ನೀರಿನಲ್ಲಿ ಬೆಂಕಿ
ಬೆಂಗಳೂರು ಬೆಂದಕಾಳೂರು ಆಗುವುದಕ್ಕಾದರೂ ಒಂದಷ್ಟು ಕಾಳು ಮೊಳೆಯಬೇಕು. ಆದರೆ ಅಷ್ಟೂ ವ್ಯವಧಾನ ಗಲಾಟೆಕೋರರಿಗಿರಲಿಲ್ಲ. ಈ ಬೆಂಕಿಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಬೇಳೆಯನ್ನು ಬೇಯಿಸಿಕೊಂಡವು ಎಂಬುದು ಸ್ಪಷ್ಟ. ಈ ಗಲಾಟೆಯಿಂದಾಗಿ ನ್ಯಾಯಾಲಯದ ತೀರ್ಪು ಬದಲಾಗಲಿಲ್ಲ; ಬದಲಾಗುವುದೂ ಇಲ್ಲ. ಕಾವೇರಿಯ ನೀರು ಇನ್ನಷ್ಟು ಬರಿದಾಗುವುದೇ ಹೊರತು ಹೊಸ ಬರವಿಗೆ ಕಾಲ ಪಕ್ವವಾಗಿಲ್ಲ. ಅಲ್ಲಿಯ ವರೆಗೆ ಇನ್ನೆಷ್ಟು ಹಿಂಸೆ ನಡೆಯಬೇಕಾಗಿದೆಯೋ?
ನೀರಿಗೆ ಬೆಂಕಿ ಬಿದ್ದರೆ ಹೇಗಿರುತ್ತದೆ? ಒಂದೋ ಬೆಂಕಿ ನಂದಬೇಕು; ಇಲ್ಲವೇ ನೀರು ಕುದಿಯಬೇಕು; ಆವಿಯಾಗಬೇಕು. ಬೆಂಕಿ ಮತ್ತು ನೀರು ಎಲ್ಲ ತತ್ವಶಾಸ್ತ್ರಗಳಲ್ಲಿ ದೈವತ್ವದ ಉಡುಗೊರೆಯಾಗಿಯೇ ಉಲ್ಲೇಖವಾಗಿದೆ. ಬೆಂಕಿಗೆ ಉಪಾಧಿ ಬೇಕು. ಅದಕ್ಕೆ ಸ್ವತಂತ್ರ ಅಸ್ತಿತ್ವವಿಲ್ಲ. ನೀರಾದರೋ ತನ್ನನ್ನು ತಾನು ತೋರಿಸಿಕೊಳ್ಳುತ್ತದೆ. ಬೆಂಕಿಗೆ ಅತ್ತಿತ್ತ ಒಲಿಯಲು, ಕೊನೆಗೆ ಉಳಿಯಲೂ ಗಾಳಿಯ ಸಹಕಾರ ಬೇಕು. ನೀರಿಗೆ ಹರಿಯುವ ಗುಣ. ಹರಿಯಲು ನೆಲ, ನೆಲೆ ಬೇಕು. ಆದರೂ ಅದಕ್ಕೆ ಶಾಶ್ವತ ನೆಲೆಯಿಲ್ಲ. ಅದಕ್ಕೇ ಹೇಳಿದ್ದು ಒಂದೇ ನೀರಿನಲ್ಲಿ ಎರಡು ಬಾರಿ ಇಳಿಯಲು ಸಾಧ್ಯವಿಲ್ಲವೆಂದು. ಅನೇಕ ಸಂಗತಿಗಳು ಮುಗಿಯುವಾಗ ನೀರಿನ ಋಣ ಮುಗಿಯಿತು ಎನ್ನುತ್ತೇವೆ. ಮಣ್ಣಲ್ಲಿ ಮಣ್ಣಾಗಿ ಹೋಗುವ ಮೊದಲು, ಪಂಚಭೂತಗಳಲ್ಲಿ ಜಡ ದೇಹ ಲೀನವಾಗುವ ಮೊದಲು ಬಾಯಿಗೆ ನೀರು ಬಿಡುವ ಪದ್ಧತಿ ಬಹುತೇಕ ಎಲ್ಲ ಜನಾಂಗಗಳಲ್ಲೂ ಇವೆ. ನಾನು ಹೇಳಿದ್ದು ಅಷ್ಟೂ ಸರಿಯೆಂದಲ್ಲ, ಅಥವಾ ಇಷ್ಟೇ ಎಂದಲ್ಲ, ಆದರೂ ಹೀಗೆ ಹತ್ತಾರು ಬಗೆಯಲ್ಲಿ ಬದುಕನ್ನು ಆಕ್ರಮಿಸಿಕೊಳ್ಳುವ ನೀರು ಬದುಕಿನ ವಿಕಾರಗಳಿಗೆ ಸಾಕ್ಷಿಯಾದರೆ, ಪ್ರೇರಣೆಯಾದರೆ ಹೇಗೆ?
