ಈ ವಿವಾದ ಬಗೆಹರಿಯುವುದು ಹೇಗೆ?
ಕಾವೇರಿ ವಿಷಯದಲ್ಲಿ ಸುಪ್ರೀಂ ಕೋರ್ಟ್ ಸೆಪ್ಟಂಬರ್ 5 ಮತ್ತು 12ರಂದು ನೀಡಿದ ಸಂವೇದನಾಶೂನ್ಯ, ತರ್ಕಹೀನ ಆದೇಶಗಳನ್ನು ನೀಡಿದ ನಂತರ ಅಂತರ ರಾಜ್ಯ ನದಿ ವಿವಾದಗಳನ್ನು ಬಗೆಹರಿಸುವಲ್ಲಿ ನ್ಯಾಯಮಂಡಳಿ ರಚನೆಯಾದ ಮೇಲೆ ಸುಪ್ರೀಂ ಕೋರ್ಟಿನ ಮಧ್ಯಪ್ರವೇಶಕ್ಕೆ ಇರುವ ಸಾಂವಿಧಾನಿಕ ಮಾನ್ಯತೆಗಳ ಬಗ್ಗೆ ಕೆಲವು ಚರ್ಚೆಗಳು ನಡೆಯುತ್ತಿವೆ.ಇದಕ್ಕೆ ಸಂಬಂಧಪಟ್ಟಂತೆ ಹಲವು ಪತ್ರಿಕೆಗಳಲ್ಲಿ ಸಂವಿಧಾನದ ಕಲಮು 262ರ ಪ್ರಕಾರ ಅಂತರರಾಜ್ಯ ನದಿ ನೀರು ವಿವಾದಗಳಲ್ಲಿ ಸುಪ್ರೀಂ ಕೋರ್ಟಿನ ಮಧ್ಯಪ್ರವೇಶ ನಿಷೇಧಗೊಂಡಿದೆ ಎಂದು ವ್ಯಾಖ್ಯಾನಿಸಲಾಗಿದೆ. ಕಾವೇರಿ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ನೀಡಿರುವ ಸೆಪ್ಟಂಬರ್ 5 ಮತ್ತು ಸೆಪ್ಟಂಬರ್ 12ರ ಆದೇಶದಲ್ಲಿ ತರ್ಕವಿಲ್ಲ, ನ್ಯಾಯವೂ ಇಲ್ಲ. ಅದರ ಬಗ್ಗೆ ಎರಡು ಮಾತಿಲ್ಲ. ಹಾಗೆಂದ ಮಾತ್ರಕ್ಕೆ ನದಿನೀರು ಹಂಚಿಕೆಯನ್ನು ಬಗೆಹರಿಸಲು ಈ ದೇಶ ರೂಪಿಸಿರುವ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಒಮ್ಮೆ ನ್ಯಾಯಮಂಡಳಿ ರೂಪುಗೊಂಡ ನಂತರದಲ್ಲಿ ಸುಪ್ರೀಂ ಕೋರ್ಟಿಗೆ ಇನ್ಯಾವುದೇ ಅಧಿಕಾರವಿರುವುದಿಲ್ಲವೆಂಬ ವ್ಯಾಖ್ಯಾನ ಸರಿಯಾದದ್ದೇ? ಮತ್ತು ವಾಸ್ತವವಾದದ್ದೇ? ಈ ವಿಷಯಕ್ಕೆ ಸಂಬಂಧಪಟ್ಟಂತೆ ಮಂಡನೆಯಾಗುತ್ತಿರುವ ಅಭಿಪ್ರಾಯಗಳಲ್ಲಿ ಕೆಲವು ಮಾಹಿತಿ ಕೊರತೆಗಳು ಮತ್ತು ಅರ್ಧ ಸರಿ ಮತ್ತು ಅರ್ಧ ತಪ್ಪು ವ್ಯಾಖ್ಯಾನಗಳು ಆಗುತ್ತಿರುವುದರಿಂದ ಈ ಕೆಲವು ಮಾಹಿತಿಗಳನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ. ವಾಸ್ತವವಾಗಿ 262ರ ಕಲಮು ಸೆಕ್ಷನ್ 2 ಮತ್ತು 1956ರ ಅಂತರರಾಜ್ಯ ನದಿ ವಿವಾದಗಳ ಕಾಯ್ದೆಯು ಒಮ್ಮೆ ವಿವಾದವನ್ನು ಬಗೆಹರಿಸಲು ನ್ಯಾಯಮಂಡಳಿ ರಚನೆಯಾದ ನಂತರ ಆ ವಿವಾದದಲ್ಲಿ ಸುಪ್ರೀಂ ಕೋರ್ಟಿನ ಮಧ್ಯಪ್ರವೇಶವನ್ನು ನಿಷೇಧಿಸುತ್ತದೆ ಎನ್ನುವುದು ನಿಜ. ಆದರೆ ಇದು ಸಂಪೂರ್ಣ ನಿಜವಲ್ಲ. ಏಕೆಂದರೆ ಈ ನಿಷೇಧ ಚಿಟ್ಝ್ಠಠಿಛಿ
ಅಲ್ಲ. ಆದ್ದಂದಲೇ ಈ ಹಿಂದೆಯೂ ಕಾವೇರಿ ನ್ಯಾಯ ಮಂಡಳಿಯ ಮಧ್ಯಾಂತರ ಆದೇಶವನ್ನು ಜಾರಿ ಮಾಡುತ್ತಿಲ್ಲ, ಅಥವಾ ಮಂಡಳಿ ನಿಗದಿ ಮಾಡಿದಷ್ಟು ನೀರು ಬಿಡುತ್ತಿಲ್ಲ ಎಂದು ತಮಿಳುನಾಡು ಕರ್ನಾಟಕ ಸರಕಾರದ ವಿರುದ್ಧ ಸಂವಿಧಾನದ 131ರ ಕಲಮಿನಡಿ ಸುಪ್ರೀಂ ಕೋರ್ಟಿಗೆ ದೂರು ದಾಖಲಿಸಿತ್ತು. ಅದೇ ರೀತಿ ಪಂಜಾಬ್ ಸರಕಾರ ಹಿಂದಿನ ಎಲ್ಲ ನೀರು ಹಂಚಿಕೆ ಒಪ್ಪಂದಗಳನ್ನು ರದ್ದು ಮಾಡುವ ಅಧಿಕಾರದ ಕುರಿತು ಸುಪ್ರೀಂ ಕೋರ್ಟಿನ ಬಾಗಿಲು ತಟ್ಟಿತ್ತು. ಹಾಗೂ ಸರಿಯಾದ ಪರಿಸರ ರಕ್ಷಣಾ ಮತ್ತು ಪುನರ್ ವಸತಿ ಅಂಶಗಳನ್ನು ಒಳಗೊಂಡಿಲ್ಲವೆಂದು ನರ್ಮದಾ ನದಿ ನೀರು ಮಂಡಳಿಯ ಆದೇಶದ ಬಗ್ಗೆಯೂ ಸುಪ್ರೀಂ ಕೋರ್ಟಿನ ಮಧ್ಯಪ್ರವೇಶವನ್ನು ಬೇರೆಬೇರೆ ಸರಕಾರಗಳು ಕೋರಿದ್ದವು. ಸುಪ್ರೀಂ ಕೋರ್ಟಿನ ಮಧ್ಯಪ್ರವೇಶಕ್ಕೆ ಅನುವುಮಾಡುವ ಈ ಕಲಮಿನ ಉಪಯೋಗವನ್ನು ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕಿಂತ ತಮಿಳುನಾಡೇ ಪಡೆದುಕೊಂಡಿದೆ ಎಂಬುದೇನೋ ನಿಜ. ಆದರೆ ಕಾವೇರಿ ನ್ಯಾಯಮಂಡಳಿಯ ಅಂತಿಮ ಆದೇಶದಿಂದ ಕರ್ನಾಟಕಕ್ಕೆ ಅಂತಿಮ ಪಾಲು ಮತ್ತು ಸಂಕಷ್ಟ ಸೂತ್ರದ ವಿಷಯಗಳಲ್ಲಿ ಅನ್ಯಾಯವಾಗಿದೆ. ಹಾಗೂ ನ್ಯಾಯಮಂಡಳಿಯೇ ಅಂತಿಮವಾಗಿದ್ದಲ್ಲಿ ಈ ಅನ್ಯಾಯವನ್ನು ನಾವು ಶಾಶ್ವತವಾಗಿ ಎದುರಿಸಬೇಕಿತ್ತು.
