ಅಜ್ಜಿಯ ದಾಂಪತ್ಯದ ದುರಂತ ಅಂತ್ಯ
ಧಾರಾವಾಹಿ-28
ನಾನು ಅವರ ತಲೆಯನ್ನು ನನ್ನ ಹೆಗಲಿಗೆ ಒರಗಿಸಿ ಅಪ್ಪಿಹಿಡಿದೆ. ಕೈಯಿಂದ ಬಾಯಿ ಒರೆಸಿದೆ. ರಕ್ತ! ಬಾಯಿ ತುಂಬಾ ರಕ್ತ! ನಾನು ಭಯದಿಂದ ಕಂಪಿಸಿದೆ. ಹೊರಗೆ ಕಾರು ಬಂದು ನಿಂತ ಸದ್ದು. ನಿನ್ನಜ್ಜ ಒಳಗೆ ಬಂದವರು ರಕ್ತ ನೋಡಿ ಕಂಗಾಲಾಗಿ ಬಿಟ್ಟಿದ್ದರು. ಅವರ ಜೊತೆ ತ್ಯಾಂಪಣ್ಣ ಶೆಟ್ಟರೂ ಇದ್ದರು. ತಕ್ಷಣ ಇಬ್ಬರೂ ಸೇರಿ ಅವರನ್ನು ಎತ್ತಿಕೊಂಡು ಹೋಗಿ ಕಾರಿನಲ್ಲಿ ಹಾಕಿದರು. ಕಾರು ಮಂಗಳೂರಿಗೆ ಹೊರಟಿತು.
ಆಸ್ಪತ್ರೆಯಲ್ಲಿ ಪರೀಕ್ಷಿಸಿದ ದೊಡ್ಡ ಡಾಕ್ಟರು ಸ್ವಲ್ಪದಿನ ಅಲ್ಲೇ ದಾಖಲಿಸುವಂತೆ ಹೇಳಿದರು. ಅನಂತರ ನಿನ್ನಜ್ಜನನ್ನು ತನ್ನ ಕೋಣೆಗೆ ಕರೆದುಕೊಂಡು ಹೋದರು. ಸ್ವಲ್ಪಹೊತ್ತು ಕಳೆದು ಕೋಣೆಯಿಂದ ಹೊರಬಂದ ನಿನ್ನಜ್ಜನ ಮುಖ ಬಿಳುಚಿಕೊಂಡಿತ್ತು. ತ್ಯಾಂಪಣ್ಣನ ಹೆಗಲು ಹಿಡಿದುಕೊಂಡು ಬಂದವರು ತಮ್ಮನ ಪಕ್ಕ ಬಂದು ನಿಂತರು.
‘‘ಡಾಕ್ಟರ್ ಏನು ಹೇಳಿದರು’’ ಕೇಳಿದೆ.
‘‘ಏನಿಲ್ಲ, ಒಂದು ನಾಲ್ಕೈದು ದಿನ ಇಲ್ಲಿ ಇರಬೇಕಾಗಬಹುದು’’ ಎಂದರು.
‘‘ಏನಾಗಿದೆಯಂತೆ?’’
‘‘ಏನೂ ಆಗಿಲ್ಲ...’’
‘‘ಮತ್ತೇಕೆ ಇಲ್ಲಿರುವುದು?’’
ನಿನ್ನಜ್ಜ ಮಾತನಾಡಲಿಲ್ಲ. ಅವರ ಮುಖ ಭೀಕರ ಮಳೆಗೆ ಸಜ್ಜಾದ ಆಕಾಶದಂತೆ ಕಪ್ಪಿಟ್ಟಿತ್ತು. ಆ ಮುಖ ನೋಡಿ ನಾನು ಅಧೀರಳಾಗಿಬಿಟ್ಟೆ.
‘‘ಏನಾಗಿದೆ ಇವರಿಗೆ ಹೇಳಿ?’’
ಅಜ್ಜ ಈಗಲೂ ತುಟಿ ಬಿಚ್ಚಲಿಲ್ಲ. ತ್ಯಾಂಪಣ್ಣ ಗೋಡೆಗೆ ಮುಖ ಮಾಡಿ ನಿಂತಿದ್ದರು.
‘‘ಡಾಕ್ಟರ್ ಏನು ಹೇಳಿದರು?’’ ನನ್ನ ಹೃದಯ ಜೋರಾಗಿ ಬಡಿದುಕೊಳ್ಳತೊಡಗಿತ್ತು.
