varthabharthi


magazine

ನಾವು ಜನಪರವೇ ಎಂದು ಪ್ರಶ್ನೆ ಕೇಳಿಕೊಳ್ಳುವ ಸಮಯ ಬಂದಿದೆ...

ವಾರ್ತಾ ಭಾರತಿ : 12 Oct, 2016
ಅಜಯ್ ಕುಮಾರ್ ಸಿಂಗ್

ಸುದ್ದಿ ಮಾಧ್ಯಮಗಳ ಪಾತ್ರವೇ ಜನಪರವಾಗಿರುವುದು. ಆ ನಿಟ್ಟಿನಲ್ಲಿ ಅವರ ಪಾತ್ರ ದೊಡ್ಡದಿದೆ. ತಪ್ಪುಗಳನ್ನು, ಅನ್ಯಾಯವನ್ನು, ಸಮಾಜದ ವಕ್ರತೆಯನ್ನು, ವಿಕೃತಿಯನ್ನು ಹೊರಗೆಳೆಯಬೇಕು. ಅದು ಅವರ ಕರ್ತವ್ಯ ಕೂಡ. ಆ ರೀತಿ ಹೊರಗೆಳೆಯುವ ಮೂಲಕ ಸಾಕಷ್ಟು ಹೊಸ ಹೊಸ ಸಂಗತಿಗಳನ್ನು, ವಿಚಾರಗಳನ್ನು, ಮಾಹಿತಿಯನ್ನು ಮಾಧ್ಯಮಗಳಿಂದ ನಾವೂ ಕಲಿಯುತ್ತಿರುತ್ತೇವೆ. ನಮ್ಮದೇ ತಪ್ಪಾಗಿದ್ದಾಗ ತಿದ್ದಿಕೊಳ್ಳಲು ಅನುಕೂಲವಾಗುತ್ತದೆ. ಹಾಗಾಗಿ ನಾವು ಕೂಡ ಜಾಗೃತರಾಗಿದ್ದು, ಕಾನೂನುಬದ್ಧವಾಗಿ ಕೆಲಸ ಮಾಡಬೇಕಾದರೆ ಸುದ್ದಿ ಮಾಧ್ಯಮಗಳ ಪಾತ್ರ ದೊಡ್ಡದಿದೆ.


