ವರ್ಣಾಶ್ರಮ ವ್ಯವಸ್ಥೆಗೆ ಸವಾಲಾದ ನಾರಾಯಣ ಗುರುಗಳು
ಮೇಲ್ಜಾತಿ ಜನರೂ ಸೇರಿದಂತೆ, ಎಲ್ಲ ವರ್ಗಗಳೊಳಗಿನಿಂದಲೂ ಸುಧಾರಣೆಯ ಧ್ವನಿ ಏಳುವಂತೆ ಮಾಡಿದ್ದು ನಾರಾಯಣಗುರು ಚಳವಳಿಯ ಇನ್ನೊಂದು ಸಾಧನೆ. ನಾಯರ್ ಸೇವಾ ಸಂಘ, ಪುಲಯ ಮಹಾಜನ ಸಭಾ ಮತ್ತು ನಂಬೂದಿರಿಗಳ ಯೋಗಕ್ಷೇಮ ಸಭಾಗಳು ಎಸ್‌ಎನ್‌ಡಿಪಿ ಮಾದರಿಯಲ್ಲಿಯೇ ತಮ್ಮ ಜನಾಂಗಗಳ ಸುಧಾರಣೆಗೆ ಪ್ರಯತ್ನ ನಡೆಸಿದವು.
ಭಾಗ-4
1937ರಲ್ಲಿ ಕೇರಳದಲ್ಲಿ ಕಮ್ಯೂನಿಸ್ಟ್ ಪಕ್ಷ ಪಿ.ಕೃಷ್ಣಪಿಳ್ಳೆ ಮತ್ತು ಇ.ಎಂ.ಎಸ್ ನಂಬೂದಿರಿ ಪಾಡ್ ನೇತೃತ್ವದಲ್ಲಿ ಸ್ಥಾಪನೆಯಾಯಿತು. ಅಯ್ಯಪ್ಪನ್, ದಾಮೋದರನ್, ಸುಕುಮಾರನ್ ಮೊದಲಾದ ನಾರಾಯಣ ಗುರು ಅನುಯಾಯಿಗಳು ಕಮ್ಯೂನಿಸ್ಟ್ ಪಕ್ಷವನ್ನು ಬೆಂಬಲಿಸುತ್ತಿದ್ದರೆ ಆ ಕಾಲದ, ಎಸ್‌ಎನ್‌ಡಿಪಿಯ ನಾಯಕರಾದ ಸಿ.ಕೇಶವನ್, ಟಿ.ಕೆ ಮಾಧವನ್ ಮತ್ತು ಆರ್.ಶಂಕರ್ ಕಾಂಗ್ರೆಸ್ ಒಲವುಳ್ಳವರಾಗಿದ್ದರು. ವಿಪರ್ಯಾಸವೆಂದರೆ ಎಸ್‌ಎನ್‌ಡಿಪಿ ಚಳವಳಿಯಿಂದ ಜಾಗೃತರಾದ ಕೆಳವರ್ಗದ ಜನಸಮೂಹ ಎಡಪಕ್ಷಗಳ ಕಡೆ ಆಕರ್ಷಿತರಾಗಿದ್ದರು. ಅವರಲ್ಲಿ ಭೂ ಹೀನ ಕಾರ್ಮಿಕರು ಗೇಣಿದಾರರು ಸೇಂದಿ ತೆಗೆಯುವವರು, ಪ್ಲಾಂಟೇಷನ್ ಕಾರ್ಮಿಕರು, ಗೇರುಬೀಜ ಕಾರ್ಖಾನೆಯ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆ ವರ್ಗಗಳಲ್ಲಿ ಸಕ್ರಿಯವಾಗಿದ್ದ ಕಾರ್ಮಿಕರ ಸಂಘಟನೆಗಳು ಕಮ್ಯೂನಿಸ್ಟ್ ಪಕ್ಷವನ್ನು ಬೆಂಬಲಿಸಿದವು.
ಆದರೆ, ಕಮ್ಯೂನಿಸ್ಟ್ ಪಕ್ಷದಲ್ಲಿ ನಾಯಕತ್ವ ಮಾತ್ರ ಈಳವ, ಪುಲಯ, ಪರವರ ಕೈಗೆ ಬರಲಿಲ್ಲ. ಅದು ನಂಬೂದಿರಿ ನಾಯರ್ ಕೈಯಲ್ಲಿ ಭದ್ರವಾಗಿಯೇ ಉಳಿದುಬಿಟ್ಟಿತ್ತು. ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆಗಳನ್ನು ಪಡೆದಿದ್ದ ಹಿರಿಯ ನಾಯಕಿ ಕೆ.ಆರ್. ಗೌರಿಯವರನ್ನು ವ್ಯವಸ್ಥಿತ ಸಂಚಿನಿಂದ ಪಕ್ಷದಿಂದ ಹೊರಹಾಕಲಾಯಿತು.
