ನೆನಪಿರಲಿ
ಸ್ಮರಣೆ ಎಂಬುದಕ್ಕೂ ಕೂಡ ಅಗತ್ಯವಾದಂತಹ ಗಮನ ಬೇಕು, ವ್ಯಾಯಾಮ ಬೇಕು, ಬಲ ಸಂವರ್ಧನೆಯ ಕಸರತ್ತುಗಳು ಬೇಕು. ಹಾಗಾದಾಗ ಅದು ದೃಢವಾಗುತ್ತಾ ಹೋಗುತ್ತದೆ. ಯಾರು ತಮ್ಮ ಸ್ಮರಣೆಗಳಿಗೆ ವ್ಯಾಯಾಮ ನೀಡುವುದಿಲ್ಲವೋ, ರೂಢಿಗೊಳಿಸಿಕೊಳ್ಳುವುದಿಲ್ಲವೋ ಅವರ ನೆನಪುಗಳು ಕ್ಷೀಣಿಸುತ್ತದೆ. ಸಮಯಕ್ಕೆ ಒದಗುವುದಿಲ್ಲ.
ಕಲಿಕೆಯಲ್ಲಿ ಸ್ಮರಣೆಗೆ ಬಹಳ ಮಹತ್ವವಿದೆ. ನಿಜ. ಆದರೆ ಅದೇನೂ ಒಂದು ವಿಶೇಷ ಶಕ್ತಿಯೇನಲ್ಲ. ಅನುಗ್ರಹಿತ ಜನರು ಅಥವಾ ಮಕ್ಕಳು ಪಡೆದುಕೊಂಡು ಬಂದಿರುವಂತಹ ವಿಶೇಷವಾದಂತಹ ವರದಾನವೇನಲ್ಲ. ಕಲಿಕೆಯಲ್ಲಿ ಅದೂ ಒಂದು ಅಗತ್ಯವಾದ ವಿಷಯವೇ. ಆದರೆ ಅದೇ ಸರ್ವಸ್ವವೇನಲ್ಲ. ಹಾಗೆಯೇ ಅದನ್ನು ಗಳಿಸುವುದು ಕೂಡ ಬಹುದೊಡ್ಡ ಸಂಗತಿಯೇನಲ್ಲ. ಸಿಸಿರೋ ಹೇಳುವಂತೆ ಸ್ಮರಣಿಕೆ ಎಂಬುದು ಎಲ್ಲದರ ಖಜಾನೆ ಮತ್ತು ರಕ್ಷಣೆ.
ನೆನಪಿನ ಸಾಮರ್ಥ್ಯಕ್ಕೆ ತೊಡಕುಗಳು
ಓದುವ ಮಕ್ಕಳ ವಿಷಯದಲ್ಲಿ ನೆನಪಿನ ಸಾಮರ್ಥ್ಯದ ನಿರ್ವಹಣೆಗೆ ಹಲವಾರು ಸಂಗತಿಗಳು ತೊಡಕಾಗುತ್ತದೆ. ಅದರಲ್ಲಿ ಮುಖ್ಯವಾದದ್ದು ಪೋಷಕರು ಮತ್ತು ಶಿಕ್ಷಕರು ಪ್ರೋತ್ಸಾಹಕರವಾಗಿ ವರ್ತಿಸದೇ ಇರುವುದು. ಸಾಮಾನ್ಯವಾಗಿ ಚೆನ್ನಾಗಿ ನೆನಪಿನಲ್ಲಿ ಇಟ್ಟುಕೊಳ್ಳಬೇಕು, ಚೆನ್ನಾಗಿ ಕಲಿಯಬೇಕು, ಕಲಿತಿರುವುದನ್ನು ಮರೆಯಬಾರದು ಎಂದು ಹೇಳುವರೇ ಹೊರತು, ಹೇಗೆ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳುವುದಿಲ್ಲ. ಏಕೆ ಇದನ್ನು ಸಾಧಿಸಬೇಕು ಎನ್ನುವುದಕ್ಕಿಂದ ಹೇಗೆ ಇದನ್ನು ಸಾಧಿಸಬೇಕು ಎಂದು ಕೆಲಸ ಮಾಡುವವರೇ ಮಕ್ಕಳಿಗೆ ಬೇಕಾಗಿರುವುದು.
ಅಲ್ಲದೇ ದುರ್ಬಲ ಕಲಿಕೆಯ ಕ್ರಮಗಳು, ನಕಾರಾತ್ಮಕ ಧೋರಣೆಗಳು, ಪೂರ್ವನಿರ್ಧರಿತ ವ್ಯಕ್ತಿತ್ವದ ಮಾದರಿಗಳು, ಭಯ, ನಿಷ್ಪ್ರಯೋಜಕ ಭಾವ, ಇದನ್ನು ಕಲಿತು ಏನು ಉಪಯೋಗ ಎಂಬ ಧೋರಣೆ ಇತ್ಯಾದಿಗಳು ಕೂಡ ನೆನಪಿನ ಸಾಮರ್ಥ್ಯವನ್ನು ವೃದ್ಧಿಸುವಲ್ಲಿ ತೊಡಕಾಗುತ್ತವೆ. ಓದು, ಬರಿ, ತಿದ್ದು, ಬಾಯಿಪಾಠ ಮಾಡು; ಇತ್ಯಾದಿ ಹಳೆಯ ಮತ್ತು ಯಾಂತ್ರಿಕ ಕಲಿಕೆಯ ಪದ್ಧತಿಗಳು ಮಕ್ಕಳ ನೆನಪಿನ ಸಾಮರ್ಥ್ಯವನ್ನು ವೃದ್ಧಿಗೊಳಿಸಲು ಸಹಕಾರಿಯಾಗಿರುವುದಿಲ್ಲ.
