varthabharthi


magazine

ದಲಿತರ ದಮನಕ್ಕೆ ಜಾತಿಪದ್ಧತಿಯ ಅಸ್ತ್ರ

ವಾರ್ತಾ ಭಾರತಿ : 11 Oct, 2016
ಅರುಂಧತಿ ರಾಯ್

‘‘ಬ್ರಾಹ್ಮಣರು ನಮ್ಮ ದೇಶದ ಒಟ್ಟು ಜನಸಂಖ್ಯೆಯ ಶೇ.3.5ಕ್ಕಿಂತ ಹೆಚ್ಚಿಲ್ಲ. ಇಂದು ಅವರು ಶೇ.70ರಷ್ಟು ಸರಕಾರಿ ಹುದ್ದೆಗಳನ್ನು ಹೊಂದಿದ್ದಾರೆ. ಈ ಅಂಕಿಸಂಖ್ಯೆಯು ಕೇವಲ ಗೆಜೆಟೆಡ್ ಹುದ್ದೆಗಳನ್ನು ಮಾತ್ರವೇ ಪ್ರಸ್ತಾವಿಸುತ್ತಿದೆಯೆಂದು ನಾನು ಊಹಿಸುತ್ತೇನೆ. ನಾಗರಿಕ ಸೇವೆಯ ಉನ್ನತ ಸ್ತರದಲ್ಲಿ, ಉಪಕಾರ್ಯದರ್ಶಿ ಹುದ್ದೆಯಿಂದ ಮೇಲ್ಮುಖವಾಗಿ ಪ್ರತಿ 500 ಮಂದಿಯಲ್ಲಿ 310 ಮಂದಿ ಬ್ರಾಹ್ಮಣರು ಅಂದರೆ ಶೇ.63ರಷ್ಟಿದ್ದಾರೆ. 26 ಮಂದಿ ಮುಖ್ಯ ರಾಜ್ಯ ಕಾರ್ಯದರ್ಶಿಗಳಲ್ಲಿ 19 ಮಂದಿ ಬ್ರಾಹ್ಮಣರು, 27 ರಾಜ್ಯಪಾಲರು ಹಾಗೂ ಲೆ.ಗವರ್ನರ್‌ಗಳಲ್ಲಿ 13 ಮಂದಿ ಬ್ರಾಹ್ಮಣರಾಗಿದ್ದಾರೆ. 16 ಮಂದಿ ಸುಪ್ರೀಂಕೋರ್ಟ್ ನ್ಯಾಯಾಧೀಶರಲ್ಲಿ 9 ಮಂದಿ ಬ್ರಾಹ್ಮಣರು. ಹೈಕೋರ್ಟ್ ಗಳ 330 ಮಂದಿ ನ್ಯಾಯಾಧೀಶರಲ್ಲಿ 166 ಮಂದಿ ಬ್ರಾಹ್ಮಣರು, 140 ರಾಯಭಾರಿಗಳಲ್ಲಿ 58 ಮಂದಿ ಬ್ರಾಹ್ಮಣರು. ಒಟ್ಟು 3300 ಭಾರತೀಯ ಆಡಳಿತಾತ್ಮಕ ಸೇವೆಯ ಅಧಿಕಾರಿಗಳಲ್ಲಿ 2376 ಮಂದಿ ಬ್ರಾಹ್ಮಣರು.


 ನನ್ನ ತಂದೆ ಹಿಂದೂ,ಬ್ರಹ್ಮಸಮಾಜಿ. ವಯಸ್ಕಳಾಗುವವರೆಗೂ ನಾನವರನ್ನು ಭೇಟಿಯಾಗಿರಲೇ ಇಲ್ಲ. ನಾನು ನೈಋತ್ಯ ಭಾರತದ ರಾಜ್ಯವಾದ ಕಮ್ಯುನಿಸ್ಟ್ ಆಳ್ವಿಕೆಯ ಕೇರಳದ ಅಯ್‌ಮನಂನಲ್ಲಿರುವ ಸಿರಿಯನ್ ಕ್ರೈಸ್ತ ಕುಟುಂಬವೊಂದರಲ್ಲಿ ತಾಯಿ ಜೊತೆ ಬೆಳೆದೆ. ನನ್ನ ಸುತ್ತಮುತ್ತಲೂ ಜಾತೀಯತೆಯ ಕೆಡುಕುಗಳು ಎದ್ದುಕಾಣುತ್ತಿದ್ದವು. ಅಯ್‌ಮನಂ ತನ್ನದೇ ಆದ ಪ್ರತ್ಯೇಕ ‘ಪರಯ್ಯನ್’ ಚರ್ಚ್ ಹೊಂದಿದ್ದು, ಅಲ್ಲಿ ಅಸ್ಪಶ್ಯ ಪಂಗಡಗಳಿಗೆ ಪರಯ್ಯನ್ ಪಾದ್ರಿಗಳು ಧಾರ್ಮಿಕ ಬೋಧನೆಗಳನ್ನು ಮಾಡುತ್ತಿದ್ದರು.
  ಜಾತಿಯು ಜನರ ಹೆಸರಿನೊಂದಿಗೆ ಥಳಕುಹಾಕಿಕೊಂಡಿತ್ತು. ಜನರು ಪರಸ್ಪರರನ್ನು ಸಂಬೋಧಿಸುವ ರೀತಿಯಲ್ಲಿ, ಅವರು ಮಾಡುವ ಕೆಲಸದಲ್ಲಿ, ಅವರು ಧರಿಸುವ ಬಟ್ಟೆಯಲ್ಲಿ, ಮದುವೆ ಸಂಬಂಧವನ್ನು ಹೊಂದಿಸಿಕೊಳ್ಳುವುದರಲ್ಲಿ, ಅವರು ಆಡುವ ಭಾಷೆ ಹೀಗೆ ಎಲ್ಲದರಲ್ಲೂ ಜಾತಿಯ ಪ್ರಭಾವ ಕಾಣಸಿಗುತ್ತಿತ್ತು. ಆದರೂ ಕೂಡಾ, ಯಾವುದೇ ಪಠ್ಯಪುಸ್ತಕದಲ್ಲಿಯೂ ನನಗೆ ಜಾತೀಯತೆಯ ಭಾವನೆ ಎದುರಾಗಿರಲಿಲ್ಲ.
ಭಾರತೀಯ ಬರಹಗಾರ ಹಾಗೂ ಚಿಂತಕ ಬಿ.ಆರ್.ಅಂಬೇಡ್ಕರ್ 1936ರಲ್ಲಿ ನೀಡಿದ ಉಪನ್ಯಾಸ ‘ಜಾತಿ ನಿರ್ಮೂಲನೆ’ (ಅನಿಹಿಲೇಶನ್ ಆಫ್ ಕಾಸ್ಟ್) ಓದುತ್ತಿದ್ದಾಗ ನಮ್ಮ ಶೈಕ್ಷಣಿಕ ಜಗತ್ತಿನಲ್ಲಿ ತೆರೆದಿಟ್ಟ ರಂಧ್ರವೊಂದು ಇರುವ ಬಗ್ಗೆ ನನ್ನಲ್ಲಿ ಅರಿವು ಮೂಡಿತು. ಅವರ ಉಪನ್ಯಾಸ ಓದಿದಾಗ ನನಗೆ ಯಾಕೆ ಆ ರಂಧ್ರ ಇನ್ನೂ ಉಳಿದುಕೊಂಡಿದೆ ಹಾಗೂ ನಮ್ಮ ಭಾರತೀಯ ಸಮಾಜವು ವೈಚಾರಿಕ ಹಾಗೂ ಕ್ರಾಂತಿಕಾರಿ ಬದಲಾವಣೆಗೊಳಗಾಗುವವರೆಗೂ ಯಾಕೆ ಅದು ಮುಂದುವರಿಯಲಿದೆಯೆಂಬುದನ್ನು ನನಗೆ ಸ್ಪಷ್ಟಪಡಿಸಿತು.
 
    2014ರ ನೊಬೆಲ್ ಶಾಂತಿ ಪ್ರಶಸ್ತಿಯ ಜಂಟಿ ಪುರಸ್ಕೃತೆ ಮಲಾಲಾ ಯೂಸುಫ್‌ಝಾಯಿ ಹೆಸರನ್ನು ನೀವು ಕೇಳಿರಬಹುದು. ಆದರೆ ಸುರೇಖ್ ಭೊತ್‌ಮಾಂಗೆ ಅವರ ಹೆಸರನ್ನು ಕೇಳಿರಲಾರಿರಿ. ಮಲಾಲಾಗೆ ಕೇವಲ 15 ವರ್ಷ ವಯಸ್ಸು. ಆದರೆ ಆಕೆ ಈಗಾಗಲೇ ಹಲವಾರು ‘ಅಪರಾಧ’ಗಳನ್ನು ಎಸಗಿದ್ದಾಳೆ. ಅವಳು ಹುಡುಗಿ. ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ವಾಸವಾಗಿದ್ದಳು. ಆಕೆ ಬಿಬಿಸಿಯ ಬ್ಲಾಗ್ ಬರಹಗಾರ್ತಿಯೂ ಆಗಿದ್ದಳು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಕೂಡಾ ಆಕೆಯ ಬಗ್ಗೆ ವೀಡಿಯೊ ಒಂದನ್ನು ಪ್ರಸಾರ ಮಾಡಿತ್ತು. ಮಲಾಲಾ ವೈದ್ಯೆಯಾಗಲು ಬಯಸಿದ್ದಳು. ಆದರೆ ಅವಳ ತಂದೆಗೆ ಆಕೆ ರಾಜಕಾರಣಿಯಾಗಬೇಕೆಂಬ ಹಂಬಲವಿತ್ತು. ಆಕೆ ದಿಟ್ಟ ಬಾಲಕಿಯಾಗಿದ್ದಳು. ಶಾಲೆಗಳು ಹುಡುಗಿಯರಿಗಲ್ಲವೆಂದು ತಾಲಿಬಾನ್ ಘೋಷಿಸಿದಾಗ ಹಾಗೂ ತನ್ನ ವಿರುದ್ಧ ಮಾತನಾಡುವುದನ್ನು ನಿಲ್ಲಿಸದೆ ಇದ್ದಲ್ಲಿ ಕೊಲ್ಲುವುದಾಗಿ ತನಗೆ ಹಾಕಿದ ಬೆದರಿಕೆಗೆ ಮಲಾಲಾ (ಹಾಗೂ ಆಕೆಯ ತಂದೆ ) ಸೊಪ್ಪುಹಾಕಲಿಲ್ಲ. 2012ರ ಅಕ್ಟೋಬರ್ 9ರಂದು ಬಂದೂಕುಧಾರಿಯೊಬ್ಬ ಶಾಲಾಬಸ್‌ನಲ್ಲೇ ಆಕೆಯ ತಲೆಗೆ ಗುಂಡಿಟ್ಟ. ಗಂಭೀರಗಾಯಗೊಂಡು ಸಾವುಬದುಕಿನ ನಡುವೆ ಹೋರಾಡುತ್ತಿದ್ದ ಮಲಾಲಾಳನ್ನು ಇಂಗ್ಲೆಂಡ್‌ಗೆ ಕೊಂಡೊಯ್ಯಲಾಯಿತು. ಅಲ್ಲಿ ಸಾಧ್ಯವಿರುವ ಎಲ್ಲಾ ವೈದ್ಯಕೀಯ ಚಿಕಿತ್ಸೆ ದೊರೆತ ಬಳಿಕ ಆಕೆ ಬದುಕುಳಿದಳು. ಅದೊಂದು ಪವಾಡವಾಗಿತ್ತು.
ಅಮೆರಿಕದ ಅಧ್ಯಕ್ಷರು ಹಾಗೂ ವಿದೇಶಾಂಗ ಕಾರ್ಯದರ್ಶಿ ಮಲಾಲಾಗೆ ಬೆಂಬಲ ಹಾಗೂ ಏಕತೆಯ ಸಂದೇಶಗಳನ್ನು ಕಳುಹಿಸಿದರು. ಪಾಪ್ ಗಾಯಕಿ ಮಡೋನಾ ಆಕೆಗಾಗಿ ಹಾಡೊಂದನ್ನು ಸಮರ್ಪಿಸಿದರು. ಅವಳ ಬಗ್ಗೆ ಹಾಲಿವುಡ್ ನಟಿ ಆ್ಯಂಜೆಲಿನಾ ಜೋಲಿ ಲೇಖನವೊಂದನ್ನು ಬರೆದರು. ಟೈಮ್ಸ್ ಪತ್ರಿಕೆಯ ಮುಖಪುಟದಲ್ಲಿ ಮಲಾಲಾ ರಾರಾಜಿಸಿದಳು.

  ಮಲಾಲಾಳ ಹತ್ಯೆ ಯತ್ನ ನಡೆದ ಕೆಲವೇ ದಿನಗಳೊಳಗೆ, ಜಾಗತಿಕ ಶಿಕ್ಷಣ ಕುರಿತಂತೆ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಗೊರ್ಡೊನ್ ಬ್ರೌನ್, ಆರಂಭಿಸಿದ ‘ನಾನು ಮಲಾಲಾ’ ಅಭಿಯಾನವು ಪ್ರತಿಯೊಂದು ಹೆಣ್ಣು ಮಗುವಿಗೂ ಶಿಕ್ಷಣವನ್ನು ಓದಗಿಸಬೇಕೆಂದು ಪಾಕ್ ಸರಕಾರಕ್ಕೆ ಕರೆ ನೀಡಿತು. ಅಮೆರಿಕದ ಡ್ರೋನ್ ವಿಮಾನಗಳು ಸ್ತ್ರೀದ್ವೇಷಿ, ಭಯೋತ್ಪಾದಕರನ್ನು ಮಟ್ಟಹಾಕಲು ಪಾಕಿಸ್ತಾನದಲ್ಲಿ ತನ್ನ ಡ್ರೋನ್ ದಾಳಿಯನ್ನು ಮುಂದುವರಿಸಿದವು.
  ಸುರೇಖಾ ಭೂತ್‌ಮಾಂಗೆಗೆ 40 ವರ್ಷ ವಯಸ್ಸಾಗಿತ್ತು. ಆಕೆ ಕೂಡಾ ಹಲವಾರು ‘ಅಪರಾಧ’ಗಳನ್ನು ಎಸಗಿದ್ದಾಳೆ. ಆಕೆಯೋರ್ವ ಮಹಿಳೆ. ಅದರಲ್ಲೂ ಭಾರತದಲ್ಲಿ ಬದುಕು ಸಾಗಿಸುತ್ತಿದ್ದ ಅಸ್ಪಶ್ಯ ಸಮುದಾಯಕ್ಕೆ ಸೇರಿದ ಮಹಿಳೆಯಾಗಿದ್ದಳು ಆದರೆ ಆಕೆ ಕಡುಬಡವಳಾಗಿರಲಿಲ್ಲ. ಆಕೆ ಪತಿಗಿಂತಲೂ ಹೆಚ್ಚು ಸುಶಿಕ್ಷಿತಳಾಗಿದ್ದಳು. ಹೀಗಾಗಿ ಅವಳು ತನ್ನ ಕುಟುಂಬದ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಅಂಬೇಡ್ಕರ್ ಆಕೆಯ ನೆಚ್ಚಿನ ಹೀರೋ ಆಗಿದ್ದರು. ಅಂಬೇಡ್ಕರ್ ಅವರಂತೆ ಸುರೇಖಾಳ ಕುಟುಂಬವೂ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿತು. ಅವಳ ಮಕ್ಕಳು ವಿದ್ಯಾವಂತರಾಗಿದ್ದರು. ಆಕೆಯ ಇಬ್ಬರು ಪುತ್ರರಾದ ಸುಧೀರ್ ಹಾಗೂ ರೋಶನ್ ಕಾಲೇಜ್‌ನಲ್ಲಿ ಕಲಿಯುತ್ತಿದ್ದಾರೆ. ಪುತ್ರಿ ಪ್ರಿಯಾಂಕಾಗೆ 17 ವರ್ಷ ವಯಸ್ಸಾಗಿದ್ದು, ಹೈಸ್ಕೂಲ್ ಶಿಕ್ಷಣ ಮುಗಿಸಿದ್ದಾಳೆ. ಸುರೇಖಾ ಹಾಗೂ ಆಕೆಯ ಪತಿ ಮಹಾರಾಷ್ಟ್ರದ ಖೈರ್ಲಾಂಜಿ ಗ್ರಾಮದಲ್ಲಿ ಪುಟ್ಟ ಜಮೀನೊಂದನ್ನು ಖರೀದಿಸಿದ್ದರು.