ಬಿರುಗಾಳಿಗೆ ತತ್ತರಿಸಿದ ಮೋಡ ಅಜ್ಜನ ಕಣ್ಣುಗಳಲ್ಲಿ ಧೋ ಎಂದು ಸುರಿಯತೊಡಗಿತ್ತು. ಅವರು ತ್ಯಾಂಪಣ್ಣನ ಹೆಗಲ ಮೇಲೆ ತಲೆಯಿಟ್ಟು ಬಿಕ್ಕಿ ಬಿಕ್ಕಿ ಅಳತೊಡಗಿದರು. ಆ ಬಿರುಗಾಳಿ, ಮಳೆಯ ಅಬ್ಬರಕ್ಕೆ ನಾನೆಲ್ಲಿ ಕೊಚ್ಚಿಕೊಂಡು ಹೋಗಿ ಬಿಡುತ್ತೇನೋ ಎಂಬ ಭಯದಿಂದ ತ್ಯಾಂಪಣ್ಣನ ರೆಟ್ಟೆಯನ್ನು ಗಟ್ಟಿಯಾಗಿ ಹಿಡಿದುಕೊಂಡೆ.
ತ್ಯಾಂಪಣ್ಣ ತನ್ನ ಎರಡೂ ಹೆಗಲಿಗೆ ಒರಗಿ ಅಳುತ್ತಿರುವ ಜೀವಗಳ ತಲೆ ಸವರುತ್ತಾ ಸಂತೈಸ ತೊಡಗಿ್ದರು. ಅವರೂ ಆಗ ಅಳುತ್ತಿದ್ದರು.
ಮತ್ತೆ 15 ದಿನ ನಾವು ಆಸ್ಪತ್ರೆಯಲ್ಲಿದ್ದೆವು. ಆ 15 ದಿನವೂ ಮೂವರೂ ಅವರನ್ನು ಬಿಟ್ಟು ಕದಲಲಿಲ್ಲ. ಅವರನ್ನು ಉಳಿಸಿಕೊಳ್ಳಲು ನಿನ್ನಜ್ಜ, ತ್ಯಾಂಪಣ್ಣ ಏನೆಲ್ಲ ಪ್ರಯತ್ನ ಮಾಡಿದರು. ಆಗಲಿಲ್ಲ... ಸಾಧ್ಯವಾಗಲಿಲ್ಲ... ಒಂದು ದಿನ ಕೆಮ್ಮುತ್ತಾ ರಕ್ತವಾಂತಿ ಮಾಡಿದ ಅವರು ನಮ್ಮೆಲ್ಲರನ್ನೂ ಆಸೆಯ ಕಣ್ಣುಗಳಿಂದ ನೋಡುತ್ತಾ ಹೋಗಿಬಿಟ್ಟರು. ನನ್ನನ್ನು ನಿನ್ನಜ್ಜನನ್ನು ಬಿಟ್ಟು ಇನ್ನೆಂದೂ ಬಾರದ ಲೋಕಕ್ಕೆ ಹೋಗಿಬಿಟ್ಟರು.
ಅಷ್ಟು ಹೇಳಿದ ಅಜ್ಜಿ ಕಣ್ಣು ಮುಚ್ಚಿ ಮೌನವಾಗಿ ಕುಳಿತುಬಿಟ್ಟರು.
‘‘ಅಜ್ಜೀ...’’ ತಾಹಿರಾ ಕರೆದಳು.
‘‘................’’
‘‘ಅಜ್ಜೀ, ಸುಸ್ತಾಗ್ತದಾ... ನೀರು ಬೇಕಾ?’’
ಕಲ್ಲು ಗುಂಡಿನಂತೆ ಕುಳಿತಿದ್ದ ಅಜ್ಜಿ ಮಾತನಾಡಲಿಲ್ಲ. ತಾಹಿರಾ ನೀರಿನ ಲೋಟ ತೆಗೆದು ಅಜ್ಜಿಯ ಬಾಯಿಗೆ ಹಿಡಿದಳು. ಅವರು ಕುಡಿದರು.