ಆದರೆ ಸಂವಿಧಾನದ ಆರ್ಟಿಕಲ್ 136ರಲ್ಲಿರುವ ಅವಕಾಶವನ್ನು ಬಳಸಿಕೊಂಡು ಕರ್ನಾಟಕವು ಸಹ ನ್ಯಾಯಮಂಡಳಿಯ ಅಂತಿಮ ಆದೇಶದ ವಿರುದ್ಧ ಸುಪ್ರೀಂ ಕೋರ್ಟಿಗೆ ಅಹವಾಲು ಸಲ್ಲಿಸಿದೆ. ಈ ಅವಕಾಶ ಇದ್ದಿದ್ದರಿಂದಲೇ ನ್ಯಾಯಮಂಡಳಿಯ ಅಂತಿಮ ಆದೇಶಕ್ಕಿಂತ ಸ್ವಲ್ಪವಾದರೂ ಉತ್ತಮ ಪರಿಹಾರ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ. ಹೀಗಾಗಿ ಸದ್ಯದ ಸುಪ್ರೀಂ ಕೋರ್ಟಿನ ಆದೇಶಗಳನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟಿನ ಮಧ್ಯಪ್ರವೇಶವೇ ಸಂವಿಧಾನ ವಿರೋಧಿ ಎನ್ನುವ ವಾದ ಸಂಪೂರ್ಣ ಸರಿಯಲ್ಲ. ನ್ಯಾಯದ ದೃಷ್ಟಿಯಿಂದಲೂ ಸರಿಯಾದ ವ್ಯಾಖ್ಯಾನ ಅಲ್ಲ. ಸಂವಿಧಾನದಲ್ಲಿ ಸುಪ್ರೀಂಕೋರ್ಟನ್ನು ದೇಶದ ಕೇಂದ್ರ, ರಾಜ್ಯ ಸರಕಾರಗಳ, ಬೇರೆಬೇರೆ ನ್ಯಾಯಮಂಡಳಿಗಳ, ಪ್ರಾಧಿಕಾರಗಳ ಆದೇಶ, ತೀರ್ಮಾನಗಳಿಂದ ಬಾಧಿತರಾದವರಿಗೆ ಅಂತಿಮ ಮೇಲ್ಮನವಿ ನ್ಯಾಯಸ್ಥಾನವನ್ನಾಗಿ ಪರಿಕಲ್ಪಿಸಲಾಗಿದೆ. ಹೀಗಾಗಿಯೇ ಆರ್ಟಿಕಲ್ 136ನ್ನು ಬಹಳ ಮುಖ್ಯವಾಗಿ ಸಂವಿಧಾನದಲ್ಲಿ ಸೇರಿಸಲಾಗಿದೆ. ಈ ಅವಕಾಶದಿಂದಾಗಿಯೇ ಕಾವೇರಿ ನ್ಯಾಯಮಂಡಳಿಯ ಅಂತಿಮ ಆದೇಶದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳುವ ಅಂತಿಮ ಬಾಗಿಲೊಂದು ತೆರೆದುಕೊಂಡಿದೆ.
ಆದರೆ ಇದರಲ್ಲಿ ಇನ್ನೊಂದು ಸೂಕ್ಷ್ಮವಿರುವುದು ನಿಜವೇ. ಇದುವರೆಗೆ ನ್ಯಾಯಮಂಡಳಿಯ ವಿರುದ್ಧ ಸುಪ್ರೀಂಕೋರ್ಟಿಗೆ ಬಂದ ದಾವೆಗಳೆಲ್ಲ ನ್ಯಾಯಮಂಡಳಿಯ ಆದೇಶದ ಒಂದೋ ಎರಡೂ ತಾಂತ್ರಿಕ ಅಂಶಗಳ ಕುರಿತಾಗಿರುತ್ತಿತ್ತು.
ಆದರೆ ಕಾವೇರಿ ನ್ಯಾಯಮಂಡಳಿಯ ವಿಷಯದಲ್ಲಿ ಮಾತ್ರವೇ ಸುಪ್ರೀಂ ಕೋರ್ಟ್ ಮೊತ್ತ ಮೊದಲ ಬಾರಿಗೆ ನ್ಯಾಯ ಮಂಡಳಿಯ ಇಡೀ ತೀರ್ಮಾನವನ್ನೇ ಮರುಪರಿಶೀಲನೆಗೆ ಒಪ್ಪಿಕೊಂಡಿದೆ. ಹಾಗೂ ಕಾವೇರಿ ನ್ಯಾಯಮಂಡಳಿಯ ಇಡೀ ಅಂತಿಮ ಆದೇಶದ ವಿರುದ್ಧ ಮೊದಲು ಸುಪ್ರೀಂ ಕೋರ್ಟಿನ ಬಾಗಿಲು ತಟ್ಟಿದ್ದು ಕರ್ನಾಟಕವೇ ಎಂಬುದನ್ನು ಮರೆಯುವಂತಿಲ್ಲ. ಸುಪ್ರೀಂ ಕೋರ್ಟ್ ಸಹ ಈ ಅಹವಾಲನ್ನು ಒಪ್ಪಿಕೊಳ್ಳುವ ಮೂಲಕ ನದಿ ವ್ಯಾಜ್ಯ ತೀರ್ಮಾನಗಳ ಸಾಂವಿಧಾನಿಕ ಪ್ರಕ್ರಿಯೆಯಲ್ಲಿ ಒಂದು ಹೊಸ ನ್ಯಾಯಯುತ ಭಾಷ್ಯ ಬರೆದಿದೆ.