     ಆ ಜಮೀನು, ಸುರೇಖಾಳ ಸಮುದಾಯವಾದ ಮಹರ್ ಜಾತಿಗಿಂತ ಶ್ರೇಷ್ಠರೆಂದು ತಮ್ಮನ್ನು ಕರೆದುಕೊಳ್ಳುವ ಜಾತಿಗಳಿಗೆ ಸೇರಿದವರ ಹೊಲಗಳಿಂದ ಸುತ್ತುವರಿದಿತ್ತು. ಆಕೆ ದಲಿತಳಾಗಿದ್ದರಿಂದ ಒಂದು ಉತ್ತಮ ಜೀವನಕ್ಕಾಗಿ ಹಂಬಲಿಸಲು ಆಕೆಗೆ ‘ಹಕ್ಕಿರಲಿಲ’್ಲ. ತನ್ನ ಹುಲ್ಲು ಚಾವಣಿಯ ಮಣ್ಣಿನ ಮನೆಯನ್ನು ಇಟ್ಟಿಗೆ ಮನೆಯಾಗಿ ಪರಿವರ್ತಿಸಲು ಅಥವಾ ವಿದ್ಯುತ್ ಸಂಪರ್ಕವನ್ನು ಪಡೆಯಲು ಸುರೇಖಾಗೆ ಗ್ರಾಮಪಂಚಾಯತ್ ಅನುಮತಿ ನೀಡಲಿಲ್ಲ. ಆಕೆಯ ಕುಟುಂಬದ ಕೃಷಿ ಜಮೀನಿನ ನೀರಾವರಿಗಾಗಿ, ಕಾಲುವೆಯಿಂದ ನೀರು ಹರಿಸಲು ಗ್ರಾಮಸ್ಥರು ಅವಕಾಶ ನೀಡಲಿಲ್ಲ. ಆಕೆಯ ಜಮೀನಿನ ನಡುವೆಯೇ ಸಾರ್ವಜನಿಕ ರಸ್ತೆಯೊಂದನ್ನು ನಿರ್ಮಿಸಲು ಅವರು ಯತ್ನಿಸಿದರು. ಆಗ ಆಕೆ ಪ್ರತಿಭಟಿಸಿದಾಗ, ಅವಳ ಹೊಲಗಳ ಮೇಲೆಯೇ ತಮ್ಮ ಎತ್ತಿನ ಗಾಡಿಗಳನ್ನು ಓಡಿಸಿದರು. ದನಗಳನ್ನು ಬಿಟ್ಟು, ಎದ್ದು ನಿಂತಿದ್ದ ಆಕೆಯ ಹೊಲದ ಪೈರನ್ನು ಅವು ಮೇಯುವಂತೆ ಮಾಡಿದ್ದರು.
      ಆದರೂ ಸುರೇಖಾ ಹಿಂಜರಿಯಲಿಲ್ಲ. ಪೊಲೀಸರಿಗೆ ದೂರು ನೀಡಿದಳು. ಆದರೆ ಅವರು ಆಕೆಯ ದೂರಿಗೆ ಕಿವಿಗೊಡಲಿಲ್ಲ. ಹಲವು ತಿಂಗಳುಗಳವರೆಗೆ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿತ್ತು. ಸುರೇಖಾಳಿಗೆ ಎಚ್ಚರಿಕೆಯಾಗಿ ಗ್ರಾಮಸ್ಥರು ಆಕೆಯ ಸಂಬಂಧಿಯೊಬ್ಬನ ಮೇಲೆ ದಾಳಿ ಮಾಡಿ, ಆತನನ್ನು ಹತ್ಯೆಗೈದಿದ್ದರು. ಆಗ ಸುರೇಖಾ ಇನ್ನೊಂದು ದೂರು ನೀಡಿದಳು. ಈ ಬಾರಿ ಪೊಲೀಸರು ಕೆಲವರನ್ನು ಬಂಧಿಸಿದರು. ಆದರೆ ಆರೋಪಿಗಳು ಹೆಚ್ಚುಕಮ್ಮಿ ತಕ್ಷಣವೇ ಜಾಮೀನು ಪಡೆದು ಹೊರಬಂದರು. ಅವರು ಬಿಡುಗಡೆಯಾದ ದಿನದಂದೇ, 2006ರ ಸೆಪ್ಟಂಬರ್ 29ರಂದು ಸಂಜೆ ಸುಮಾರು ಆರುಗಂಟೆಯ ಹೊತ್ತಿಗೆ ಮಹಿಳೆಯರು ಹಾಗೂ ಪುರುಷರು ಸೇರಿದಂತೆ ಸುಮಾರು 40 ಮಂದಿ ಉದ್ರಿಕ್ತ ಗ್ರಾಮಸ್ಥರ ಗುಂಪೊಂದು ಟ್ರಾಕ್ಟರ್‌ಗಳಲ್ಲಿ ಆಗಮಿಸಿ, ಸುರೇಖಾಳ ಮನೆಯನ್ನು ಸುತ್ತುವರಿಯಿತು. ಅವಳ ಪತಿ ಭಯ್ಯಾಲಾಲ್ ಹೊಲದಲ್ಲಿದ್ದ. ಗದ್ದಲವನ್ನು ಕೇಳುತ್ತಲೇ ಓಡೋಡಿ ಮನೆಗೆ ಬಂದ. ಪೊದೆಯಲ್ಲಿ ಅವಿತುಕೊಂಡ ಆತ ತನ್ನ ಕುಟುಂಬದ ಮೇಲೆ ಗ್ರಾಮಸ್ಥರು ದಾಳಿ ಮಾಡುವುದನ್ನು ಕಂಡ. ಹತ್ತಿರದ ಪಟ್ಟಣವಾದ ಜೌಸಾಲಾಕ್ಕೆ ಧಾವಿಸಿದ ಆತನು, ತನ್ನ ಬಂಧುವೊಬ್ಬರ ಮೂಲಕ ಪೊಲೀಸರಿಗೆ ಕರೆ ಮಾಡುವಲ್ಲಿ ಸಫಲನಾದ (ಇಲ್ಲಿ ನಿಮಗೆ ಪೊಲೀಸರು ಫೋನ್ ತೆಗೆಯಲು ಕೂಡಾ ನೀವು ವಶೀಲಿ ಮಾಡಬೇಕಾಗುತ್ತದೆ). ಆದರೂ ಅವರು ಬರಲೇ ಇಲ್ಲ. ಈ ಗುಂಪು ಸುರೇಖಾ, ಪ್ರಿಯಾಂಕಾ ಹಾಗೂ ಇಬ್ಬರು ಹುಡುಗರನ್ನು (ಅವರಲ್ಲೊಬ್ಬಾತ ಭಾಗಶಃ ಅಂಧ) ಮನೆಯಿಂದ ಹೊರಗೆ ದರದರನೆ ಎಳೆದೊಯ್ಯಿತು. ತಮ್ಮ ತಾಯಿ ಹಾಗೂ ಸಹೋದರಿಯ ಮೇಲೆಯೇ ಅತ್ಯಾಚಾರವೆಸಗುವಂತೆ ಗುಂಪು ಅವರಿಗೆ ಆದೇಶ ನೀಡಿದರು. ಅದಕ್ಕೆ ಈ ಹುಡುಗರು ನಿರಾಕರಿಸಿದಾಗ ಅವರ ಜನನಾಂಗಗಳನ್ನು ಕತ್ತರಿಸಲಾಯಿತು. ತರುವಾಯ ಅವರನ್ನು ಬರ್ಬರವಾಗಿ ಕಡಿದು ಕೊಲ್ಲಲಾಯಿತು. ಸುರೇಖಾ ಹಾಗೂ ಪ್ರಿಯಾಂಕಾ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಗುಂಪು, ಇಬ್ಬರಿಗೂ ಥಳಿಸಿ ಕೊಂದುಹಾಕಿತು. ಈ ನಾಲ್ವರ ಮೃತದೇಹಗಳನ್ನು ಸಮೀಪದ ಕಾಲುವೆಯೊಂದರ ಬಳಿ ಎಸೆಯಲಾಯಿತು, ಮಾರನೆಯ ದಿನ ಅವು ಪತ್ತೆಯಾದವು.

  ಮೊದಲಿಗೆ ಪತ್ರಿಕೆಗಳು, ಇದೊಂದು ‘ಮರ್ಯಾದಾ ಹತ್ಯೆ’ಯೆಂಬುದಾಗಿ ವರದಿ ಮಾಡಿದವು. ಸುರೇಖಾಳು ಬಂಧುವೊಬ್ಬನ (ಈ ವ್ಯಕ್ತಿಯ ಮೇಲೂ ಹಲ್ಲೆ ನಡೆದಿತ್ತು) ಜೊತೆ ಅನೈತಿಕ ಸಂಬಂಧ ಹೊಂದಿದ್ದಕ್ಕಾಗಿ ಗ್ರಾಮಸ್ಥರು ಆಕೆಯ ಬಗ್ಗೆ ಕುಪಿತರಾಗಿದ್ದರು ಎಂದು ಅವು ಬಣ್ಣಿಸಿದ್ದವು. ದಲಿತ ಸಂಘಟನೆಗಳು ಸಾಮೂಹಿಕ ಪ್ರತಿಭಟನೆಗಳನ್ನು ನಡೆಸಿದ ಪರಿಣಾಮ, ಕಾನೂನು ವ್ಯವಸ್ಥೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತು. ಈ ಭೀಕರ ಹತ್ಯಾಕಾಂಡದ ಕುರಿತ ಸಾಕ್ಷಾಧಾರಗಳನ್ನು ಹೇಗೆ ತಿರುಚಲಾಯಿತು ಎಂಬ ಬಗ್ಗೆ ನಾಗರಿಕ ಸತ್ಯಶೋಧನಾ ಸಮಿತಿಗಳು ವರದಿ ಮಾಡಿದವು. ಪ್ರಕರಣದ ಬಗ್ಗೆ ಕೆಳ ನ್ಯಾಯಾಲಯವು ಅಂತಿಮವಾಗಿ ತೀರ್ಪೊಂದನ್ನು ಪ್ರಕಟಿಸಿ, ಮುಖ್ಯ ಆರೋಪಿಗಳಿಗೆ ಮರಣದಂಡನೆ ಘೋಷಿಸಿತು. ಆದರೆ, ಈ ಪ್ರಕರಣವನ್ನು ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಪರಿಗಣಿಸಲು ಅದು ನಿರಾಕರಿಸಿತು. ಖೈರ್ಲಾಂಜಿ ಹತ್ಯಾಕಾಂಡವು ಸೇಡಿನ ಹಂಬಲದಿಂದ ನಡೆದ ಅಪರಾಧವಾಗಿದ್ದು, ಇಲ್ಲಿ ಅತ್ಯಾಚಾರ ನಡೆದಿರುವ ಬಗ್ಗೆ ಪುರಾವೆಗಳು ದೊರೆತಿಲ್ಲ ಹಾಗೂ ಈ ಕೊಲೆಗಳ ಹಿಂದೆ ಜಾತಿ ದೃಷ್ಟಿಕೋನವಿರಲಿಲ್ಲವೆಂದು ನ್ಯಾಯಾಧೀಶರು ತಿಳಿಸಿದ್ದರು. ಇದರಿಂದಾಗಿ ಉನ್ನತ ನ್ಯಾಯಾಲಯದಲ್ಲಿ ಪ್ರಕರಣದ ಅಪರಾಧಿಗಳಲ್ಲಿ ಕೆಲವರು ದೋಷಮುಕ್ತಗೊಂಡರೆ, ಇನ್ನು ಕೆಲವರ ಶಿಕ್ಷೆಯ ಪ್ರಮಾಣ ಕಡಿಮೆಯಾಯಿತು. ಭಾರತದಲ್ಲಿ ಹೀಗಾಗುವುದು ಹೊಸತೇನೂ ಅಲ್ಲ.

ಸುರೇಖಾ ಭೂತ್‌ಮಾಂಗೆ ಹಾಗೂ ಆಕೆಯ ಮಕ್ಕಳು ‘ಮಾರುಕಟ್ಟೆ ಸ್ನೇಹಿ’ ಪ್ರಜಾಪ್ರಭುತ್ವ ದಲ್ಲಿ ಬದುಕಿದ್ದರು. ಹೀಗಾಗಿ, ವಿಶ್ವಸಂಸ್ಥೆಯಿಂದ ಭಾರತ ಸರಕಾರಕ್ಕೆ ‘ನಾನು ಸುರೇಖಾ’ ಎಂಬ ಅರ್ಜಿಗಳು ಬರಲಿಲ್ಲ ಅಥವಾ ಇತರ ದೇಶ ಗಳ ವರಿಷ್ಠರಿಂದ ಯಾವುದೇ ಆಕ್ರೋಶದ ಸಂದೇಶ ಗಳು ರವಾನೆಯಾಗಲಿಲ್ಲ. ನಾವು ಅಸ್ಪಶ್ಯತೆ ಯನ್ನು ಆಚರಿಸುತ್ತಿದ್ದೇವೆಂಬ ಕಾರಣಕ್ಕೆ ನಮ್ಮ ಮೇಲೆ ಯಾರೂ ವಿಮಾನದಿಂದ ಬಾಂಬು ಗಳನ್ನು ಎಸೆಯಲಾರರೆಂಬುದು ನಮಗೆ ತಿಳಿದಿದೆ.

 1945ರಲ್ಲಿ ಅಂಬೇಡ್ಕರ್ ತಾನು ಬರೆದ ‘ಟು ದ ಅನ್‌ಟಚೇಬಲ್ಸ್’ ಲೇಖನದಲ್ಲಿ ಹಿಂದೂ ಧರ್ಮವು ಸಾಕ್ಷಾತ್ ಭಯಾನಕಗಳ ಕೊಠಡಿಯೆಂದು ಹಾಲಿ ಚಿಂತಕರಿಗೂ ಇರ ದಂತಹ ಅಸಾಧಾರಣವಾದ ಗಟ್ಟಿಗತನದೊಂದಿಗೆ ಹೇಳಿದ್ದಾರೆ. ತನ್ನ ಸಹ ಮಾನವಜೀವಿಗಳು ಭಯಾನಕ ಕೊಠಡಿಯಲ್ಲಿ ವಾಸವಾಗಿದ್ದಾರೆ ಎಂಬುದನ್ನು ಬಣ್ಣಿಸಲು ಅವರು ಅಸ್ಪಶ್ಯರು, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ಹಾಗೂ ಇತರ ಹಿಂದುಳಿದ ವರ್ಗಗಳಂತಹ ಪದಗಳನ್ನು ಬಳಸಬೇಕಾಯಿತು. ಅಂಬೇಡ್ಕರ್ ಅವರ ಅಸ್ಪಶ್ಯ ಎಂಬ ಪದವನ್ನು ಆಕ್ರೋಶದ ಭಾವನೆಯೊಂದಿಗೆ ಬಳಸಿದ್ದರು. ಇಂದು ಅಸ್ಪಶ್ಯ ಪದಕ್ಕೆ ಪರ್ಯಾಯವಾಗಿ ದಲಿತ (ಶೋಷಿತರು) ಎಂಬ ಪದ ಬಳಸಲಾಗುತ್ತಿದೆ ಹಾಗೂ ಅದು ಈಗ ಪರಿಶಿಷ್ಟ ಜಾತಿ ಪದಕ್ಕೆ ಪರ್ಯಾಪ್ತವಾಗಿ ಬಳಕೆಯಾಗುತ್ತಿದೆ.
 ಸಮಾಜ ಶಾಸ್ತ್ರಜ್ಞೆ ರೂಪಾ ವಿಶ್ವನಾಥ್ ಹೇಳುವ ಪ್ರಕಾರ, ಇದೊಂದು ತಪ್ಪಾದ ಪದ್ಧತಿಯಾಗಿದೆ. ಯಾಕೆಂದರೆ ದಲಿತ ಶಬ್ದವು ಜಾತಿಯ ಕಳಂಕದಿಂದ ಪಾರಾಗಲು ಇತರ ಧರ್ಮ ಗಳಿಗೆ ಮತಾಂತರಗೊಂಡ ಅಸ್ಪಶ್ಯರನ್ನೂ ಒಳಪಡುತ್ತದೆ (ಉದಾಹರಣೆಗೆ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡ ನನ್ನ ಗ್ರಾಮದ ಪರಯಾನ್‌ರಂತೆ), ಆದರೆ ಪರಿಶಿಷ್ಟ ಜಾತಿ ಪದವು ಹಾಗೆ ಅನ್ವಯವಾಗುವುದಿಲ್ಲ. ಹೀಗಾಗಿ ನಾನು ಗತಕಾಲದ ಬಗ್ಗೆ ಬರೆಯುವಾಗ ‘ಅಸ್ಪಶ್ಯ’ ಎಂಬ ಪದವನ್ನು ಹಾಗೂ ವರ್ತಮಾನ ಕಾಲದ ಕುರಿತು ಬರೆಯುವಾಗ ದಲಿತ ಎಂಬ ಪದವನ್ನು ಬಳಸುತ್ತೇನೆ. ಇತರ ಧರ್ಮಗಳಿಗೆ ಮತಾಂತರಗೊಂಡ ದಲಿತರ ಬಗ್ಗೆ ಬರೆಯುವಾಗ ನಾನು ದಲಿತ ಸಿಖ್ಖರು, ದಲಿತ ಮುಸ್ಲಿಮರು ಅಥವಾ ದಲಿತ ಕ್ರೈಸ್ತರು ಎಂದು ನಿರ್ದಿಷ್ಟವಾಗಿ ಹೇಳುತ್ತೇನೆ.

    ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ ಪ್ರಕಾರ, ಪ್ರತಿ ದಿನ 16 ನಿಮಿಷಗಳಿಗೊಮ್ಮೆ ದಲಿತನ ವಿರುದ್ಧ ದಲಿತೇತರನಿಂದ ಅಪರಾಧ ನಡೆಯುತ್ತಿದೆ. ಪ್ರತಿ ದಿನವೂ ನಾಲ್ಕಕ್ಕೂ ಅಧಿಕ ದಲಿತ ಮಹಿಳೆಯರ ಮೇಲೆ ಸವರ್ಣೀಯರಿಂದ ಅತ್ಯಾಚಾರವಾಗುತ್ತಿದೆ. ಪ್ರತಿ ವಾರ 13 ದಲಿತರ ಕಗ್ಗೊಲೆಯಾಗುತ್ತಿದೆ ಹಾಗೂ ಆರು ದಲಿತರ ಅಪಹರಣ ವಾಗುತ್ತಿದೆ. ದಿಲ್ಲಿಯಲ್ಲಿ 23 ವರ್ಷ ವಯಸ್ಸಿನ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು, ಆಕೆಯ ಕೊಲೆಯಾದ ಘಟನೆ ನಡೆದ 2012ನೆ ಇಸವಿಯೊಂದರಲ್ಲೇ ದೇಶಾದ್ಯಂತ 1,574 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. (ದಲಿತರ ವಿರುದ್ಧ ಕೇವಲ ಶೇ.10ರಷ್ಟು ಅತ್ಯಾಚಾರ ಮತ್ತಿತರ ಅಪರಾಧಗಳು ಮಾತ್ರವೇ ವರದಿಯಾಗುತ್ತಿವೆ) ಹಾಗೂ 651 ದಲಿತರ ಕೊಲೆಯಾಗಿದೆ. ಇದು ಕೇವಲ ಅತ್ಯಾಚಾರ ಹಾಗೂ ಕಗ್ಗೊಲೆಗಳ ಪ್ರಕರಣಗಳು ಮಾತ್ರವೇ ಆಗಿವೆ. ದಲಿತರನ್ನು ವಿವಸ್ತ್ರಗೊಳಿಸುವುದು ಹಾಗೂ ಅವರನ್ನು ನಗ್ನ ಮೆರವಣಿಗೆ ಮಾಡುವುದು ಹಾಗೂ ಅವರಿಗೆ ಬಲವಂತವಾಗಿ ಅಮೇಧ್ಯವನ್ನು ತಿನ್ನಿಸುವುದು, ಅವರ ಭೂಮಿಯನ್ನು ಸ್ವಾಧೀನಪಡಿಸುವುದು, ಸಾಮಾಜಿಕ ಬಹಿಷ್ಕಾರ ಹೇರುವುದು, ಕುಡಿಯುವ ನೀರು ದೊರೆಯದಂತೆ ನಿರ್ಬಂಧ ವಿಧಿಸುವಂತಹ ಪ್ರಕರಣಗಳು ಬೇರೆಯೇ ಇವೆ. 2005ರಲ್ಲಿ ತನ್ನ ಪುತ್ರಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸುವ ಧೈರ್ಯ ಪ್ರದರ್ಶಿಸಿದ ಪಂಜಾಬ್‌ನ ಮಝಾಬಿ ದಲಿತ ಸಿಖ್ಖನಾದ ಬಿಯಾಂತ್‌ಸಿಂಗ್‌ನ ಎರಡೂ ಕೈಗಳನ್ನು ಹಾಗೂ ಕಾಲನ್ನು ಕತ್ತರಿಸಿ ಹಾಕಲಾಗಿತ್ತು. ಹೀಗೆ ಅಂಗಾಂಗಗಳು ಕತ್ತರಿಸಲ್ಪಟ್ಟ ದಲಿತರ ಬಗ್ಗೆ ಪ್ರತ್ಯೇಕ ಅಂಕಿಅಂಶಗಳನ್ನು ಇರಿಸಲಾಗಿಲ್ಲ.

ನಿಜವಾದ ಮಾತಿನಲ್ಲಿ ಹೇಳುವುದಾದರೆ ಒಂದು ವೇಳೆ ಮೂಲಭೂತ ಹಕ್ಕುಗಳನ್ನು ಸಮಾಜವು ಉಲ್ಲಂಘಿಸಿದಲ್ಲಿ ಆಗ ಅವುಗಳನ್ನುಖಾತರಿಪಡಿಸಲು ಯಾವುದೇ ಕಾನೂನು, ಸಂಸತ್ತು ಅಥವಾ ನ್ಯಾಯಾಂಗಕ್ಕೆ ಸಾಧ್ಯವಾಗದು ಎಂದು ಅಂಬೇಡ್ಕರ್ ಹೇಳುತ್ತಾರೆ. ಅಮೆರಿಕ ದಲ್ಲಿ ನೀಗ್ರೋಗಳಿಗೆ, ಜರ್ಮನಿಯಲ್ಲಿ ಯಹೂದ್ಯರಿಗೆ ಹಾಗೂ ಭಾರತದಲ್ಲಿ ಅಸ್ಪಶ್ಯ ರಿಗೆ ಮೂಲ ಭೂತ ಹಕ್ಕುಗಳಿಂದ ಯಾವ ಪ್ರಯೋಜನವಿದೆ ಎಂದು ಬುರ್ಕೆ ಪ್ರಶ್ನಿಸುತ್ತಾರೆ. ಬಹುಸಂಖ್ಯೆಯ ಜನರನ್ನು ಶಿಕ್ಷಿಸಲು ಯಾವುದೇ ಸೂತ್ರಗಳು ಪತ್ತೆಯಾಗಿಲ್ಲ.
ಭಾರತದ ಯಾವುದೇ ಹಳ್ಳಿಯ ಪೊಲೀಸ್ ಜೊತೆ ನಿನ್ನ ಕೆಲಸವೇನೆಂದು ಕೇಳಿ. ಬಹುಶಃ ಆತ ‘‘ಶಾಂತಿಯನ್ನು ಕಾಪಾಡುವುದು’’ ಎನ್ನುತ್ತಾನೆ. ಹೆಚ್ಚಿನ ಸಮಯ ಜಾತಿ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ಮೂಲಕ ಅದು ನಡೆಯುತ್ತದೆ. ದಲಿತರ ಆಶೋತ್ತರಗಳ ಪ್ರಕಟನೆಯು ಶಾಂತಿಯ ಉಲ್ಲಂಘನೆಯಾಗಿದೆ.

ವರ್ಣಭೇದ, ಜನಾಂಗವಾದ, ಲಿಂಗಭೇದಭಾವ, ಆರ್ಥಿಕ ಸಾಮ್ರಾಜ್ಯಶಾಹಿವಾದ ಹಾಗೂ ಧಾರ್ಮಿಕ ಮೂಲಭೂತ ವಾದವನ್ನು ರಾಜಕೀಯವಾಗಿ ಹಾಗೂ ಬೌದ್ಧಿಕವಾಗಿ ಅಂತಾ ರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಶ್ನಿಸಲಾಗುತ್ತದೆ. ಮಾನವ ಸಮಾಜಕ್ಕೆ ತಿಳಿದಿರುವ ಅತ್ಯಂತ ಬರ್ಬರವಾದ ಶ್ರೇಣೀಕೃತ ಸಾಮಾಜಿಕ ಸಂಸ್ಥೆಗಳಲ್ಲೊಂದಾದ ಜಾತಿ ಪದ್ಧತಿ ಆಚರಣೆಯು, ಇದೇ ರೀತಿಯ ಪರಿಶೀಲನೆ ಹಾಗೂ ಖಂಡನೆ ಗೊಳಗಾಗುತ್ತವೆಯೇ?. ಪ್ರಾಯಶಃ ಇದು ಹಿಂದೂ ಧರ್ಮದ ಜೊತೆ ಮಿಳಿತಗೊಂಡಿ ರುವುದು ಹಾಗೂ ಆಧ್ಯಾತ್ಮಿಕತೆ, ಅಹಿಂಸೆ, ಸಹಿಷ್ಣುತೆ, ಶಾಖಾಹಾರವಾದ, ಗಾಂಧಿ, ಯೋಗ ಇತ್ಯಾದಿಗಳಂತೆ ಸದ್ಭಾವನೆಯೊಂದಿಗೆ ನೋಡಲಾಗುತ್ತಿದೆ. ಈ ಸಮಸ್ಯೆಗೆ ಪೂರಕವಾಗಿ ಜಾತಿ ವ್ಯವಸ್ಥೆಯು ಮಾನವನ ಬಣ್ಣದಿಂದ ಆಧಾರಿತವಾಗಿಲ್ಲ. ಹೀಗಾಗಿ ಅದನ್ನು ಸುಲಭ ವಾಗಿ ನೋಡಲು ಸಾಧ್ಯವಿಲ್ಲ. ಜಾತಿ ವ್ಯವಸ್ಥೆಯನ್ನು ಸಮರ್ಥಿ ಸುವವರು, ಜಾತಿಯು ಜನರನ್ನು ಹಾಗೂ ಸಮುದಾಯಗಳನ್ನು ಒಂದುಗೂಡಿಸುವ ಸಾಮಾಜಿಕ ಬಂಧವಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಜಾತಿ ವ್ಯವಸ್ಥೆಯು ಭಾರತೀಯ ಸಮಾಜವು ತಾನು ಎದುರಿಸಬೇಕಾದ ಹಲವು ಸವಾಲುಗಳನ್ನು ಮೆಟ್ಟಿನಿಲ್ಲಲು ಬೇಕಾದ ಬಲ ಹಾಗೂ ನಮನೀಯತೆ (flexibility) ಯನ್ನು ಒದಗಿಸಿಕೊಟ್ಟಿದೆಯೆಂದು ಅವರ ವಾದವಾಗಿದೆ.

ತಾರತಮ್ಯ ಹಾಗೂ ಹಿಂಸಾಚಾರವನ್ನು ಜನಾಂಗವಾದ ಅಥವಾ ವರ್ಣಭೇದದ ಜೊತೆ ಹೋಲಿಸಬೇಕೆಂಬ ಚಿಂತನೆಯನ್ನು ಭಾರತೀಯ ಆಡಳಿತ ವ್ಯವಸ್ಥೆಯು ತೀವ್ರವಾಗಿ ವಿರೋಧಿಸುತ್ತಿದೆ. ಡರ್ಬಾನ್‌ನಲ್ಲಿ 2001ರಲ್ಲಿ ನಡೆದ ವಿಶ್ವ ಜನಾಂಗೀಯವಾದ ವಿರೋಧಿ ಸಮಾವೇಶದಲ್ಲಿ ಜಾತಿ ಪಿಡುಗನ್ನು ಪ್ರಸ್ತಾವಿಸಲು ಯತ್ನಿಸಿದ ದಲಿತರನ್ನು ಅದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಜಾತಿ ಪದ್ಧತಿಯು ಒಂದು ಆಂತರಿಕ ವಿಷಯವೆಂದು ಅದು ವಾದಿಸಿತ್ತು. ಜಾತಿ ವ್ಯವಸ್ಥೆಯು, ಜನಾಂಗೀಯವಾದಕ್ಕಿಂತ ಸಂಪೂರ್ಣವಾಗಿ ವಿಭಿನ್ನವೆಂಬ ಕೆಲವು ಸಮಾಜಶಾಸ್ತ್ರಜ್ಞರ ಅನಿಸಿಕೆಗಳನ್ನು ಅದು ಪ್ರಚಾರ ಮಾಡಿತ್ತು.
 ಆದಾಗ್ಯೂ ದರ್ಬಾನ್ ಸಮಾವೇಶದ ಮಟ್ಟಿಗೆ ದಲಿತ ಚಳವಳಿಗಾರರು ಜನಾಂಗ, ಜಾತಿವಾದ ಹಾಗೂ ಜನಾಂಗೀಯ ವಾದವನ್ನು ಪರಸ್ಪರ ಹೋಲಿಸಬಹುದೆಂದು ವಾದಿಸಿದ್ದರು. ಈ ಭಾವನೆಗೆ ಏಕತೆಯನ್ನು ವ್ಯಕ್ತಪಡಿಸುವ ಉದ್ದೇಶದಿಂದ ವರ್ಣಭೇದ ವಿರೋಧಿ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಜೂ.ಅವರ 85ನೆ ಜನ್ಮವರ್ಷಾಚರಣೆಯ ಅಂಗವಾಗಿ 2014ರಲ್ಲಿ ವಾಶಿಂಗ್ಟನ್‌ನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಆಫ್ರಿಕನ್ ಅಮೆರಿಕನ್ನರು, ಭಾರತದಲ್ಲಿ ದಲಿತರ ಮೇಲಿನ ದೌರ್ಜನ್ಯವನ್ನು ಅಂತ್ಯಗೊಳಿ ಸುವುದಕ್ಕೆ ಕರೆ ನೀಡುವ ಪರಾನುಭೂತಿ ಘೋಷಣೆ (Declaration of empathy)ಗೆ ಸಹಿಹಾಕಿದ್ದರು.

   ನಾವು ಇಂದು ಜಾತಿ ವ್ಯವಸ್ಥೆಯೆಂದು ಏನನ್ನು ಕರೆಯುತ್ತೇವೆಯೋ ಅದು ಹಿಂದೂಧರ್ಮದ ಮೂಲಗ್ರಂಥಗಳಲ್ಲಿ ವರ್ಣಾಶ್ರಮ ಧರ್ಮ ಅಥವಾ ಚಾತುರ್ವರ್ಣ್ಯ ಎಂದು ಕರೆಯಲ್ಪಟ್ಟಿದೆ. ಹಿಂದೂ ಸಮಾಜದಲ್ಲಿ ಅಂದಾಜು 4 ಸಾವಿರ ಜಾತಿಗಳು ಹಾಗೂ ಉಪಜಾತಿಗಳಿವೆ. ಪ್ರತಿಯೊಂದು ಜಾತಿಯೂ ನಿರ್ದಿಷ್ಟ ಅನುವಂಶೀಯ ವೃತ್ತಿಯಿಂದ ಗುರುತಿಸಲ್ಪಡುತ್ತಿದೆ. ಹಿಂದೂ ಸಮಾಜವು ಬ್ರಾಹ್ಮಣರು (ಅರ್ಚಕರು), ಕ್ಷತ್ರಿಯರು (ಕ್ಷತ್ರಿಯರು), ವೈಶ್ಯರು (ವರ್ತಕರು), ಶೂದ್ರರು (ಸೇವಕರು) ಎಂದ ನಾಲ್ಕು ವರ್ಣಗಳಾಗಿ ವಿಭಜಿಸಲ್ಪಟ್ಟಿದೆ. ಈ ನಾಲ್ಕು ವರ್ಣಗಳ ಹೊರಗೆ ಅವರ್ಣ ಅಥವಾ ಅತಿಶೂದ್ರ ಜಾತಿಗಳಿವೆ. ಅವರನ್ನೂ ಕೂಡಾ, ಅಸ್ಪಶರು, ನೋಡಬಾರದವರು, ಸಮೀಪಿಸಬಾರದವರು ಎಂಬುದಾಗಿ ಶ್ರೇಣೀಕರಿಸಲಾಗಿದೆ. ಇವರ ಉಪಸ್ಥಿತಿ, ಸ್ಪರ್ಶ ಅಥವಾ ನೆರಳು ತಮ್ಮನ್ನು ಮಲಿನಗೊಳಿಸುವುದೆಂದು ಸವರ್ಣೀಯ ಹಿಂದೂ ಗಳು ಪರಿಗಣಿಸಿದ್ದಾರೆ.

ಕೆಲವು ಸಮುದಾಯಗಳಲ್ಲಿ ರಕ್ತಸಂಬಂಧದಲ್ಲಿ ವಿವಾಹವನ್ನು ತಪ್ಪಿಸಲು ಜಾತಿಯನ್ನು ಗೋತ್ರಗಳಾಗಿ ವಿಂಗಡಿಸಲಾಗಿದೆ. ಆಗ ಸಗೋತ್ರ ವಿವಾಹದ ವಿರುದ್ಧ ಅಷ್ಟೇ ಕಟ್ಟೆಚ್ಚರದ ಕಾವಲು ಕಾಯಲಾಗುತ್ತದೆ. ನಿಯಮವನ್ನು ಉಲ್ಲಂಂಘಿಸಿ ದವರ ಶಿರಚ್ಛೇದನ ಹಾಗೂ ಹತ್ಯೆಗಳನ್ನು ನಡೆಸಲು ಸಮುದಾಯದ ಮುಖ್ಯಸ್ಥರಿಂದ ಸಮ್ಮತಿಯೂ ದೊರೆಯುತ್ತದೆ. ಭಾರತದ ಪ್ರತಿಯೊಂದು ಪ್ರಾಂತವೂ, ಜಾತಿ ಆಧಾರಿತ ಕ್ರೌರ್ಯದಲ್ಲಿ ತನ್ನದೇ ಆದ ವಿಶಿಷ್ಟ ರೂಪ ವನ್ನು ಅಳವಡಿಸಿಕೊಂಡಿದೆ. ದಕ್ಷಿಣ ಅಮೆರಿಕದ ಹಳೆಯ ಜಿಮ್ ಕ್ರೊ ಕಾನೂನಿಗಿಂತಲೂ ಘೋರವಾದ ಅಲಿಖಿತ ವಾದ ಸಂಹಿತೆಯೊಂದು ಚಾಲ್ತಿಯಲ್ಲಿದೆ. ಅಸ್ಪಶ್ಯರನ್ನು ಪ್ರತ್ಯೇಕಿಸಲ್ಪಟ್ಟ ವಸಾಹತುಗಳಲ್ಲಿ ಬಲವಂತವಾಗಿ ವಾಸಿಸು ವಂತೆ ಮಾಡುವ ಜೊತೆಗೆ ಅವರಿಗೆ ಮೇಲ್ಜಾತಿಯ ಜನರು ಉಪಯೋಗಿಸುವ ಸಾರ್ವಜನಿಕ ರಸ್ತೆಯನ್ನು ಉಪಯೋಗಿಸಲು ಅವಕಾಶ ನೀಡಲಾಗುತ್ತಿರಲಿಲ್ಲ. ಅವರಿಗೆ ಸಾರ್ವಜನಿಕ ಬಾವಿಗಳಿಂದ ನೀರು ಕುಡಿಯಲೂ ಬಿಡುತ್ತಿರಲಿಲ್ಲ. ಹಿಂದೂ ದೇವಾಲಯಗಳಿಗೆ ಅವರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಮೇಲ್ಜಾತಿಯ ವರ ಶಾಲೆಗಳಲ್ಲಿ ಕಲಿಯಲು ಅವರಿಗೆ ಅವಕಾಶ ನೀಡಲಾಗುತ್ತಿರಲಿಲ್ಲ. ತಮ್ಮ ಮೇಲ್ಭಾಗದ ದೇಹವನ್ನು ಮುಚ್ಚಲೂ ಅವರಿಗೆ ಅನುಮತಿಯಿರಲಿಲ್ಲ. ಕೆಲವು ನಿರ್ದಿಷ್ಟ ಬಗೆಯ ಬಟ್ಟೆಗಳನ್ನು ಹಾಗೂ ನಿರ್ದಿಷ್ಟ ಬಗೆಯ ಒಡವೆಗಳನ್ನು ಮಾತ್ರವೇ ಧರಿಸಲು ಅವರಿಗೆ ಅನುಮತಿಯಿತ್ತು.

