ಬಿಜೆಪಿಗೆ ಮಾಯಾ ಟ್ರಬಲ್
ಬಿಜೆಪಿಗೆ ಮಾಯಾ ಟ್ರಬಲ್
ಉತ್ತರಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಮಾಯಾವತಿ ನಡೆಸಿದ ರ್ಯಾಲಿಗೆ ನೆರೆದ ಜನಸ್ತೋಮ ಹಾಗೂ ದೊರೆತ ಪ್ರತಿಕ್ರಿಯೆಯನ್ನು ಕಂಡು ಬಿಜೆಪಿ ಬೆಚ್ಚಿಬಿದ್ದಿರುವಂತೆ ಕಾಣುತ್ತಿದೆ. ಸಮಾಜವಾದಿ ಪಕ್ಷವು ತನ್ನ ಮುಖ್ಯ ಪ್ರತಿಸ್ಪರ್ಧಿಯಾಗಿದ್ದು, ಮಾಯಾವತಿಯ ಬಹುಜನ ಸಮಾಜವಾದಿ ಪಕ್ಷವು, ತೃತೀಯ ಸ್ಥಾನಕ್ಕಿಳಿದಿದ್ದು, ಬಹುದೂರದಲ್ಲಿದೆಯೆಂದು ಬಿಜೆಪಿ ನಾಯಕರು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದರೂ, ವಾಸ್ತವ ಸಂಗತಿ ಬೇರೆಯೇ ಆಗಿದೆಯೆಂಬುದನ್ನು ಕಳೆದ ವಾರ ರಾಜ್ಯದ ಕೆಲವು ನಿರ್ದಿಷ್ಟ ಪ್ರಾಂತಗಳಲ್ಲಿ ಪ್ರವಾಸ ಕೈಗೊಂಡಿದ್ದ ಪಕ್ಷದ ಕೇಂದ್ರೀಯ ಪದಾಧಿಕಾರಿಯೊಬ್ಬರು ಒಪ್ಪಿಕೊಳ್ಳುತ್ತಾರೆ. ಬಿಜೆಪಿಯ ಆಂತರಿಕ ಅಂದಾಜಿನ ಪ್ರಕಾರ, ಸಮಾಜವಾದಿ ಪಕ್ಷವು ರಾಜ್ಯದಲ್ಲಿ ತ್ವರಿತವಾಗಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ. ಬಹುತೇಕ ಮತದಾರರು ಆಡಳಿತಾರೂಢ ಸರಕಾರದ ವಿರುದ್ಧ ಮತಚಲಾಯಿಸುವ ಮನಸ್ಥಿತಿ ಹೊಂದಿದ್ದಾರೆ. ಅವರಿಗೆ ಮಾಯಾವತಿ ಪರ್ಯಾಯವಾಗಿ ಕಂಡುಬರುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ನಡೆಯಲಿರುವ ಎಸ್ಪಿ, ಬಿಎಸ್ಪಿಯೊಂದಿಗೆ ನಡೆಯಲಿರುವ ತ್ರಿಕೋನ ಸ್ಪರ್ಧೆಯಲ್ಲಿ ತನಗೆ ಅಧಿಕಾರಕ್ಕೇರಲು ಉತ್ತಮ ಅವಕಾಶವಿದೆಯೆಂಬ ಭರವಸೆ ಬಿಜೆಪಿಗಿತ್ತು. ಕಳೆದ ಕೆಲವು ಸಮಯಗಳಿಂದ ಅಮಿತ್ ಶಾ ಕೂಡಾ ಇದೇ ರೀತಿಯ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ಮಾಯಾವತಿ ಮುಸ್ಲಿಂ ಮತಗಳನ್ನು ಹಾಗೂ ತನ್ನ ಪ್ರಬಲವಾದ ದಲಿತ ಬೆಂಬಲದ ನೆಲೆಯನ್ನು ಒಗ್ಗೂಡಿಸುವ ಮೂಲಕ ಅಧಿಕಾರಹಿಡಿಯಲು ಯತ್ನಿಸುತ್ತಿರುವುದರಿಂದ, ಉತ್ತರಪ್ರದೇಶದಲ್ಲಿ ತಾವು ಇಟ್ಚುಕೊಂಡಿದ್ದ ಭರವಸೆ ಕೈಜಾರುತ್ತಿರುವುದಾಗಿ ಬಿಜೆಪಿ ನಾಯಕರು ಕನಿಷ್ಠ ಪಕ್ಷ ಖಾಸಗಿಯಾಗಿಯಾದರೂ ಒಪ್ಪಿಕೊಳ್ಳತೊಡಗಿದ್ದಾರೆ.
