varthabharthi


magazine

ಪತ್ರಕರ್ತರಿಂದ ನೀವು ಬಯಸುವುದೇನು?

ವಾರ್ತಾ ಭಾರತಿ : 11 Oct, 2016
ರವೀಶ್ ಕುಮಾರ್

 ಹಿರಿಯ ಪತ್ರಕರ್ತ, ಲೇಖಕ, ನಿರೂಪಕ ರವೀಶ್ ಕುಮಾರ್ ಎನ್‌ಡಿಟಿವಿ ಇಂಡಿಯಾ ಹಿಂದಿ ಚಾನೆಲ್‌ನ ಹಿರಿಯ ಕಾರ್ಯನಿರ್ವಾಹಕ ಸಂಪಾದಕ. ಪ್ರೆಮ್ ಟೈಮ್, ಹಮ್ ಲೋಗ್ ಹಾಗೂ ರವೀಶ್ ಕಿ ರಿಪೋರ್ಟ್ ನಂತಹ ಖ್ಯಾತ ರಾಜಕೀಯ ಹಾಗೂ ಪ್ರಸ್ತುತ ವಿದ್ಯಮಾನಗಳ ಕಾರ್ಯಕ್ರಮಗಳ ಮೂಲಕ ದೇಶಾದ್ಯಂತ ಪ್ರಸಿದ್ಧಿ ಪಡೆದವರು. ವಸ್ತುನಿಷ್ಠ ವರದಿಗಾರಿಕೆ, ನಿಷ್ಪಕ್ಷ ನಿರೂಪಣೆ, ನಿಷ್ಠುರವಾಗಿ ಪ್ರಶ್ನೆ ಕೇಳುವುದು ಹಾಗೂ ಇತರ ಮಾಧ್ಯಮಗಳು ನಿರ್ಲಕ್ಷಿಸುವ ವಿಷಯಗಳನ್ನು ಆಯ್ದು ಜನರ ಮುಂದಿಡುವುದು ರವೀಶ್‌ರ ವೈಶಿಷ್ಟ್ಯ. ಅಬ್ಬರ, ಬೊಬ್ಬೆ, ಭಟ್ಟಂಗಿತನಗಳ ನಡುವೆ ಭಾರತೀಯ ಪತ್ರಿಕೋದ್ಯಮ ಕಳೆದು ಹೋಗುತ್ತಿರುವ ಈ ದಿನಗಳಲ್ಲಿ ಪತ್ರಕರ್ತನ ಘನತೆ ಎತ್ತಿ ಹಿಡಿಯುವ ಪತ್ರಿಕೋದ್ಯಮದ ಮೂಲಕ ರವೀಶ್ ಗಮನ ಸೆಳೆದಿದ್ದಾರೆ. ರಾಮನಾಥ ಗೋಯಂಕಾ ಪ್ರಶಸ್ತಿ ಸಹಿತ ಪತ್ರಿಕೋದ್ಯಮದ ಹಲವು ಪ್ರತಿಷ್ಠಿತ ಗೌರವಗಳಿಗೆ ರವೀಶ್ ಪಾತ್ರರಾಗಿದ್ದಾರೆ.

