ಅಸಮಾನತೆ ಮತ್ತು ಅವಮಾನ ಮಾಡುವ ಪ್ರಜಾಪ್ರಭುತ್ವ
ನಾಗರಿಕರ ಸಾವಿನಲ್ಲೂ
ಅವರ ಕತೆಗಳು ಸಾವಿನಿಂದ ಆರಂಭವಾಗುವುದಿಲ್ಲ-ಇಂತಹ ಅವಮಾನಕರ ಪರಿಸ್ಥಿತಿಗಳಲ್ಲಂತೂ ಖಂಡಿತವಲ್ಲ. ಅದು ಬಹಳ ಮೊದಲಿನಿಂದಲೇ ಆರಂಭವಾಗುತ್ತದೆ ಮತ್ತು ಯಾರಾದರೂ ಹಿಂದಕ್ಕೆ ತೆರಳಿ ಆರಂಭದಿಂದಲೇ ಎಲ್ಲವನ್ನೂ ಸರಿಯಾಗಿ ಜೋಡಿಸದ ಹೊರತು ಯಾವುದೂ ಬದಲಾಗಲು ಸಾಧ್ಯವಿಲ್ಲ. ಸಮಸ್ಯೆಯಿರುವುದು ವ್ಯವಸ್ಥೆಯಲ್ಲಿ. ಮುಖ್ಯವಾಗಿ ಕಲ್ಯಾಣ ವ್ಯವಸ್ಥೆಯಲ್ಲಿ, ವ್ಯವಸ್ಥೆಯೇ ಸಂಪೂರ್ಣವಾಗಿ ಅಸ್ಥಿಪಂಜರದಂತೆ ಆಗಿದ್ದು ಅದನ್ನು ಜೀವಂತ ಮತ್ತು ಕಾರ್ಯೋನ್ಮುಖವಾಗಿರುವ ವ್ಯವಸ್ಥೆಯಿಂದ ಬದಲಾಯಿಸ ಬೇಕಿದೆ. ಯಾವುದೇ ಪರೀಕ್ಷೆ, ಪ್ರಯತ್ನದಿಂದ ಕೂಡಾ ಅಸ್ಥಿಪಂಜರಕ್ಕೆ ಜೀವ ತುಂಬಿಸಲು ಸಾಧ್ಯವಿಲ್ಲ ಅಲ್ಲವೇ?
ಆ್ಯಂಬುಲೆನ್ಸ್‌ಗೆ ನೀಡಲು ರೂ. 1,500 ಹಣವಿರಲಿಲ್ಲವೆಂಬ ಕಾರಣಕ್ಕೆ ಒಬ್ಬ ತಾಯಿ ತನ್ನ ಮೃತ ಮಗುವಿನ ಶವದ ಜೊತೆ ಆಸ್ಪತ್ರೆಯ ಹೊರಗಡೆ ರಾತ್ರಿಯಿಡೀ ಕಳೆಯುವಂತೆ ಮಾಡಿದ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯಿತು. ಈ ಘಟನೆಯು ಒಡಿಶಾದ ಕಾಲಹಂಡಿ ಜಿಲ್ಲೆಯಲ್ಲಿ ಬುಡಕಟ್ಟು ಗುಂಪಿಗೆ ಸೇರಿದ ದನಾ ಮಾಂಜಿ ಆ್ಯಂಬುಲೆನ್ಸ್‌ಗೆ ಪಾವತಿಸಲು ಹಣವಿಲ್ಲದ ಕಾರಣ ತನ್ನ ಪತ್ನಿಯ ಶವವನ್ನು ತನ್ನ ಹೆಗಲ ಮೇಲೆ ಹೊತ್ತು ಸಾಗಿದ ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಎರಡು ವಾರಗಳಿಗೂ ಕಡಿಮೆ ಅಂತರದಲ್ಲಿ ನಡೆಯಿತು. ಪಾವತಿಸಲು ಹಣವಿಲ್ಲವೆಂಬ ಕಾರಣಕ್ಕೆ ಆ್ಯಂಬುಲೆನ್ಸ್ ಸೇವೆ ಒದಗಿಸಲು ನಿರಾಕರಿಸಿದ ಕಾರಣ ಈ ವ್ಯಕ್ತಿ ತನ್ನ ಮೃತ ಪತ್ನಿಯ ದೇಹವನ್ನು ತನ್ನ ಹೆಗಲ ಮೇಲೆ ಹೊತ್ತು ಅಪ್ರಾಪ್ತ ಮಗಳ ಜೊತೆ ಹತ್ತು ಕಿ.ಮೀ.ಗೂ ಅಧಿಕ ದೂರ ಸಾಗಿ ತನ್ನ ಊರು ಸೇರಿದ್ದ. ದುಃಖವೆಂದರೆ ಆ ಘಟನೆಯ ನಂತರ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದವು.