   ಅಂಬೇಡ್ಕರ್‌ರ ಜಾತಿಯಾದ ಮಹಾರರಂತಹ ಕೆಲವು ಜಾತಿಗಳ ಜನರು, ನೆಲದಲ್ಲಿ ಮೂಡಿದ ತಮ್ಮ ‘ಮಲಿನ’ವಾದ ಹೆಜ್ಜೆಗುರುತುಗಳನ್ನು ಗುಡಿಸಲು ತಮ್ಮ ಸೊಂಟಗಳಿಗೆ ಪೊರಕೆಗಳನ್ನು ಕಟ್ಟಿಕೊಂಡಿರಬೇಕಾಗಿತ್ತು. ಇತರರು ತಮ್ಮ ‘ಮಲಿನ’ವಾದ ಏಂಜಲನ್ನು ಸಂಗ್ರಹಿಸಲು ತಮ್ಮ ಕುತ್ತಿಗೆಗಳಿಗೆ ಪೀಕದಾನಿಗಳನ್ನು ನೇತುಹಾಕಿಕೊಂಡಿರಬೇಕಿತ್ತು. ಮೇಲ್ಜಾತಿಗಳ ಪುರುಷರಿಗೆ ಅಸ್ಪಶ್ಯ ಮಹಿಳೆಯರ ದೇಹದ ಮೇಲೆ ಸಂಪೂರ್ಣ ಹಕ್ಕಿತ್ತು. ಅವರ ದೃಷ್ಟಿಯಲ್ಲಿ ಪ್ರೀತಿಯು ಮಾಲಿನ್ಯವಾಗಿದ್ದರೆ, ಅತ್ಯಾಚಾರವು ಪರಿಶುದ್ಧವಾಗಿತ್ತು. ಭಾರತದ ಬಹುತೇಕ ಭಾಗಗಳಲ್ಲಿ ಇಂದಿಗೂ ಈ ಪ್ರವೃತ್ತಿ ಮುಂದುವರಿದಿದೆ.
   ಇಂತಹ ಸಾಮಾಜಿಕ ವ್ಯವಸ್ಥೆಯಲ್ಲಿ ವರ್ಣಾಶ್ರಮ ಧರ್ಮ ಕೂಡಾ ಸಾಲದೆಂಬಂತೆ, ಕರ್ಮದ ಹೊರೆಯನ್ನೂ ಹೊರಿಸಲಾಗಿದೆ. ಅಸ್ಪಶ್ಯರಾಗಿ ಜನಿಸಿದವರಲ್ಲಿ ತಾವು ಹಿಂದಿನ ಜನ್ಮದಲ್ಲಿ ಮಾಡಿದ ಕೆಟ್ಟ ಕೆಲಸಗಳಿಗಾಗಿ ಈ ಜನ್ಮದಲ್ಲಿ ಶಿಕ್ಷೆಯಾಗಿದೆಯೆಂಬ ಭಾವನೆಯನ್ನು ಬೆಳಸಲಾಗಿತ್ತು. ಇದರ ಪರಿಣಾಮವಾಗಿ ಅವರಿಗೆ ಈ ಜನ್ಮವೆಂಬುದು ಜೈಲು ಶಿಕ್ಷೆಯಂತಾಗಿದೆ. ಆತನು ಯಾವುದೇ ಮೇಲ್ಜಾತಿ ವಿರೋಧಿ ಕೃತ್ಯವೆಸಗಿದಲ್ಲಿ ಅವರು ಇನ್ನೊಂದು ಜನ್ಮದಲ್ಲಿಯೂ ಅಸ್ಪಶ್ಯ ಅಥವಾ ಶೂದ್ರನಾಗಿ ಜನಿಸುವ ಸರಪಣಿಯಲ್ಲಿ ಸಿಲುಕಿಕೊಳ್ಳಬೇಕಾಗುತ್ತಿತ್ತು.
 ‘ಜಾತಿ ವ್ಯವಸ್ಥೆಗಿಂತ ಕೆಟ್ಟದಾದ ಸಾಮಾಜಿಕ ಸಂಘಟನಾ ವ್ಯವಸ್ಥೆ ಇನ್ನೊಂದಿಲ್ಲ ವೆಂದು ಅಂಬೇಡ್ಕರ್ ಹೇಳಿದ್ದರು. ‘‘ಇದೊಂದು ಉಪಯುಕ್ತ ಚಟು ವಟಿಕೆಗಳಿಂದ ಜನರನ್ನು ನಿಸ್ತೇಜಗೊಳಿಸುವ, ನಿಷ್ಕ್ರಿಯಗೊಳಿಸುವ ಹಾಗೂ ಮೊಟಕುಗೊಳಿಸುವ ವ್ಯವಸ್ಥೆಯಾಗಿದೆ’’ ಎಂದಿದ್ದರು.

ಆದರೆ ಜಗತ್ತಿನಲ್ಲೇ ಅತ್ಯಂತ ಖ್ಯಾತಿ ಪಡೆದ ಭಾರತೀಯರಾದ ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ ಇದನ್ನು ಒಪ್ಪಿರಲಿಲ್ಲ. ಜಾತಿಯು ಭಾರತೀಯ ಸಮಾಜದ ಮೇಧಾವಿತನವನ್ನು ಪ್ರತಿನಿಧಿಸಿದೆಯೆಂದು ಅವರು ಭಾವಿಸಿದ್ದರು. 1921ರಲ್ಲಿ ಗುಜರಾತಿ ಪತ್ರಿಕೆ ನವಜೀವನ್‌ನಲ್ಲಿ ಅವರು ಹೀಗೆ ಬರೆದಿದ್ದರು:
  ‘‘ಒಂದು ವೇಳೆ ಸಾಮಾಜಿಕ ವ್ಯವಸ್ಥೆಯು ತಾನಾಗಿಯೇ ನಿಂತುಕೊಳ್ಳಲು ಸಾಧ್ಯವಾಗಿದ್ದೇ ಆದರೆ, ಅದು ಜಾತಿ ವ್ಯವಸ್ಥೆಯ ತಳಹದಿಯ ಮೇಲೆ ಸ್ಥಾಪನೆಯಾಗಿರುವುದೇ ಕಾರಣವಾಗಿದೆ. ಜಾತಿ ವ್ಯವಸ್ಥೆಯನ್ನು ನಾಶಪಡಿಸಿ, ಪಾಶ್ಚಾತ್ಯ ಐರೋಪ್ಯ ಸಾಮಾಜಿಕ ವ್ಯವಸ್ಥೆಯನ್ನು ಅಳ ವಡಿಸಿಕೊಳ್ಳುವುದಾದರೆ, ಹಿಂದೂಗಳು ಜಾತಿ ವ್ಯವಸ್ಥೆಯ ಆತ್ಮವಾದ ಆನುವಂಶಿಕ ವೃತ್ತಿ ಸಿದ್ಧಾಂತವನ್ನು ಕೈಬಿಡಬೇಕಾಗಿದೆ. ಆನುವಂಶಿಕ ತತ್ವವು ಆಧ್ಯಾತ್ಮಿಕ ತತ್ವವಾಗಿದೆ. ಅದನ್ನು ಬದಲಾಯಿಸುವುದೆಂದರೆ ಅವ್ಯವಸ್ಥೆಯನ್ನು ಸೃಷ್ಟಿಸಿದಂತಾಗಿದೆ. ನನ್ನ ಜನ್ಮದಲ್ಲಿ ನನ್ನನ್ನು ಬ್ರಾಹ್ಮಣನೆಂದು ಕರೆದುಕೊಳ್ಳಲು ಸಾಧ್ಯವಿಲ್ಲದಿದ್ದಲ್ಲಿ, ನಾನು ಬ್ರಾಹ್ಮಣನಾಗಿರುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಪ್ರತಿದಿನವೂ ಬ್ರಾಹ್ಮಣನೊಬ್ಬ ಶೂದ್ರನಾಗಿ ಹಾಗೂ ಶೂದ್ರನೊಬ್ಬ ಬ್ರಾಹ್ಮಣನಾಗಿ ಪರಿವರ್ತನೆಗೊಂಡಲ್ಲಿ ಅರಾಜಕತೆ ಉಂಟಾಗಲಿದೆ’’ ಎಂದವರು ಹೇಳಿದ್ದರು.


ಗಾಂಧೀಜಿಯವರು ಜಾತಿ ವ್ಯವಸ್ಥೆಯ ಅಭಿಮಾನಿಯಾಗಿ ದ್ದರೂ, ಜಾತಿಗಳ ನಡುವೆ ಶ್ರೇಣೀಕೃತ ವ್ಯವಸ್ಥೆಯಿರ ಬಾರದೆಂದು ಅವರು ನಂಬಿದ್ದರು. ಎಲ್ಲಾ ಜಾತಿಗಳನ್ನು ಸರಿಸಮಾನವೆಂದು ಪರಿಗಣಿಸಬೇಕು ಹಾಗೂ ಅವರ್ಣ ಜಾತಿಗಳನ್ನು, ಅತಿ ಶೂದ್ರರನ್ನು ವರ್ಣವ್ಯವಸ್ಥೆಯಡಿ ತರಬೇಕು. ‘‘ಜಾತಿ ಭ್ರಷ್ಟತೆಯು ಜಾತಿವ್ಯವಸ್ಥೆಯ ಉಪ ಉತ್ಪನ್ನವಾಗಿದೆ. ಜಾತಿಗಳು ಇರುವವರೆಗೆ ಜಾತಿಭ್ರಷ್ಟರು ಇದ್ದೇ ಇರುತ್ತಾರೆ.’’ ಎಂದವರ ವಾದವಾಗಿತ್ತು. ಸಾಮ್ರಾಜ್ಯಶಾಹಿ ಬ್ರಿಟಿಷ್ ಸರಕಾರ ಹಾಗೂ ಭಾರತ ಸರಕಾರದ ನಡುವೆ 1947ರಲ್ಲಿ ಅಧಿಕಾರ ಹಸ್ತಾಂತರಗೊಂಡು ಇದೀಗ ಹೆಚ್ಚುಕಮ್ಮಿ 70 ವರ್ಷಗಳೇ ಆಗಿವೆ. ಆದರೆ ಜಾತಿ ವ್ಯವಸ್ಥೆಯು ಗತ ಇತಿಹಾಸವಾಗಿದೆಯೇ?.
ಈಗ ಬಹಳಷ್ಟು ಬದಲಾಗಿದೆ. ಭಾರತವು ದಲಿತ ರಾಷ್ಟ್ರಪತಿ (ಕೆ.ಆರ್.ನಾರಾಯಣನ್) ಯನ್ನು ಹೊಂದಿತ್ತು ಹಾಗೂ ದಲಿತರೊಬ್ಬರು ಮುಖ್ಯ ನ್ಯಾಯಮೂರ್ತಿ ಕೂಡಾ ಆಗಿದ್ದಾರೆ. ದಲಿತರು ಮತ್ತಿತರ ಅಧೀನಜಾತಿಗಳ ಪ್ರಾಬಲ್ಯವಿರುವ ರಾಜಕೀಯ ಪಕ್ಷಗಳ ಬೆಳವಣಿಗೆ ಅಭೂತಪೂರ್ವವಾದುದು ಹಾಗೂ ಇನ್ನು ಕೆಲವು ರೀತಿಯಲ್ಲಿ ಕ್ರಾಂತಿಕಾರಕ, ಅಭಿವೃದ್ಧಿಯುತವಾಗಿದೆ. ರಾಜಕೀಯರಂಗದಲ್ಲಿ ದಲಿತರ ಸ್ವಾಭಿಮಾನದ ಪ್ರತಿಪಾದನೆಯು ಒಂದು ಉತ್ತಮ ಚಿಂತನೆಯಾಗಿದೆ.

ಬಹುಜನ ಸಮಾಜಪಕ್ಷ (ಬಿಎಸ್‌ಪಿ)ದಂತಹ ಪಕ್ಷಗಳ ವಿರುದ್ಧ ಹೊರಿಸಲಾದ ಭ್ರಷ್ಟಾಚಾರ ಹಾಗೂ ದುರ್ವರ್ತನೆಯ ಆರೋಪಗಳು, ಹಳೆಯ ರಾಜಕೀಯ ಪಕ್ಷಗಳಿಗೂ ದೊಡ್ಡಮಟ್ಟದಲ್ಲಿ ಅನ್ವಯಿಸುತ್ತದೆ. ಆದರೆ ಬಿಎಸ್‌ಪಿ ವಿರುದ್ಧ ಆರೋಪಗಳನ್ನು ಕಿವಿಕೊರೆಯುವಂತೆ ಹಾಗೂ ಅತ್ಯಂತ ಅಪಮಾನಕಾರಿಯಾದ ಧ್ವನಿಯೊಂದಿಗೆ ಹೊರಿಸಲಾಗಿದೆ. ಯಾಕೆಂದರೆ ಮಾಯಾವತಿ ಯಂತಹ ನಾಯಕಿ, ದಲಿತೆ ಹಾಗೂ ಏಕಾಂಗಿ ಮಹಿಳೆ. ತಾನು ಹೀಗಿರುವುದಕ್ಕೆ ಅವರಿಗೆ ಯಾವುದೇ ಬೇಸರವಿಲ್ಲ. ಬಿಎಸ್ಪಿಯ ವೈಫಲ್ಯ ಏನೇ ಇರಲಿ, ದಲಿತರ ಘನತೆಯನ್ನು ನಿರ್ಮಿಸುವಲ್ಲಿ ಅದರ ಕೊಡುಗೆಯನ್ನು ಕುಲ್ಲಕಗೊಳಿಸಲು ಸಾಧ್ಯವಿಲ್ಲ.
ಸೋವಿಯತ್ ಒಕ್ಕೂಟದ ಪತನದ ಬಳಿಕ ಅಲಿಪ್ತ ರಾಷ್ಟ್ರ ಚಳವಳಿಯ ಮುಂಚೂಣಿಯಲ್ಲಿದ್ದ ಭಾರತವು, ಅಮೆರಿಕ ಹಾಗೂ ಇಸ್ರೇಲ್‌ನ ಸಹಜ ಜೊತೆಗಾರನಾಗಿ ಮರುನೆಲೆಯನ್ನು ಕಂಡಿದೆ. 1990ರ ದಶಕದಲ್ಲಿ ಭಾರತ ಸರಕಾರವು, ನಾಟಕೀಯವಾಗಿ ಆರ್ಥಿಕ ಸುಧಾರಣೆಗಳ ಪ್ರಕ್ರಿಯೆಯನ್ನು ಆರಂಭಿಸಿತ್ತು. ಈ ಮೊದಲು ಸಂರಕ್ಷಿತ ಮಾರುಕಟ್ಟೆಯಾಗಿದ್ದ ಅದು ಜಾಗತಿಕ ಬಂಡವಾಳಕ್ಕೆ ತನ್ನನ್ನು ತೆರೆದುಕೊಂಡಿತು. ಸಮೃದ್ಧ ಪ್ರಾಕೃತಿಕ ಸಂಪನ್ಮೂಲಗಳು, ಸಾರ್ವಜನಿಕರ ಹಣದೊಂದಿಗೆ ಸುಮಾರು 50 ವರ್ಷಗಳಿಂದ ಅಭಿವೃದ್ಧಿಪಡಿಸಲ್ಪಟ್ಟ ಅಗತ್ಯ ಸೇವೆಗಳು ಹಾಗೂ ರಾಷ್ಟ್ರೀಯ ಮೂಲಸೌಕರ್ಯಗಳು ಈಗ ಖಾಸಗಿ ಕಾರ್ಪೊರೇಷನ್‌ಗಳ ಪಾಲಾಗಿವೆ.
ಇದಾದ 20 ವರ್ಷಗಳ ಬಳಿಕ, ಅಭೂತಪೂರ್ವ ಒಟ್ಟು ಆಂತರಿಕ ಉತ್ಪನ್ನ ದರದ ಬೆಳವಣಿಗೆಯ ಹೊರತಾಗಿಯೂ (ಇದು ಇತ್ತೀಚೆಗೆ ಕುಂಠಿತಗೊಂಡಿದೆ),ನೂತನ ಆರ್ಥಿಕ ನೀತಿಗಳು ಕೆಲವೇ ಕೆಲವು ಜನರ ಕೈಯಲ್ಲಿ ಕೇಂದ್ರೀಕೃತವಾಗಿದೆ. ಇಂದು ಭಾರತದ ಅತಿ ಸಿರಿವಂತ 100 ಮಂದಿಯ ಕೈಯಲ್ಲಿರುವ ಸಂಪತ್ತು ದೇಶವು ಸಂಭ್ರಮದಿಂದ ಹೇಳಿಕೊಳ್ಳುವ ಒಟ್ಟು ಜಿಡಿಪಿಯ ನಾಲ್ಕನೆ ಒಂದರಷ್ಟಿದೆ. 120 ಕೋಟಿ ಜನರಿರುವ ಈ ದೇಶದಲ್ಲಿ 80 ಕೋಟಿಗೂ ಅಧಿಕ ಮಂದಿ ದಿನಕ್ಕೆ 20 ರೂ.ಗೂ ಕಡಿಮೆ ಹಣದಲ್ಲಿ ಬದುಕುತ್ತಿದ್ದಾರೆ. ದೈತ್ಯ ಕಂಪೆನಿಗಳು ವಸ್ತುಶಃ ದೇಶವನ್ನು ಆಳುತ್ತಿವೆ. ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳು ಬೃಹತ್ ಉದ್ಯಮ ಕಂಪೆನಿಗಳ ಅಧೀನ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತಿವೆ.

