‘ದೇವತೆ’ ಎಂದ ಕೂಡಲೇ ನೆನಪಾಗುವ ನನ್ನ ಪ್ರೇಮ ಟೀಚರ್ ..
ಶಿಕ್ಷಕರ ದಿನಾಚರಣೆ ವಿಶೇಷ
ಶಿಕ್ಷಕರ ದಿನಾಚರಣೆಯ ದಿನ ಗೆಳೆಯರೆಲ್ಲರೂ ಸಾಲುಗಟ್ಟಿ ತಮ್ಮ ಗುರುಗಳನ್ನು ನೆನಪುಮಾಡಿಕೊಳ್ಳುತ್ತಿರುವಾಗ ನನ್ನದೂ ಒಂದು ಇರ್ಲಿ ಅಂತ...ನನ್ನ ಪ್ರೇಮ ಟೀಚರ್ ಬಗ್ಗೆ....
ನಾನು ಒಂದನೇ ತರಗತಿಯಿಂದ ನಾಲ್ಕನೇ ತರಗತಿ ವರೆಗೆ ಓದಿದ್ದು ಮುಂಬೈನ ಮುನ್ಸಿಪಾಲಿಟಿ ಕನ್ನಡ ಮಾಧ್ಯಮ ಶಾಲೆಯಲ್ಲಿ. ಅಲ್ಲಿನ ಕೋಟೆ ಪ್ರದೇಶದ ಬಜಾರ್ ಸ್ಟ್ರೀಟ್ ನಲ್ಲಿ ನಾನು ಮೂರನೆ ತರಗತಿ ಓದುತ್ತಿದ್ದಾಗ ನಮಗೊಬ್ಬರು ಕ್ಲಾಸ್ ಟೀಚರ್ ಇದ್ದರು. ಅವರ ಹೆಸರು ಪ್ರೇಮ. ಅವರ ಪ್ರೇಮಮಯಿ ವ್ಯಕ್ತಿತ್ವಕ್ಕೆ ಹೆಸರು ಅನ್ವರ್ಥದಂತಿತ್ತು. ಅವರು ಒಂದು ದಿನ ಕರೆದು ಅಂತರ್ ಶಾಲೆ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಆಜ್ಞಾಪಿಸಿದರು. ಕ್ಲಾಸಿನಲ್ಲಿ ಅತ್ಯಂತ ಪೋಕರಿ ಹುಡುಗನಾಗಿದ್ದ ನನ್ನ ಬಗ್ಗೆ ಆಗಲೇ ಹಲವಾರು ಬಾರಿ ತಂದೆಗೆ ದೂರು ನೀಡಿದ್ದ ಟೀಚರ್ ಈ ಸ್ಪರ್ಧೆಗೆ ನನ್ನನ್ನೇ ಯಾಕೆ ಆಯ್ಕೆ ಮಾಡಿದರೆಂದು ಆಗಿನ ನನ್ನ ಬಾಲಮನಸ್ಸಿಗೆ ಅರ್ಥವಾಗಿರಲಿಲ್ಲ. ತುಂಟ ಹುಡುಗರ ಬಗ್ಗೆ ಗುರುಗಳಿಗೇಕೆ ಇಷ್ಟೊಂದು ಪ್ರೀತಿ ಎನ್ನುವುದು ಹತ್ತನೆ ತರಗತಿ ವರೆಗೂ ನನಗೆ ಗೊತ್ತಿರಲಿಲ್ಲ.
ಟೀಚರ್ ಹೇಳಿದಾಗ ನಾನು ಒಪ್ಪಿಕೊಂಡರೂ ದಿನದ ಕ್ಲಾಸ್ ಮುಗಿದ ನಂತರ ಪ್ರಾಕ್ಟೀಸ್ ಗಾಗಿ ಒಂದು ಗಂಟೆ ನಿಲ್ಲಬೇಕಾಗುತ್ತದೆ ಎಂದಾಗ ಕೂಡಲೇ ನಾನು ಒಲ್ಲೆ ಎಂದೆ. ಯಾಕೆ? ಎಂದು ಕೇಳಿದರು. “ಶಾಲೆ ಬಿಡುವಾಗ ಹಸಿವಾಗುತ್ತದೆ, ಮನೆಗೆ ಹೋಗಿ ಊಟ ಮಾಡಬೇಕು” ಎಂದೆ.. ನಮ್ಮ ತರಗತಿ ಬೆಳಿಗ್ಗೆ ಏಳರಿಂದ ಮಧ್ಯಾಹ್ನ ಒಂದುಗಂಟೆ ವರೆಗೆ ನಡೆಯುತ್ತಿತ್ತು. ಅದಕ್ಕೆ ಪರಿಹಾರವನ್ನು ಅವರು ಕೈಯಲ್ಲಿ ಹಿಡಿದುಕೊಂಡೇ ಬಂದಿದ್ದರು.