ಎಂಬತ್ತು ವರ್ಷ ಹರೆಯದ ಸಲಮಾನಿ ಬೆಹೆರ ಎಂಬ ಮಹಿಳೆ ಸೊರೊದಲ್ಲಿ ರೈಲು ಢಿಕ್ಕಿ ಹೊಡೆದು ಮೃತಪಟ್ಟಳು. ಎಲ್ಲಾ ಅಪಘಾತದಿಂದ ಸಂಭವಿಸಿದ ಸಾವಿನ ಪ್ರಕರಣಗಳಲ್ಲಿ ಕಡ್ಡಾಯವಾಗಿರುವಂತೆ ಆಕೆಯ ಶವವನ್ನೂ ಮರಣೋತ್ತರ ಪರೀಕ್ಷೆಗಾಗಿ ಸೊರೊ ಸಮುದಾಯ ಆರೋಗ್ಯ ಕೇಂದ್ರವು ಬಾಲಸೋರ್‌ನಲ್ಲಿರುವ ಜಿಲ್ಲಾಸ್ಪತ್ರೆಗೆ ಸಾಗಿಸಬೇಕಿತ್ತು, ಆದರೆ ಅವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ. ಪರ್ಯಾಯ ವಾಹನ ವ್ಯವಸ್ಥೆ ಮಾಡಲಾಗದ ಮತ್ತು ಸಾವಿನ ನಂತರ ದೇಹ ಗಡುಸಾಗುವ ಕಾರಣದಿಂದ ಸಾಗಿಸಲು ಕಷ್ಟಸಾಧ್ಯವಾದ ಕಾರಣ ಅಲ್ಲಿನ ಸಿಬ್ಬಂದಿ ಆಕೆಯ ದೇಹವನ್ನು ಸೊಂಟದಿಂದ ಕೆಳಗೆ ತುಂಡು ಮಾಡಿ ಹಳೆಯ ಹಾಳೆಯಲ್ಲಿ ಮುಚ್ಚಿ ಬಿದಿರಿನ ಕೋಲಿಗೆ ಕಟ್ಟಿದರು. ನಂತರ ಆ ದೇಹವನ್ನು ರೈಲ್ವೇ ನಿಲ್ದಾಣಕ್ಕೆ ಕೊಂಡೊಯ್ದ ಸಿಬ್ಬಂದಿ ಅಲ್ಲಿಂದ ಜಿಲ್ಲಾಸ್ಪತ್ರೆಗೆ ಸಾಗಿಸಿದರು.
ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂದು ಬೀಗುವ ದೇಶಕ್ಕೆ ಇದು ಕೂಡಾ ಸಾಕಾಗಲಿಲ್ಲ. ಮಧ್ಯಪ್ರದೇಶದ ನೀಮುಚ್ ಎಂಬಲ್ಲಿನ ರುದ್ರಭೂಮಿಯಲ್ಲಿ ಜಗದೀಶ್ ಬಿಲ್ ಎಂಬ ಬುಡಕಟ್ಟು ಜನಾಂಗದ ವ್ಕಕ್ತಿಯ ಪತ್ನಿಯ ಶವದ ಅಂತ್ಯಸಂಸ್ಕಾರ ನಡೆಸಲು ನೀಡಬೇಕಾದ ರೂ. 2,500 ಇರಲಿಲ್ಲ ಎಂಬ ಕಾರಣಕ್ಕೆ ಆಕೆಯ ಶವಸಂಸ್ಕಾರ ನಡೆಸಲು ನಿರಾಕರಿಸಲಾಯಿತು. ಇದರಿಂದ ಆಕ್ರೋಶ ಗೊಂಡ ಆತ ಅಲ್ಲೆ ಬಿದ್ದಿದ್ದ ತ್ಯಾಜ್ಯವಸ್ತುಗಳು, ಕಾಗದ, ಪ್ಲಾಸ್ಟಿಕ್ ಬ್ಯಾಗ್ ಮತ್ತಿತರ ವಸ್ತುಗಳನ್ನು ಒಟ್ಟುಗೂಡಿಸಿ ಅದರಿಂದಲೇ ಚಿತೆಯನ್ನು ನಿರ್ಮಿಸಿ ತನ್ನ ಪತ್ನಿಯ ಶವಸಂಸ್ಕಾರ ನಡೆಸಿದ.
ದನಾ ಮಾಂಜಿಯ ಸಂಕಷ್ಟ ದೇಶವನ್ನು ನಡುಗಿಸಿತು ಅಥವಾ ಕನಿಷ್ಠಪಕ್ಷ ಹಾಗೆ ಕಂಡಿತು. ಆದರೆ ಇತರ ಮೂರು ಪ್ರಕರಣಗಳು ಯಾವುದೇ ಸುದ್ದಿಯಿಲ್ಲದೆ ಮರೆಯಾಯಿತು. ಜಗತ್ತಿನ ಮುಂದಿನ ಸೂಪರ್ ಪವರ್ ಆಗಲು ಹೊರಟಿರುವ ದೇಶದಲ್ಲಿ ಮೊದಲು ಇಂಥಾ ಆಘಾತಕಾರಿ ಪ್ರಕರಣಗಳನ್ನು ನಿಭಾಯಿಸುವ ಅಗತ್ಯವಿದೆ. ಅಥವಾ ಪ್ರಜಾಪ್ರಭುತ್ವ ಮತ್ತದರ ಅದೃಷ್ಟವಂತ ನಾಗರಿಕನಿಗೆ ಇದು ತಿಳಿದಿಲ್ಲವೇ? ಭಾರತದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ರೋಗಿಗಳ ಜೊತೆ ವ್ಯವಹರಿಸುವ ರೀತಿಯ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ. ಇನ್ನು ಸಾವಿರಾರು ಕಲ್ಯಾಣ ಯೋಜನೆಗಳ ನಿಜವಾದ ಸ್ಥಿತಿ ಏನೆಂಬುದರ ಬಗ್ಗೆ ಯಾರಿಗೆ ತಾನೇ ತಿಳಿಯದಿರಲು ಸಾಧ್ಯ? ವರ್ಷಕ್ಕೂ ಹಿಂದೆ ಸರ್ವೋಚ್ಚ ನ್ಯಾಯಾಲಯ ‘ಅದ್ಭುತ ಯೋಜನೆಗಳ ನಿರಾಶಾದಾಯಕ ಅನುಷ್ಠಾನ’ದ ಬಗ್ಗೆ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆಯಲ್ಲವೇ!