ಹೊಸ ಖಾತೆ: ಆರಂಭದಲ್ಲೇ ಎಡವಿದ ಸುಪ್ರಿಯೊ
ಬಾಲಿವುಡ್ ಗಾಯಕ ಹಾಗೂ ಕೇಂದ್ರ ಸಹಾಯಕ ಸಚಿವ ಬಾಬುಲ್ ಸುಪ್ರಿಯೊ ಅವರು, ಆಗಸ್ಟ್ 9ರಂದು ಗಗನಸಖಿ ರಚನಾ ಶರ್ಮಾ ಅವರೊಂದಿಗೆ ಹಸೆಮಣೆಯೇರಿದರು. ಆದರೆ ಈ ನವದಂಪತಿಗೆ ಮಧುಚಂದ್ರಕ್ಕೆ ತೆರಳಲು ಇನ್ನೂ ಕಾಲ ಕೂಡಿಬಂದಿಲ್ಲ. ಈ ಬಗ್ಗೆ ಸುಪ್ರಿಯೊ ಬಹಳ ದಿನಗಳಿಂದ ಯೋಜನೆ ಹಾಕಿಕೊಳ್ಳುತ್ತಲೇ ಬಂದಿದ್ದಾರೆ. ಕಳೆದ ಸಂಪುಟ ಪುನಾರಚನೆಯ ಸಂದರ್ಭದಲ್ಲಿ ತನ್ನ ಖಾತೆ ಬದಲಾವಣೆಯಾದ್ದರಿಂದ ಅವರು ನೂತನ ಖಾತೆಯಾದ ಭಾರೀ ಕೈಗಾರಿಕೆ ಸಚಿವಾಲಯದ ಕೆಲಸಗಳಿಗೆ ಹೊಂದಿಕೊಳ್ಳಬೇಕಾಗಿದೆ. ಆದರೆ ಆರಂಭದಲ್ಲಿಯೇ ಅವರು ಮುಗ್ಗರಿಸಿರುವ ಹಾಗೆ ಕಾಣುತ್ತಿದೆ. ಇತ್ತೀಚೆಗೆ ಅವರು ಬಂಗಾಳಿ ಸುದ್ದಿಚಾನೆಲ್ ಒಂದರಲ್ಲಿ, ತನ್ನ ಕ್ಷೇತ್ರದಲ್ಲಿರುವ ಕೇಂದ್ರ ಸರಕಾರದ ಕೈಗಾರಿಕಾ ಘಟಕವೊಂದನ್ನು ಮುಚ್ಚಲಾಗುವುದೆಂದು ಪ್ರಕಟಿಸಿದ್ದುದು, ಪ್ರತಿಪಕ್ಷಗಳ ಕೈಗೆ ಅಸ್ತ್ರ ಕೊಟ್ಟಂತಾಯಿತು. ಇತರರಂತೆ ಸುಮ್ಮನಿದ್ದು ಬಿಡುವ ಬದಲು ಅವರು ತನ್ನ ಕ್ಷೇತ್ರದ ಹಾಗೂ ಪಶ್ಚಿಮಬಂಗಾಳದ ಜನತೆಗೊಂದು ಕೆಟ್ಟ ಸುದ್ದಿಯನ್ನು ನೀಡುವ ಮೂಲಕ ತಾನಾಗಿಯೇ ವಿವಾದವನ್ನು ಮೈಮೇಲೆ ಎಳೆದುಕೊಂಡರು. ತದನಂತರ ಅವರ ಖಾತೆಯ ಹಿರಿಯ ಸಚಿವ ಆನಂತ್ ಗೀತೆ ಈ ಬಗ್ಗೆ ಏನು ಹೇಳಿದ್ದಾರೆಂಬುದು ಯಾರಿಗೂ ಗೊತ್ತಿಲ್ಲ. ಒಟ್ಟಿನಲ್ಲಿ ಪಕ್ಷದ ರಾಜ್ಯ ಘಟಕವಂತೂ, ಸುಪ್ರಿಯೊ ಅವರಿಂದಾಗಿ ಮುಜುಗರಕ್ಕೀಡಾಗಿದೆ.