ಮೊನ್ನೆ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಮತ್ತು ಕರ್ನಾಟಕದ ಇನ್ನು ಹಲವೆಡೆಗಳಲ್ಲಿ ಕಾವೇರಿ ನದಿ ನೀರು ಹಂಚಿಕೆಯ ಹೆಸರಿನಲ್ಲಿ ನಡೆದ ಬಂದ್, ಹಿಂಸೆ ಇವನ್ನು ಗಮನಿಸಿದಾಗ ರಕ್ತದಲ್ಲೂ ನೀರಿದೆಯಲ್ಲವೇ ಎಂದು ಅನ್ನಿಸಿತು. ಇವುಗಳ ಕುರಿತು ಒಂದಿಷ್ಟು ಗಮನವನ್ನು ಹರಿಸಿದಾಗ ಈ ಜಲತತ್ವವೆಲ್ಲ ಯಾರಿಗೆ ಬೇಕಾಗಿದೆ ಅಂತ ಅನ್ನಿಸಿದ್ದು ಸರಿಯೇ ತಪ್ಪೇ ಗೊತ್ತಿಲ್ಲ. ದೇಶದೆಲ್ಲೆಡೆ ನದಿಗಳಿವೆ. ಅವು ಅನೇಕ ರಾಜ್ಯಗಳನ್ನು ದಾಟಿ ತಲುಪಬೇಕಾದಲ್ಲಿಗೆ- ಅದು ಹಿಂದೂ ಮಹಾ ಸಾಗರವಿರಬಹುದು, ಅರಬ್ಬೀ ಸಮುದ್ರವಿರಬಹುದು-ಈ ಎರಡರ ನಡುವೆ ಒಂದನ್ನು ಸೇರುತ್ತವೆ. ಸರಸ್ವತಿಯೆಂಬ ನದಿ ಬತ್ತಿಹೋಗಿರಬೇಕು; ಅದನ್ನು ಗುಪ್ತಗಾಮಿನಿಯೆನ್ನುತ್ತೇವೆ. ಸಿಂಧೂ ನದಿ, ಬ್ರಹ್ಮಪುತ್ರ ಇವು ದೇಶದ ಎಲ್ಲೆಗಳನ್ನೂ ಮೀರಿ ಹರಿಯುತ್ತವೆ. (ದೇಶದೇಶಗಳ ನಡುವೆ ನದಿನೀರಿನ ವಿವಾದ ನಡೆಯುವುದುಂಟು. ಆದರೂ ಅವು ಒಂದು ಗೊತ್ತಾದ ನೆಲೆಯಲ್ಲಿ ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುತ್ತವೆ.) ಎಲ್ಲ ನದಿಗಳಿಗೆ ಒಂದಲ್ಲ ಒಂದು ಕಾರಣಕ್ಕೆ ಪಾವಿತ್ರ್ಯದ ನಾಮಕರಣವಾಗಿದೆ. ನಂಬುವವರು ನಂಬಿ; ನಂಬದವರು ಬಿಡಿ. ಸರ್ವಧರ್ಮ ಸಮಭಾವ. ನದಿಗಳ ತಟದಲ್ಲಿ ಸಂಸ್ಕೃತಿ ಸೃಷ್ಟಿಯಾಗಿದೆ. ನೀರಿನ ಅಗತ್ಯಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಡ. ಹಿಂದೆಲ್ಲ ಯಾವುದೇ ಜಾಗ ಖರೀದಿಸಬೇಕಾದರೆ ಅಲ್ಲಿರುವ ನೀರಿನ ಸೆಲೆಯನ್ನು ಮುಖ್ಯ ಲಕ್ಷಣವಾಗಿ ನೋಡಲಾಗುತ್ತಿತ್ತಂತೆ. ಇಂದು ಈ ದೇಶದಲ್ಲಿರುವ ಅನೇಕ ಧರ್ಮಕ್ಷೇತ್ರಗಳು ನೀರಿನ ಬಳಿಯೇ ಇವೆ. ನದಿಗಳು ಯಾವ ದೇವಸ್ಥಾನಗಳನ್ನೂ ಸುತ್ತುವರಿಯುವುದಿಲ್ಲ; ದೇವರೇ ನದಿಗಳ ಸಮೀಪ ವಾಸಮಾಡುತ್ತಾನೆ.
