ಸರಕಾರಿ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸಬಾರದು ಯಾಕೆಂದರೆ...’
ನಮ್ಮ ರಾಜ್ಯ ಸರಕಾರವು ಇತ್ತೀಚೆಗೆ ಉಡುಪಿಯ ನಗರದ ಮಧ್ಯಭಾಗ ದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಉದ್ಯಮಿಯೋರ್ವರಿಗೆ ಪರಭಾರೆ ಮಾಡ ಹೊರಟಿದೆ. ಇದರ ವಿರುದ್ಧ ಉಡುಪಿ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರು ಆಂದೋಲನವೊಂದನ್ನು ಪ್ರಾರಂಭಿಸಿದ್ದಾರೆ. ಇದಕ್ಕೆ ಪೂರಕವಾಗಿ ಓರ್ವ ಅರೆವೈದ್ಯಕೀಯ ವೃತ್ತಿಪರನಾಗಿ ಮತ್ತು ಮಾನವ ಹಕ್ಕು ಕಾರ್ಯಕರ್ತನಾಗಿ ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳ ಬಯಸುತ್ತೇನೆ.
ತನ್ನ ಪ್ರಜೆಗಳಿಗೆ ಉಚಿತವಾಗಿ ಆರೋಗ್ಯ ಸೇವೆ ನೀಡುವುದು ಯಾವುದೇ ಪ್ರಜಾಸತ್ತಾತ್ಮಕ ಸರಕಾರದ ಕರ್ತವ್ಯವಾಗಿದೆಯೇ ಹೊರತು ಅದು ಯಾವುದೇ ಸರಕಾರದ ಔದಾರ್ಯವಲ್ಲ. ಮಲ್ಟಿಸ್ಪೆಷಾಲಿಟಿ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವಷ್ಟೇ ಶ್ರೇಷ್ಠ ಗುಣ ಮಟ್ಟದ ಚಿಕಿತ್ಸೆ ಸರಕಾರಿ ಆಸ್ಪತ್ರೆಗಳಲ್ಲಿ ಸಿಗದೇ ಇರಬಹುದು. ಆದರೆ ಮೂಲಭೂತ ಚಿಕಿತ್ಸೆಗಳಂತೂ ಎಲ್ಲಾ ಪೂರ್ಣ ಪ್ರಮಾಣದ ಸರಕಾರಿ/ ಆಸ್ಪತ್ರೆಯಲ್ಲಿ ಕೆಲವೊಂದು ಮಿತಿಗಳಿದ್ದೂ ಸಿಗುತ್ತವೆ. ಅನೇಕ ಖಾಯಿಲೆಗಳಿಗೆ ಸದ್ಯ ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಚಿಕಿತ್ಸೆ ಸಾಕಾಗುತ್ತದೆ. ಉದಾಹರಣೆಗೆ ಕ್ಷಯರೋಗಕ್ಕೆ ಸರಕಾರಿ/ಆಸ್ಪತ್ರೆಗಳಲ್ಲಿ RNTCP Dots Multy drug resistant tuberculosis ಎಂಬ (ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣಾ ಕಾರ್ಯಕ್ರಮದ ನೇರ ನಿಗಾ ಚಿಕಿತ್ಸಾ ಪದ್ಧತಿ) ಪರಿಣಾಮಕಾರಿ ಚಿಕಿತ್ಸೆ ಲಭ್ಯವಿದೆ. ಕನಿಷ್ಠ 6 ತಿಂಗಳಿನಿಂದ 9 ತಿಂಗಳುಗಳವರೆಗೆ ಪಡೆಯಬೇಕಾದ ಈ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಯೊಂದರಲ್ಲಿ ಪಡೆಯಬೇಕಾದರೆ 15ರಿಂದ 20 ಸಾವಿರ ರೂಪಾಯಿಗಳನ್ನು ವ್ಯಯಿಸಬೇಕು. ಬಹುಪಾಲು ಬಡವರೇ ತುಂಬಿರುವ ‘ಈ ಶ್ರೀಮಂತರ ದೇಶದಲ್ಲಿ’ ದೊಡ್ಡ ಸಂಖ್ಯೆಯ ಜನತೆಗೆ ಇಷ್ಟು ದುಡ್ಡುವ್ಯಯಿಸಿ ಚಿಕಿತ್ಸೆ ಪಡೆಯುವುದು ಸುಲಭ ಸಾಧ್ಯವಲ್ಲ. ಸಾಮಾನ್ಯವಾಗಿ ಕ್ಷಯರೋಗಕ್ಕೆ ಚಿಕಿತ್ಸೆ ಪ್ರಾರಂಭಿಸಿ ಒಂದೆರಡು ತಿಂಗಳಲ್ಲಿ ರೋಗಿಯ ರೋಗಲಕ್ಷಣಗಳು ಕಣ್ಮರೆಯಾಗುತ್ತದೆ. ರೋಗಲಕ್ಷಣಗಳು ಕಣ್ಮರೆಯಾಯಿತೆಂದರೆ ರೋಗ ವಾಸಿಯಾಯಿತೆಂದರ್ಥವಲ್ಲ. ರೋಗ ಲಕ್ಷಣ ಕಣ್ಮರೆಯಾಯಿತೆಂದು ರೋಗಿ ಚಿಕಿತ್ಸೆ ಪಡೆಯುವುದನ್ನು ನಿಲ್ಲಿಸಿದರೆ ಮುಂದೆ ಅದು (ಬಹು ಔಷಧ ಪ್ರತಿರೋಧೀ ಕ್ಷಯ ರೋಗ) ಎಂಬ ಮದ್ದಿಲ್ಲದ ಖಾಯಿಲೆಯಾಗಿ ಮಾರ್ಪಡುತ್ತದೆ. ಇದೇ ಚಿಕಿತ್ಸೆ ಉಚಿತವಾಗಿ ಸಿಗುವಾಗ ರೋಗಿ ಸಂಪೂರ್ಣ ಚಿಕಿತ್ಸೆ ಪಡೆದು ಆರೋಗ್ಯವಂತನಾಗುವ ಸಾಧ್ಯತೆ ನಿಚ್ಚಳ.
ಇನ್ನೊಂದು ಉದಾಹರಣೆ:
ಶಿಶುಗಳಿಗೆ ನೀಡುವ ರೋಗ ನಿರೋಧಕ ಲಸಿಕೆಗಳನ್ನು (ಚುಚ್ಚು ಮದ್ದುಗಳು) ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಖಾಸಗಿ ವೈದ್ಯರು ಒಂದು ಲಸಿಕೆಗೆ ಒಂದೂವರೆ ಸಾವಿರ ರೂಪಾಯಿಯಿಂದ ಎರಡೂವರೆ ಸಾವಿರ ರೂಪಾಯಿಗಳವರೆಗೆ ಶುಲ್ಕ ಪಡೆಯುತ್ತಾರೆ. ಉಚಿತವಾಗಿ ಲಸಿಕೆಗಳು ಲಭ್ಯವಿರುವುದರಿಂದ ಕಡುಬಡವನೂ ತನ್ನ ಮಗುವಿಗೆ ಲಸಿಕೆ ಹಾಕಿಸುತ್ತಾನೆ. ಒಂದು ವೇಳೆ ಇಂತಹ ಲಸಿಕೆಗಳು ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರದಿದ್ದರೆ ಈ ದೇಶದ ಅರ್ಧದಷ್ಟು ಜನತೆ ಲಸಿಕೆಗಳ ಬಗ್ಗೆ ನಿರ್ಲಕ್ಷ ತೋರುತ್ತಿದ್ದರು. ಅಥವಾ ಲಸಿಕೆ ಹಾಕಿಸದೆ ಇರುತ್ತಿದ್ದರು. ಒಂದು ವೇಳೆ ಲಸಿಕೆಗಳನ್ನೇ ಹಾಕಿಸದಿರುತ್ತಿದ್ದರೆ ನಮ್ಮ ಈ ಬೃಹತ್ ದೇಶದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಜನತೆ ರೋಗಗ್ರಸ್ತರಾಗುತ್ತಿದ್ದರು.
ಮತ್ತೊಂದು ಉದಾಹರಣೆ ನೋಡೋಣ.
ಒಂದು ಸಾಮಾನ್ಯ ಮಟ್ಟದ ಖಾಸಗಿ ಆಸ್ಪತ್ರೆಯಲ್ಲಿ ಸಾಮಾನ್ಯ ಹೆರಿಗೆಗೆ ಕನಿಷ್ಠ 15 ರಿಂದ 20 ಸಾವಿರ ರೂಪಾಯಿಗಳು ಖರ್ಚಾಗುತ್ತದೆ. ಸಿಸೇರಿಯನ್ ಹೆರಿಗೆಗೆ 40 ರಿಂದ 50 ಸಾವಿರ ರೂಪಾಯಿಗಳು ಖರ್ಚಾಗುತ್ತದೆ. ಮಲ್ಟಿ ಸ್ಪೆಷಾಲಿಟಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಬಿಲ್ಲಿನ ಬಗ್ಗೆ ಕೇಳುವುದು ಬೇಡ. ಒಂದು ವೇಳೆ ಸರಕಾರಿ ಆಸ್ಪತ್ರೆಗಳಿರದಿರುತ್ತಿದ್ದರೆ ಈ ದೇಶದಲ್ಲಿ ಈ ಕಾಲಕ್ಕೆ ಶಿಶು ಮರಣ ಪ್ರಮಾಣ, ಹೆರಿಗೆಯ ಸಂದರ್ಭ ತಾಯಿಯ ಮರಣದ ಪ್ರಮಾಣ ಎಷ್ಟಿರುತ್ತಿತ್ತು ಎಂದು ಊಹಿಸಿ ನೋಡಿ. ಖಾಸಗಿ ಆಸ್ಪತ್ರೆಯೊಂದರಲ್ಲಿ ತನ್ನ ಪತ್ನಿಯ ಹೆರಿಗೆ ಮಾಡಿಸಬೇಕಾದರೆ ಬಡ ಕೂಲಿ ಕಾರ್ಮಿಕನೊಬ್ಬ ಬರೋಬ್ಬರಿ 6 ತಿಂಗಳು ದುಡಿಯಬೇಕು. ಒಂದು ಆಸ್ಪತ್ರೆಯನ್ನು ಖಾಸಗಿಯವರಿಗೆ ಪರಭಾರೆ ಮಾಡಿದ ಮಾತ್ರಕ್ಕೆ ಲೋಕವೇನು ಮುಳುಗಿ ಹೋಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಬಹುದು. ಉಡುಪಿಯನ್ನು ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ. ಉಡುಪಿ ಜಿಲ್ಲೆಯಲ್ಲಿ ಹಲವಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿರಬಹುದು. ಆದರೆ ಉಡುಪಿ ನಗರದ ಸುತ್ತಮುತ್ತಲ ಬಡವರಿಗೆ ಲಭ್ಯವಿರುವ ತಕ್ಕ ಮಟ್ಟಿನ ಸೌಲಭ್ಯವಿರುವ ಆಸ್ಪತ್ರೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಬಡವರ ಪಾಲಿಗೆ ಸಂಜೀವಿನಿಯಂತೆ. ನಗರದ ಸುತ್ತಮುತ್ತಲ ಜನತೆ ಅದನ್ನು ಬಿಟ್ಟು ಇನ್ನೊಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕೆಂದರೆ ಕನಿಷ್ಠ ಐದಾರು ಕಿಲೋಮೀಟರ್ ದೂರವಾದರೂ ಕ್ರಮಿಸಬೇಕು. ಒಂದು ಪೂರ್ಣ ಪ್ರಮಾಣದ ಆಸ್ಪತ್ರೆಯಲ್ಲಿ ಸಿಗುವ ಚಿಕಿತ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ ಸಿಗುವುದಿಲ್ಲ.
MBBS MBBS ಒಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಬ್ಬನೇ ವೈದ್ಯರಿರುತ್ತಾರೆ. ಕೆಲವು ಕಡೆ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒಬ್ಬನೇ ವೈದ್ಯರಿರುತ್ತಾರೆ. ಅಂತಹ ಕೇಂದ್ರಗಳಲ್ಲಿ ವಾರದಲ್ಲಿ ಎರಡು ದಿನ ಮಾತ್ರ ವೈದ್ಯರು ಲಭ್ಯರಿರುತ್ತಾರೆ. ಒಂದೇ ಆರೋಗ್ಯ ಕೇಂದ್ರದ ಕರ್ತವ್ಯವಿರುವ ವೈದ್ಯನಿಗೂ ಹೆಚ್ಚಿನ ಸಂದರ್ಭಗಳಲ್ಲಿ ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇನ್ನೆರಡು ದಿನಗಳಲ್ಲಿ ಆತನಿಗೆ ತನ್ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬಂಧಿಸಿದ ಕಚೇರಿ ಕೆಲಸಗಳು, ಫೀಲ್ಡ್ ವರ್ಕ್ ಇತ್ಯಾದಿಗಳೇನಾದರೂ ಇದ್ದೇ ಇರುತ್ತದೆ. ಯಾವುದೇ ಪೂರ್ಣ ಪ್ರಮಾಣದ ಆಸ್ಪತ್ರೆಗಳಲ್ಲಿರುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಜ್ಞ (ಸ್ಪೆಷಲಿಷ್ಟ್) ವೈದ್ಯರಿರುವುದಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪಾಸಾದ ವೈದ್ಯರು ಮಾತ್ರ ಇರುತ್ತಾರೆ. ಓರ್ವ ವೈದ್ಯನಿಗೆ ವೃತ್ತಿಗೆ ಸಂಬಂಧಿಸಿದಂತೆ ಕೆಲವು ಮಿತಿಗಳಿರುತ್ತವೆ.
