ಕೂಲಿ
ಎಲ್ಲೆಲ್ಲೋ ಹೊತ್ತಿ ಉರಿಯುತ್ತಿದ್ದ ಮನೆಗಳ ಧಗಿಧಗಿಸುವ ಜ್ವಾಲೆಯ ಬಿಸಿ ಸೂರ್ಯನ ಸುಡುಬಿಸಿಲಿನೊಂದಿಗೆ ಸೇರಿಕೊಂಡು, ಸಂಜೆಯ ಸೆಕೆ ಸಹಿಸಲು ಅಸಾಧ್ಯವಾಯಿತು. ಹಠಾತ್ತನೆ ಗುಂಡಿನ ಸಪ್ಪಳ ಕೇಳಿಸಿತು. ಪೊಲೀಸರು ಬರುವುದರೊಳಗಾಗಿಯೇಇಡೀ ರಸ್ತೆ ನಿರ್ಜನವಾಯಿತು..
ಎಲ್ಲೆಲ್ಲೂ ಲೂಟಿ, ಗಲಭೆಗಳು ನಡೆಯುತ್ತಿದ್ದವು. ಈಗ ಕಂಡಲ್ಲಿ ಕೊಳ್ಳಿಯಿಡುವ ಕೆಲಸ ವ್ಯಾಪಕವಾಗಿ ಹಬ್ಬಿತು.
ಇದ್ಯಾವುದರ ಪರಿವೆ ಇಲ್ಲದೆ ಒಬ್ಬ ಮನುಷ್ಯ ಕುತ್ತಿಗೆಗೆ ಹಾರ್ಮೋನಿಯಂ ನೇತು ಹಾಕಿಕೊಂಡು ಹಾಡುತ್ತ, ಓಣಿಗಳಲ್ಲಿ ಅಲೆದಾಡುತ್ತಿದ್ದರು. ಅವನ ತುಟಿಗಳ ಮೇಲೆ ಜನಪ್ರಿಯ ಹಾಡು ನರ್ತಿಸುತ್ತಿತ್ತು:
ಎನ್ನ ಮನ ಮುರಿದು ಬಹುದೂರ ಹೋದಳಾ ನಾರಿ ಎನ್ನ ಮನ ಮುರಿದು ಬಹುದೂರ ಹೋದಳಾ ನಾರಿ ಇನ್ನೆಂದೂ ಯಾರನ್ನೂ ಪ್ರೀತಿಸೆ ನಾ ಹೇಳುವೆನು ಸಾರಿ, ಎಂದೆಂದೂ...
ಒಬ್ಬ ಯುವಕ ಕೈಯಲ್ಲಿ ಡಜನ್‌ಗಟ್ಲೆ ಪಾಪಡ್‌ಗಳ ಪ್ಯಾಕೆಟ್ ಹಿಡಿದು ಹೋಗುತ್ತಿದ್ದನು. ತುಸು ಜೋಲಿ ಹೋದಂತಾಗಿ, ಒಂದು ಪ್ಯಾಕೆಟ್ ಕೆಳಗೆ ಬಿದ್ದಿತು. ಅವನು ಅಲ್ಲಿಯೇ ನಿಂತು ಬಾಗಿ ಅದನ್ನು ಕೈಗೆತ್ತಿಕೊಳ್ಳುತ್ತಿದ್ದಾಗ, ಒಬ್ಬ ಮುದುಕ ಕದ್ದು ತಂದಿದ್ದ ಹೊಲಿಗೆ ಮೆಷಿನ್‌ನ್ನು ತಲೆಯ ಮೇಲೆ ಹೊತ್ತು ಸಾಗಿಸುತ್ತ ಅಂದನು. ‘ಏಯ್, ಮಗಾ, ಬಿದ್ದದ್ದನ್ನು ಯಾಕೆ ಎತ್ತಿಕೊಳ್ಳುತ್ತಾಯಿದ್ದಿಯೋ? ರೋಡ್ ಎಷ್ಟು ಸುಡತಾಯಿದೆ ಅಂದ್ರೆ, ನೀನು ಆ ಪಾಪಡ್‌ನ್ನು ಕೈಗೆತ್ತಿಕೊಳ್ಳುವುದರೊಳಗೆ ಎಲ್ಲ ಪಾಪಡ್ ಹೊತ್ತಿ ಹುರಕಡ್ಲೆ ಆಗ್ತಾವ’.
