ಹಜ್ ಒಂದೇ ಸಂಕಲ್ಪ, ಒಂದೇ ಧ್ವನಿ ವಿಶ್ವ ಮಾನವತೆಯ ಪ್ರತೀಕ
ಇಸ್ಲಾಮಿನ ಪಂಚ ಸ್ತಂಭಗಳಲ್ಲಿ ಐದನೆಯದು ಹಜ್. ಆರ್ಥಿಕ ಸಾಮರ್ಥ್ಯವುಳ್ಳ ಮುಸ್ಲಿಮರ ಮೇಲೆ ಹಜ್ ಯಾತ್ರೆಯನ್ನು ಕಡ್ಡಾಯಗೊಳಿಸಲಾಗಿದೆ. ಅಚಲ ದೇವ ವಿಶ್ವಾಸ, ದೈನಂದಿನ ನಮಾಝ್, ರಮಝಾನ್ ತಿಂಗಳ ಉಪವಾಸ, ಕಡ್ಡಾಯದಾನವಾದ ಝಕಾತನ್ನು ನಿರ್ವಹಿಸುತ್ತಾ ಬಂದವನಿಗೆ, ಆರ್ಥಿಕ-ಆರೋಗ್ಯಕರ ಅನುಕೂಲತೆಯಿದ್ದಲ್ಲಿ ಹಜ್ ನಿರ್ವಹಿಸುವುದು ಕಡ್ಡಾಯ ಕರ್ಮವಾಗಿದೆ. ಇಸ್ಲಾಮಿನ ಕೇಂದ್ರ ಸ್ಥಳವಾದ ಮಕ್ಕಾ ಯಾತ್ರೆ ಮಾಡಿ ಅಲ್ಲಿ ನಿರ್ದಿಷ್ಟವಾದ ಆರಾಧನಾ ಕರ್ಮಗಳನ್ನು ನಿರ್ವಹಿಸುವುದೇ ಹಜ್‌ನ ವಿಶೇಷತೆಯಾಗಿದೆ. ಮಕ್ಕಾವನ್ನು ವರ್ಷದ ಯಾವುದೇ ಸಮಯದಲ್ಲಿ ಸಂದರ್ಶಿಸಿದರೆ ಅದು ‘ಹಜ್’ ಆಗಿ ಪರಿಗಣಿಸಲಾಗುವುದಿಲ್ಲ. ಬದಲಾಗಿ ‘ದುಲ್‌ಹಜ್’ ತಿಂಗಳ ಈದುಲ್ ಅಝ್‌ಹಾ ಸಂದರ್ಭದಲ್ಲಿ ಅಲ್ಲಿದ್ದು, ಕೆಲವು ಕಡ್ಡಾಯವಾದ ವಿ ವಿಧಾನಗಳನ್ನು ಪೂರೈಸಿದಾಗ ಮಾತ್ರ ಅದು ‘ಹಜ್’ ಆಗುವುದು. ‘ಹಜ್’ ಎನ್ನುವುದು ಪರಿಪೂರ್ಣತೆಯ ಸಂಕೇತ. ವಿಶ್ವಮಾನವತೆಯ ಪ್ರತೀಕ. ಆತ್ಮಶುದ್ಧಿಯ ದ್ಯೋತಕ. ಓರ್ವ ಮುಸ್ಲಿಮನು ಅಲ್ಲಾಹನ ಮಾರ್ಗದಲ್ಲಿ ತನ್ನ ಬದುಕನ್ನು ನಿರ್ವಹಿಸುತ್ತಾ ಬಂದವನು ಅಂತಿಮವಾಗಿ ತನ್ನ ಸುಖ ಜಂಜಾಟವನ್ನು ಬದಿಗಿಟ್ಟು ಸಂಕುಚಿತತೆಯಿಂದ ವಿಶಾಲತೆಯೆಡೆಗೆ ಸಾಗುವ ಒಂದು ಮಾರ್ಗವಾಗಿದೆ. ಪ್ರಾಂತೀಯತೆ-ಪ್ರಾದೇಶಿಕತೆಯ ಚೌಕಟ್ಟಿನಲ್ಲಿ ಬೆಳೆದು ಅವನು ಅಲ್ಲಿಯವ, ಇವನು ಇಲ್ಲಿಯವನೆಂಬ ತಾರತಮ್ಯದ ಭಾವನೆಯನ್ನು ಎಳವೆಯಿಂದಲೇ ಅನುಸರಿಸಿಕೊಂಡವನಿಗೆ ಎಲ್ಲರೂ ಒಂದೇ, ಕರಿಯನೂ-ಬಿಳಿಯನೂ, ಉಳ್ಳವನು-ಇಲ್ಲದವನೂ, ಎಲ್ಲರೂ ಅಲ್ಲಾಹನ ಮುಂದೆ ಒಂದೇ ಎಂಬ ನಿಸ್ವಾರ್ಥತೆಯನ್ನು ಅರ್ಥವತ್ತಾಗಿ ತಿಳಿಸಿಕೊಡುವ ಒಂದು ಮಹಾ ಸಂಗಮವಾಗಿದೆ ಈ ‘ಹಜ್’. ‘ಹಜ್’ ಯಾತ್ರೆ ತಾಳ್ಮೆಯನ್ನು ಕಲಿಸುತ್ತದೆ.