ಶಿಶುಗಳಿಗೆ ಹಾಕುವ ಲಸಿಕೆಯ ವಿಚಾರವೂ ಅಷ್ಟೆ. ಸಾಮಾನ್ಯವಾಗಿ ಪೂರ್ಣ ಪ್ರಮಾಣದ ಆಸ್ಪತ್ರೆಯಲ್ಲಿ ವಾರಕ್ಕೊಂದು ಬಾರಿ ಲಸಿಕೆ ಸೌಲಭ್ಯವಿರುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂತಿಷ್ಟು ಶಿಶುಗಳು ಲಸಿಕೆಗೆ ಬಂದರೆ ಮಾತ್ರ ಲಸಿಕೆಯ ಸೀಸೆ ತೆರೆಯಬೇಕೆಂಬ ನಿರ್ಬಂಧವಿರುತ್ತದೆ. ಒಂದು ವೇಳೆ ನಿಗದಿತ ಪ್ರಮಾಣದಲ್ಲಿ ಶಿಶುಗಳು ಲಸಿಕೆಗೆ ಬಾರದಿದ್ದರೆ ಬೇರೆ ಕೇಂದ್ರಕ್ಕೆ ಕಳುಹಿಸಬೇಕಾಗುತ್ತದೆ. ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಿಗದಿತ ಪ್ರಮಾಣದಷ್ಟು ಶಿಶುಗಳು ಲಸಿಕೆಗೆ ಬರುವುದಿಲ್ಲವಾದ್ದರಿಂದ ತಿಂಗಳಿಗೊಮ್ಮೆ ಮಾತ್ರ ಲಸಿಕೆಯ ಸೀಸೆಯನ್ನು ತೆರೆಯಲಾಗುತ್ತದೆ. ವಾರಕ್ಕೊಂದು ಬಾರಿ ಲಸಿಕೆ ಸೌಲಭ್ಯವಿರುವ ಆಸ್ಪತ್ರೆಗಳಲ್ಲಾದರೆ ವಾರದ ನಿಗದಿತ ದಿನ ಕಾರಣಾಂತರಗಳಿಂದ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗದವರು ಮುಂದಿನ ವಾರದ ನಿಗದಿತ ದಿನ ಲಸಿಕೆ ಹಾಕಿಸಬಹುದು.
ಇವೆಲ್ಲ ಕೆಲವು ಉದಾಹರಣೆಗಳಷ್ಟೆ.
ಉಡುಪಿಯ ಸರಕಾರಿ ಆಸ್ಪತ್ರೆಯಿರಲಿ, ಅಥವಾ ಇನ್ಯಾವುದೇ ಸರಕಾರಿ ಆಸ್ಪತ್ರೆಯಿರಲಿ ಅವುಗಳನ್ನು ಸರಕಾರ ವೈದ್ಯಕೀಯ ಕ್ಷೇತ್ರವನ್ನು ದಂಧೆಯಾಗಿಸುವ, ಬಡ ರೋಗಿಗಳನ್ನು ದರೋಡೆ ಮಾಡುವ ಶ್ರೀಮಂತ ದರೋಡೆಕೋರರ ಕೈಗೆ ಯಾವುದೇ ಕಾರಣಕ್ಕೂ ನೀಡಬಾರದು. ಉಚಿತ ಆರೋಗ್ಯ ಸೇವೆ ಪಡೆಯುವುದು ದೇಶವಾಸಿಗಳ ಹಕ್ಕಾಗಿರುತ್ತದೆ.