ವರ್ಣಾಶ್ರಮ ವ್ಯವಸ್ಥೆಗೆ ಸವಾಲಾದ ನಾರಾಯಣ ಗುರುಗಳು
ಭಾಗ 2
ಆದರೆ, ಇದೇ ಕೇರಳ ಭಾರತದಲ್ಲಿಯೇ ಅತ್ಯಂತ ಹೆಚ್ಚು ಸಾಕ್ಷರತೆ ಇರುವ ಮತ್ತು ಪ್ರಗತಿಪರ ಚಿಂತಕರಿರುವ ರಾಜ್ಯ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ದೇಶದ ಮೊದಲ ಹಾಗೂ ಜಗತ್ತಿನ ಎರಡನೆ ಕಮ್ಯುನಿಸ್ಟ್ ಸರಕಾರ ಅಸ್ತಿತ್ವಕ್ಕೆ ಬಂದದ್ದು ಕೇರಳದಲ್ಲಿ. ದೇಶ ವಿಭಜನೆ ಕಾಲದಲ್ಲಿ ಉತ್ತರ ಭಾರತ ಕೋಮುದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿದ್ದಾಗ ಶೇ.18ಕ್ಕೂ ಹೆಚ್ಚು ಮುಸ್ಲಿಂ ಜನಸಂಖ್ಯೆಯೇ ಇರುವ ಕೇರಳ ಶಾಂತವಾಗಿತ್ತು.
ಅಡ್ವಾಣಿಯವರ ರಥಯಾತ್ರೆಯ ನಂತರ ದೇಶಾದ್ಯಂತ ಕೋಮುವಾದಿ ಚಟುವಟಿಕೆಗಳು ಭುಗಿಲೆದ್ದಾಗಲೂ ಇಲ್ಲಿ, ಯಾವ ಗಲಭೆಗಳು ನಡೆಯಲಿಲ್ಲ. ದಕ್ಷಿಣದ ರಾಜ್ಯಗಳಲ್ಲಿ ಪ್ರಯಾಸಪಟ್ಟು, ಪ್ರವೇಶ ಪಡೆದ ಬಿಜೆಪಿಯನ್ನು ಈಗಲೂ ಹೊಸಲಿನಾಚೆ ನಿಲ್ಲಿಸಿರುವ ರಾಜ್ಯ ಕೇರಳ. ಇದು ಕೇವಲ ನಾರಾಯಣ ಗುರುಗಳು ಹುಟ್ಟಿ ಸರಿಯಾಗಿ ನೂರು ವರ್ಷಗಳ ಅವಯಲ್ಲಿ ನಡೆದ ಬದಲಾವಣೆ. ಅದೇ ನೂರು ವರ್ಷಗಳ ನಂತರ ಕೇರಳದಲ್ಲಿ ಮೊದಲ ಬಾರಿಗೆ ಕಮ್ಯೂನಿಸ್ಟ್ಟ್ ಸರಕಾರ ಅಸ್ತಿತ್ವಕ್ಕೆ ಬಂತೆಂಬುದು ಉಲ್ಲೇಖನಿಯ.
ನಾರಾಯಣ ಗುರುಗಳು ಪ್ರಾರಂಭಿಸಿದ ಧಾರ್ಮಿಕ ಸುಧಾರಣಾ ಚಳವಳಿಯನ್ನು ಈ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಆಗ ಅವರ ಕಾರ್ಯತಂತ್ರ ಉಳಿದ ಸಮಾಜ ಸುಧಾರಕರಿಗಿಂತ ಹೇಗೆ ಭಿನ್ನವಾಗಿತ್ತು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಅಸ್ಪೃಶ್ಯತೆಯ ವಿರುದ್ಧದ ಹೋರಾಟಗಳಲ್ಲಿ ದೇವಸ್ಥಾನ ಪ್ರವೇಶ ಚಳವಳಿಯದ್ದು ಪ್ರಮುಖ ಪಾತ್ರವಾದರೆ, ನಾರಾಯಣ ಗುರುಗಳು ಅದನ್ನೇ ಕೈಬಿಟ್ಟಿದ್ದರು. ಅವರು ಸವರ್ಣೀಯರ ಒಡೆತನದ ದೇವಾಲಯ ಪ್ರವೇಶಿಸಲಿಲ್ಲ. ಅದನ್ನು ಬಹಿಷ್ಕರಿಸಿದರು. ಮತ್ತು ಅವರ್ಣೀಯರ ದೇವಾಲಯಗಳನ್ನು ಸ್ಥಾಪಿಸಿದರು. ಆದರೆ, ಅವರು ಮತ್ತೊಂದು ಧರ್ಮವನ್ನು ಕೂಡ ಸ್ಥಾಪಿಸಲು ಹೋಗಲಿಲ್ಲ.