ಈ ಪ್ರಕರಣಗಳ ಬಗ್ಗೆ ಸ್ವಲ್ಪಸಮೀಪದಿಂದ ನೋಡೋಣ. ಸುಲಭದ ದಾರಿಯೆಂದರೆ ಕೆಳಸ್ತರದ ಸಿಬ್ಬಂದಿಯನ್ನು ದೂರುವುದು-ಮಾಂಜಿ ಮತ್ತು ಮೀರತ್‌ನ ಮಹಿಳೆಗೆ ಆ್ಯಂಬುಲೆನ್ಸ್ ಸೇವೆ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ, ಸಲಮಾನಿ ಬೆಹೆರಾಳ ದೇಹವನ್ನು ಎರಡು ತುಂಡುಗಳಾಗಿ ಮಾಡಿದವರು, ಹೀಗೆ. ಈ ರೀತಿ ಬಲಿಪಶುಗಳನ್ನು ಹುಡುಕುವ ಮೂಲಕವೇ ಈ ವ್ಯವಸ್ಥೆ ನಡೆಯುತ್ತದೆ. ಆದರೆ ಅವರನ್ನೇ ನಿಜವಾಗಿ ದೂಷಿಸಬೇಕೆ? ಇಂತಹ ಆಕಸ್ಮಿಕ ಸಂದರ್ಭಗಳು ಎದುರಾದಾಗ ಖರ್ಚು ಮಾಡಲು ಅಗತ್ಯವಿರುವ ಯಾವುದಾದರೂ ತುರ್ತು ಧನಸಂಗ್ರಹಣಾ ವ್ಯವಸ್ಥೆಯಿದೆಯೇ? ಇಲ್ಲವಾದರೆ, ಮೊದಲೇ ತಮ್ಮ ಖರ್ಚಿಗೇ ಸಾಕಾಗದಷ್ಟು ಸಿಗುವ ಮಾಸಿಕ ವೇತನದಲ್ಲಿ ಅವರು ಇತರರ ವೆಚ್ಚವನ್ನು ಭರಿಸಲು ಅವರಿಂದ ಸಾಧ್ಯವಿಲ್ಲ. ಇನ್ನು ಗುತ್ತಿಗೆದಾರರು ನೀಡುವ ಅತ್ಯಲ್ಪಮೊತ್ತಕ್ಕಾಗಿ ದುಡಿಯುವ ಮಧ್ಯಪ್ರದೇಶದ ರುದ್ರಭೂಮಿಯ ಕೆಲಸಗಾರರ ಸ್ಥಿತಿಯಂತೂ ಖಂಡಿತವಾಗಿಯೂ ಸೀಮಿತವರ್ಗಕ್ಕಿಂತಲೂ ಕೆಟ್ಟದಾಗಿರಬಹುದು. ಹಾಗಾದರೆ ನಿಜವಾಗಿಯೂ ದೂಷಿಸಬೇಕಾಗಿರುವುದು ಯಾರನ್ನು? ದನಾ ಮಾಂಜಿಯ ಪ್ರಕರಣ ಅದರತ್ತ ಬೆಳಕು ಚೆಲ್ಲುತ್ತದೆ. ಪರಿವಾರದ ಸದಸ್ಯರ ಮರಣದ ಸಂದರ್ಭದಲ್ಲಿ ಬಡ ಮತ್ತು ನಿರ್ಗತಿಕ ಕುಟುಂಬಗಳಿಗೆ ನೆರವಾಗಲು ಒಡಿಶಾ ಸರಕಾರ ಎರಡು ಯೋಜನೆಗಳನ್ನು ರೂಪಿಸಿದೆ. ಮೊದಲನೆಯದು, ಆಗಸ್ಟ್ 2013ರಲ್ಲಿ ಅನುಷ್ಠಾನಕ್ಕೆ ಬಂದ ‘ಹರಿಶ್ಚಂದ್ರ ಸಹಾಯತ ಯೋಜನಾವಾಸ್’, ಇದರಲ್ಲಿ ಮರಣ ಹೊಂದಿದ ವ್ಯಕ್ತಿಯ ಅಂತಿಮ ಸಂಸ್ಕಾರವನ್ನು ನಡೆಸಲು ಕುಟುಂಬಕ್ಕೆ ಧನಸಹಾಯ ಒದಗಿಸಲಾಗುತ್ತದೆ. ಇದರ ಮುಂದುವರಿದ ಭಾಗವೆಂಬಂತೆ ಕಳೆದ ಫೆಬ್ರವರಿಯಲ್ಲಿ ಒಡಿಶಾ ಸರಕಾರವು ಬಡ ಮತ್ತು ನಿರ್ಗತಿಕ ಕುಟುಂಬಗಳಿಗೆ ಮೃತದೇಹಗಳನ್ನು ಸಾಗಿಸಲು ನೆರವಾಗುವಂತೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ‘ಮಹಾಪ್ರಯಾಣ್’ ಯೋಜನೆಯನ್ನು ಅನುಷ್ಠಾನಕ್ಕೆ ತಂದಿತು. ಆದರೂ ಈ ಯೋಜನೆಯನ್ನು ಕೇವಲ ಘೋಷಿಸಲಾಗಿದ್ದು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ ಎಂಬ ಕಾರಣದಿಂದ ಮಾಂಜಿಗೆ ಈ ಯೋಜನೆಯ ಫಲವನ್ನು ಪಡೆಯಲಾಗಲಿಲ್ಲ. ಮಾಂಜಿ ಘಟನೆಗೆ ಆಕ್ರೋಶ ವ್ಯಕ್ತವಾದ ಒಂದು ದಿನದ ನಂತರ ಈ ಯೋಜನೆಯನ್ನು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅನುಷ್ಠಾನಕ್ಕೆ ತಂದಿರುವುದು ಈ ಯೋಜನೆಗಳು ನಿಜವಾಗಿ ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ವಿವರಿಸುತ್ತದೆ. ಮಹಾಪ್ರಯಾಣ್ ಯೋಜನೆಯೊಂದೇ ಮಾಂಜಿಯನ್ನು ತಲುಪದ ಸರಕಾರಿ ಯೋಜನೆಯಲ್ಲ. ಇಂಡಿಯನ್ ಎಕ್ಸ್‌ಪ್ರೆಸ್ ದೈನಿಕ ವರದಿ ಮಾಡಿರುವ ಪ್ರಕಾರ ಮಾಂಜಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ) ಅಕ್ಟೋಬರ್ 2015ರಲ್ಲಿ ದುಡಿದ ಸಂಬಳವನ್ನೂ ನೀಡಿರಲಿಲ್ಲ. ಅದರಲ್ಲಿ ಸಿಗಬೇಕಾಗಿದ್ದ ರೂ. 4,064 ಸಂಬಳವನ್ನು ನೀಡುತ್ತಿದ್ದರೂ ಮಾಂಜಿ ಆತನ ಪತ್ನಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತೊಯ್ಯುವಂತಹ ಪ್ರಮೇಯ ಎದುರಾಗುತ್ತಿರಲಿಲ್ಲ. ಸಂಬಳ ನೀಡದ ಕಾರಣದಿಂದ ಆತ ತನ್ನ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಲು ಸಾಲ ಮಾಡಿ ಅದರಲ್ಲಿ ಆಸ್ಪತ್ರೆಯ ಪರೀಕ್ಷೆ, ಔಷಧಿ ಮತ್ತು ಇತರ ಎಲ್ಲದಕ್ಕೂ ವ್ಯಯಿಸಬೇಕಾಯಿತು.