ಆದರೆ ಭಾರತದಂತಹ ದೇಶದಲ್ಲಿ ಎರಡು ಬಗೆಯ ನೀರಿನ ಸಮಸ್ಯೆಗಳಿವೆ: 1. ನೀರಿನ ಅಭಾವ. 2. ಇರುವ ಅಷ್ಟೋ ಇಷ್ಟೋ ನೀರಿಗೆ ಜಗಳ. ಕೇಂದ್ರ-ರಾಜ್ಯ ಒಕ್ಕೂಟ ವ್ಯವಸ್ಥೆಯಲ್ಲಿ ಇವು ಹೇಗೆ ಪರಿಹಾರವಾಗುತ್ತವೋ ಗೊತ್ತಿಲ್ಲ. ಆದರೆ ಈ ಸಮಸ್ಯೆಗಳು ಜೀವಂತವಾಗಿರುವುದು ಈ ದೇಶದ ವೈವಿಧ್ಯತೆಯಲ್ಲಿ ಏಕತೆಯ ಬದಲಿಗೆ ಏಕತೆಯಲ್ಲಿ ಭಿನ್ನತೆಯನ್ನು ತೋರಿಸುತ್ತದೆಯಲ್ಲವೇ?
ಸದ್ಯ ನಮ್ಮನ್ನು ನೀರಿನಂತೆ ಕಾಡಿದ ಕಾವೇರಿ ಜಲವಿವಾದವನ್ನು ಗಮನಿಸೋಣ: ತಲಕಾವೇರಿಯಲ್ಲಿ ಹುಟ್ಟಿದ ಕಾವೇರಿ ಕರ್ನಾಟಕದಲ್ಲಿ ಮಧ್ಯಾಂತರದ ವರೆಗೆ ಹರಿದು ಅಲ್ಲಿಂದ ತಮಿಳುನಾಡಿಗೆ ಪಯಣ ಬೆಳೆಸಿ ಪೂಂಪುಹಾರ್‌ನಲ್ಲಿ ಕೊನೆಯಾಗುತ್ತದೆ. ಈ ಜೀವನದಿಯನ್ನು ತಾಯಿಯಾಗಿ ಕಾಣುವುದು ಭಾವುಕ ಧಾರ್ಮಿಕತೆಯಾಗಿದೆ. ನೀರಿನ ಜೀವಗುಣವೇ ಈ ಧಾರ್ಮಿಕತೆಗೆ ಕಾರಣವಿರಬಹುದು. ಒಮ್ಮೆ ಈ ಧರ್ಮಶ್ರದ್ಧೆಗೆ ಒಳಗಾದೆವೆಂದರೆ ಅನೇಕ ಮಹಾತ್ಮೆಗಳು ತೆರೆದುಕೊಳ್ಳುತ್ತವೆ. ಆಗ ನೀರು ಬರಿಯ h2o ಆಗಿ ಉಳಿಯುವುದಿಲ್ಲ. ತೀರ್ಥವಾಗುತ್ತದೆ. ತೀರ್ಥಕ್ಕೆ ಮಾಲಿನ್ಯವಿಲ್ಲ, ಅಪನಂಬಿಕೆಯಿಲ್ಲ, ಇಷ್ಟೇ ಬೇಕೆಂದಾಗಲಿ ಇಷ್ಟೇ ಸಾಕೆಂದಾಗಲಿ ಕಟ್ಟುನಿಟ್ಟಿಲ್ಲ; ಕೊಡುವವನಿಗೂ ಪಡೆಯುವವನಿಗೂ ಸಮಾನ ಗೌರವ, ಸಮಾನ ಪೂಜ್ಯತೆ. ನಾನೊಮ್ಮೆ ಅಯೋಧ್ಯೆಗೆ ಹೋಗುವಾಗ ತಲಕಾವೇರಿಯಿಂದ ಒಂದು