ಸೇನಾ ಸೀಮಿತ ದಾಳಿ
ಉತ್ತರ ಸಿಗದ ಪ್ರಶ್ನೆಗಳು
ಭಾರತ ಹಾಗೂ ಪಾಕಿಸ್ತಾನ ನಡುವಿನ ಭದ್ರತಾ ಆಟ ಕಳೆದ ಕೆಲ ವಾರಗಳಿಂದೀಚೆಗೆ ಹೆಚ್ಚು ಅಪಾರದರ್ಶಕವಾಗಿದೆ. ಸಾಧ್ಯತೆಗಳ ಹಾಗೂ ಫಲಿತಾಂಶಗಳ ಬಗ್ಗೆ ಅಂದಾಜಿಸುವುದು ತಜ್ಞ ವಿಶ್ಲೇಷಕರಿಗೂ ಕಷ್ಟ ಎನ್ನುವಂತಾಗಿದೆ.
ಗಡಿನಿಯಂತ್ರಣ ರೇಖೆಯಾಚೆ ಪಾಕಿಸ್ತಾನದ ಉಗ್ರ ಶಿಬಿರಗಳ ಮೇಲೆ ಭಾರತ ಸೇನೆ ನಡೆಸಿದ ಸರ್ಜಿಕಲ್ ದಾಳಿ ವಾಸ್ತವವಾಗಿ ಪಾಕಿಸ್ತಾನದ ಆಕ್ರೋಶ, ಪ್ರತಿಭಟನೆಗೆ ಕಾರಣವಾಗಬೇಕಿತ್ತು. ಪ್ರತಿಯಾಗಿ ದಾಳಿ ನಡೆಸದಿದ್ದರೂ, ದಾಳಿಯ ಬೆದರಿಕೆಯಾದರೂ ಆ ದೇಶದಿಂದ ಕೇಳಿ ಬರಬೇಕಿತ್ತು. ಬದಲಾಗಿ ದಾಳಿ ನಡೆದೇ ಇಲ್ಲ ಎಂದು ನಿರಾಕರಿಸಿರುತ್ತಿರುವ ಪಾಕಿಸ್ತಾನ, ತನ್ನ ಹೇಳಿಕೆ ಸಮರ್ಥನೆ ನಿಟ್ಟಿನಲ್ಲಿ ವಿದೇಶಿ ಪತ್ರಕರ್ತರನ್ನು ಗಡಿನಿಯಂತ್ರಣ ರೇಖೆ ಬಳಿಗೆ ಕರೆದೊಯ್ಯಲು ಮುಂದಾಗಿದೆ.
ಭಯೋತ್ಪಾದನೆ ಅಥವಾ ಸರ್ಜಿಕಲ್ ದಾಳಿ, ನಕ್ಕು ಸುಮ್ಮನಾಗುವ ವಿಚಾರವಂತೂ ಅಲ್ಲ. ಪಾಕಿಸ್ತಾನಿ ಪತ್ರಕರ್ತ ಗುಲ್ ಬುಖಾರಿ ಇದನ್ನು ಹೀಗೆ ಸಾರಾಂಶರೂಪದಲ್ಲಿ ನೀಡುತ್ತಾರೆ. ಈ ನಿಗೂಢವನ್ನು ಭೇದಿಸಲು ಇನ್ನೊಂದು ವಿಚಿತ್ರ ಸನ್ನಿವೇಶವನ್ನು ಹೇಳಬೇಕಾಗುತ್ತದೆ. ಭಾರತ ಪಡೆ ಸರ್ಜಿಕಲ್ ದಾಳಿ ಅಂಗವಾಗಿ ಗಡಿನಿಯಂತ್ರಣ ರೇಖೆ ದಾಟಿರುವುದನ್ನು ಪಾಕಿಸ್ತಾನ ಅಲ್ಲಗಳೆದಿದೆ. ಅದಾಗ್ಯೂ, ಒಬ್ಬರು ಭಾರತೀಯ ಸೈನಿಕ ಪಾಕಿಸ್ತಾನದ ವಶದಲ್ಲಿದ್ದಾರೆ. ಇನ್ನೊಂದೆಡೆ ಈ ದಾಳಿ ನಡೆಸಿರುವುದಾಗಿ ಹೇಳಿಕೊಳ್ಳುತ್ತಿರುವ ಭಾರತ, ಪಾಕಿಸ್ತಾನದ ವಶದಲ್ಲಿರುವ ಭಾರತೀಯ ಸೈನಿಕ ಪ್ರಮಾದವಶಾತ್ ಎಲ್‌ಒಸಿ ದಾಟಿದ್ದಾಗಿ ಹೇಳುತ್ತಿದೆ. ಇದೀಗ ಭಾರತ ತನ್ನ ಮೇಲೆ ದಾಳಿ ನಡೆಸಿಲ್ಲ ಎನ್ನುವುದನ್ನು ಸಮರ್ಥಿಸಿಕೊಳ್ಳಲು ಪಾಕಿಸ್ತಾನಕ್ಕೆ ಇರುವ ಏಕೈಕ ಮಾರ್ಗವೆಂದರೆ, ಭಾರತದ ಸೈನಿಕ ಪ್ರಮಾದವಶಾತ್ ಗಡಿನಿಯಂತ್ರಣ ರೇಖೆ ದಾಟಿ ಬಂದಿದ್ದಾನೆ ಎಂದು ಒಪ್ಪಿಕೊಳ್ಳುವುದು.
ಭಾರತ ಸೇನೆ ನಡೆಸಿದ ದಾಳಿಯ ಘೋಷಣೆಯ ಬಳಿಕವೂ ದಾಳಿಯ ಬಗ್ಗೆ ನಿಗೂಢತೆ ಕಾಯ್ದುಕೊಂಡಿರುವುದು, ಮಾಧ್ಯಮಗಳಲ್ಲಿ ಹಲವು ಊಹಾಪೋಹಗಳು ಹುಟ್ಟಿಕೊಳ್ಳಲು ಕಾರಣವಾಗಿವೆ.
ಸ್ಪಷ್ಟವಾಗಿ ಹೇಳಬೇಕೆಂದರೆ ಭಾರತ ಸೇನಾ ಕಾರ್ಯಾಚರಣೆಯ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್, ‘‘ಸೆಪ್ಟಂಬರ್ 29ರಂದು ಅಧಿಕೃತವಾಗಿ ಹೇಳಿದಂತೆ, ಗಡಿನಿಯಂತ್ರಣ ರೇಖೆಯಾಚೆ ಉಗ್ರ ಶಿಬಿರಗಳ ಮೇಲೆ ಭಾರತ ನಡೆಸಿದ ದಾಳಿಯಲ್ಲಿ ಅಪಾರ ಸಾವು ನೋವು ಸಂಭವಿಸಿದೆ.’’ ಈ ಹೇಳಿಕೆಯ ಬಳಿಕ ಘಟನೆ ಬಗ್ಗೆ ಬಹಿರಂಗವಾದ ಏಕೈಕ ಮಾಹಿತಿ ಎಂದರೆ, ಮಾಹಿತಿ ಖಾತೆ ರಾಜ್ಯ ಸಚಿವ ರಾಜ್ಯವರ್ಧನ ರಾಠೋಡ್ ಅವರ ಸ್ಪಷ್ಟನೆ. ‘ಮೂಲಗಳಿಂದ ತಿಳಿದುಬಂದ’ ವರದಿಗಳನ್ನು ನಿರಾಕರಿಸಿ ಅವರು, ದಾಳಿಯಲ್ಲಿ ಎಲ್‌ಒಸಿಯಾಚೆಗೆ ಹೆಲಿಕಾಪ್ಟರ್ ಬಳಕೆ ಮಾಡಿಲ್ಲ ಹಾಗೂ ವಾಯುದಾಳಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಡಿಜಿಎಂಒ ತಮ್ಮ ಹೇಳಿಕೆಯಲ್ಲಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂದು ಪ್ರಕಟಿಸಿಲ್ಲ. ಅವರ ಗುರುತನ್ನೂ ಬಹಿರಂಗಪಡಿಸಿಲ್ಲ. ಆದರೆ ಭಾರತೀಯ ಮಾಧ್ಯಮ ಬಣ್ಣಿಸಿದಂತೆ, ದಾಳಿಯಲ್ಲಿ ಯಾವೆಲ್ಲ ಅಂಶಗಳು ಒಳಗೊಂಡಿದ್ದವು ಎನ್ನುವುದನ್ನೂ ಅವರು ಬಹಿರಂಗಪಡಿಸಿಲ್ಲ. ಇವೆಲ್ಲವೂ ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ಪ್ರಕಟವಾದ ವರದಿಗಳು.
ಭದ್ರತೆ ವಿಚಾರದಲ್ಲಿ ರಾಜಿ ಇಲ್ಲ
ಯಾವ ತೊಂದರೆಯೂ ಇಲ್ಲದ, ಮಹತ್ವದ ಮಾಹಿತಿಯನ್ನು ಸರಕಾರ ಏಕೆ ಪಬ್ಲಿಕ್ ಡೊಮೈನ್‌ಗಳಲ್ಲಿ ಬಿಡುಗಡೆ ಮಾಡಿಲ್ಲ? ಇದಕ್ಕೆ ಒಂದು ಸಂಭಾವ್ಯ ಕಾರಣವೆಂದರೆ, ಹೆಚ್ಚು ನಿಖರವಾದ ವಿವರಗಳನ್ನು ನೀಡಿದರೆ, ಭಾರತೀಯ ದಾಳಿ ನಡೆದಿಲ್ಲ ಎಂದು ಹೇಳಿಕೊಳ್ಳುತ್ತಿರುವ ಪಾಕಿಸ್ತಾನಿ ಸೇನೆ, ಪ್ರತೀಕಾರದ ದಾಳಿ ನಡೆಸುವುದು ಅನಿವಾರ್ಯವಾಗುತ್ತದೆ ಎಂಬ ಕಾರಣ ಇರಬಹುದು. ಅಂಥ ಕಾರಣ ನಿಜವಾದರೆ, ಭಾರತೀಯ ಮಾಧ್ಯಮಗಳಲ್ಲಿ, ಅತಿರಂಜಿತ ವರದಿಗಳು ಪ್ರಕಟವಾಗುವಂತೆ ನೋಡಿಕೊಳ್ಳುತ್ತಿರುವುದು ಏಕೆ? ಖಂಡಿತವಾಗಿಯೂ ಇಂಥ ವರದಿಗಳು ಕೂಡಾ ಪಾಕಿಸ್ತಾನದ ಪ್ರತೀಕಾರದ ದಾಳಿಗೆ ತುಪ್ಪಸುರಿಯುತ್ತವೆ ಎನ್ನುವುದು ಸರಕಾರಕ್ಕೆ ಗೊತ್ತು.
2013ರ ಜನವರಿಯಲ್ಲಿ ಭಾರತೀಯ ಯೋಧನೊಬ್ಬರ ಶಿರಚ್ಛೇದ ನಡೆದಾಗ ಭಾರತೀಯ ಸೇನೆ ಗಡಿನಿಯಂತ್ರಣ ರೇಖೆ ದಾಟಿದ್ದು ಸೇರಿದಂತೆ ಹಿಂದೆಲ್ಲ ಇಂಥ ಘಟನೆಯನ್ನು ಸೇನೆ ಬಹಿರಂಗಪಡಿಸಲಿಲ್ಲ. ಏಕೆಂದರೆ ಇದರ ಸೀಮಿತ ಉದ್ದೇಶ, ಪಾಕಿಸ್ತಾನದ ದಾಳಿಯ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸುವುದಷ್ಟೇ ಆಗಿತ್ತು. ಇಂಥ ಮಾಹಿತಿ ಬಹಿರಂಗಪಡಿಸಿದರೆ, ಮತ್ತಷ್ಟು ತೀವ್ರಗೊಳಿಸಲು ಒತ್ತಡ ಹೆಚ್ಚಬಹುದು ಎಂಬ ಕಾರಣಕ್ಕೆ ಇಂಥ ಘಟನೆಗಳ ರಹಸ್ಯ ಕಾಪಾಡಿಕೊಳ್ಳುತ್ತಿತ್ತು. ಆದರೆ ಈ ಗಡಿಯಾಚೆಗಿನ ಪ್ರತಿಕ್ರಿಯೆಯನ್ನು ನೋಡಿಕೊಂಡು, ಸರಕಾರ ಇದನ್ನು ವಿಸ್ತೃತವಾಗಿ ಬಹಿರಂಗಗೊಳಿಸಲು ನಿರ್ಧರಿಸಿತು. ಆದರೆ ಆ ಮಾಹಿತಿ ಗಡಿಯಾಚೆಗೆ ತಲುಪಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ದೇಶದ ಭದ್ರತಾ ವಿಚಾರದ ಬಗ್ಗೆ? ಬಹುಶಃ ದಾಳಿಯ ವಿವರಗಳನ್ನು ಬಹಿರಂಗಗೊಳಿಸದಿರಲು ಇದೂ ಒಂದು ಕಾರಣವಾಗಿರಬಹುದು. ಭಾರತೀಯ ಸೇನೆ ಗಡಿನಿಯಂತ್ರಣ ರೇಖೆಯಾಚೆಗೆ ಏಳು ಕಡೆಗಳಲ್ಲಿ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿತ್ತು ಎಂದುಕೊಳ್ಳೋಣ. ಈ ಸ್ಥಳಗಳು ಉಗ್ರ ಸಂಘಟನೆಗಳಿಗಾಗಲೀ, ಅವುಗಳ ಜಾಡು ಹಿಡಿದು ಚಟುವಟಿಕೆಗಳನ್ನು ಬೆಂಬಲಿಸುತ್ತಿವೆ ಎನ್ನಲಾದ ಪಾಕಿಸ್ತಾನ ಸೇನೆಗಾಗಲೀ ರಹಸ್ಯ ಸ್ಥಳಗಳೇನೂ ಅಲ್ಲ. ಆದ್ದರಿಂದ ಆ ಸ್ಥಳಗಳನ್ನು ಮುಚ್ಚಿಡುವುದಕ್ಕೆ ಯಾವ ಸಮರ್ಥನೆಯೂ ಇಲ್ಲ. ಸರಕಾರ ಈ ನಿರ್ದಿಷ್ಟ ದಾಳಿ ಪ್ರದೇಶಗಳನ್ನು ಹೇಗೆ ಗುರುತಿಸಿದೆ ಎನ್ನುವುದನ್ನು ಬಹಿರಂಗಪಡಿಸುವಂತಿಲ್ಲ; ಏಕೆಂದರೆ ಇದರಿಂದ ಭಾರತದ ಗುಪ್ತಚರ ವಿಭಾಗದ ಮಾಹಿತಿ ಬಹಿರಂಗವಾಗುತ್ತದೆ ಎನ್ನುವುದು ಸರಕಾರದ ವಾದ. ಆದರೆ ಯಾವ ಸ್ವರೂಪದ ದಾಳಿ ನಡೆಯಿತು ಹಾಗೂ ಸ್ಥಳದ ವಿವರಣೆ ನೀಡುವುದರಿಂದ ಇಂಥ ಯಾವ ಅಪಾಯವೂ ಇಲ್ಲ. ಪಾಕಿಸ್ತಾನ ಈಗಾಗಲೇ ಆ ಮಾಹಿತಿಯನ್ನು ಹೊಂದಿದೆ ಎನ್ನುವುದು ನೆನಪಿನಲ್ಲಿಡಬೇಕಾದ ವಿಚಾರ.
ಅಂತೆಯೇ ಈ ದಾಳಿಯಲ್ಲಿ ಎಷ್ಟು ಸಾವು ನೋವು ಸಂಭವಿಸಿರಬಹುದು ಎಂಬ ಮಾಹಿತಿಯನ್ನು ಭಾರತ ಮುಚ್ಚಿಡುವುದಕ್ಕೂ ಯಾವುದೇ ಸಕಾರಣಗಳಿಲ್ಲ. ಏಕೆಂದರೆ ಈ ಮಾಹಿತಿ ಈಗಾಗಲೇ ಪಾಕಿಸ್ತಾನಕ್ಕೆ ತಿಳಿದಿರುತ್ತದೆ. ಉದಾಹರಣೆಗೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಭಾರತೀಯ ಸೇನೆ 10 ಮಂದಿ ಲಷ್ಕರೆ ತಯ್ಯಿಬಾ ಸಂಘಟನೆಯ ಉಗ್ರರನ್ನು ಹತ್ಯೆ ಮಾಡಿದೆ ಎಂದಾದಲ್ಲಿ, ಇದರ ವಿವರ ಸಂಘಟನೆಯ ಮುಖ್ಯಸ್ಥರಿಗೆ ಅಥವಾ ಅವರಿಗೆ ಬೆಂಬಲವಾಗಿ ನಿಂತಿರುವ ಪಾಕಿಸ್ತಾನಿ ಸೇನೆಗೆ ತಿಳಿದಿರುತ್ತದೆ. ಆದ್ದರಿಂದ ಸಹಜವಾಗಿಯೇ ಈ ಮಾಹಿತಿಯನ್ನು ಕೂಡಾ ಬಹಿರಂಗಪಡಿಸಬಹುದು.
ಪ್ರತಿ ನಿರ್ದಿಷ್ಟ ಸ್ಥಳದ ಮೇಲೆ ದಾಳಿ ನಡೆಸಲು ಭಾರತ ಯಾವ ವಿಧಾನವನ್ನು ಅನುಸರಿಸಿತು ಎನ್ನುವುದು ಪಾಕಿಸ್ತಾನಕ್ಕೆ ಗೊತ್ತಿದೆ. ವಿಶೇಷ ಪಡೆ ಅಥವಾ ಎಲ್‌ಒಸಿಯಲ್ಲಿ ಗುಂಡಿನ ದಾಳಿ ನಡೆಸುವುದು ಅಥವಾ ಇವೆರಡನ್ನೂ ಏಕಕಾಲಕ್ಕೆ ಸಂಘಟಿಸುವ ಮೂಲಕ ದಾಳಿ ನಡೆಸಿದೆಯೇ ಎನ್ನುವುದು ಪಾಕಿಸ್ತಾನಕ್ಕೆ ತಿಳಿದಿರುತ್ತದೆ. ಆದ್ದರಿಂದ ಈ ಮಾಹಿತಿ ಬಹಿರಂಗಪಡಿಸುವಲ್ಲೂ ಭಾರತದ ಭದ್ರತೆಗೆ ಯಾವ ಅಪಾಯ ಒದಗುವ ಸಾಧ್ಯತೆಯೂ ಇಲ್ಲ. ಭಾರತದ ನಾಗರಿಕರಿಗೆ ಈ ಮಾಹಿತಿ ನೀಡುವುದರಿಂದ ದೇಶದ ಭದ್ರತೆಗಾಗಲೀ, ಗುಪ್ತಚರ ಸಾಮರ್ಥ್ಯಕ್ಕಾಗಲೀ ಯಾವ ತೊಂದರೆಯೂ ಆಗದು.
ಅಂತಹ ದಾಳಿಯ ವೀಡಿಯೊ ದೃಶ್ಯಾವಳಿ ಇದ್ದರೂ, ಇದು ಕೆಲ ಸೂಕ್ಷ್ಮ ಅಂಶಗಳನ್ನು ಒಳಗೊಂಡಿರಬಹುದು. ಆದ್ದರಿಂದ ಅವುಗಳನ್ನು ಬಹಿರಂಗಪಪಡಿಸುವುದು ಸೂಕ್ತವಲ್ಲ ಎನ್ನುವುದು ನನ್ನ ಅಭಿಪ್ರಾಯ. ಎಷ್ಟೇ ಆದರೂ, ಸ್ಥಳದ ಬಗ್ಗೆ ಮಾಹಿತಿ ನೀಡದೇ, ವೀಡಿಯೊ ದೃಶ್ಯಾವಳಿ ಬಿಡುಗಡೆ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ.
ವಿಚಿತ್ರವೆಂದರೆ, ಪಾಕಿಸ್ತಾನಕ್ಕೆ ಈಗಾಗಲೇ ತಿಳಿದಿರುವ ಕಾರ್ಯಾಚರಣೆ ವಿವರಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸುವ ಬದಲು, ಪಾಕಿಸ್ತಾನಿ ಸೇನೆ ಹಾಗೂ ಉಗ್ರಗಾಮಿ ಗಂಪುಗಳಿಗೆ ತಿಳಿಯದ ಮಾಹಿತಿಯನ್ನು ಭಾರತ ಸರಕಾರವೇ ಈ ವೀಡಿಯೊ ಮೂಲಕ ಬಹಿರಂಗಪಡಿಸಿದಂತಾಗುತ್ತದೆ. ಈ ದಾಳಿಯಲ್ಲಿ ಯಾವ ಘಟಕಗಳು ಕಾರ್ಯ ನಿರ್ವಹಿಸಿವೆ ಎನ್ನುವ ಅಂಶವನ್ನು ಈಗಾಗಲೇ ಕೆಲ ಭಾರತೀಯ ಪತ್ರಿಕೆಗಳು ವರದಿ ಮಾಡಿವೆ. ಕಮಾಂಡೊಗಳು ಹೆಲಿಕಾಪ್ಟರ್ ಮೂಲಕ ಗಡಿ ನಿಯಂತ್ರಣ ರೇಖೆವರೆಗೆ ಪ್ರಯಾಣಿಸಿ, ಬಳಿಕ ಗಡಿನಿಯಂತ್ರಣ ರೇಖೆ ದಾಟಿದರು ಎನ್ನುವ ಅಂಶವನ್ನೂ ಬಹಿರಂಗಪಡಿಸುವ ಅಗತ್ಯವಿರಲಿಲ್ಲ.
ಆದ್ದರಿಂದ ಡಿಜಿಎಂಒ ರಹಸ್ಯದ ಹಿಂದೆ ಪಾಕಿಸ್ತಾನಿ ಸೇನೆಯ ಪ್ರತಿದಾಳಿಯ ಭೀತಿ ಇಲ್ಲ ಎಂದಾದರೆ, ಮೇಲೆ ವಿವರಿಸಿದಂತೆ, ಈ ಮಾಹಿತಿ ಬಹಿರಂಗಪಡಿಸುವುದರಿಂದ ಭಾರತಕ್ಕೆ ಯಾವುದೇ ಭದ್ರತಾ ಸಂಬಂಧಿ ತೊಂದರೆಯೂ ಇಲ್ಲ. ಹೀಗಿದ್ದೂ, ಸರಕಾರ ಏಕೆ ಮಾಹಿತಿಯನ್ನು ಮುಚ್ಚಿಟ್ಟಿದೆ?
ಅಜಯ್ ಶುಕ್ಲಾ ಅವರ ವಾದದಂತೆ, ಸೇನೆಯ ದೃಷ್ಟಿಕೋನದಿಂದ, ಈಗ ದಾಳಿ ನಡೆಸಿರುವ ತಾಣಗಳು ಅಷ್ಟೊಂದು ಪ್ರಮುಖವಲ್ಲದ್ದು ಇರಬಹುದೇ? ಹಾಗಿದ್ದರೆ, ಸಾರ್ವಜನಿಕರಿಗೆ ಆ ಮಾಹಿತಿ ಬಹಿರಂಗಪಡಿಸಿದರೆ, ಆಡಳಿತ ಪಕ್ಷದ ರಾಜಕೀಯ ಲೆಕ್ಕಾಚಾರದಂತೆ ಮುಂಬರುವ ಚುನಾವಣೆಯಲ್ಲಿ ದೊರಕಬಹುದಾದ ಲಾಭ ಕಡಿಮೆಯಾಗಬಹುದೇ? ವೈರ್ ಓದುಗರ ಜತೆ ನಡೆಸಿದ ಫೇಸ್‌ಬುಕ್ ಲೈವ್ ಕಾರ್ಯಕ್ರಮದಲ್ಲಿ ಇಂಥ ಪ್ರಶ್ನೆಗಳನ್ನು ಹಲವರು ಮುಂದಿಟ್ಟಿದ್ದರು. ನಿಮ್ಮ ಸಿನಿಕತೆಯನ್ನು ತಡೆದುಕೊಳ್ಳಿ ಎಂಬ ಸಲಹೆಯನ್ನು ಅವರಿಗೆ ಮಾಡಿದ್ದೆ.
2015ರ ಫೆಬ್ರವರಿಯ ಭಯೋತ್ಪಾದಕರ ನೌಕೆ ಪ್ರಕರಣವೂ ಸೇರಿದಂತೆ ಸರಕಾರ ಈ ಬಗ್ಗೆ ಹಿಂದೆಯೂ ಅತಿರಂಜಿತ ಪ್ರತಿಪಾದನೆ ಮಾಡಿದೆ. ಅಂದರೆ ಸರ್ಜಿಕಲ್ ದಾಳಿ, ಸುಲಭವಾಗಿ ಕೈಗೆಟುಕುವ, ಜನನಿಬಿಡ ಹಾಗೂ ಪಾಕಿಸ್ತಾನಿ ನಿಯಂತ್ರಣದಲ್ಲಿರುವ ಪ್ರದೇಶದ ಮೇಲೆ ನಡೆದಿರಬಹುದಾದರೂ, ಇಸ್ಲಾಮಾಬಾದ್‌ನ ಪ್ರತಿಪಾದನೆಯಂತೆ ಆಯಕಟ್ಟಿನ ಜಾಗದಲ್ಲಿ ಕಾರ್ಯಾಚರಣೆ ನಡೆದಿರುವ ಸಾಧ್ಯತೆ ವಿರಳ. ದಾಳಿ ನಡೆದ ಪ್ರದೇಶಗಳು, ಪುಟ್ಟ ಅವಕಾಶವಾದಿ ಗುರಿಗಳಾಗಿದ್ದರೂ, ಹಿಂದೆಯೂ ಸೇನೆ ಇಂಥ ದಾಳಿಗಳನ್ನು ನಡೆಸಿತ್ತು. ಇದೀಗ ಇದರ ಅಂಶಗಳನ್ನು ಸ್ವಲ್ಪಮಟ್ಟಿಗೆ ಬಹಿರಂಗಪಡಿಸುವ ಮೂಲಕ, ಭಾರತ ಸರಕಾರ ಭಯೋತ್ಪಾದಕರ ಸವಾಲನ್ನು ಎದುರಿಸುತ್ತಿರುವ ಬಗೆಯಲ್ಲಿ ಬದಲಾವಣೆಯಾಗಿದೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಗಡಿಯಾಚೆಗಿನ ಭಯೋತ್ಪಾದನೆ ನಿಗ್ರಹಿಸುವಲ್ಲಿ ಹಿಂದೆ ಅನುಸರಿಸುತ್ತಿದ್ದ ವಿಧಾನಕ್ಕಿಂತ ಇದು ಪರಿಣಾಮಕಾರಿಯೇನೂ ಆಗದು.
ಆದಾಗ್ಯೂ ಸರಕಾರ ಸೆಪ್ಟಂಬರ್ 29ರ ದಾಳಿ ಬಗ್ಗೆ ಹೆಚ್ಚಿನ ಮಾಹಿತಿ ಯೊಂದಿಗೆ ಸಾರ್ವಜನಿಕರ ಮುಂದೆ ಬರಬೇಕು. ಕನಿಷ್ಠಪಕ್ಷ ಪಾಕಿಸ್ತಾನ ಈಗಾಗಲೇ ಹೊಂದಿರುವ ಮಾಹಿತಿಯನ್ನಾದರೂ ಬಹಿರಂಗಪಡಿಸಬೇಕು.
ಕೃಪೆ: thewire
ಕೃಪೆ: ದಾಳಿ ಮಾಡಲಾಗಿದೆ ಎನ್ನುವ ಸ್ಥಳಗಳನ್ನು ಮುಚ್ಚಿಡುವುದಕ್ಕೆ ಯಾವ ಸಮರ್ಥನೆಯೂ ಇಲ್ಲ. ಸರಕಾರ ಈ ನಿರ್ದಿಷ್ಟ ದಾಳಿ ಪ್ರದೇಶಗಳನ್ನು ಹೇಗೆ ಗುರುತಿಸಿದೆ ಎನ್ನುವುದನ್ನು ಬಹಿರಂಗಪಡಿಸುವಂತಿಲ್ಲ; ಏಕೆಂದರೆ ಇದರಿಂದ ಭಾರತದ ಗುಪ್ತಚರ ವಿಭಾಗದ ಮಾಹಿತಿ ಬಹಿರಂಗವಾಗುತ್ತದೆ ಎನ್ನುವುದು ಸರಕಾರದ ವಾದ. ಆದರೆ ಯಾವ ಸ್ವರೂಪದ ದಾಳಿ ನಡೆಯಿತು ಹಾಗೂ ಸ್ಥಳದ ವಿವರಣೆ ನೀಡುವುದರಿಂದ ಇಂಥ ಯಾವ ಅಪಾಯವೂ ಇಲ್ಲ. ಪಾಕಿಸ್ತಾನ ಈಗಾಗಲೇ ಆ ಮಾಹಿತಿಯನ್ನು ಹೊಂದಿದೆ ಎನ್ನುವುದು ನೆನಪಿನಲ್ಲಿಡಬೇಕಾದ ವಿಚಾರ.