ಅಂತರರಾಜ್ಯ ನದಿ ನೀರು ಹಂಚಿಕೆಯ ಬಗ್ಗೆ ನ್ಯಾಯಮಂಡಳಿ ರಚನೆಯಾದ ನಂತರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುವಂತಿಲ್ಲ ಎಂದು ಹೇಳುವ ಆರ್ಟಿಕಲ್ 262 ಮತ್ತು ದೇಶದ ಯಾವುದೇ ನ್ಯಾಯಮಂಡಳಿ, ಸರಕಾರಗಳ ಆದೇಶ, ತೀರ್ಮಾನಗಳ ವಿರುದ್ಧ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಬಹುದೆಂಬ ಅಧಿಕಾರ ನೀಡುವ ಆರ್ಟಿಕಲ್ 136ರ ನಡುವೆ ಇರುವ ವೈರುಧ್ಯವನ್ನು ಬಗೆಹರಿಸಿದೆ ಎಂದೇ ಹೇಳಬಹುದು ಇಷ್ಟಾಗಿಯೂ ಒಂದು ಪ್ರಶ್ನೆ ಉಳಿಯುತ್ತದೆ. ನ್ಯಾಯಮಂಡಳಿಯ ಆದೇಶದ ವಿರುದ್ಧ ಮೇಲ್ಮನವಿಯಲ್ಲೂ ನ್ಯಾಯ ದೊರೆಯದಿದ್ದರೆ ಏನು ಮಾಡಬೇಕು? ಆಗಲೂ ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳು ಕೂತು ಮಾತುಕತೆಯ ಮೂಲಕ, ಕೋರ್ಟಿನಿಂದಾಚೆಗೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಅವಕಾಶವಿರುತ್ತದೆ. ಆದರೆ ಮಾತುಕತೆ ಸಾಧ್ಯವಿಲ್ಲ ಎಂದ ನಂತರದಲ್ಲೇ ನ್ಯಾಯಮಂಡಳಿ ರಚನೆಯಾಗಿರುತ್ತದೆ. ಹಾಗಿರುವಾಗ ಮತ್ತೊಮ್ಮೆ ಒಬ್ಬರ ಕಷ್ಟ ಮತ್ತೊಬ್ಬರು ಅರಿತು ಮತ್ತೆ ಮಾತುಕತೆಗೆ ಕೂರಲು ಸಾಕಷ್ಟು ರಾಜಕೀಯ ಪ್ರಬುದ್ಧತೆ ಮತ್ತು ಜನಪರತೆ ಬೇಕಿರುತ್ತದೆ. ಅದನ್ನು ಇಂದಿನ ಅಳುವವರ್ಗಗಳ ರಾಜಕೀಯ ಸಂದರ್ಭದಲ್ಲಿ ನಿರೀಕ್ಷಿಸುವುದು ದುರಾಸೆಯೇ ಆಗಿರುತ್ತದೆ.
ಆಗ ನಾಯಕರನ್ನು ಬಿಟ್ಟು ಜನತೆ ಮತ್ತೊಂದು ರಾಜ್ಯದ ಜನರೊಡನೆ ನೇರ ಮುಕ್ತ ಮಾತುಕತೆಗೆ ಆಡಬೇಕು. ಪರಸ್ಪರ ಕಷ್ಟಗಳನ್ನು ಅರಿತುಕೊಂಡು ಕೊಟ್ಟು ತೆಗೆದುಕೊಳ್ಳುವ ನೀತಿಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಆದರೆ ಅದಕ್ಕೆ ಬೇಕಿರುವ ಪ್ರಬುದ್ಧತೆಯು ಸಣ್ಣದೇನಲ್ಲ. ಆದರೆ ಸದ್ಯಕ್ಕೆ ಇವಕ್ಕಿಂತ ಹೋರಾಟದ ಬೇರೆ ಯಾವುದೇ ಸಾಂವಿಧಾನಿಕ ಮಾರ್ಗಗಳಿಲ್ಲ.