ಕಾವೇರಿ ವಿಚಾರದಲ್ಲಿ ಮಾಧ್ಯಮಗಳು ಬೆಂಕಿ ಹಚ್ಚುವ ಕೆಲಸ ಮಾಡಿವೆ: ಅಗ್ನಿ ಶ್ರೀಧರ್
ಸೆ.20ರಂದು ಸೌಹಾರ್ದ ನಡಿಗೆ ಜಾಥಾ
ಬೆಂಗಳೂರು, ಸೆ.15: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸೋಮವಾರ ಕೋರ್ಟ್ ತೀರ್ಪು ನೀಡಿದ ನಂತರ ನಗರದಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿರುವವರ ಮೇಲೆ ತನಿಖೆ ಮಾಡಿ, ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಕರುನಾಡ ಸೇನೆಯ ಅಧ್ಯಕ್ಷ ಅಗ್ನಿ ಶ್ರೀಧರ್ ಆಗ್ರಹಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಚಳವಳಿ ಎಂಬುದು ಸಮಾಜದಲ್ಲಿ ನಡೆಯುವ ಅನ್ಯಾಯವನ್ನು ಖಂಡಿಸಲು ಹುಟ್ಟಿಕೊಂಡಿದ್ದು, ತನ್ನದೇ ಆದ ಪಾವಿತ್ರತೆಯನ್ನು ಕಾಯ್ದುಕೊಂಡಿದೆ. ಆದರೆ, ಕಾವೇರಿ ವಿಚಾರದಲ್ಲಿ ಕನ್ನಡಪರ ಮತ್ತು ಪ್ರಗತಿಪರ ಸಂಘಟನೆಗಳಿಗೆ ಕೆಟ್ಟ ಹೆಸರು ತರಬೇಕು ಎಂಬ ಉದ್ದೇಶದಿಂದ ಕೆಲವರು ಹಣ ನೀಡಿ ಈ ಕೃತ್ಯ ಮಾಡಿಸಿದ್ದಾರೆ. ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಗಳು ಇದರಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಬಳಕೆ ಮಾಡುತ್ತಿರುವ ನೀರಿನ ಬಗ್ಗೆ ಮಾತನಾಡುವವರು, ಬಳಕೆ ಮಾಡದೇ ಇರುವ ನೀರಿನ ಬಗ್ಗೆ ಮಾತನಾಡುತ್ತಿಲ್ಲ. ವ್ಯರ್ಥವಾಗಿ ಹರಿದು ಸಮುದ್ರ ಸೇರುವ ನೀರನ್ನು ಉಳಿಸಲು ವ್ಯವಸ್ಥಿತವಾದ ಯೋಜನೆ ರೂಪಿಸಬೇಕು ಎಂದ ಅವರು, ರಾಜ್ಯದಲ್ಲಿ ನೀರಿನ ಹಂಚಿಕೆ ಕುರಿತು ವಿವಾದ ಭುಗಿಲೆದ್ದಾಗ ಕನ್ನಡಿಗರನ್ನು ಜಾಗೃತಗೊಳಿಸಿದ್ದ ಮಾಧ್ಯಮಗಳು, ಕಾವೇರಿ ವಿಚಾರದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿವೆ ಎಂದು ಕಿಡಿಕಾರಿದರು.
ದೇಶದಾದ್ಯಂತ ಎದುರಾಗುವ ನೀರು ಹಂಚಿಕೆ ವಿವಾದವನ್ನು ಬಗೆಹರಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮಗ್ರ ರಾಷ್ಟ್ರೀಯ ಜಲನೀತಿಯನ್ನು ರೂಪಿಸಬೇಕು. ಕುಡಿಯುವ ನೀರನ್ನು ಮೂಲಭೂತ ಹಕ್ಕು ಎಂದು ಘೋಷಣೆ ಮಾಡಬೇಕು ಎಂದ ಅವರು, ನೀರಿನ ವಿವಾದ ಏರ್ಪಟ್ಟ ಸಂದರ್ಭದಲ್ಲಿ ಶಾಂತಿ ಮತ್ತು ಸೌಹಾರ್ದದಿಂದ ಪ್ರಜ್ಞಾಪೂರ್ವಕವಾಗಿ, ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.
ಸೌಹಾರ್ದ ಜಾಥಾ: ಕಾವೇರಿ ವಿಚಾರವಾಗಿ ನಡೆದ ಘರ್ಷಣೆಗಳ ಹಿನ್ನೆಲೆಯಲ್ಲಿ ರಾಜ್ಯದ ಗಡಿಯಲ್ಲಿ ಸೌಹಾರ್ದವನ್ನು ಬೆಳೆಸುವ ನಿಟ್ಟಿನಲ್ಲಿ ಸೆ.20 ರಂದು ಅತ್ತಿಬೆಲೆಯಿಂದ ಹೊಸೂರು ವರೆಗೆ ಸೌಹಾರ್ದ ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ರಿಪಬ್ಲಿಕನ್ ಪಾರ್ಟಿ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತ ಇಂದೂಧರ ಹೊನ್ನಾಪುರ, ಮಂಜುನಾಥ ಅದ್ದೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.