ಪುರುಷ ಪ್ರಧಾನ ಆನ್‌ಲೈನ್ ಇಂಟರ್‌ನೆಟ್‌ನಲ್ಲೂ ಲಿಂಗ ತಾರತಮ್ಯ
ಭಾರತದಲ್ಲಿ ಆನ್‌ಲೈನ್ ಜನಸಂಖ್ಯೆ ಹೆಚ್ಚುತ್ತಿದೆ. ಸರಕಾರ 125 ಕೋಟಿ ಮಂದಿಗೆ ಇಂಟರ್‌ನೆಟ್ ಸಂಪರ್ಕ ಲಭ್ಯತೆ ಕಲ್ಪಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಕೇಂದ್ರ ಸರಕಾರ ಹಾಕಿಕೊಂಡಿದೆ. ಆದರೆ ಬಹುತೇಕ ಅಧ್ಯಯನಗಳ ಪ್ರಕಾರ, ಭಾರತದಲ್ಲಿ ಮಹಿಳೆಯರಿಗಿಂತ ಅಧಿಕ ಮಂದಿ ಪುರುಷರು ಇಂಟರ್‌ನೆಟ್ ಬಳಕೆ ಮಾಡುತ್ತಿದ್ದಾರೆ.
ಉದಾಹರಣೆಗೆ ಜಾಗತಿಕ ಮಟ್ಟದಲ್ಲಿ ಇಂಟರ್‌ನೆಟ್ ಬಳಕೆಯಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಪ್ರಾಬಲ್ಯ ಇದ್ದರೆ, ಭಾರತದಲ್ಲಿ ಮಾತ್ರ ಪ್ರವೃತ್ತಿ ಭಿನ್ನ.
ಭಾರತವನ್ನು ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಿ ಕಂಡುಕೊಂಡಿರುವ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ, ಮೂವರು ಪುರುಷರಿಗೆ ಒಬ್ಬ ಮಹಿಳೆಯರು ಮಾತ್ರ ಇದ್ದಾರೆ ಎಂದು ಇಂಗ್ಲೆಂಡಿನ ಸಲಹಾಸಂಸ್ಥೆಯಾದ ವಿ ಆರ್ ಸೋಷಿಯಲ್ ಎಂಬ ಸಂಘಟನೆ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಭಾರತದ ಒಟ್ಟು ಫೇಸ್‌ಬುಕ್ ಬಳಕೆದಾರರಲ್ಲಿ ಶೇ.76ರಷ್ಟು ಪುರುಷರಿದ್ದರೆ, ಫೇಸ್‌ಬುಕ್ ಬಳಸುವ ಮಹಿಳೆಯರ ಸಂಖ್ಯೆ ಶೇ.24 ಮಾತ್ರ. ಅಂದರೆ ಸಾಮಾಜಿಕ ಜಾಲ ತಾಣ ಬಳಕೆಯಲ್ಲಿ ಲಿಂಗ ತಾರತಮ್ಯ ನೆರೆಯ ದೇಶಗಳಾದ ಭೂತಾನ್ ಹಾಗೂ ನೇಪಾಳಕ್ಕಿಂತಲೂ ಅಧಿಕ. ಎಲ್ಲಾ ಸೇವೆಗಳ ವಿಚಾರದಲ್ಲೂ ಈ ಲಿಂಗ ಅಸಮಾನತೆ ಮುಂದುವರಿದಿದೆ. ಭಾರತದಲ್ಲಿ ಮಹಿಳೆಯರಿಗಿಂತ ಪುರುಷರು ಇಂಟರ್‌ನೆಟ್ ಬಳಕೆ ಮಾಡುವುದು ಶೇ.62ರಷ್ಟು ಅಧಿಕ ಎಂದು ಜಾಗತಿಕ ಮೊಬೈಲ್ ಅಸೋಸಿಯೇಷನ್(ಜಿಎಸ್‌ಎಂಎ) ವರದಿ ಹೇಳಿದೆ. ಅಂತೆಯೇ ಪುರುಷರು ಮಹಿಳೆಯರಿಗಿಂತ ಹೆಚ್ಚಾಗಿ ಮೊಬೈಲ್ ಸಿಮ್ ಹೊಂದುವ ಸಾಧ್ಯತೆ ಶೇ.25ರಷ್ಟು ಅಧಿಕ. ಅಂದರೆ ಮೊಬೈಲ್ ಬಳಕೆಯಲ್ಲಿ ಜಿಎಸ್‌ಎಂಎ ಅಧ್ಯಯನ ನಡೆಸಿದ ಯಾವುದೇ ದೇಶಗಳಲ್ಲಿ ಇಲ್ಲದಷ್ಟು ಅಧಿಕ ಪ್ರಮಾಣದ ಲಿಂಗ ಅಸಮಾನತೆ ಭಾರತದಲ್ಲಿದೆ. ಹಲವು ಅಧ್ಯಯನಗಳು ಇದನ್ನು ಕಳೆದ ವರ್ಷವೇ ಬಹಿರಂಗಪಡಿಸಿದ್ದವು. ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ನೀಡಿದ ವರದಿ ಹಾಗೂ ರಿಟೇಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ವರದಿಯ ಪ್ರಕಾರ, ಭಾರತದ ನೆಟ್ ಬಳಕೆದಾರರಲ್ಲಿ ಶೇ.29ರಷ್ಟು ಮಹಿಳೆಯರಿದ್ದರೆ, ಶೇ.71ರಷ್ಟು ಪುರುಷರು. ಮುಂದಿನ ವರ್ಷಗಳಲ್ಲಿ ಈ ಅಂತರ ಕಡಿಮೆಯಾಗುತ್ತಾ ಬರುವ ಸಾಧ್ಯತೆ ಇದ್ದು, 2020ರ ವೇಳೆಗೆ ಇಂಟರ್‌ನೆಟ್ ಬಳಕೆಯಲ್ಲಿ ಮಹಿಳೆಯರ ಪಾಲು ಶೇ.40ಕ್ಕೆ ಹೆಚ್ಚಲಿದೆ. ಅಂದರೆ ಭಾರತದ ಡಿಜಿಟಲ್ ಅಸಮಾನತೆ ಎದ್ದು ಕಾಣುವಂಥದ್ದು. ವಿಶ್ವಸಂಸ್ಥೆಯು ಕಳೆದ ಜೂನ್‌ನಲ್ಲಿ ಇಂಟರ್‌ನೆಟ್ ಬಳಕೆಯನ್ನು ಮೂಲಭೂತ ಮಾನವ ಹಕ್ಕು ಎಂದು ಪರಿಗಣಿಸಿದ ಹಿನ್ನೆಲೆಯಲ್ಲಿ ಇದು ವಿಶೇಷ ಮಹತ್ವ ಹೊಂದಿದೆ. ತಂತ್ರಜ್ಞಾನ ದಿಗ್ಗಜ ಸಂಸ್ಥೆಯಾದ ಗೂಗಲ್ ನಡೆಸಿದ ಇಂತದ್ದೇ ಅಧ್ಯಯನದಲ್ಲಿ ಹಾಗೂ ಈ ವರ್ಷದ ಆರಂಭದಲ್ಲಿ ಕನ್ಸಲ್ಟೆನ್ಸಿ ಎ.ಟಿ.ಕಿಯಾರ್ನಿ ನಡೆಸಿದ ಅಧ್ಯಯನದಲ್ಲಿ ಕಂಡುಬಂದ ಅಂಶವೆಂದರೆ, ಭಾರತದಲ್ಲಿ ಐದು ಮಂದಿ ಇ-ಕಾಮರ್ಸ್ ಗ್ರಾಹಕರ ಪೈಕಿ ಒಬ್ಬರು ಮಾತ್ರ ಮಹಿಳೆಯರು. ಮುಂದಿನ ನಾಲ್ಕು ವರ್ಷಗಳಲ್ಲಿ ಇದು ಶೇ.20 ರಿಂದ 40ಕ್ಕೆ ಹೆಚ್ಚಲಿದೆ ಎಂಬ ನಿರೀಕ್ಷೆಯನ್ನು ಗೂಗಲ್ ವ್ಯಕ್ತಪಡಿಸಿದೆ.
‘ನೆಟ್ ಬಳಕೆ ಮಾಡಿಕೊಳ್ಳಲು ಇರುವ ತಡೆಯನ್ನು ನಿವಾರಿಸಿದರೆ, 2020ರ ವೇಳೆಗೆ ಮಹಿಳಾ ಗ್ರಾಹಕರ ಸಂಖ್ಯೆ ಐದು ಪಟ್ಟು ಅಧಿಕವಾಗುವ ನಿರೀಕ್ಷೆ ಇದೆ ಎಂದು ವರದಿ ಹೇಳುತ್ತದೆ.