ಬಾಟಲ್ ಕಾವೇರಿ ನೀರನ್ನು ಒಯ್ದಿದ್ದೆ. ನನ್ನ ಉದ್ದೇಶವಿದ್ದದ್ದು ಅದನ್ನು ಸರಯೂ ನದಿಗೆ ಚೆಲ್ಲಿ ಅಲ್ಲಿಂದ ಒಂದು ಬಾಟಲ್ ಸರಯೂ ನೀರನ್ನು ಮರಳಿ ತರುವುದಕ್ಕೆ. ನಾನು ಸರಯೂ ನದಿಯಲ್ಲಿ ಮುಳುಗಿ ಮೇಲೆ ಬಂದು ದಡದಲ್ಲಿದ್ದ ಕಾವೇರಿ ನೀರನ್ನು ಇನ್ನೇನು ಅಲ್ಲಿ ಸುರಿಯಬೇಕು ಅಷ್ಟರಲ್ಲಿ ಯಾರೋ ಒಬ್ಬ ಅದೇನು ಎಂದು ಕೇಳಿದ. ನಾನು ಅದು ಕಾವೇರಿ ನದಿಯ ನೀರು ಎಂದಾಕ್ಷಣ ಆತ ತನ್ನ ಸುತ್ತಮುತ್ತಲಿನವರಿಗೆಲ್ಲ ಹೇಳಿ ಅರ್ಧ ನಿಮಿಷಕ್ಕೆ ಅಲ್ಲಿ ಸುಮಾರು ಐವತ್ತು ಜನರಿಗೂ ಹೆಚ್ಚು ಕ್ಯೂವಿನಲ್ಲಿ ನಿಂತು ನನ್ನಿಂದ ಕಾವೇರಿ ತೀರ್ಥ ಪಡೆದರು. (ನಾನು ಬೇಡವೆನ್ನದಿದ್ದರೆ ಕಾಣಿಕೆಯೂ ಬೀಳುತ್ತಿತ್ತು!)
ಇಂತಹ ಕಾವೇರಿ ಇಂದು ಸದಾ ವಿವಾದದ ಕೇಂದ್ರಬಿಂದುವಾಗಿದೆ. ನದಿ ನೀರಿಗೆ ದೊಣ್ಣೆ ನಾಯಕನ ಅಪ್ಪಣೆಯೇ ಎಂದು ಪ್ರಶ್ನಿಸಿದರೆ ಸರಕಾರಗಳು ಸಿಟ್ಟಿಗೇಳಬಹುದು. ಪ್ರಾಯಃ ಹಿಂದೆ ನದಿ ನೀರಿನ ಬಳಕೆಗೆ ಯಾವುದೇ ನಿಯಂತ್ರಣವಿಲ್ಲದಾಗ ವಿವಾದಗಳು ಅಲ್ಲಿ ಇಲ್ಲಿ ಎದ್ದಿರಬಹುದು. ಆದರೆ ಅವು ಆಸ್ತಿ-ಮಾನ-ಪ್ರಾಣ ಹಾನಿಗೆ ಕಾರಣವಾಗಿರಲಿಲ್ಲ. ಆದರೆ ಒಮ್ಮೆ ನಮ್ಮ ನಾಗರಿಕತೆ ಸಂಸ್ಕೃತಿಯನ್ನು ನುಂಗಿ ದಾಪುಗಾಲನ್ನು ಇಡಲು ಆರಂಭಿಸಿದಾಗ ನದಿ ಅನ್ನುವುದು ಹೊರನೋಟಕ್ಕೆ ಮಾತ್ರ ಪ್ರಕೃತಿಯಾಗಿ, ಪವಿತ್ರವಾಗಿ ಉಳಿಯಿತೇ ಹೊರತು