ಗುಲಾಬಿ ಕೆನ್ನೆಗಳು ಅರಳುತ್ತವೆ
1
ಅವರು,
ಜಾತಿಯ ಅಲಗು ತಿವಿದು
ಹುಬ್ಬೇರಿಸಿದರು.
ನಾವು,
ಒಂದೇ ಒಂದು ಪದ ಮಾತನಾಡಲಿಲ್ಲ
2
ಅವರು,
ನಮ್ಮ ಅಂಡಿನ ಮೇಲೆ
ದಣಿವಿಲ್ಲದೆ ಒದೆಯುವಾಗ
ಅವಡುಗಚ್ಚಿ ಸಹಿಸಿಕೊಂಡೆವು
ಅವು,
ನಾವೇ ಹೊಲಿದ ಚಪ್ಪಲಿಗಳೆಂದು
3
ಮುಗ್ಧ ರಕ್ತದ ಹನಿಗಳು ತೊಟ್ಟಿಕ್ಕುವುದು,
ಅವರು, ದೇಶ ಪ್ರೇಮದ ಸೋಗಿನಲಿ
ಬಿಳಿ ಅಂಗಿಯ ಚುಂಗು ಹಿಡಿಯುವುದು
ಇದ್ಯಾವುದೂ ಹೊಸತಲ್ಲ
ಮನುಕುಲದಷ್ಟು ಪುರಾತನ
4
ಅವರ,
ಹಿಂಸೆಯ ವ್ಯಾಪಾರ ಬೀದಿಯಲಿ
ನಮ್ಮ ಕನಸಿನ ಕೂಸುಗಳು
ಬಿಡಿಗಾಸಿಗೆ ಬಿಕರಿಯಾಗುತ್ತವೆ.
5
ನಮ್ಮೊಳಗೆ
ಹಸಿವು, ಅವಮಾನಗಳು
ಹಾಸಿ ಹೊದ್ದು ಮಲಗಿವೆ.
ಅದೆಷ್ಟು ಲಗಾಮು ಹಾಕಿದರೂ
ಅವು ನಿಬಂಧನೆಗಳ ಉಲ್ಲಂಘಿಸುತ್ತವೆ.
6
ಇವತ್ತಲ್ಲದಿದ್ದರೂ ನಾಳೆ
ಫ್ಯಾಶಿಸ್ಟರೆದೆಗಳು ನಡುಗುತ್ತವೆ
ಕೀಳರಿಮೆಗೆ ಮುದುಡಿದ
ಗುಲಾಬಿ ಕೆನ್ನೆಗಳು ಅರಳುತ್ತವೆ.
Next Story