ಅಲ್ಲದೇ ಮಕ್ಕಳ ಮುಂದೆಯೇ ಮಗುವನ್ನು ಟೀಕೆ ಮಾಡುವ ಶಿಕ್ಷಕ ಮತ್ತು ಪೋಷಕರು ಹೆಚ್ಚಿನ ಅಪಾಯಕಾರಿ. ಇವನಿಗೆ ಎಷ್ಟು ಓದಿದರೂ ನೆನಪೇ ಇರುವುದಿಲ್ಲ. ಓದಿದ್ದು ತಲೆಯಲ್ಲಿ ಉಳಿಯುವುದಿಲ್ಲ ಎಂದೆಲ್ಲಾ ಮಾತಾಡುವ ಪೋಷಕರೇನೂ ಕಡಿಮೆ ಇಲ್ಲ. ಇನ್ನು ಪೂರ್ವನಿರ್ಧಾರಿತ ವ್ಯಕ್ತಿತ್ವದ ಮಾದರಿಗಳೆಂದರೆ, ಕೆಲವು ಪೋಷಕರು ತಮ್ಮ ಮಕ್ಕಳಿಗೆ ಇವನು ಅವರ್ಯಾರೋ ತರಹ, ಈ ತರಹ. ತಾತನ ತರಹ, ಅತ್ತೆಯ ತರಹ. ಕೆಲಸ ಮಾಡಕ್ಕಷ್ಟೇ ಲಾಯಕ್ಕು. ಇನ್ನು ವಿದ್ಯೆ ಬುದ್ಧಿ ಏನೂ ಹತ್ತುವುದಿಲ್ಲ ಎಂದೆಲ್ಲಾ ಹೇಳುವುದರಿಂದ ಮಕ್ಕಳೂ ಅನೈಚ್ಛಿಕವಾಗಿ ತಮ್ಮ ವ್ಯಕ್ತಿತ್ವ ಮತ್ತು ಸ್ವಭಾವವನ್ನು ಪಕ್ಕಾ ಮಾಡಿಕೊಳ್ಳತೊಡಗಿ ಬಿಡುತ್ತಾರೆ. ಇನ್ನೂ ಕೆಲವು ಸಲ ಪೋಷಕರು, ಇವನು ಆಟ ಆಡು ಅಂದ್ರೆ ಎಷ್ಟು ಹೊತ್ತಾದರೂ ಆಡುತ್ತಾನೆ, ಬೀದಿಯೆಲ್ಲಾ ಸುತ್ತು ಎಂದರೆ ಎಷ್ಟು ಬೇಕಾದರೂ ಸುತ್ತುತ್ತಾನೆ. ಓದಕ್ಕೆ ಕೂತ್ಕೊಂಡ್ರೆ ನಿದ್ರೆ ಹೋಗ್ತಾನೆ ಎಂದೆಲ್ಲಾ ಹೇಳುವುದನ್ನೂ ಕೇಳಿಸಿಕೊಳ್ಳುವ ಮಕ್ಕಳು ಅದರಂತೆಯೇ ತಮ್ಮ ವ್ಯಕ್ತಿತ್ವ ಮತ್ತು ಸ್ವಭಾವವನ್ನು ರೂಢಿಸಿಕೊಳ್ಳುತ್ತಾ ರೂಪಿಸಿಕೊಳ್ಳುತ್ತಾರೆ. ಮಕ್ಕಳಿಗೆ ತಾವು ಕಲಿಯುವುದರ ಪ್ರಯೋಜನದ ಬಗ್ಗೆ ಮನವರಿಕೆ ಮಾಡಿಕೊಡದಿದ್ದರೆ ಹೇಗೆ ಕಲಿಯಲು ಇಚ್ಛಿಸುವುದಿಲ್ಲವೋ ಅಂತೆಯೇ ನೆನಪಿನಲ್ಲಿಟ್ಟುಕೊಳ್ಳಲೂ ಮಾನಸಿಕವಾಗಿ ಸಿದ್ಧವಾಗುವುದಿಲ್ಲ. ಆದ್ದರಿಂದ ಮಕ್ಕಳಿಗೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಗತ್ಯತೆಯನ್ನು ಮನವರಿಕೆ ಮಾಡಿಕೊಡಬೇಕು. ನೆನಪಿನ ಸಾಮರ್ಥ್ಯದ ಬಗೆಗಳು, ಅವುಗಳನ್ನು ಹೆಚ್ಚಿಸಲು ಬೇಕಾದ ತರಬೇತಿಗಳ ಬಗ್ಗೆ ಮುಂದೆ ತಿಳಿಯೋಣ.
ಸ್ಮರಣೆಯೇ ಜ್ಞಾನ
‘ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ’ ಎಂದು ಸಂಸ್ಕೃತದಲ್ಲಿ ನುಡಿಯಿದೆ. ಅಂದರೆ ಜ್ಞಾನದ ಸಮಾನಕ್ಕೆ ಪವಿತ್ರವಾಗಿರುವುದು ಯಾವುದೂ ಇಲ್ಲ ಎಂದು. ಆದರೆ ಪ್ಲೇಟೋ ಅದನ್ನು ‘‘ಎಲ್ಲಾ ಜ್ಞಾನವೂ ಕೂಡ ಸ್ಮರಣೆಯಲ್ಲದೇ ಬೇರೇನೂ ಇಲ್ಲ’’ ಎಂದು ಗುಡಿಸಿಬಿಡುತ್ತಾನೆ. ಪ್ಲೇಟೋ ಈ ಮಾತನ್ನು ಯಾವ ಸಂದರ್ಭದಲ್ಲಿ ಹೇಳಿದ್ದಾನೋ ತಿಳಿಯದು. ತೀರಾ ಆಳಕ್ಕೆ ಹೋದರೆ ನಿಜವೆನಿಸುವುದು. ಆದರೆ ಮೇಲ್ನೋಟಕ್ಕೆ ವ್ಯಂಗ್ಯದಂತೆ ತೋರುವ ಇದು, ಸಾಮಾನ್ಯವಾಗಿ ಶಿಕ್ಷಕರ ಮತ್ತು ಪೋಷಕರ ಧೋರಣೆಯಲ್ಲಿ ನಿಜವೇ ಆಗಿದೆ. ಯಾರು ಚೆನ್ನಾಗಿ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೋ ಅವರು ಜಾಣರು ಎಂದೂ, ಶಾಲೆಯ ಮಟ್ಟಕ್ಕೆ ಜ್ಞಾನಿಗಳು ಎಂದೂ ಪರಿಗಣಿಸುತ್ತಾರೆ. ಇಡೀ ಶಿಕ್ಷಣ ವ್ಯವಸ್ಥೆ ಮತ್ತು ಪೋಷಕರು ಕಲಿಕೆಗೆ ಕಳುಹಿಸುವ ಉದ್ದೇಶವೆಲ್ಲವೂ ಸಾಮಾನ್ಯವಾಗಿ ಅಷ್ಟೇ ಆಗಿರುತ್ತದೆ. ಮಗು ಚೆನ್ನಾಗಿ ಕಲಿಯುತ್ತದೆ ಎಂದರೆ, ಆ ಮಗು ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು ಅಷ್ಟೇ. ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದಕ್ಕಷ್ಟೇ ಕಲಿಕೆಯೋ? ಅಲ್ಲ. ಸ್ಮರಣ ಶಕ್ತಿ, ನೆನಪಿನ ಶಕ್ತಿ ಅಥವಾ ಜ್ಞಾಪಕ ಶಕ್ತಿ ಎಂದು ಕಲಿಕೆಯಲ್ಲಿ ಪದೇ ಪದೇ ಉಪಯೋಗಿಸುತ್ತಿರುತ್ತೇವೆ. ಅಲ್ಲದೇ ಅದಕ್ಕೆ ಬಹಳ ಮಹತ್ವವನ್ನೂ ಕೂಡ ಕೊಡುತ್ತೇವೆ. ಕಲಿಕೆಯಲ್ಲಿ ಸ್ಮರಣೆಗೆ ಬಹಳ ಮಹತ್ವವಿದೆ. ನಿಜ. ಆದರೆ ಅದೇನೂ ಒಂದು ವಿಶೇಷ ಶಕ್ತಿಯೇನಲ್ಲ. ಅನುಗ್ರಹಿತ ಜನರು ಅಥವಾ ಮಕ್ಕಳು ಪಡೆದುಕೊಂಡು ಬಂದಿರುವಂತಹ ವಿಶೇಷವಾದಂತಹ ವರದಾನವೇನಲ್ಲ. ಕಲಿಕೆಯಲ್ಲಿ ಅದೂ ಒಂದು ಅಗತ್ಯವಾದ ವಿಷಯವೇ. ಆದರೆ ಅದೇ ಸರ್ವಸ್ವವೇನಲ್ಲ. ಹಾಗೆಯೇ ಅದನ್ನು ಗಳಿಸುವುದು ಕೂಡ ಬಹುದೊಡ್ಡ ಸಂಗತಿಯೇನಲ್ಲ. ಸಿಸಿರೋ ಹೇಳುವಂತೆ ‘‘ಸ್ಮರಣಿಕೆ ಎಂಬುದು ಎಲ್ಲದರ ಖಜಾನೆ ಮತ್ತು ರಕ್ಷಣೆ’’.
ಸ್ಮತಿಗೆ ಅಗತ್ಯಕ್ಕಿಂತ ಅತಿ ಹೆಚ್ಚಿನ ಗಂಭೀರ ನಿಗಾ ವಹಿಸುವ ಗಾಬರಿಯ ಜನ ಒಂದು ಅತಿರೇಕದಾದರೆ, ಯಾವುದನ್ನೂ ಸ್ಮರಣೆಯಲ್ಲಿಟ್ಟು ಕೊಳ್ಳುವುದಕ್ಕಷ್ಟೇನೂ ಗಮನವನ್ನೇ ನೀಡುವ ಅತಿರೇಕದವರು ಇನ್ನೊಂದು ಕಡೆ. ಈ ಎರಡೂ ಅತಿರೇಕಗಳು ಬಾಲ್ಯದಲ್ಲಿ, ಅದರಲ್ಲೂ ಕಲಿಕೆಯ ಸಮಯದಲ್ಲಿ ಜ್ಞಾಪಕ ಶಕ್ತಿಯ ಬಗ್ಗೆ ಹಿರಿಯರು ತೋರುವ ಅತ್ಯಾಸಕ್ತಿ ಅಥವಾ ಅಸಡ್ಡೆಗಳ ಮೇಲೆ ಅವಲಂಬಿತವಾಗಿರುತ್ತದೆ.