  ಪಾರಂಪರಿಕ ಜಾತಿ ಜಾಲಗಳ ಮೇಲೆ ಇದು ಯಾವ ರೀತಿಯ ಪರಿಣಾಮವನ್ನು ಬೀರಿದೆ?. ಜಾತಿಗಳು ಭಾರತೀಯ ಸಮಾಜಕ್ಕೆ ಚೈತನ್ಯವನ್ನು ನೀಡಿದೆ ಹಾಗೂ ಕೈಗಾರಿಕಾಕ್ರಾಂತಿಯ ಬಳಿಕ ಪಾಶ್ಚಾತ್ಯ ಸಮಾಜದಂತೆ ಚಿಂದಿಚೂರಾಗುವುದರಿಂದ ಹಾಗೂ ವಿಭಜನೆಗೊಳ್ಳುವುದನ್ನು ತಪ್ಪಿಸಿದೆಯೆಂದು ಕೆಲವರು ವಾದಿಸುತ್ತಾರೆ. ಇತರರು ಇದಕ್ಕೆ ತದ್ವಿರುದ್ಧವಾಗಿ ವಾದಿಸುತ್ತಾರೆ. ನಗರೀಕರಣದ ಅಸದೃಶ ಮಟ್ಟಗಳು ಹಾಗೂ ನೂತನ ವೃತ್ತಿ ಪರಿಸರದ ಸೃಷ್ಟಿಯು ಹಳೆಯ ವ್ಯವಸ್ಥೆಯನ್ನೇ ಅಲುಗಾಡಿಸಿದೆ ಹಾಗೂ ಜಾತಿ ಶ್ರೇಣೀಕೃತ ವ್ಯವಸ್ಥೆಯನ್ನು ಅಪ್ರಸ್ತುತಗೊಳಿಸಿದೆ. ಈ ಎರಡೂ ವಾದಗಳು ಗಂಭೀರ ಪರಿಗಣನೆಗೆ ಯೋಗ್ಯವಾದುದಾಗಿವೆ.
       ಫೋರ್ಬ್ಸ್ ಪತ್ರಿಕೆಯು ಇತ್ತೀಚೆಗೆ 55 ಮಂದಿ ಭಾರತೀಯ ಡಾಲರ್ ಶತಕೋಟ್ಯಧಿಪತಿಗಳ ಪಟ್ಟಿಯನ್ನು ಪ್ರಕಟಿಸಿತ್ತು. ಸಹಜವಾಗಿ ಈ ಅಂಕಿಅಂಶಗಳು ಘೋಷಿತ ಸಂಪತ್ತನ್ನು ಆಧರಿಸಿದ್ದಾಗಿದೆ. ಈ ಡಾಲರ್ ಶತಕೋಟ್ಯಧಿಪತಿಗಳ ಸಾಲಿನಲ್ಲಿ ಸಂಪತ್ತಿನ ವಿತರಣೆಯು ಕಡಿದಾದ ಪಿರಾಮಿಡ್ ಆಗಿದ್ದು, ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನದಲ್ಲಿರುವವರ ಒಟ್ಟು ಸಂಪತ್ತು, ಅವರಿಗಿಂತ ಕೆಳಸ್ಥಾನದಲ್ಲಿರುವ ಉಳಿದ 45 ಮಂದಿಯ ಒಟ್ಟು ಸಂಪತ್ತನ್ನು ಮೀರಿಸುತ್ತದೆ. ಮೊದಲ ಹತ್ತು ಸ್ಥಾನದಲ್ಲಿರುವ 10 ಮಂದಿಯಲ್ಲಿ ಏಳು ಮಂದಿ ವೈಶ್ಯ ಜಾತಿಗೆ ಸೇರಿದವರಾಗಿದ್ದಾರೆ. ಇವರೆಲ್ಲರೂ ಜಗತ್ತಿನಾದ್ಯಂತ ಔದ್ಯಮಿಕ ಹಿತಾಸಕ್ತಿಗಳನ್ನು ಹೊಂದಿರುವ ಬೃಹತ್ ಕಾರ್ಪೊರೇಟ್ ಕಂಪೆನಿಗಳ ಸಿಇಒಗಳಾಗಿದ್ದಾರೆ. ಅವರು ಬಂದರುಗಳು, ಗಣಿಗಳು,ಅನಿಲಬಾವಿಗಳು, ಶಿಪ್ಪಿಂಗ್ ಕಂಪೆನಿಗಳು, ಫಾರ್ಮಾಸ್ಯೂಟಿಕಲ್ ಕಂಪೆನಿಗಳು, ಟೆಲಿಫೋನ್ ಜಾಲತಾಣಗಳು, ಪೆಟ್ರೋಕೆಮಿಕಲ್ ಸ್ಥಾವರಗಳು, ಅಲ್ಯೂಮಿನಿಯಂ ಘಟಕಗಳು, ಮೊಬೈಲ್ ಫೋನ್ ಜಾಲಗಳು, ಟಿ.ವಿ.ಚಾನೆಲ್‌ಗಳು, ತಾಜಾ ಆಹಾರ ಘಟಕಗಳು, ಹೈಸ್ಕೂಲ್‌ಗಳು, ಚಿತ್ರ ನಿರ್ಮಾಣ ಸಂಸ್ಥೆಗಳು, ಕಾಂಡಕೋಶ (ಸ್ಟೆಮ್ ಸೆಲ್) ಸಂಗ್ರಹಣಾ ವ್ಯವಸ್ಥೆಗಳು, ವಿದ್ಯುತ್ ಪೂರೈಕೆ ಜಾಲಗಳು ಹಾಗೂ ವಿಶೇಷ ಆರ್ಥಿಕ ವಲಯಗಳನ್ನು ಹೊಂದಿದ್ದಾರೆ. ಉಳಿದ 45 ಮಂದಿಯಲ್ಲೂ ಕೂಡಾ 19 ಮಂದಿ ವೈಶ್ಯರಿದ್ದಾರೆ.ಉಳಿದ ಬಹುತೇಕ ಮಂದಿ ಪಾರ್ಸಿಗಳು, ಬೊಹ್ರಾಗಳು ಹಾಗೂ ಖತ್ರಿಗಳು (ಎಲ್ಲಾ ವ್ಯಾಪಾರಿ ಜಾತಿಗಳು) ಹಾಗೂ ಬ್ರಾಹ್ಮಣರಾಗಿದ್ದಾರೆ. ಆದರೆ ಪಟ್ಟಿಯಲ್ಲಿ ದಲಿತರು ಅಥವಾ ಆದಿವಾಸಿಗಳು ಇಲ್ಲವೇ ಇಲ್ಲ.

  ಬೃಹತ್ ಉದ್ಯಮ ಸಂಸ್ಥೆಗಳ ಹೊರತಾಗಿ, ಬನಿಯಾಗಳು (ವೈಶ್ಯರು) ನಗರಗಳಲ್ಲಿ ಸಣ್ಣ ಉದ್ಯಮ ಹಾಗೂ ಸಾಂಪ್ರದಾಯಿಕ ಸಾಲನೀಡಿಕೆ ವ್ಯವಸ್ಥೆಯ ಮೇಲೆ ತಮ್ಮ ಹಿಡಿತವನ್ನು ಮುಂದುವರಿಸಿದ್ದಾರೆ. ಮಧ್ಯಭಾರತದ ದಟ್ಟಾರಣ್ಯ ಗಳಲ್ಲಿ ವಾಸಿಸುವವರು ಸೇರಿದಂತೆ ಲಕ್ಷಾಂತರ ಬಡ ರೈತರು ಹಾಗೂ ಆದಿವಾಸಿಗಳು ಸೇರಿದಂತೆ ಇವರ ಸಾಲದ ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಈಶಾನ್ಯ ಭಾರತದ ಬುಡಕಟ್ಟು ಪ್ರಾಬಲ್ಯದ ರಾಜ್ಯಗಳಾದ ಅರುಣಾಚಲಪ್ರದೇಶ, ಮಣಿಪುರ, ಮಿರೆರಾಂ, ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್ ಹಾಗೂ ಅಸ್ಸಾಂ ಸ್ವಾತಂತ್ರ ದೊರೆತಾಗಿನಿಂದಲೂ ಬಂಡುಕೋರ ಚಟುವಟಿಕೆ, ಮಿಲಿಟರೀಕರಣ ಹಾಗೂ ರಕ್ತಪಾತಕ್ಕೆ ಸಾಕ್ಷಿಗಳಾಗಿವೆ. ಇವೆಲ್ಲದರ ನಡುವೆಯ ಮಾರ್ವಾಡಿ ಹಾಗೂ ಬನಿಯಾ ವರ್ತಕರು ಅಲ್ಲಿ ನೆಲೆಸಿ, ಸದ್ದಿಲ್ಲದೆ ತಮ್ಮ ಉದ್ಯಮಗಳನ್ನು ಬಲಪಡಿಸಿಕೊಂಡಿದ್ದಾರೆ. ಈಗ ಅವರು ಈ ಪ್ರಾಂತದ ಬಹುತೇಕ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದಾರೆ.

 1931ರ ಜನಗಣತಿಯಲ್ಲಿ, ಕಟ್ಟಕಡೆಯದಾಗಿ ಜಾತಿಯನ್ನು ಕೂಡಾ ಜನಗಣತಿಯ ಅಂಶ ವೊಂದಾಗಿ ಸೇರ್ಪಡೆಗೊಳಿಸಲಾಗಿತ್ತು. ವೈಶ್ಯರು ಒಟ್ಟು ಜನಸಂಖ್ಯೆಯ 20.7 ಶೇಕಡದಷ್ಟಿದ್ದರೆ, ಅಸ್ಪಶ್ಯರ ಸಂಖ್ಯೆ ಶೇ.12.5 ಆಗಿದೆ. ಉತ್ತಮ ಆರೋಗ್ಯ ಪಾಲನೆ ಹಾಗೂ ತಮ್ಮ ಮಕ್ಕಳಿಗೆ ಹೆಚ್ಚು ಭದ್ರತೆಯನ್ನು ಒದಗಿಸುವ ವಿಷಯಗಳಲ್ಲಿ ಏರಿಕೆಯಾಗುವ ಬದಲು ಕುಸಿತವುಂಟಾಗಿದೆ. ಆದಾಗ್ಯೂ, ನೂತನ ಆರ್ಥಿಕತೆಯ ಮೇಲೆ ಅವರ ಹಿಡಿತವು ಅಸಾಧಾರಣವಾಗಿದೆ. ದೊಡ್ಡ ಹಾಗೂ ಸಣ್ಣ ಉದ್ಯಮಗಳಲ್ಲಿ, ಕೃಷಿ ಹಾಗೂ ಕೈಗಾರಿಕೆ,ಜಾತಿ ಹಾಗೂ ಬಂಡವಾಳಶಾಹಿವಾದವು, ಭಾರತೀಯ ಸಂಸ್ಕೃತಿಯ ಜೊತೆ ಬೆಸೆದುಕೊಂಡಿದೆ.


     ವೈಶ್ಯರು ಕೇವಲ ತಮಗೆ ದೈವಿಕವಾಗಿ ಆದೇಶಿಸಲ್ಪಟ್ಟ ವೃತ್ತಿಯನ್ನು ಮಾಡುತ್ತಿದ್ದಾರೆ. ಸರಿಸುಮಾರು ಕ್ರಿ.ಪೂ. 350ರಲ್ಲಿ ಬರೆಯಲಾದ ಪುರಾತನ ಭಾರತೀಯ ರಾಜಕೀಯ ಗ್ರಂಥವಾದ ಅರ್ಥಶಾಸ್ತ್ರವು, ದುಬಾರಿ ಬಡ್ಡಿದರವನ್ನು ವಿಧಿಸುವುದು ವೈಶ್ಯನ ಹಕ್ಕೆಂದು ಪ್ರತಿಪಾದಿಸುತ್ತದೆ. ಮನುಸ್ಮತಿ (ಕ್ರಿ.ಶ.150)ಯು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಿವಿಧ ವರ್ಣಗಳಿಗೆ ವಿಧಿಸಬೇಕಾದ ಬಡ್ಡಿದರವನ್ನು ವಿವರಿಸಿದೆ. ಬ್ರಾಹ್ಮಣರಿಗೆ ಮಾಸಿಕ 2 ಶೇ., ವೈಶ್ಯರಿಗೆ 4 ಶೇ. ಹಾಗೂ ಶೂದ್ರರಿಗೆ 5 ಶೇ. ಬಡ್ಡಿಯನ್ನು ವಿಧಿಸಬಹುದೆಂದು ಹೇಳಿದೆ. ವಾರ್ಷಿಕ ಆಧಾರದಲ್ಲಿ ಬ್ರಾಹ್ಮಣನು 24 ಶೇ. ಹಾಗೂ ಶೂದ್ರರು ಮತ್ತು ದಲಿತರಿಗೆ 60 ಶೇ. ಬಡ್ಡಿಯನ್ನು ವಿಧಿಸಬೇಕೆನ್ನುತ್ತದೆ. ಇಂದಿಗೂ ಕೂಡಾ ಸಾಲಿಗರು, ಸೋತುಸುಣ್ಣವಾಗಿರುವ ರೈತರು ಹಾಗೂ ಭೂರಹಿತ ಕಾರ್ಮಿಕರಿಗೆ ಸಾಲದ ಮೇಲೆ 60 ಶೇಕಡ ಬಡ್ಡಿದರವನ್ನು ವಿಧಿಸುತ್ತಾರೆ. ಒಂದು ವೇಳೆ ಪಾವತಿಸಲು ಸಾಧ್ಯವಾಗದಿದ್ದರೆ, ಅವರು ‘ದೈಹಿಕ ಬಡ್ಡಿ’ಯೆಂದು ಹೇಳಲಾಗುವ ಅಂದರೆ ತಲೆಮಾರಿನಿಂದ ತಲೆಮಾರಿಗೆ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ಜೀತದಾಳಾಗಿ ಸಾಲಗಾರನ ಸುತ್ತ ಸುಳಿದಾಡಬೇಕಾಗುತ್ತದೆ. ಪುರಾತನ ಹಿಂದೂ ಸಂಹಿತೆಯಾದ ಮನುಸ್ಮತಿಯು ಕೆಳಜಾತಿಗೆ ಸೇರಿದ ಯಾವುದೇ ವ್ಯಕ್ತಿಯ ಸೇವೆ ಮಾಡಬಾರದೆಂದು ಹೇಳಿದೆ.

