‘ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಆದೇಶವೇ ಕಾನೂನುಬಾಹಿರ’
ಬೆಂಗಳೂರು, ಸೆ.22: ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಮಂಗಳವಾರ ಕೇಂದ್ರ ಸರಕಾರಕ್ಕೆ ಆದೇಶಿಸಿರುವ ನ್ಯಾ. ದೀಪಕ್ ಮಿಶ್ರಾ ಮತ್ತು ನ್ಯಾ.ಉದಯ್ ಯು.ಲಲಿತ್ ಅವರಿದ್ದ ಸುಪ್ರೀಂಕೋರ್ಟ್ ವಿಭಾಗೀಯ ಪೀಠ ತನ್ನ ವ್ಯಾಪ್ತಿ ಮೀರಿ ತೀರ್ಮಾನ ಕೈಗೊಂಡಿದೆಯೇ?, ಹೌದು ಎನ್ನುತ್ತಾರೆ ಮಾಜಿ ಅಡ್ವೊಕೇಟ್ ಜನರಲ್ ಮತ್ತು ಹಿರಿಯ ವಕೀಲ ಡಾ.ಬಿ.ವಿ.ಆಚಾರ್ಯ. ಎರಡೂ ರಾಜ್ಯಗಳು ಈ ಕುರಿತು ಯಾವುದೇ ಕೋರಿಕೆ ಇಡದೆ ಇರುವ ಸಂದರ್ಭದಲ್ಲಿ ಇಂತಹ ಆದೇಶ ಪ್ರಕಟಿಸುವ ಮೂಲಕ ಸುಪ್ರೀಂಕೋರ್ಟ್ ವ್ಯಾಪ್ತಿ ಮೀರಿ ವರ್ತಿಸಿದಂತಾಗಿದೆ ಎಂದು ಹೇಳುತ್ತಾರೆ.
ಈ ಕುರಿತಂತೆ ಡಾ.ಆಚಾರ್ಯ ಅವರು ಹೇಳುವುದು ಹೀಗೆ... ಕಾವೇರಿ ನದಿಯಿಂದ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ತಮಿಳುನಾಡು ಸರಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚಿಸಿ, ಕಾವೇರಿ ಮೇಲುಸ್ತುವಾರಿ ಸಮಿತಿ ಮುಂದೆ ಹೋಗುವಂತೆ ತಿಳಿಸಿತ್ತು.
ಅದರಂತೆ ಎರಡೂ ರಾಜ್ಯಗಳ ವಾದ ಆಲಿಸಿದ ಮೇಲುಸ್ತುವಾರಿ ಸಮಿತಿ 10 ದಿನಗಳ ಕಾಲ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿತ್ತು. ಆದರೆ, ನಂತರ ಸುಪ್ರೀಂಕೋರ್ಟ್ ಈ ಆದೇಶ ಮಾರ್ಪಾಟು ಮಾಡಿ ಹೆಚ್ಚು ನೀರು ಬಿಡುವಂತೆ ಹೇಳಿದ್ದೇ ಸರಿಯಲ್ಲ ಎಂದರು.