ಅಬ್ಸರ್ವರ್ ರೀಸರ್ಚ್ ಫೌಂಡೇಶನ್ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಟ್ವಿಟರ್‌ನಲ್ಲಿ ಮಹಿಳಾ ಪಾಲ್ಗೊಳ್ಳುವಿಕೆಯನ್ನು ಪರಿಗಣಿಸಿದರೆ, ರಾಜಕೀಯ ಚರ್ಚೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ತೀರಾ ಕಡಿಮೆ. ಎಂಟು ದಿನಗಳ ಅವಧಿಯಲ್ಲಿ 23,350 ಟ್ವೀಟ್‌ಗಳನ್ನು ವಿಶ್ಲೇಷಿಸಿ ಈ ನಿರ್ಧಾರಕ್ಕೆ ಬಂದಿದೆ. ಮೈಕ್ರೊ ಬ್ಲಾಗಿಂಗ್ ಸೈಟ್‌ನಲ್ಲಿ ಈ ಪ್ರಾತಿನಿಧ್ಯದ ಕೊರತೆಯನ್ನು ಗಮನಿಸಿದರೆ, ಇಡೀ ದೇಶದ ರಾಜಕೀಯ ಪ್ರಕ್ರಿಯೆಯಲ್ಲಿ ಮಹಿಳೆಯರನ್ನು ಮೂಲೆಗುಂಪು ಮಾಡಿರುವುದು ಸ್ಪಷ್ಟವಾಗುತ್ತದೆ ಎನ್ನುವುದು ವರದಿಯ ಸ್ಪಷ್ಟ ಅಭಿಪ್ರಾಯ.ಅಧ್ಯಯನದಲ್ಲಿ ವಿಶ್ಲೇಷಣೆಗೆ ಒಳಪಡಿಸಿದ ಒಟ್ಟು ಟ್ವಿಟರ್ ಮಾದರಿಗಳಲ್ಲಿ ಶೇ.46ರಷ್ಟು ಪುರುಷರಿಂದ ಬಂದಿದ್ದರೆ, ಮಹಿಳೆಯರಿಂದ ಬಂದ ಟ್ವೀಟ್ ಪ್ರಮಾಣ ಶೇ.8ಕ್ಕಿಂತ ಕಡಿಮೆ. ಉಳಿದ ಟ್ವೀಟ್‌ಗಳು ಸಂಸ್ಥೆಗಳು ಹಾಗೂ ಲಿಂಗ ಗುರುತಿಸುವಿಕೆ ಇಲ್ಲದವರದ್ದು. ಆದ್ದರಿಂದ ಅವುಗಳನ್ನು ಪುರುಷರ ಅಥವಾ ಮಹಿಳೆಯರ ಟ್ವೀಟ್ ಎಂದು ಪರಿಗಣಿಸಿಲ್ಲ.
‘ರಾಜಕೀಯ ಟ್ರೆಂಡಿಂಗ್ ವಿಷಯಗಳನ್ನು ಒಳಗೊಂಡ 23,250 ಟ್ವೀಟ್‌ಗಳ ಮಾದರಿಯಲ್ಲಿ ಮಹಿಳೆಯರು ಮಾಡಿದ ಟ್ವೀಟ್ ಪ್ರಮಾಣ ಶೇ.7.72. ಪುರುಷರ ಟ್ವೀಟ್ ಪ್ರಮಾಣ ಶೇ.46.15 ಆಗಿದ್ದರೆ, ಶೇ. 34.83ರಷ್ಟು ಟ್ವೀಟ್‌ಗಳು ಸಂಘಟನೆಗಳವು, ಸುದ್ದಿಸಂಸ್ಥೆಗಳು ಹಾಗೂ ಇತರ ಗುಂಪಿನವುಗಳು. ಶೇ.11.30ರಷ್ಟು ಬಳಕೆದಾರರು ತಮ್ಮ ಲಿಂಗವನ್ನು ಬಹಿರಂಗಪಡಿಸಿಲ’್ಲ ಎಂದು ವರದಿ ಹೇಳಿದೆ.
ಭಾರತದಲ್ಲಿ ಕೇವಲ ಶೇ.1.6ರಷ್ಟು ಮಂದಿ ಮಾತ್ರ ಟ್ವಿಟರ್ ಬಳಕೆ ಮಾಡುತ್ತಿದ್ದರೂ, ಜಾಗತಿಕ ಮಾರುಕಟ್ಟೆಯಲ್ಲಿ ಭಾರತ ಆರನೇ ಅತಿದೊಡ್ಡ ವೇದಿಕೆಯಾಗಿದೆ. ಇದು ಭಾರತದ ಸಾಮಾಜಿಕ ಮಾಧ್ಯಮಗಳ ಪ್ರವೃತ್ತಿಯ ಪ್ರತಿಫಲನವಾಗಿದೆ. ಮಹಿಳೆಯರು ಹೇಗೆ ಆನ್‌ಲೈನ್ ಅವಹೇಳನ ಮತ್ತು ನಿಂದನೆಯನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನೂ ಅಧ್ಯಯನ ಬಣ್ಣಿಸಿದೆ.