ಕಾಂಗ್ರೆಸ್ ಪಕ್ಷವು ಈಳವರಿಗೆ ರಾಜಕೀಯ ಅಧಿಕಾರವನ್ನು ನೀಡಿತು. 1951ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಈಳವರ ನಾಯಕ ಸಿ.ಕೇಶವನ್ ಮುಖ್ಯಮಂತ್ರಿಯಾದರು. 1962ರಲ್ಲಿ ಮತ್ತೊಬ್ಬ ಈಳವ ಆರ್. ಶಂಕರ್ ಮುಖ್ಯಮಂತ್ರಿಯಾದರು. 1971ರಲ್ಲಿ ಅಲ್ಲಿನ ವಿಧಾನಸಭೆಯಲ್ಲಿ 28 ಈಳವ ಶಾಸಕರಿದ್ದರು. ಇಂದು ಕೂಡಾ ಕೇರಳದಲ್ಲಿ ಎಸ್‌ಎನ್‌ಡಿಪಿ ಮತ್ತು ನಾರಾಯಣ ಗುರುಗಳು ಸ್ಥಾಪಿಸಿದ್ದ ದೇವಾಲಯಗಳು ಹಾಗೂ ಸನ್ಯಾಸಿ ಸಂಘದ ಮೇಲೆ ನಿಯಂತ್ರಣ ಸ್ಥಾಪಿಸಲು ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವೆ ಸಂಘರ್ಷ ನಡೆಯುತ್ತಿದೆ. ಎಸ್‌ಎನ್‌ಡಿಪಿ, ಶ್ರೀ ನಾರಾಯಣ ಟ್ರಸ್ಟ್ ಮತ್ತು ಸನ್ಯಾಸಿ ಸಂಘ ಇಂದು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದೆ.
ಕೆಲವು ವರ್ಷಗಳ ಹಿಂದೆ ಸನ್ಯಾಸಿ ಸಂಘದ ಮುಖ್ಯಸ್ಥರಾದ ಸ್ವಾಮಿಗಳು ಅಧಿಕಾರ ಬಿಟ್ಟುಕೊಡದಾಗ ಎ.ಕೆ ಆ್ಯಂಟನಿ ಸರಕಾರ ಅಲ್ಲಿ ಆಡಳಿತಾಧಿಕಾರಿಯನ್ನು ನೇಮಿಸಿತು. ಅವರಿಗೆ ಅಧಿಕಾರ ಹಸ್ತಾಂತರ ಮಾಡಲು ನಿರಾಕರಿಸಿದ ಸ್ವಾಮಿಗಳು ಉಗ್ರಗಾಮಿಗಳ ನೆರವು ಪಡೆದು ಮಠದೊಳಗೆ ಬಂದೂಕು-ಬಾಂಬುಗಳನ್ನು ಶೇಖರಿಸಿಟ್ಟು ಪ್ರತಿರೋಧ ವ್ಯಕ್ತಪಡಿಸಿದರು. ನಾರಾಯಣ ಗುರು ಚಳವಳಿ ಅವರ ಮರಣಾನಂತರದ 60 ವರ್ಷಗಳಲ್ಲಿ ತಲುಪಿರುವ ದುರಂತ ಸ್ಥಿತಿ ಇದು.