ಜಾರಿಯಲ್ಲಿರುವ ಯೋಜನೆಗಳನ್ನು ತೆಗೆದುಕೊಳ್ಳುವುದಾದರೆ ಇದ್ಯಾವುದಕ್ಕೂ ಆತ ಹಣ ಪಾವತಿಸುವ ಅಗತ್ಯವೇ ಇರಲಿಲ್ಲ. ಆತನ ಆಸ್ಪತ್ರೆಯ ವೆಚ್ಚ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಯಾವುದೇ ಖಾಸಗಿ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ರೂ. 30,000ವರೆಗಿನ ಉಚಿತ ಚಿಕಿತ್ಸೆಯನ್ನು ಕಲ್ಪಿಸುವ ‘ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ’ ಯೋಜನೆ ಮೂಲಕ ಪಾವತಿಯಾಗಬೇಕಿತ್ತು. ಆತನ ಹೆಸರು ಅದರಲ್ಲೂ ನೋಂದಣಿಯಾಗಿರಲಿಲ್ಲ. ಒಡಿಶಾದ ಸರಕಾರಿ ಆಸ್ಪತ್ರೆಗಳಲ್ಲಿ ಬಳಕೆ ಶುಲ್ಕ ಇತರೆಡೆಗಳಿಗಿಂತ ಬಹಳ ಕಡಿಮೆಯಾಗಿರುವ ಕಾರಣ ಮಾಂಜಿ ರಕ್ತಪರೀಕ್ಷೆಗೆ ರೂ. 300, ಔಷಧಕ್ಕೆ ರೂ. 200, ಪತ್ನಿಯ ಹೆಸರು ನೋಂದಣಿಗೆ ರೂ. 100 ಮತ್ತು ಪತ್ರಗಳ ಮೇಲೆ ಸೀಲ್ ಹಾಕಲು ರೂ. 10 ನೀಡುವ ಅಗತ್ಯವೂ ಇರಲಿಲ್ಲ ಎಂದು ಪತ್ರಿಕೆಯ ವರದಿಯಲ್ಲಿ ತಿಳಿಸಿದೆ. ಮುಖ್ಯವಾಗಿ ಮಾಂಜಿ ವ್ಯವಸ್ಥೆಯ ಕಾರಣದಿಂದ ಎರಡೆರಡು ರೀತಿಯಲ್ಲಿ ಸಂತ್ರಸ್ತರಾಗಿದ್ದಾರೆ. ಮೊದಲನೆಯದಾಗಿ ನ್ಯಾಯಯುತವಾಗಿ ಅವರು ಏನನ್ನು ಪಡೆಯಬೇಕೋ ಅದನ್ನು ಒದಗಿಸಲು ನಿರಾಕರಿಸಲಾಯಿತು ಮತ್ತು ನಂತರ ಮೂಲಭೂತವಾಗಿರುವ ವೈದ್ಯಕೀಯ ಆರೈಕೆಯನ್ನು ಪಡೆಯಲೂ ಕೂಡಾ ಲಂಚ ನೀಡುವಂತೆ ಒತ್ತಡ ಹಾಕಲಾಯಿತು. ಮೇಲಿನ ಎಲ್ಲಾ ಪ್ರಕರಣಗಳಲ್ಲೂ ಇದೇ ರೀತಿ ನಡೆದಿರಬಹುದು ಎಂದು ನಿಖರವಾಗಿ ಹೇಳಬಹುದು. ಬಡಜನರು, ದೇಶದ ನಾಗರಿಕರು ಅವರಿಗೆಂದೇ ರೂಪಿಸಲ್ಪಟ್ಟಿರುವ ಯೋಜನೆಗಳ ಲಾಭದಿಂದ ವಂಚಿತರಾಗಿದ್ದಾರೆ. ಇಡೀ ವ್ಯವಸ್ಥೆಯೇ ಬಡವರನ್ನು ಕಿತ್ತು ತಿನ್ನುವಂತಹ ಸ್ಥಾಪಿತಹಿತಾಸಕ್ತಿಗಳಿಂದ ತುಂಬಿರುವುದರಿಂದ ಸಾಮಾನ್ಯ ಜನರು ಯಾರ ಬಳಿಯೂ ಪರಿಹಾರ ಕೋರುವಂತೆ ಇಲ್ಲ. ತಮ್ಮ ಜೀವನವನ್ನು ಘನತೆಯೊಂದಿಗೆ ರಕ್ಷಿಸುತ್ತೇವೆ ಎಂಬ ಅಧಿಕಾರಿಗಳ ಪ್ರತಿಜ್ಞೆಯು ವಿಫಲವಾಗಿರುವಾಗ ಬಡಜನರು ಬಹಳಷ್ಟು ಬಾರಿ ನಾಗರಿಕ ಸಮಾಜ ಮತ್ತು ಮಾಧ್ಯಮದ ಬೆಂಬಲದಿಂದಲೂ ವಂಚಿತರಾಗುತ್ತಾರೆ. ಈ ವಿಷಪೂರಿತ ವೃತ್ತ ಅವರ ಅಥವಾ ಅವರ ಬಂಧುಗಳ ಬದುಕು ಕೊನೆಗೊಳ್ಳುವ ಮತ್ತು ಮೇಲಿನ ಎಲ್ಲಾ ಘಟನೆಗಳಲ್ಲಿ ನಡೆದಂತೆ, ಸಾವಿನ ನಂತರವೂ ಅಸಮಾನತೆ ಮತ್ತು ಅವಮಾನ ಮಾಡುವ ಮೂಲಕ ಕೊನೆಯಾಗುತ್ತದೆ. ಸೂಪರ್ ಪವರ್ ಆಗಲು ಹೊರಟಿರುವ ದೇಶದಲ್ಲಿ ಬಡಜನರ ಅಗೋಚರ ಮತ್ತು ಅಮಾನುಷಗೊಳಿಸಲ್ಪಟ್ಟ ಅಸ್ತಿತ್ವವು ಅವರ ಸಾವಿನ ಮೂಲಕ ಒಂದಷ್ಟು ಗಮನಕ್ಕೆ ಬರುತ್ತದೆ. ಸಾವು ಎಂಬುದು ಅವರಿಗೆ ಜೀವನಪರ್ಯಂತ ಮಾಡಲಾಗಿರುವ ಅನ್ಯಾಯದ ಪರಾಕಾಷ್ಠೆಯಷ್ಟೇ. ಅನ್ಯಾಯವೆಂಬುದು ಪೌಷ್ಟಿಕತೆ ಭದ್ರತೆಯಿಂದ ವಂಚಿಸುವ ಮೂಲಕವೇ ಆರಂಭವಾಗುತ್ತದೆ, ಇದರಿಂದ ಅವರು ಬಡತನ-ಅಪೌಷ್ಟಿಕತೆ-ಕುಂಠಿತ ಬೆಳವಣಿಗೆ-ನಿರು ದ್ಯೋಗ-ಮತ್ತಷ್ಟು ಬಡತನದ ವಿಷಕಾರಿ ವೃತ್ತದಲ್ಲಿ ಸಿಲುಕುತ್ತಾರೆ. ಇನ್ನು ಬಹುತೇಕ ಅಸ್ತಿತ್ವದಲ್ಲೇ ಇಲ್ಲದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬಡವರ ಮಕ್ಕಳ ಅತ್ಯಂತ ಸುಲಭವಾಗಿ ತಡೆಗಟ್ಟಬಹುದಾದಂತಹ ಮತ್ತು ಗುಣಪಡಿಸಬಹುದಾದಂತಹ ರೋಗಗಳ ಬಗ್ಗೆಯೂ ಎಚ್ಚರವಹಿಸದೆ ಇರುವ ಮೂಲಕ ತಮ್ಮ ಪಾಲಿನ ಕಾಣಿಕೆಯನ್ನೂ ನೀಡುತ್ತವೆ.