ನೆನಪೆಂದರೆ ಏನು?
ನೆನಪಿಸಿಕೊಳ್ಳುವಂತಹ ಸಾಮರ್ಥ್ಯ ಕೆಲವರಲ್ಲಿ ಸಹಜವಾಗಿದ್ದರೆ ಮತ್ತೆ ಕೆಲವರಲ್ಲಿ ಸಾಧನೆ. ಏಕೆ ಹೀಗೆ? ಅದನ್ನು ನೋಡುವ ಮುನ್ನ ನಾವು ಈ ಜ್ಞಾಪಕ ಶಕ್ತಿಯ ಬಗ್ಗೆ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಿಕೊಳ್ಳೋಣ.
1. ನೆನಪು ಎನ್ನುವುದು ಅಗತ್ಯವಾದದ್ದು. ಅದರಲ್ಲಿ ಐಚ್ಛಿಕ ಮತ್ತು ಅನೈಚ್ಛಿಕ ನೆನಪುಗಳು ಇರುತ್ತವೆ.
2. ನೆನಪಿನ ವಿದ್ಯಮಾನಗಳು ವ್ಯಕ್ತಿಯ ಸ್ವೀಕಾರ ಮತ್ತು ನಿರಾಕರಣೆಗಳ ಆಧಾರದ ಮೇಲೆ ಪ್ರಬಲವಾಗಿರುತ್ತವೆ.
3.ನೆನಪಿನ ಶಕ್ತಿ ಎಂಬ ಪದ ಪ್ರಯೋಗವೇ ತಪ್ಪು. ನೆನಪು ಎನ್ನುವುದು ಶಕ್ತಿಯಲ್ಲ. ಅದು ಬರಿಯ ರೂಢಿ. ಅದು ಪ್ರಜ್ಞಾಪೂರ್ವಕವಾಗಿದ್ದಿರಬಹುದು, ಅಪ್ರಜ್ಞಾಪೂರ್ವಕವಾಗಿದ್ದಿರಬಹುದು.
4. ಜ್ಞಾಪಕ ಇಟ್ಟುಕೊಳ್ಳುವುದು ಅಗತ್ಯವೇ ಆದರೂ ಅದರ ಬಗ್ಗೆ ತೀರಾ ಗಾಬರಿ ಹೊಂದಿರುವಂತಹ, ಗಂಭೀರವಾದಂತಹ ಭಯ ಭಕ್ತಿ ಏನೂ ಬೇಡ. ಹಾಗೆಯೇ ಗಣನೆಗೇ ತೆಗೆದುಕೊಳ್ಳದಿರುವಂತಹ ಉಪೇಕ್ಷೆ ಬೇಡ. ಅಸಡ್ಡೆ ತೋರಿದಷ್ಟೂ ನೆನಪು ಮಾಸುತ್ತದೆ. ಹಾಗೆಯೇ ಹೆಚ್ಚಿನ ಗಾಬರಿಯ ಗಮನ ಕೊಟ್ಟರೂ ನೆನಪು ಮಾಯವಾಗುತ್ತದೆ.
5. ಜ್ಞಾಪಕದಲ್ಲಿಟ್ಟುಕೊಳ್ಳುವಂತಹ ರೂಢಿಯನ್ನು ಬೆಳೆಸಿಕೊಳ್ಳುವುದು ಬ್ರಹ್ಮವಿದ್ಯೆಯೇನಲ್ಲ. ಅಂತೆಯೇ ಯಾವುದೇ ವಯಸ್ಸಿನ ಮಕ್ಕಳೂ ಮತ್ತು ದೊಡ್ಡವರೂ ಕೂಡ ಇದಕ್ಕೆ ಹೊರತಾಗಿಲ್ಲ. ಸಣ್ಣ ವಯಸ್ಸಿನಲ್ಲಿ ಚೆನ್ನಾಗಿ ನೆನಪಿನ ಶಕ್ತಿ ಇರುವುದು ಎಂದು ಹೇಳುವುದು ನಿಜವೇ ಆದರೂ ಅದಕ್ಕೆ ಮನೋವೈಜ್ಞಾನಿಕ ಮತ್ತು ಸಾಮಾಜಿಕ ಕಾರಣಗಳ ಜೊತೆಗೆ ನರ ಸಂಬಂತ ಮತ್ತು ಮೆದುಳಿನ ಆರೋಗ್ಯಕ್ಕೆ ಸಂಬಂತ ವಿಷಯಗಳೂ ಕೂಡ ಇರುತ್ತವೆ. ಆದರೆ ಸರ್ವೇ ಸಾಮಾನ್ಯವಾಗಿ ಮನೋವೈಜ್ಞಾನಿಕ ವಿಷಯವೇ ಹೆಚ್ಚಿನ ಪಾಲಿನದಾಗಿರುತ್ತದೆ.