‘‘ಅಜ್ಜಿ, ನೀವು ಸ್ವಲ್ಪಹೊತ್ತು ಮಲಗಿ. ನಿಮಗೆ ಸುಸ್ತಾಗಿದೆ’’ ಎಂದು ತಾಹಿರಾ ಅಜ್ಜಿಯನ್ನು ಮಲಗಿಸಿದಳು. ಕೋಣೆಯ ಬಾಗಿಲೆಳೆದು ಐಸುಳನ್ನು ಹುಡುಕುತ್ತಾ ಅಡುಗೆ ಮನೆಗೆ ಬಂದಳು.
‘‘ಅಜ್ಜಿಯೊಂದಿಗೆ ಪಟ್ಟಾಂಗ ಮುಗಿಯಿತಾ?’’ ತೆಂಗಿನಕಾಯಿ ಹೆರೆಯುತ್ತಿದ್ದ ಐಸು ಕೇಳಿದಳು.
‘‘ಇಲ್ಲ ಮಾಮಿ, ಅಜ್ಜಿ ಮಾತಾಡ್ತಾ ಮಾತಾಡ್ತಾ ಅಲ್ಲಿಗೆ ನಿದ್ದೆ ಹೋದರು’’
‘‘ಈಗೀಗ ಜಾಸ್ತಿ ಮಾತನಾಡುವುದಕ್ಕೂ ಆಗುವುದಿಲ್ಲ ಅವರಿಗೆ, ಶ್ವಾಸ ಕಟ್ಟುತ್ತೆ.’’
ತಾಹಿರಾ ಅಲ್ಲೇ ನೆಲ ಮೇಲೆ ಐಸು ಪಕ್ಕ ಕುಳಿತಳು.
‘‘ಇನ್ನೆಷ್ಟು ದಿನ ಇರ್ತಿ ನೀನು?’’
‘‘ಇನ್ನು 14 ದಿನ ಇರ್ತೇನೆ.’’
‘‘ನೀನು ಬಂದು ಎಷ್ಟು ದಿನ ಆಯಿತು?’’
‘‘16 ದಿನ ಆಯಿತು. ಒಂದು ತಿಂಗಳಿಗೇಂತ ಕೇಳಿ ಬಂದಿದ್ದೇನೆ ಅಮ್ಮನಲ್ಲಿ.’’
‘‘ಎಲ್ಲಿಗೆ ಹೋಗುವುದೂಂತ ಹೇಳಿದ್ದಿ?’’
‘‘ಈ ಸಲ ಸತ್ಯ ಹೇಳಿ ಬಂದಿದ್ದೇನೆ.’’
‘‘ಏನು?’’ ಐಸು ಆಶ್ಚಯದಿರ್ಂದ ತಾಹಿರಾಳ ಮುಖ ನೋಡಿದಳು.
‘‘ಹೌದು ಮಾಮಿ, ಈ ಸಲ ಇಲ್ಲಿಗೆ ಬರುವುದೂಂತಲೇ ಹೇಳಿ ಬಂದದ್ದು.’’
‘‘ಇಲ್ಲಿಗೆ ಬರಲಿಕ್ಕೆ ಬಿಟ್ಟಳಾ ಅವಳು?’’
‘‘ಬಿಡದೆ ಏನು. ನನ್ನನ್ನು ಎಲ್ಲಿಗೆ ಬೇಕಾದರೂ ಹೋಗಲು ಬಿಡುತ್ತಾರೆ. ಆದರೆ ಒಂದು ವಾರ ಮಾತ್ರ. ಅಜ್ಜಿ ಮನೆಗೇಂತ ಹೇಳಿದ್ದಕ್ಕೆ ಒಂದು ತಿಂಗಳು ಎಂದಾಗ ಮಾತನಾಡಲಿಲ್ಲ.’’
‘‘ಅಜ್ಜಿ ಮನೆಗೆ ಎಂದಾಗ ಏನೆಂದಳು?’’
‘‘ಏನೂ ಹೇಳಲಿಲ್ಲ. ಖರ್ಚಿಗೆ ದುಡ್ಡು ಬೇಕೂಂತ ಕೇಳಿದೆ ಮೂರು ಸಾವಿರ ರೂಪಾಯಿ ಕೊಟ್ಟರು.’’
‘‘ಹೋಗಬೇಡಾಂತ ಹೇಳಲಿಲ್ಲವಾ?’’ ಐಸು ಸುಮ್ಮನೆ ಕುಳಿತು ಗಲ್ಲಕ್ಕೆ ಕೈ ಹಿಡಿದುಕೊಂಡು ತಾಹಿರಾಳ ಮುಖವನ್ನೇ ನೋಡುತ್ತಿದ್ದಳು.
