ನ್ಯಾಯಾಂಗ-ಶಾಸಕಾಂಗಗಳ ನಡುವಿನ ತಿಕ್ಕಾಟದ ಮಜಲುಗಳು
ಇವತ್ತು ‘ಜುಡೀಷಿಯಲ್ ಆ್ಯಕ್ಟಿವಿಸಂ’ ತಾನು ಸರಿಯೆಂದು ಎದೆತಟ್ಟಿಕೊಳ್ಳುತ್ತಿದ್ದರೆ, ಅದಕ್ಕೆ ಏಕೈಕ ಕಾರಣ - ಶಾಸಕಾಂಗಕ್ಕೆ ಈ ದೇಶದ ಜನತೆ ಆಯ್ದುಕೊಟ್ಟಿರುವ ಜನಪ್ರತಿನಿಧಿಗಳ ಗುಣಮಟ್ಟ. ಬೇವಿನ ಗಿಡ ನೆಟ್ಟು ಬೆಲ್ಲಕ್ಕೆ ಕಾಯುತ್ತಿದ್ದೇವೆ ನಾವು.
ಸಂವಿಧಾನವನ್ನು ಆಧಾರವಾಗಿಟ್ಟುಕೊಂಡು ಕಾನೂನುಗಳನ್ನು ರಚಿಸುವ ಶಾಸಕಾಂಗಕ್ಕೂ, ಸಂವಿಧಾನವನ್ನೇ ಆಧಾರವಾಗಿಟ್ಟುಕೊಂಡು ಕಾನೂನುಗಳನ್ನು ವ್ಯಾಖ್ಯಾನಿಸುವ ನ್ಯಾಯಾಂಗಕ್ಕೂ ನಡುವೆ ತಿಕ್ಕಾಟದ್ದೇ ಒಂದು ಹಿಸ್ಟರಿ. ಈ ಚರಿತ್ರೆಯನ್ನು ದೂರಸರಿದು ನಿಂತು ನೋಡಿದಾಗ, ಈ ನೆಲದ ವಾಸ್ತವಗಳನ್ನು ನ್ಯಾಯಾಂಗ ಕಣ್ಣಿಗೆ ಕಪ್ಪುಬಟ್ಟೆ ಕಟ್ಟಿಕೊಂಡೇ ಅರ್ಥೈಸಿಕೊಂಡದ್ದು ಎದ್ದುಕಂಡರೆ ಅಚ್ಚರಿ ಆಗದಿರದು.
ಮಜಲುಗಳು:
ನ್ಯಾಯಾಂಗ-ಶಾಸಕಾಂಗಗಳ ನಡುವಿನ ತಿಕ್ಕಾಟಕ್ಕೆ ನಾಲ್ಕು ಮಜಲುಗಳನ್ನು ಗುರುತಿಸಬಹುದು.
1. ಸ್ವಾತಂತ್ರ್ಯದ ಬಳಿಕ ಮೊದಲ ಬಾರಿಗೆ ನ್ಯಾಯಾಂಗ- ಶಾಸಕಾಂಗಗಳ ನಡುವೆ ತಿಕ್ಕಾಟ ಕಾಣಿಸಿಕೊಂಡದ್ದು, ಸಾಮಾಜಿಕ ನ್ಯಾಯದ ವಿಚಾರ ಬಂದಾಗ ಎಂಬುದು ಗಮನಿಸಬೇಕಾದ ಸಂಗತಿ.
1950ರ ವೇಳೆಗೆ ಶಾಸಕಾಂಗವು ಭೂ ಮಸೂದೆ ತರಹೊರಟಾಗ, ನ್ಯಾಯಾಂಗ ಅದನ್ನು ‘ವ್ಯಕ್ತಿಯ ಆಸ್ತಿ ಹೊಂದುವ ಮೂಲಭೂತ ಹಕ್ಕಿನ ಉಲ್ಲಂಘನೆ’ ಎಂದು ಪರಿಗಣಿಸಿತು. ಇದು 1951ರಲ್ಲಿ ಸಂವಿಧಾನಕ್ಕೆ 9ನೆ ಶೆಡ್ಯೂಲು ಉಂಟಾಗಲು ಹಾದಿ ಮಾಡಿಕೊಟ್ಟಿತು.
2. ಮುಂದೆ 1967ರ ವೇಳೆಗೆ ನ್ಯಾಯಾಂಗ - ಶಾಸಕಾಂಗಗಳ ನಡುವೆ ಮತ್ತೆ ಸಂಘರ್ಷಕ್ಕೆ ಕಾರಣವಾದದ್ದು, ಬ್ಯಾಂಕುಗಳ ರಾಷ್ಟ್ರೀಕರಣ ಮತ್ತು ರಾಜಮನೆತನಗಳ ಕ್ಟೃಜಿ ಟ್ಠ್ಟಛಿ ರದ್ದುಪಡಿಸುವ ಇಂದಿರಾ ಸರಕಾರದ ಗಟ್ಟಿನಿರ್ಧಾರ.
ಇದನ್ನು ನ್ಯಾಯಾಂಗ ‘ಅಸಾಂವಿಧಾನಿಕ’ ಎಂದು ಪರಿಗಣಿಸಿತು. ಇಲ್ಲಿಂದ ಮುಂದೆ ಈ ಸಂಘರ್ಷ ಸಂವಿಧಾನದ ಲೆಟರ್-ಸ್ಪಿರಿಟ್ ಬಿಟ್ಟು ಯದ್ವಾತದ್ವಾ ಹರಿಯಲಾರಂಭಿಸಿತು ಮತ್ತು ಸಂವಿಧಾನವು 40ಕ್ಕೂ ಮಿಕ್ಕಿ ತಿದ್ದುಪಡಿಗಳನ್ನು ಕಂಡಿತು.
3. ಸುಮಾರಿಗೆ 70-80ರ ದಶಕಗಳಲ್ಲಿ ಶಿಕ್ಷಣ, ಹಸಿವು, ಆರೋಗ್ಯ, ಬಡತನ, ಮಹಿಳೆಯರ ಸಬಲೀಕರಣ, ಮಕ್ಕಳ ಹಕ್ಕುಗಳಂತಹ ಜಾಗತಿಕ ಸಂಗತಿಗಳನ್ನು ಸಂಗ್ರಾಹ್ಯವಾಗಿ ನಿಭಾಯಿಸಬೇಕಾದಾಗ ಅದರ ಜೊತೆಜೊತೆಗೇ ಹೊಸ ಅರ್ಥನೀತಿ, ಖಾಸಗೀಕರಣ, ಜಾಗತೀಕರಣದಂತಹ ಸಂಗತಿಗಳು ಎದುರಾಗತೊಡಗಿದವು. ಈ ಹಂತದಲ್ಲಿ ಶಾಸಕಾಂಗದ ಗುಣಮಟ್ಟ ಮತ್ತು ಬದಲಾಗುತ್ತಿರುವ ಸನ್ನಿವೇಶಗಳಿಗೆ ಪ್ರತಿಕ್ರಿಯಿಸುವ ಅದರ ಸಾಮರ್ಥ್ಯ ಕುಸಿದಿದ್ದರಿಂದ ನ್ಯಾಯಾಂಗವು ಕಾನೂನು ರೂಪಿಸುವ, ಅದನ್ನು ಅನುಷ್ಠಾನಗೊಳಿಸುವ ಮಾರ್ಗಗಳನ್ನೂ ಕಂಡುಕೊಳ್ಳತೊಡಗಿತು. ಸಾರ್ವಜನಿಕ ಹಿತಾಸಕ್ತಿ ದಾವೆ (ಐಔ)ಗಳ ಯುಗ ಆರಂಭವಾಯಿತು.
4. ರಾಜತಂತ್ರ ನಿಪುಣರು ಹಿಂದೆ ಸರಿದು ವೃತ್ತಿ ರಾಜಕಾರಣಿಗಳು ಹೆಚ್ಚಾಗುತ್ತಾ ಬಂದಂತೆ, 90ರ ದಶಕದ ಬಳಿಕ ನ್ಯಾಯಾಂಗದ ‘ಆ್ಯಕ್ಟಿವಿಸಂ’’ ಕೂಡ ವೇಗ ಪಡೆದುಕೊಂಡಿತು. ಹಾಳಾಗುತ್ತಿರುವ ಆಹಾರ ಸಾಮಗ್ರಿಗಳ ಸಮರ್ಪಕ ವಿತರಣೆ, ಪಕ್ಷಾಂತರ ಪಿಡುಗು, ಉನ್ನತ ಮಟ್ಟದಲ್ಲಿ ಭ್ರಷ್ಟಾಚಾರದಂತಹ ಸಂಗತಿಗಳಲ್ಲೂ ನ್ಯಾಯಾಂಗ ಹಸ್ತಕ್ಷೇಪ ಮಾಡಲೇ ಬೇಕಾದ ಅನಿವಾರ್ಯ ಪರಿಸ್ಥಿತಿಗಳು ಎದುರಾಗತೊಡಗಿದವು.
ಇದಕ್ಕೆ ಸಣ್ಣ ತೋರುಗನ್ನಡಿ ಎಂದರೆ, ನ್ಯಾಯಾಂಗದ ವಿಮರ್ಶೆಯಿಂದ ಹೊರಗಿಡಲೆಂದು ರಚಿತವಾದ ಸಂವಿಧಾನದ 9ನೆ ಶೆಡ್ಯೂಲಿನಲ್ಲಿ ಆರಂಭದಲ್ಲಿದ್ದದ್ದು 13 ಕಾನೂನುಗಳು. ಇವತ್ತು ಅಲ್ಲಿ 300ರಷ್ಟು ಕಾನೂನುಗಳಿವೆ!
ಶಾಸಕಾಂಗದ ಗುಣಮಟ್ಟ
ನ್ಯಾಯಾಂಗ ಕಣ್ಣಿಗೆ ಪಟ್ಟಿ ಕಟ್ಟಿಕೊಂಡೇ ಕಾರ್ಯಾಚರಿಸಬೇಕಿರುವುದರಿಂದ, ಕಣ್ತೆರೆದು ನೋಡಿ ಮಾಡಬೇಕಾಗಿರುವ ಕೆಲಸಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸುವ ಮೂಲಕ ಸಾಂವಿಧಾನಿಕ ಆವಶ್ಯಕತೆಗಳು ಮತ್ತು ಒಕ್ಕೂಟ ವ್ಯವಸ್ಥೆಯ ಸಾಮರಸ್ಯದ ಸಂತುಲನವನ್ನು ಕಾಪಾಡುವುದಕ್ಕೆ ಸಾಧ್ಯವಾಗಲು ‘ಒಳ್ಳೆಯ ಗುಣಮಟ್ಟದ ಶಾಸಕಾಂಗ’ ಅನಿವಾರ್ಯ. ಇವತ್ತು ನಾವು ಕಾಣುತ್ತಿರುವ ಎಲ್ಲ ಅತಿರೇಕದ ಸ್ಥಿತಿಗಳ ಮೂಲ ಇರುವುದೇ ನಾವು ಆರಿಸಿ ಕಳುಹಿಸುತ್ತಿರುವ ಜನಪ್ರತಿನಿಧಿಗಳ ಗುಣಮಟ್ಟದಲ್ಲಿ.
ಧರ್ಮ, ಜಾತಿ, ಪ್ರಾದೇಶಿಕತೆ, ದುಡ್ಡು, ತೋಳ್ಬಲಗಳ ಅಟ್ಟಹಾಸದಲ್ಲಿ ಶಾಸಕಾಂಗದ ಗುಣಮಟ್ಟ ಕಣ್ಮರೆಯಾಗಿದೆ. ಬಡವರ-ರೈತರ ಕೂಗು, ದಲಿತರ-ವಂಚಿತರ ಆಕ್ರೋಶಗಳನ್ನು ಕೇಳುವ ಕಿವಿಗಳು ಇಲ್ಲವಾಗಿವೆ. ದುಡ್ಡಿನ ಚೀಲಗಳಲ್ಲಿ, ರೆಸಾರ್ಟುಗಳಲ್ಲಿ, ಜೀವ ಹಿಂಸೆಗಳಲ್ಲಿ, ಧರ್ಮದ ಅಮಲಿನಲ್ಲಿ ಹುಟ್ಟುತ್ತಿರುವ ಕುಟಿಲ ರಾಜಕಾರಣದ ಹೊಸಹೊಸ ವರಸೆಗಳು ಹುಟ್ಟುಹಾಕುತ್ತಿರುವ ಅಸಮತೋಲನದ ಫಲಿತಾಂಶವೇ ಇವತ್ತು ನಮ್ಮ ಗಂಟಲಿಗೆ ತುರುಕಲಾಗುತ್ತಿರುವ ‘ಕಣ್ಣಿಲ್ಲದ ನ್ಯಾಯ’.