ಮೊದಲು ದೇವಸ್ಥಾನ ಪ್ರವೇಶ ಚಳವಳಿ ನಡೆಸದೆ, ದೇವಸ್ಥಾನ ನಿರ್ಮಿಸುವ ಅವರ ಕಾರ್ಯತಂತ್ರ ಎರಡು ರೀತಿಯಲ್ಲಿ ಅವರಿಗೆ ನೆರವಾಯಿತು. ದೇವಸ್ಥಾನ ಪ್ರವೇಶ ಹೋರಾಟಕ್ಕೆ ಎದುರಾಗುವ ಪ್ರತಿಭಟನೆಯನ್ನು ಎದುರಿಸುವ ಸಂಘಟನಾ ಶಕ್ತಿ ಆಗಿನ್ನೂ ಕೇರಳದ ತಳಸಮುದಾಯಕ್ಕೆ ಇರಲಿಲ್ಲ ಎಂದು ನಾರಾಯಣ ಗುರುಗಳಿಗೆ ತಿಳಿದಿತ್ತು. ಮುಂದೆ ಮೂವತ್ತಾರು ವರ್ಷಗಳ ನಂತರ ದೇವಾಲಯಗಳ ಮುಂಭಾಗದ ರಸ್ತೆಗಳಲ್ಲಿ ನಡೆಯುವ ಹಕ್ಕಿಗಾಗಿ ನಡೆದ ವೈಕಂ ಸತ್ಯಾಗ್ರಹಕ್ಕೆ ಎದುರಾದ ಪ್ರತಿಭಟನೆಯನ್ನು ನೋಡಿದರೆ, ಇದು ಸ್ಪಷ್ಟವಾಗುತ್ತದೆ.
ದೇವಸ್ಥಾನದ ಸ್ಥಾಪನೆಯನ್ನು ಪ್ರಶ್ನಿಸಿದ ಪುರೋಹಿತರಿಗೆ ನಾನು ಸ್ಥಾಪಿಸಿದ್ದು ‘ಈಳವರ ಶಿವ’ ಎಂಬ ಮಾರ್ಮಿಕ ಉತ್ತರ ಕೊಟ್ಟು ಗುರುಗಳು ಯುದ್ಧಕ್ಕೆ ಬಂದವರನ್ನು ಶಸಪ್ರಯೋಗವಿಲ್ಲದೆಯೇ ನಿಶಸಗೊಳಿಸಿದರು. ಅದೇ ರೀತಿ, ಸಹಸ್ರಮಾನಗಳಿಂದ ತಮ್ಮಿಂದ ದೂರವೇ ಉಳಿದಿದ್ದ ದೇವಸ್ಥಾನಗಳಿಗೆ ಪ್ರವೇಶಿಸಲು ಅಡ್ಡಿಯಾಗುವ ಸಾಂಪ್ರದಾಯಿಕ ಮನಸ್ಸಿನ ಹಿಂಜರಿಕೆ ಹಾಗೂ ಭೀತಿಯಿಂದಲೂ ಕೆಳವರ್ಗದ ಜನರನ್ನು ಅವರು ಮುಕ್ತಗೊಳಿಸಿದರು. ‘‘ದೇವಾಲಯಕ್ಕೆ ಹೋಗುವ ಹಕ್ಕು ನಿಮಗಿಲ್ಲವಾದರೆ, ದೇವಾಲಯವನ್ನೇ ನಿಮ್ಮಲ್ಲಿಗೆ ತರುತ್ತೇನೆ’’ ಎಂದು ಅಸ್ಪೃಶ್ಯರಿಗೆ ಪೂಜೆಯ ಹಕ್ಕನ್ನು ನೀಡುವ ಮೂಲಕ ಅವರಲ್ಲಿ ಸ್ವಾಭಿಮಾನ ಜಾಗೃತಿಗೆ ಕಾರಣರಾದರು. ದೇವಸ್ಥಾನಗಳ ಸ್ಥಾಪನೆ ಅಂದಿನ ಪುರೋಹಿತಶಾಹಿಗೆ ಆಘಾತಕಾರಿಯಾದ ಹೊಡೆತ, ದೈಹಿಕವಾಗಿ ದೂರವೇ ಉಳಿದಿದ್ದ ಮೂರನೇ ಎರಡರಷ್ಟಿದ್ದ ಕೆಳವರ್ಗದ ಜನರು ಮಾನಸಿಕವಾಗಿ ಕೂಡ ದೂರವೇ ಉಳಿದರೆ, ಹುಂಡಿ ತುಂಬುವುದು ಹೇಗೆ? ಅದರ ಮೂಲಕ ಉದರ ತುಂಬುವುದು ಹೇಗೆ ? ಎಂಬ ಭೀತಿ ಅವರನ್ನಾವರಿಸಿತ್ತು. ನಾರಾಯಣ ಗುರುಗಳ ನಂತರ ಕೇರಳದಲ್ಲಿ ಸವರ್ಣೀಯರ ದೇವಾಲಯಗಳ ಆದಾಯದಲ್ಲಿ ಗಣನೀಯ ಕುಸಿತ ಕಂಡುಬಂದಿರುವುದು ದಾಖಲೆಯಲ್ಲಿದೆ.
ನಾರಾಯಣ ಗುರುಗಳು ಎಂದೂ ಹಿಂದೂ ಧರ್ಮವನ್ನು ಪುಲೆ, ಪೆರಿಯಾರ್, ಅಂಬೇಡ್ಕರ್ ಅವರಂತೆ ಸಾರಾಸಗಟಾಗಿ ತಿರಸ್ಕರಿಸಲಿಲ್ಲ. ಆ ವಿಚಾರದಲ್ಲಿ ಅವರು ಬಸವಣ್ಣನ ತತ್ವಗಳಿಗೆ ಹತ್ತಿರವಾಗಿದ್ದರು. ಅವರು ತಮ್ಮ ಜೀವನದುದ್ದಕ್ಕೂ ಧಾರ್ಮಿಕ ಪುನರುತ್ಥಾನದ ಬಗ್ಗೆ ಮಾತನಾಡುತ್ತಿದ್ದರು. ಇಲ್ಲಿ ದೇವನೂರು ಮಹಾದೇವ ಅವರ ಮಾತೊಂದು ನೆನಪಿಗೆ ಬರುತ್ತದೆ.
‘‘ಹಿಂದೂ ಧರ್ಮ ಎಂಬ ಮನೆಯೊಳಗೆ ಭಿನ್ನವಾದ ಜಾತಿ ತಾರತಮ್ಯದ ಕಂಬಗಳನ್ನು ಒಳಗೊಳಗೆ ಕುಯ್ಯುವಂತೆ ಗಾಂೀಜಿ ಕಾಣಿಸಿದರೆ, ಅಂಬೇಡ್ಕರ್ ಹೊರಗಿನಿಂದ ಆ ಅಸಮಾನತೆಯ ಮನೆಗೆ ಕಲ್ಲೆಸೆಯುವಂತೆ ಕಾಣುತ್ತಾರೆ’’ ಎಂದು ಗಾಂೀ ಮತ್ತು ಅಂಬೇಡ್ಕರ್ ಅವರ ಸೈದ್ಧಾಂತಿಕ ಸಂಘರ್ಷವನ್ನು ಪ್ರಸ್ತಾಪಿಸುತ್ತಾ ದೇವನೂರು ಹೇಳುತ್ತಾರೆ.
ಗಾಂಧೀಜಿ ಆ ಕೆಲಸ ಮಾಡಿರುವ ಬಗ್ಗೆ ಭಿನ್ನಾಭಿಪ್ರಾಯ ಗಳಿರಬಹುದು. ಆದರೆ, ನಾರಾಯಣ ಗುರುಗಳ ಧಾರ್ಮಿಕ ಸುಧಾರಣಾವಾದಿ ಚಳವಳಿ ಮಾತ್ರ ಈ ಕಂಬ ಕುಯ್ಯುವ ಕೆಲಸವನ್ನು ಮಾಡಿದೆ. ಅವರದ್ದು ಸಂಘರ್ಷದ ಹಾದಿಯಾಗಿರಲಿಲ್ಲ. ಅವರ ಹೋರಾಟದ ಎಲ್ಲಾ ಕಾರ್ಯತಂತ್ರಗಳನ್ನು ಅವಲೋಕಿಸುತ್ತಾ ಬಂದರೆ, ಅವರಲ್ಲೊಬ್ಬ ಚತುರ ರಾಜಕಾರಣಿ ಇದ್ದನೆಂಬುದು ಸ್ಪಷ್ಟವಾಗುತ್ತದೆ. ಅವರು ಸಮಾಜ ಸುಧಾರಕನ ಕೆಲಸ ಮಾಡಲಿಕ್ಕೆಂದೇ ಸನ್ಯಾಸಿಯ ಪಾತ್ರವನ್ನು ಧರಿಸಿದರೇನೋ ಎಂಬ ಅನುಮಾನ ಬರುತ್ತದೆ.
ಅವರು ದೇವಸ್ಥಾನ ಪ್ರವೇಶಾವಕಾಶದ ಬಗ್ಗೆ ಎಂದೂ ಗಂಭೀರ ವಾಗಿ ಪ್ರಯತ್ನ ನಡೆಸಲಿಲ್ಲ. ಅವರ ಸಾವಿನ ಎಂಟು ವರ್ಷಗಳ ನಂತರ ಕೇರಳ ಸರಕಾರ ದೇವಾಲಯ ಪ್ರವೇಶ ಘೋಷಣೆಯನ್ನು ಹೊರಡಿಸಿತ್ತು. ಆಗಲೇ ನಾರಾಯಣ ಗುರುಗಳು ಕೇರಳ, ಮದ್ರಾಸ್ ಮತ್ತು ಮಂಗಳೂರಿನಲ್ಲಿಯೂ ದೇವಸ್ಥಾನಗಳನ್ನು ಸ್ಥಾಪಿಸಿದ್ದರು. ನೂರಾರು ಗುರುಮಂದಿರ ಹಾಗೂ ಆಶ್ರಮಗಳು ಪ್ರಾರಂಭವಾಗಿದ್ದವು.
ದೇವಸ್ಥಾನಗಳ ಬಗೆಗಿನ ಅವರ ಪರಿಕಲ್ಪನೆಯೇ ಕ್ರಾಂತಿಕಾರಿ ಯಾದುದು. ಅರವಿಪುರಂನಲ್ಲಿ ಲಿಂಗಸ್ಥಾಪನೆ ಮಾಡಿದ ಗುರುಗಳು ತಮ್ಮ ಕೊನೆಯ ಪ್ರತಿಷ್ಠಾಪನೆಯನ್ನು ಕಳವಂ ಕೋಡಂ ನಲ್ಲಿ ಕನ್ನಡಿಯೊಂದನ್ನು ಸ್ಥಾಪಿಸುವ ಮೂಲಕ ನಡೆಸಿದರು. ಅದರ ನಡುವೆ ಒಂದೆಡೆ ‘ಸತ್ಯ, ಧರ್ಮ, ಶಾಂತಿ, ದಯೆ’ ಎಂಬ ಸಂದೇಶವನ್ನು ಸಾರುವ ಲಕವನ್ನಷ್ಟೇ ಸ್ಥಾಪಿಸಿದರೆ, ಕರಮಕ್ಕು ಎಂಬಲ್ಲಿ ನಂದಾ ದೀಪವನ್ನಷ್ಟೇ ಹಚ್ಚಿದರು. ಕೊನೆಗಾಲದಲ್ಲಿ ಶಿವಗಿರಿಯಲ್ಲಿ ಅವರು ‘ಅರಿವು’ ಎನ್ನುವ ಅವರ ಚಿಂತನೆಯ ಮೂಲಧಾತುವಿನ ಸಂಕೇತವಾಗಿ ಸರಸ್ವತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದರೆ, ಶಂಕರಾಚಾರ್ಯರ ಹುಟ್ಟೂರಿಗೆ ಸಮೀಪದ ಅಲ್ವಾಯಿನ ಅದ್ವೆತಾಶ್ರಮದಲ್ಲಿ ಮೂರ್ತಿಯನ್ನೇ ಸ್ಥಾಪಿಸಲಿಲ್ಲ. ಕೊನೆಗಾಲದಲ್ಲಿ ದೇವಸ್ಥಾನಗಳ ಸ್ಥಾಪನೆ ನಿಲ್ಲಿಸಿ ಎಂದು ಅನುಯಾಯಿಗಳಿಗೆ ಕರೆ ನೀಡಿದರು. ನಾರಾಯಣ ಗುರುಗಳು ತಮ್ಮ ಚಳವಳಿ ಉದ್ದಕ್ಕೂ ದೇವಾಲಯಗಳನ್ನು ಸಾಮಾಜಿಕ ಪರಿವರ್ತನೆಯ ಸಾಧನವಾಗಿ ಬಳಸುತ್ತಾ ಬಂದುದ್ದನ್ನು ಕಾಣಬಹುದು. ಅದು ಸನಾತನ ಧರ್ಮಾವಲಂಬಿಗಳ ಆಶಯಕ್ಕೆ ತದ್ವಿರುದ್ದವಾದದು. ದೇವಾಲಯಗಳ ಪೂಜೆ-ಹವನ-ಹೋಮಗಳಲ್ಲಿ ಮುಳುಗಿ ವ್ಯಾಪಾರಿ ಕೇಂದ್ರಗಳಾಗುವ ಬದಲಿಗೆ ಅವುಗಳನ್ನು ಸಾಮೂಹಿಕ ಪ್ರಾರ್ಥನಾ ಮಂದಿರವಾಗಿ ಉಳಿಸಬೇಕೆಂದು ಅವರು ಬಯಸಿದ್ದರು. ಈ ದೃಷ್ಟಿಯಿಂದ ಅವರ ದೇವಾಲಯದ ಪರಿಕಲ್ಪನೆ ಮಸೀದಿ, ಚರ್ಚ್ಗಳಿಗೆ ಹೆಚ್ಚು ಹತ್ತಿರವಾಗಿತ್ತು. ದೇವಸ್ಥಾನಗಳ ಭಕ್ತಿ ಪೀಠವಾಗುವುದರ ಜೊತೆಯಲ್ಲಿ ಅಧ್ಯಯನ ಕೇಂದ್ರವಾಗಬೇಕು. ಉದ್ಯಾನ, ವಾಚನಾಲಯಗಳನ್ನೊಳಗೊಂಡು ಅವು ಸ್ವಚ್ಛ ಪರಿಸರದಲ್ಲಿ ನಿರ್ಮಾಣಗೊಳ್ಳಬೇಕು ಎಂದು ಅವರು ಹೇಳುತ್ತಿದ್ದರು. ಅವರು ಸ್ಥಾಪಿಸಿದ ಎಲ್ಲಾ ದೇವಾಲಯಗಳು ಈ ಆಶಯವನ್ನೇ ಬಿಂಬಿಸುತ್ತದೆ.
ನಾರಾಯಣ ಗುರುಗಳದ್ದು ಮುಖಾಮುಖಿ ಹೋರಾಟವಲ್ಲ. ಅವರು ವೈದಿಕ ಶಾಹಿ ಏಕಸ್ವಾಮ್ಯಕ್ಕೆ ನೇರ ಸವಾಲು ಹಾಕಲಿಲ್ಲ. ಅದರ ಬದಲಿಗೆ ವೈದಿಕ ಅಪತ್ಯದ ಬೇರುಗಳನ್ನೇ ಅಲ್ಲಾಡಿಸಿದರು. ಸಂಸ್ಕೃತವನ್ನು ಸಂಪೂರ್ಣವಾಗಿ ತಿರಸ್ಕರಿಸದೇ ಅದನ್ನು ಅಧ್ಯಯನ ಮಾಡಿ ಶೂದ್ರರೂ ಅದನ್ನು ಕಲಿತು ಅರಗಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟರು. ವೇದಾಧ್ಯಯನಕ್ಕೆ ಜಾತಿ ಅಸ್ಪೃಶ್ಯವಲ್ಲ ಎಂದು ಸಾರಿದ ಗುರುಗಳು ಶಂಕರಾಚಾರ್ಯರ ಅದ್ವೆತ ವೇದಾಂತವನ್ನು ಕಲಿತರು. ‘ಆತ್ಮೋಪದೇಶ ಶತಕಂ’ ಸೇರಿದಂತೆ ಹಲವಾರು ಸಂಸ್ಕೃತ ಗ್ರಂಥಗಳನ್ನು ಬರೆದರು. ಬ್ರಹ್ಮಸೂತ್ರದ ವಿಶ್ಲೇಷಣೆ ಮಾಡಿದ ಮೊದಲ ಅಸ್ಪೃಶ್ಯ ಅವರು.
ದೇವಸ್ಥಾನಗಳಷ್ಟೇ ಸ್ಥಾಪಿಸದೆ ಅಲ್ಲಿ ಅರ್ಚಕರಾಗಿ ಕೆಳವರ್ಗದ ಜಾತಿ ಜನರನ್ನೇ ನೇಮಿಸಿದರು. ಅವರ ತರಬೇತಿಗಾಗಿ ಶಿವಗಿರಿಯಲ್ಲಿ ಬ್ರಹ್ಮ ಮೀಮಾಂಸ ಶಾಲೆಗಳನ್ನು ತೆರೆದು ಬ್ರಹ್ಮ ವಿದ್ಯೆ ಕಲಿಸಿದರು. ಅವರಿಂದ ಸ್ಥಾಪನೆಗೊಂಡ ಬ್ರಹ್ಮ ವಿದ್ಯಾ ಕೇಂದ್ರದಲ್ಲಿ ಈಳವರಲ್ಲದೆ, ಪುಲಯ, ಪರಯ ಮೊದಲಾದ ಇನ್ನಿತರ ಕೆಳಜಾತಿಯ ಜನರಲ್ಲದೆ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರೂ ಆಗಮಶಾಸವನ್ನೊಳಗೊಂಡಂತೆ ವೇದಾಧ್ಯಯನ ಮಾಡಲು ಅವಕಾಶ ಕಲ್ಪಿಸಿದ್ದರು. ದಕ್ಷಿಣ ಕನ್ನಡದಲ್ಲಿ ಈಗಲೂ ಬಿಲ್ಲವರ ಜಾತಿಯ ಮದುವೆಯನ್ನು ಬಿಲ್ಲವ ಅರ್ಚಕರೇ ಮಾಡುತ್ತಿದ್ದಾರೆ. ಅವರೆಲ್ಲರೂ ಮೂಲತಃ ಶಿವಗಿರಿಯಲ್ಲಿ ತರಬೇತಿ ಪಡೆದವರು. ಆದರೆ, ಈಗ ಅವರಲ್ಲಿಯೂ ಬೆಳೆಯುತ್ತಿರುವ ನವಬ್ರಾಹ್ಮಣರಿಗೆ ಬಿಲ್ಲವ ಅರ್ಚಕರು ಪಥ್ಯವಾಗುವುದಿಲ್ಲ ಎಂಬುದು ಬೇರೆ ಮಾತು.