ರಸ್ತೆಯ ಮೇಲೆ ಒಂದು ತುಂಬಿದ ಚೀಲ ದೊಪ್ಪನೇ ಬಿದ್ದಿತು. ಒಬ್ಬ ಮನುಷ್ಯ ದಿಢೀರನೇ ಮುಂದೆ ಬಂದು ತನ್ನ ಕೈಯಲ್ಲಿದ್ದ ಬೇಟೆ ಚಾಕುವಿನಿಂದ ಚೀಲದ ಬಾಯಿಯನ್ನು ಹರಿದು ತೆರೆದನು. ಅದರಲ್ಲಿ ಬಹುಶಃ ಒಬ್ಬ ರಕ್ತ ಸಿಕ್ತ ದೇಶ ಭ್ರಷ್ಟನ ಹೆಣ ಇರಬಹುದೆಂದು ಭಾವಿಸಿದ್ದನು. ಆದರೆ ಚೀಲ ಹರಿದು ಬಾಯಿ ತೆರೆದು ಅದರೊಳಗಿಂದ ಸಕ್ಕರೆ ಹೊರಚೆಲ್ಲಿತ್ತು-ಶುಭ್ರ, ಶ್ವೇತ ಬಣ್ಣದ ಸಣ್ಣನೆಯ ಹರಳುಗಟ್ಟಿದ ಸಕ್ಕರೆ. ಅನಿರೀಕ್ಷಿತವಾಗಿ ಸಿಕ್ಕ ಈ ಬಹುಮಾನವನ್ನು ಕೈಗೆ ಸಿಕ್ಕಷ್ಟು ಬಾಚಿಕೊಳ್ಳಲು ನೋಡ ನೋಡುವುದರಲ್ಲಿಯೇ ಒಂದು ಜನ ಜಂಗುಳಿಯೇ ಜಮಾಯಿಸಿತು. ಆ ಗಡಿಬಿಡಿ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ತನ್ನ ಟೊಂಕಕ್ಕೆ ಒಂದು ಬಟ್ಟೆಯನ್ನು ಸಡಿಲವಾಗಿ ಸುತ್ತಿಕೊಂಡಿದ್ದ. ಸಕ್ಕರೆ ನೋಡಿದ್ದೆ ತಡ, ಯಾವುದೇ ಎಗ್ಗಿಲ್ಲದೆ ತೀರ ಸಹಜವೆಂಬಂತೆ, ಉಟ್ಟಿದ್ದ ಆ ಬಟ್ಟೆಯನ್ನು ಸರಸರ ಬಿಚ್ಚಿದವನೆ ಅದನ್ನು ನೆಲದ ಮೇಲೆ ಹಾಸಿ ಬೆತ್ತಲೆಯಾಗಿ ನಿಂತು ಸಕ್ಕರೆ ತುಂಬಿಕೊಳ್ಳ ಹತ್ತಿದ.
‘ಹಾದಿ ಬಿಡ್ರಿ, ಹಾದಿ ಬಿಡ್ರಿ’ ಎನ್ನುತ್ತ ಒಬ್ಬ ಒಂದು ಟಾಂಗಾದ ತುಂಬಾ ಮಿರಿಮಿರಿ ಮಿಂಚುತ್ತಿದ್ದ ಕಟ್ಟಿಗೆಯ ರ್ನಿಚರ್ ತೆಗೆದುಕೊಂಡು ಹೋದನು.
ಒಂದು ಮನೆಯ ಮೇಲಂತಸ್ತಿನ ಕಿಟಕಿಯಿಂದ ರಸ್ತೆಯ ಕಡೆಗೆ ಯಾರೋ ಉದ್ದವಾದ ಮಸ್ಲಿನ್ ಬಟ್ಟೆಯ ಸುರುಳಿಯನ್ನು ಕೆಳಗೆ ತಳ್ಳಿದರು. ಅದು ನಡುದಾರಿಯಲ್ಲಿಯೇ ಬೆಂಕಿ ಹೊತ್ತಿಕೊಂಡು ಭೂಮಿಗೆ ತಲುಪುವುದರೊಳಗೆ ಹಿಡಿ ಬೂದಿಯಾಗಿ ಪರಿಣಮಿಸಿತು. ಬಹಳ ಹೊತ್ತಿನಿಂದ ಪ್ರಯತ್ನಿಸುತ್ತಿದ್ದ ಕೆಲವರು ಕೊನೆಗೂ ದೊಡ್ಡ ಸ್ಟೀಲಿನ ಅಲಮಾರಿಯನ್ನು ರಸ್ತೆಗೆ ಎಳೆದು ತರುವಲ್ಲಿ ಯಶಸ್ವಿಯಾದರು. ಕೈಯಲ್ಲಿ ಲಾಟಿ ಹಿಡಿದಿದ್ದ ಅವರೆಲ್ಲ ಎಷ್ಟು ಪ್ರಯತ್ನಿಸಿದರೂ ಅದನ್ನು ತೆರೆಯಲು ಸಾಧ್ಯವಾಗಲಿಲ್ಲ.