ಅಹಂನ್ನು ಮುರಿಯುತ್ತದೆ. ಸಹಕಾರದ ಭಾವನೆಯನ್ನು ವೃದ್ಧಿಸುತ್ತದೆ. ಸುಮಾರು ನಾಲ್ಕು ಸಾವಿರ ವರುಷಗಳ ಹಿಂದೆ ಹಝ್ರತ್ ಇಬ್ರಾಹೀಂ(ಅ) ಮತ್ತು ಇಸ್ಮಾಯೀಲ್(ಅ)ರಿಂದ ಪುನರ್ ನಿರ್ಮಿಸಲ್ಪಟ್ಟ ಮಕ್ಕಾದ ಕಅಬಾ ಭವನವನ್ನು ಸಂದರ್ಶಿಸುವುದು, ಅರಾದಲ್ಲಿ ಸಮಾವೇಶಗೊಳ್ಳುವುದು, ಮಿನಾದಲ್ಲಿ ಸಾಂಕೇತಿಕವಾಗಿ ಕಲ್ಲು ಎಸೆಯುವುದು ಇತ್ಯಾದಿ ಅಗತ್ಯ ಕ್ರಿಯೆಗಳನ್ನು ಮಾಡುವುದು ‘ಹಜ್’ಯಾತ್ರೆಯ ಪ್ರಮುಖ ಅಂಶಗಳಾಗಿವೆ. ಹಜ್ ಯಾತ್ರೆ ಮಾಡಬೇಕೆಂಬುದು ಪ್ರತಿಯೊಬ್ಬ ಮುಸಲ್ಮಾನನ ಮಹತ್ವಾಕಾಂಕ್ಷೆಯಾಗಿರುತ್ತದೆ. ಆದರೆ ಈ ಬಯಕೆ ಈಡೇರುವುದು ಅಷ್ಟೊಂದು ಸುಲಭವಲ್ಲ. ಹಜ್‌ನ ಕನಸು ಬೀಳದವರು ಕಡಿಮೆಯೆನ್ನಬಹುದು. ಆದರೆ ಆ ಕನಸು ನನಸಾಗುವುದು ಕೆಲವರಿಗೆ ಮಾತ್ರ. ಹಜ್‌ನ್ನು ನಿರ್ವಹಿಸುವ ಮುನ್ನ ಒಬ್ಬ ವ್ಯಕ್ತಿ ಪರಿಪಕ್ವನಾಗಿರಬೇಕು. ತನ್ನ ಜೀವನದಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ನಿರ್ವಹಿಸದೆ, ಕೊಡುಕೊಳ್ಳುವ ವ್ಯವಹಾರವನ್ನು ಸುಖಾಂತ್ಯಗೊಳಿಸದೆ, ಅಧಾರ್ಮಿಕವಾದ ಚಟುವಟಿಕೆಗಳಿಂದ ದೂರವಿರದೆ ಹಜ್ ನಿರ್ವಹಿಸಿದರೆ ಅದು ನಿಷ್ಪ್ರಯೋಜಕವಾಗಿದೆ. ಅದಕ್ಕಾಗಿಯೇ ಹಜ್ ನಿರ್ವಹಿಸುವವರು ತನ್ನ ವ್ಯವಹಾರ-ಜವಾಬ್ದಾರಿಗಳನ್ನು ಅದರ ವಾರೀಸುದಾರರಿಗೆ ವಹಿಸಿ, ತನ್ನ ದ್ವೇಷ-ಕೋಪಗಳನ್ನು ಶಮನ ಮಾಡಿಕೊಂಡು, ತಪ್ಪು ಮಾಡಿದ್ದರೆ, ದ್ರೋಹ ಬಗೆದಿದ್ದರೆ ಅಂಥವರೊಂದಿಗೆ ಭೇಟಿಯಾಗಿ ಕ್ಷಮಾಪಣೆಯನ್ನು ಕೇಳಿಕೊಂಡು ಹಜ್ ನಿರ್ವಹಿಸುತ್ತಾರೆ.
ಇಲ್ಲಿ ಮಾಡಿದ ಪಾಪ ಕೃತ್ಯಗಳನ್ನು ಅಲ್ಲಿಗೆ ಹೊತ್ತುಕೊಂಡು ಹೋಗಿ, ನಿರಂತರ ಪ್ರಾರ್ಥಿಸಿದರೂ ಅದು ಲ ನೀಡದು. ಹಜ್ ಎನ್ನುವುದು ಒಬ್ಬ ಮನುಷ್ಯನ ಪರಿಪೂರ್ಣತೆಯ ಸಂಕೇತವಾಗಿದೆ. ಆತ ಯಾರಲ್ಲಿ ಮನಸ್ತಾಪ ಹೊಂದಿದ್ದಾನೋ ಅವನನ್ನು ಭೇಟಿಯಾಗಿ ಪಶ್ಚಾತ್ತಾಪಪಟ್ಟು ಕ್ಷಮೆ ಕೇಳದೆ, ಆತ ಕ್ಷಮೆ ನೀಡದ ಹೊರತು ಹಜ್ ಯಾತ್ರೆಯಲ್ಲಿ ಎಷ್ಟೇ ಪ್ರಾರ್ಥಿಸಿದರೂ ಅದು ನಿರರ್ಥಕ. ಆದುದರಿಂದಲೇ ಹಜ್ ಯಾತ್ರೆಗೆ ಓರ್ವ ಆಫ್ರಿಕಾ ಖಂಡದಿಂದಲೇ ಬರಲಿ, ಏಷ್ಯಾದಿಂದಲೇ ಬರಲಿ, ಇಲ್ಲವೇ ಅಮೆರಿಕಾ ಖಂಡಗಳಿಂದಲೇ ಬರಲಿ, ಆತನ ವಸ ಎರಡು ತುಂಡು ಸಾಮಾನ್ಯ ಬಿಳಿ ಬಟ್ಟೆಯಾಗಿರುತ್ತದೆ. ತನ್ನೆಲ್ಲಾ ಆಡಂಬರದ ಬಟ್ಟೆ-ಬರೆ, ಆಭರಣವನ್ನು ತ್ಯಜಿಸಿ, ಇಹ್ರಾಮ್ ಎಂಬ ಎರಡು ತುಂಡು ಬಿಳಿ ಬಟ್ಟೆಯನ್ನು ಮಾತ್ರ ಧರಿಸಿ ಸಮಾವೇಶಗೊಳ್ಳುವ ಹಜ್‌ನಲ್ಲಿ ಜಾಗತಿಕ ಏಕತೆಯನ್ನು ಕಾಣಬಹುದು. ನಿಗ್ರೋ ಇರಲಿ,ಬಿಳಿಯನಿರಲಿ,ಮಂಗೋಲಾಯ್ಡೋಇರಲಿ, ಆಸ್ಟ್ರೋಲಾಯ್ಡೋ ಇರಲಿ, ಎಲ್ಲರೂ ಪರಸ್ಪರ ಭುಜಕ್ಕೆ ತಾಗಿಸಿ, ಒಂದೇ ರೀತಿಯ ಶ್ವೇತವಸಧಾರಿಗಳಾಗಿ ಸೃಷ್ಟಿಕರ್ತನಲ್ಲಿ ಪ್ರಾರ್ಥಿಸುವಾಗ ಆತನಲ್ಲಿ ಅಹಂಕಾರವಿರದು, ಗರ್ವವಿರದು, ಅಸಮಾನತೆ ಇರದು. ಒಂದು ವೇಳೆ ಇದ್ದಲ್ಲಿ ಅದು ‘ಯಾತ್ರೆ’ ಮಾತ್ರ ಆಗುವುದೇ ಹೊರತು.