ಮೇಲ್ಜಾತಿ ಜನರೂ ಸೇರಿದಂತೆ, ಎಲ್ಲ ವರ್ಗಗಳೊಳಗಿನಿಂದಲೂ ಸುಧಾರಣೆಯ ಧ್ವನಿ ಏಳುವಂತೆ ಮಾಡಿದ್ದು ನಾರಾಯಣಗುರು ಚಳವಳಿಯ ಇನ್ನೊಂದು ಸಾಧನೆ. ನಾಯರ್ ಸೇವಾ ಸಂಘ, ಪುಲಯ ಮಹಾಜನ ಸಭಾ ಮತ್ತು ನಂಬೂದಿರಿಗಳ ಯೋಗಕ್ಷೇಮ ಸಭಾಗಳು ಎಸ್‌ಎನ್‌ಡಿಪಿ ಮಾದರಿಯಲ್ಲಿಯೇ ತಮ್ಮ ಜನಾಂಗಗಳ ಸುಧಾರಣೆಗೆ ಪ್ರಯತ್ನ ನಡೆಸಿದವು. ಸುಧಾರಣಾ ಚಳವಳಿಯಲ್ಲಿ ಭಾಗವಹಿಸಿದ್ದ ನಂಬೂದಿರಿ ಯುವಕರು ಬಹುಬೇಗನೆ ಕಮ್ಯೂನಿಸ್ಟ್ ಪಕ್ಷದ ಕಡೆ ಆಕರ್ಷಿತರಾದರು. ಮುಂದೆ ಕಮ್ಯೂನಿಸ್ಟ್ ಪಕ್ಷದ ನಾಯಕತ್ವ ನಂಬೂದಿರಿ, ನಾಯರ್‌ಗಳ ಪಾಲಾಗಿ ಇತಿಹಾಸ ಮರುಕಳಿಸಿದ್ದನ್ನು ಕಾಣಬಹುದು.
ನಾರಾಯಣ ಗುರು ಚಳವಳಿ ಕೇರಳದಲ್ಲಿ ನಡೆಯದೇ ಹೋಗಿದ್ದರೆ, ಏನಾಗುತ್ತಿತ್ತು ಎಂಬ ಪ್ರಶ್ನೆಗೆ ರಾಜಗೋಪಾಲಾಚಾರಿ ಅವರು ಆ ಚಳವಳಿ ನಡೆಯುತ್ತಿದ್ದ ಕಾಲದಲ್ಲಿಯೇ ಉತ್ತರ ನೀಡಿದ್ದರು. ತಿರುವಾಂಕೂರು ಸಂಸ್ಥಾನದ ದಿವಾನರು ದೇವಸ್ಥಾನ ಪ್ರವೇಶ ಘೋಷಣೆ ಹೊರಡಿಸಲು ವಿಳಂಬ ಮಾಡುತ್ತಿದ್ದುದ್ದನ್ನು ಕಂಡ ರಾಜಗೋಪಾಲಾಚಾರಿಯವರು ದಿವಾನರಿಗೆ ಪತ್ರ ಬರೆದು ನಾರಾಯಣ ಗುರುಗಳ ಸುಧಾರಣಾ ಚಳವಳಿ ನಡೆಯದೆ ಹೋಗಿದ್ದರೆ, ಕೇರಳದಲ್ಲಿನ ಅರ್ಧಕ್ಕೂ ಹೆಚ್ಚಿನ ಜನಸಂಖ್ಯೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿ ಹೋಗುತ್ತಿದ್ದರು ಎಂದು ಎಚ್ಚರಿಸಿದ್ದರು. ಕೇರಳದ ಆಗಿನ ಸ್ಥಿತಿಯಲ್ಲಿ ಈ ಎಚ್ಚರಿಕೆ ಉತ್ಪ್ರೇಕ್ಷೆ ಆಗಿರಲಿಲ್ಲ.
ವಾಸ್ಕೋಡಗಾಮ ಮೊದಲು ಬಂದಿಳಿದ ಕೇರಳದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಉಳಿದೆಲ್ಲ ಕಡೆಗಳಿಗಿಂತ ಹೆಚ್ಚು ಕ್ರಿಯಾಶೀಲರಾಗಿದ್ದವು. ನಾರಾಯಣಗುರುಗಳ ಪ್ರವೇಶವಾಗುವ ಮೊದಲು ಅಲ್ಲಿ ಜಾತಿ ಆಧಾರಿತ ದೌರ್ಜನ್ಯದಿಂದ ಬೇಸತ್ತ ಕೆಳವರ್ಗದ ಜನ ಸಾಮೂಹಿಕವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿದರೆ, ದೇಶದಲ್ಲಿ ಅತಿಹೆಚ್ಚು ಕ್ರಿಶ್ಚಿಯನ್ ಜನಸಂಖ್ಯೆ ಇರುವ ರಾಜ್ಯ ಕೇರಳ. ಅಲ್ಲಿ ಶೇ.24ರಷ್ಟು ಕ್ರಿಶ್ಚಿಯನ್ನರು ಇರುವುದು ಈ ಮತಾಂತರಕ್ಕೆ ಸಾಕ್ಷಿ.