ಕಾವೇರಿ: ಸಾಂವಿಧಾನಿಕ ಬಿಕ್ಕಟ್ಟೇ?
ತಲಕಾವೇರಿಯಲ್ಲಿ ಹುಟ್ಟಿದಾಗ ಕಾವೇರಿ ನದಿಗೆ ಕರ್ನಾಟಕ ಮತ್ತು ತಮಿಳುನಾಡಿನ ಜನಜೀವನದ ಹರಿವಿನಲ್ಲಿ ಮತ್ತು ರಾಜಕೀಯದಲ್ಲಿ ತನ್ನ ಪಾತ್ರ ಇಷ್ಟೊಂದು ವಿಶಾಲ, ಗಂಭೀರ ಮತ್ತು ಹಿರಿದಾಗುತ್ತದೆಂಬ ಗ್ರಹಿಕೆಯಿದ್ದಿರಲಿಕ್ಕಿಲ್ಲ. ಹಾಗಿದ್ದದ್ದರೆ ಮತ್ತು ಕಾವೇರಿ ನಂಬಿಕೆಗಳ ಪೂಜ್ಯತೆಗೆ ನ್ಯಾಯ ಒದಗಿಸುವುದಾಗಿದ್ದರೆ ಪ್ರಾಯಃ ಕಾವೇರಿ ಗುಪ್ತಗಾಮಿನಿ ಯಾಗಿರಬೇಕಾಗಿತ್ತು ಇಲ್ಲವೇ ಹರಿಯಲೇಬೇಕೆಂಬ ಅನಿವಾರ್ಯ ಒತ್ತಡವಿದ್ದಿದ್ದರೆ ಪೂರ್ವಕ್ಕೆ ಹರಿಯುವ ಬದಲು ಪಶ್ಚಿಮಕ್ಕೆ ಹರಿದಿದ್ದರೆ ಕೆಲವೇ ಮೈಲುಗಳ ದೂರದಲ್ಲಿ ಮಂಗಳೂರಲ್ಲಿ ಅಥವಾ ಇನ್ನೂ ದಕ್ಷಿಣದಲ್ಲಿ ಅರೇಬಿಯನ್ ಸಮುದ್ರದೊಂದಿಗೆ ವಿಲೀನವಾಗುತ್ತಿತ್ತು. ಆಗ ನಮ್ಮ ಯಾವ ಪುರಾಣಗಳಲ್ಲೂ, ಮಂತ್ರಗಳಲ್ಲೂ ಕಾವೇರಿಯ ಹೆಸರೇ ಇರುತ್ತಿರಲಿಲ್ಲ. ಆದರೆ ಕಳೆದು ಹೋದದ್ದಕ್ಕೆ ಚಿಂತಿಸಿ ಫಲವಿಲ್ಲ. ಕಾವೇರಿ ಹರಿದಿದ್ದಾಳೆ. ಹರಿದದ್ದು ಮಾತ್ರವಲ್ಲ, ತನ್ನ ತಟಗಳಲ್ಲಿ ಸಾಕಷ್ಟು ವಿದ್ಯಮಾನಗಳಿಗೆ ಸಾಕ್ಷಿ ಯಾಗಿದ್ದಾಳೆ. ಕಾವೇರಿಯೆಂದರೆ ಕೊಡಗಿನ ಜನಕ್ಕೆ ಕುಡಿಯುವ ಅಥವಾ ಕೃಷಿಗೆ ಬಳಸುವ ನೀರಲ್ಲ; ಆರಾಧ್ಯ ದೈವ. ಕೊಡಗಿನ ಜನಜೀವನದಲ್ಲಿ ಕಾವೇರಿ ಒಂದು ಭಾವುಕ ಶಕ್ತಿ. ಮಡಿಕೇರಿಯಿಂದ ಕೇವಲ 26 ಮೈಲು ಗಳಲ್ಲಿರುವ ತಲಕಾವೇರಿ ಪೂರ್ವಕ್ಕೆ ಹರಿಯುವುದರಿಂದ ಮತ್ತು ಕೊಡಗಿ ನಲ್ಲಿ ಹರಿಯುವಷ್ಟು ಹೊತ್ತು ಕಾವೇರಿ ನದಿ ಹೊಳೆಯಾಗಿ ಮಾತ್ರ ಇರುವುದರಿಂದ ಜನರಿಗೆ ಜಾತಿ-ಮತ ಭೇದವಿಲ್ಲದೆ ತಲಕಾವೇರಿ ಒಂದು ಪುಣ್ಯಕ್ಷೇತ್ರವಾಗಿ ಉಳಿದಿದೆ. ಅದೀಗ ತನ್ನ ಒರತೆಯನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪೀತೆಂದರೆ ಯಾರೂ ನಂಬಲಾರರು. ಪುರಾಣಕ್ಕಿರುವ ಶಕ್ತಿ ಅದು. ನಂಬಿಕೆ ಮತ್ತು ಪವಾಡ ಸದೃಶ ಜಗತ್ತನ್ನು ಸೃಷ್ಟಿಸಿದ ಯಾವುದೂ ಕಳೆದುಹೋಗುವುದಿಲ್ಲ; ಕೊನೆಗೆ ನೆನಪಿನಲ್ಲಾದರೂ ಉಳಿಯಬೇಕಲ್ಲ!
ಭೂಮಿಯ ಎಲ್ಲೆಡೆ ನೀರಿನ ಅಭಾವವಿದೆ. ಭಾರತ ಅದಕ್ಕೆ ಅಪವಾದ ವಾಗುವುದು ಸಾಧ್ಯವಿಲ್ಲ. ಇನ್ನೂ ಆಳವಾಗಿ ಚಿಂತಿಸಿದರೆ ಭಾರತ ಯಾವುದೇ ನೆಲೆ-ಸೆಲೆಗಳನ್ನು ಅಳಿಸುವುದರಲ್ಲಿ ಇತರರಿಗಿಂತ ಒಂದು ಕೈ ಮೇಲೆಯೇ ಇದೆ. ತನ್ನ ಅಗತ್ಯಗಳು ಪೂರೈಸಿದರೆ ಮಾತ್ರ ಅದನ್ನು ಜಗತ್ತಿಗೆ, ತನ್ನ ಸುತ್ತಲಿನ ಸಮಾಜಕ್ಕೆ ನೀಡಬಲ್ಲ ಅನನ್ಯ ದಾನಪ್ರವೃತ್ತಿ ಭಾರತೀಯರದ್ದು. ಈ ಸ್ವಾರ್ಥಪರ ಮನೋಭಾವದಿಂದಲೇ ನಾವು ಜೀವಿಸುತ್ತಿದ್ದೇವೆ. ಇದೊಂದು ರೀತಿಯ ಸರ್ಪಯಾಗ; ಖಾಂಡವವನದಹನ; ಕುಟುಂಬ-ಕುಟುಂಬಗಳ ನಡುವಿನ ಜಗಳಕ್ಕೆ ಅಕ್ಷೋಹಿಣಿ ಬಲಗಳನ್ನು ಬಲಿ ಕೊಟ್ಟ, ಕೊಡುವ ಮಹಾಭಾರತ; ರಾಮಾಯಣ. ಪ್ರಾಯಃ ನಿರ್ಭಾವದಿಂದ ಯೋಚಿಸಿದರೆ ಇದೊಂದು ರೀತಿಯ ಅಹಿಂಸಾ ಭಯೋತ್ಪಾದನೆ. ನಾವೆಲ್ಲರೂ ಇದರಲ್ಲಿ ಪಾತ್ರಧಾರಿಗಳು. ಉಳ್ಳವರು, ಆಳುವವರು, ಇದರ ಸೂತ್ರಧಾರಿಗಳು
