ಅಲೆಮಾರಿಗಳಿಗೆ ಎರಡು ಎಕರೆ ಜಮೀನು: ಸಚಿವ ಎಚ್.ಆಂಜನೇಯ
ಪರಿಶಿಷ್ಟ ಜಾತಿ ಮತ್ತು ವರ್ಗ, ಅಲೆಮಾರಿ ಸಮುದಾಯಗಳ ಅಧ್ಯಯನ ಕುರಿತ ಸಂಶೋಧನಾ ಕೃತಿಗಳ ಬಿಡುಗಡೆ
ಬೆಂಗಳೂರು, ಅ.6: ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರತಿ ಕುಟುಂಬಕ್ಕೆ ಎರಡು ಎಕರೆ ಭೂಮಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನೂತನ ಯೋಜನೆಯೊಂದನ್ನು ಜಾರಿ ಮಾಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ. ಗುರುವಾರ ನಗರದ ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆ ಗಳ ವತಿಯಿಂದ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ವರ್ಗದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಅಧ್ಯಯನ ಕುರಿತ ಸಂಶೋಧನಾ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ನ್ಯಾಯ ಮತ್ತು ತುಳಿತಕ್ಕೆ ಒಳಗಾಗಿರುವ ಸಮುದಾಯಗಳನ್ನು ಮೇಲೆತ್ತುವ ಪ್ರಯತ್ನ ನಿರಂತರವಾಗಿ ಮಾಡಲಾಗುತ್ತಿದೆ. ಆದರೆ, ರಾಜ್ಯದಲ್ಲಿನ ಪರಿಶಿಷ್ಟ ಜಾತಿಗೆ ನೀಡುವ ಮೀಸಲಾತಿಯನ್ನು ಕೇವಲ ನಾಲ್ಕು ಪ್ರಬಲ ಜಾತಿಗಳು ಮಾತ್ರ ಪಡೆದುಕೊಳ್ಳುತ್ತಿದ್ದು, ಅಲ್ಪ ಸಂಖ್ಯೆಯಲ್ಲಿರುವ ಅಲೆಮಾರಿ ಸಮುದಾಯ ವಂಚಿತವಾಗಿದೆ. ಇದರಿಂದಾಗಿ ಅವರು, ನೆಲೆ ಇಲ್ಲದೆ ಅನ್ನಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಲೆಮಾರಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರಕಾರದಿಂದ ನೂರು ಕೋಟಿ ಅನುದಾನವನ್ನು ಮೀಸಲಿಡಲಾಗಿದ್ದು, ಮುಂದಿನ ದಿನಗಳಲ್ಲಿ ಅದನ್ನು ಅಭಿವೃದ್ಧಿಗಾಗಿ ವಿನಿಯೋಗಿಸಲಾಗುತ್ತದೆ. ಅದರ ಭಾಗವಾಗಿ ಜಿಲ್ಲೆಗೆ ಒಂದು ಸಾವಿರ ಎಕರೆ ಭೂಮಿಯಂತೆ 30 ಸಾವಿರ ಎಕರೆ ಭೂಮಿಯನ್ನು ಖರೀದಿಸಿ ಪ್ರತಿ ಕುಟುಂಬಕ್ಕೆ ಭೂಮಿ, ನೀರಾವರಿ ಸೌಲಭ್ಯ ಕಲ್ಪಿಸಲು ಬೋರ್ವೆಲ್ ಹಾಗೂ ಮನೆ ನಿರ್ಮಾಣ ಮಾಡಿ ಕೊಡುವ ಮೂಲಕ ಅಲೆಮಾರಿ ಕುಟುಂಬಗಳು ಸ್ವಾವಲಂಬಿಯಾಗಿ ಬದುಕಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು. ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಮಾತನಾಡಿ, ಜಾತೀಕರಣ ಮತ್ತು ಜಾಗತೀಕರಣ ಪ್ರಭಾವದಿಂದಾಗಿ ಶೋಷಣೆ ಮಾಡುವವರನ್ನು ವಿರೋಧ ಮಾಡಬೇಕಾದವರು ತಮ್ಮಲ್ಲೆ ಜಾತಿ ಎಂದು ಹುಡುಕಾಟ ನಡೆಸುತ್ತಿದ್ದಾರೆ. ಇದರಿಂದಾಗಿ ಶೋಷಿತರಲ್ಲಿಯೇ ಸವಲತ್ತಿನ ಸ್ಪರ್ಧೆ ಏರ್ಪಡುತ್ತಿದೆ. ಹೀಗಾಗಿ ಶೋಷಣೆಗೊಳಗಾದವರನ್ನು ಸಹಜೀವಿಗಳೆಂದು ಪರಿಗಣಿಸುವ ಅಗತ್ಯವಿದೆ. ಇಲ್ಲದಿದ್ದರೆ ನಾವೇ ಆತ್ಮವಂಚನೆ ಮಾಡಿಕೊಂಡಂತೆ ಆಗುತ್ತದೆ ಎಂದು ಹೇಳಿದರು. ಂದಿನ ಅಲೆಮಾರಿ ಸಮುದಾಯಗಳು ಸಂಘಟಿತರಾಗುವುದರಲ್ಲಿ ವಿಫಲವಾದ ಪರಿಣಾಮ ಶಿಕ್ಷಣ, ಅಧಿಕಾರ, ಸವಲತ್ತು, ಸಾಮಾಜಿಕ ಸ್ಥಾನಮಾನ ಮತ್ತು ಅಭಿವೃದ್ಧಿ ಯೋಜನೆಗಳು ಸಂಘಟಿತರಿಗಷ್ಟೇ ತಲುಪುತ್ತಿವೆ. ಬಡವರು ಬಡವರಾಗಿಯೇ ಉಳಿಯುತ್ತಿದ್ದು, ಶ್ರೀಮಂತರು ಮುಂದೆ ಬರುತ್ತಿದ್ದಾರೆ ಎಂದರು.ಾತಿ ಹಾಗೂ ವರ್ಗದಲ್ಲಿನ ಶ್ರೇಣೀಕೃತ ವ್ಯವಸ್ಥೆಯ ಜೊತೆಗೆ ಶೋಷಿತರಲ್ಲಿಯೇ ಮತ್ತೊಂದು ಶ್ರೇಣೀಕೃತ ವ್ಯವಸ್ಥೆ ನಿರ್ಮಾಣವಾಗುತ್ತಿದೆ. ಇದರಿಂದ ಶೋಷಣೆ ಮಾಡುವವರಿಗೆ ಇನ್ನಷ್ಟು ಅನುಕೂಲವಾಗಲಿದ್ದು, ಶೋಷಣೆಗೆ ಒಳಗಾಗುವವರು ಸೌಲಭ್ಯಗಳಿಗಾಗಿ ಕಚ್ಚಾಡುತ್ತಾ ಮೂಲೆಗುಂಪಾಗುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ ಸಹ ಜೀವಿಗಳ ಜೊತೆ ಜಾತಿ ಸಂಘಟನೆಗಳು ಸೌಹಾರ್ದ ತರುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಯೋಜನೆ ರೂಪಿಸುವ ಸರಕಾರ ಅಲೆಮಾರಿ ಸಮುದಾಯ ಅಭಿವೃದ್ಧಿಗೆ ಪ್ರತ್ಯೇಕ ಯೋಜನೆ ರೂಪಿಸಬೇಕು. ಆ ಮೂಲಕ ಸವಲತ್ತಿಗಾಗಿ ನಡೆಯುವ ಜಗಳವನ್ನು ತಪ್ಪಿಸಬೇಕು ಎಂದ ಅವರು, ಅಭಿವೃದ್ಧಿ ಹೆಸರಿನಲ್ಲಿ ಜನರನ್ನು ಮರಳು ಮಾಡಲು ಪ್ರಯೋಗಿಸಲಾಗುತ್ತಿರುವ ಡಿಜಿಟಲ್ ಇಂಡಿಯಾ, ಸ್ಮಾರ್ಟ್ ಸಿಟಿಗಳು ಬಡವರನ್ನು ಅಣಕಿಸಿದಂತಿವೆ. ಇವು ಬಡವ ಮತ್ತು ಶ್ರೀಮಂತರ ನಡುವಿನ ಅಂತರವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಪ್ರೊ.ಹಿ.ಚಿ.ಬೋರಲಿಂಗಯ್ಯ, ತುಮಕೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಓ.ಅನಂತರಾಮಯ್ಯ, ಸಮಾಜ ಕಲ್ಯಾಣ ಇಲಾಖೆಯ ನೋಡೆಲ್ ಏಜೆನ್ಸಿ ಇ.ವೆಂಕಟಯ್ಯ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್, ಪತ್ರಕರ್ತ ರವೀಂದ್ರಭಟ್, ಸಂಸ್ಥೆಯ ನಿರ್ದೇಶಕಿ ಪ್ರೊ.ಆರ್.ಅನುರಾಧ ಪಟೇಲ್ ಉಪಸ್ಥಿತರಿದ್ದರು.
ಅಲೆಮಾರಿ ಸಮುದಾಯ ಮೂಢನಂಬಿಕೆಗಳನ್ನು ಆಚರಿಸುವುದನ್ನು ಕೈ ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸರಕಾರ ನಿಮ್ಮ ಜೊತೆಗಿದೆ. ಅದಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ. ಮುಂದಿನ ಅಧಿವೇಶನದಲ್ಲಿ ಸದನದ ಅನುಮತಿ ಪಡೆದು ‘ಮೂಢನಂಬಿಕೆ ನಿಷೇಧ ಕಾಯ್ದೆ’ ಜಾರಿ ಮಾಡಲಾಗುವುದು. - ಎಚ್.ಆಂಜನೇಯ, ಸಮಾಜ ಕಲ್ಯಾಣ ಸಚಿವ