ಅರವೀಪುರಂನಲ್ಲಿ ದೇವಾಲಯ ಸ್ಥಾಪನೆ ನಂತರ 1961ರಲ್ಲಿ ‘ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗ’ ಸ್ಥಾಪನೆಯಾಗುವ ವರೆಗೆ ಕೇರಳ ರಾಜ್ಯ ಮಾತ್ರವಲ್ಲ ತಮಿಳುನಾಡು ಮತ್ತು ಮಂಗಳೂರಿಗೂ ಭೇಟಿ ನೀಡಿ ದೇವಾಲಯಗಳನ್ನು ಸ್ಥಾಪಿಸಿದರು. ಕೆಳವರ್ಗದ ಜನರಲ್ಲಿದ್ದ ಮೂಢನಂಬಿಕೆ ಮತ್ತು ದುಂದುವೆಚ್ಚದ ಅಂಧ ಸಂಪ್ರದಾಯಗಳನ್ನು ಕಿತ್ತೊಗೆಯಲು ಹೋರಾಟ ನಡೆಸಿದರು. ವಿವಾಹಗಳನ್ನು ಸರಳಗೊಳಿಸಿದರು. ವಿವಾಹಕ್ಕೆ ಮಾಡುವ ದುಂದು ವೆಚ್ಚಗಳನ್ನು ವೃದ್ಧಾಪ್ಯದ ದಿನಗಳಿಗಾಗಿ ಉಳಿತಾಯ ಮಾಡುವಂತೆ ಸಲಹೆ ನಡಿದರು. ಸಹಭೋಜನಕ್ಕೆ ಪ್ರೋತ್ಸಾಹ ನೀಡಿದರು. ಮದ್ಯವನ್ನು ಮಾಡಬೇಡಿ, ಮಾರಬೇಡಿ ಮತ್ತು ಕುಡಿಯಬೇಡಿ ಎಂದು ಹೇಳುವ ಮೂಲಕ ಮದ್ಯಪಾನದ ವಿರುದ್ಧ ವ್ಯಾಪಕ ಚಳವಳಿಯನ್ನೇ ನಡೆಸಿದರು. ಇದರಿಂದ ಸಾಂಪ್ರದಾಯಿಕವಾಗಿ ಸೇಂದಿ ತೆಗೆಯುವ ವೃತ್ತಿಯನ್ನು ಮಾಡುತ್ತಿದ್ದ ಈಳವರು ಆ ವೃತ್ತಿಯನ್ನು ತ್ಯಜಿಸಿ, ಬೇರೆ ವೃತ್ತಿ ಕೈಗೆತ್ತಿಕೊಳ್ಳುವಂತಾಯಿತು.
ಈ ಎಲ್ಲಾ ಸುಧಾರಣೆಗಳನ್ನು ಅವರು ಮೊದಲು ತಮ್ಮ ಶ್ರೀಮಂತ ಅನುಯಾಯಿಗಳ ಮನೆಯಲ್ಲಿಯೇ ಮಾಡಿದರು. ತಾಳಿಕೆಟ್ಟು, ತಿರುಂಡಕಳಿ ಮೊದಲಾದ ಸಂಪ್ರದಾಯಗಳನ್ನು ಆಚರಿಸುವ ಆಡಂಬರದ ಮದುವೆಗಳನ್ನು ಮಾಡುವ ಶ್ರೀಮಂತ ಅನುಯಾಯಿಗಳ ಮನೆಗಳನ್ನೇ ಬಹಿಷ್ಕರಿಸಿದರು.