ವೈಶ್ಯರು ಭಾರತದ ಉದ್ಯಮರಂಗವನ್ನು ನಿಯಂತ್ರಿಸುತ್ತಿದ್ದಾರೆ. ಆದರೆ ಭೂಸುರರಾದ ಬ್ರಾಹ್ಮಣರೇನು ಮಾಡುತ್ತಿದ್ದಾರೆ?. 1931ರ ಜನಗಣತಿಯು ಅವರ ಸಂಖ್ಯೆಯು ದೇಶದ ಒಟ್ಟು ಜನಸಂಖ್ಯೆಯ ಶೇ.6.4 ರಷ್ಟಿದೆಯೆಂದು ಹೇಳಿದೆ. ಆದರೆ ವೈಶ್ಯರಂತೆ ಅವರ ಶೇಕಡವಾರು ಪ್ರಮಾಣ ಕೂಡಾ ಬಹುಶಃ ಕುಸಿದಿದೆ. ಅಭಿವೃದ್ಧಿಯುತ ಸಮಾಜಗಳ ಅಧ್ಯಯನ ಕೇಂದ್ರ ನಡೆಸಿದ ಸಮೀಕ್ಷೆಯ ಪ್ರಕಾರ ಸಂಸತ್‌ನ ಅಸಮಾನ ಪ್ರಮಾಣದಲ್ಲಿ ಅಧಿಕ ಸಂಖ್ಯೆಯ ಪ್ರತಿನಿಧಿಗಳನ್ನು ಹೊಂದಿರುವ ಹೊರತಾಗಿಯೂ, ಬ್ರಾಹ್ಮಣರ ಸಂಖ್ಯೆ ಯಲ್ಲಿ ನಾಟಕೀಯ ರೀತಿಯಲ್ಲಿ ಇಳಿ ಮುಖ ವಾಗಿದೆ. ಅಂದರೆ ಬ್ರಾಹ್ಮಣರ ಪ್ರಭಾವ ಕಡಿಮೆಯಾಗುತ್ತಿದೆಯೇ?.
ಅಂಬೇಡ್ಕರ್ ಪ್ರಕಾರ 1948ರಲ್ಲಿ ಶೇ.3ರಷ್ಟು ಜನಸಂಖ್ಯೆಯನ್ನು ಹೊಂದಿದ್ದ ಬ್ರಾಹ್ಮಣರು, ಸರಕಾರಿ ಉದ್ಯೋಗಳಲ್ಲಿ ಶೇ. 37ರಷ್ಟು ಗೆಜೆಟೆಡ್ ಅಧಿಕಾರಿ ಹುದ್ದೆಗಳನ್ನು ಹಾಗೂ 43 ಶೇ. ನಾನ್‌ಗೆಜೆಟೆಡ್ ಹುದ್ದೆಗಳನ್ನು ಹೊಂದಿದ್ದರೆಂದು ಸಾಹಿತಿ ಖುಷ್ವಂತ್‌ಸಿಂಗ್ 1990ರಲ್ಲಿ ಪ್ರಕಟಿಸಿದ ಬ್ರಾಹ್ಮಿನ್ ಪವರ್ ಲೇಖನದಲ್ಲಿ ಹೇಳಿದ್ದಾರೆ.

‘‘ಬ್ರಾಹ್ಮಣರು ನಮ್ಮ ದೇಶದ ಒಟ್ಟು ಜನಸಂಖ್ಯೆಯ ಶೇ.3.5ಕ್ಕಿಂತ ಹೆಚ್ಚಿಲ್ಲ. ಇಂದು ಅವರು ಶೇ.70ರಷ್ಟು ಸರಕಾರಿ ಹುದ್ದೆಗಳನ್ನು ಹೊಂದಿದ್ದಾರೆ. ಈ ಅಂಕಿಸಂಖ್ಯೆಯು ಕೇವಲ ಗೆಜೆಟೆಡ್ ಹುದ್ದೆಗಳನ್ನು ಮಾತ್ರವೇ ಪ್ರಸ್ತಾವಿಸುತ್ತಿದೆಯೆಂದು ನಾನು ಊಹಿಸುತ್ತೇನೆ. ನಾಗರಿಕ ಸೇವೆಯ ಉನ್ನತ ಸ್ತರದಲ್ಲಿ, ಉಪಕಾರ್ಯದರ್ಶಿ ಹುದ್ದೆಯಿಂದ ಮೇಲ್ಮುಖವಾಗಿ ಪ್ರತಿ 500 ಮಂದಿ ಯಲ್ಲಿ 310 ಮಂದಿ ಬ್ರಾಹ್ಮಣರು ಅಂದರೆ ಶೇ.63ರಷ್ಟಿದ್ದಾರೆ. 26 ಮಂದಿ ಮುಖ್ಯ ರಾಜ್ಯ ಕಾರ್ಯ ದರ್ಶಿಗಳಲ್ಲಿ 19 ಮಂದಿ ಬ್ರಾಹ್ಮಣರು, 27 ರಾಜ್ಯಪಾಲರು ಹಾಗೂ ಲೆ.ಗವರ್ನರ್‌ಗಳಲ್ಲಿ 13 ಮಂದಿ ಬ್ರಾಹ್ಮಣರಾಗಿದ್ದಾರೆ. 16 ಮಂದಿ ಸುಪ್ರೀಂಕೋರ್ಟ್ ನ್ಯಾಯಾಧೀಶರಲ್ಲಿ 9 ಮಂದಿ ಬ್ರಾಹ್ಮಣರು. ಹೈಕೋರ್ಟ್‌ಗಳ 330 ಮಂದಿ ನ್ಯಾಯಾಧೀಶರಲ್ಲಿ 166 ಮಂದಿ ಬ್ರಾಹ್ಮಣರು, 140 ರಾಯಭಾರಿಗಳಲ್ಲಿ 58 ಮಂದಿ ಬ್ರಾಹ್ಮಣರು. ಒಟ್ಟು 3300 ಭಾರತೀಯ ಆಡಳಿತಾತ್ಮಕ ಸೇವೆಯ ಅಧಿಕಾರಿಗಳಲ್ಲಿ 2376 ಮಂದಿ ಬ್ರಾಹ್ಮಣರು.
‘‘ಚುನಾಯಿತ ಹುದ್ದೆಗಳಲ್ಲಿ ಅವರ ಸಾಧನೆ ಉತ್ತಮವಾಗಿದೆ. 508 ಲೋಕಸಭಾ ಸದಸ್ಯರಲ್ಲಿ 190 ಮಂದಿ ಬ್ರಾಹ್ಮಣರು. 244 ರಾಜ್ಯಸಭಾ ಸದಸ್ಯರಲ್ಲಿ 89 ಮಂದಿ ಬ್ರಾಹ್ಮಣರು. ಶೇ. 3.5 ಜನಸಂಖ್ಯೆಯಿರುವ ಬ್ರಾಹ್ಮಣರು ದೇಶದಲ್ಲಿ ಲಭ್ಯವಿರುವ ಎಲ್ಲಾ ರೀತಿಯ ಶೇ. 36ರಿಂದ 63 ಶೇಕಡದಷ್ಟು ಪುಷ್ಕಳ ಹುದ್ದೆಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಇದು ಹೇಗಾಯಿತೆಂದು ನನಗೆ ತಿಳಿದಿಲ್ಲ. ಆದರೆ ಬ್ರಾಹ್ಮಣರು ಉನ್ನತ ಐಕ್ಯೂ (ಬುದ್ಧಿಮತ್ತೆ) ಇದಕ್ಕೆ ಕಾರಣವೆಂದು ನಾನು ನಂಬಲಾರೆ.’’
ಖುಷ್ವಂತ್‌ಸಿಂಗ್ ಉಲ್ಲೇಖಿಸಿದ ಈ ಅಂಕಿಅಂಶಗಳು ಈಗ ಒಂದು ಶತಮಾನದಷ್ಟು ಹಳೆಯದು. ವಸ್ತುಸ್ಥಿತಿಯ ಅಧ್ಯಯನಕ್ಕೆ ಕೆಲವು ನೂತನ ಗಣತಿ ಆಧಾರಿತ ಮಾಹಿತಿಯು ಇನ್ನಷ್ಟು ನೆರವಾಗುವುದಾದರೂ, ಸದ್ಯಕ್ಕೆ ಹಾಗೆ ನಡೆಯುವ ಸಾಧ್ಯತೆಗಳಿಲ್ಲ. ಅಭಿವೃದ್ಧಿ ಸಮಾಜಗಳ ಅಧ್ಯಯನ ಕೇಂದ್ರ (ಸಿಎಸ್‌ಡಿಎಸ್)ನಡೆಸಿದ ಸಮೀಕ್ಷೆಯ ಪ್ರಕಾರ, 1950ರಿಂದ 2000 ನಡುವೆ ಕಾರ್ಯನಿರ್ವಹಿಸಿದ ಶೇ.47ರಷ್ಟು ಸುಪ್ರೀಂಕೋರ್ಟ್ ನ್ಯಾಯಾಧೀಶರು ಬ್ರಾಹ್ಮಣರಾಗಿದ್ದಾರೆ. ಇದೇ ಅವಧಿಯಲ್ಲಿ ಹೈಕೋರ್ಟ್ ಹಾಗೂ ಕೆಳ ನ್ಯಾಯಾಲಯಗಳಲ್ಲಿರುವ ಶೇ.40ರಷ್ಟು ಸಹ ನ್ಯಾಯಾಧೀಶರು ಬ್ರಾಹ್ಮಣರು. ಹಿಂದುಳಿದ ವರ್ಗಗಳ ಆಯೋಗವು 2007ರಲ್ಲಿ ಸಲ್ಲಿಸಿದ ವರದಿಯಲ್ಲಿ ಭಾರತೀಯ ಅಧಿಕಾರಶಾಹಿಯ ಶೇ.31.17ರಷ್ಟು ಬ್ರಾಹ್ಮಣರದ್ದಾಗಿದೆ. ಅವರಲ್ಲಿ ಬಹುತೇಕ ಮಂದಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.
   ಬ್ರಾಹ್ಮಣರು ಕೂಡಾ ಸಾಂಪ್ರದಾಯಿಕವಾಗಿ ಮಾಧ್ಯಮದ ಮೇಲೆ ಪ್ರಾಬಲ್ಯವನ್ನು ಸ್ಥಾಪಿಸಿದ್ದಾರೆ. 2006ರಲ್ಲಿ ಸಿಎಸ್‌ಡಿಎಸ್ ಸಂಸ್ಥೆಯು ಹೊಸದಿಲ್ಲಿ ಮಾಧ್ಯಮ ಪ್ರಭೃತಿಗಳ ಸಾಮಾಜಿಕ ಬದುಕಿನ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಿತ್ತು. ದಿಲ್ಲಿ ಮೂಲದ 37 ಹಿಂದಿ ಹಾಗೂ ಇಂಗ್ಲಿಷ್ ಪ್ರಕಾಶನಸಂಸ್ಥೆಗಳು ಹಾಗೂ ಟಿವಿ ಚಾನೆಲ್‌ಗಳ 315 ಮಂದಿ ಪ್ರಮುಖ ನೀತಿ ನಿರೂಪಕರ ಬಗ್ಗೆ ಅದು ಸಮೀಕ್ಷೆಯನ್ನು ನಡೆಸಿತ್ತು. ಇಂಗ್ಲಿಷ್ ಮುದ್ರಣ ಮಾಧ್ಯಮದ ಶೇ.90 ಮಂದಿ ಹಾಗೂ ಟಿವಿ ವಾಹಿನಿಗಳ ಶೇ. 37 ಮಂದಿ ನೀತಿ ನಿರೂಪಕರು ಮೇಲ್ಜಾತಿಯವರೆಂದು ಸಮೀಕ್ಷೆಯಿಂದ ತಿಳಿದುಬಂದಿತು. ಅವರಲ್ಲಿ ಶೇ. 49ರಷ್ಟು ಮಂದಿ ಬ್ರಾಹ್ಮಣರು. ಈ 315 ಮಂದಿಯಲ್ಲಿ ಒಬ್ಬನೇ ಒಬ್ಬ ದಲಿತ ಅಥವಾ ಆದಿವಾಸಿಯಿರಲಿಲ್ಲ. ಶೂದ್ರರೆಂದು ಪರಿಗಣಿಸಲ್ಪಟ್ಟಿರುವ ಕೇವಲ ಶೇ.4ರಷ್ಟು ಮಂದಿ ಹಾಗೂ ಶೇ.3ರಷ್ಟು ಮಂದಿ ಮುಸ್ಲಿಮರಿದ್ದರು.


 ಇದು ‘‘ಮಾಧ್ಯಮ ವ್ಯಕ್ತಿಗಳ’’ ವಿಷಯವಾಯಿತು. ಇವರು ಕೆಲಸ ಮಾಡುವ ಮಾಧ್ಯಮ ಸಂಸ್ಥೆಗಳ ಒಡೆಯರಾರು ಗೊತ್ತೇ?. ನಾಲ್ಕು ಅಂತಾರಾಷ್ಟ್ರೀಯ ದಿನಪತ್ರಿಕೆಗಳ ಪೈಕಿ ಮೂರನ್ನು ವೈಶ್ಯ ಹಾಗೂ ಒಂದನ್ನು ಬ್ರಾಹ್ಮಣ ಕೌಟುಂಬಿಕ ಸಂಸ್ಥೆಗಳು ಹೊಂದಿವೆ. ಟೈಮ್ಸ್‌ಆಫ್ ಇಂಡಿಯಾ ದಿನಪತ್ರಿಕೆ ಹಾಗೂ 24 ತಾಸುಗಳ ಸುದ್ದಿವಾಹಿನಿ ಟೈಮ್ಸ್ ನೌ ದೇಶದ ಅತ್ಯಂತ ದೊಡ್ಡ ಸಾಮೂಹಿಕ ಮಾಧ್ಯಮ ಸಂಸ್ಥೆಯಾದ ಟೈಮ್ಸ್ ಗ್ರೂಪ್ ಸಂಸ್ಥೆಯ ಒಡೆತನವನ್ನು ಜೈನ ಕುಟುಂಬ (ಬನಿಯಾಗಳ)ವೊಂದು ಹೊಂದಿದೆ. ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯನ್ನು ಮಾರ್ವಾಡಿ ಬನಿಯಾಗಳಾದ ಭಾರ್ತಿಯಾಗಳು, ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಗೋಯೆಂಕಾಗಳು ಕೂಡಾ ಮಾರ್ವಾಡಿ ಬನಿಯಾಗಳು. ದಿ ಹಿಂದೂ ಪತ್ರಿಕೆಯು ಬ್ರಾಹ್ಮಣ ಕುಟುಂಬ ಸಂಸ್ಥೆಯೊಂದರ ಒಡೆತನಕ್ಕೆ ಸೇರಿದ್ದಾಗಿದೆ. ವಾರ್ಷಿಕವಾಗಿ 5.50 ಕೋಟಿ ಪ್ರಸಾರಸಂಖ್ಯೆಯೊಂದಿಗೆ ದೇಶದ ಅತ್ಯಧಿಕ ಮಾರಾಟದ ಪತ್ರಿಕೆ ಯಾದ ದೈನಿಕ ಜಾಗರಣ್‌ನ್ನು, ಕಾನ್ಪುರ ಮೂಲದ ಬನಿಯಾಗಳಾದ ಕಪೂರ್ ಕುಟುಂಬವು ಹೊಂದಿದೆ. ವಾರ್ಷಿಕ 1.75 ಕೋಟಿ ಪ್ರಸಾರ ಸಂಖ್ಯೆ ಹೊಂದಿರುವ ಇನ್ನೊಂದು ಪ್ರಭಾವಿ ಹಿಂದಿ ಪತ್ರಿಕೆಯಾದ ದೈನಿಕ್ ಭಾಸ್ಕರ್‌ಗೆ ಕೂಡಾ ಬನಿಯಾ ಜಾತಿಗೆ ಸೇರಿದ ಅಗರ್ವಾಲ್ ಕುಟುಂಬ ಮಾಲಕನಾಗಿದೆ.
  ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಗುಜರಾತಿ ಬನಿಯಾ ಜಾತಿಗೆ ಸೇರಿದ ಮುಖೇಶ್ ಅಂಬಾನಿ ಮಾಲಕರು), 27 ಪ್ರಮುಖ ರಾಷ್ಟ್ರೀಯ ಪ್ರಾದೇಶಿಕ ಟಿವಿ ವಾಹಿನಿಗಳ ಷೇರುಗಳ ಮೇಲೆ ನಿಯಂತ್ರಣ ಹೊಂದಿದೆ. ಅತ್ಯಂತ ಬೃಹತ್ ಟಿವಿ ಸುದ್ದಿ ಹಾಗೂ ಮನರಂಜನಾ ಜಾಲವಾದ ಝೀ ಟಿವಿ ನೆಟ್‌ವರ್ಕ್‌ಗೆ ಬನಿಯಾ ಜಾತಿಯ ಸುಭಾಶ್ಚಂದ್ರ ಮಾಲಕರಾಗಿದ್ದಾರೆ. (ದಕ್ಷಿಣ ಭಾರತದಲ್ಲಿ ಮಾಧ್ಯಮರಂಗದ ಒಡೆತನದಲ್ಲಿ ಜಾತಿಯು ಭಿನ್ನರೂಪವನ್ನು ತಾಳಿದೆ. ಉದಾಹರಣೆಗೆ ಸುದ್ದಿಪತ್ರಿಕೆಗಳು, ಜಗತ್ತಿನ ಅತಿ ದೊಡ್ಡ ಫಿಲ್ಮ್‌ಸಿಟಿ ಹಾಗೂ ಡಝನ್‌ನಷ್ಟು ಟಿವಿ ಚಾನೆಲ್‌ಗಳ ಮಾಲಕ ಸಂಸ್ಥೆಯಾದ ಈನಾಡು ಗ್ರೂಪ್‌ನ ನೇತೃತ್ವ ವಹಿಸಿರುವ ರಾಮೋಜಿ ರಾವ್ ಆಂಧ್ರದ ಕಮ್ಮಂ ಕೃಷಿಕ ಸಮುದಾಯಕ್ಕೆ ಸೇರಿದವರಾಗಿದ್ದು, ಬೃಹತ್ ಮಾಧ್ಯಮಗಳ ಮೇಲೆ ಬ್ರಾಹ್ಮಣ-ಬನಿಯಾ ಒಡೆತನ ಹೊಂದುವ ಪ್ರವೃತ್ತಿಗೆ ಸವಾಲೆಸೆಯುವಂತಿದೆ. ಇನ್ನೊಂದು ಪ್ರಮುಖ ಮಾಧ್ಯಮ ಸಂಸ್ಥೆಯಾದ ಸನ್ ಟಿವಿ ಗ್ರೂಪ್‌ನ ಮಾಲಕತ್ವವನ್ನು ಹಿಂದುಳಿದ ಜಾತಿಯೆಂದು ಪರಿಗಣಿಸಲ್ಪಟ್ಟಿರುವ ಮಾರನ್ ಕುಟುಂಬ ಹೊಂದಿದೆ. ಆದರೆ ಅವರು ಇಂದು ರಾಜಕೀಯವಾಗಿ ಪ್ರಬಲರಾಗಿದ್ದಾರೆ.

  ಸ್ವಾತಂತ್ರದ ಬಳಿಕ ಐತಿಹಾಸಿಕ ಪ್ರಮಾದವನ್ನು ಸರಿಪಡಿಸುವ ಯತ್ನವಾಗಿ ಭಾರತ ಸರಕಾರವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದವರಿಗಾಗಿ ವಿಶ್ವವಿದ್ಯಾನಿಲಯಗಳಲ್ಲಿ ಹಾಗೂ ಸರಕಾರಿ ಸಂಸ್ಥೆಗಳ ಉದ್ಯೋಗಳಲ್ಲಿ ಮೀಸಲಾತಿ ನೀತಿಯನ್ನು ಜಾರಿಗೊಳಿಸಿತು. ಮೀಸಲಾತಿಯು ಮುಖ್ಯ ವಾಹಿನಿಯೊಳಗೆ ನುಗ್ಗಲು ಪರಿಶಿಷ್ಟರಿಗೆ ಇದ್ದ ಏಕೈಕ ಅವಕಾಶವಾಗಿತ್ತು (ಆದಾಗ್ಯೂ ಇತರ ಧರ್ಮಗಳಿಗೆ ಮತಾಂತರಗೊಂಡರೂ, ತಾರತಮ್ಯವನ್ನು ಎದುರಿಸುತ್ತಿರುವ ದಲಿತರಿಗೆ ಈ ನೀತಿ ಅನ್ವಯವಾಗುವುದಿಲ್ಲ). ಓರ್ವ ದಲಿತರ ಮೀಸಲಾತಿಗೆ ಅರ್ಹನಾಗಬೇಕಿದ್ದರೆ ಆತ ಹೈಸ್ಕೂಲ್ ಶಿಕ್ಷಣವನ್ನು ಪೂರ್ಣಗೊಳಿಸಬೇಕಾಗುತ್ತದೆ.

  ಸರಕಾರದ ದತ್ತಾಂಶಗಳ ಪ್ರಕಾರ 71.3 ಶೇಕಡ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ವಿವಿ ಶಿಕ್ಷಣವನ್ನು ಪ್ರವೇಶಿಸಿಲ್ಲ. ಅಂದರೆ ಕೆಳಸ್ತರದ ಸರಕಾರಿ ಉದ್ಯೋಗಗಳನ್ನು ಪಡೆಯಲು ಸಾಧ್ಯ ವಾಗಿಲ್ಲ. ಕೇವಲ ನಾಲ್ಕು ದಲಿತರ ಪೈಕಿ ಓರ್ವನಿಗೆ ಮಾತ್ರ ಮೀಸಲಾತಿ ನೀತಿಯು ಅನ್ವಯಿಸುತ್ತದೆ. ಬಿಳಿಕಾಲರ್ ಉದ್ಯೋಗಗಳಿಗೆ ಪದವಿಯು ಕನಿಷ್ಠ ಶಿಕ್ಷಣಾರ್ಹತೆಯಾಗಿದೆ. 2001ರ ಜನಗಣತಿಯ ಪ್ರಕಾರ ಶೇ.2.24 ಮಂದಿ ದಲಿತರು ಪದವೀಧರರು. ಆದಾಗ್ಯೂ ದಲಿತ ಜನಸಂಖ್ಯೆಯ ಒಂದು ನಗಣ್ಯ ಪ್ರಮಾಣದಷ್ಟು ಮಂದಿಗೆ ಮಾತ್ರವೇ ಸಾರ್ವಜನಿಕ ಸೇವೆಯನ್ನು ಪ್ರವೇಶಿಸಲು, ವಿದ್ವಾಂಸರು,ಬರಹಗಾರರು, ನ್ಯಾಯಾಧೀಶರು, ಪೊಲೀಸರು ಹಾಗೂ ನಾಗರಿಕ ಸೇವೆಯ ಅಧಿಕಾರಿಗಳಾಗಲು ಸಾಧ್ಯವಾಗಿದೆ. ಇವರ ಸಂಖ್ಯೆಯು ಸಣ್ಣದಿರ ಬಹುದು. ಆದರೆ ವಾಸ್ತವಿಕವಾಗಿ ಅಧಿಕಾರದ ಉನ್ನತ ಸ್ತರಗಳಲ್ಲಿ ಒಂದಿಷ್ಟು ದಲಿತ ಪ್ರಾತಿನಿಧ್ಯವಿದ್ದಲ್ಲಿ ಹಳೆಯ ಸಾಮಾಜಿಕ ಸಮೀಕರಣಗಳು ತಿದ್ದುಪಡಿಯಾಗಲು ಸಾಧ್ಯವಿದೆ. ಕೆಲವು ದಶಕಗಳ ಹಿಂದೆ ಕಲ್ಪಿಸಲೂ ಆಗದಂತಹ ಸನ್ನಿವೇಶಗಳನ್ನು ಅದು ಸೃಷ್ಟಿಸುತ್ತದೆ. ಉದಾಹರಣೆಗೆ ಬ್ರಾಹ್ಮಣ ಗುಮಾಸ್ತನೊಬ್ಬ ದಲಿತ ಅಧಿಕಾರಿಯ ಕೆಳಗೆ ಕೆಲಸ ಮಾಡಬೇಕಾಗುತ್ತದೆ. ಇಂತಹ ಸಣ್ಣಪುಟ್ಟ ಅವಕಾಶಗಳ ಮೂಲಕವೂ ದಲಿತರು, ಮೇಲ್ಜಾತಿಯ ದೌರ್ಜನ್ಯದ ಗೋಡೆಯನ್ನು ಕೆಡವಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
 
  ಉದಾಹರಣೆಗೆ ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳಿಗಾಗಿನ ರಾಷ್ಟ್ರೀಯ ಆಯೋಗವು ಕೇಂದ್ರ ಸರಕಾರದ ಸ್ವಾಮ್ಯದ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ‘ಎ’ದರ್ಜೆಯ ಅಧಿಕಾರಿಗಳ ಪೈಕಿ ಕೇವಲ 8.4 ಶೇಕಡ ಮಂದಿ ಮಾತ್ರವೇ ಪರಿಶಿಷ್ಟ ಜಾತಿಗಳಿಗೆ ಸೇರಿದವರಾಗಿದ್ದಾ ರೆಂದು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕುರಿತ ರಾಷ್ಟ್ರೀಯ ಆಯೋಗವು ವರದಿಯೊಂದರಲ್ಲಿ ತಿಳಿಸಿದೆ. ವಾಸ್ತವವಾಗಿ ಈ ಹುದ್ದೆಗಳಲ್ಲಿ ಪರಿಶಿಷ್ಟರಿಗೆ ಶೇ.15ರಷ್ಟು ಹುದ್ದೆಗಳನ್ನು ಮೀಸ ಲಿರಿಸಬೇಕಾಗಿದೆ. ಭಾರತದ ನ್ಯಾಯಾಂಗ ಸೇವೆಗಳಲ್ಲಿಯೂ ದಲಿತರಿಗೆ ಹಾಗೂ ಆದಿವಾಸಿಗಳ ಪ್ರಾತಿ ನಿಧ್ಯಕ್ಕೆ ಸಂಬಂಧಿಸಿ ಕೆಲವು ಕಳವಳಕಾರಿ ಅಂಕಿಅಂಶಗಳನ್ನು ಈ ವರದಿಯು ನಮ್ಮ ಮುಂದಿಡುತ್ತದೆ. ದಿಲ್ಲಿ ಹೈಕೋರ್ಟ್‌ನ 20 ಮಂದಿ ನ್ಯಾಯಾಧೀಶರ ಪೈಕಿ, ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದ ವರು ಒಬ್ಬರು ಕೂಡಾ ಇಲ್ಲ. ಇತರ ಎಲ್ಲಾ ನ್ಯಾಯಾಂಗ ಹುದ್ದೆಗಳಲ್ಲಿಯೂ ಅವರ ಪ್ರಾತಿನಿಧ್ಯವು ಕೇವಲ ಶೇ.1.2ರಷ್ಟಿದೆ. ರಾಜಸ್ತಾನದಲ್ಲೂ ಕೂಡಾ ಇಷ್ಟೇ ಅಂಕಿಸಂಖ್ಯೆಗಳು ವರದಿ ಯಾಗಿವೆ. ಗುಜರಾತ್‌ನಲ್ಲಿ ಓರ್ವನೇ ಓರ್ವ ದಲಿತ ಅಥವಾ ಆದಿವಾಸಿ ನ್ಯಾಯಾಧೀಶರಿಲ್ಲ. ಸಾಮಾಜಿಕ ನ್ಯಾಯ ಚಳುವಳಿಗಳ ಪರಂಪರೆಯಿರುವ ತಮಿಳುನಾಡಿನಲ್ಲಿ ಕೂಡಾ 38 ಹೈಕೋರ್ಟ್ ನ್ಯಾಯಾಧೀಶರ ಪೈಕಿ ಕೇವಲ ನಾಲ್ಕು ಮಂದಿ ದಲಿತರು. ಮಾರ್ಕ್ಸಿಸ್ಟ್ ಪರಂಪರೆಯ ಕೇರಳ ಸಹ ಕೇವಲ ಓರ್ವ ದಲಿತ ಹೈಕೋರ್ಟ್ ನ್ಯಾಯಾಧೀಶನನ್ನು ಹೊಂದಿದೆ. 2011ರ ಜನಗಣತಿಯ ಪ್ರಕಾರ ಭಾರತದ 120 ಕೋಟಿ ಜನಸಂಖ್ಯೆಯ ಶೇ.25ರಷ್ಟಿರುವ ದಲಿತರಿಗೆ, ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಪ್ರಮಾಣಕ್ಕನುಗುಣವಾದ ಪ್ರಾತಿನಿಧ್ಯ ದೊರೆಯಬೇಕೆಂದು ಸ್ವತಃ ದಲಿತರಾಗಿದ್ದ ಮಾಜಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರು ಸಲಹೆ ನೀಡಿದ್ದಾಗ, ನ್ಯಾಯಾಂಗ ಬಳಗದಲ್ಲಿ ಅಣಕುಮಾತುಗಳು ಕೇಳಿ ಬಂದಿದ್ದವು.

‘‘ಈ ವರ್ಗ (ಪರಿಶಿಷ್ಟ)ಗಳಿಂದಲೂ ಅರ್ಹ ವ್ಯಕ್ತಿಗಳು ಲಭ್ಯರಿದ್ದಾರೆ ಹಾಗೂ ಅವರ ಕಡಿಮೆ ಪ್ರಾತಿನಿಧ್ಯವಾಗಲಿ ಅಥವಾ ಪ್ರಾತಿನಿಧ್ಯರಾಹಿತ್ಯತೆಯನ್ನಾಗಲಿ ಯಾವುದೇ ವಿಧದಲ್ಲೂ ಸಮರ್ಥಿಸಲು ಸಾಧ್ಯವಿಲ್ಲ’’ ಎಂದವರು 1990ರಲ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಹಿರಿಯ ನ್ಯಾಯಾಧೀಶರೊಬ್ಬರು ‘‘ನ್ಯಾಯಾಂಗದಲ್ಲಿನ ಯಾವುದೇ ಮೀಸಲಾತಿಯು, ಅದರ ಸ್ವಾತಂತ್ರ ಹಾಗೂ ಕಾನೂನಿನ ಪ್ರಭುತ್ವಕ್ಕೆ ಎದುರಾಗುವ ಬೆದರಿಕೆಯಾಗಿದೆ’’ ಎಂದು ಹೇಳಿದ್ದರು. ‘‘ಉದ್ಯೋಗ ಮೀಸಲಾತಿಗಳು ಈಗ ಜಟಿಲವಾದ ವಿಷಯವಾಗಿದೆ. ಅರ್ಹತೆಯ ಆದ್ಯತೆಯನ್ನು ಕಾಪಾಡಬೇಕೆಂದು ನಾನು ನಂಬಿದ್ದೇನೆ’’ ಎಂದು ಉನ್ನತ ಕಾನೂನು ವಿದ್ವಾಂಸರೊಬ್ಬರು ಅಭಿಪ್ರಾಯಿಸಿದ್ದರು.
ವಿಶ್ವವಿದ್ಯಾನಿಲಯಗಳಲ್ಲಿ ಸರಕಾರಿ ಉದ್ಯೋಗಗಳು ಹಾಗೂ ವಿದ್ಯಾರ್ಥಿ ಖೋಟಾದಡಿ ನೀಡಲಾಗುವ ಮೀಸಲಾತಿ ವಿರುದ್ಧ ಮೇಲ್ಜಾತಿಗಳಿಂದ ತೀವ್ರವಾದ ಪ್ರತಿಭಟನೆಗಳು ನಡೆಯುತ್ತಿರುವುದು ಕಂಡುಬರುತ್ತದೆ.

   ಪ್ರಗತಿಪರ ಸಾಮಾಜಿಕ ವಿಜ್ಞಾನಿಗಳು ಹಾಗೂ ಇತಿಹಾಸಕಾರರ ಭದ್ರಕೋಟೆಯೆಂದೇ ಪರಿಗಣಿಸಲ್ಪಟ್ಟಿರುವ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಬೋಧಕವರ್ಗದ ಕೇವಲ ಶೇ.3.29 ಮಂದಿ ದಲಿತರು ಹಾಗೂ ಶೇ.1.44 ಮಂದಿ ಆದಿವಾಸಿಪಂಗಡಗಳಿಗೆ ಸೇರಿದವ ರಾಗಿದ್ದಾರೆ. ವಾಸ್ತವಿಕವಾಗಿ ಇಲ್ಲಿ ಪರಿಶಿಷ್ಟ ಜಾತಿಗಳವರಿಗೆ ಶೇ.15 ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ. 7.5 ಮೀಸಲಾತಿ ಯನ್ನು ನಿಗದಿಪಡಿಸಲಾಗಿದೆ. ಮೀಸಲಾತಿ ಜಾರಿಗೊಳಿಸಿ 27 ವರ್ಷಗಳಾದರೂ ಪರಿಸ್ಥಿತಿಯಲ್ಲಿ ಯಾವುದೇ ಹೆಚ್ಚಿನ ಸುಧಾರಣೆಯಾಗಿಲ್ಲ. 2010ರಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ದಾಗ, ಸಂವಿಧಾನದತ್ತ ಮೀಸಲಾತಿಯನ್ನು ಜಾರಿಗೊಳಿಸು ವುದರಿಂದ ಜೆಎನ್‌ಯು, ಉತ್ಕೃಷ್ಟ ಮಟ್ಟದ ಅಧ್ಯಯನ ಕೇಂದ್ರಗಳಲ್ಲೊಂದಾಗಿ ಉಳಿಯುವುದಕ್ಕೆ ಅಡ್ಡಿಯಾಗಲಿದೆ’’ ಎಂದು ವಿವಿಯ ಕೆಲವು ಉನ್ನತ ಪ್ರೊಫೆಸರ್‌ಗಳು ಅಭಿಪ್ರಾ ಯಿಸಿದ್ದರು. ಮೀಸಲಾತಿಯನ್ನು ಜೆಎನ್‌ಯು ವಿವಿಯ ಬೋಧಕ ಹುದ್ದೆಗಳಲ್ಲಿ ಜಾರಿಗೊಳಿಸಿದಲ್ಲಿ ಸ್ಥಿತಿವಂತ ವಿದ್ಯಾರ್ಥಿಗಳು ವಿದೇಶಿ ಹಾಗೂ ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ವಲಸೆ ಹೋಗಲಿದ್ದಾರೆ ಹಾಗೂ ಜೆಎನ್‌ಯು ನೀಡುವ ವಿಶ್ವದರ್ಜೆಯ ಶಿಕ್ಷಣವನ್ನು ಪಡೆಯಲು ಬಡವಿದ್ಯಾರ್ಥಿಗಳಿಗೆ ಸಾಧ್ಯವಾಗುವುದಿಲ್ಲವೆಂದವರು ವಾದಿಸುತ್ತಾರೆ. ‘‘ಕೆಲವು ಜಾತಿಗಳು ಆನುವಂಶಿಕವಾಗಿ ಅಪೌಷ್ಟಿಕತೆಯನ್ನು ಹೊಂದಿವೆ ಹಾಗೂ ಅವರನ್ನು ಚೆನ್ನಾಗಿ ಪೋಷಿಸಿ ಬೆಳೆಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಗತಿ ಸಾಧ್ಯವಾಗಿಲ್ಲ. ಅವರಿಗೆ ಮೀಸಲಾತಿಯನ್ನು ನೀಡಿದಲ್ಲಿ ಉತ್ಕೃಷ್ಟ ಸಾಧನೆ ಸಾಧ್ಯವಾಗದು’’ ಎಂದು ಜೀವವಿಜ್ಞಾನದ ಪ್ರೊಫೆಸರ್ ಆಗಿರುವ ಬಿ.ಎನ್. ಮಲಿಕ್ ಮುಜುಗರವಿಲ್ಲದೆ ಹೇಳುತ್ತಾರೆ.