ಕೈಯಲ್ಲಿ ಅನೇಕ ಹಾಲಿನ ಪುಡಿಯ ಡಬ್ಬಿಗಳನ್ನು ಹಿಡಿದುಕೊಂಡಿದ್ದ ಒಬ್ಬನು ಅಂಗಡಿಯಿಂದ ಹೊರಗೆ ಬಂದನು. ಮೆಲ್ಲನೆ ಎಚ್ಚರದ ಹೆಜ್ಜೆ ಹಾಕುತ್ತ ಹೋದ ಅವನು ಕಣ್ಮರೆಯಾಗುವವರೆಗೆ ಯಾರೂ ನೋಡಲಿಲ್ಲ.
‘ಎಲೋ ಹುಡುಗರೇ, ಬರ್ರಿ, ಇಂಥ ಸುಡುಸುಡು ಬ್ಯಾಸಿಗಿಯೊಳಗೆ ಒಂದಿಷ್ಟು ಥಂಡಾಥಂಡಾ ಶರಬತ್ ಕುಡಿದು ತಲೆ ತಣ್ಣಗ ಮಾಡ್ಕೊಳ್ರಿ’ ಎಂದು ಜೋರಿನಿಂದ ಆಮಂತ್ರಿಸಿದ ಒಬ್ಬ ವ್ಯಕ್ತಿ. ಕೊರಳಿಗೆ ಕಾರಿನ ಟೈಯರ್ ಹಾಕಿಕೊಂಡಿದ್ದ ಅವನು ಧನ್ಯವಾದ ಸಹ ಹೇಳದೆ ಎರಡು ಬಾಟಲ್‌ಗಳನ್ನು ಕೈಗೆತ್ತಿಕೊಂಡನು.
ಯಾವನೋ ಒಬ್ಬ ಕಿರುಚಿದ, ‘ಫಾಯರ್ ಬ್ರಿಗೇಡಿಗಾದರೂ ಹೇಳಿ ಕಳಸರಪ್ಪಾ, ಇಲ್ಲಂದ್ರ ಅಮೂಲ್ಯ ವಸ್ತುಗಳೆಲ್ಲ ಬೆಂಕಿ ಪಾಲಾಗಿ ಹೋದಾವು!’ ಸಲಹೆ ಏನೋ ವಿವೇಕ ಪೂರ್ಣವಾದುದ್ದೇ. ಆದರೆ ಯಾರೂ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.
ಹೀಗೆಯೇ ಮುಂಜಾನೆಯಿಂದ ಸಂಜೆಯವರೆಗೆ ನಡೆಯಿತು. ಎಲ್ಲೆಲ್ಲೋ ಹೊತ್ತಿ ಉರಿಯುತ್ತಿದ್ದ ಮನೆಗಳ ಧಗಿಧಗಿಸುವ ಜ್ವಾಲೆಯ ಬಿಸಿ ಸೂರ್ಯನ ಸುಡುಬಿಸಿಲಿನೊಂದಿಗೆ ಸೇರಿಕೊಂಡು, ಸಂಜೆಯ ಸೆಕೆ ಸಹಿಸಲು ಅಸಾಧ್ಯವಾಯಿತು. ಹಠಾತ್ತನೆ ಗುಂಡಿನ ಸಪ್ಪಳ ಕೇಳಿಸಿತು. ಪೊಲೀಸರು ಬರುವುದರೊಳಗಾಗಿಯೇ ಇಡೀ ರಸ್ತೆ ನಿರ್ಜನವಾಯಿತು.. ಒಬ್ಬನೇ ಒಬ್ಬ ವ್ಯಕ್ತಿಯ ಹೊರತಾಗಿ, ರಸ್ತೆಯ ಆಚೆಯ ತುದಿಯಲ್ಲಿ ಒಂದು ಮನುಷ್ಯಾಕೃತಿ ಬಿರಬಿರನೆ ನಡೆಯುತ್ತ ಕ್ರಮೇಣ ತನ್ನ ವೇಗವನ್ನು ಜೋರು ಮಾಡಿತು. ಪೊಲೀಸರು ಸೀಟಿ ಊದುತ್ತ ಅವನೆಡೆಗೆ ಓಡಿದರು. ಅಲ್ಲಲ್ಲಿ ಮೇಲೇಳುತ್ತಿದ್ದ ಹೊಗೆಯ ಒಳಗೆ ಒಮ್ಮಿಮ್ಮೆ ಕಾಣಿಸಿಕೊಳ್ಳುತ್ತ ಮತ್ತೊಮ್ಮೆ ಮರೆಯಾಗುತ್ತ, ಅವನು ಭೂತದಂತೆ ಓಡಲಾರಂಭಿಸಿದನು. ಸ್ವಲ್ಪ ಮುಂದೆ ಹೋದ ಮೇಲೆ ಸ್ಪಷ್ಟವಾಗಿ ಕಾಣಿಸಿದನು; ಅವನೊಬ್ಬ ಕಾಶ್ಮೀರಿ ಸುಗ್ಗಿ ಆಳು. ಕೆಲಸ ಹುಡುಕಿಕೊಂಡು ಬೆಟ್ಟದಿಂದ ಬಯಲು ಪ್ರದೇಶಕ್ಕೆ ಬಂದಿದ್ದ ಸಾವಿರಾರು ಕಾಶ್ಮೀರಿ ಆಳುಗಳ ಪೈಕಿ ಒಬ್ಬ. ಅವನ ಬೆನ್ನ ಮೇಲೆ ಒಂದು ದೊಡ್ಡ ಚೀಲವಿತ್ತು. ಪೊಲೀಸರು ಇನ್ನೂ ಜೋರಾಗಿ ಸೀಟಿ ಊದಿದರು. ಆದರೂ ಅವನು ನಿಲ್ಲಲಿಲ್ಲ. ತಾನು ಹೊತ್ತೊಯ್ಯುತ್ತಿದ್ದ ಆ ಚೀಲ ಹಕ್ಕಿಯ ಗರಿಗಿಂತಲೂ ಹಗುರವೇನೋ ಎಂಬಂತೆ ಓಡುತ್ತಲೇ ಇದ್ದನು. ಓಡಿ ಓಡಿ ಪೊಲೀಸರಿಗೆ ದಣಿವಾಯಿತು. ಏದುಸಿರು ಬಿಡುತ್ತಿದ್ದ ಅವರು, ಸೀಟಿ ಊದಲು ತ್ರಾಣವಿಲ್ಲದಂತಾದರು. ಪರಿಣಾಮವಾಗಿ, ಊದಿದ ಸೀಟಿ ಗೊಗ್ಗರು ದನಿ ಹೊರಡಿಸಹತ್ತಿತ್ತು. ಇನ್ನು ನಿರ್ವಾಹವಿಲ್ಲದೆ ಅವರಲ್ಲಿಯ ಒಬ್ಬ ತನ್ನ ರಿವಾಲ್ವರ್ ತೆಗೆದು ಗುಂಡು ಹಾರಿಸಿದನು. ಅದು ನೇರವಾಗಿ ಆ ಕಾಶ್ಮೀರಿ ಕೂಲಿ ಆಳಿನ ಕಾಲಿಗೆ ತಗುಲಿತು. ಬೆನ್ನಿನ ಮೇಲಿದ್ದ ಚೀಲ ದೊಪ್ಪನೆ ನೆಲಕ್ಕೆ ಬಿದ್ದಿತು-ಅವನು ನಿಂತು ನೋಡಿಕೊಂಡನು. ಕಾಲಿನ ಗಾಯದಿಂದ ರಕ್ತ ಚಿಮ್ಮುತ್ತಿತ್ತು. ಆದರೂ ಅದಕ್ಕೆ ಗಮನಕೊಡದೆ ಒಂದೇ ಏಟಿಗೆ ಚೀಲ ಎತ್ತಿಕೊಂಡು ಕುಕ್ಕರಗಾಲಿನಲ್ಲಿ ಕುಣಿಯುತ್ತ ಓಡತೊಡಗಿದನು.
‘ನರಕಾ ಸೇರ್ಲಿ ಬಿಡು’, ಎಂದ ಪೊಲೀಸರು ಅವನ ಬೆನ್ನಟ್ಟುವುದನ್ನು ಬಿಟ್ಟರು. ಆದರೆ ಅದೇ ಹೊತ್ತಿಗೆ ಅವನು ತತ್ತರಿಸುತ್ತ, ಮುದ್ದೆಯಾಗಿ ನೆಲಕ್ಕೆ ಬಿದ್ದನು-ಹೌದು ಹೊತ್ತೊಯ್ಯುತ್ತಿದ್ದ. ಚೀಲವನ್ನು ತನ್ನ ಮೈಮೇಲೆ ಹಾಕಿಕೊಂಡು ಬಿದ್ದುಬಿಟ್ಟನು.