ಅಷ್ಟು ಪ್ರಮೇಯಾತ್ಮಕವಾಗಿ, ರೂಪಕವಾಗಿ ಹೇಳಿದರೆ ಅದು ಕರ್ಣನ ಸರ್ಪಾಸ್ತ್ರವು ಅರ್ಜುನನ ಕೊರಳಿನ ಬದಲಿಗೆ ಕಿರೀಟವನ್ನು ಹಾರಿಸಿಕೊಂಡು ಹೋದಂತೆ ನಮ್ಮೆಲ್ಲರ ತಲೆಯ ಮೇಲೆ ಹೋದೀತೆಂಬ ಭಯ ನನಗಿದೆ. ವಿದ್ಯುದ್ದೀಪಾಲಂಕಾರಭರಿತ ವೇದಿಕೆಯ ಝಗಝಗಿಸುವ ಬೆಳಕಿನಿಂದ ಸ್ವಲ್ಪದೂರ ಬಂದು ವಾಸ್ತವದ ಮಬ್ಬಿನಲ್ಲಿ ನಿಂತು ಅಥವಾ ಕುಳಿತು ಯೋಚಿಸಿದರೆ ಅರ್ಥವಾದೀತು.
ಕಾವೇರಿ ನದಿ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡುಗಳ ನಡುವಿನ ವಿವಾದವು ಹೋರಾಟದ ನೆಲೆಯಿಂದ ಯುದ್ಧದ ನೆಲೆಗೆ ತಲುಪಿದೆ. ಇತ್ತೀಚೆಗಷ್ಟೇ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರ ನದಿನೀರನ್ನು ತಮಿಳುನಾಡಿಗೆ ಹರಿಸುವುದರ ವಿರುದ್ಧ ಕರ್ನಾಟಕದ ದಕ್ಷಿಣ ಭಾಗದಲ್ಲಿ ಅದರಲ್ಲೂ ಬೆಂಗಳೂರಿನಿಂದ ಮೈಸೂರಿನ ವರೆಗೆ ಬಂದ್ ಮಾತ್ರವಲ್ಲ ಆತ್ಮಹತ್ಯಾ ಮಾದರಿಯ ಹಿಂಸೆ ನಡೆಯಿತು. ವಿದ್ಯುನ್ಮಾನ ನಗರ ಬೆಂಗಳೂರಿನಲ್ಲಿ, ಸಕ್ಕರೆಯ ಸಿಹಿನಾಡು ಮಂಡ್ಯದಲ್ಲಿ, ನಿವೃತ್ತರ ಸ್ವರ್ಗ ಮೈಸೂರಿನಲ್ಲಿ ಜನಜೀವನ ಸ್ತಬ್ಧವಾಯಿತು. ಅನೇಕರ ಬದುಕಿಗೆ ಕಷ್ಟವಾಯಿತು ಮಾತ್ರವಲ್ಲ, ಸಾವಿರ ಸಾವಿರ ಕೋಟಿ ರೂಪಾಯಿಯಷ್ಟೆಂದು ಅಂದಾಜಿಸಿದ ನಷ್ಟವೂ ಆಯಿತು. ಆನಂತರ ಈ ತೀರ್ಪೇ ಶಾಶ್ವತವಲ್ಲ, ಕಾವೇರಿ ನ್ಯಾಯಾಧಿಕರಣದ ಮುಂದೆ ಇದನ್ನು ಇತ್ಯರ್ಥಗೊಳಿಸಲಾಗುವುದೆಂಬ ಆಶ್ವಾಸನೆಯೊಂದಿಗೆ ಹಿಂಸೆ ತನ್ನ ತಾಂಡವ ನೃತ್ಯವನ್ನು ನಿಲ್ಲಿಸಿತು. ಬದುಕು ಮತ್ತೆ ತನ್ನ ಹಳೆಯ ಹಳಿಗಳಲ್ಲಿ ಓಡಾಡಬಹುದೆಂದು ನಿರೀಕ್ಷಿಸುತ್ತಿರುವಾಗ ನ್ಯಾಯ ಮಂಡಳಿಯು ದಿನವೊಂದಕ್ಕೆ 3,000 ಕ್ಯೂಸೆಕ್ಸ್ ನೀರನ್ನು ಹರಿಸಲು ಕರ್ನಾಟಕ ಸರಕಾರಕ್ಕೆ ಆದೇಶಿಸಿತು. ಕರ್ನಾಟಕದಲ್ಲಿ ಕುಡಿಯುವುದಕ್ಕೇ ನೀರಿಲ್ಲದಿರುವಾಗ ಇದನ್ನಾದರೂ ಕೊಡುವುದೆಲ್ಲಿ ಎಂಬ ಪರಿಸ್ಥಿತಿಯೊಂದಿಗೆ ಕರ್ನಾಟಕವು ಈ ತೀರ್ಪಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಮಾಡಿತು. ಈ ಪ್ರಮಾಣ ಸಾಲದೆಂದು ತಮಿಳುನಾಡು ಸರಕಾರವೂ ಮೇಲ್ಮನವಿ ಸಲ್ಲಿಸಿತು. ಇದೊಂದು ‘ಉರಿಗೆ ಉರಿಯೇ ಸರಿ’ಯೆಂಬ ನೀತಿ! ಪರಿಣಾಮವೆಂದರೆ ಸರ್ವೋಚ್ಚ ನ್ಯಾಯಾಲಯವು 3,000ದ ಬದಲಿಗೆ 6,000 ಕ್ಯೂಸೆಕ್ಸ್ ನೀರನ್ನು ಸೆಪ್ಟಂಬರ್ 26ರ ವರೆಗೆ ಹರಿಸಲು ಕರ್ನಾಟಕ ಸರಕಾರಕ್ಕೆ ಆದೇಶಿಸಿತು. ಮಾತ್ರವಲ್ಲ, ಕಾವೇರಿ ನ್ಯಾಯಾಧಿಕರಣದ ತೀರ್ಪಿನಲ್ಲಿ ಸೂಚಿಸಿದ ನದಿ ನೀರಿನ ನಿರ್ವಹಣಾ ಮಂಡಳಿಯನ್ನು ನಾಲ್ಕು ವಾರಗಳಲ್ಲಿ ಸಂಯೋಜಿಸುವಂತೆ ಕೇಂದ್ರಕ್ಕೆ ಸೂಚಿಸಿತು. ಇದೊಂದು ರೀತಿಯ- ವಾಡಿಕೆಯಲ್ಲಿ ಹೇಳುವುದಾದರೆ- ಗಾಯದ ಮೇಲೆ ಬರೆ! ನಮ್ಮ ನ್ಯಾಯಾಂಗದ ಕ್ರಮ ಕೆಲವು ಬಾರಿ ಯಾರಿಗೂ ಅರ್ಥವಾಗು ವಂಥದ್ದಲ್ಲ. ಪದನಿಮಿತ್ತ ವಿವೇಚನೆ ಗೌರವಪ್ರಾಯವಾದಾಗ ಅದಕ್ಕೆ ಕಳೆ ಬರುತ್ತದೆ. ಇಲ್ಲವಾದರೆ ಅದು ಬೆಳೆಯ ನಡುವಿನ ಕಳೆಯಾಗುತ್ತದೆ. ಕಾನೂನು ಎಲ್ಲರೂ ಗೌರವಿಸುವ ವಿಚಾರ: ಆದರೆ ಅದು ಹೊಸ ಹೊಸ ಬಿಕ್ಕಟ್ಟುಗಳನ್ನು ಸೃಷ್ಟಿಸಿದರೆ ಹೇಗೆ? ಆಗ ಎದುರಾಗಬಹುದಾದ ಪ್ರಕ್ಷುಬ್ಧತೆಗೆ ಯಾರು ಹೊಣೆ? ಕರ್ನಾಟಕದಲ್ಲಿ ತಮಿಳುನಾಡಿಗೆ ಹರಿಸಲು