‘ಹಜ್’ ಆಗಿ ಸ್ವೀಕರಿಸಲ್ಪಡುವುದಿಲ್ಲ. ಸುಮಾರು ನಾಲ್ಕು ಸಾವಿರ ವರುಷಗಳ ಹಿಂದೆ ಹಝ್ರತ್ ಇಬ್ರಾಹೀಮ್(ಅ) ಅಲ್ಲಾಹನ ಸಂದೇಶದ ಮೇರೆಗೆ ಹಜ್‌ಗಾಗಿ ಜನರನ್ನು ಕರೆದಾಗ ಅಲ್ಲಿ ಜನರಿರಲಿಲ್ಲ. ಅದು ನಿರ್ಜನವಾದ ಮರುಭೂಮಿಯಾಗಿತ್ತು. ಇಂದು ಜಗತ್ತಿನ ಎಲ್ಲೆಡೆಯಿಂದ ಲಕ್ಷಾಂತರ ಜನರು ಅಲ್ಲಿ ಸಮಾವೇಶಗೊಳ್ಳುತ್ತಾರೆ. ಈ ಯಾತ್ರೆಗೆ ಬರಿಗಾಲಲ್ಲಿ ನಡೆದುಕೊಂಡು ಹೋಗುವ ಕಾಲವೊಂದಿತ್ತು. ಸಂಪರ್ಕ ಸಾಧನಗಳಿಲ್ಲದ ಕಾಲದಲ್ಲಿ ನಡೆದುಕೊಂಡು ಅಥವಾ ಪ್ರಾಣಿಗಳ ಸಹಾಯದಿಂದ ಹಜ್‌ಗೆ ತೆರಳುತ್ತಿದ್ದ ಯಾತ್ರಿಗಳು ಹಿಂದಿರುಗಿ ಬರುವುದು ಖಾತ್ರಿಯಿರಲಿಲ್ಲ. ಕಾಲ ಬದಲಾದಂತೆ ಯಾತ್ರೆಯ ವಿಧಾನಗಳು ಬದಲಾದವು. ಆಧುನಿಕ ಕಾಲಘಟ್ಟದಲ್ಲಿ ಮಿಂಚಿನ ವೇಗದಲ್ಲಿ ಸಂಚರಿಸುವ ಲೋಹದ ಹಕ್ಕಿಗಳು ಬಂದ ಮೇಲೆ ಹಜ್ ಯಾತ್ರೆಯು ಸುಗಮವಾಯಿತು. ಒಂದು ಕಾಲದಲ್ಲಿ ಬರಿಗಾಲಲ್ಲಿ ನಡೆದುಕೊಂಡು ಹೋಗುತ್ತಿದ್ದವರು ಪ್ರಾಣಿಗಳ ಸಹಾಯದಿಂದ ತೆರಳುತ್ತಿದ್ದವರು, ದೋಣಿಗಳ ಮೂಲಕ ಹಡಗುಗಳ ಮೂಲಕ ತೆರಳುತ್ತಿದ್ದವರು ಹೀಗೆ ಕಾಲ ಗತಿಸಿ, ಇದೀಗ ನಮ್ಮ ಮುಂದೆ ವಿಮಾನಗಳ ಮೂಲಕ ತೆರಳುವವರು ಮಾತ್ರ ಕಾಣುತ್ತಿದ್ದಾರೆ. ಹಡಗಿನ ಮೂಲಕ ಹಜ್‌ಗೆ ತೆರಳಿದ್ದ ನಮ್ಮ ಹಿರಿಯರು ಬಹುತೇಕ ಗತಿಸಿ ಹೋಗಿದ್ದಾರೆ. ಈಗ ಬೆರಳೆಣಿಕೆಯಲ್ಲಿ ಮಾತ್ರ ಬದುಕಿರುವ ಆ ಹಿರಿಯರು, ಹೆಚ್ಚಿನವರು ತಮ್ಮ ಅನುಭವವನ್ನು ಹೇಳಿಕೊಳ್ಳುವಷ್ಟು ಜ್ಞಾಪಕ ಶಕ್ತಿಯನ್ನು ಹೊಂದಿಲ್ಲ. ಅದೇ ರೀತಿ ಕಳೆದ ಐವತ್ತು ವರ್ಷಗಳಲ್ಲಿ ಹಜ್ ಯಾತ್ರೆಯಲ್ಲಾದ ಬದಲಾವಣೆಗಳನ್ನು ಬೇರೆ ಬೇರೆ ಕಾಲದಲ್ಲಿ ಯಾತ್ರೆ ಕೈಗೊಂಡ ಯಾತ್ರಿಕರಲ್ಲಿ ಕೇಳಿ ತಿಳಿದು ಕೊಳ್ಳಬೇಕೆಂಬ ಹಂಬಲದಿಂದ ಹುಡುಕುತ್ತಾ ಹೋದಾಗ ನನಗೆ ವಿಭಿನ್ನ ಸಂದರ್ಭದಲ್ಲಿ ಹಜ್ ನಿರ್ವಹಿಸಿದ ಮೂವರು ಹಿರಿಯರನ್ನು ಗುರುತಿಸಲು ಸಾಧ್ಯವಾಯಿತು. ಈ ಮೂವರಲ್ಲಿ ಓರ್ವ ಹಿರಿಯರು ಹಡಗಿನಲ್ಲಿ ಹಜ್ ಯಾತ್ರೆ ಕೈಗೊಂಡವರು ಎನ್ನುವುದು ವಿಶೇಷ. ಅವರ ಅನುಭವಗಳನ್ನು ಅವರ ಮಾತಿನಲ್ಲಿಯೇ ಇಲ್ಲಿ ನಿರೂಪಿಸಿದ್ದೇನೆ.