ಇತ್ತೀಚೆಗೆ ರಾಯಚೂರು ಜಿಲ್ಲೆಯ ಗ್ರಾಮವೊಂದರಿಂದ ನಝೀರ್ ಎಂಬ ಬೈಕ್ ಮೆಕ್ಯಾನಿಕ್ ಒಬ್ಬರ ೆನ್ ಬಂದಿತ್ತು. ನಝೀರ್ ನನ್ನ ಕಾರ್ಯಕ್ರಮ ಪ್ರೆಮ್ ಟೈಮ್ಸ್ ಅನ್ನು ನಿಯಮಿತವಾಗಿ ವೀಕ್ಷಿಸುತ್ತಿರುವವರು. ನಝೀರ್‌ರ ಮಾತುಗಳಿಂದ ನನ್ನೊಳಗೆ ಆವರಿಸಿದ ಕರ್ನಾಟಕದ ಆತ್ಮೀಯತೆ ಎಷ್ಟು ಎಂದು ವಿವರಿಸಲು ನನಗೆ ಪದಗಳು ಸಾಲದು. ವೀಕ್ಷಕರು ಹಾಗೂ ಓದುಗರೊಂದಿಗೆ ನಮ್ಮ ಸಂಬಂಧ ಬೆಳೆಯುವುದೇ ಹೀಗೆ. ನಮಗೆ ಪರಿಚಯವೇ ಇಲ್ಲದವರ ಜೊತೆ ಈ ಬಂಧ ಬೆಳೆಯುತ್ತದೆ. ಆದರೂ ಒಂದು ನಂಬಿಕೆಯೊಂದಿಗೆ ನಾವು ಬರೆಯುತ್ತೇವೆ. ಯಾರಾದರೂ ನಾವು ಬರೆದಿದ್ದನ್ನು ಓದುತ್ತಾರೆ. ಅವರಲ್ಲಿ ಯಾರಾದರೂ ನಮ್ಮ ಅಭಿಪ್ರಾಯವನ್ನು ಒಪ್ಪುತ್ತಾರೆ, ಇನ್ನು ಯಾರೂ ಒಪ್ಪುವುದಿಲ್ಲ. ಆದರೆ ಬರೆದ ಮೇಲೆ ನಮ್ಮ - ಓದುಗರ ನಡುವಿನ ಸಂಬಂಧ ಬೆಳೆಯುತ್ತದೆ. ಭಾರತದಲ್ಲಿ ಮಾಧ್ಯಮಗಳ ಕುರಿತು ಇತ್ತೀಚೆಗೆ ಭಾರೀ ಚರ್ಚೆ ನಡೆಯುತ್ತಿದೆ.

ಈ ಚರ್ಚೆಯ ಒಂದೊಳ್ಳೆಯ ವಿಷಯವೇನು ಎಂದರೆ, ನೀವೂ ಇದರಲ್ಲಿ ಶಾಮೀಲಾಗಿರುವುದು. ಆದರೆ ಇದರಲ್ಲಿರುವ ಬೇಸರದ ವಿಷಯವೇನೆಂದರೆ, ನಿಮ್ಮಲ್ಲಿ ಅನೇಕರು ರಾಜಕೀಯ ಪಕ್ಷಗಳ ಬೆಂಬಲಿಗರಾಗಿ ಚರ್ಚೆಯಲ್ಲಿ ಭಾಗವಹಿಸಿರುವುದು. ಇಂತಹ ಜನರ ಬಗ್ಗೆ ನಾವು ಜಾಗರೂಕರಾಗಿರಬೇಕಿದೆ. ಒಂದು ಪಕ್ಷಕ್ಕಾಗಿ ಜನರ ವಿರುದ್ಧವೇ ಕೆಲಸ ಮಾಡುವವರು ಇವರು. ಇವರು ಜನರ ಧ್ವನಿಯನ್ನು ಅಡಗಿಸಿಬಿಡುತ್ತಾರೆ, ಪತ್ರಕರ್ತರನ್ನು ಬೈಯುತ್ತಾರೆ. ಅವಹೇಳನ ಮಾಡುತ್ತಾರೆ, ಬೆದರಿಸುತ್ತಾರೆ. ದಿನವಿಡೀ ಫೇಸ್ಬುಕ್, ಟ್ವಿಟರ್ ಹಾಗೂ ವಾಟ್ಸ್ ಆ್ಯಪ್‌ಗಳಲ್ಲಿ ಪತ್ರಕರ್ತರ ಬಗ್ಗೆ ವದಂತಿ ಹರಡುತ್ತಾರೆ. ಇದರ ಪರಿಣಾಮ ನ್ಯೂಸ್ ಚಾನೆಲ್‌ಗಳು ಹಾಗೂ ಪತ್ರಿಕೆಗಳ ಮೇಲೆ ಆಗಿದೆ. ಅಲ್ಲೀಗ ಈ ಬೈಯುವ, ಬೆದರಿಕೆ ಹಾಕುವ ರಾಜಕೀಯ ಬೆಂಬಲಿಗರನ್ನೇ ಸಾಮಾನ್ಯ ಜನತೆ ಎಂದು ನಂಬಲಾಗುತ್ತಿದೆ. ಆದರೆ ನಿಜವಾಗಿ ಇವರು ಸಾಮಾನ್ಯ ಜನರಲ್ಲ, ಇವರು ರಾಜಕೀಯ ಬೆಂಬಲಿಗರು. ಜನರು ನೀವು. ನಿಮ್ಮ ನಿಜಧ್ವನಿ ಅಡಗಿಸಿ ಇಡುವ ಉದ್ದೇಶದಿಂದ ಈ ಬೆಂಬಲಿಗರು ಸೋಷಿಯಲ್ ಮೀಡಿಯಾಗಳಲ್ಲಿ ಗೂಂಡಾಗಿರಿ ಮಾಡುತ್ತಿದ್ದಾರೆ. ನೀವು ಇವರನ್ನು ಗುರುತಿಸಬೇಕಾಗಿದೆ. ಇಲ್ಲದಿದ್ದರೆ ಒಂದು ದಿನ ನೀವು ನಿಮ್ಮನ್ನೇ ಗುರುತಿಸಲು ಸಾಧ್ಯವಿಲ್ಲದಂತೆ ನಿಮ್ಮ ಮೇಲೆ ಈ ಬೆಂಬಲಿಗರು ಸವಾರಿ ಮಾಡಿಬಿಡುತ್ತಾರೆ. ಪ್ರಶ್ನೆ ಕೇಳುವುದು ಪತ್ರಕರ್ತನ ಕೆಲಸ. ಸರಕಾರದಲ್ಲಿರುವವರು ಎಲ್ಲ ರೀತಿಯ ಶಕ್ತಿಗಳ ಮಾಲಕರಾಗಿರುತ್ತಾರೆ.

ಪ್ರಶ್ನೆಗಳಿಂದ ಸುರಕ್ಷತೆ ನೀಡಬೇಕಾದಷ್ಟು ಅವರು ದುರ್ಬಲರೇನೂ ಆಗಿರುವುದಿಲ್ಲ. ಸುರಕ್ಷತೆಯ ಅಗತ್ಯವಿರುವುದು ನಿಮಗೆ. ನಿಮ್ಮ ಪರವಾಗಿ ನಾವು ಸರಕಾರವನ್ನು ಪ್ರಶ್ನಿಸದಿದ್ದರೆ ನಿಮಗೆ ಸರಿಯಾದ ಮಾಹಿತಿ ತಲುಪುವುದು ಹೇಗೆ? ಪತ್ರಕರ್ತನೊಬ್ಬ ಸರಕಾರದ ಗುಣಗಾನ ಮಾಡುತ್ತಿರಲಿ ಎಂಬುದು ಆತನಿಂದ ನಿಮ್ಮ ನಿರೀಕ್ಷೆಯಾಗಿದೆಯೇ? ಅದಕ್ಕಾಗಿ ಸರಕಾರಕ್ಕೆ ಅದರದ್ದೇ ಪ್ರಚಾರ ಯಂತ್ರವಿದೆ. ಅದೂ ನಡೆಯುವುದು ನಿಮ್ಮ ದುಡ್ಡಿನಿಂದಲೇ, ಆದರೆ ಕೆಲಸ ಆಗುವುದು ಸರಕಾರದ್ದು. ಕೋಟಿಗಟ್ಟಲೆ ರೂಪಾಯಿಗಳ ಜಾಹೀರಾತು ನೀಡಿ ಸರಕಾರ ತಾನು ಏನು ಮಾಡಿದೆ ಎಂದು ಹಗಲು ರಾತ್ರಿ ಹೇಳುತ್ತಲೇ ಇರುತ್ತದೆ. ಇನ್ನು ಪತ್ರಕರ್ತರೂ ಅದೇ ಕೆಲಸ ಮಾಡಬೇಕೇ? ಹಾಗಾದರೆ ಸರಕಾರ ಹಾಗೂ ಪತ್ರಕರ್ತರ ಭಾಷೆಯೂ ಒಂದೇ ಆಗಿಬಿಡುತ್ತದೆ. ಹೀಗಾದಾಗ, ನಿಮ್ಮ ಧ್ವನಿಯಿಂದ ಸರಕಾರ ಹಾಗೂ ಪತ್ರಕರ್ತ ಬಹಳ ದೂರ ಹೋಗಿಬಿಡುತ್ತಾರೆ. ಮತ್ತೆ ನಿಮ್ಮನ್ನು ಆಲಿಸಲು ಯಾರೂ ಬರುವುದಿಲ್ಲ. ನಿಮ್ಮ ಮಾತನ್ನು ಯಾರೂ ಪ್ರಕಟಿಸುವುದಿಲ್ಲ. ಹೀಗೆ ಆಗಲಿದೆ ಎಂದು ನೀವು ಯೋಚಿಸುತ್ತಿದ್ದೀರಾ? ಈಗಾಗಲೇ ಹೀಗೆ ಆಗಿದೆ! ಪತ್ರಿಕೋದ್ಯಮ ಈಗ ಪತ್ರಿಕೋದ್ಯಮ ವಾಗಿ ಉಳಿದಿಲ್ಲ. ಅದೀಗ ಸರಕಾರ ಹಾಗೂ ರಾಜಕೀಯ ಪಕ್ಷಗಳ ಚಾಕರಿಗೆ ಇಳಿದಿದೆ. ಸರಿಯಾದ ಮಾಹಿತಿ ಸಿಗುತ್ತಿರಲಿ ಎಂದು ನೀವು ನಿಮ್ಮ ಶ್ರಮದ ದುಡಿಮೆಯ ದೊಡ್ಡ ಭಾಗವನ್ನು ಪತ್ರಿಕೆಗಳು ಹಾಗೂ ಕೇಬಲ್ ಚಾನೆಲ್‌ಗೆ ನೀಡುತ್ತೀರಿ. ಆದರೆ ಅಲ್ಲಿ ನಿಮಗೀಗ ವಂಚನೆಯಾಗುತ್ತಿದೆ.

ಪ್ರಶ್ನೆ ಕೇಳುವ ಸಂಪಾದಕರನ್ನು ಮನೆಗೆ ಕಳಿಸಲಾಗುತ್ತಿದೆ. ಮೊದಲೇ ಪ್ರಶ್ನೆಗಳನ್ನು ಬರೆದು ಕೊಟ್ಟವರನ್ನು ಮಾತ್ರ ಸಂದರ್ಶನ ತೆಗೆದುಕೊಳ್ಳಲು ಆಹ್ವಾನಿಸಲಾಗುತ್ತಿದೆ. ಈಗ ಇಂತಹ ಸಂದರ್ಶನಗಳನ್ನು ನೀವೂ ನೋಡುತ್ತಿದ್ದೀರಿ. ಪತ್ರಕರ್ತ ನಾಯಕರ ಪ್ರವಚನ ಕೇಳಲು ಹೋದವನಂತೆ ಕಾಣುತ್ತಾನೆ. ನೀವು ಇಂತಹ ಪತ್ರಿಕೋದ್ಯಮವನ್ನು ಬಯಸುತ್ತೀರಾ? ದೇಶದ ಎಲ್ಲ ಸಮಸ್ಯೆಗಳ ಪರಿಹಾರವಾಗಿದೆ, ಇನ್ನೇನಿದ್ದರೂ ನಾಯಕರಿಂದ ನೀತಿ ಬೋಧನೆಯ ಪಾಠ ಕೇಳುವುದು ಮಾತ್ರ ಬಾಕಿ ಎಂದು ನಿಜವಾಗಿಯೂ ನಿಮಗೆ ಅನಿಸುತ್ತಿದೆಯೇ? ನೀವು ವೀಕ್ಷಕರು ಹಾಗೂ ಓದುಗರು ಈ ಎಲ್ಲ ವಿಷಯಗಳನ್ನು ಗಮನಿಸುತ್ತಿದ್ದೀರಾ? ಇಲ್ಲ ಎಂದಾದರೆ ನಿಧಾನವಾಗಿ ನಿಮ್ಮ ಎದುರಿನಿಂದ ಪತ್ರಕರ್ತರು ನಾಪತ್ತೆಯಾಗಿ ಬಿಡುತ್ತಾರೆ .

ಚಾನೆಲ್‌ಗಳಲ್ಲಿ ನಿರಂತರವಾಗಿ ಒಂದೇ ಸರಕಾರ ಹಾಗೂ ಒಂದೇ ನಾಯಕರ ಕುರಿತ ಕಾರ್ಯಕ್ರಮಗಳು ಬರುತ್ತಿವೆ. ಉಳಿದ ವಿಷಯಗಳನ್ನು ವಿರೋಗಳ ಮಾತು ಎಂದು ಹೇಳಿ ತೆಗೆದುಹಾಕಲಾಗುತ್ತಿದೆ. ಸರಕಾರಕ್ಕಿಂತ ಭಿನ್ನ ಅಭಿಪ್ರಾಯ ಇರುವವರ ಮಾತುಗಳಿಗೆ ಇಲ್ಲಿ ಆಸ್ಪದವೇ ಇಲ್ಲ. ಬೇರೆ ಬೇರೆ ರೂಪದ ಪ್ರೊಪಗಾಂಡಾ ನಡೆಸಲಾಗುತ್ತಿದೆ. ಈ ಪ್ರೊಪಗಾಂಡಾಗಳ ನೆರವಿನಿಂದ ಈಗ ಕಾರ್ಯಾಂಗವೂ ಬಹಿರಂಗವಾಗಿಯೇ ಸರಕಾರದ ಕೆಲಸವನ್ನೇ ಮಾಡುತ್ತಿದೆ. ನಿಧಾನವಾಗಿ ಇದರ ಪರಿಣಾಮ ನ್ಯಾಯಾಂಗದ ತೀರ್ಪುಗಳ ಮೇಲೆ ಬೀಳಲಿದೆ. ಪ್ರತಿಬಾರಿ ಒಂದು ನಕಲಿ ಜನಮತದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಇದು ಪತ್ರಕರ್ತರ ಪಾಲಿನ ಅಪಾಯ ಅಲ್ಲ. ಇದು ನಿಮ್ಮ ಪಾಲಿನ ಅಪಾಯವಾಗಿದೆ. ನಾವು ಅಪಾಯದಲ್ಲಿ ದ್ದೇವೆ ಎಂದರೆ ಅದರರ್ಥ ನೀವೂ ಅಪಾಯದಲ್ಲಿದ್ದೀರಿ ಎಂದು. ನೀವು ಮತದಾರರಾಗಿ ಮತ ಚಲಾಯಿಸಲು ಹೋಗುವಾಗ ಅದರಲ್ಲಿ ನಮ್ಮ ಮಹತ್ವದ ಪಾತ್ರವಿರುತ್ತದೆ. ನಮ್ಮ ನಿಷ್ಪಕ್ಷ ವರದಿಗಾರಿಕೆಯಿಂದ ನೀವು ಚಿತ್ರದ ಇನ್ನೊಂದು ಬದಿಯನ್ನು ನೋಡಲು ಸಾಧ್ಯವಾಗುತ್ತದೆ. ಇದರಿಂದ ನಿಮ್ಮ ವಿಶ್ವಾಸ ಹೆಚ್ಚುತ್ತದೆ. ಈಗ ನೀವು ಪ್ರತಿಬಾರಿ ಹೊಸ ಪ್ರಶ್ನೆಯನ್ನು ಕೇಳಬೇಕಾಗಿದೆ. ನೀವು ಯಾವುದೇ ಸರಕಾರದ ವೌಲ್ಯಮಾಪನ ಮಾಡುವಾಗ ಆ ಸರಕಾರದ ಅವಯಲ್ಲಿ ಪತ್ರಿಕೋದ್ಯಮದ ಪರಿಸ್ಥಿತಿ ಹೇಗಿತ್ತು ಎಂದು ನೀವು ಪ್ರಶ್ನಿಸುತ್ತೀರಾ? ಆ ಸರಕಾರವಿರುವಾಗ ಪತ್ರಕರ್ತರು ಭಯದಲ್ಲಿದ್ದರೇ? ಸರಕಾರದ ಹೊಗಳುಭಟರಾಗಿದ್ದರೇ? ಹೆದರಿದ ಪತ್ರಕರ್ತ ಸತ್ತು ಹೋದ ಪ್ರಜಾಪ್ರಭುತ್ವದ ಸಂಕೇತ. ಹೀಗಾಗಲು ನೀವು ಬಿಡಬೇಡಿ.