ನೀರಿಲ್ಲ. ಇರುವ ಅಲ್ಪಸ್ವಲ್ಪನೀರನ್ನು ತಮಿಳುನಾಡಿನ ಜನರ ಕೃಷಿಗೆ ನೀಡಿದರೆ ಕರ್ನಾಟಕದ ಅದರಲ್ಲೂ ಬೆಂಗಳೂರಿನ ಕೋಟಿ ಜನಕ್ಕೆ ಕುಡಿಯಲು ನೀರಿಲ್ಲ. ಈಗ ಮಾಡಬೇಕಾದದ್ದೇನು? ನಿಜಕ್ಕೂ ಸರ್ವೋಚ್ಚ ನ್ಯಾಯಾಲಯವು ನ್ಯಾಯಾಧಿಕರಣದ ತೀರ್ಮಾನವನ್ನು ಎತ್ತಿಹಿಡಿದು ಎರಡೂ ಮೇಲ್ಮನವಿಗಳನ್ನು ತಿರಸ್ಕರಿಸಿದ್ದರೆ ವಿವಾದ ‘ಈ ಕ್ಯಾಚ್ 22’ ಸ್ವರೂಪ ತಾಳುವುದನ್ನು ತಡೆಯಬಹುದಿತ್ತೇನೋ?
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರವಿದೆ. ಕೇಂದ್ರದಲ್ಲಿ ಎನ್‌ಡಿಎ ಸರಕಾರವಿದೆ. (ಎನ್‌ಡಿಎ ಎಂಬುದು ಹೆಸರಿಗೆ ಮಾತ್ರ: ಅಲ್ಲಿರುವುದು ಬಿಜೆಪಿ ಸರಕಾರ.) ತಮಿಳುನಾಡಿನಲ್ಲಿರುವುದು ಜಯಲಲಿತಾ ಸರಕಾರ. (ಅಣ್ಣಾ ಡಿಎಂಕೆ ಎಂಬುದು ಜಯಲಲಿತಾ ಸರಕಾರಕ್ಕಿರುವ ಇನ್ನೊಂದು ಹೆಸರು. ಅಸ್ತಿತ್ವಕ್ಕೆ ತೋರಿಕೆಗಾದರೂ ಹೆಸರು ಬೇಕಲ್ಲ!) ಇದೊಂದು ಬರ್ಮುಡಾ ತ್ರಿಕೋನ. ಮೂರು ವಿಭಿನ್ನ ಧೋರಣೆಗಳ ನಡುವೆ ಕೇಂದ್ರವೇ ಇಲ್ಲವಾಗಿದೆ. ಹಿಂಸೆಯನ್ನು ದೂರ ಮಾಡುವ, ಶಾಂತಿಗಾಗಿ ಪರಿತಪಿಸುವ, ಅಹಂಭಾವವನ್ನು ಕಳೆದುಕೊಂಡ ಮಂದಿ ಇರುತ್ತಾರೆಂದು ಭಾವಿಸಿದರೆ ಅದು ತಪ್ಪಾಗುತ್ತದೆ. ಕರ್ನಾಟಕಕ್ಕೂ ಕೇಂದ್ರಕ್ಕೂ ತಮ್ಮ ರಾಷ್ಟ್ರ ರಾಜಕೀಯ ವ್ಯಕ್ತಿತ್ವಕ್ಕೆ ವಿರೋಧವಾದ ನಿಲುವನ್ನು ತಳೆಯುವುದು ಸಾಧ್ಯವಿಲ್ಲವಾಗಿದೆ. ಅವು ಯಾರು ಹೆಚ್ಚು ಎಂಬ ಸ್ಪರ್ಧೆಯಲ್ಲಿವೆ. ತಮಿಳುನಾಡಿಗೆ ಈ ಹಂಗಿಲ್ಲ. ತನ್ನ ಪ್ರಾದೇಶಿಕ ಅಸ್ಮಿತೆಯನ್ನು ಉಳಿಸಿಕೊಂಡು