ಮೇಲ್ಮನವಿಯಿಂದ ನ್ಯಾಯದ ಬದಲಿಗೆ ಸಿಕ್ಕಿದ್ದು ಶಿಕ್ಷೆ: ದೇವೇಗೌಡ
ಬೆಂಗಳೂರು, ಸೆ.12: ಕಾವೇರಿ ಜಲಹಂಚಿಕೆ ವಿವಾದ ತೀರ್ಪಿನ ಕುರಿತು ಮರುಪರಿಶೀಲನೆ ನಡೆಸುವಂತೆ ರಾಜ್ಯ ಸರಕಾರ ಸಲ್ಲಿಸಿದ್ದ ಮೇಲ್ಮನವಿಯಿಂದ ರಾಜ್ಯಕ್ಕೆ ನ್ಯಾಯ ಲಭಿಸುವ ಬದಲು ಶಿಕ್ಷೆ ದೊರಕಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ನ್ಯಾಯಾಧೀಕರಣದ ನಿರ್ಧಾರದಿಂದ ಅರೆಕುಷ್ಕಿ ಬೇಸಾಯಕ್ಕೆ ಆತಂಕ ಎದುರಾಗಿದೆ. ಕುಡಿಯುವ ನೀರಿಗೂ ತತ್ವಾರ ಉಂಟಾಗುವ ಭಯ ಆವರಿಸಿದೆ. ಮೆಟ್ಟೂರು ಜಲಾಶಯದಲ್ಲಿನ ನೀರು ಸಂಗ್ರಹ ಕುರಿತು ನಮ್ಮ ವಕೀಲರ ಮಾಹಿತಿ ಬಗ್ಗೆ ಅನುಮಾನವಿದ್ದರೆ ಪರಿಶೀಲನೆ ಮಾಡಿಸಬಹುದಿತ್ತು. ಈವರೆಗೆ ಜಲಾಶಯದಿಂದ ತಮಿಳುನಾಡಿಗೆ ಒಂಬತ್ತು ಟಿಎಂಸಿ ನೀರು ಬಿಟ್ಟಿದ್ದಾರೆ. ಸೆ.20ರವರೆಗೆ ಬಿಟ್ಟರೆ ಮತ್ತೆ ಒಂಬತ್ತು ಟಿಎಂಸಿ ನೀರು ಕೊಟ್ಟಂತಾಗುತ್ತದೆ. ಇದರಿಂದ ಆತಂಕ ಎದುರಾಗಿದೆ ಎಂದು ಅವರು ಹೇಳಿದರು.
ಸುಪ್ರೀಂಕೋರ್ಟ್‌ನ ತೀರ್ಪನ್ನು ನಾನು ಟೀಕಿಸುವುದಿಲ್ಲ. ಜನರು ತಮ್ಮ ನೋವು ವ್ಯಕ್ತಪಡಿಸಲು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದ ಜನತೆಯ ಪ್ರತಿಭಟನೆ ಕುರಿತು ಸುಪ್ರೀಂ ಅಸಮಾಧಾನ ವ್ಯಕ್ತಪಡಿಸಿದೆ. ಆದರೆ ಈ ಹಿಂದೆ ಇದೇ ಸುಪ್ರೀಂಕೋರ್ಟ್ ಶಾಂತಿಯುತ ಪ್ರತಿಭಟನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕು ಎಂದಿದೆ ಎಂದು ಹೇಳಿದರು.
ನಾನು ನೀರು ಬಿಡಿ ಎಂದು ಹೇಳಿ ಮನೆಯಲ್ಲಿ ಕೂರಲಿಲ್ಲ. ಎಲ್ಲರನ್ನೂ ಭೇಟಿಯಾಗಿ ಪರಿಸ್ಥಿತಿಯನ್ನು ವಿವರಿಸಿದ್ದೇನೆ. ವೈಮಾನಿಕ ಸಮೀಕ್ಷೆಯನ್ನೂ ನಡೆಸಿದ್ದೇನೆ. ಆದರೂ ಸರಕಾರದ ಮೇಲ್ಮನವಿಯಿಂದ ನ್ಯಾಯ ಸಿಗುವ ಬದಲು ಶಿಕ್ಷೆ ಸಿಕ್ಕಿದೆ. ಹೀಗಾಗಿ ಈ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶ ಮಾಡಲೇಬೇಕು ಎಂದು ದೇವೇಗೌಡರು ಆಗ್ರಹಿಸಿದರು.