‘‘ಇಲ್ಲ. ಯಾಕೆ ಮಾಮಿ?’’
‘‘ಏನಿಲ್ಲ, ಸುಮ್ಮನೆ ಕೇಳಿದೆ.’’
‘‘ಹೋದ ಸಲ ಇಲ್ಲಿಗೆ ಬಂದು ಒಂದು ವಾರ ಇದ್ದುದನ್ನೂ ಅಮ್ಮನಿಗೆ ಹೇಳಿದ್ದೆ.’’
‘‘ಏನೆಂದಳು, ಬೈದಳಾ?’’
‘‘ಇಲ್ಲ. ಏನೂ ಹೇಳಲಿಲ್ಲ.’’
‘‘ಹೌದಾ...?’’ ಐಸುಳ ಮುಖದ ತುಂಬಾ ಆಶ್ಚರ್ಯವಿತ್ತು.
‘‘ಅಷ್ಟೆಲ್ಲ ಅಪ್ಪ, ಅಮ್ಮ ನನ್ನಲ್ಲಿ ಮಾತನಾಡೋಲ್ಲ ಮಾಮಿ. ನೀವು ಮಾತನಾಡಿದಷ್ಟು ಫ್ರಿಯಾಗಿ ಮಾತನಾಡೋದಿಲ್ಲ. ಅವರು ಯಾವಾಗಲೂ ಬ್ಯುಸಿಯಾಗಿರ್ತಾರೆ.’’
‘‘ಬರುವ ವಾರ ಬಕ್ರೀದ್ ಹಬ್ಬ. ಅಜ್ಜಿಯ ಮಕ್ಕಳು, ಮೊಮ್ಮಕ್ಕಳು, ಅಳಿಯಂದಿರು ಎಲ್ಲ ಬರ್ತಾರೆ. ನಿನಗೆ ಎಲ್ಲರನ್ನೂ ನೋಡಬಹುದು.’’
‘‘ಅವರಿಗೆಲ್ಲ ನನ್ನನ್ನು ನೋಡಿ ಏನನಿಸಬಹುದು ಮಾಮಿ.’’
‘‘ಅನಿಸುವುದೆಂತದು. ಎಲ್ಲರಿಗೂ ಖುಷಿಯಾಗ ಬಹುದು. ಯಾವತ್ತೂ ನೋಡಿರದವಳನ್ನು ನೋಡಿದರೆ ಖುಷಿಯಾಗುವುದಿಲ್ಲವಾ?’’ ಎಲ್ಲರೂ 2-3 ದಿನ ಇಲ್ಲಿಯೇ ಇರ್ತಾರೆ. ಎಷ್ಟು ಖುಷಿಯಾಗ್ತದೆ ಗೊತ್ತಾ.’’
ತಾಹಿರಾ ಮಾತನಾಡಲಿಲ್ಲ. ಏನೋ ಯೋಚಿಸುವಳಂತೆ ಸುಮ್ಮನೆ ಕುಳಿತಿದ್ದಳು.
ನಾಸರ್ ಬರ್ತಾನೆ. ಎಲ್ಲರಿಗೂ ಬಟ್ಟೆ ತರ್ತಾನೆ. ವರ್ಷದ ಎರಡು ಹಬ್ಬಕ್ಕೂ ಅವನು ಎಲ್ಲರಿಗೂ ಬಟ್ಟೆ ತೆಗೆಯುತ್ತಾನೆ. ಬೇಡ ಎಂದರೂ ಕೇಳುವುದಿಲ್ಲ. ಅವನು ಹಾಗೆಯೇ. ತುಂಬ ಒಳ್ಳೆಯ ಹುಡುಗ. ಅವನಿಗೆ ಎಲ್ಲರೂ ಬೇಕು. ಎಲ್ಲರೂ ತನ್ನವರು. ಎಲ್ಲರೊಂದಿಗೂ ಪ್ರೀತಿ. ಎಲ್ಲರೊಂದಿಗೂ ಸ್ನೇಹ, ಸಲುಗೆ. ಆದರೆ ಮೂಗಿನ ತುದಿಯಲ್ಲಿ ಕೋಪ. ಕೋಪ ಬಂದರೆ ಎಂತ ಮಾತನಾಡ್ತಾನೇಂತ ಅವನಿಗೇ ಗೊತ್ತಿರುವುದಿಲ್ಲ. ಸ್ವಲ್ಪ ಹೊತ್ತು ಮತ್ತೆ ಸರಿಯಾಗ್ತಾನೆ. ಮತ್ತೆ ಅವನಿಗೆ ಯಾವುದೂ ನೆನಪಿರುವುದಿಲ್ಲ. ನೇರ, ದಿಟ್ಟ ಮಾತು. ಒಂದು ವಸ್ತು ಬೇಕು ಎಂದರೆ ಬೇಕೆ. ಅದನ್ನು ಹೇಗಾದರೂ ಮಾಡಿ ಪಡೆಯುತ್ತಾನೆ. ಯಾವುದಕ್ಕೂ ಅಂಜುವವನಲ್ಲ. ಒಳ್ಳೆಯವನು, ತುಂಬಾ ಒಳ್ಳೆಯವನು. ತಂದೆಯನ್ನು ನೋಡದ ಮಗು ನೋಡು. ಅದಕ್ಕೆ ಅವನಲ್ಲಿ ಒಂಥರ ಹಟ. ತಂದೆಯಿಲ್ಲದ, ತಂದೆಯ ಪ್ರೀತಿ ಇಲ್ಲದ, ತಂದೆಯ ಮೇಲ್ವಿಚಾರಣೆಯಲ್ಲಿ ಬೆಳೆಯದ ಮಕ್ಕಳು ಹಾಗೆಯೇ. ತಂದೆಯ ಬಗ್ಗೆ ಅವನ ಮನಸ್ಸಿನಲ್ಲಿ ಎಂತಹ ಭಾವನೆಗಳಿವೆಯೋ, ಎಷ್ಟು ನೊಂದು ಕೊಳ್ಳುತ್ತಿದ್ದಾನೋ. ಅವನು ಯಾವುದನ್ನೂ ಯಾರಿಗೂ ಹೇಳುವುದಿಲ್ಲ. ಯಾರಲ್ಲಿಯೂ ಏನನ್ನೂ ತೋರಿಸಿಕೊಳ್ಳುವುದಿಲ್ಲ. ಅವನ ಮನಸಿನಲ್ಲಿ ಎಷ್ಟೊಂದು ನೋವಿದೇಂತ ನನಗೆ ಗೊತ್ತು. ನಿನ್ನ ಅಜ್ಜನಿಗೂ ಅವನೆಂದರೆ ಪ್ರೀತಿ. ತುಂಬಾ ಪ್ರೀತಿ. ಗಂಡು ಮಕ್ಕಳಿಲ್ಲದ ಈ ಮನೆಗೆ ಅವನೇ ಗಂಡು ಮಗ. ನಿನ್ನಜ್ಜ ತನ್ನೆಲ್ಲಾ ನೋವುಗಳನ್ನು ಅವನನ್ನು ನೋಡಿ ಮರೆಯುತ್ತಿದ್ದರು. ಅವನನ್ನು ಬೆಳೆಸಿದ್ದು, ಓದಿಸಿದ್ದು ಎಲ್ಲ ನಿನ್ನಜ್ಜನೇ. ಅವನು ಏನು ಕೇಳಿದರೂ ತಂದು ಕೊಡುತ್ತಿದ್ದರು. ಅವನಿಗೆ ಬುದ್ಧಿ ಬರುವವರೆಗೂ ಅವನು ಅಜ್ಜ-ಅಜ್ಜಿಯ ಮಧ್ಯೆಯೇ ಮಲಗುತ್ತಿದ್ದುದು. ಅವನು ದೊಡ್ಡವನಾದ ಮೇಲೆ ಅವನಲ್ಲಿ ಕೇಳದೆ ನಿನ್ನಜ್ಜ ಒಂದು ಕೆಲಸವೂ ಮಾಡುತ್ತಿರಲಿಲ್ಲ. ಅಜ್ಜಿಯ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಅಳಿಯಂದಿರಿಗೆ ಎಲ್ಲರಿಗೂ ಅವನೆಂದರೆ ಪ್ರೀತಿ, ವಿಶ್ವಾಸ. ಅವರೆಂದೂ ಅವನನ್ನು ಹೊರಗಿನವರಂತೆ ಕಂಡವರಲ್ಲ. ತಮ್ಮ ಒಡಹುಟ್ಟಿದವನಂತೆ ಜೋಪಾನ ಮಾಡಿಕೊಂಡು ಬಂದವರು. ಈಗ ಈ ಇಡೀ ಮನೆ, ತೋಟದ ಎಲ್ಲ ಜವಾಬ್ದಾರಿ ಅವನದೇ. ಎಲ್ಲರನ್ನೂ ನೋಡಿಕೊಳ್ಳುತ್ತಿರುವುದು ಅವನೇ. ಗಂಡನನ್ನು ಮರೆಯಲಿಕ್ಕೆ ನನಗೆ ದೇವರು ಕೊಟ್ಟ ವರ ಅವನು. ಅವರು ಬಂದಿದ್ದರೆ ಅವನನ್ನು ನೋಡಿ ಎಷ್ಟು ಸಂತೋಷ ಪಟ್ಟುಕೊಳ್ಳುತ್ತಿದ್ದರು.