ಇಬ್ರಾಹೀಂ ಹಾಜಿ ಕುದ್ದುಪದವು (68 ವರ್ಷ) ಹಜ್ ಯಾತ್ರೆ-1986
ನನ್ನ ಬಾಲ್ಯದ ದಿನಗಳಲ್ಲೇ ನನ್ನ ತಂದೆ ಅಬ್ಬಾಸ್ ಅವರು ಹಜ್‌ಗೆ ತೆರಳಿದ್ದರು. ಅವರು 1969 ರ ದಶಂಬರ ತಿಂಗಳಲ್ಲಿ ತೆರಳಿ, 1970ರ ಜನವರಿಯಲ್ಲಿ ಹಿಂದಿರುಗಿ ಬಂದಿದ್ದರು. ನನ್ನ ತಂದೆಗೆ ಕಲ್ಲಿನ ಕೋರೆಯಿತ್ತು. ನಾನೂ ಅವರೊಂದಿಗೆ ಸೇರಿ ದುಡಿಯುತ್ತಿದ್ದೆ. 1984 ರಲ್ಲಿ ನನ್ನ ಓರ್ವ ತಮ್ಮ ಅನಾರೋಗ್ಯದಿಂದ ಅಕಾಲಿಕ ಮರಣ ಹೊಂದಿದ. ಅದು ನಮ್ಮ ಕುಟುಂಬಕ್ಕೆ ತುಂಬಾ ದುಃಖವನ್ನು ಉಂಟು ಮಾಡಿತು. ಆ ನೋವಿನ ಸಂದರ್ಭದಲ್ಲಿ ನನಗೆ ಬದುಕಿನ ಬಗ್ಗೆ ಒಂದು ರೀತಿಯ ಚಂಚಲತೆ ಉಂಟಾಯಿತು. ಅಂದೇ ನಾನು ಹಜ್‌ಗೆ ತೆರಳಬೇಕೆಂದು ತೀರ್ಮಾನ ಮಾಡಿದೆ. ಅದು 1986 ನೇ ಇಸವಿ. ನನಗೆ ಮದುವೆಯಾಗಿ 2 ಪುಟ್ಟ ಮಕ್ಕಳಿದ್ದರು. ಆಗ ಹಜ್‌ಗೆ ತೆರಳಲು ಭಾರೀ ಒತ್ತಡಗಳೇನೂ ಇರಲಿಲ್ಲ. ಅರ್ಜಿ ಹಾಕಿ ಕಾಯಬೇಕಾದ ಪ್ರಸಂಗವೂ ಇರಲಿಲ್ಲ. ನಾನು ಅರ್ಜಿ ಹಾಕಿದ ಕೆಲವೇ ಸಮಯದಲ್ಲಿ ಆಯ್ಕೆಯಾದ ಸುದ್ದಿ ಬಂತು. 1986ರಲ್ಲಿ ನಾನು ಸುಮಾರು 15,000 ರೂಪಾಯಿ ಕಟ್ಟಿದ್ದೆ. ಒಟ್ಟು ಆ ದಿನಗಳಲ್ಲಿ 26,000 ಖರ್ಚಾಗಿತ್ತು. ಅಂದು ಮಕ್ಕಾದಲ್ಲಿ ಕೊಠಡಿಗಳನ್ನು ಹಜ್ ಸಮಿತಿ ವ್ಯವಸ್ಥೆ ಮಾಡುತ್ತಿರಲಿಲ್ಲ. ಬದಲಿಗೆ ನಾವೇ ಕೊಠಡಿಗಳನ್ನು ಬಾಡಿಗೆಗೆ ಗೊತ್ತು ಮಾಡಬೇಕಿತ್ತು. ಹೆಚ್ಚು ಹಣ ಕೊಠಡಿಗಳ ಬಾಡಿಗೆಗೆ ಖರ್ಚಾಗುತ್ತಿತ್ತು.