ಪೊಲೀಸ್ ಇಲಾಖೆಯ ಸುದೀರ್ಘ ಸೇವೆಯಿಂದ ನಿವೃತ್ತನಾಗಿ ಐದು ವರ್ಷ ಗಳಾಯಿತು. ದೇಹ ದಣಿದು ಮನಸ್ಸು ಮೆದುವಾಗಿ ಶಾಂತಿ- ಸಮಾಧಾನದತ್ತ ನೋಡುತ್ತಿದೆ. ಈ ಘಟ್ಟದಲ್ಲಿ ನೀವು ‘ಒಬ್ಬ ಪೊಲೀಸ್ ಅಕಾರಿಯಾಗಿ ನಿಮ್ಮ ಸೇವಾವಯಲ್ಲಿ ಮಾಧ್ಯಮಗಳನ್ನು, ಪತ್ರಕರ್ತರನ್ನು ಅರ್ಥೈಸಿಕೊಂಡ ಬಗೆ ಹೇಗೆ’ ಎಂದು ಪ್ರಶ್ನೆಯನ್ನು ಮುಂದಿಟ್ಟು, ಬರೆಯಲು ಹೇಳಿದರೆ ಕೊಂಚ ಕಷ್ಟ. ಆದರೂ ನನ್ನ ಅನುಭವ ಮತ್ತು ಚಿಂತನಾ ಕ್ರಮ-ಎರಡನ್ನೂ ಬೆರೆಸಿ ನಿಮ್ಮ ಮುಂದಿಡಲು ಪ್ರಯತ್ನಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸುದ್ದಿ ಮಾಧ್ಯಮಗಳ ಪಾತ್ರ ಮಹತ್ವವಾದುದು. ಶಕ್ತಿಶಾಲಿ ಮಾಧ್ಯಮ. ಸ್ವಾತಂತ್ರ ಸಂಗ್ರಾಮದ ದಿನಗಳಲ್ಲಿ ಸುದ್ದಿಮಾಧ್ಯಮಗಳದು ಸಕಾರಾತ್ಮಕವಾದ ಪಾತ್ರವಿತ್ತು. ಸಂಪ್ರದಾಯದ ರೀತಿಯಲ್ಲಿ ಅದು ಹಾಗೇ ಮುಂದುವರಿದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲೂ ಬಹಳ ಬದಲಾವಣೆಯಾಗಿದೆ. ನನ್ನ ಸರ್ವಿಸ್‌ನಲ್ಲಿ, ನನಗಂತೂ ಮೀಡಿಯಾ ಬೇರೆ, ನಾನು ಬೇರೆ ಅನಿಸಲಿಲ್ಲ. ಅವರು ನನ್ನ ಮೇಲೆ ಕಣ್ಣಿಟ್ಟಿದ್ದಾಗಲಿ, ಸಮಯ ನೋಡಿ ಸದೆಬಡಿದಿದ್ದಾಗಲಿ ಇಲ್ಲ. ಮೀಡಿಯಾಗಳ ಮುಖ್ಯ ಪಾತ್ರವೇನು- ಜನಪರವಾಗಿರುವುದು. ಪೊಲೀಸ್ ಅಕಾರಿಯಾಗಿ ನನ್ನ ಪಾತ್ರವೇನು- ಜನಪರವಾಗಿರುವುದು. ನನ್ನದು-ಅವರದು ಒಂದೇ ಆಗಿದ್ದಾಗ ಯಾವ ತೊಂದರೆಯೂ ಇಲ್ಲ. ತೊಂದರೆ ಯಾವಾಗ, ನನ್ನ ತಪ್ಪನ್ನು ಮುಚ್ಚಿಕೊಳ್ಳಲು ಹೋದಾಗ. ಹಾಗೆ ಮುಚ್ಚಿಕೊಳ್ಳಲು ಹೋಗುವುದೇ, ದೊಡ್ಡ ತಪ್ಪು.

ವ್ಯಕ್ತಿಗತ ನೆಲೆಯಲ್ಲಿ ನಿಂತು ನೋಡಿದರೆ, ಪತ್ರಿಕೋದ್ಯಮದ ವ್ಯವಸ್ಥೆಯಿಂದ ನನಗೆ ಬಹಳ ಅನುಕೂಲ ಆಗಿದೆ. ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಸಹಕಾರ ಸಿಕ್ಕಿದೆ. ಅದು ಹೇಗೆಂದರೆ, ಹಲವು ಸಂದರ್ಭಗಳಲ್ಲಿ ನಮ್ಮ ತಪ್ಪು ಜಾಸ್ತಿ ಇದೆ. ಆಗ ಅವರು ಸಮಾಜಕ್ಕೆ ಬಹಳ ಕಡಿಮೆ ತೋರಿಸಿದ್ದಾರೆ. ಹಾಗೆಯೇ ಕೆಲವೊಂದು ಸಲ, ನಮ್ಮ ತಪ್ಪು ಕಡಿಮೆ ಇದ್ದಾಗ ಹೆಚ್ಚು ತೋರಿಸಿದ್ದಾರೆ. ಆ ಮೂಲಕ ಜನರನ್ನು ತಪ್ಪು ದಾರಿಗೆಳೆದಿದ್ದಾರೆ. ಒಟ್ಟಾರೆ ನೋಡಿದಾಗ, ನಮ್ಮ ಪೊಲೀಸರ ತಪ್ಪನ್ನು ಕಡಿಮೆ ತೋರಿಸಿದ್ದಾರೆೆ.

ಸುದ್ದಿ ಮಾಧ್ಯಮಗಳ ಪಾತ್ರವೇ ಜನಪರವಾಗಿರುವುದು. ಆ ನಿಟ್ಟಿನಲ್ಲಿ ಅವರ ಪಾತ್ರ ದೊಡ್ಡದಿದೆ. ತಪ್ಪುಗಳನ್ನು, ಅನ್ಯಾಯವನ್ನು, ಸಮಾಜದ ವಕ್ರತೆಯನ್ನು, ವಿಕೃತಿಯನ್ನು ಹೊರಗೆಳೆಯಬೇಕು. ಅದು ಅವರ ಕರ್ತವ್ಯ ಕೂಡ. ಆ ರೀತಿ ಹೊರಗೆಳೆಯುವ ಮೂಲಕ ಸಾಕಷ್ಟು ಹೊಸ ಹೊಸ ಸಂಗತಿಗಳನ್ನು, ವಿಚಾರಗಳನ್ನು, ಮಾಹಿತಿಯನ್ನು ಮಾಧ್ಯಮಗಳಿಂದ ನಾವೂ ಕಲಿಯುತ್ತಿರುತ್ತೇವೆ. ನಮ್ಮದೇ ತಪ್ಪಾಗಿದ್ದಾಗ ತಿದ್ದಿಕೊಳ್ಳಲು ಅನುಕೂಲವಾಗುತ್ತದೆ. ಹಾಗಾಗಿ ನಾವು ಕೂಡ ಜಾಗೃತರಾಗಿದ್ದು, ಕಾನೂನುಬದ್ಧವಾಗಿ ಕೆಲಸ ಮಾಡಬೇಕಾದರೆ ಸುದ್ದಿ ಮಾಧ್ಯಮಗಳ ಪಾತ್ರ ದೊಡ್ಡದಿದೆ. ನಾನು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿದ್ದಾಗ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಗಳಾಗಿದ್ದರು. ಆಗ ಕನ್ನಡ ಚಲನಚಿತ್ರ ನಟರಾದ ಡಾ.ರಾಜಕುಮಾರ್ ನಿಧನರಾದರು. ರಾಜಕುಮಾರ್ ಅಂದರೆ, ಕನ್ನಡಿಗರ ಕಣ್ಮಣಿ. ನೂರಾರು ಚಿತ್ರಗಳ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದವರು. ಅವರ ವಿನಯ, ವಿದ್ವತ್ತು, ಪ್ರಬುದ್ಧ ನಟನೆಯಿಂದ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದವರು. ಸಹಜವಾಗಿಯೇ ನಿಧನದ ಸುದ್ದಿ ಹಬ್ಬುತ್ತಿದ್ದಂತೆ, ಅವರ ಅಭಿಮಾನಿಗಳು, ಚಿತ್ರರಸಿಕರು, ಸಾರ್ವಜನಿಕರು ಬೆಂಗಳೂರಿನ ಬೀದಿಗಿಳಿದರು. ರಾಜಕುಮಾರ್ ಅವರ ಪಾರ್ಥಿವ ಶರೀರದ ಮೆರವಣಿಗೆ, ದರ್ಶನಕ್ಕಿಡುವ ಸ್ಥಳ, ಅಂತಿಮ ವಿವಿಧಾನಗಳ ಬಗ್ಗೆ ಯಾರಿಗೂ ಖಚಿತ ಸುದ್ದಿ ಇರಲಿಲ್ಲ.