ಮಿಶನ್ ಭಾರತಿ
ನರೇಂದ್ರ ಮೋದಿ ಅವರಂತೆ ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾಭಾರತಿ ಕೂಡಾ ಸರಕಾರದ ಕ್ರಮಗಳ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಮೂಡಿಸುವವರ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಗಂಗಾನದಿಗೆ ಸಂಬಂಧಿಸಿ ಇತ್ತೀಚೆಗೆ ಕೇಂದ್ರ ಸರಕಾರ ಘೋಷಿಸಿರುವ 231 ಯೋಜನೆಗಳ ಪೈಕಿ 112 ಯೋಜನೆಗಳು ಉತ್ತರಪ್ರದೇಶಕ್ಕೆ ಸೇರಿದ್ದಾಗಿದೆ. ಗಂಗಾ ನದಿ ಹರಿವಿನುದ್ದಕ್ಕೂ ಆಕೆ ಯಾತ್ರೆಯೊಂದನ್ನು ಕೈಗೊಳ್ಳಲು ಉತ್ಸುಕರಾಗಿದ್ದಾರೆ. ಆದರೆ ಪಕ್ಷವಾಗಲಿ ಅಥವಾ ಕೇಂದ್ರ ಸರಕಾರವಾಗಲಿ ಆಕೆಯ ಬೇಡಿಕೆಯನ್ನು ಈಡೇರಿಸಲು ತುಂಬಾ ಆಸಕ್ತಿಯನ್ನು ಹೊಂದಿರುವ ಹಾಗೆ ಕಾಣಿಸುತ್ತಿಲ್ಲ. ಇದರಲ್ಲಿ ಒಂದಿಷ್ಟು ರಾಜಕೀಯವೂ ಬೆರೆತಿದೆಯೆಂದು ಕೆಲವರ ಅಂಬೋಣ. ಉಮಾ ನಡೆಸಲುದ್ದೇಶಿಸಿರುವ ಈ ರೋಡ್‌ಶೋ ಮುಂದಿನ ವರ್ಷ ಚುನಾವಣೆಗೆ ತೆರಳಲಿರುವ ಉತ್ತರಪ್ರದೇಶದಲ್ಲಿ ಬಿಜೆಪಿಗೆ ವರದಾನವಾಗ ಬಹುದೆಂದು ಆಕೆಯ ಬೆಂಬಲಿಗರು ಭಾವಿಸಿದ್ದರೆ, ತಾನೂ ಕೂಡಾ ಮುಖ್ಯಮಂತ್ರಿ ಅಭ್ಯರ್ಥಿಯೆಂಬುದಾಗಿ ಬಿಂಬಿಸಲು ಉಮಾಭಾರತಿ ಕಂಡುಕೊಂಡಿರುವ ದಾರಿ ಇದಾಗಿದೆಯೆಂದು ಇನ್ನು ಕೆಲವು ನಾಯಕರು ಅಭಿಪ್ರಾಯಿಸಿದ್ದಾರೆ. ಸದ್ಯಕ್ಕಂತೂ ಉಮಾಭಾರತಿ ತನ್ನ ಈ ಯೋಜನೆಗೆ ವಿಶ್ರಾಂತಿ ನೀಡಿದ್ದಾರೆ.
ಶಾ ಬಿಗಿಹಿಡಿತ
ಬಿಜೆಪಿಯೊಳಗೊಂದು ಸೂಪರ್ ಹೈಕಮಾಂಡ್ ಇದ್ದಂತೆ ಕಾಣುತ್ತದೆ ಹಾಗೂ ಪಕ್ಷದ ಆಳ್ವಿಕೆಯಿರುವ ರಾಜ್ಯಗಳಲ್ಲಿ ಅದರ ಹಿಡಿತ ಇನ್ನಷ್ಟು ಬಿಗಿಗೊಂಡಿರುವಂತೆ ಕಾಣುತ್ತಿದೆ. ಬಿಜೆಪಿಯು 9 ರಾಜ್ಯಗಳ ವಿಧಾನಸಭೆಗಳಲ್ಲಿ ಬಹುಮತ ಹೊಂದಿದೆ. ಜಮ್ಮುಕಾಶ್ಮೀರದಂತಹ ಅನೇಕ ರಾಜ್ಯಗಳಲ್ಲಿ ಆಡಳಿತಾರೂಢ ಮೈತ್ರಿಕೂಟದ ಪಾಲುದಾರ ನಾಗಿದೆ. ಈ ರಾಜ್ಯಗಳಲ್ಲಿನ ಪಕ್ಷದ ಸಚಿವರುಗಳು ಯಾವುದೇ ಪ್ರಮುಖ ನೀತಿ ನಿರ್ಧಾರವನ್ನು ಕೈಗೊಳ್ಳುವ ಮೊದಲು ಅವರು ಈ ‘ಕೋರ್ ಗ್ರೂಪ್’ ಜೊತೆ ಸಮಾಲೋಚಿಸಬೇಕೆಂದು ಅವರಿಗೆ ಸೂಚನೆ ನೀಡಲಾಗಿದೆ. ಈ ರೀತಿಯ ಕೋರ್‌ಗ್ರೂಪ್‌ಗಳು ಬಿಜೆಪಿ ಅಧ್ಯಕ್ಷ ಅಮಿತ್‌ಶಾ ಅವರ ಕಲ್ಪನೆಯ ಕೂಸಾಗಿದೆ. ಪಕ್ಷದೊಳಗಿನ ಹಲವರು ಹಾಗೂ ಆರೆಸ್ಸೆಸ್‌ನಂತಹ ಜೊತೆಗಾರ ಸಂಘಟನೆಗಳು ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಆಡಳಿತವು ಅಲ್ಲಿನ ಮುಖ್ಯಮಂತ್ರಿಗಳಿಂದ ‘ಸ್ವತಂತ್ರ’ವಾಗಿ ನಡೆಸಲ್ಪಡುತ್ತಿದೆಯೆಂದು ದೂರುತ್ತಿದ್ದಾರೆ. ಇದೀಗ ಈ ಕೋರ್‌ಗ್ರೂಪ್‌ಗಳ ಕಾರಣದಿಂದಾಗಿ ವಸುಂಧರಾ ರಾಜೆ ಸಿಂಧಿಯಾ, ರಮಣ್‌ಸಿಂಗ್ ಹಾಗೂ ಶಿವರಾಜ್ ಸಿಂಗ್ ಚೌಹಾಣ್‌ರಂತಹ ಘಟಾನುಘಟಿ ಮುಖ್ಯಮಂತ್ರಿಗಳು, ತಮ್ಮ ಸ್ಥಾನಮಾನವು ಗಣನೀಯವಾಗಿ ಕಡಿತಗೊಂಡಿರುವುದನ್ನು ಅರಿತುಕೊಂಡಿದ್ದಾರೆ.