ಮಂಗಳೂರಿನಿಂದ ವಿಮಾನದಲ್ಲಿ ಮುಂಬೈಗೆ ಪ್ರಯಾಣ ಬೆಳೆಸಿದೆವು. ಮುಂಬೈಯಲ್ಲಿ 8 ದಿನ ತಂಗಿದ್ದೆವು. ಅಲ್ಲಿನ ಹಜ್‌ಕ್ಯಾಂಪ್‌ನಲ್ಲಿ ಉಳಿದ ನಮಗೆ ಪಾಸ್‌ಪೋರ್ಟ್ ಮತ್ತಿತರ ದಾಖಲೆಗಳು ಕೈಗೆ ಸಿಗಲು ಕೆಲವು ದಿನಗಳು ಬೇಕಾಯಿತು. ಮುಂಬೈನಿಂದ ಎರಡು ದಿನಗಳ ಬಳಿಕ ವಿಮಾನದಲ್ಲಿ ಜಿದ್ದಾಗೆ ತೆರಳಿ ಅಲ್ಲಿಂದ ಬಸ್ ಮೂಲಕ ಮಕ್ಕಾಗೆ ಪ್ರಯಾಣಿಸಿದೆವು. ಅದು ನನ್ನ ಜೀವನದ ಶ್ರೇಷ್ಠ ಅನುಭವ. ಒಟ್ಟು 45 ದಿನಗಳ ಹಜ್ ಯಾತ್ರೆಯಲ್ಲಿ 9 ದಿನಗಳನ್ನು ಮದೀನಾದಲ್ಲಿ ಕಳೆದಿದ್ದೆ. ಸುಮಾರು 16 ಜನ 2 ಕೊಠಡಿಗಳಲ್ಲಿ ತಂಗಿದ್ದೆವು. 9,000 ರೂಪಾಯಿ ಬಾಡಿಗೆಯಾಗಿ ಪಾವತಿಸಿದ್ದೆವು. ಊರಿನಿಂದ ತೆಗೆದುಕೊಂಡು ಹೋಗಿದ್ದ ಆಹಾರ ಸಾಮಗ್ರಿಗಳನ್ನು ಅಲ್ಲಿ ಬೇಯಿಸಿ ಸೇವಿಸಿದ್ದೆವು.
ಊರಿನಿಂದ ತುಸು ಹೆದರಿಕೆಯಿಂದಲೇ ತೆರಳಿದ್ದ ನನಗೆ ಅಲ್ಲಿ ವೈವಿಧ್ಯಮಯ ಜನರನ್ನು ಅವರ ಪ್ರಾರ್ಥನೆ, ಒಕ್ಕೊರಲ ಧ್ವನಿಯನ್ನು ಕೇಳಿದಾಗ ಊರನ್ನು ಮರೆತಿದ್ದೆ. ಏನಿದ್ದರೂ ಅಲ್ಲಾಹನೊಂದಿಗೆ ಪ್ರಾರ್ಥನೆ. ತವ್ಾ, ನಮಾಝ್ ಇದುವೇ ನನ್ನ ನಿತ್ಯ ಚಟುವಟಿಕೆಯಾಗಿತ್ತು. ಜಗತ್ತಿನ ಮೂಲೆ ಮೂಲೆಯಿಂದ ಆಗಮಿಸುವ ಜನರ ಭಾಷೆ, ಹಾವ, ಭಾವ ಬೇರೆ ಬೇರೆಯಾದರೂ ಧ್ವನಿ, ಪ್ರಾರ್ಥನೆ, ಉದ್ದೇಶ ಒಂದೇ ಆಗಿತ್ತು. ನನ್ನ ಜೀವನದಲ್ಲಿ 1986ನೇ ವರ್ಷವನ್ನು ಮರೆಯಲು ಸಾಧ್ಯವಿಲ್ಲ.
ಅಬ್ದುಲ್ ರಹಿಮಾನ್ ಹಾಜಿ ಕೇಪು (70 ವರ್ಷ) ಹಜ್ ಯಾತ್ರೆ-2000
ನಾನು ಮೂಲತಃ ಕೇಪು ಎಂಬ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದವನು. ನನಗೆ 21ನೇ ವರ್ಷದಲ್ಲಿ ಮದುವೆಯಾಯಿತು. ಮದುವೆಯಾದ ವರ್ಷವೇ ನನಗೆ ಹಜ್‌ಗೆ ತೆರಳಬೇಕೆಂಬ ಮನಸ್ಸಾಯಿತು. ಅಂದಿನಿಂದಲೂ ಪ್ರತೀ ವರ್ಷ ಹಜ್‌ಗೆ ತೆರಳಬೇಕೆಂಬ ಆಸೆಯಿಂದ ನಿತ್ಯವೂ ಪ್ರಾರ್ಥನೆಯಲ್ಲಿ ಅಲ್ಲಾಹನಲ್ಲಿ ಬೇಡುತ್ತಿದ್ದೆ. ನನಗೆ ಆರ್ಥಿಕ ಅಡಚಣೆಯಿತ್ತು. ಸಾಮಾನ್ಯ ಕೃಷಿ ಕುಟುಂಬಕ್ಕೆ ಸೇರಿದ ನನಗೆ ಹಜ್‌ನ ಕನಸು ಈಡೇರಬಹುದೇ ಎಂಬ ಆತಂಕವಿದ್ದರೂ ಸೃಷ್ಟಿಕರ್ತನ ಮೇಲೆ ಭರವಸೆಯಿಟ್ಟು ನಿತ್ಯವೂ ಅದಕ್ಕಾಗಿ ಪ್ರಾರ್ಥಿಸುತ್ತಿದ್ದೆ.
