ಏಕೆಂದರೆ ಈ ಹಿಂಸಾಚಾರದ ವೇಳೆ ಸಂಭವಿಸಿದ ದೊಂಬಿ, ಅಗ್ನಿಸ್ಪರ್ಶ, ಅತ್ಯಾಚಾರ, ಕೊಲೆಯಂಥ 2,000 ಪ್ರಕರಣಗಳ ಪೈಕಿ ಅಶೋಕ್ ಪ್ರಕರಣವೂ ಒಂದಾಗಿತ್ತು. ಬಹುತೇಕ ಪ್ರಕರಣಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಅಗತ್ಯ ಸಾಕ್ಷಿಗಳಿಲ್ಲ ಎಂದು ಪೊಲೀಸರು ನಿರ್ಧರಿಸಿಬಿಟ್ಟರು.
ಅದಾಗ್ಯೂ ನಾನು ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗ ಸಲ್ಲಿಸಿದ್ದ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ, ಪೊಲೀಸರು ಗಲಭೆಕೋರರನ್ನು ರಕ್ಷಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ಸಮರ್ಪಕ ತನಿಖೆ ನಡೆಸಿಲ್ಲ ಎಂದು ಪ್ರತಿಪಾದಿಸಿದೆವು. ಸುಪ್ರೀಂಕೋರ್ಟ್ ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿ, 2,000ಕ್ಕೂ ಹೆಚ್ಚು ಪ್ರಕರಣಗಳ ಮರು ತನಿಖೆಗೆ ಐತಿಹಾಸಿಕ ತೀರ್ಪು ನೀಡಿತು.
ಹಲವು ಮಾನವಹಕ್ಕು ಗುಂಪುಗಳು ಈ ಪ್ರಕರಣಗಳನ್ನು ತೆಗೆದುಕೊಂಡವು. ಅಮನ್ ಬಿರಾದಾರಿ ಪಡೆದ ಅಂಥ ಪ್ರಕರಣಗಳಲ್ಲಿ ಅಶೋಕ್ ಮೋಚಿ ಪ್ರಕರಣವೂ ಒಂದು. ಮೋಚಿ ವಿರುದ್ಧ ಭಾರತೀಯ ದಂಡಸಂಹಿತೆಯ 435 ಹಾಗೂ 436ನೆ ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಿದೆವು. 14 ದಿನ ಆತ ಜೈಲಿನಲ್ಲಿ ಕಳೆದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಹೊಂದಿದರು. ಏಳು ವರ್ಷಗಳ ಕಾಲ ನಡೆದ ವಿಚಾರಣೆಯಲ್ಲಿ ಅಶೋಕ್ ಮೋಚಿ ಇತರ 20 ಮಂದಿಯ ಜತೆಗೆ ನ್ಯಾಯಾಲಯಕ್ಕೆ ಬರುತ್ತಿದ್ದರು.
ನ್ಯಾಯ ಕಾರ್ಯಕರ್ತ ಕಿಶೋರ್ ಬಾಯ್ ಬಹುತೇಕ ವಿಚಾರಣೆಯ ವೇಳೆ ಹಾಜರಿದ್ದರು. ಆದರೆ ವಿಚಾರಣೆ ತಿಂಗಳುಗಳ ಕಾಲ ಮುಂದೂಡಲ್ಪಟ್ಟಿತು. ಫಿರ್ಯಾದಿದಾರರು ತಮ್ಮ ಮನೆಗಳನ್ನು, ಜೀವನವನ್ನು ಕಟ್ಟಿಕೊಳ್ಳುವ ಹೋರಾಟದಲ್ಲಿ ಉತ್ಸಾಹ ಕಳೆದುಕೊಂಡರು.
ಪ್ರಕರಣದಲ್ಲಿ ಮುಸ್ಲಿಂ ಫಿರ್ಯಾದಿದಾರ ಶೇಕ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ನ್ಯಾಯಾಲಯ ಮುಂದಾಯಿತು. ಆದರೆ ಆತ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಈ ಗೈರುಹಾಜರಿ ಹಿನ್ನೆಲೆಯಲ್ಲಿ ನ್ಯಾಯಾಲಯ, ಪುರಾವೆಗಳಿಲ್ಲ ಎಂಬ ಕಾರಣ ನೀಡಿ ಅಶೋಕ್ ಮೋಚಿ ಹಾಗೂ ಇತರರನ್ನು ಆರೋಪಮುಕ್ತಗೊಳಿಸಿತು ಎಂದು ಯುವ ವಕೀಲ ಅಲ್ತಾಪ್ ಶೇಕ್ ನೆನಪಿಸಿಕೊಳ್ಳುತ್ತಾರೆ. 2002ರ ನರಮೇಧಕ್ಕೆ ಕಾರಣರಾದ ಹಲವು ಮಂದಿ ಮುಕ್ತರಾಗಿ ಹೊರಬಂದಂತೆ ಮೋಚಿ ಕೂಡಾ ಹೊರ ಬಂದರು.
ಹಲವು ವರ್ಷ ಬಳಿಕ ಅಶೋಕ್ ಮೋಚಿ ನನ್ನನ್ನು ಭೇಟಿಯಾಗಬಹುದೇ ಎಂದು ಕಿಶೋರ್ ಬಾಯ್ ಅವರನ್ನು ಕೇಳಿದೆ. ಲಾಲ್ ದರ್ವಾರಝಾ ಬಳಿ ಅಶೋಕ್ ಮೋಚಿ ಕೆಲಸ ಮಾಡುತ್ತಿದ್ದಲ್ಲಿಗೆ ನಾವಿಬ್ಬರು ಹೋದೆವು. ಈಗ ಅವರಿಗೆ ಸುಮಾರು 40 ವರ್ಷ. ಅವರ ಚಿತ್ರವನ್ನು ನೋಡಿದ ನಾನು ಅವರನ್ನು ಗುರುತು ಹಿಡಿಯಲಿಲ್ಲ. ಕೂದಲು ಬೆಳ್ಳಗಾಗಿ ಗಿಡ್ಡವಾಗಿತ್ತು. ಮುಖ ನೆರಿಗೆಗಟ್ಟಿತ್ತು. ಆ ಚಿತ್ರದಲ್ಲಿದ್ದಂತೆ ಗಡ್ಡ ಬಿಟ್ಟಿರಲಿಲ್ಲ. ವ್ಯಾಪಾರವೂ ಇಲ್ಲದ ಕಾರಣ ಅವರು ನಮ್ಮಾಂದಿಗೆ ಮಾತುಕತೆಗೆ ಹೊಟೇಲ್‌ಗೆ ಬಂದರು.
ಕುಟುಂಬದ ವೃತ್ತಿ ಮುಂದುವರಿಸಲು ಅವರಿಗೆ ಇಚ್ಛೆ ಇಲ್ಲದಿದ್ದರೂ, ಬಡತನದ ಕಾರಣದಿಂದ ಅನಿವಾರ್ಯವಾಗಿ ಅದನ್ನು ಮುಂದುವರಿಸಬೇಕಾಯಿತು. ಶ್ರಮಿಕ ವರ್ಗದ ಕಾಲನಿಯ ಒಂದು ಕೊಠಡಿಯ ಟೆಂಟ್‌ನಲ್ಲಿ ಅವರು ವಾಸವಾಗಿದ್ದರು ಎಂಬ ವಿವರ ಮಾತುಕತೆಯ ವೇಳೆ ತಿಳಿದು ಬಂತು.
ರಸ್ತೆಯ ಒಂದು ಕಡೆ ಮುಸ್ಲಿಮರು ವಾಸವಿದ್ದರು. ಇನ್ನೊಂದು ಕಡೆ ದುರ್ಬಲ ವರ್ಗದ ಹಿಂದೂಗಳ ವಾಸ. ಎಲ್ಲರೂ ಬಹುತೇಕ ದಿನಗೂಲಿಗಳು, ಕಟ್ಟಡ ನಿರ್ಮಾಣ, ಬಣ್ಣ ಹಚ್ಚುವವರು, ಚಾಪೆ ಹೆಣೆಯುವವರು, ಪುಟ್ಟ ವ್ಯಾಪಾರಿಗಳು. ಬೀದಿಬದಿ ಚಪ್ಪಲಿ ಹೊಲಿದು ಅವರ ತಂದೆ ಒಂದಷ್ಟು ಗಳಿಸಿದ್ದರು. ಅಶೋಕ್ ವಿದ್ಯಾಭ್ಯಾಸ ಮಾಡಿ ಬದುಕಿನಲ್ಲಿ ಏನಾದರೂ ಸಾಸಬೇಕು ಎಂಬ ಆಸೆ ಹೊಂದಿದ್ದರು. ಆದರೆ ಆರನೆ ತರಗತಿಯಲ್ಲಿರುವಾಗ ತಂದೆ ತೀರಿಕೊಂಡರು. ವರ್ಷದ ಬಳಿಕ ತಾಯಿಯೂ ಅದೇ ಹಾದಿ ಹಿಡಿದರು. ಅಣ್ಣನ ಸುಪರ್ದಿಯಲ್ಲಿ ಅಶೋಕ್ ಬೆಳೆದರು.