ಆಂತರ್ಯದಲ್ಲಿ ಅದೂ ಒಂದು ಬಳಕೆಯ ಸರಕಾಯಿತು. ಪ್ರಾಯಃ ಕಾವೇರಿಯ ಈ ಭೌತಿಕ ಜೀವನವು ಆಗಿನ ಮೈಸೂರು ರಾಜ್ಯದಲ್ಲಿ ಆರಂಭವಾಯಿತು. ಅಣೆಕಟ್ಟುಗಳನ್ನು ಕಟ್ಟುವಾಗ ಸಹಜವಾಗಿಯೇ ಇತರ ರಾಜ್ಯಗಳು ತಮ್ಮ ಪಾಲನ್ನು ಕೇಳಲಾರಂಭಿಸಿದವು. 1924ರಲ್ಲಿ ಆದ ಒಂದು ಒಪ್ಪಂದವು ಕಾವೇರಿ ನದಿಯನ್ನು ಈ ಸುಮಾರು ಒಂದು ಶತಮಾನದ ಅವಧಿಯಲ್ಲಿ ಬೆಳೆಗೆ, ಫಲವತ್ತತೆಗೆ ಎಷ್ಟು ಸಹಕಾರಿಯಾಯಿತೋ ಅದನ್ನೂ ಮೀರಿಸುವಂತೆ ಹಿಂಸೆಗೆ, ವಿವಾದಕ್ಕೆ ಸಹಕಾರಿಯಾಗಿಸಿತು. ನದಿಯಲ್ಲಿ ಎಷ್ಟು ನೀರು ಹರಿದೀತು ಮತ್ತು ಅದನ್ನು ಹೇಗೆ ಬಳಸಬೇಕು ಎಂಬುದಕ್ಕೆ ಅವರವರು ಅವರವರಿಗೆ ಬೇಕಾದಂತೆ ವ್ಯಾಖ್ಯಾನಿಸಿದರು. ಬೆಂಗಳೂರು ಹೇಗೆ ಕರ್ನಾಟಕದ ಹೃದಯಭಾಗವಾಗುವಂತೆ ಬೆಳೆದು ಎಲ್ಲ ನೀರನ್ನು ತಾನೇ ಬಳಸಬೇಕು ಎಂಬ ಕೃಪಣತ್ವಕ್ಕೆ ಬಲಿಯಾಯಿತೆಂಬ ಅಂಶವನ್ನು ಯಾರೂ ಪ್ರಶ್ನಿಸುತ್ತಿಲ್ಲ. ಇಂದು ಕೊಡಗಿನಲ್ಲಿ ಮಳೆ ಬಂದರೆ ಮಂಡ್ಯ, ಬೆಂಗಳೂರಿನ ಜನ ಕರಗಿ ನೀರಾದರೆ ಅದಕ್ಕೆ ಕಾರಣ ಕೊಡಗು ಹಸಿರಾಯಿತೆಂದಲ್ಲ; ನೆಲ ತಂಪಾಯಿತೆಂದಲ್ಲ; ಬದಲಾಗಿ ಮಂಡ್ಯದ ಜನ ತಮ್ಮ ಬೆಳೆಗೆ ನೆರವಾಗಿ ಕಿಸೆ ಭರ್ತಿಯಾಯಿತೆಂಬ, ಬೆಂಗಳೂರಿನ ಜನ ತಮ್ಮ ದೈನಂದಿನ ಆವಶ್ಯಕತೆಗೆ ನೀರಾಯಿತೆಂಬ ಕಾರಣಕ್ಕೆ. ‘ಒಳಮನೆಯಲಿ ನೀರಾಯಿತು’ ಎಂಬ ಸುದ್ದಿಗೆ ರಾಯರು ಸಂತೋಷಪಟ್ಟಂತೆ.