ಸರಿಯಾಗಿ ಕೇಳಿಸಿಕೊಳ್ಳಿ, ಸುಮಾರು 50 ವರ್ಷಗಳ ಹಿಂದೆ ಮುಂಬೈನಲ್ಲಿ ಸರ್ಕಾರದ ‘ಕ್ಷೀರಭಾಗ್ಯ’ ಯೋಜನೆ ಇತ್ತು. ಪ್ರತಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬೆಳಿಗ್ಗೆ ಒಂದು ಬಾಟಲಿ ಹಾಲು ಮತ್ತು ನೆಲಗಡಲೆ ಬೀಜದ ಒಂದು ಪೊಟ್ಟಣ ಕೊಡುತ್ತಿದ್ದರು. ಆ ಹಾಲಿನ ಕೆನೆ ಎಷ್ಟೊಂದು ದಪ್ಪ ಇರುತ್ತಿತ್ತೆಂದರೆ ಮೇಲಿನ ಮುಚ್ಚಳ ತೆಗೆದು ಬಾಟಲಿ ತಲೆಕೆಳಗೆ ಮಾಡಿದರೂ ಹಾಲು ಕೆಳಗೆ ಬೀಳುತ್ತಿರಲಿಲ್ಲ. ಎಲ್ಲ ಮಕ್ಕಳಂತೆ ಹಾಲು ನನಗೆ ಇಷ್ಟ ಇಲ್ಲದಿದ್ದರೂ ನೆಲಗಡಲೆ ಪೊಟ್ಟಣಕ್ಕಾಗಿ ನಿತ್ಯನಾನು ಜಗಳವಾಡುತ್ತಿದ್ದೆ. ಮುಂಬೈನ ಕೆಂಪು ಸಿಪ್ಪೆಯ ವಸಾಯ್ ಬಾಳೆ ಹಣ್ಣು ಬಗ್ಗೆ ಕೂಡಾ ನನಗೆ ಅಷ್ಟೇ ಪ್ರೀತಿ. ಈ ಆಸೆಯಿಂದಾಗಿ ಪ್ರೇಮ ಟೀಚರ್ ತನ್ನ ಚಪಾತಿ ಜತೆ ತರುತ್ತಿದ್ದ ಬಾಳೆಹಣ್ಣನ್ನು ಆಗಾಗ ನಾನು ಕದಿಯುತ್ತಿದ್ದೆ. ಅದನ್ನು ಗಮನಿಸದಂತೆ ಇದ್ದ ಪ್ರೇಮ ಟೀಚರ್ ಒಂದರ ಬದಲಿಗೆ ಎರಡು ಬಾಳೆ ಹಣ್ಣು ತರಲು ಶುರುಮಾಡಿದ್ದರು. ಅದರಲ್ಲಿ ನಾನು ಒಂದು ಕದಿಯುತ್ತಿದ್ದೆ. ಅವರು ಗೊತ್ತಿಲ್ಲದಂತೆ ಇರುತ್ತಿದ್ದರು.
ಭಾಷಣ ಸ್ಪರ್ಧೆಗೆ ಒಲ್ಲೆ ಎಂದಾಗ ತಕ್ಷಣ ಪ್ರೇಮ ಟೀಚರ್ ಡಬ್ಬಲ್ ಆಮಿಷ ಒಡ್ಡಿದರು. ‘ನಿನಗೆ ಒಂದು ನೆಲಗಡಲೆ ಬೀಜದ ಪೊಟ್ಟಣ ಮತ್ತು ವಸಾಯಿ ಬಾಳೆ ಹಣ್ಣು ಕೊಡ್ತೇನೆ, ಬರ್ತಿಯಾ? ಎಂದು ಕೇಳಿದರು. ನಾನು ಒಪ್ಪಿಕೊಂಡೆ. ಅವರೇ ಭಾಷಣ ಬರೆದು ಕೊಟ್ಟರು. ಅದು ‘ನಾನು ನೋಡಿದ ಜಾದುಗಾರನ ಆಟ’ ಎಂಬ ವಿಷಯ. ಆ ಕಾಲದಲ್ಲಿ ಮುಂಬೈನ ಬೀದಿಬೀದಿಗಳಲ್ಲಿ ಇದು ನಡೆಯುತ್ತಿತ್ತು. ಎರಡು ಗಳಗಳ ನಡುವಿನ ಹಗ್ಗದಲ್ಲಿ ಸಣ್ಣಹುಡುಗಿನಡೆದಾಡಿಕೊಂಡು ಹೋಗುವುದು, ಬುಟ್ಟಿಯೊಳಗಿನ ಹಾವು ಮಾಯ ಮಾಡುವುದು..ಇತ್ಯಾದಿ. ಇದನ್ನೆಲ್ಲ ಸೇರಿಸಿ ಭಾಷಣ ಬರೆದುಕೊಟ್ಟರು.
