ಅಗ್ನಿಶಾಮಕ ದಳದ ನೇಮಕಾತಿ ಗೊಂದಲ: ಶಿವ ವಡಾಪಾವ್ ಸ್ಟಾಲ್‌ಗಳ ಸಂಕಷ್ಟ
ಮುಂಬೈ ಅಗ್ನಿಶಾಮಕ ದಳದ ಎರಡು ಕತೆಗಳು!
ಕತೆ - ಒಂದು
ಮುಂಬೈ ಮಹಾನಗರ ಪಾಲಿಕೆಯ ಅಗ್ನಿಶಾಮಕ ದಳದ ಭರ್ತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದ ಪ್ರಕರಣ ಬೆಳಕಿಗೆ ಬಂದ ನಂತರ ಸಂಬಂಧಿತ ಅಗ್ನಿಶಾಮಕ ದಳದ ಸಹಾಯಕ ಕೇಂದ್ರ ಅಧಿಕಾರಿಯನ್ನು ಅಮಾನತು ಮಾಡಲಾಯಿತು. ಅಭ್ಯರ್ಥಿಯ ಫಿಟ್ನೆಸ್ ಪ್ರಮಾಣ ಪತ್ರಗಳಲ್ಲಿ ತಿದ್ದುಪಡಿ ಮಾಡಲಾಗಿರುವ ಸಂಗತಿ ಬೆಳಕಿಗೆ ಬಂದಿತ್ತು. ಡಾಕ್ಟರ್‌ಗಳ ನಕಲಿ ಹಸ್ತಾಕ್ಷರ ಮಾಡಲಾಗಿತ್ತು. ಇದರ ದೂರನ್ನು ಕಾಂದಿವಲಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಆಗಸ್ಟ್ ತಿಂಗಳಿನಿಂದ ಅಗ್ನಿಶಾಮಕ ದಳದಲ್ಲಿ ಭರ್ತಿ ಪ್ರಕ್ರಿಯೆ ಆರಂಭವಾಗಿದೆ. ಭರ್ತಿ ಪ್ರಕ್ರಿಯೆ ಸಂದರ್ಭದಲ್ಲಿ ಅಭ್ಯರ್ಥಿಗಳು ನಿರ್ದಿಷ್ಟ ಎತ್ತರ ಇಲ್ಲದಿದ್ದರೆ ಶಾರೀರಿಕ ಪರೀಕ್ಷೆಯಲ್ಲಿ ಅನರ್ಹರು ಎನ್ನಲಾಗುತ್ತದೆ. ಆದರೆ ಆಯ್ಕೆ ಸಮಿತಿಯಲ್ಲಿದ್ದವರು ತಮ್ಮ ಪರಿಚಯದವರ ದಾಖಲೆ ಪತ್ರಗಳಲ್ಲಿ ತಿದ್ದುಪಡಿ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ. ಮುಂಬೈ ಅಗ್ನಿಶಾಮಕ ದಳದ 774 ಹುದ್ದೆಗಳಿಗೆ ವರ್ಕಿಂಗ್ ಇಂಟರ್‌ವ್ಯೆ ನಡೆಯುತ್ತಿದೆ.
ಕತೆ-ಎರಡು
ಇನ್ನೂ ಆಶ್ಚರ್ಯದ ಸಂಗತಿ ಎಂದರೆ ಈ 774 ಹುದ್ದೆಗಳಲ್ಲಿ 15 ಪ್ರತಿಶತ ನಿಯುಕ್ತಿ ಮಾಜಿ ಸೈನಿಕರಿಗಾಗಿ ಮೀಸಲಿದೆ. ಅಗ್ನಿಶಾಮಕ ದಳದ ನಿಯಮ ಏನೆಂದರೆ ಅಭ್ಯರ್ಥಿ 12ನೆ ತರಗತಿ ತೇರ್ಗಡೆ ಹೊಂದಿರಬೇಕು. ಆದರೆ ಈ ಮಾಜಿ ಸ್ಯೆನಿಕರು 12ನೆ ತರಗತಿ ಪಾಸ್ ಮಾಡಿಲ್ಲದಿರುವ ಕಾರಣ ಅವರ ಅರ್ಜಿಗಳನ್ನು ತಿರಸ್ಕರಿಸಲಾಯಿತು. ಇಂಡಿಯನ್ ಆರ್ಮಿ ಗ್ರಾಜ್ಯುವೇಷನ್ ಆ್ಯಕ್ಟ್ ಅನ್ವಯ ಸೇನೆಯಲ್ಲಿ 15 ವರ್ಷ ಕಾ ಸೇವೆ ಮಾಡಿದವರನ್ನು ಪದವೀಧರ ಎಂದು ತಿಳಿಯಲಾಗುತ್ತದೆ. ಆದರೆ ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಈ ಕಾನೂನು ತಿಳಿದಿಲ್ಲವೇ? ಈ ಬಗ್ಗೆ ಮನವರಿಕೆ ಮಾಡಿದರೂ ಅಧಿಕಾರಿಗಳು ಯಾವುದೇ ಒಪ್ಪಿಗೆ ನೀಡಲಿಲ್ಲ. ಈ ಪ್ರಕರಣ ಅನಂತರ ಮಹಾರಾಷ್ಟ್ರ ಸರಕಾರದ ಸೈನಿಕ್ ಕಲ್ಯಾಣ್ ಬೋರ್ಡ್‌ಗೆ ತಲು ಪಿತು. ಸರಕಾರಿ ನಿಗಮದ ಅಧ್ಯಕ್ಷರಾದ ಮೀನಲ್ ಪಾಟೀಲ್ ಲಿಖಿತ ಆದೇಶ ನೀಡಿ ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಅವರ ಕರ್ತವ್ಯವನ್ನು ನೆನಪಿಸಿದರು. ಆದರೂ ಅಧಿಕಾರಿಗಳು ಅದಕ್ಕೆ ಗಮನವನ್ನೇ ನೀಡಲಿಲ್ಲ. ನಂತರ ಮಾಜಿ ಸೈನಿಕರ ಸಂಸ್ಥೆ ಭಾರತೀಯ ಮಾಜಿ ಸೈನಿಕರ ಸಂಘಟನೆ ಮುಂಬೈ ಹೈಕೋರ್ಟ್‌ನ ಮೆಟ್ಟಲು ಹತ್ತಿತ್ತು. ಜಸ್ಟೀಸ್ ಅನುಪ್ ಮೆಹ್ತಾ ಮತ್ತು ಜಸ್ಟೀಸ್ ಗಿರೀಶ್ ಕುಲಕರ್ಣಿ ಅವರ ಖಂಡಪೀಠವು ಈ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿತು. ಇತ್ತ ಮುಂಬೈ ಮಹಾನಗರ ಪಾಲಿಕೆ, ಮಹಾರಾಷ್ಟ್ರ ಸರಕಾರ ಮತ್ತು ಕೇಂದ್ರ ಸರಕಾರದ ವಕೀಲರ ಬಳಿ ಇದಕ್ಕೆ ಸರಿಯಾದ ಯಾವ ಉತ್ತರವೂ ಇರಲಿಲ್ಲ.
ಸೇನೆಯಲ್ಲಿ ಭರ್ತಿ ಹೆಚ್ಚಾಗಿ 10ನೆ ತರಗತಿ ಪರೀಕ್ಷೆ ಪಾಸಾದ ತಕ್ಷಣ ನಡೆಯುತ್ತದೆ. ಹೀಗಾಗಿ 12ನೆ ತರಗತಿ ಪರೀಕ್ಷೆಗೆ ಅವರು ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಈ 15-20 ವರ್ಷಗಳಲ್ಲಿ ಪದವೀಧರ ರಿಗಿಂತಲೂ ಹೆಚ್ಚಿನ ತರಬೇತಿ ಅವರಿಗೆ ಸಿಗುತ್ತದೆ. ಅಂತೂ ಕೊನೆಗೆ 15 ಪ್ರತಿಶತ ಲೆಕ್ಕಾಚಾರದಲ್ಲಿ 116 ಹುದ್ದೆಗಳನ್ನು ಮಾಜಿ ಸೈನಿಕರಿಗಾಗಿ ಇರಿಸುವಂತೆ ಕೋರ್ಟ್ ಆದೇಶ ನೀಡಿದೆ. ಇದಕ್ಕಾಗಿ ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ. ಇದೀಗ ಹೊಸ ಪ್ರಕಟಣೆ ನೀಡಿ ಮಾಜಿ ಸೈನಿಕರಿಗಾಗಿರುವ 116 ಹುದ್ದೆಗಳನ್ನು ಭರ್ತಿಗೊಳಿಸಲಾಗುವುದು.