ಅದು 2000ನೇ ಇಸವಿ. ಆಗ ನನಗೆ 54 ವರ್ಷ ಪ್ರಾಯ. ನಾನು ನನ್ನ ಸ್ವಲ್ಪ ಜಾಗವನ್ನು ಮಾರಿ ಅದರಲ್ಲಿ ಬಂದ ಹಣವನ್ನು ಹಜ್‌ಗಾಗಿ ಕೂಡಿಟ್ಟು ಹಜ್ ಸಮಿತಿಗೆ ಅರ್ಜಿ ಹಾಕಿದೆ. ಅದೇ ವರ್ಷ ನನಗೂ ನನ್ನ ಪತ್ನಿಗೂ ಹಜ್‌ಗೆ ತೆರಳುವ ಅವಕಾಶ ಸಿಕ್ಕಿತು. ಆಗ ಈಗಿನ ಹಾಗೆ ಡ್ರಾ ಮೂಲಕ ಆಯ್ಕೆ ಮಾಡುವ ಪದ್ಧತಿ ಇರಲಿಲ್ಲ. ಒಬ್ಬರಿಗೆ 79,000 ರೂಪಾಯಿ ಪಾವತಿಸಬೇಕಿತ್ತು. ಒಟ್ಟು 42 ದಿನಗಳ ನಮ್ಮ ಹಜ್‌ಯಾತ್ರೆಯಲ್ಲಿ 10 ದಿನಗಳನ್ನು ಮದೀನಾದಲ್ಲಿ ಕಳೆದು ಉಳಿದಂತೆ ಮಕ್ಕಾದಲ್ಲಿ ಇದ್ದೆವು. ಬೆಂಗಳೂರಿನಿಂದ ನೇರವಾಗಿ ಜಿದ್ದಾಕ್ಕೆ ವಿಮಾನ ಸಂಪರ್ಕವಿತ್ತು. ಬೆಂಗಳೂರಿನ ಹಜ್‌ಕ್ಯಾಂಪ್‌ನಲ್ಲಿ 3 ದಿನ ಉಳಿದು ನಂತರ ನಾವು ಪ್ರಯಾಣಿಸಿದ್ದೆವು. ನನಗೆ ಮಕ್ಕಾದಲ್ಲಿ ಹರಮ್ ಶರ್ೀನ ಸನಿಹದಲ್ಲಿಯೇ ಕೊಠಡಿ ಲಭಿಸಿತ್ತು. ನಿರಂತರವಾಗಿ ತವ್ಾ ಮಾಡುತ್ತಿದ್ದ ನನಗೆ ಅಲ್ಲಿ ಯಾವುದೇ ಅಡಚಣೆಗಳಾಗಲಿಲ್ಲ. ಹಜ್‌ಗೆ ತೆರಳುವವರಿಗೆ ತಾಳ್ಮೆ ಅತೀ ಮುಖ್ಯ. ಅಲ್ಲಿ ಸೇರುವ ಜಗತ್ತಿನ ವಿಭಿನ್ನ ವ್ಯಕ್ತಿತ್ವದ ಜನರೊಂದಿಗೆ, ನಮ್ಮ ಪ್ರಾರ್ಥನೆಗಳನ್ನು ನೆರವೇರಿಸಬೇಕಾದರೆ ಸಹನೆ ನಮ್ಮಲ್ಲಿರಬೇಕು. ನಾನು ಇತರರಿಗೆ ಯಾವ ರೀತಿಯಲ್ಲಿ ಉಪಕಾರಿಯಾಗುತ್ತೇನೆ ಎನ್ನುವುದು ಕೂಡಾ ಮುಖ್ಯ. ದುಲ್‌ಹಜ್ ತಿಂಗಳ 9ನೆ ದಿನ ಅರಾದಲ್ಲಿ ಸಮಾವೇಶಗೊಳ್ಳುವುದು ಹಜ್‌ನ ಅತೀ ಮುಖ್ಯ ಕ್ರಿಯೆ. ಹಜ್ ಪೂರ್ಣಗೊಳ್ಳಬೇಕಾದರೆ ಅರಾದಲ್ಲಿ ಸೇರಲೇಬೇಕು. ಆರೋಗ್ಯವಂತರೂ, ಅನಾರೋಗ್ಯ ಪೀಡಿತರೂ, ನಡೆಯುತ್ತಾ ಸಾಗುವವರೂ, ತೆವಳುತ್ತಾ ಸಾಗುವವರನ್ನು, ವ್ಹೀಲ್ ಚೇರ್‌ನಲ್ಲಿ ಸಾಗುವವರನ್ನು ಕಾಣುವಾಗ ಅಲ್ಲಿನ ವಿಶೇಷತೆ ಅರಿವಾಗುತ್ತದೆ. ಬಳಿಕ ಮುಝ್ದಲಿದಲ್ಲಿ ತಂಗಿ ಪ್ರಾರ್ಥನೆಗೈದು, 10ನೇ ದಿನದಂದು ಮಿನಾಗೆ ತೆರಳಿದೆವು. ತೀವ್ರ ಜನಜಂಗುಳಿಯಿರುವ ಪ್ರದೇಶವದು. ಆ ಸಂದರ್ಭದಲ್ಲಿ ಹೆಚ್ಚಿನ ಸೌಲಭ್ಯವಿರಲಿಲ್ಲ. ಅನೇಕ ಮಂದಿ ಕಾಲ್ತುಳಿತಕ್ಕೆ ಒಳಗಾಗುತ್ತಿದ್ದರು. ಆಗಮನ ನಿರ್ಗಮನಕ್ಕೆ ಒಂದೇ ದಾರಿಯಿತ್ತು. ಅದು ಯಾತ್ರಾರ್ಥಿಗಳಿಗೆ ತುಂಬಾ ಕಷ್ಟವಾಗುತ್ತಿತ್ತು.