ಪೊಲೀಸರು ಆ ವ್ಯಕ್ತಿ ಮತ್ತು ಚೀಲ-ಎರಡನ್ನೂ ಠಾಣೆಗೆ ಎಳೆದು ತಂದರು. ದಾರಿಯುದ್ದಕ್ಕೂ ಅವನು ಪರಿಪರಿಯಾಗಿ ಬೇಡಿಕೊಂಡನು. ಆದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಎಷ್ಟೇ ಗೋಳಿಟ್ಟರೂ ಪೊಲೀಸರ ಮನ ಕರಗಲಿಲ್ಲ. ‘ಪರಮ ಸಾಹೇಬರೇ, ಯಾಕೆ ಈ ಬಡವನನ್ನ ಹಿಡುಕೊಂಡು ಹೋಗ್ತಾ ಇದ್ದೀರಿ? ನಾನು ತೆಗೆದುಕೊಂಡು ಹೋಗ್ತಾ ಇದ್ದದ್ದು ಒಂದು ಪುಟ್ಟ ಅಕ್ಕಿ ಚೀಲ ಅಷ್ಟೇ. ಸಾಹೇಬರ್ರೆ ಈ ಬಡಮನುಷ್ಯನಿಗೆ ಯಾಕೆ ಗುಂಡಿಕ್ಕಿದ್ದೀರಿ? ನಾನು ಮಾಡಿದ್ದಾದರೂ...’
ಠಾಣೆಯಲ್ಲಿಯೂ ಕೂಡ ತನ್ನ ಅಪರಾಧ ಮನ್ನಿಸುವಂತೆ ವಿಧವಿಧವಾಗಿ ಅಂಗಲಾಚಿದ. ತಾನೊಬ್ಬ ನಿರಪರಾ ಎಂದು ಸಾಬೀತುಗೊಳಿಸಲು ಹಲವು ಹಾದಿ ಹುಡುಕಿದ: ‘ಸಾಹೇಬರೆ. ಉಳಿದ ಜನ ಏನೇನೋ ದೊಡ್ಡ ದೊಡ್ಡ ಸಾಮಾನು ಕದಿತಾಯಿದ್ದಾರೆ. ನಾನು ಬಡವ, ಹೊಟ್ಟೆಗಾಗಿ ಒಂದು ಚೀಲ ಅಕ್ಕಿ ಮಾತ್ರ ಒಯ್ಯುತ್ತಿದ್ದೇನೆ. ಈ ಬಡಪಾಯಿ... ಕೇವಲ, ಹೌದು, ಅಕ್ಕಿ ಮಾತ್ರ... ತಿನ್ನುವುದಕ್ಕೋಸ್ಕರ..’
ಕೊನೆಗೆ ಏನೂ ಸಾಧ್ಯವಿಲ್ಲವೆಂದು ಗೊತ್ತಾದ ಮೇಲೆ ಅವನು ಬಿಡುಗಡೆಯ ಆಸೆ ಬಿಟ್ಟುಬಿಟ್ಟನು. ಮುಖವೆಲ್ಲ ಬೆವು ಹೋಗಿದ್ದ ಅವನು ತನ್ನ ತಲೆಯ ಮೇಲಿನ ಟೋಪಿ, ತೆಗೆದು ಹಣೆ ಒರೆಸಿಕೊಂಡನು. ಆಸೆಗಣ್ಣಿನಿಂದ ಅಕ್ಕಿಯ ಚೀಲದ ಕಡೆಗೆ ನೋಡುತ್ತ, ತನ್ನ ಎರಡೂ ಕೈಗಳನ್ನು ಚಾಚಿ ಅತ್ಯಂತ ದೈನ್ಯದಿಂದ ಅಂಗಲಾಚಿದನು: ‘ಇನ್‌ಸ್ಪೆಕ್ಟ್ ಸಾಹೇಬರೆ, ಸರಿ ಬೇಕಾದರೆ, ಆ ಅಕ್ಕಿಯನ್ನು ನೀವೇ ಇಟ್ಕೊಳ್ರಿ, ನಾು ಹೊಟ್ಟೆಗಿಲ್ಲದ ಬಡಪಾಯಿ ಅದನ್ನು, ಆ ಅಕ್ಕಿ ಚೀಲವನ್ನು ಇಲ್ಲಿಯವರೆಗೆ ಹೊತ್ತು ತಂದುದ್ದಕ್ಕಾಗಿ ಕೂಲಿಯನ್ನಾದರೂ ಕೊಡುವಿರಾ... ಕೇವಲ ನಾಲ್ಕಾಣೆ!’