ಅಣ್ಣನಿಗೆ ಮದುವೆಯಾಗಿ ನಾಲ್ಕು ಮಂದಿ ಮಕ್ಕಳೂ ಆದರು. ಊಟಕ್ಕಾಗಿ ಮನೆಯಲ್ಲಿ ನಿತ್ಯ ಜಗಳ. ಹತ್ತನೆ ತರಗತಿ ಪಾಸಾದ ಬಳಿಕ ಸ್ವಂತ ಕಾಲಲ್ಲಿ ನಿಲ್ಲುವ ನಿರ್ಧಾರಕ್ಕೆ ಬಂದರು. ಇದಕ್ಕಾಗಿ ಬೀದಿ ಗುಡಿಸುವ, ಭದ್ರತಾ ಸಿಬ್ಬಂದಿ, ಬಣ್ಣ ಬಳಿಯುವ ಮತ್ತಿತರ ಕೆಲಸ ಮಾಡಿದರು. ಆದರೆ ಯಾವುದೂ ನೆಲೆ ಒದಗಿಸಲಿಲ್ಲ. ಅವರು ಹೇಳುವಂತೆ ಇದಕ್ಕೆ ಮುಖ್ಯ ಕಾರಣ ಜಾತಿ ತಡೆ. ಮನೆಗಳಿಗೆ ಬಣ್ಣ ಹಚ್ಚುವ ಕಸುಬನ್ನು ತಮ್ಮ ಜಾತಿಯವರಿಗಷ್ಟೇ ಜನ ಕಲಿಸುತ್ತಾರೆ ಎಂದು ಅಶೋಕ್ ಹತಾಶರಾಗಿ ನುಡಿದರು. ಅಂತಿಮವಾಗಿ ತಂದೆಯ ಉದ್ಯೋಗವನ್ನೇ ಮುಂದುವರಿಸಿದರು. ಗಳಿಸಿದ ಹಣದಲ್ಲಿ ಬಹುಪಾಲು ಅಣ್ಣನ ಕೈ ಸೇರುತ್ತಿತ್ತು. ಮನೆಯಲ್ಲಿ ಮತ್ತೆ ಜಗಳ ಆರಂಭ. ಕೊನೆಗೊಂದು ದಿನ ಮನೆ ತೊರೆದು ಕೆಲಸ ಮಾಡುತ್ತಿದ್ದ ಜಾಗದಲ್ಲೇ ಬೀದಿ ಬದಿಯಲ್ಲಿ ನಿದ್ದೆ ಮಾಡಲು ಆರಂಭಿಸಿದರು. ಅಶೋಕ್ ಅಂಗಡಿಯ ಪಕ್ಕದಲ್ಲೇ ನಝೀರ್ ಬಾಯ್ ಎಂಬ ವ್ಯಕ್ತಿ ಆಟೊರಿಕ್ಷಾ ದುರಸ್ತಿ ಮಳಿಗೆ ಇಟ್ಟುಕೊಂಡಿದ್ದರು. ಇನ್ನೊಂದು ಬದಿಯಲ್ಲಿ ಮೇಲ್ವರ್ಗದ ಹಿಂದೂ ಒಬ್ಬರು ಹಳೆ ಬಟ್ಟೆಗಳ ವ್ಯಾಪಾರ ಮಾಡುತ್ತಿದ್ದರು. ರಸ್ತೆ ಬದಿಯಲ್ಲಿ ಸಿಕ್ಕಿದ್ದು ತಿಂದು ರಾತ್ರಿ ಇತರ ಇಬ್ಬರ ವಸ್ತುಗಳನ್ನೂ ಅಶೋಕ್ ನೋಡಿಕೊಳ್ಳುತ್ತಿದ್ದರು. ಕೂಲಿಕಾರ್ಮಿಕರ ಧರ್ಮಶಾಲೆಯಲ್ಲಿ ಬೆಳಗ್ಗೆ ಸ್ನಾನ, ಶೌಚ ಮುಗಿಸಿ ಮತ್ತೆ ಕಸುಬಿಗೆ ಕೂರುತ್ತಿದ್ದರು.