ಮಾನವ ಸಹೋದರತೆ, ತಾಳ್ಮೆಯನ್ನು ನಾನು ಹಜ್‌ನಿಂದ ಕಲಿಯಲು ಸಾಧ್ಯವಾಯಿತು. ನಂತರದ ವರ್ಷದಲ್ಲಿ ಮತ್ತೆ ನಾನು ಹಜ್‌ಗೆ ತೆರಳಿದಾಗ ಅಲ್ಲಿ ಭಾರೀ ಸುಧಾರಣೆಗಳು ಆದುದನ್ನು ಕಂಡು ಆಶ್ಚರ್ಯ ಪಟ್ಟೆ.
ಸೇಸಾರಿ ಶಾಫಿ ಹಾಜಿ ಕಲ್ಲಡ್ಕ (88 ವರ್ಷ ಪ್ರಾಯ) ಹಜ್ ಯಾತ್ರೆ-ಫೆಬ್ರವರಿ 1966
ನಾನು ಕಲ್ಲಡ್ಕದಲ್ಲಿಯೇ ಹುಟ್ಟಿ ಬೆಳೆದವ. ಇಲ್ಲಿಯೇ ವ್ಯಾಪಾರವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆ. ಹಜ್‌ಗೆ ತೆರಳಬೇಕೆನ್ನುವುದು ಒಂದು ಕನಸಾಗಿತ್ತಾದರೂ ಅದು ನನಸಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಅಷ್ಟಕ್ಕೂ ಆ ಕಾಲದಲ್ಲಿ ಹಜ್‌ಗೆ ತೆರಳುವುದು ಬಹಳ ಕಷ್ಟದಾಯಕವಾದ ವಿಚಾರವಾಗಿತ್ತು. ಅದು 1965 ನೇ ಇಸವಿ. ಒಂದು ದಿನ ಮಸೀದಿಯಲ್ಲಿ ಪ್ರವಚನ ನೀಡುತ್ತಿದ್ದ ಕೋಯಮ್ಮ ಉಸ್ತಾದ್ ಅವರು ನನ್ನಲ್ಲಿ ಮಾತನಾಡುತ್ತಾ, ‘‘ನೀವು ಸಾಲ ಮುಕ್ತರಾಗಿ, ನಿಮ್ಮದೇ ಆದ ಒಂದು ಸಾವಿರ ರೂಪಾಯಿ ನಿಮ್ಮಲ್ಲಿ ಇದೆ ಎಂದಾದಲ್ಲಿ ನೀವು ಹಜ್‌ಗೆ ತೆರಳಬೇಕು’’ ಎಂದು ಹೇಳಿದರು. ಅವರ ಮಾತಿನಿಂದ ಪ್ರೇರಣೆಗೊಂಡ ನಾನು ಹಜ್‌ಗೆ ತೆರಳುವ ಸಂಕಲ್ಪ ಮಾಡಿದೆ. ಸಂಕಲ್ಪ ಮಾಡಿದ್ದೇನೋ ಆಯಿತು. ಆದರೆ ತೆರಳುವುದು ಅಷ್ಟು ಸುಲಭವಾಗಿರಲಿಲ್ಲ. ಅರ್ಜಿ ಹಾಕಬೇಕಿತ್ತು. ಕೆಲವು ದಾಖಲೆಗಳು ಬೇಕಿತ್ತು. ಮಂಗಳೂರಿಗೆ ತೆರಳಬೇಕಿತ್ತು. ನಾನು ನನ್ನ ಸ್ನೇಹಿತರಾಗಿದ್ದ ಗೋಳ್ತಮಜಲು ಅಬ್ದುಲ್ ಖಾದರ್ ಅವರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದಾಗ, ಅವರು ಅಗತ್ಯ ದಾಖಲೆ ಪತ್ರ ಹಾಗೂ ಅರ್ಜಿಗಳನ್ನು ಸಿದ್ಧಪಡಿಸಲು ಸಹಕರಿಸಿದರು, ಜೊತೆಗೆ ಅವರೂ ಹಜ್ ಯಾತ್ರೆ ಮಾಡುವ ತೀರ್ಮಾನ ಮಾಡಿದರು. ಅವರ ತೀರ್ಮಾನದಿಂದ ನನಗೂ ಹೆಚ್ಚಿನ ಧೈರ್ಯ ಬಂತು. ಜೊತೆ ಸೇರಿ ನಮ್ಮ ದಾಖಲೆ ಪತ್ರಗಳನ್ನು ಸಿದ್ಧಪಡಿಸಿ ಅರ್ಜಿ ಹಾಕಿದ ಕೆಲವು ಸಮಯದ ನಂತರ ನನಗೆ ಒಂದು ಪತ್ರ ಬಂತು. ಅದರಲ್ಲಿ ಹಜ್‌ಗೆ ತೆರಳಲು ಹಣ ಪಾವತಿಸಲು ಸೂಚಿಸಲಾಗಿತ್ತು. ಅದು 530 ರೂಪಾಯಿ ಮೊತ್ತ. ನಾನು ಮತ್ತು ಅಬ್ದುಲ್ ಖಾದರ್ ಜೊತೆ ಸೇರಿ ಈ ಮೊತ್ತವನ್ನು ಪಾವತಿಸಿದೆವು. ಇದು ಮುಂಬೈಯಿಂದ-ಮಕ್ಕಾಗೆ ತೆರಳುವ ಮತ್ತು ಮಕ್ಕಾದಿಂದ ಮುಂಬೈಗೆ ತಗಲುವ ಮೊತ್ತ. ಮುಂಬೈವರೆಗೆ ನಮ್ಮ ಖರ್ಚಿನಲ್ಲಿಯೇ ತೆರಳಬೇಕಿತ್ತು. ನಮ್ಮದು ಒಟ್ಟು 105 ದಿನಗಳ ಯಾತ್ರೆ. ತೆರಳುವ ಮುನ್ನ ಕುಟುಂಬಸ್ಥರನ್ನೂ, ಮೊಹಲ್ಲಾದ ನಿವಾಸಿಗಳನ್ನು ಭೇಟಿಯಾಗಿ ಮನಸ್ಸನ್ನು ಹಗುರ ಮಾಡಿಕೊಂಡು ಯಾತ್ರೆಗೆ ಸಿದ್ಧನಾದೆ. ಆ ಕಾಲದಲ್ಲಿ ಹಜ್ ಯಾತ್ರೆಗೆ ತೆರಳುವವರು ತೀರಾ ವಿರಳ. ಹಾಗಾಗಿ ಹಜ್‌ಗೆ ಹೋಗುವುದೆಂದರೆ ಅದೊಂದು ದೊಡ್ಡ ಸಂಗತಿ. ನಾವು ಯಾತ್ರೆಗಾಗಿ ಮುಂಬೈಗೆ ಪ್ರಯಾಣಿಸಬೇಕಿತ್ತು. ಅದಕ್ಕಾಗಿ ನಾವು ಮಂಗಳೂರಿಗೆ ತೆರಳಿ ಅಲ್ಲಿಂದ ‘ಸಬರಮತಿ’ ಎಂಬ ಹಡಗಿನ ಮೂಲಕ ಮುಂಬೈಗೆ ಪ್ರಯಾಣ ಬೆಳೆಸಿದೆವು. ಆಗ ಮಂಗಳೂರಿನಿಂದ ಮುಂಬೈ ಪ್ರಯಾಣಕ್ಕೆ 25 ರೂಪಾಯಿ ಪಾವತಿ ಮಾಡಿದ್ದೆ.