ತಮಿಳುನಾಡು ತನ್ನ ಹಕ್ಕನ್ನು ಸದಾ ಮಂಡಿಸಿದೆ. ಜೊತೆಗೇ ಪಾಂಡಿಚೇರಿ, ಕೇರಳ ಕೂಡಾ ತಮ್ಮ ಪಾಲನ್ನು ಪಡೆದಿವೆ. ಇವಕ್ಕೆ ಕಾವೇರಿ ನ್ಯಾಯಾಧಿಕರಣ ಮಂಡಳಿ ನೀಡಿದ ಐತೀರ್ಪೇ ಆಧಾರ. ಈ ತೀರ್ಪನ್ನು ಬಹುತೇಕ ಕನ್ನಡಿಗರು ಓದಿಲ್ಲ. ಇಂದು ಏನನ್ನು ಮಾತನಾಡಬೇಕಾದರೂ ಓದಿಯೇ ತಿಳಿಯಬೇಕೆಂಬ ಒತ್ತಾಯವಿಲ್ಲ. ಯಾರು ಯಾವುದರ ಬಗೆಗೂ ಮಾತನಾಡಬಹುದು. (ನಾನು ಈ ತೀರ್ಪನ್ನು ಓದಿದ್ದೇನೆ; ಅಷ್ಟು ಮಾತ್ರವಲ್ಲ, ಈ ಐತೀರ್ಪನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮೂಲಕ ಕನ್ನಡಕ್ಕೆ ಅನುವಾದಿಸಿದ ಐವರ ತಂಡದಲ್ಲಿ ನಾನಿದ್ದೆ.) ಈ ವಿವಾದದ ಐತೀರ್ಪು ಬರುವ ವೇಳೆಗೆ ಕರ್ನಾಟಕ ಸರಕಾರವು ಸುಮಾರು ರೂ. 130 ಕೋಟಿಗೂ ಅಧಿಕ ಹಣವನ್ನು ವ್ಯಯಿಸಿತ್ತು. ಸರಕಾರದ ನೀಲಿಕಣ್ಣಿನ ಹುಡುಗರೆಲ್ಲಾ ಈ ಕಾನೂನಿನ ತಂಡದಲ್ಲಿದ್ದು ವಾದಿಸಲು ನೆರವಾಗಿದ್ದರು. ಪ್ರಾಯಃ ಕಾವೇರಿ ನ್ಯಾಯಾಧಿಕರಣದ ಐತೀರ್ಪನ್ನು ಓದಿದರೆ ಅದರಲ್ಲಿ ಏನೂ ದೋಷವಿಲ್ಲವೆಂದು ಅನ್ನಿಸುತ್ತದೆ. ನನ್ನ ಹಿರಿಯ ವಕೀಲರೊಬ್ಬರು ಹೇಳುತ್ತಿದ್ದರು: ಇದೊಂದು ಮಾಮೂಲು ಹಕ್ಕಿನ (Easementary right) ಪ್ರಕರಣ. ಸಿವಿಲ್ ಪ್ರಕರಣಗಳನ್ನು ನಡೆಸುವ ಯಾವನೇ ಒಬ್ಬ ಯೋಗ್ಯ ವಕೀಲ ಇದನ್ನು ನಿರ್ವಹಿಸಬಹುದು; ಇಷ್ಟೆಲ್ಲ ಮಂದಿಯ ಅಗತ್ಯವಿತ್ತೇ? ಇರಬಹುದು; ಏಕೆಂದರೆ ಇಷ್ಟೊಂದು ಹಣವಂತೂ ವೆಚ್ಚವಾಯಿತಲ್ಲ!
ಒಂದೇ ಒಂದು ಲೋಪವೆಂದರೆ- ನೀರಿಲ್ಲದಿದ್ದರೆ ಏನು ಪರಿಹಾರ ಎಂಬ ಬಗ್ಗೆ ಸರಿಯಾದ ಉತ್ತರವಾಗಲಿ ಸಮರ್ಥನೆಯಾಗಲಿ ಈ ಐತೀರ್ಪಿನಲ್ಲಿಲ್ಲ. ಆ ಕುರಿತು ವಿವಾದಾಂಶವೂ ರೂಪಿತವಾಗಿರಲಿಲ್ಲ. ಆದ್ದರಿಂದ ವಾದ ಆ ಕುರಿತು ನಡೆಯಲೇ ಇಲ್ಲ. ದಿನಕಳೆದಂತೆ ಮೂಲದಲ್ಲೇ ನೀರಿನ ಸೆಲೆ ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ನದಿಯೇ ಬತ್ತಿಹೋದರೆ ಈ ಐತೀರ್ಪು ಏನಾಗುತ್ತದೆ? ಅಥವಾ ಮಳೆಗಾಲ ಮಾತ್ರ ನೀರು ಹರಿದರೆ ಅದರ ಪಾಲು ಯಾರಿಗೆ? ಇದ್ದರೆ ಪಾಲು; ಇಲ್ಲದಿದ್ದರೆ ಪಾಲು ಮಾಡುವುದಾದರೂ ಏನನ್ನು?
ಮೊನ್ನೆ ಕರ್ನಾಟಕ ಬಂದ್ ನಡೆಯಿತು. ಕರಾವಳಿ ಮತ್ತು ಕೊಡಗು ಈ ಬಂದನ್ನು ಬೆಂಬಲಿಸಿಲ್ಲ. ಸರಿಯೋ ತಪ್ಪೋ ವಿವೇಚಿಸಬೇಕು. ಏಕೆಂದರೆ ಬೇರೆ ಸಂದರ್ಭದಲ್ಲಿ ಅವೂ ಬಂದ್ ಮಾಡುತ್ತವೆ! ಸರ್ವೋಚ್ಚ ನ್ಯಾಯಾಲಯದ ಆದೇಶವಾದ ನಂತರ ಬೆಂಗಳೂರು ಬೆಂಕಿಯ ಉಂಡೆಯಾಯಿತು. ಸುಮಾರು 25 ಸಾವಿರ ಕೋಟಿ ರೂ. ನಷ್ಟವಾಯಿತಂತೆ. ಯಾರಿಗೆ ನಷ್ಟ? ಸಿಟ್ಟಿನಲ್ಲಿ ನಮ್ಮ ಕಾಲಿಗೆ ನಾವೇ ಕಲ್ಲು ಹಾಕಿಕೊಂಡಂತೆ ಅನುಭವಿಸಿದೆವು. ನಾರಿಮನ್ ಅವರಂತಹ ಶ್ರೇಷ್ಠ ನ್ಯಾಯವಾದಿಯನ್ನು ಏಕವಚನದಲ್ಲಿ ಬಯ್ಯುವಾಗ ಕಾವೇರಿಗೂ ನೋವಾಗಿರಬೇಕು. ನಾವು ಇಲ್ಲಿ ತಮಿಳರನ್ನು ಹಿಂಸಿಸಿದರೆ, ಅವರ ಆಸ್ತಿ-ಪಾಸ್ತಿಗಳನ್ನು ಹಾನಿ ಮಾಡಿದರೆ ಅದಕ್ಕೆ ಸರಿಯಾದ ಪ್ರತಿಕ್ರಿಯೆಯನ್ನು ನಿರೀಕ್ಷಿಸಲೇ ಬೇಕು ಎಂಬ ನ್ಯೂಟನ್‌ನ ನಿಯಮ ಅನ್ವಯಿಸುವುದಿಲ್ಲವೇ? ಬೆಂಗಳೂರು ಬೆಂದಕಾಳೂರು ಆಗುವುದಕ್ಕಾದರೂ ಒಂದಷ್ಟು ಕಾಳು ಮೊಳೆಯಬೇಕು. ಆದರೆ ಅಷ್ಟೂ ವ್ಯವಧಾನ ಗಲಾಟೆಕೋರರಿಗಿರಲಿಲ್ಲ. ಈ ಬೆಂಕಿಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಬೇಳೆಯನ್ನು ಬೇಯಿಸಿಕೊಂಡವು ಎಂಬುದು ಸ್ಪಷ್ಟ. ಈ ಗಲಾಟೆಯಿಂದಾಗಿ ನ್ಯಾಯಾಲಯದ ತೀರ್ಪು ಬದಲಾಗಲಿಲ್ಲ; ಬದಲಾಗುವುದೂ ಇಲ್ಲ. ಕಾವೇರಿಯ ನೀರು ಇನ್ನಷ್ಟು ಬರಿದಾಗುವುದೇ ಹೊರತು ಹೊಸ ಬರವಿಗೆ ಕಾಲ ಪಕ್ವವಾಗಿಲ್ಲ. ಅಲ್ಲಿಯ ವರೆಗೆ ಇನ್ನೆಷ್ಟು ಹಿಂಸೆ ನಡೆಯಬೇಕಾಗಿದೆಯೋ?