ಆಗ 2002ರ ನರಮೇಧ ಆರಂಭವಾಯಿತು. ಇಂಥ ಹಲವು ಗಲಭೆಗಳನ್ನು ಅಶೋಕ್ ಜೀವನದಲ್ಲಿ ಕಂಡಿದ್ದರು. ಹತ್ತು ವರ್ಷದ ಬಾಲಕನಾಗಿದ್ದಾಗ ಅಂದರೆ 1985ರಲ್ಲಿ ಗುಜರಾತ್ ರಾಜಧಾನಿ ಅಹ್ಮದಾಬಾದ್ ಹಲವು ತಿಂಗಳ ಕಾಲ ಕೋಮುದಳ್ಳುರಿಗೆ ಸಿಲುಕಿತ್ತು. 300 ಜೀವಗಳನ್ನು ಆಗ ಬಲಿ ಪಡೆದಿತ್ತು. ಪ್ರತೀ ಎರಡು ಮೂರು ವರ್ಷಗಳಿಗೊಂದು ಇಂಥ ಹಿಂಸಾಚಾರ ನಡೆಯುತ್ತಿತ್ತು. ಆದರೆ ಯಾವುದೂ ಹೀಗಿರಲಿಲ್ಲ. ಹಲವು ಮಂದಿ ಹೇಳುವಂತೆ ವಿಭಜನೆ ಸಂದರ್ಭದ ಹಿಂಸಾಚಾರವನ್ನು ಇದು ನೆನಪಿಸುತ್ತಿತ್ತು ಎಂದು ಅಶೋಕ್ ಹೇಳುತ್ತಾರೆ.
ಕೆಲಸ ಮಾಡುತ್ತಿದ್ದ ಬೀದಿ ಹಾಗೂ ಜಾಗ ಹಿಂಸಾತಾಣವಾಗಿ ಮಾರ್ಪಟ್ಟ ದಿನವನ್ನು ಅಶೋಕ್ ಮೆಲುಕು ಹಾಕಿಕೊಂಡರು. ಪತ್ರಿಕೆಗಳಲ್ಲಿ ದಪ್ಪ ಅಕ್ಷರಗಳಲ್ಲಿ ಗೋಧ್ರಾ ಘಟನೆಯ ಸುದ್ದಿ ರಾರಾಜಿಸುತ್ತಿತ್ತು. ಸುಟ್ಟ ದೇಹಗಳ ಭಯಾನಕ ಚಿತ್ರಗಳು ರಾಚುತ್ತಿದ್ದವು. ಟಿವಿಗಳು ಕೂಡಾ ಇಂಥ ಶವಗಳ ದೃಶ್ಯ ಬಿತ್ತರಿಸಿದ್ದವು. ಹಿಂದೂಗಳ ರಕ್ತ ಕುದಿಯುತ್ತಿತ್ತು. ತಾನು ಕೂಡಾ ಕೋಪದಿಂದ ನಡುಗುತ್ತಿದ್ದೆ ಎಂದು ಅಶೋಕ್ ವಿವರಿಸಿದರು. ವಿಎಚ್‌ಪಿ ಬಂದ್ ಕರೆ ನೀಡಿದರೆ, ಮುಸ್ಲಿಮರು ಮನೆಯಲ್ಲಿ ಅಡಗಿದ್ದರು. ಹಿಂದೂಗಳು ಪೆಟ್ರೋಲ್ ಹಾಗೂ ಶಸಾಸಗಳೊಂದಿಗೆ ಜಮಾಯಿಸಿದರು. ವಾರಗಳ ಕಾಲ, ತಿಂಗಳ ಕಾಲ ತನ್ನ ಆದಾಯವನ್ನೂ ಈ ಗಲಭೆ ನುಂಗಿ ಹಾಕುತ್ತದೆ ಎನ್ನುವುದು ಅವರಿಗೆ ಖಚಿತವಾಗಿತ್ತು.
ಪ್ರೇಮವೈಲ್ಯ ಕಾರಣದಿಂದ ಆ ಕಾಲಕ್ಕೆ ಅಶೋಕ್ ಗಡ್ಡಧಾರಿಯಾಗಿದ್ದರು. ಮೇಲ್ವರ್ಗದ ಯುವತಿಯೊಬ್ಬಳನ್ನು ನಾನು ಪ್ರೀತಿಸುತ್ತಿದ್ದ ವಿಷಯ ಮನೆಯವರಿಗೆ ಗೊತ್ತಾಗಿ, ಹದಿಹರೆಯದಲ್ಲೇ ಆಕೆಯನ್ನು ಸ್ವಜಾತಿಯ ಯುವಕನಿಗೆ ಕೊಟ್ಟು ಮದುವೆ ಮಾಡಿದರು. ಆದ್ದರಿಂದ ಗಡ್ಡಬಿಟ್ಟಿದ್ದೆ. ಮದ್ಯಪಾನ ಒಂದು ಬಿಟ್ಟರೆ ಉಳಿದಂತೆ ದೇವದಾಸನಾಗಿದ್ದೆ ಎಂದು ಅಶೋಕ್ ಪ್ರೇಮಕಥೆಯ ದುರಂತ ಅಧ್ಯಾಯ ಬಿಚ್ಚಿಟ್ಟರು.
‘‘ಬಹುತೇಕ ಮಂದಿ ಹಿಂದೂಗಳು ಗಡ್ಡ ಬೆಳೆಸುವುದಿಲ್ಲ. ಗಡ್ಡಧಾರಿಯಾಗಿದ್ದರೆ ಹಿಂದೂಗಳು ನನ್ನನ್ನು ಮುಸ್ಲಿಂ ಎಂದುಕೊಂಡು ಹಲ್ಲೆ ಮಾಡುವ ಭೀತಿಯಿಂದ ಗಡ್ಡ ತೆಗೆಸಲು ಕ್ಷೌರಿಕನನ್ನು ಹುಡುಕಿದೆ. ಆದರೆ ಎಲ್ಲವೂ ಮುಚ್ಚಿತ್ತು. ಆದ್ದರಿಂದ ಹಿಂದೂ ಎಂದು ಗೊತ್ತಾಗಲು ಹಣೆಗೆ ಕೇಸರಿ ಬಟ್ಟೆ ಕಟ್ಟಿಕೊಂಡು ಇತರ ಹಿಂದೂ ಯುವಕರ ಜತೆ ಸೇರಿಕೊಂಡೆ’’
ಪತ್ರಕರ್ತರು ಅವರ ಹತ್ತಿರ ಬಂದಿದ್ದರು ಎಂದು ಅಶೋಕ್ ನೆನಪಿಸಿಕೊಳ್ಳುತ್ತಾರೆ. ಗೋಧ್ರಾದಲ್ಲಿ ಹಿಂದೂಗಳನ್ನು ಸುಟ್ಟ ಬಗ್ಗೆ ಏನನ್ನಿಸುತ್ತದೆ ಎಂದು ಕೇಳಿದರು. ಮುಸ್ಲಿಮರು ಎಸಗಿದ ಮಹಾಪರಾಧ ಎಂದು ಅಶೋಕ್ ಅದಕ್ಕೆ ಉತ್ತರಿಸಿದರು. ತಕ್ಷಣ ಪತ್ರಕರ್ತರು ಒಂದು ೆಟೊ ತೆಗೆದುಕೊಳ್ಳುತ್ತೇವೆ ಎಂದು ಕೇಳಿದರು. ತಕ್ಷಣ ಒಪ್ಪಿಕೊಂಡು ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದುಕೊಂಡು ೆಟೊಗೆ ಪೋಸ್ ನೀಡಿದ್ದು, ಐತಿಹಾಸಿಕ ಚಿತ್ರಕ್ಕೆ ಕಾರಣವಾಯಿತು.