ಮುಂಬೈಯಲ್ಲಿ ಇಳಿದ ಮೇಲೆ ಅಲ್ಲಿ ಒಂದೆರಡು ದಿನ ತಂಗಿ, ಬಳಿಕ, ‘ಮಹಮ್ಮದೀಯ’ ಎಂಬ ಹಡಗಿನ ಮೂಲಕ ಜಿದ್ದಾಗೆ ಪ್ರಯಾಣ ಮಾಡಿದೆವು. ನಾವು ಸುಮಾರು 1500 ಪ್ರಯಾಣಿಕರಿದ್ದೆವು. ಸ್ನಾನ, ಊಟ, ನಮಾಝ್, ನಿದ್ದೆ ಎಲ್ಲವೂ ಹಡಗಿನಲ್ಲಿ. ಜುಮಾ ಕುತುಬಾ, ನಮಾಝ್ ಕೂಡಾ ಹಡಗಿನಲ್ಲೇ ನಡೆದಿತ್ತು. ಹಡಗಿನ ಪ್ರಯಾಣದ ಸಂದರ್ಭದಲ್ಲೇ ಇಹ್ರಾಮ್ ಕಟ್ಟಲು ಸೂಚನೆ ಬಂತು. ತಣ್ಣೀರಿನಲ್ಲಿ ಸ್ನಾನ ಮಾಡಿ, ಇಹ್ರಾಮ್ ಕಟ್ಟಿದೆವು. ಅದು ನನ್ನ ಜೀವನದ ದೊಡ್ಡ ಅನುಭವ. ಸತತ ಎಂಟು ದಿನಗಳ ಪ್ರಯಾಣದ ಬಳಿಕ ಜಿದ್ದಾ ತಲುಪಿದೆವು. ಅಲ್ಲಿಂದ ಬಸ್‌ನಲ್ಲಿ ಮಕ್ಕಾ ಪ್ರಯಾಣಕ್ಕೆ ವ್ಯವಸ್ಥೆಯಿತ್ತು. 87 ದಿನಗಳನ್ನು ಮಕ್ಕಾ ಮದೀನಾದಲ್ಲಿ ಕಳೆದೆವು. ನಾವು ಊರಿನಿಂದ ತೆಗೆದುಕೊಂಡು ಹೋಗಿದ್ದ ಅಕ್ಕಿಯನ್ನು ಅಲ್ಲಿ ಬೇಯಿಸಿ ಊಟ ಮಾಡುತ್ತಿದ್ದೆವು.. ಸುಮಾರು 3 ತಿಂಗಳುಗಳು ಮನೆಯವರಿಂದ ದೂರ ಉಳಿದಿದ್ದ ನಾನು ಮಕ್ಕಾದಿಂದ ಪತ್ರ ಬರೆದು ನಮ್ಮ ಮನೆಯವರ ಯೋಗ ಕ್ಷೇಮ ವಿಚಾರಿಸುತ್ತಿದ್ದೆ. ಅದರ ಹೊರತಾಗಿ ಬೇರಾವುದೇ ಸಂಪರ್ಕ ಸಾಧನ ನನಗಿರಲಿಲ್ಲ. ನಾನು ಖರ್ಚಿಗೆಂದು ಹೊಂದಿದ್ದ ಒಂದು ಸಾವಿರ ರೂಪಾಯಿಯನ್ನು ಅಲ್ಲಿ ವಿನಿಮಯ ಮಾಡಿದಾಗ 932 ರಿಯಲ್ ಸಿಕ್ಕಿತ್ತು. ಅದನ್ನು ಇತರ ಖರ್ಚಿಗಾಗಿ ಬಳಸಿದ್ದೆ. ಹಜ್ ನಿರ್ವಹಿಸಿ ಮತ್ತೆ 8 ದಿನಗಳ ಪ್ರಯಾಣ ಮಾಡಿ ಮುಂಬೈಗೆ ಬಂದು ಊರಿಗೆ ತಲುಪಿದಾಗ ಧನ್ಯತಾ ಭಾವ ಉಂಟಾಗಿತ್ತು.