6. ಸರ್ವೇಸಾಮಾನ್ಯವಾಗಿ ಎಲ್ಲರ ಮೆದುಳೂ ನೆನಪಿನ ಶಕ್ತಿಯ ವಿಷಯದಲ್ಲಿ ಬಹಳ ಸಮರ್ಪಕವಾಗಿದ್ದು ಕೆಲಸ ಮಾಡುವುದು. ಆದರೆ ಅವರೇ ತಂದೊಡ್ಡಿಕೊಳ್ಳುವಂತಹ ಅಡೆತಡೆಗಳಿಂದ, ತಾವೇ ಹೇರಿಕೊಳ್ಳುವ ಇತಿಮಿತಿಗಳಿಂದ ಅದು ತನ್ನ ಕೆಲಸವನ್ನು ತಾನು ಮಾಡಲು ಸಾಧ್ಯವಾಗುವುದಿಲ್ಲ.
7. ತುಂಬಾ ವಿಷಯಗಳನ್ನು ಒಳಗೆ ತೆಗೆದುಕೊಳ್ಳಲ್ಪಟ್ಟರೆ ಗೊಂದಲಗಳು ಏರ್ಪಟ್ಟು ಮರೆತು ಹೋಗುತ್ತೇವೆ ಎಂಬ ಭಾವನೆ ಇದೆ. ಅದು ಅಪ್ಪಟ ಸುಳ್ಳು. ಅದು ವ್ಯಕ್ತಿಯ ಮನೋಭಾವದ ಮೇಲೆ ಅವಲಂಬಿತವಾಗಿರುವುದೇ ಹೊರತು ಅದೊಂದು ಸಾಮಾನ್ಯವಾದಂತಹ ಮೆದುಳಿನ ಸ್ಥಿತಿಯೇನೂ ಅಲ್ಲ.
8. ನೆನಪಿನಲ್ಲಿಟ್ಟುಕೊಳ್ಳುವುದಕ್ಕೆ ಇತಿಮಿತಿಗಳು ಖಂಡಿತ ಇಲ್ಲ. ಹೆಚ್ಚು ಹೆಚ್ಚು ಓದುತ್ತಾ ಓದುತ್ತಾ ನೆನಪಿನಲ್ಲಿಟ್ಟುಕೊಳ್ಳುವುದಕ್ಕೆ ಪ್ರಯತ್ನಿಸಿದರೆ ಅವರು ಹುಚ್ಚರಾಗುತ್ತಾರೆ ಅಥವಾ ಲೋಕಜ್ಞಾನ ಇಲ್ಲದವರಾಗುತ್ತಾರೆ. ತಮ್ಮದೇ ಲೋಕದಲ್ಲಿ ಇರುತ್ತಾರೆ ಎಂದೆಲ್ಲಾ ಹೇಳುವುದುಂಟು. ಮರೆಗುಳಿ ಪ್ರೊೆಸರ್ಗಳ ಹಾಸ್ಯಗಳನ್ನು ಉಲ್ಲೇಖಿಸುವುದು ಉಂಟು. ಅದು ಬರೀ ಹಾಸ್ಯವೇ ಹೊರತು, ಹುಚ್ಚರಾಗುವುದಕ್ಕೆ, ಲೋಕಜ್ಞಾನ ಇಲ್ಲದವರಾಗುವುದಕ್ಕೆ ಅವರದೇ ಆದಂತಹ ಮನೋಭಾವಗಳು, ವ್ಯಕ್ತಿತ್ವ ಮತ್ತು ಸ್ವಭಾವಗಳು ಕಾರಣವೇ ಹೊರತು, ವೈಜ್ಞಾನಿಕವಾಗಿ ಅವಕ್ಕೆ ಬೆಂಬಲವಿಲ್ಲ. ಎಷ್ಟೇ ಓದಿದರೂ, ಎಷ್ಟೇ ನೆನಪಿನಲ್ಲಿಟ್ಟುಕೊಂಡರೂ ಯಾವ ವ್ಯಕ್ತಿಗೂ ಏನೂ ಆಗುವುದಿಲ್ಲ.
9. ತಾವೇ ಸಂಗ್ರಹಿಸಿಕೊಂಡಿರುವ ಬೇಕಾದ ಮಾಹಿತಿಯನ್ನು ತಮ್ಮದೇ ಸ್ಮರಣೆಯಿಂದ ತೆಗೆದುಕೊಳ್ಳುವ ಕೆಲಸ ಐಚ್ಛಿಕವಾಗಿ ಮತ್ತು ಅನೈಚ್ಛಿಕವಾಗಿ ನಡೆಯುತ್ತದೆ. ಈ ಸ್ಮರಣೆಯಿಂದ ಹೆಕ್ಕುವ ಕ್ರಿಯೆಯು ಕಲೆಯೂ ಹೌದು, ವಿಜ್ಞಾನವೂ ಹೌದು. ಎಲ್ಲಕ್ಕಿಂತ ಮಿಗಿಲಾಗಿ ಮತ್ತು ಸ್ಪಷ್ಟವಾಗಿ ಅದು ರೂಢಿ.
ನೆನಪಿನ ರೂಢಿ
ನೆನಪು ಎಂಬುದು ವಿಶೇಷ ಶಕ್ತಿಯೇನಲ್ಲ. ಅದೊಂದು ರೂಢಿ ಎಂಬ ದಿವ್ಯ ಜ್ಞಾನೋದಯವಾದ ಪಕ್ಷದಲ್ಲಿ ಹಲವಾರು ಮಿಥ್ಗಳು ಬಿದ್ದುಹೋಗುವವು. ನಿಜ, ಸ್ನಾಯುಗಳಿಗೆ ಅಗತ್ಯವಿರುವಷ್ಟು ವ್ಯಾಯಾಮ ನೀಡುತ್ತಾ ನೀಡುತ್ತಾ, ಬಲ ಸಂವರ್ಧನೆ ಮಾಡಿಕೊಳ್ಳುವಂತೆ ದಿನ ದಿನಕ್ಕೆ ವ್ಯಾಯಾಮದ ಆಯಾಮಗಳನ್ನು ಹೆಚ್ಚಿಸುತ್ತಾ ಹೋದರೆ ದಷ್ಟಪುಷ್ಟವಾದ, ಬೇಕಾದ ಉಬ್ಬುತಗ್ಗುಗಳ ಶರೀರ ಸೌಷ್ಟವವನ್ನು ಪಡೆಯಬಹುದು. ಅದೇ ರೀತಿ ಸ್ಮರಣೆ ಎಂಬುದಕ್ಕೂ ಕೂಡ ಅಗತ್ಯವಾದಂತಹ ಗಮನ ಬೇಕು, ವ್ಯಾಯಾಮ ಬೇಕು, ಬಲ ಸಂವರ್ಧನೆಯ ಕಸರತ್ತುಗಳು ಬೇಕು. ಹಾಗಾದಾಗ ಅದು ದೃಢವಾಗುತ್ತಾ ಹೋಗುತ್ತದೆ. ಯಾರು ತಮ್ಮ ಸ್ಮರಣೆಗಳಿಗೆ ವ್ಯಾಯಾಮ ನೀಡುವುದಿಲ್ಲವೋ, ರೂಢಿಗೊಳಿಸಿಕೊಳ್ಳುವುದಿಲ್ಲವೋ ಅವರ ನೆನಪುಗಳು ಕ್ಷೀಣಿಸುತ್ತದೆ. ಸಮಯಕ್ಕೆ ಒದಗುವುದಿಲ್ಲ.
ಸ್ನಾಯುಗಳಿಗಾದರೂ ನೀಡುವ ವ್ಯಾಯಾಮಕ್ಕೆ ಮಿತಿ ಇರುತ್ತದೆ ಅಥವಾ ಮಿತಿ ಮೀರಿ ವ್ಯಾಯಾಮ ಮಾಡಿದರೆ ಆಯಾಸಗೊಳ್ಳುತ್ತದೆ. ಸುಸ್ತಾಗಿ ಕುಸಿಯಬಹುದು. ಆದರೆ ನೆನಪಿನ ವಿಷಯದಲ್ಲಿ ಹಾಗೆ ಆಗುವುದೇ ಇಲ್ಲ. ನೆನಪಿನ ಉಗ್ರಾಣವನ್ನು ಅದೆಷ್ಟು ಬೇಕಾದರೂ ಹೆಚ್ಚಿಸಿಕೊಳ್ಳಬಹುದು. ಪೌರಾಣಿಕ ಕಲ್ಪನೆಯ ಅಕ್ಷಯ ಪಾತ್ರೆ ಇದಕ್ಕೆ ಸರಿಯಾದ ಉದಾಹರಣೆ.
ನೆನಪಿನ ವಿಷಯದಲ್ಲಿ ಹಲವು ವಿಚಾರಗಳನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು.
ಪ್ರತಿಯೊಂದು ಸಾಧಾರಣ ಆರೋಗ್ಯವನ್ನು ಹೊಂದಿರುವ ಸಾಮಾನ್ಯ ಮಗು ಅಥವಾ ವ್ಯಕ್ತಿಗೂ ಸಾಮಾನ್ಯವಾದಂತಹ ನೆನಪಿನ ಸಾಮರ್ಥ್ಯ ಮತ್ತು ಸಾಮಾನ್ಯವಾದಂತಹ ಪ್ರಜ್ಞೆ ಇದ್ದೇ ಇರುತ್ತದೆ. ಆದರೆ, ಇಲ್ಲಿ ಮಗುವನ್ನು ಶಾಲೆಯಲ್ಲಿ ಮತ್ತು ಮನೆಯ ಪರಿಸರದಲ್ಲಿ ನೀಡುವಂತಹ ಶೈಕ್ಷಣಿಕ ಮತ್ತು ಸಾಮಾಜಿಕ ತರಬೇತಿ ಹಾಗೂ ವ್ಯಕ್ತಿತ್ವವನ್ನು ರೂಪಿಸುವ ಪ್ರಕ್ರಿಯೆಯ ಮೇಲೆ ನೆನಪಿನ ಮತ್ತು ಕಲಿಕೆಯ ಸಾಮರ್ಥ್ಯವೂ ರೂಪುಗೊಳ್ಳುತ್ತದೆ. ಒಟ್ಟಾರೆ ಇಷ್ಟು ಹೇಳಬಹುದು. ನೈಸರ್ಗಿಕವಾಗಿ ಒಂದು ಮಗುವಿಗೆ ಸಾಮಾನ್ಯ ಪ್ರಜ್ಞೆ, ಕಲಿಕೆಯ ಮತ್ತು ನೆನಪಿನ ಸಾಮರ್ಥ್ಯವಿರುತ್ತದೆ. ಆದರೆ ಪೋಷಕರು ಮತ್ತು ಶಿಕ್ಷಕರು ತಮ್ಮ ತಮ್ಮ ತಳೆದಿರುವ ಧೋರಣೆ, ಉಳಿಸಿಕೊಂಡಿರುವ ಪ್ರಜ್ಞೆ ಮತ್ತು ಪೂರ್ವಾಗ್ರಹಗಳ ಆಧಾರವಾಗಿ ಮಕ್ಕಳ ಪ್ರಜ್ಞೆ ಮತ್ತು ಸಾಮರ್ಥ್ಯವನ್ನು ಉಳಿಸುತ್ತಾರೆ ಅಥವಾ ಬೆಳೆಸುತ್ತಾರೆ ಅಥವಾ ಅಳಿಸುತ್ತಾರೆ. ಹಾಗಾಗಿಯೇ ಮಕ್ಕಳನ್ನು ಎಜುಕೇಟ್ ಮಾಡುವುದಕ್ಕಿಂತ ಮುಖ್ಯವಾಗಿ ಮತ್ತು ಮೊದಲಾಗಿ ಪೋಷಕರಿಗೆ ಮತ್ತು ಶಿಕ್ಷಕರಿಗೆ ಎಜುಕೇಟ್ ಮಾಡುವ ಅಗತ್ಯವಿದೆ.