‘ಮಹಿಳೆಯರು ಹೇಗೆ ಆನ್‌ಲೈನ್ ಅವಕಾಶವನ್ನು ಬಳಸಿಕೊಳ್ಳುತ್ತದೆ ಎನ್ನುವುದರ ಮೇಲೆ ಈ ವರದಿ ಬೆಳಕು ಚೆಲ್ಲಿದೆ. ಅದರಲ್ಲೂ ಮುಖ್ಯವಾಗಿ ರಾಜಕೀಯ ವಿಚಾರಗಳಲ್ಲಿ ಪುರುಷರ ಸ್ಥಳಾವಕಾಶವನ್ನು ಮಹಿಳೆಯರು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂಬ ಅರ್ಥದಲ್ಲಿ ಪರಿಗಣಿಸಲಾಗುತ್ತದೆ ಎಂಬ ಅಭಿಪ್ರಾಯವನ್ನು ಅಧ್ಯಯನ ವರದಿ ವ್ಯಕ್ತಪಡಿಸಿದೆ. ಲಿಂಗ ಆಧರಿತ ನಿಂದನೆ ಹಾಗೂ ಕಿರುಕುಳಕ್ಕೆ ಸ್ಪಂದನೆಯಾಗಿ, ಕೆಲ ಪ್ರಮುಖ ಮಹಿಳಾ ಬ್ಲಾಗರ್‌ಗಳು ಹಾಗೂ ಹೋರಾಟಗಾರ್ತಿಯರು ತಮ್ಮ ಖಾತೆಗಳನ್ನು ರದ್ದುಪಡಿಸಿದ್ದಾರೆ ಎಂದೂ ವರದಿ ಹೇಳಿದೆ.
ಸಮಾನತೆಯ ಅಂಶವೆಂದರೆ ದೇಶವನ್ನು ತೀರಾ ಲಘುವಾಗಿ ಕಾಣುವಂತಿಲ್ಲ ಎನ್ನುವುದನ್ನು ಕೂಡಾ ಕೆಲ ಅಧ್ಯಯನಗಳು ಬಿಂಬಿಸಿವೆ. ಇಂಟರ್‌ನೆಟ್, ಜನರಿಗೆ ಮಾಹಿತಿ ಸಂಪತ್ತನ್ನು ನೀಡುವ ಜತೆಗೆ, ಜನರನ್ನು ಸಂಪರ್ಕಿಸುತ್ತದೆ ಹಾಗೂ ವ್ಯವಹಾರಕ್ಕೆ ಉತ್ತೇಜಿಸುತ್ತದೆ. ಆದ್ದರಿಂದ ಇದು ಸಮಾನತೆಯನ್ನು ತರುವ ಮಹತ್ವದ ಅಂಶವಾಗಲಿದೆ. ಅದಾಗ್ಯೂ ಲಿಂಗ ಅಸಮಾನತೆಯು, ಅದರಲ್ಲೂ ಮುಖ್ಯವಾಗಿ ಅಭಿವೃದ್ಧಿಶೀಲ ದೇಶಗಳಲ್ಲಿ ಮಹಿಳೆಯರು ಮತ್ತಷ್ಟು ಹಿಂದುಳಿಯುವ ಅಪಾಯವಿದೆ ಎಂದು ಈ ವರದಿ ಅಭಿಪ್ರಾಯಪಟ್ಟಿದ್ದರಿಂದ ಜಾಗತಿಕ ಸಂಘಟನೆಯಾದ ಆರ್ಗನೈಝೇಶನ್ ಫಾರ್ ಎಕನಾಮಿಕ್ ಕೋ ಅಪರೇಷನ್ ಆ್ಯಂಡ್ ಡೆವಲಪ್‌ಮೆಂಟ್ ಪ್ರತಿ ವರ್ಷ ಎಲ್ಲ ಸದಸ್ಯ ದೇಶಗಳ ಹಾಗೂ ಸದಸ್ಯೇತರ ದೇಶಗಳಲ್ಲಿ ಮಹಿಳೆಯರಿಗೆ ಲಭ್ಯವಿರುವ ಇಂಟರ್‌ನೆಟ್ ಸೌಲಭ್ಯವನ್ನು ಅಧ್ಯಯನ ಮಾಡುತ್ತದೆ. ಇದೇ ಪ್ರವೃತ್ತಿ ಜಪಾನ್, ಬ್ರಿಟನ್‌ನಂಥ ದೇಶಗಳಲ್ಲೂ ಇರುವುದನ್ನು ಈ ವರದಿ ಬಿಂಬಿಸಿದೆ.
‘ಇತ್ತೀಚಿನ ಅಂಕಿ ಅಂಶಗಳು ಹೇಳುವಂತೆ, ಸ್ವೀಡನ್‌ನಲ್ಲಿ ಇಂಟರ್‌ನೆಟ್ ಬಳಕೆಯಲ್ಲಿ ಪುರುಷರು ಮಹಿಳೆಯರ ಸಂಖ್ಯೆಯನ್ನು ಮೀರಿಸುವ ಸಾಧ್ಯತೆ ಇದೆ. ಜಪಾನ್‌ನಲ್ಲಿ, ಮನೆಗಳಲ್ಲಿ ಇಂಟರ್‌ನೆಟ್ ಸಂಪರ್ಕ ಹೊಂದಿರುವ ಪುರುಷರ ಸಂಖ್ಯೆ, ಮಹಿಳೆಯರ ಪ್ರಮಾಣದ ಎರಡರಷ್ಟಿದೆ. ಅದಾಗ್ಯೂ ಮಹಿಳೆಯರ ಸ್ಥಿತಿ ಸುಧಾರಿಸುತ್ತಿದೆ. 2000ನೇ ಇಸವಿ ವೇಳೆಗೆ ಬ್ರಿಟನ್‌ನಲ್ಲಿ, ಶೇ.52ರಷ್ಟು ಪುರುಷರು ಇಂಟರ್‌ನೆಟ್ ಬಳಸುತ್ತಿದ್ದರೆ, ಮಹಿಳೆಯರಲ್ಲಿ ಶೇ.39ರಷ್ಟು ಮಂದಿ ಮಾತ್ರ ಇಂಟರ್‌ನೆಟ್ ಬಳಸುತ್ತಿದ್ದರು. ಭಾರತದಲ್ಲಿ ಇಂಟರ್‌ನೆಟ್ ಬಳಕೆದಾರರ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಭಾರತದಲ್ಲಿ ಸಕ್ರಿಯ ವೆಬ್ ಬಳಕೆದಾರರ ಪ್ರಮಾಣ 462 ದಶಲಕ್ಷಕ್ಕೆ ಹೆಚ್ಚಿದೆ. ಆದರೆ ಮಹಿಳೆಯರು ಇನ್ನೂ ಆಫ್‌ಲೈನ್‌ನಲ್ಲೇ ಮುಂದುವರಿದಿದ್ದಾರೆ. ದೇಶದಲ್ಲಿ ಪ್ರತಿಯೊಬ್ಬರೂ ಇಂಟರ್‌ನೆಟ್ ಲಭ್ಯತೆ ಹೊಂದಬೇಕು ಎಂಬ ಮೋದಿ ಸರಕಾರದ ಕನಸು ನನಸಾಗುವ ಸಾಧ್ಯತೆ ಕ್ಷೀಣ.
ಕೃಪೆ: scroll.in
ಭಾರತದ ನೆಟ್ ಬಳಕೆದಾರರಲ್ಲಿ ಶೇ.29ರಷ್ಟು ಮಹಿಳೆಯರಿದ್ದರೆ, ಶೇ.71ರಷ್ಟು ಪುರುಷರು. ಮುಂದಿನ ವರ್ಷಗಳಲ್ಲಿ ಈ ಅಂತರ ಕಡಿಮೆಯಾಗುತ್ತಾ ಬರುವ ಸಾಧ್ಯತೆ ಇದ್ದು, 2020ರ ವೇಳೆಗೆ ಇಂಟರ್‌ನೆಟ್ ಬಳಕೆಯಲ್ಲಿ ಮಹಿಳೆಯರ ಪಾಲು ಶೇ.40ಕ್ಕೆ ಹೆಚ್ಚಲಿದೆ. ಅಂದರೆ ಭಾರತದ ಡಿಜಿಟಲ್ ಅಸಮಾನತೆ ಎದ್ದು ಕಾಣುವಂಥದ್ದು. ವಿಶ್ವಸಂಸ್ಥೆಯು ಕಳೆದ ಜೂನ್‌ನಲ್ಲಿ ಇಂಟರ್‌ನೆಟ್ ಬಳಕೆಯನ್ನು ಮೂಲಭೂತ ಮಾನವ ಹಕ್ಕು ಎಂದು ಪರಿಗಣಿಸಿದ ಹಿನ್ನೆಲೆಯಲ್ಲಿ ಇದು ವಿಶೇಷ ಮಹತ್ವ ಹೊಂದಿದೆ.