ನೀವು ಯಾವುದೇ ಪಕ್ಷ ಅಥವಾ ಸರಕಾರವನ್ನು ಮೆಚ್ಚಿಕೊಳ್ಳಿ, ತೊಂದರೆಯಿಲ್ಲ. ಅದರ ನಾಯಕರಿಗೆ ಜಿಂದಾಬಾದ್ ಹೇಳಿ. ಆದರೆ ಅದೇ ನಾಯಕ ಮಾಧ್ಯಮಗಳನ್ನು ಬೇರೆ ಬೇರೆ ರೀತಿಯಲ್ಲಿ ಅದುಮಿಡಲು ನೋಡಿದರೆ ನೀವು ಆತನನ್ನು ಪ್ರಶ್ನಿಸಿ. ಈಗ ದೊಡ್ಡ ಉದ್ಯಮಿಗಳನ್ನು ಪ್ರಶ್ನಿಸುವುದು ನಿಂತುಹೋಗಿದೆ. ಯಾವುದೇ ಖಾಸಗಿ ಮಾಧ್ಯಮ ಅವರನ್ನು ಪ್ರಶ್ನಿಸುವುದು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅವರು ಈ ಪ್ರಜಾಪ್ರಭುತ್ವದಲ್ಲಿ ಪ್ರಶ್ನಾತೀತರಾಗಿಬಿಟ್ಟರೇ? ನೀವು ಈ ಪ್ರಶ್ನೆ ಕೇಳಲು ಅನರ್ಹ ಎಂದು ಪರಿಗಣಿಸಿದರೆ ನೀವು ನಿಮ್ಮದೇ ಧ್ವನಿಯನ್ನು ಅಡಗಿಸುತ್ತಿದ್ದೀರಿ ಎಂದರ್ಥ. ಚುನಾವಣೆಯ ನಂತರ ನೀವು ನಮ್ಮ ಹತ್ತಿರ ಬರುವುದನ್ನು ಕಡಿಮೆ ಮಾಡಿ, ಉದ್ಯಮಿಗಳ ಜೊತೆ ಹೆಚ್ಚು ಇರುವುದು ಏಕೆ ಎಂದು ನೀವು ನಾಯಕರನ್ನು ಪ್ರಶ್ನಿಸಿ. ಇವತ್ತು ಹಲವು ಸರಕಾರಗಳು ತಮ್ಮನ್ನು ಪ್ರಶ್ನಿಸುವ ಪತ್ರಿಕೆಗಳಿಗೆ ಜಾಹೀರಾತು ನೀಡುವುದನ್ನು ನಿಲ್ಲಿಸುತ್ತಿವೆ. ಕೇಬಲ್ ನಿರ್ವಾಹಕರ ಮೇಲೆ ರಾಜಕೀಯ ಪಕ್ಷಗಳ ಸಂಪೂರ್ಣ ನಿಯಂತ್ರಣವಿದೆ. ತಮ್ಮ ಪಕ್ಷದ ವಿರುದ್ಧ ಸುದ್ದಿ ಪ್ರಸಾರ ಆಗುತ್ತಲೇ ಚಾನೆಲನ್ನು ಮಾಯ ಮಾಡಿ ಬಿಡುತ್ತಾರೆ. ಇವೆಲ್ಲ ಗಂಭೀರ ಪ್ರಶ್ನೆಗಳಾಗಿವೆ. ಇವೆಲ್ಲಾ ಮಾಧ್ಯಮವನ್ನು ನಿಯಂತ್ರಿಸಲು ನಡೆಯುತ್ತಿರುವುದಲ್ಲ. ಇವೆಲ್ಲ ನಿಮ್ಮನ್ನು ನಿಯಂತ್ರಿಸುವುದಕ್ಕಾಗಿ ನಡೆಯುತ್ತಿದೆ. ನಿಮ್ಮ ಮತ ಪಡೆದು ನಿಮ್ಮ ಕತ್ತು ಹಿಸುಕುವ ಉದ್ದೇಶದಿಂದ ಇದು ನಡೆಯುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)