ಹೋದರೆ ಸಾಕು. ಯಥಾರ್ಥವಾಗಿ ಜಯಲಲಿತಾ ಈಗ ಮಾಡುತ್ತಿರುವುದು ಅದನ್ನೇ. ಆಕೆ ಮಂಡ್ಯದವಳೆಂಬುದು ಒಂದು ಕ್ರೂರ ವ್ಯಂಗ್ಯ. ಇನ್ನೊಂದು ರೀತಿಯಲ್ಲಿ ನೋಡುವುದಾದರೆ ಆಕೆ ಈಗ ನಡೆದುಕೊಳ್ಳುವ ಕ್ರಮವು ಅರ್ಥವಾಗುವಂಥಾದ್ದೇ. ಆಕೆ ಏನಾದರೂ ಕರ್ನಾಟಕಕ್ಕೆ ವಿನಾಯಿತಿ, ರಿಯಾಯಿತಿ ಘೋಷಿಸಿದರೆ ತಕ್ಷಣ ಆಕೆಯ ಕರ್ನಾಟಕ ಮೂಲವನ್ನು ವಿರೋಧ ಪಕ್ಷಗಳು ಕೆದಕಿ ತಮಿಳುನಾಡಿಗೆ ಬೆಂಕಿ ಹಚ್ಚುತ್ತಾರೆಂಬುದು ಅಮ್ಮನಿಗೆ ಗೊತ್ತಿದೆ. ಆದ್ದರಿಂದ ಆಕೆ ತಮಿಳುನಾಡಿಗಿಂತ ಹೆಚ್ಚು ತಮಿಳರಂತೆ ವರ್ತಿಸುವುದು ಆಕೆಯ ಅಧಿಕಾರ ಅನ್ನುವುದಕ್ಕಿಂತಲೂ ಆಕೆಯ ವೈಯಕ್ತಿಕ ಉಳಿವಿಗೆ ಅನಿವಾರ್ಯ. ಇನ್ನೊಂದೆಡೆ ಕರ್ನಾಟಕವು ತಮಿಳುನಾಡಿನೊಂದಿಗೆ ಮಾತ್ರವಲ್ಲ, ಕೇಂದ್ರದೊಂದಿಗೂ ಭಿನ್ನಾಭಿಪ್ರಾಯ ಹೊಂದಿರುವುದರಿಂದ ಕರ್ನಾಟಕದ ಬಿಜೆಪಿ ಧುರೀಣರು ಕರ್ನಾಟಕದ ಹಿತಾಸಕ್ತಿಗಿಂತಲೂ ಈಗಿರುವ ರಾಜ್ಯ ಸರಕಾರವನ್ನು ಈ ನೆಪದಲ್ಲಿ ಉರುಳಿಸುವುದು ಹೇಗೆಂಬ ಆತ್ಮಹತ್ಯಾ ಹಾದಿಯ ಹುಡುಕಾಟದಲ್ಲಿದ್ದಾರೆ. ಕೇಂದ್ರ ಸರಕಾರವು ಬೆಕ್ಕುಗಳಿಗೆ ಬೆಣ್ಣೆ ಹಂಚಿದ ಮಂಗನಂತೆ ತಾನು ಈ ವಿವಾದದ ಲಾಭವನ್ನು ಪಡೆಯುವುದು ಹೇಗೆಂಬ ಹವಣಿಕೆಯಲ್ಲಿದೆ. ಧನ್ಯವಾದ ಸಮರ್ಪಣೆಯಾದ ನಂತರ ಭಾಷಣ ಮಾಡುವ ಪ್ರವೃತ್ತಿಯಂತೆ ತಡವಾಗಿ ಸ್ಪಂದಿಸುವ ಪ್ರಧಾನಿ ಈ ಬಾರಿಯೂ ಯಾವುದೇ ಪಾತ್ರ ವಹಿಸದೆ ಎಲ್ಲವೂ ಮುಗಿದ ನಂತರ ಕೇಂದ್ರ ಮಂತ್ರಿ ಉಮಾಭಾರತಿಯವರಿಗೆ ಈ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಸೂಚಿಸಿರುವುದಾಗಿ ಹೇಳಿ ನುಣುಚಿಕೊಂಡಿದ್ದಾರೆ. ಗಂಭೀರ ಸಮಸ್ಯೆಗಳು ಎದುರಾದಾಗ ನಾಯಕನ ಬಂಡವಾಳ ಹೊರಬರುತ್ತದೆ. ಕಾಶ್ಮೀರ ಸಮಸ್ಯೆಯಲ್ಲಿ ರಾಜನಾಥ್ ಸಿಂಗ್, ಮಧ್ಯಪ್ರಾಚ್ಯದಲ್ಲಿ ಸಿಕ್ಕಿಕೊಂಡ ಭಾರತೀಯರ ಸಮಸ್ಯೆಯಲ್ಲಿ ಸುಷ್ಮಾ ಸ್ವರಾಜ್, ಜಿಎಸ್‌ಟಿ ಸಮಸ್ಯೆಯಲ್ಲಿ ಅರುಣ್ ಜೇಟ್ಲಿ ಹೀಗೆ ಇತರರು ಶ್ರಮವಹಿಸಿದ್ದನ್ನು ಗಮನಿಸಿದರೆ ಪ್ರಧಾನಿಯವರು ಒಂದು ರೀತಿಯಲ್ಲಿ ಬಿಜೆಪಿಯ (56 ಅಡಿ ಎದೆ ಮತ್ತು ಹತ್ತು ಲಕ್ಷದ ಕೋಟಿನ) ಬ್ರಾಂಡ್ ಅಂಬಾಸೆಡರ್ ಆಗಿ ಮಾತ್ರ ಉಳಿಯುತ್ತಾರೇನೋ ಎಂದು ಅನ್ನಿಸುತ್ತದೆ.
ಈಗ ಕರ್ನಾಟಕದ ಸರಕಾರ ಮತ್ತು ಜನರು ಹಿಂಸೆ ನಡೆಸಿದರೆ ಅಥವಾ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಪ್ರಯೋಜನವಿಲ್ಲ. (ಬಿಜೆಪಿಯವರಿಗೆ ಮಾತ್ರವಲ್ಲ, ಹಲವು ಕಾಂಗ್ರೆಸಿಗರಿಗೂ ಇದೇ ಬೇಕಾಗಿದೆ!) ನ್ಯಾಯಾಂಗವು ವಿಫಲವಾಗುವ ಹೊತ್ತಿಗೆ ಸಾಂವಿಧಾನಿಕ ಬಿಕ್ಕಟ್ಟು ಬರದಂತೆ ತಡೆಯುವ ಜವಾಬ್ದಾರಿ ಎಲ್ಲರ ಮೇಲಿದೆ. ಇನ್ನೂ ಮುಖ್ಯವಾಗಿ ನಾರಿಮನ್‌ರಂತಹ ನ್ಯಾಯವೇತ್ತರನ್ನು ಟೀಕಿಸುವ ಬದಲು ಸಮಸ್ಯೆಯ ಮೂಲವನ್ನು ಅಧ್ಯಯನ ಮಾಡಬೇಕಾಗಿದೆ. ಯಾವುದೇ ಆದೇಶವನ್ನು ಪರಿಪಾಲಿಸಲು ಸಾಧ್ಯವಿಲ್ಲದಾದಾಗ ನ್ಯಾಯಾಲಯ ನಿಂದನೆಯ ಪ್ರಶ್ನೆ ಬರುವುದಿಲ್ಲವೆಂಬುದನ್ನು ಕಂಡುಕೊಂಡರೆ ಈ ಬಗ್ಗೆ ಉತ್ತರ ಸಿಗಬಹುದು. ಇದಕ್ಕೆ ಈಗಷ್ಟೇ (20.09.2016) ಸರ್ವೋಚ್ಚ ನ್ಯಾಯಾಲಯವು (ಗ್ಯಾನಿ ಚಾಂದ್ -ವರ್ಸಸ್- ಆಂಧ್ರಪ್ರದೇಶ ಸರಕಾರ ಪ್ರಕರಣದಲ್ಲಿ) ನೀಡಿದ ತೀರ್ಪು ಅನ್ವಯವಾಗಬಹುದು. ಇನ್ನೂ ಒಂದು ಹೆಜ್ಜೆ ಮುಂದುವರಿಸಿ ಹೇಳುವುದಾದರೆ ಅಮೆರಿಕದಲ್ಲಿ ಲಿಂಕನ್ ಅಧ್ಯಕ್ಷರಾಗಿದ್ದಾಗಿನ ಬಿಕ್ಕಟ್ಟನ್ನು ಉದಾಹರಿಸಬಹುದು: ಲಿಂಕನ್ ಮೇರಿಲ್ಯಾಂಡಿನ ಪ್ರತ್ಯೇಕತಾವಾದಿಗಳನ್ನು ವಿದ್ರೋಹ ಚಟುವಟಿಕೆಯ ಆಧಾರದಲ್ಲಿ ಬಂಧಿಸಲು ಆದೇಶಿಸಿದರು. ಸೇತುವೆಗಳಿಗೆ ಬೆಂಕಿಯಿಟ್ಟು ಸೈನ್ಯ ಮತ್ತು ಆಹಾರ ಸರಬರಾಜಿಗೆ ವಿಘ್ನಮಾಡಿದ ಜಾನ್ ಮೆರ್ರಿಮನ್ ಎಂಬ ಸೇನಾಧಿಕಾರಿಯನ್ನು ಇದರನ್ವಯ ಬಂಧಿಸಲಾಯಿತು. ಆದರೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆಯಾಗಿ ಅಲ್ಲಿನ ಸವೋಚ್ಚ ನ್ಯಾಯಾಲಯವು ಆತನ ಬಿಡುಗಡೆಗೆ ಆದೇಶಿಸಿತು. ಆದರೆ ಲಿಂಕನ್ ಈ ಆದೇಶವನ್ನು ಪಾಲಿಸಲು ನಿರಾಕರಿಸಿದರು. ಇದೊಂದು ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದಾಗ ಅಮೆರಿಕದ ಮುಖ್ಯ ನ್ಯಾಯಾಧೀಶ ರೋಜರ್ ಟ್ಯಾನಿ ತಾನೇನೂ ಮಾಡುವಂತಿಲ್ಲವೆಂದೂ ಅಧ್ಯಕ್ಷರ ಶಕ್ತಿಯನ್ನು ತಾನು ಮೀರಲಾರೆನೆಂದೂ ಹೇಳಿದರು. ನ್ಯಾಯಾಂಗವು ಈ ಉದಾಹರಣೆಯನ್ನು ಜ್ಞಾಪಿಸಿಕೊಂಡರೆ ತನ್ನ ಲಕ್ಷ್ಮಣರೇಖೆಯನ್ನು ತಾನೇ ಗುರುತಿಸಿಕೊಳ್ಳಬಹುದು. ಇಂತಹ ಶಕ್ತಿಯನ್ನು ಕರ್ನಾಟಕ ಸರಕಾರವು ಪ್ರದರ್ಶಿಸೀತೇ? ಚಾಣಕ್ಯ ತಂತ್ರದ ಮೂಲಕ ಪರಿಸ್ಥಿತಿಯನ್ನು ಅದು ನಿಭಾಯಿಸೀತೇ? ನದಿಯ ನೀರಿನ ಹಂಗು ಯಾರಿಗೆ? ಕಾದು ನೋಡಬೇಕು.