ಮಗನನ್ನು ಹೊಗಳುತ್ತಿದ್ದುದನ್ನೇ ಮೈಮರೆತು ಆಲಿಸುತ್ತಿದ್ದ ತಾಹಿರಾಳಿಗೆ ಅಜ್ಜಿ ಕೆಮ್ಮಿದ್ದು ಕೇಳಿ ಎಚ್ಚರವಾಯಿತು.
‘‘ಅಜ್ಜಿ ಎದ್ದರೂಂತ ಕಾಣುತ್ತೆ, ಹೋಗಿ ನೋಡು. ನಾನೀಗ ಬರ್ತೇನೆ’’ ಎಂದಳು ಐಸು.
ತಾಹಿರಾ ಕೋಣೆಗೆ ಬಂದಾಗ ಅಜ್ಜಿ ಮಲಗಿಯೇ ಇದ್ದರು. ಕಣ್ಣು ತೆರೆದಿತ್ತು. ತುಟಿಗಳು ಒಣಗಿದ್ದವು. ತಾಹಿರಾ ಅವರ ತಲೆ ಪಕ್ಕ ಕುಳಿು ‘‘ಅಜ್ಜೀ...’’ ಎಂದು ಕರೆದಳು.
ಅಜ್ಜಿ ಮಾತನಾಡಲಿಲ್ಲ.
ಮತ್ತೆ ಅವರ ಮುಖದ ಹತ್ತಿರ ುುಖ ತಂದು ‘‘ಅಜ್ಜೀ..’’ ಎಂದಳು.
ಈಗಲೂ ಅಜ್ಜಿ ತುಟಿ ತೆರೆಯಲಿಲ್ಲ. ಏನೋ ಯೋಚಿಸುತ್ತಿರುವಂತೆ ಕಣ್ಣು ಪಿಳಿ ಪಿಳಿ ಮಾಡುತ್ತಿದ್ದರು.
ತಾಹಿರಾ ಅಜ್ಜಿಯ ಮುಖಕ್ಕೆ ಸ್ವಲ್ಪ ನೀರು ಹಾಕಿ ಒರೆಸಿದಳು. ಬಾಯಿ ಅಗಲಿಸಿ ಸ್ವಲ್ಪ ನೀರು ಹಾಕಿದಳು. ಅಜ್ಜಿ ಕುಡಿದರು. ಮತ್ತೆ ಕಿವಿ ಪಕ್ಕ ಬಾಯಿ ಇಟ್ಟು ‘‘ಅಜ್ಜೀ...’’ ಎಂದು ಜೋರಾಗಿ ಕೂಗಿದಳು ತಾಹಿರಾ.
‘‘ಹೂಂ... ಅವರೆಲ್ಲ ಹೋದರಾ?’’ ಅಜ್ಜಿ ತೊದಲಿದರು.
‘‘ಯಾರಜ್ಜೀ...’’
‘‘ಅವರು, ಬಂದವರೆಲ್ಲ ಹೋದರಾ?’’
‘‘ಯಾರಜ್ಜೀ...’’
‘‘ನನ್ನ ಗಂಡನನ್ನು ನೋಡಲು ಬಂದವರು. ಹೋದರಾ ಅವರು. ಹೋಗಿಲ್ಲ ಅಂದರೆ ಅವರನ್ನೆಲ್ಲ ಬೇಗ ಹೋಗಲಿಕ್ಕೆ ಹೇಳು... ನಾನು ಬರುವುದಿಲ್ಲ. ನಾನು ಇಲ್ಲೇ ಇರ್ತ್ತೇನೆ ಎಂದು ಅವರಿಗೆ ಹೇಳು. ಯಾರು ಕರೆದರೂ ನಾನು ಬರುವುದಿಲ್ಲ... ನಾನು ಇಲ್ಲೇ ಸಾಯುವುದೂಂತ ಹೇಳು... ಅವರನ್ನೆಲ್ಲ ಹೋಗಲಿಕ್ಕೆ ಹೇಳು...’’ ಅಜ್ಜಿ ಏನೇನೋ ಕನವರಿಸತೊಡಗಿದರು.
