ಕಲೆ - ಸಾಹಿತ್ಯ
ಕವನ
ಹೆಣ್ಣೆ, ನೀನೇಕೆ ಮೌನದಾರಿ?

ಶತಶತಮಾನಗಳಿಂದ ಶೋಷಣೆಗೊಳಗಾದೆ
ನಾಲ್ಕು ಗೋಡೆಯ ಮಧ್ಯೆ ಜೀವನ ಕಳೆದೆ
ನಿನ್ನನ್ನು ನರಕದ ಬಾಗಿಲು ಎಂದರೂ ಸುಮ್ಮನಾದೆ
ಏಕೆ, ನೀನೇಕೆ ಧ್ವನಿ ಎತ್ತಲಿಲ್ಲ ಹೆಣ್ಣೆ?
ನಿನಗೆ ಮೋಕ್ಷವಿಲ್ಲ ಎಂದು ಬೋಧಿಸಿದವು ಧರ್ಮಗಳು,
ಬಾಲ್ಯದಲ್ಲಿ ತಂದೆಯ ರಕ್ಷಣೆಯಲ್ಲಿ
ಯೌವನದಲ್ಲಿ ಗಂಡನ ರಕ್ಷಣೆಯಲ್ಲಿ, ಹಾಗೂ
ವೃದ್ಧಾಪ್ಯದಲ್ಲಿ ಮಗನ ರಕ್ಷಣೆಯಲ್ಲಿ ಬದುಕಬೇಕು ಎಂದರೂ,
ಎಲ್ಲವನ್ನೂ ಕೇಳಿಯೂ ಕೇಳಿಸದಂತೆ ಸುಮ್ಮನಾದೆ
ಏಕೆ, ನೀನೇಕೆ ಧ್ವನಿ ಎತ್ತಲಿಲ್ಲ ಹೆಣ್ಣೆ?
ನಿನ್ನನ್ನೂ ಅಬಲೆ ಎಂದು ಜರಿದರು,
ನಿನ್ನ ಸ್ಪರ್ಶವು ಸೂತಕವೆಂದು ಹೀಯಾಳಿಸಿದರು
ನಿನ್ನ ಹೊಟ್ಟೆಯಲ್ಲಿಯೇ ಜನಿಸುವರಲ್ಲ ಅದು ಸೂತಕವಲ್ಲವೇ?
ನಿನ್ನ ಮಡಿಲಿನಲ್ಲೇ ಬಾಲ್ಯ ಕಳೆಯುವರಲ್ಲ ಅದು ಸೂತಕವಲ್ಲವೇ?
ಏಕೆ, ನೀನೇಕೆ ಧ್ವನಿ ಎತ್ತಲಿಲ್ಲ ಹೆಣ್ಣೆ?
ಮಂದಿರ ಮಸೀದಿಗಳು ಪ್ರವೇಶ ನಿರಾಕರಿಸಿದವು ನಿನಗೆ,
ತಮ್ಮ ಮನಸ್ಸಿನಲ್ಲಿಯೇ ಕಾಮುಕತೆಯನ್ನು ತುಂಬಿಕೊಂಡು
ಕಾಮಕ್ಕೆ ನೀನೆ ಕಾರಣವೆಂದು ಟೀಕಿಸಿದರು
ನಿನ್ನ ಅಸ್ತಿತ್ವವನ್ನು ಜೀವಂತವಾಗಿಯೇ ಕೊಲೆಗೈದರು
ಏಕೆ, ನೀನೇಕೆ ಧ್ವನಿ ಎತ್ತಲಿಲ್ಲ ಹೆಣ್ಣೆ?
ಮರಣಶಯ್ಯೆಯಲ್ಲಿರುವ ಗಂಡು ತಾನು ಬದುಕಿರುವವರೆಗೂ ನೀನು ಆತನ ಸ್ವತ್ತು,
ಮರಣದ ನಂತರ ನೀನು ಬೇರೊಬ್ಬರ ಸ್ವತ್ತಾಗಬಾರದು ಎಂದು ಸತಿಸಹಗಮನ ಕಟ್ಟಪ್ಪಣೆ ಮಾಡಿದ
ಈ ರೀತಿ ನಿನ್ನನ್ನು ತನ್ನ ಹತೋಟಿಯಲ್ಲಿಟ್ಟು ಬಂಧಿಸಿದ
ಏಕೆ, ನೀನೇಕೆ ಧ್ವನಿ ಎತ್ತಲಿಲ್ಲ ಹೆಣ್ಣೆ?
ಗಂಡ ಸತ್ತ ನಂತರ ಸಮಾಜದ ಶೋಷಣೆಯನ್ನು ತಾಳಲಾರದೇ ಸತಿಸಹಗಮನ ಮಾಡಿದೆ
ಅದುವೇ ನಿಜವಾದ ಪ್ರೇಮ ಹಾಗೂ ದಾಂಪತ್ಯ ನಿಷ್ಠೆ ಎಂದು ಸಮಾಜ ಬಿಂಬಿಸಿತು
ನೀ ಸತ್ತಾಗ ಇದೇ ಗಂಡಸು ಪತಿಸಹಗಮನ ಮಾಡಿದನೇ?
ಏಕೆ ಆತನಿಗೆ ನಿನ್ನ ಮೇಲೆ ಪ್ರೇಮವಿರಲಿಲ್ಲವೇ?
ಏಕೆ, ನೀನೇಕೆ ಧ್ವನಿ ಎತ್ತಲಿಲ್ಲ ಹೆಣ್ಣೆ?
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