* * *
ಉಪನ್ಯಾಸಕರ ಕೊರತೆಯಲ್ಲಿ ಜೆ.ಜೆ. ಆರ್ಟ್ ಸ್ಕೂಲ್
ಭಾರತದಲ್ಲಿ ಕಲಾ ಮಾಧ್ಯಮದಲ್ಲಿ ವಿಶಿಷ್ಟ ಶಿಕ್ಷಣ ಸಂಸ್ಥೆಯೆಂದು ಪ್ರಸಿದ್ಧಿ ಪಡೆದಿರುವ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್ ಇದೀಗ ಸಂಕಟದಲ್ಲಿದೆ. ಮುಂಬೈಯಲ್ಲಿ 159 ವರ್ಷದ ಮೊದಲು ಸ್ಥಾಪನೆಯಾಗಿರುವ ಈ ಹಳೆಯ ಸಂಸ್ಥೆಯಲ್ಲಿ ಪ್ರೊಫೆಸರ್‌ಗಳ ಸಂಖ್ಯೆ ಕಡಿಮೆಯಾಗಿದ್ದು ಇರುವ ಲೆಕ್ಚರರ್‌ಗಳು ಕಷ್ಟವನ್ನು ಎದುರಿಸುವಂತಾಗಿದೆ. ಮಹಾರಾಷ್ಟ್ರ ಸರಕಾರದ ಕಲಾ ನಿರ್ದೇಶನಾಲಯದ ಅಧೀನ ಕೆಲಸ ಮಾಡುವ ಬ್ರಿಟಿಷ್ ಕಾಲದ ಈ ಸಂಸ್ಥೆ ಇಂದು ಸರಕಾರದ ಅವಗಣನೆಗೆ ಸಿಕ್ಕಿ ಸಂಕಟ ಎದುರಿಸುತ್ತಿದೆ. ಈ ಸಂಗತಿಯನ್ನು ಆರ್‌ಟಿಐ ಮೂಲಕ ತಿಳಿಸಿದವರು ಆರ್‌ಟಿಐ ಕಾರ್ಯಕರ್ತ ಅನಿಲ್ ಗಲಗಲಿ. ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಒಂಬತ್ತು ಮಂದಿ ಪ್ರೊಫೆಸರ್‌ಗಳು ಇರಬೇಕಾಗಿದೆ. ಸದ್ಯ ಒಬ್ಬರೇ ಪ್ರೊಫೆಸರ್ ಇದ್ದಾರೆ. ಎಂಟು ಹುದ್ದೆಗಳು ಖಾಲಿ ಇವೆ. ಅದೇ ರೀತಿ ಲೆಕ್ಚರರ್‌ಗಳ 38 ಹುದ್ದೆ ಗಳಿವೆ. ಆದರೆ 28 ಹುದ್ದೆಗಳು ಖಾಲಿ ಇವೆ. ಅಂದರೆ ಪ್ರೊಫೆಸರ್, ಲೆಕ್ಚರರ್‌ಗಳ ಒಟ್ಟು ಹುದ್ದೆಗಳಲ್ಲಿ 33 ಹುದ್ದೆಗಳು ಈಗಲೂ ಖಾಲಿ ಇವೆ. ಸದ್ಯ ಆರು ತಾತ್ಕಾಲಿಕ ಲೆಕ್ಚರರ್‌ಗಳಿದ್ದಾರೆ. ಒಂಬತ್ತು ಲೆಕ್ಚರರ್‌ಗಳು ಕಾಂಟ್ರಾಕ್ಟ್ ಮೇಲೆ ಸೇವೆಗೈಯುತ್ತಿದ್ದಾರೆ. 1993ರಲ್ಲಿ ಲೆಕ್ಚರರ್-ಪ್ರೊಫೆಸರ್‌ಗಳ ನಿಯುಕ್ತಿಯ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಹಾಗೂ ಪ್ರೊಫೆಸರ್‌ಗಳ ನಿಯುಕ್ತಿಯ ಜವಾಬ್ದಾರಿಯೂ ರದ್ದಾಗಿದೆ. ನಿಯುಕ್ತಿಯ ಜವಾಬ್ದಾರಿ ಮಹಾರಾಷ್ಟ್ರ ರಾಜ್ಯ ಕಲಾ ನಿರ್ದೇಶನಾಲಯದ ಕಲಾ ನಿರ್ದೇಶಕರದ್ದಾಗಿದೆ.
* * *
ಹದಿನೇಳು ಪಾರಿವಾಳಗಳ ಬೆಲೆ ಎರಡೂವರೆ ಲಕ್ಷ ರೂಪಾಯಿ!