ಐಸು ಕೋಣೆಗೆ ಬಂದವಳು ಮತ್ತೆ ಅಜ್ಜಿಯ ಮುಖ ತೊಳೆದಳು. ನೀರು ಕುಡಿಸಿದಳು. ಅಜ್ಜಿ ಅವರಿಬ್ಬರನ್ನೂ ನೋಡುತ್ತಾ ಮತ್ತೆ ಕೇಳಿದರು.
‘‘ಅವರೆಲ್ಲ ಹೋದರಾ?’’
‘‘ಹೂಂ, ಹೋದರು ಅಜ್ಜಿ’’ ಐಸು ಹೇಳಿದಳು.
‘‘ಅವರಿಗೆಲ್ಲ ಹೇಳಿದಿಯಾ ನಾನು ಬರುವುದಿಲ್ಲಾಂತ’’
‘‘ಎಲ್ಲರಿಗೂ ಹೇಳಿದೆ ಅಜ್ಜಿ, ಅವರೆಲ್ಲ ಹೋದರು. ನೀವು ಎದ್ದು ನಮಾಝ್ ಮಾಡಿ. ನಾನು ಊಟಕ್ಕೆ ಬಡಿಸುತ್ತೇನೆ.’’ ಐಸು ತಾಹಿರಾಳ ಮುಖ ನೋಡಿ ಮುಗುಳು ನಕ್ಕಳು. ‘‘ಏನು ಕೇಳ್ತಾ ಇದ್ದಾರೆ ಮಾಮಿ ಅಜ್ಜಿ.’’
‘‘ಏನೇನೋ ನೆನಪಿಸಿಕೊಂಡು ಕನಸು ಕಾಣ್ತಾರೆ. ಇನ್ನು ಸ್ವಲ್ಪ ಹೊತ್ತು ವುತ್ತೆ ಸರಿಯಾಗ್ತಾರೆ’’ ಎಂದಳು ಐಸು.
ಆದರೆ ಅಂದಿಡೀ ಅಜ್ಜಿ ಸರಿಯಾಗಲಿಲ್ಲ. ಏನೇನೋ ಮಾತನಾಡುವುದು. ಏನೇನೋ ಕೇಳುವುದು. ಬಾಯಿಗೆ ಕೊಟ್ಟರೆ ಮಾತ್ರ ತಿನ್ನುವುದು.. ತಾಹಿರಾ ಅವರ ಪಕ್ಕವೇ ಕುಳಿತು ಅವರನ್ನು ಗಮನಿಸುತ್ತಲೇ ಇದ್ದಳು.
ಅಂದು ರಾತ್ರಿಯಿಡೀ ಕೋಣೆಯಲ್ಲಿ ಅಜ್ಜಿಯ ಅಳು, ಮಾತು, ಗಲಾಟೆ ಜೋರಾಗಿಯೇ ಇತ್ತು. ಅಜ್ಜಿಯ ಕೋಣೆಯ ಬಾಗಿಲಲ್ಲಿ ಐಸುಳನ್ನು ತಬ್ಬಿ ಹಿಡಿದು, ಮಲಗಿದ್ದ ತಾಹಿರಾಳಿಗೆ ನಿದ್ದೆ ಬರಲಿಲ್ಲ. ಅಜ್ಜಿಯ ಮಾತನ್ನೇ ಕೇಳುತ್ತಾ, ಅದನ್ನು ಅರ್ಥೈಸಿಕೊಳ್ಳಲು ಹೆಣಗಾಡುತ್ತಾ, ಹೊರಳಾಡುತ್ತಾ ಇದ್ದಳು. ಬೆಳಗಿನ ಜಾವ ಎದ್ದು ತನ್ನ ಕೋಣೆಗೆ ಹೋಗಿ ಮಲಗಿದವಳಿಗೆ ಗಡದ್ದು ನಿದ್ದೆ ಹಿಡಿದು ಬಿಟ್ಟಿತ್ತು.