ಹೊಸ ಕ್ಷೇತ್ರದ ಹುಡುಕಾಟದಲ್ಲಿ ಸ್ಮತಿ
ಕೇಂದ್ರ ಸಚಿವೆ ಸ್ಮತಿ ಇರಾನಿ ಗುಜರಾತ್‌ನ ರಾಜ್ಯಸಭಾ ಎಂಪಿಯಾಗಿ ದ್ದಾರೆ. ಆದರೆ ಆಕೆ ತಡವಾಗಿಯಾದರೂ, ತನ್ನ ರಾಜ್ಯದ ಬಗ್ಗೆ ತುಂಬಾ ಆಸಕ್ತಿ ವಹಿಸತೊಡಗಿರುವುದನ್ನು ಜನರು ಗಮನಿಸಿದ್ದಾರೆ. ಕನಿಷ್ಠ ಪಕ್ಷ ಟ್ವಿಟರ್‌ನಲ್ಲಿಯಾದರೂ ಆಕೆ ಗುಜರಾತ್ ಬಗ್ಗೆ ತನ್ನ ಕಾಳಜಿಯನ್ನು ಪ್ರದರ್ಶಿಸುತ್ತಿದ್ದಾರೆ. ರಾಜ್ಯಕ್ಕಾಗಿ ಅದರಲ್ಲೂ ವಿಶೇಷವಾಗಿ ಪ್ರಮುಖ ಜಿಲ್ಲೆಯಾದ ಆನಂದ್‌ನಲ್ಲಿ ತಾನು ಮಾಡಿದ ಕೆಲಸ ಕಾರ್ಯಗಳ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.
‘‘ಆನಂದ್‌ನ ಜನತೆಗೆ ಸೇವೆ ಸಲ್ಲಿಸಲು ಹಾಗೂ ಅವರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿರುವುದು ನನ್ನ ಪಾಲಿನ ಸೌಭಾಗ್ಯವಾಗಿದೆ’’ ಎಂದು ಸ್ಮತಿ ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಇನ್ನೊಂದು ಟ್ವೀಟ್‌ನಲ್ಲಿ ಅವರು, ರಾಜ್ಯಸಭಾ ಎಂಪಿಯಾಗಿ ಕಳೆದ ಐದು ವರ್ಷಗಳಲ್ಲಿ ತನಗೆ ಅಗಾಧ ಬೆಂಬಲ ದೊರೆತಿರುವುದಾಗಿ ಹೇಳಿಕೊಂಡಿದ್ದಾರೆ. ಸ್ಮತಿಯ ರಾಜ್ಯಸಭಾ ಸದಸ್ಯತ್ವದ ಅವಧಿ 2017ರ ಆಗಸ್ಟ್‌ನಲ್ಲಿ ಕೊನೆಗೊಳ್ಳಲಿದೆ. ಆನಂತರವೂ ಸ್ಮತಿ ಗುಜರಾತ್‌ನಿಂದಲೇ ತನ್ನ ರಾಜ್ಯಸಭಾ ಸದಸ್ಯತ್ವದ ಅವಧಿಯ ವಿಸ್ತರಣೆಯನ್ನು ಬಯಸುತ್ತಿದ್ದಾರೆಯೇ?. ಆದರೆ ಒಂದು ವೇಳೆ ಮುಂದಿನ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕಳಪೆ ನಿರ್ವಹಣೆಯನ್ನು ಪ್ರದರ್ಶಿಸಿದಲ್ಲಿ ಅದು ತುಂಬಾ ಕಷ್ಟಕರವಾಗಲಿದೆ. ಇನ್ನು ಆಕೆ ಕಳೆದ ಎರಡು ವರ್ಷಗಳಿಂದ ಸತತವಾಗಿ ಕಣ್ಣಿರಿಸಿರುವ ಅಮೇಠಿ ಕ್ಷೇತ್ರವನ್ನು ತೊರೆದು, ಆನಂದ್‌ನಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಯೋಚನೆ ಹೊಂದಿದ್ದಾರೆಯೇ?. ಅದೇನಿದ್ದರೂ, ಸ್ಮತಿ ಮುಂದೇನು ಮಾಡಲಿದ್ದಾರೆಂಬುದು ಸದ್ಯಕ್ಕಂತೂ ಯಾರಿಗೂ ತಿಳಿಯಲಾರದು.