ಮುಂಬೈ ಮಹಾನಗರದಲ್ಲಿ ಕಬೂತರ್ ಖಾನಾಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಅರ್ಥಾತ್ ಪಾರಿವಾಳಗಳಿಗೆ ಧಾನ್ಯ ಹಾಕುವ ಸ್ಥಳ. ಇನ್ನೊಂದೆಡೆ ಕೆಲವರಿಗೆ ದೇಶೀಯ ಪಾರಿವಾಳಗಳಷ್ಟೇ ಸಾಕಾಗುವುದಿಲ್ಲ, ವಿದೇಶಿ ಪಾರಿವಾಳಗಳನ್ನೂ ಸಾಕುವ ಹವ್ಯಾಸವಿದೆ. ಇಂತಹ ವಿದೇಶಿ ಪಾರಿವಾಳಗಳನ್ನು ಭಿವಂಡಿ ಸಮೀಪದ ಕೋನ್‌ಗಾಂವ್‌ನಲ್ಲಿ ಒಬ್ಬರು ಸಾಕುತ್ತಿದ್ದರು. ಆದರೆ ಈ ವಿದೇಶಿ ಪಾರಿವಾಳಗಳನ್ನು ಕಳ್ಳರು ಕದ್ದೊಯ್ದು ಇದೀಗ ಸಿಕ್ಕಿ ಬಿದ್ದ ಘಟನೆ ವರದಿಯಾಗಿದೆ.
ಕೋನ್‌ಗಾಂವ್‌ನಿಂದ ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ಬೇರೆ ಬೇರೆ ತಳಿಯ ಹದಿನೇಳು ಪಾರಿವಾಳಗಳು ಇತ್ತೀಚೆಗೆ ಕಳ್ಳತನವಾಗಿತ್ತು. ಕೋನ್‌ಗಾಂವ್ ಪೊಲೀಸರು ಇದೀಗ ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ.
ವಿದೇಶಿ ಮತ್ತು ದುಬಾರಿ ಬೆಲೆಯುಳ್ಳ ಪಾರಿವಾಳಗಳನ್ನು ಸಾಕುವ ಶೋಕಿ ಇದ್ದ ವೈಭವ್ ಮ್ಹಾತ್ರೆ ಅವರು ಕೋನ್‌ಗಾಂವ್‌ನ ತನ್ನ ಟೆರೇಸ್‌ನಲ್ಲಿ ಹಂಗೇರಿಯನ್, ಢಂಪೆ, ಟರ್, ಲಾಹೋರಿ....... ಇತ್ಯಾದಿ ಬೇರೆ ಬೇರೆ ತಳಿಯ ದುಬಾರಿ ಬೆಲೆ ಇರುವ ಪಾರಿವಾಳಗಳನ್ನು ಸಾಕುತ್ತಿದ್ದರು. ಟೆರೇಸ್‌ನಲ್ಲಿ ಅದಕ್ಕಾಗಿ ಜಾಲಿ ಹಾಕಿ ಅವುಗಳ ನಡುವೆ ಪಾರಿವಾಳಗಳನ್ನು ಇರಿಸಿದ್ದರು. ಈ 17 ಪಾರಿವಾಳಗಳ ಬೆಲೆ ಎರಡೂವರೆ ಲಕ್ಷ ರೂಪಾಯಿಯಂತೆ.
* * *
ಸಂಕಟದಲ್ಲಿ ಶಿವ ವಡಾಪಾವ್ ಸ್ಟಾಲ್‌ಗಳು
ಮುಂಬೈ ರಸ್ತೆಗಳಲ್ಲಿ ಸುಮಾರು 250ಕ್ಕೂ ಹೆಚ್ಚಿರುವ ಅನಧಿಕೃತ ಶಿವ ವಡಾಪಾವ್ ಅಂಗಡಿಗಳನ್ನು ಮುಂದಿನ ಮೂರು ತಿಂಗಳೊಳಗೆ ತೆಗೆದು ಹಾಕುವಂತೆ ಬಾಂಬೆ ಹೈಕೋರ್ಟ್ ಮಹಾನಗರ ಪಾಲಿಕೆಗೆ ಆದೇಶಿಸಿದೆ. ಮುಂಬೈಯ ಗಲ್ಲಿ -ಗಲ್ಲಿಗಳಲ್ಲಿ ನಾನಾ ರೀತಿಯ ಖಾದ್ಯ ತಿಂಡಿಗಳನ್ನು ಮಾರುವ ಸ್ಟಾಲ್‌ಗಳಿವೆ. ಇವುಗಳಲ್ಲಿ ಅನೇಕ ಸ್ಟಾಲ್‌ಗಳು ಗ್ಯಾಸ್ ಸಿಲಿಂಡರ್ ರಸ್ತೆ ಬದಿಯಲ್ಲಿರಿಸಿ ಅಲ್ಲೇ ಸ್ಟೌವ್ ಉರಿಸಿ ತಿಂಡಿಗಳನ್ನು ತಯಾರಿಸುತ್ತಿವೆ. ಜೊತೆಗೆ ಅಕ್ಕಪಕ್ಕದಲ್ಲಿ ಕೊಳಕು ಸೃಷ್ಟಿಸುತ್ತಿವೆ. ಇದನ್ನು ಗಮನದಲ್ಲಿರಿಸಿ ಮುಖ್ಯ ನ್ಯಾಯಾಧೀಶೆ ಮಂಜುಳಾ ಮತ್ತು ನ್ಯಾಯಾಧೀಶ ಮಹೇಶ್ ಸೋನಕ್ ಅವರು ಎನ್.ಜಿ.ಒ. ಜನಸೇವಾ ಮಂಡಲವು ದಾಖಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿ ಈ ಆದೇಶ ನೀಡಿದ್ದಾರೆ. ಈ 250ಕ್ಕೂ ಹೆಚ್ಚಿರುವ ಶಿವ ವಡಾಪಾವ್ ಅಂಗಡಿಗಳು ಲೈಸನ್ಸ್ ಪಡೆಯದೆಯೇ ದಂಧೆ ನಡೆಸುತ್ತಿವೆಯಂತೆ. 2009ರಲ್ಲಿ ಸ್ಥಳೀಯ ಜನರಿಗೆ ಉದ್ಯೋಗ ನೀಡುವುದಕ್ಕಾಗಿ ಶಿವಸೇನೆಯು ಶಿವ ವಡಾಪಾವ್ ಸ್ಟಾಲ್‌ಗಳನ್ನು ಆರಂಭಿಸಿತ್ತು. ಶಿವ ವಡಾಪಾವ್‌ನ 2 ಸಾವಿರ ಸ್ಟಾಲ್‌ಗಳಿವೆ. ತೊಂಬತ್ತರ ದಶಕದಲ್ಲಿ ಇಲ್ಲಿ ಝಣ್ಕಾ ಭಾಕರ್ ಸ್ಟಾಲ್‌ಗಳಿದ್ದುವು. ಆದರೆ ಅವುಗಳಲ್ಲಿ ಅನೇಕ ಸ್ಟಾಲ್‌ಗಳನ್ನು ಕೆಲವು ಕಾರಣಗಳಿಂದ ಬಂದ್ ಮಾಡಲಾಗಿದೆ. ಇಂತಹ ಸ್ಟಾಲ್‌ಗಳಿದ್ದ ಸ್ಥಳದಲ್ಲಿ ಈಗ ಶಿವ ವಡಾಪಾವ್ ಸ್ಟಾಲ್‌ಗಳು ಅಕ್ರಮವಾಗಿ ಎದ್ದು ನಿಂತಿವೆ. ಆದರೆ ಕೋರ್ಟ್ ಬೆಂಚ್ ಇಲ್ಲಿ ಇನ್ನೊಂದು ಮಾತೂ ಹೇಳಿದೆ. ‘‘ಮಹಾನಗರ ಪಾಲಿಕೆಗೆ ಕೇವಲ ಲೈಸನ್ಸ್ ಇಲ್ಲದ ಸ್ಟಾಲ್‌ಗಳನ್ನು ತೆಗೆದು ಹಾಕಲು ಆದೇಶ ನೀಡುವ ಅಧಿಕಾರ ಮಾತ್ರ ತನಗೆ ಇರುತ್ತದೆ’’ ಎಂದು.
ಇಲ್ಲಿ ಅರ್ಜಿಯಲ್ಲಿ ಹೇಳಲಾದ ಸ್ಟಾಲ್‌ಗಳ ವಿರುದ್ಧ ಮಾತ್ರವಲ್ಲ, ರಸ್ತೆ ಬದಿ ಇರುವ ಇನ್ನಿತರ ಅನಧಿಕೃತ ಸ್ಟಾಲ್‌ಗಳನ್ನೂ ಮನಪಾಕ್ಕೆ ತೆಗೆದು ಹಾಕುವಂತೆ ಸೂಚಿಸಿದೆ. ಹನ್ನೆರಡು ವಾರಗಳಲ್ಲಿ ಮಹಾನಗರ ಪಾಲಿಕೆ ಈ ಕ್ರಮ ಕೈಗೊಳ್ಳಬೇಕಾಗಿದೆ.