ಶಕ್ತಿ ಎಂಬುದು ಎಲ್ಲರಲ್ಲೂ ಮೂಲಭೂತವಾಗಿ ಇರುವುದೇ ಆಗಿದೆ. ಅದನ್ನು ಕ್ರಿಯಾತ್ಮಕವಾಗಿ ಬಳಸಿಕೊಳ್ಳದೇ, ಅಸಡ್ಡೆಯಿಂದ ನಿರ್ಲಕ್ಷ್ಯಗೊಳಿಸಿದರೆ ಅದು ಮಸುಕಾಗುತ್ತದೆ. ಕ್ರಮೇಣ ಶಕ್ತಿಯು ನಿಶ್ಶಕ್ತಿಯಾಗಿ ಬದಲಾಗಿಬಿಡುತ್ತದೆ. ಆದರೆ ಸಾಮರ್ಥ್ಯವೆಂಬುದು ಗಮನ ನೀಡುವುದರಿಂದ, ರೂಢಿಯಿಂದ, ನೀಡುವ ವ್ಯಾಯಾಮಗಳಿಂದ ಹೆಚ್ಚುತ್ತಾ ಹೋಗುತ್ತದೆ. ಶಕ್ತಿಯೆಂಬ ಮೂಲವನ್ನು ಕ್ರಿಯಾತ್ಮಕಗೊಳಿಸುವುದು ಸಾಮರ್ಥ್ಯ ಎಂಬುದು. ಈ ಸಾಮರ್ಥ್ಯವು ಹೆಚ್ಚುತ್ತಾ ಹೋಗುವುದು ಕೆಲಸವನ್ನು ಮತ್ತೆ ಮತ್ತೆ ಮಾಡುವುದರಿಂದ. ಇದೊಂದು ಸುಲಭ ಮತ್ತು ಸರಳವಾದಂತಹ ವಿಜ್ಞಾನ. ಯಾವುದೇ ಕೆಲಸವನ್ನು ಪುನರಾವರ್ತನೆ ಮಾಡುತ್ತಾ ಹೋದರೆ, ಆ ಕೆಲಸ ಮಾಡುವ ಸಾಮರ್ಥ್ಯ ಹೆಚ್ಚುತ್ತಾ ಹೋಗುವುದು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ತರಬೇತಿಯನ್ನು ನೀಡುವುದು. ಕ್ರಮವಾಗಿ ವ್ಯಾಯಾಮ ಮಾಡಿಸುವುದೆಂದರೆ ತರಬೇತಿಯನ್ನು ನೀಡುವುದೆಂದೇ ಅರ್ಥ. ಅವರಿವರು ಗೊಣಗುವುದನ್ನು ಕೇಳುತ್ತೇವೆ. ಆ ಮಗುವಿಗೆ ಒಳ್ಳೆಯ ನೆನಪಿನ ಶಕ್ತಿ ಇದೆ. ಈ ಮಗುವಿಗೆ ನೆನಪಿನ ಶಕ್ತಿ ಇಲ್ಲ ಎಂದು. ಬ್ಯಾಡ್ ಮೆಮೊರಿ, ಗುಡ್ ಮೆಮೊರಿ, ಮೆಮೊರಿ ಪವರ್ ಅಂತೇನೂ ಖಂಡಿತ ಇಲ್ಲ.
ನೆನಪಿರಲಿ! ಬರೀ ತರಬೇತಿ ಹೊಂದಿರುವ ಮತ್ತು ತರಬೇತಿ ಹೊಂದಿಲ್ಲದ ಸ್ಮರಣಾ ಸಾಮರ್ಥ್ಯವಷ್ಟೇ ಇರುವುದು. ಕೆಲವರು ತಮ್ಮ ಜ್ಞಾಪಕಶಕ್ತಿಗೆ (ಶಕ್ತಿ ಎಂಬುದನ್ನು ರೂಢಿ ಪದವಾಗಿ ಬಳಸುತ್ತಿರುವುದು) ತರಬೇತಿ ನೀಡಿ ಕ್ರಿಯಾತ್ಮಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ತರಬೇತಿ ಇಲ್ಲದೇ ಹೋದರೆ ಅದರ ಸಾಮರ್ಥ್ಯವು ಹೆಚ್ಚುವುದಿಲ್ಲ ಅಷ್ಟೇ.