ಮೊದಲು ಭಾಷಣವನ್ನು ಬಾಯಿಪಾಠ ಮಾಡಿಸಿ, ನಂತರ ಸ್ಟಾಪ್ ರೂಮಿನ ಆಳೆತ್ತರದ ಕನ್ನಡಿ ಮುಂದೆ ನಿಲ್ಲಿಸಿ ಭಾಷಣ ಮಾಡುವಂತೆ ಹೇಳುತ್ತಿದ್ದರು. ಕನ್ನಡಿ ಎದುರು ಭಾಷಣಮಾಡಿದರೆ ಸಭಾ ಕಂಪನ ಓಡಿಹೋಗುತ್ತದೆ ಎಂದು ನನಗೆ ಆಗಲೇ ಗೊತ್ತಾಗಿದ್ದು. ಕೆಲವು ದಿನಗಳ ಪ್ರಾಕ್ಟೀಸ್ ನಂತರ ಭಾಷಣ ಸ್ಪರ್ಧೆ ನಡೆಯಲಿರುವ ವಡಾಲದಲ್ಲಿನ ಶಾಲೆಗೆ ಪ್ರೇಮ ಟೀಚರ್ ಅವರೇ ಮನೆಬಳಿ ಬಂದು ಕರೆದುಕೊಂಡು ಹೋದರು. ರೈಲಿನಲ್ಲಿ ಪ್ರಯಾಣಿಸುವಾಗಲೂ ಅವರು ನನ್ನನ್ನು ಭಾಷಣ ಉರುಹೊಡೆಸುತ್ತಿದ್ದರು.
ಆ ಸ್ಪರ್ಧೆಯಲ್ಲಿ ನನಗೆ ಮೊದಲ ಬಹುಮಾನ ಬಂತು. ಅದು ಹತ್ತುರೂಪಾಯಿಗಳ ನಗದು. ಆ ಲಕೋಟೆಯನ್ನು ಕಿಸೆಗೆ ಹಾಕಿ ಮತ್ತೆ ನನ್ನನ್ನು ಮನೆಬಳಿಬಿಟ್ಟುಹೋದರು. ಹೋಗುವಾಗ ಹತ್ತಿರ ಕರೆದು ಬರಸೆಳೆದು ಅಪ್ಪಿ ಹಣೆಗೆ ಮುತ್ತಿಟ್ಟರು. ಕೆಲವು ದಿನಗಳ ಹಿಂದೆ ನನ್ನ ತುಂಟಾಟಕ್ಕಾಗಿ ಮನೆಗೆ ದೂರು ನೀಡಿದ್ದ ಈ ಟೀಚರ್ ಯಾಕೆ ಇಷ್ಟು ಪ್ರೀತಿ ತೋರಿಸುತ್ತಿದ್ದಾರೆ ಎಂದು ತಿಳಿಯದೆ ನಾನು ಗಲಿಬಿಲಿಗೊಂಡಿದ್ದೆ.
ಮುಂಬೈ ತೊರೆದುಬಂದ 25 ವರ್ಷಗಳ ನಂತರ ಮುಂಗಾರು ಪತ್ರಿಕೆಯ ವರದಿಗಾಗಿ ಮತ್ತೆ ಅಲ್ಲಿಗೆ ಹೋಗಿದ್ದಾಗ ಆ ಟೀಚರ್ ಗಾಗಿ ಹುಡುಕಾಡಿ ಬಹಳ ಅಲೆದಾಡಿದ್ದೆ. ಮುನ್ಸಿಪಾಲಿಟಿ ಶಾಲೆ ಮುಚ್ಚಿತ್ತು. ಅವರ ಬಗ್ಗೆ ತಿಳಿಸುವವರು ಯಾರೂ ಇರಲಿಲ್ಲ. ನನಗೆ ಟೀಚರ್ ಆಗಿದ್ದಾಗಲೇ ಐವತ್ತರ ಆಜುಬಾಜಿನಲ್ಲಿದ್ದ ಅವರು ಜೀವಂತವಾಗಿರುವ ಸಾಧ್ಯತೆಯೇ ಇಲ್ಲವಾದರೂ ಈಗಲೂ ಮುಂಬೈನ ಬಜಾರ್ ಸ್ಟ್ರೀಟ್ ನಲ್ಲಿ ಓಡಾಡುವಾಗ ನನ್ನಕಣ್ಣುಗಳು ಪ್ರೇಮ ಟೀಚರ್ ಅವರನ್ನು ಅರಸುತ್ತಿರುತ್ತವೆ. ಯಾರಾದರೂ ಈಗಲೂ ‘ದೇವತೆ’ ಅಂದಾಕ್ಷಣ ಚಿನ್ನದ ಬಾರ್ಡರ್ ನ ಬಿಳಿ ಸೀರೆ ಉಟ್ಟ, ಕನ್ನಡಕ ಹಾಕಿಕೊಂಡ ಕುಳ್ಳಗಿನ ನನ್ನ ಪ್ರೇಮ ಟೀಚರ್ ನೆನಪಾಗಿ ನನಗರಿವಿಲ್ಲದಂತೆ ತಲೆ ಬಾಗುತ್ತದೆ. ಕಣ್ಣು ತೇವವಾಗುತ್ತದೆ.
ಮಟ್ಟು ಅವರ ಬಾಲ್ಯದ ಚಿತ್ರ