ಅರ್ಹ ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ ನೀಡದಿರುವುದು, ನಿರ್ಗತಿಕ ವೃದ್ಧರು ಮಾಸಿಕ ರೂ. 500 ಪಿಂಚಣಿ ಪಡೆಯುವಾಗ ಲಂಚ ಕೇಳುವುದು, ಸಾರ್ವಜನಿರಿಗೆ ಹಂಚಲು ನೀಡಲಾಗುವ ಅಕ್ಕಿಯನ್ನು ರೇಷನ್ ಅಂಗಡಿಯಾತ ಕದ್ದು ಮಾರುವುದು, ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ಅಲ್ಲಿ ನೇಮಿಸಲಾಗಿರುವ ವೈದ್ಯರು ಒಮ್ಮೆಯೂ ಭೇಟಿಯಾಗದಿರುವುದು, ಉಚಿತ ಸರಕಾರಿ ಆ್ಯಂಬುಲೆನ್ಸ್ ಸಪಾಟಾದ ಚಕ್ರಗಳ ಕಾರಣ ಅಗತ್ಯವಿರುವಾಗ ತಲುಪದೇ ಇರುವುದು ಹೀಗೆ ಮುಂದುವರಿಯುತ್ತಲೇ ಹೋಗುತ್ತದೆ. ಇದು ಹೀಗೇ ಮುಂದುವರಿಯುತ್ತದೆ ಯಾಕೆಂದರೆ ಇಲ್ಲಿ ಯೋಜನೆಗಳು ಇವೆಯೇ ಹೊರತು ಅದರ ಮೇಲೆ ನಿಗಾಯಿಡುವಂತಹ ಯಾವುದೇ ವ್ಯವಸ್ಥೆಯಿಲ್ಲ. ಇದು ಹೀಗೇ ಮುಂದುವರಿಯುತ್ತದೆ ಯಾಕೆಂದರೆ ಇದನ್ನು ಪರಿಹರಿಸಲು ಯಾವುದೇ ಸರಿಯಾದ ವ್ಯವಸ್ಥೆಯಿಲ್ಲ. ಇದು ಹೀಗೆಯೇ ಮುಂದುವರಿಯುತ್ತದೆ ಯಾಕೆಂದರೆ ನಗರಗಳ ಪಾರದರ್ಶಕ ಕನ್ನಡಿಗಳ ಹಿಂದೆ ಕುಳಿತಿರುವ ಮಾಧ್ಯಮಗಳು ದೇಶದ ಮೂಲೆಗಳಲ್ಲಿರುವ ಇಂತಹ ಪ್ರದೇಶಗಳಿಗೆ ತಲುಪುವುದಿಲ್ಲ-ನೆರೆ ಅಥವಾ ಬರಗಾಲದ ಹೊರತು. ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ ಆದರೆ ವಿಷಯ ಒಂದೇ. ಅದೆಂದರೆ ಅವರ ಕತೆಗಳು ಸಾವಿನಿಂದ ಆರಂಭವಾಗುವುದಿಲ್ಲ-ಇಂತಹ ಅವಮಾನಕರ ಪರಿಸ್ಥಿತಿಗಳಲ್ಲಂತೂ ಖಂಡಿತವಲ್ಲ. ಅದು ಬಹಳ ಮೊದಲಿನಿಂದಲೇ ಆರಂಭವಾಗುತ್ತದೆ ಮತ್ತು ಯಾರಾದರೂ ಹಿಂದಕ್ಕೆ ತೆರಳಿ ಆರಂಭದಿಂದಲೇ ಎಲ್ಲವನ್ನೂ ಸರಿಯಾಗಿ ಜೋಡಿಸದ ಹೊರತು ಯಾವುದೂ ಬದಲಾಗಲು ಸಾಧ್ಯವಿಲ್ಲ. ಸಮಸ್ಯೆಯಿರುವುದು ವ್ಯವಸ್ಥೆಯಲ್ಲಿ. ಮುಖ್ಯವಾಗಿ ಕಲ್ಯಾಣ ವ್ಯವಸ್ಥೆಯಲ್ಲಿ, ವ್ಯವಸ್ಥೆಯೇ ಸಂಪೂರ್ಣವಾಗಿ ಅಸ್ಥಿಪಂಜರದಂತೆ ಆಗಿದ್ದು ಅದನ್ನು ಜೀವಂತ ಮತ್ತು ಕಾರ್ಯೋನ್ಮುಖವಾಗಿರುವ ವ್ಯವಸ್ಥೆಯಿಂದ ಬದಲಾಯಿಸಬೇಕಿದೆ. ಯಾವುದೇ ಪರೀಕ್ಷೆ, ಪ್ರಯತ್ನದಿಂದ ಕೂಡಾ ಅಸ್ಥಿಪಂಜರಕ್ಕೆ ಜೀವ ತುಂಬಿಸಲು ಸಾಧ್ಯವಿಲ್ಲ ಅಲ್ಲವೇ?
countercurrents.org