ಸ್ಮರಣೆಯ ಸಾಮರ್ಥ್ಯವನ್ನು ಹೆಚ್ಚಿಸುವುದು ಹೇಗೆ?
ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಆಶಿಸಬೇಕು. ಯಾವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಬಯಸುತ್ತೇವೋ ಅದನ್ನು ಸ್ವೀಕರಿಸಲು ಮಾನಸಿಕವಾಗಿ ಸಿದ್ಧವಾಗಬೇಕು. ಹಾಗೆಯೇ ನೆನಪಿನಲ್ಲಿಟ್ಟುಕೊಳ್ಳುವ ಸಂಗತಿಗಳು ಪರಸ್ಪರ ಸಂಬಂತವಾಗಿರುತ್ತದೆ (ಅಸೋಸಿಯೇಟೆಡ್). ಹೀಗೆ ಯಾವ ಯಾವ ವಿಷಯಗಳಿಗೆ ಸಂಬಂತವಾಗಿರು್ತದೆ ಎಂಬುದನ್ನು ಗಮನಿಸಬೇಕು.
ಇದನ್ನೆಲ್ಲಾ ಮಕ್ಕಳಿಂದ ಮಾಡಿಸುವುದು ಹೇಗೆ? ಮಕ್ಕಳಿಗೆ ಈ ಪಠ್ಯ ಜ್ಞಾನವನ್ನು ಬೋಸಲು ಹೋಗಬಾರದು. ಶಿಕ್ಷಕರು ಮತ್ತು ಪೋಷಕರು ತಿಳಿದುಕೊಂಡು, ಆ ದಿಕ್ಕಿನಲ್ಲಿ ಕೆಲಸ ಮಾಡಬೇಕು. ಮಗುವಿಗೆ ನೆನಪಿನ ಶಕ್ತಿಯ ಬಗ್ಗೆ ಬೋಧನೆಯೇ ಬೇಡ. ಅವರು ಸಮ್ಮತಿಯಿಂದ ಪುನರಾವರ್ತಿತವಾಗಿ ಕೆಲಸ ಮಾಡುವುದಾದರೆ ಸಾಕು. ಅವರ ನೆನಪಿನ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದೀರಿ, ಅವರ ನೆನಪಿನ ಶಕ್ತಿಗೆ ತರಬೇತಿ ಕೊಡುತ್ತಿದ್ದೀರಿ ಎಂದೇ ಅರ್ಥ.
ಎಷ್ಟೋ ವಿಷಯಗಳು ಮಕ್ಕಳ ಸುಪ್ತ ಮನಸ್ಸಿನಾಳದಲ್ಲಿ ಹುದುಗಿಕೊಂಡಿರುತ್ತವೆ. ಪ್ರಸ್ತುತ ಹೇಳುವ ವಿಷಯಗಳು ಅವರ ಮನಸ್ಸಿನಾಳದಲ್ಲಿ ಅಡಗಿರುವ ವಿಷಯಗಳಿಗೆ ಸಂಬಂಧವನ್ನು ಹೊಂದಿರುತ್ತದೆ. ಆಗ ಬೇಗನೆ ಅವರಿಗೆ ಸ್ಮರಣೆಗೆ ತಂದುಕೊಳ್ಳಲು ನೆರವಾಗುತ್ತದೆ. ಮತ್ತೆ ಕೆಲವು ಸಲ ತೀರಾ ಹೊಚ್ಚ ಹೊಸ ವಿಷಯವಾದರೂ ಕೂಡ, ಬೇರೆ ರೀತಿಯಲ್ಲಿನ ಭೌತಿಕ ಪರಿಚಯವಂತೂ ಇದ್ದೇ ಇರುತ್ತದೆ. ಅದಕ್ಕಾಗಿಯೇ ಮಕ್ಕಳಿಗೆ ಸರ್ವೇಸಾಧಾರಣವಾಗಿ ಗೊತ್ತಿರುವ ವಿಷಯವನ್ನು ಮತ್ತು ವಸ್ತುಗಳನ್ನು ಆಧರಿಸಿಕೊಂಡು ಗೊತ್ತಿಲ್ಲದಿರುವ ವಸ್ತುಗಳನ್ನು ಮತ್ತು ವಿಷಯಗಳನ್ನು ಪರಿಚಯಿಸುವುದು ಮತ್ತು ಬೋಸುವುದು. ಸಾಧಾರಣ ನೆನಪಿನ ಸಾಮರ್ಥ್ಯಕ್ಕೂ ತರಬೇತಿ ಹೊಂದಿರುವ ನೆನಪಿನ ಸಾಮರ್ಥ್ಯಕ್ಕೂ ಇರುವ ವ್ಯತ್ಯಾಸವೆಂದರೆ ಸಾಧಾರಣ ನೆನಪಿನ ಸಾಮರ್ಥ್ಯ ಅಸೋಸಿಯೇಟೆಡ್ ಅಂಶಗಳನ್ನು ಅಂದರೆ ಪರಸ್ಪರ ಸಂಬಂತ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ತರಬೇತಿ ಹೊಂದಿರುವ ನೆನಪಿನ ಸಾಮರ್ಥ್ಯ ಅದನ್ನು ಪರಸ್ಪರ ಸಂಬಂತ ಅಂಶಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತದೆ.