ತಮಿಳುನಾಡಿಗೆ ಬಸ್ ಸಂಚಾರ ಸ್ಥಗಿತ : ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು, ಸೆ.12: ತಮಿಳುನಾಡಿಗೆ ಸಂಚರಿಸಬೇಕಿದ್ದ ಕೆಸ್ಸಾರ್ಟಿಸಿ ಬಸ್ ಗಳ ಸಂಚಾರವನ್ನು ಸಧ್ಯದ ಮಟ್ಟಿಗೆ ತಡೆಹಿಡಿಯಲಾಗಿದ್ದು ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ತಮಿಳುನಾಡಿನಲ್ಲಿ ಕೆಸ್ಸಾರ್ಟಿಸಿ ಬಸ್ ಗಳ ಮೇಲೆ ದಾಳಿ ನಡೆಸಿಲ್ಲ. ಆದರೆ ಕೆಲ ಖಾಸಗಿ ಬಸ್ ಮೇಲೆ ಕಲ್ಲು ತೂರಾಟ ಮಾಡಿರುವ ಬಗ್ಗೆ ಮಾಹಿತಿ ಬಂದಿದೆ. ಸದ್ಯಕ್ಕೆ ಬೆಂಗಳೂರಿನಿಂದ ಹೊರಟಿದ್ದ ಕೆಸ್ಸಾರ್ಟಿಸಿ ಬಸ್ ಗಳನ್ನು ಅತ್ತಿಬೆಲೆಯಲ್ಲಿ ಪೊಲೀಸರು ತಡೆಹಿಡಿದಿದ್ದಾರೆ. ಪರಿಸ್ಥಿತಿ ಕುರಿತು ಪೊಲೀಸರಿಂದ ವರದಿ ಕೇಳಿದ್ದೇನೆ. ವರದಿ ಬಳಿಕ ಎರಡು ದಿನಗಳ ಮಟ್ಟಿಗೆ ಬಸ್ ಸಂಚಾರ ಸ್ಥಗಿತಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ತಮಿಳುನಾಡಿನಲ್ಲಿರುವ ಕನ್ನಡಿಗರನ್ನು ರಕ್ಷಣೆ ಮಾಡುವುದು ಅಲ್ಲಿನ ಸರ್ಕಾರದ ಜವಾಬ್ದಾರಿಯಾಗಿದೆ. ನಾವು ಕರ್ನಾಟಕದಲ್ಲಿರುವ ತಮಿಳರ ರಕ್ಷಣೆ ಮಾಡುವ ರೀತಿಯಲ್ಲಿ ಅಲ್ಲಿಯ ಸರ್ಕಾರ ಕನ್ನಡಿಗರಿಗೆ ರಕ್ಷಣೆ ನೀಡಬೇಕು. ಈ ರೀತಿ ಒಬ್ಬರಿಗೊಬ್ಬರು ಹಲ್ಲೆ ಮಾಡೊದು ಸರಿಯಲ್ಲ ಎಂದರು. ಎರಡೂ ರಾಜ್ಯಗಳಲ್ಲಿ ಜನರು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು.