ವಿದ್ಯಾರ್ಥಿಗಳು ಮಾನವೀಯ ಸ್ಪರ್ಶ ಬೆಳೆಸಿಕೊಳ್ಳಲಿ
ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಸಿಎಂ ಸಿದ್ಧರಾಮಯ್ಯ
ತುಮಕೂರು, ಅ.5: ವಿದ್ಯಾರ್ಥಿಗಳು ಜೀವನದಲ್ಲಿ ಮಾನವೀಯ ಸ್ಪರ್ಶ ಬೆಳೆಸಿಕೊಂಡು ಸತ್ಪ್ರಜೆಗಳಾಗ ಬೇಕೆಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಬುಧವಾರ ಜರಗಿದ 2016- 17ನೆ ಸಾಲಿನ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಕಾವೇರಿ ಗಲಾಟೆಯಿದ್ದರೂ ವಿದ್ಯಾರ್ಥಿಗಳ ಉತ್ತೇಜನಕ್ಕಾಗಿ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದೇನೆ ಎಂದರು.ುಣಮಟ್ಟದ ಶಿಕ್ಷಣದಿಂದ ಸಾಮಾಜಿಕ ಬದಲಾವಣೆ ಸಾಧ್ಯ. ಶೈಕ್ಷಣಿಕ ಸಮಾನತೆಯಿಲ್ಲದಿದ್ದರೆ ಸಾಮಾಜಿಕ ಅಸಮಾನತೆ ಮುಂದುವರಿದು ಶೋಷಣೆ ನಡೆಯುತ್ತಲೇ ಇರುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಶೋಷಿತರಿಗೆ ಅಕ್ಷರ ಕಲಿಕೆಗೆ ಅವಕಾಶವಿರಲಿಲ್ಲ. ಸ್ವಾತಂತ್ರ್ಯಾ ನಂತರ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿದ್ದರೂ ಇನ್ನೂ ಅಸಮಾನತೆ ದೂರವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಶೈಕ್ಷಣಿಕ ಸಮಾನತೆಗಾಗಿ ಸರಕಾರವು ಶೇ.8ರಷ್ಟು ಅಂದರೆ 22,000ಕೋಟಿ ರೂ. ಖರ್ಚು ಮಾಡುತ್ತಿದೆ. ಮುಂದುವರಿದ ರಾಷ್ಟ್ರಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದಂತೆ ನಮ್ಮಲ್ಲಿಯೂ ನೂರಕ್ಕೆ ನೂರರಷ್ಟು ವಿದ್ಯಾವಂತರಾಗಬೇಕು. ಈ ದಿಕ್ಕಿನಲ್ಲಿ ಸರಕಾರವು ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ ಎಂದು ತಿಳಿಸಿದರು. ಸರಕಾರಿ ಶಾಲೆಯ ಮಕ್ಕಳು ಪ್ರತಿಭಾವಂತರಲ್ಲ ಎನ್ನುವ ತಪ್ಪು ಕಲ್ಪನೆ ಜನರಲ್ಲಿದೆ. ಸರ್.ಎಂ.ವಿಶ್ವೇಶ್ವರಯ್ಯ, ಸಿ.ಎನ್.ಆರ್.ರಾವ್ರಂತಹ ಮಹಾನ್ ಸಾಧಕರು ಸರಕಾರಿ ಶಾಲೆಯಲ್ಲಿಯೇ ಕಲಿತವರು. ಪ್ರತಿಭೆ ಯಾರ ಸ್ವತ್ತೂ ಅಲ್ಲ. ವಂಶಪಾರಂಪರ್ಯವೂ ಅಲ್ಲ. ಅತೀ ಹೆಚ್ಚಿನ ಅಂಕ ಗಳಿಸಿದ ಮಾತ್ರಕ್ಕೆ ಪ್ರತಿಭಾವಂತರಾಗುವುದಿಲ್ಲ. ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪ್ರತಿಭೆ ಬೆಳೆಸಿಕೊಳ್ಳುವಂತೆ ಪೂರಕ ವಾತಾವರಣ ಕಲ್ಪಿಸಿಕೊಡಬೇಕು. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಬೆಳೆಯಲು ಅವಕಾಶ ನೀಡುವ ಸಲುವಾಗಿ ಈ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಸಿದ್ದರಾಮಯ್ಯ ನುಡಿದರು. ಸಮಾರಂಭದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ, ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಶಾಸಕ ಬಿ.ಸುರೇಶಗೌಡ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ತನ್ವೀರ್ ಸೇಠ್, ಟಿ.ಬಿ.ಜಯಚಂದ್ರ, ಡಾ.ಜಿ.ಪರಮೇಶ್ವರ್, ಸಂಸದ ಮುದ್ದಹನುಮೇಗೌಡ, ಬಿ.ಎನ್.ಚಂದ್ರಪ್ಪ, ಜಿಪಂ ಅಧ್ಯಕ್ಷೆ ಲತಾ, ಉಪಾಧ್ಯಕ್ಷೆ ಶಾರದಾ, ಮೇಯರ್ ಯಶೋದಾ, ಶಾಸಕರಾದ ಡಾ.ರಫೀಕ್ ಅಹ್ಮದ್, ಕೆ.ಎಂ.ತಿಮ್ಮರಾಯಪ್ಪ, ವಿಧಾನ ಪರಿಷತ್ ಸದಸ್ಯರಾದ ವಿ.ಎಸ್.ಉಗ್ರಪ್ಪ, ಕಾಂತರಾಜು, ಜಿಲ್ಲಾಕಾರಿ ಮೋಹನ್ರಾಜ್, ಜಿಪಂ ಸಿಇಒ ಕೆ.ಜಿ. ಶಾಂತಾರಾಮ, ಡಿಡಿಪಿಐ ಕೆ.ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.
ರಾಜ್ಯದಲ್ಲಿ 4,164 ಸರಕಾರಿ ಶಾಲೆಗಳು ಇದ್ದು, ಇಲ್ಲಿ ಕಲಿಯುತ್ತಿರುವ ಪರಿಶಿಷ್ಟರ ಮಕ್ಕಳಿಗೆ ಪರಿಹಾರಾತ್ಮಕ ಬೋಧನೆಯನ್ನು ನೀಡಲು ರೂಪುರೇಷೆಗಳನ್ನು ರಚಿಸಲಾಗುತ್ತಿದೆ. ಎಲ್ಲಾ ಶಾಲೆಗಳಲ್ಲಿ ಕನ್ನಡ ಕಲಿಕೆಗೆ ಅವಕಾಶ ಕಲ್ಪಿಸುವುದು, ಎಲ್ಲಾ ಉರ್ದು ಶಾಲೆಗಳಲ್ಲಿ ಕನ್ನಡ ಶಿಕ್ಷಕರನ್ನು ನೇಮಿಸುವುದು ಸೇರಿದಂತೆ ಇತರ ಶೈಕ್ಷಣಿಕ ಸುಧಾರಣೆಗೆ ಶಿಕ್ಷಣ ಕಾಯ್ದೆಗೂ ತಿದ್ದುಪಡಿ ತರಲು ಯೋಚಿಸಲಾಗುತ್ತಿದೆ. ಸರಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಬದಲಾಗಿ 10 ವಿದ್ಯಾರ್ಥಿಗಳಿದ್ದರೂ ಅಂತಹ ಶಾಲೆಗಳಿಗೂ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು.
ತನ್ವೀರ್ ಸೇಠ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
ಜೂನ್ವರೆಗೂ ಕುಡಿಯಲು ಕಾವೇರಿ ನೀರು ಲಭ್ಯ
ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಕಾವೇರಿ ನೀರಿನ ಗಲಾಟೆಯಿದ್ದು, ಬರುವ ಬೇಸಿಗೆಗೆ ಕುಡಿಯುವ ನೀರಿನ ಸಮಸ್ಯೆಯಾಗಬಹುದೆಂಬ ಆತಂಕ ಜನತೆಯಲ್ಲಿದೆ. ಬರುವ ಜೂನ್ವರೆಗೂ ಕುಡಿಯಲು ಅಗತ್ಯವಿರುವ ನೀರು ಜಲಾಶಯದಲ್ಲಿ ಸಂಗ್ರಹವಿದೆ ಎಂದು ಸ್ಪಷ್ಟಪಡಿಸಿದರು.ತುಮಕೂರು ಜಿಲ್ಲೆಯ ಜನತೆಗೂ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಹೇಮಾವತಿ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಮೀಸಲಿಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಮಳೆ ಬಾರದೆ ಎಲ್ಲಾ ತಾಲೂಕುಗಳಲ್ಲಿ ಬರಪರಿಸ್ಥಿತಿ ಬಂದೊದಗಿದೆ.ಪ್ರಸಕ್ತ ಸಾಲಿನ ಆಗಸ್ಟ್ ಮಾಹೆಯಲ್ಲಿ ಶೇ.60ರಷ್ಟು ಹಾಗೂ ಸೆಪ್ಟಂಬರ್ ಮಾಹೆಯಲ್ಲಿ ಶೇ.97ರಷ್ಟು ಮಳೆ ಕೊರತೆಯಾಗಿದ್ದು,ಶೇ.33ಕ್ಕಿಂತ ಹೆಚ್ಚು ಬೆಳೆ ಹಾನಿ ಸಂಭವಿಸಿದ್ದು,ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಬೇಕೆಂದು ಜಿಲ್ಲಾಕಾರಿಗಳು ಶಿಾರಸು ಮಾಡಿರುವ ಬಗ್ಗೆ ಮಾಹಿತಿ ನೀಡಿದರಲ್ಲದೆ, ರಾಜ್ಯದಲ್ಲಿ ಆಗಿರುವ ಬೆಳೆಹಾನಿ ಪರಿಹಾರ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಸಿದ್ದರಾಮಯ್ಯ ತಿಳಿಸಿದರು.