ಇದು ಮೇಲ್ಮಟ್ಟದಲ್ಲಿನ ವಿಚಾರವಾಯಿತು. ನವಭಾರತದ ಇನ್ನೊಂದು ಭಾಗದ ಕಥೆ ಬೇರೆಯೇ ಇದೆ. ದಲಿತರು ಹಾಗೂ ಆದಿವಾಸಿಗಳು, ಆರ್ಥಿಕ ಪಿರಾಮಿಡ್‌ನ ತಳಹಂತದಲ್ಲಿಯೇ ಉಳಿದುಕೊಂಡಿದ್ದಾರೆ. ಗಣಿಗಳು, ಅಣೆಕಟ್ಟುಗಳು ಮತ್ತಿತರ ಪ್ರಮುಖ ಮೂಲಸೌಕರ್ಯ ಯೋಜನೆಗಳಿಂದಾಗಿ ನಿರ್ವಸಿ ತರಾದ ಲಕ್ಷಾಂತರ ಮಂದಿಯಲ್ಲಿ ಬಹುತೇಕ ಮಂದಿ ದಲಿತರು ಹಾಗೂ ಆದಿವಾಸಿಗಳಾಗಿದ್ದಾರೆ. ಅವರು ಅತ್ಯಂತ ನಿಕೃಷ್ಟ ಮೊತ್ತದ ಕೂಲಿಯನ್ನು ಪಡೆಯುವ ಕೃಷಿ ಕಾರ್ಮಿಕರು ಹಾಗೂ ನಗರ ನಿರ್ಮಾಣ ಕೈಗಾರಿಕೆಯಲ್ಲಿ ಕೆಲಸ ಮಾಡುವ ಗುತ್ತಿಗೆದಾರರಾಗಿದ್ದಾರೆ. ಹತ್ತಿರಹತ್ತಿರ ಶೇ.70ರಷ್ಟು ದಲಿತರು ಭೂರಹಿತಕಾರ್ಮಿಕರು. ಪಂಜಾಬ್, ಬಿಹಾರ, ಹರ್ಯಾಣ ಹಾಗೂ ಕೇರಳದಂತಹ ರಾಜ್ಯಗಳಲ್ಲಿ ಭೂರಹಿತ ದಲಿತರ ಸಂಖ್ಯೆ ಶೇ.90ರಷ್ಟಿದೆ.

  ಸರಕಾರದ ಒಂದು ಇಲಾಖೆಯಲ್ಲಿ ಮಾತ್ರ ದಲಿತರ ಅತಿಯಾದ ಪ್ರಾತಿನಿಧ್ಯವಿದೆ. ಅವರಲ್ಲಿ ಶೇ.90ರಷ್ಟು ಮಂದಿ ರಸ್ತೆಗಳನ್ನು ಸ್ವಚ್ಛಗೊಳಿಸುವ, ಒಳಚರಂಡಿಯನ್ನು ನಿರ್ವಹಿಸುವ ಹಾಗೂ ಮ್ಯಾನ್‌ಹೋಲ್‌ಗಳನ್ನು ಸರಿಪಡಿಸುವ ಜಾಡಮಾಲಿಗಳಾಗಿ ನಿಯೋಜಿತರಾಗಿದ್ದಾರೆ. (ಈ ವಲಯ ಕೂಡಾ ಈಗ ಖಾಸಗೀಕರಣಗೊಳ್ಳುವತ್ತ ಹೊರಟಿದೆ. ಇದರಿಂದಾಗಿ ಖಾಸಗಿ ಕಂಪೆನಿಗಳು ದಲಿತರಿಗೆ ತಾತ್ಕಾಲಿಕ ಆಧಾರದಲ್ಲಿ ಉಪಗುತ್ತಿಗೆ ಉದ್ಯೋಗಗಳನ್ನು ನೀಡಲು ಸಾಧ್ಯವಾಗಲಿದೆ ಹಾಗೂ ಇಲ್ಲಿ ಉದ್ಯೋಗ ಭದ್ರತೆಯ ಖಾತರಿಯಿರುವುದಿಲ್ಲ.)
ಮಾಲ್‌ಗಳು ಹಾಗೂ ಕಾರ್ಪೊರೇಟ್ ಕಚೇರಿಗಳಲ್ಲಿರುವ ಮಾನವ ಪರಿಶ್ರಮದ ಅಗತ್ಯ ವಿಲ್ಲದಂತಹ ಅತ್ಯಾಧುನಿಕ ಶೌಚಗೃಹಗಳ ದ್ವಾರಪಾಲಕ ಹುದ್ದೆಗಳು ದಲಿತೇತರಿಗೆ ದೊರೆಯಲಿವೆ. ನೀರಿನ ಬಳಕೆಯಿಲ್ಲದಂತಹ ಸಾಂಪ್ರದಾಯಿಕ ಶೌಚ ಗೃಹಗಳನ್ನು ಸ್ವಚ್ಛಗೊಳಿಸಿ, ಅದರಲ್ಲಿನ ಮಾನವ ಮಲವನ್ನು ಬುಟ್ಟಿಗಳಲ್ಲಿ ಸಾಗಿಸುವ ಕಾಯಕದ ಮೂಲಕ 10.30 ಲಕ್ಷಕ್ಕೂ ಅಧಿಕ ಮಂದಿ ಜೀವನಸಾಗಿಸುತ್ತಿದ್ದಾರೆ. ಅವರಲ್ಲಿ ಬಹುತೇಕ ಮಂದಿ ಮಹಿಳೆಯರು.
    ಇದು ಕಾನೂನಿಗೆ ವಿರುದ್ಧವಾಗಿದ್ದರೂ, ಭಾರತೀಯ ರೈಲ್ವೆಯು ಮಲಹೊರುವ ಕಾರ್ಮಿಕರ ಅತಿ ದೊಡ್ಡ ಉದ್ಯೋಗ ದಾತ ಸಂಸ್ಥೆಯಾಗಿದೆ. ಅದರ 14,300 ರೈಲುಗಳು ಪ್ರತಿದಿನವೂ ದೇಶಾದ್ಯಂತ 65 ಸಾವಿರ ಕಿ.ಮೀ. ಪ್ರದೇಶದುದ್ದಕ್ಕೂ 2.50 ಕೋಟಿ ಪ್ರಯಾಣಿಕರನ್ನು ಸಾಗಿಸುತ್ತಿದೆ. 1.72 ಲಕ್ಷ ಮುಕ್ತ ವಿಸರ್ಜನೆಯ ಶೌಚಗೃಹಗಳ ಮೂಲಕ ಅವರ ಮಲ ರೈಲ್ವೆ ಹಳಿಗಳಲ್ಲಿ ಬೀಳುತ್ತವೆ. ದಿನಕ್ಕೆ ಹಲವಾರು ಟನ್‌ಗಳಷ್ಟಾಗುವ ಅವರ ಮಲವನ್ನು ವಿಶೇಷವಾಗಿ ದಲಿತರಿಂದ ಯಾವುದೇ ಕೈಗವಸು ಅಥವಾ ಸಂರಕ್ಷಣಾತ್ಮಕ ಉಪಕರಣಗಳಿಲ್ಲದೆ ಕೈಯಿಂದಲೇ ಸ್ವಚ್ಛಗೊಳಿಸಲಾಗುತ್ತದೆ. ಮಲಹೊರುವಿಕೆ ನಿಷೇಧ ಕಾಯ್ದೆಯನ್ನು ಕೇಂದ್ರ ಸಂಪುಟ ಹಾಗೂ ರಾಜ್ಯಸಭೆಯು 2013ರ ಸೆಪ್ಟಂಬರ್‌ನಲ್ಲಿ ಅನುಮೋದನೆ ನೀಡಿತ್ತು. ಆದರೆ ಭಾರತೀಯ ರೈಲ್ವೆಯು ಅದನ್ನು ಕಡೆಗಣಿಸಿತ್ತು. ಕಡುಬಡತನ ಹಾಗೂ ಸರಕಾರಿ ಉದ್ಯೋಗಗಳಲ್ಲಿ ಸ್ಥಿರವಾದ ಕುಸಿತ ಕಂಡುಬಂದಿರುವ ಹಿನ್ನೆಲೆಯಲ್ಲಿ ದಲಿತರ ಒಂದು ವರ್ಗವು, ತನ್ನ ಈ ಆನುವಂಶಿಕ ಮಲಹೊರುವ ಕಾರ್ಮಿಕ ಉದ್ಯೋಗವನ್ನು ಉಳಿಸಿಕೊಳ್ಳಲು ತೀವ್ರವಾಗಿ ಯತ್ನಿಸುತ್ತಿದೆ.


ಕೆಲವು ದಲಿತರಷ್ಟೇ ಈ ಅಡ್ಡಿಗಳಿಂದ ಹೊರಬರಲು ಸಫಲರಾಗಿದ್ದಾರೆ. ಅವರ ವೈಯಕ್ತಿಕ ಕಥೆಗಳು ಅಸಾಧಾರಣ ಹಾಗೂ ಸ್ಫೂರ್ತಿದಾಯಕವಾಗಿವೆ. ಮಹಿಳೆಯರು ಸೇರಿದಂತೆ ಕೆಲವು ದಲಿತ ಉದ್ಯಮಿಗಳು, ಭಾರತೀಯ ದಲಿತ ವಾಣಿಜ್ಯ ಹಾಗೂ ಕೈಗಾರಿಕಾ ಚೇಂಬರ್ (ಡಿಐಸಿಸಿಐ)ನ್ನು ಸ್ಥಾಪಿಸಿಕೊಂಡಿದ್ದಾರೆ. ಇದಕ್ಕೆ ಬೃಹತ್ ಉದ್ಯಮಸಂಸ್ಥೆಗಳಿಂದ ಪ್ರಶಂಸೆ ಹಾಗೂ ಪೋಷಕತ್ವ ಲಭಿಸಿದೆ ಹಾಗೂ ಟಿವಿ ವಾಹಿನಿ ಹಾಗೂ ಪ್ರತಿಷ್ಠಿತ ಮಾಧ್ಯಮಗಳಿಂದಲೂ ಪ್ರಚಾರ ಲಭಿಸಿದೆ. ನೀವು ಕಷ್ಟಪಟ್ಟು ದುಡಿಯುವವರೆಗೆ ಬಂಡವಾಳಶಾಹಿವಾದವು ಸ್ವಾಭಾವಿಕವಾಗಿ ಸಮಾನತಾವಾದಿಯೆಂಬ ಭಾವನೆಯನ್ನು ಮೂಡಿಸುತ್ತದೆ.

  ಮೇಲ್ಜಾತಿಯ ಹಿಂದುವೊಬ್ಬ ಸಮುದ್ರವನ್ನು ದಾಟಿದಲ್ಲಿ ಆತ ಜಾತಿಭ್ರಷ್ಟನಾಗುತ್ತಾನೆ ಹಾಗೂ ಅಪವಿತ್ರನಾಗುತ್ತಾನೆಂದು ಭಾವಿಸಿದ್ದ ಕಾಲವೊಂದಿತ್ತು. ಇದೀಗ ಜಾತಿ ವ್ಯವಸ್ಥೆ ಕೂಡಾ ರಫ್ತಾಗುತ್ತಿದೆ. ಹಿಂದೂಗಳು ಹೋದಲ್ಲೆಲ್ಲಾ ತಮ್ಮ ಜಾತಿಯನ್ನು ಕೂಡಾ ತೆಗೆದುಕೊಂಡು ಹೋಗುತ್ತಾರೆ. ಶ್ರೀಲಂಕಾದಲ್ಲಿ ಬರ್ಬರವಾಗಿ ದೌರ್ಜನ್ಯಕ್ಕೊಳಗಾದ ತಮಿಳರಲ್ಲೂ ಜಾತಿ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಮುಕ್ತ ಜಗತ್ತಿನಲ್ಲಿ ಸಂಚರಿಸುವ ಭಾರತೀಯ ವಲಸಿಗರಲ್ಲೂ ಅದು ಅಸ್ತಿತ್ವದಲ್ಲಿದೆ. ಸುಮಾರು 10 ವರ್ಷಗಳಿಂದ ಬ್ರಿಟನ್‌ನಲ್ಲಿರುವ ದಲಿತ ನೇತೃತ್ವದ ಗುಂಪುಗಳು ಜಾತಿತಾರತಮ್ಯವನ್ನು ಕೂಡಾ ಜನಾಂಗೀಯ ಭೇದದ ಒಂದು ರೂಪವೆಂದು ಬ್ರಿಟಿಷ್ ಕಾನೂನು ಪರಿಗಣಿಸಬೇಕೆಂದು ಒತ್ತಡ ಹೇರಿದ್ದರು. ಆದರೆ ಸವರ್ಣೀಯ ಹಿಂದೂಗಳು ಈ ಚಳವಳಿಯನ್ನು ಹೊಸಕಿಹಾಕುವಲ್ಲಿ ಸಫಲರಾದರು. ಪ್ರಜಾಪ್ರಭುತ್ವವು ಜಾತಿ ವ್ಯವಸ್ಥೆಯನ್ನು ನಿರ್ಮೂಲನೆಗೊಳಿಸಲಿಲ್ಲ. ಬದಲಾಗಿ ಅದು ಜಾತೀಯತೆಯನ್ನು ಇನ್ನಷ್ಟು ಬಲವಾಗಿ ಬೇರೂರುವಂತೆ ಮಾಡಿತು ಹಾಗೂ ಆಧುನೀಕರಣಗೊಳಿಸಿತು.
   
  ಜಾತಿ ವ್ಯವಸ್ಥೆಗೆ ಹಿಂದೂ ಪದವಾದ ಚಾತುರ್ವರ್ಣ್ಯವು ಇಂದಿಗೂ ಪ್ರಶ್ನಾತೀತವಾಗಿಯೇ ಉಳಿದು ಬಿಟ್ಟಿದೆ. ಬ್ರಾಹ್ಮಣರು ವ್ಯಾಪಕವಾಗಿ ಜ್ಞಾನಕ್ಷೇತ್ರದ ಮೇಲೆ ನಿಯಂತ್ರಣವನ್ನು ಸಾಧಿಸಿದ್ದರೆ, ವೈಶ್ಯರು ವ್ಯಾಪಾರದಲ್ಲಿ ಪ್ರಾಬಲ್ಯ ಸ್ಥಾಪಿಸಿದ್ದಾರೆ. ಕ್ಷತ್ರಿಯರೂ ಉತ್ತಮ ದಿನಗಳನ್ನು ಕಾಣುತ್ತಿದ್ದಾರೆ. ಆದರೆ ಈಗಲೂ ಅವರಲ್ಲಿ ಬಹುತೇಕ ಮಂದಿ ಗ್ರಾಮೀಣ ಜಮೀನುದಾರರಾಗಿದ್ದಾರೆ. ಈ ಬೃಹತ್ ಮನೆಯ ‘ತಳಅಂತಸ್ತಿನಲ್ಲಿ’ ಶೂದ್ರರು ವಾಸಿಸುತ್ತಿದ್ದಾರೆ ಹಾಗೂ ನುಸುಳುಕೋರರನ್ನು ದೂರವಿರಿಸುತ್ತಿದ್ದಾರೆ. ಆದಿವಾಸಿಗಳು ಹಾಗೂ ದಲಿತರು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆ. ಜಾತಿ ಪದ್ಧತಿಯನ್ನು ನಾಶಪಡಿಸಲು ಸಾಧ್ಯವೇ?. ಬಾನಂಗಳದಲ್ಲಿರುವ ನಕ್ಷತ್ರಗಳನ್ನು ಮರುಜೋಡಿಸುವಂತಹ ಧೈರ್ಯವನ್ನು ಪ್ರದರ್ಶಿಸುವವರೆಗೂ ಅದು ಸಾಧ್ಯವಾಗದು. ತಮ್ಮನ್ನು ಕ್ರಾಂತಿಕಾರಿಗಳೆಂದು ಕರೆದುಕೊಳ್ಳುವವರು ಬ್ರಾಹ್ಮಣ್ಯವಾದದ ವಿಮರ್ಶತ್ಮಾಕ ಚಿಂತನೆಯನ್ನು ಬೆಳೆಸಿಕೊಳ್ಳುವವರೆಗೆ ಹಾಗೂ ಬ್ರಾಹ್ಮಣ್ಯವಾದವನ್ನು ಅರಿತುಕೊಂಡವರು ಬಂಡವಾಳಶಾಹಿವಾದದ ಕುರಿತ ತಮ್ಮ ವಿಮರ್ಶೆಯನ್ನು ಹರಿತಗೊಳಿಸುವವರೆಗೆ ಅದು ಸಾಧ್ಯವಾಗದು. ಅಲ್ಲಿಯವರೆಗೂ ನಾವು ಗುಣಮುಖಗೊಳ್ಳುವ ಹಂಬಲವೇ ಇಲ್ಲದ ಹಿಂದೂಸ್ತಾನದ ರೋಗಗ್ರಸ್ತ ಪುರುಷರು ಹಾಗೂ ಮಹಿಳೆಯರಾಗಿ ಉಳಿಯಲಿದ್ದೇವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)