ಮುಂಬೈಯ ಶಿವ ವಡಾಪಾವ್ ಸ್ಟಾಲ್‌ಗಳ ವಿಷಯದಲ್ಲಿ ಬಹಳಷ್ಟು ರಾಜಕೀಯ ನಡೆದಿದೆ. ಶಿವಸೇನೆಯ ಶಿವ ವಡಾಪಾವ್‌ನ ಯೋಜನೆಯ ಇದರ ವಿರುದ್ಧವಾಗಿ ಮಹಾರಾಷ್ಟ್ರ ಬಿಜೆಪಿ ಪ್ರಧಾನಿ ನರೇಂದ್ರ ಮೋದಿಯ ಹೆಸರಲ್ಲಿ ನಮೋ ಸ್ಟಾಲ್ ಯೋಜನೆ ಹಾಕಿಕೊಂಡಿತ್ತು. ಮಹಾನಗರ ಪಾಲಿಕೆಗೂ ಈ ಬಗ್ಗೆ ಒಂದು ಪ್ರಸ್ತಾವ ಕಳುಹಿಸಲಾಗಿತ್ತು. ಇದೀಗ ಇಂತಹ ಅನಧಿಕೃತ ಶಿವ ವಡಾಪಾವ್ ಸ್ಟಾಲ್‌ಗಳನ್ನು ಎಬ್ಬಿಸುವ ಜವಾಬ್ದಾರಿ ಮಹಾನಗರ ಪಾಲಿಕೆಯದ್ದೇ ಆಗಿದೆ ಎಂದಿದೆ ಹೈಕೋರ್ಟ್.
* * *
ಫಿಟ್ನೆಸ್ ಸರ್ಟಿಫಿಕೆಟ್‌ನ ನಿರೀಕ್ಷೆಯಲ್ಲಿ ಸ್ಕೂಲ್ ಬಸ್ಸುಗಳು
ಮುಂಬೈ ಮಹಾನಗರದ ಕ್ಷೇತ್ರಿಯ ಸಾರಿಗೆ ಕಾರ್ಯಾಲಯವು ಕೆಲವು ದಿನಗಳ ಹಿಂದೆ ಶಾಲಾ ಬಸ್ಸುಗಳು ಮತ್ತು ವ್ಯಾನ್‌ಗಳಿಗೆ ಫಿಟ್ನೆಸ್ ಸರ್ಟಿಫಿಕೆಟ್ ಜಾರಿಗೊಳಿಸುವುದನ್ನು ಬಂದ್ ಮಾಡಿದ ನಂತರ ಸ್ಕೂಲ್ ಬಸ್ ಓನರ್ ಅಸೋಸಿಯೇಶನ್ ಇದೀಗ ತೀವ್ರ ಚಿಂತೆಗೀಡಾಗಿದೆ. ಯಾಕೆಂದರೆ ಒಂದು ವೇಳೆ ಬಸ್ಸು-ವ್ಯಾನ್ ಅವಘಡಗೊಳಗಾದ ಪಕ್ಷದಲ್ಲಿ ಬಸ್ಸು ಮಾಲಕರಿಗೆ ವಿಮೆಗೆ ಅರ್ಜಿ ಹಾಕುವಂತಿಲ್ಲ. ಯಾಕೆಂದರೆ ವಿಮಾ ಕಂಪೆನಿ ಮೊದಲಿಗೆ ಫಿಟ್ನೆಸ್ ಸರ್ಟಿಫಿಕೇಟ್‌ನ ತನಿಖೆ ನಡೆಸುತ್ತದೆ ಎನ್ನುತ್ತಾರೆ ಅಸೋಸಿಯೇಶನ್‌ನ ಸದಸ್ಯರು. ಅಸೋಸಿಯೇಶನ್‌ನ ಅನುಸಾರ ಕನಿಷ್ಠ 7,000 ಸ್ಕೂಲ್ ಬಸ್ಸು ಮತ್ತು ವ್ಯಾನ್‌ಗಳು ಈ ಸಮಯ ಆರ್‌ಟಿಒದ ಫಿಟ್ನೆಸ್ ಸರ್ಟಿಫಿಕೆಟ್‌ನ ನಿರೀಕ್ಷೆಯಲ್ಲಿವೆ.