ಆದರೆ ಡಿಸೋಜಾ ಅವರ ಲೆನ್ಸ್ ಹಿಂದಿನ ಆಟ ಬೇರೆಯಾಗಿತ್ತು. ಹಿಂದೂಸ್ಥಾನ್ ಟೈಮ್ಸ್‌ನ ಪತ್ರಕರ್ತ ಇಂದ್ರಜಿತ್ ಹಜ್ರಾ ಅವರನ್ನು ಕುರಿತು, ‘‘ಗುಂಪು ಕಾರುಗಳಿಗೆ ಬೆಂಕಿ ಹಚ್ಚುತ್ತಿತ್ತು. ಜನ ಚೂರಿಯಿಂದ ಇರಿಯುವುದನ್ನು ನೋಡಿದ್ದೇನೆ. ನಾನು ಹೋಗುತ್ತಿದ್ದ ವಾಹನದ ಚಾಲಕ ಪರಾರಿಯಾದ. ದೂರದಿಂದ ಈ ವ್ಯಕ್ತಿ ಇದ್ದುದನ್ನು ನಾನು ನೋಡಿದೆ. 300 ಎಂಎಂ ಲೆನ್ಸ್ ಸಹಾಯದಿಂದ ದೂರದಿಂದ ಈ ಚಿತ್ರ ತೆಗೆದೆ’’ ಎಂದು ಡಿಸೋಜಾ ಹೇಳಿದ್ದರು. ಆ ವ್ಯಕ್ತಿಯ ಹೆಸರು ಗೊತ್ತೇ ಅಥವಾ ಕ್ಯಾಮರಾ ನೋಡಿ ಅವರು ಪೋಸ್ ಕೊಟ್ಟಿದ್ದಾರೆಯೇ ಎಂದು ಹಜ್ರಾ ಪ್ರಶ್ನಿಸಿದರು. ಇದನ್ನು ನಿರಾಕರಿಸಿದ ಡಿಸೋಜಾ, ನಾನು ತೀರಾ ದೂರ ಇದ್ದೆ. ನಾನು ಅಲ್ಲಿಂದ ಹೊರಡುವಾಗ ಆತ ಘೋಷಣೆ ಕೂಗುತ್ತಿದ್ದ ಎಂದು ಸ್ಪಷ್ಟನೆ ನೀಡಿದ್ದರು.
ನಾನು ಯಾವುದೇ ಗುಂಪಿನ ನೇತೃತ್ವವನ್ನೂ ವಹಿಸಿರಲಿಲ್ಲ. ಗಲಭೆಯಲ್ಲೂ ಪಾಲ್ಗೊಂಡಿಲ್ಲ. ಲೂಟಿ ಅಥವಾ ದಾಳಿ ಮಾಡಿಲ್ಲ ಎಂದು ಅಶೋಕ್ ಹೇಳಿಕೊಂಡರು.
ಸಂಜೆಯ ವೇಳೆಗೆ ಗುಂಪು ಚದುರಿತು. ಕೆಲವರು ದಣಿದರು. ಬಾಯಾರಿದರು. ಮುಸ್ಲಿಮರು ಪೊಲೀಸ್ ವಾಹನಗಳಲ್ಲಿ ಪರಿಹಾರ ಶಿಬಿರಗಳಿಗೆ ತೆರಳಿದರು. ಅವರ ಮನೆಗಳು ಭಸ್ಮವಾಗಿದ್ದವು. ಅಶೋಕ್‌ಗೆ ಎಲ್ಲೂ ತಿನ್ನಲು ಏನೂ ಸಿಗುವುದಿಲ್ಲ ಹಾಗೂ ರಾತ್ರಿ ಬೀದಿಯಲ್ಲಿ ಮಲಗುವುದು ಸುರಕ್ಷಿತವಲ್ಲ ಎನಿಸಿತು. ಕೆಲ ವಾರದ ಮಟ್ಟಿಗೆ ಅಣ್ಣನ ಮನೆಗೆ ಹೋಗಿ ಮಲಗಿದರು. ಅತ್ತಿಗೆ ಜತೆ ಮಾತುಕತೆ ಇಲ್ಲದಿದ್ದರೂ, ಇಂಥ ಪರಿಸ್ಥಿತಿಯಲ್ಲಿ ಆಕೆ ಅಶೋಕ್‌ನನ್ನು ಹೊರಹಾಕಲಿಲ್ಲ.
ಮರುದಿನ ಮತ್ತೆ ಗುಂಪು ಬೆಳೆದದ್ದನ್ನು ಅಶೋಕ್ ನೆನಪಿಸಿಕೊಳ್ಳುತ್ತಾರೆ. ಈ ಗುಂಪುಗಳು ಮುಸ್ಲಿಮರ ಮನೆಗಳನ್ನು ಲೂಟಿ ಮಾಡಲು, ಕೊಳ್ಳೆ ಹೊಡೆಯಲು, ದಾಳಿ ಮಾಡಲು ನರೇಂದ್ರ ಮೋದಿ ಮತ್ತೆ ಕೆಲ ದಿನಗಳ ಅವಕಾಶ ಕೊಟ್ಟಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಆ ಪ್ರದೇಶದಲ್ಲಿ ವಾರದ ವರೆಗೂ ಹಿಂಸಾಚಾರ ನಡೆಯಿತು. ಮತ್ತೆ ಕೆಲಸಕ್ಕೆ ಹಾಜರಾಗುವ ಮುನ್ನ ಅಶೋಕ್ ಮೂರು ತಿಂಗಳು ಅಣ್ಣನ ಮನೆಯಲ್ಲಿ ಆಶ್ರಯ ಪಡೆದಿದ್ದರು.
ಆ ದಿನಗಳಲ್ಲಿ ಅಶೋಕ್ ಮನೆಯಲ್ಲೇ ಉಳಿದರು. ಹಲವು ಪತ್ರಿಕೆಗಳಲ್ಲಿ ಅವರ ೆಟೊ ಮುದ್ರಣಗೊಂಡಿತ್ತು. ಆ ವ್ಯಕ್ತಿ ವಿಶ್ವಹಿಂದೂ ಪರಿಷತ್ ಅಥವಾ ಬಜರಂಗದಳದ ಮುಖಂಡ ಇರಬೇಕು ಎಂದು ಜನ ಭಾವಿಸಿದರು. ಈ ಖ್ಯಾತಿಯಿಂದ ಅಶೋಕ್‌ಗೆ ಭೀತಿ ಉಂಟಾಯಿತು. ಆದ್ದರಿಂದ ಮುಂದೆಂದೂ ಬೀದಿಯಲ್ಲಿ ಉಳಿಯಲೇಬಾರದು ಎಂಬ ನಿರ್ಧಾರಕ್ಕೆ ಬಂದರು. ಧರ್ಮಶಾಲೆಯ ಬದಿಯಲ್ಲಿ ನಿದ್ದೆ ಮಾಡಲಾರಂಭಿಸಿದರು.
ತಿಂಗಳುಗಳ ಬಳಿಕ ಪರಿಹಾರ ಶಿಬಿರದಿಂದ ವಾಪಸಾದ ಮುಸ್ಲಿಮರು ಮನೆಗಳನ್ನು ಕಟ್ಟಿಕೊಳ್ಳಲಾರಂಭಿಸಿದರು. ಮುಸ್ಲಿಂ ದತ್ತಿ ಸಂಸ್ಥೆಗಳು ಇದಕ್ಕೆ ನೆರವು ನೀಡಿದವು. ಈ ನೆರವು ಕಡಿಮೆಯಾದರೂ ತಲೆ ಮೇಲೊಂದು ಸೂರು ನಿರ್ಮಿಸಿಕೊಳ್ಳುವುದು ಅವರಿಗೆ ಅನಿವಾರ್ಯವಾಗಿತ್ತು. ಜನಜೀವನ ಮಾಮೂಲಿ ಸ್ಥಿತಿಗೆ ಬಂದು ನಝೀರ್‌ಬಾಯ್, ಅಶೋಕ್ ಅಂಗಡಿಯ ಪಕ್ಕದಲ್ಲೇ ಗ್ಯಾರೇಜ್ ಮುಂದುವರಿಸಿದರು. ಅಶೋಕ್ ಕೂಡಾ ಬೀದಿಜೀವನ ಆರಂಭಿಸಿದರು. ಅಶೋಕ್ ಅವಿವಾಹಿತರಾಗಿಯೇ ಉಳಿದರು. ಇದಕ್ಕೆ ಕಾರಣ ಕೇಳಿದಾಗ, ‘‘ನಾನು ಮದುವೆಯಾದರೆ ಮಕ್ಕಳಿಗೆ ಏನನ್ನು ಕೊಡಲು ಸಾಧ್ಯ? ತಂದೆ ನನಗೆ ಆಹಾರ ಅಥವಾ ಶಿಕ್ಷಣ ಯಾವುದನ್ನೂ ಕೊಡಲಾಗಲಿಲ್ಲ. ಅದನ್ನು ನಾನೂ ನನ್ನ ಮಕ್ಕಳಿಗೆ ಏಕೆ ಮಾಡಬೇಕು? ಆದ್ದರಿಂದ ಒಬ