ವಿಕ್ಟರ್ ಡಿಸೋಜ
ಸುಬ್ರಹ್ಮಣ್ಯ, ಸೆ.22: ಕುಕ್ಕೆ ಸುಬ್ರಹ್ಮಣ್ಯದ ಖ್ಯಾತ ಉದ್ಯಮಿ ವಿಕ್ಟರ್ ಡಿಸೋಜ(75) ಎಂಬವರು ಗುರುವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಈ ಮೊದಲು ಇವರು ಲೋಕೋಪಯೋಗಿ ಇಲಾಖೆಯ ಕಂಟ್ರಾಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ಇವರು ಭಕ್ತಾದಿಗಳ ಅನುಕೂಲತೆಗಾಗಿ ಕ್ಷೇತ್ರದಲ್ಲಿ ಮಿತ ದರದಲ್ಲಿ ವಸತಿ ಗೃಹವನ್ನು ಆರಂಭಿಸಿದರು. ಸುಬ್ರಹ್ಮಣ್ಯದಲ್ಲಿ ಖಾಸಗಿಯಾಗಿ ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಿರುವುದರಲ್ಲಿ ವಿಕ್ಟರ್ ಡಿಸೋಜ ಮೊದಲಿಗರಾಗಿದ್ದಾರೆ. ಇದಲ್ಲದೆ ಫರ್ನಿಚರ್ ಉದ್ಯಮವನ್ನು ಕುಕ್ಕೆಯಲ್ಲಿ ಆರಂಭಿಸಿದ್ದರು. ಪ್ರಥಮವಾಗಿ ಖಾಸಗಿ ಸಭಾಂಗಣ ಆರಂಭಿಸಿ ಸುಬ್ರಹ್ಮಣ್ಯದ ಸಂಘ ಸಂಸ್ಥೆಗಳಿಗೆ ಉಚಿತವಾಗಿ ಸಭೆ ಸಮಾರಂಭಗಳಿಗೆ ಸಭಾಂಗಣಗಳನ್ನು ಒದಗಿಸುತ್ತಿದ್ದರು.
ಜನಾನುರಾಗಿಯಾಗಿದ್ದ ಇವರು ಪರೋಪಕಾರಿಯಾಗಿ, ಕೊಡುಗೈ ದಾನಿಯಾಗಿ ಜನಮನ್ನಣೆ ಗಳಿಸಿದ್ದರು. ಅಲ್ಲದೆ ಇವರು ಹಿರಿಯ ಕಾಂಗ್ರೆಸ್ ನಾಯಕರಾಗಿ ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.