ಮೇಲುಸ್ತುವಾರಿ ಸಮಿತಿ ಆದೇಶ ‘ಸುಪ್ರೀಂ’ನಲ್ಲಿ ಪ್ರಶ್ನೆ: ಪರಮೇಶ್ವರ್
ಬೆಂಗಳೂರು, ಸೆ.19: ಕಾವೇರಿ ಮೇಲುಸ್ತುವಾರಿ ಸಮಿತಿಯು ತಮಿಳುನಾಡಿಗೆ 10 ದಿನಗಳ ಕಾಲ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಇಂದು ನೀಡಿರುವ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಮೇಲುಸ್ತುವಾರಿ ಸಮಿತಿಯಿಂದ ನಮಗೆ ನ್ಯಾಯ ಸಿಗಬಹುದೆಂಬ ಆಶಾಭಾವನೆಯನ್ನು ಹೊಂದಿದ್ದೆವು. ಆದರೆ, ಸಮಿತಿ ನೀಡಿರುವ ತೀರ್ಪು ನಿರಾಸೆ ತಂದಿದೆ ಎಂದರು.
ಕಾವೇರಿ ಮೇಲುಸ್ತುವಾರಿ ಸಮಿತಿಯು ನೀಡಿರುವ ಆದೇಶವು ರಾಜ್ಯದ ಪಾಲಿಗೆ ಮತ್ತೊಂದು ಪೆಟ್ಟು ನೀಡಿದೆ. ಪದೇ ಪದೇ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೆ ಮುಂದೆ ಏನು ಮಾಡಬೇಕು ಎಂಬುದರ ಕುರಿತು ಮುಖ್ಯಮಂತ್ರಿಯು ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ರಾಜ್ಯದ ಹಿತಕ್ಕೆ ಪೂರಕವಾದ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.
ಪ್ರಸ್ತುತ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುವ ಪರಿಸ್ಥಿತಿಯಲ್ಲಿ ನಾವಿಲ್ಲ. ಮೇಲುಸ್ತುವಾರಿ ಸಮಿತಿಯ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ನಾಳೆ(ಮಂಗಳವಾರ) ಪ್ರಶ್ನಿಸುತ್ತೇವೆ. ಕಾವೇರಿ ಕಣಿವೆ ಪ್ರದೇಶದಲ್ಲಿ ವ್ಯಾಪಕ ಭದ್ರತೆ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ಮೇಲಸ್ತುವಾರಿ ಸಮಿತಿಯ ಆದೇಶದಿಂದಾಗಿ ಒಂದು ವೇಳೆ ನಾಳೆ ಯಾವುದಾದರು ಪ್ರತಿಭಟನೆಗಳು, ಅಹಿತಕರ ಘಟನೆಗಳು ಆಗುವ ಸಾಧ್ಯತೆಗಳಿದ್ದರೆ, ಸಂಬಂಧಪಟ್ಟ ಸ್ಥಳಗಳಲ್ಲಿ ಯಾವ ರೀತಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಬೇಕು. ಹೆಚ್ಚುವರಿ ಪಡೆಗಳನ್ನು ಎಲ್ಲಿ ನಿಯೋಜಿಸಬೇಕು ಎಂಬುದರ ಕುರಿತು ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು.
ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ನಗರ ಪೊಲೀಸ್ ಆಯುಕ್ತ ಮೇಘರಿಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.