ಇಂತಹ ಸಂದಿಗ್ಧ ಸಮಯದಲ್ಲಿ ಗಾಳಿಸುದ್ದಿಗಳದ್ದೇ ಕಾರುಬಾರು. ಅವತ್ತು ಕೂಡ ಹಾಗೇ ಆಯಿತು. ರಾಜಕುಮಾರ್ ನೋಡಲು ಜನ ಸಾಗರದಂತೆ ಬಂದರು. ಕೆಲವು ಸಮಾಜಘಾತುಕ ಶಕ್ತಿಗಳು ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆ ಮಾಡಿದರು. ಬಸ್‌ಗಳಿಗೆ ಕಲ್ಲು ತೂರಿ ಗಾಜುಗಳನ್ನು ಪುಡಿಗಟ್ಟಿದರು. ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಶಾಂತಿಯಿಂದ ನಡೆಯಬೇಕಾದ ಶವಸಂಸ್ಕಾರ ಗದ್ದಲ, ಗಲಾಟೆ, ಪ್ರಕ್ಷುಬ್ಧತೆಯಿಂದ ನಡೆಯುವಂತಾಯಿತು. ಅಂದಿನ ಗಲಭೆಯನ್ನು ದೃಶ್ಯ ಮಾಧ್ಯಮಗಳು ವೈಭವೀಕರಿಸಿ ತೋರಿಸಿದವು. ಪದೇ ಪದೇ ಪೊಲೀಸರ ವೈಲ್ಯ ಎಂಬ ಸುದ್ದಿಯನ್ನೇ ಮುಖ್ಯವಾಗಿ ಬಿತ್ತರಿಸಿದರು. ಕಲ್ಲು ತೂರಾಟ, ಲಾಠಿ ಚಾರ್ಜ್, ಅಮಾಯಕರಿಗೆ ಪೆಟ್ಟು, ಆಸ್ತಿ-ಪಾಸ್ತಿ ನಷ್ಟದ್ದೆ ದೊಡ್ಡ ಸುದ್ದಿಯಾಯಿತು. ದಿನವಿಡೀ ತೋರಿಸಿ, ಬೆಂಗಳೂರು ಪ್ರಕ್ಷುಬ್ಧ ಎಂಬಂತೆ ಬಿಂಬಿಸಲಾಯಿತು. ಅಷ್ಟೇ ಅಲ್ಲ, ಮಾರನೇ ದಿನ ವೃತ್ತಪತ್ರಿಕೆಗಳಲ್ಲೂ ಅದೇ ಸುದ್ದಿ, ಅದೇ ಧಾಟಿ ಪುನರಾವರ್ತನೆಯಾಯಿತು. ಎಲ್ಲರ ಕಣ್ಣು, ದೂರು, ಟೀಕೆ, ನಿಂದನೆ ಪೊಲೀಸರ ಮೇಲೆ. ಕೆಲ ಮಂತ್ರಿಗಳಿಂದಲೂ ಮೂದಲಿಕೆಗಳು ಕೇಳಿಬಂದವು. ನಗರ ಕಮಿಷನರ್ ಆಗಿದ್ದ ನಾನು, ‘ಹೌದು, ಇದು ಪೊಲೀಸರ ವೈಲ್ಯದಿಂದಾದ ಅವಘಡ’ ಎಂದು ಒಪ್ಪಿಕೊಂಡೆ. ನಮ್ಮಿಂದ ತಪ್ಪಾಗಿದೆ ಎಂದು ಹೇಳಿ, ಅಂದಿನ ಪ್ರಕ್ಷುಬ್ಧ ಪರಿಸ್ಥಿತಿಯನ್ನು ವಿವರಿಸಿ,  ಮಾಡಿದ್ದರೆ ಗಲಾಟೆ ಇನ್ನೂ ಹೆಚ್ಚಾಗಿ ಸಾವು ನೋವು ಸಂಭವಿಸುತ್ತಿತ್ತು, ಹಾಗೆ ಮಾಡದೆ ಇದ್ದಿದ್ದರಿಂದ, ಅದು ವೈಲ್ಯದಂತೆ ಕಾಣುತ್ತಿದೆ’ ಎಂದು ಸಮಜಾಯಿಷಿ ಕೊಟ್ಟೆ. ಅಷ್ಟೇ ಅಲ್ಲ, ಮೂರ್ನಾಲ್ಕು ದಿನಗಳಲ್ಲಿ ಒಂದು ಪ್ರೆಸ್ ಮೀಟ್ ಕರೆದು, ಉಪಸ್ಥಿತರಿದ್ದ ಪತ್ರಕರ್ತರಿಗೆ ಒಂದು ವೀಡಿಯೊ ತುಣುಕನ್ನು ತೋರಿಸುವ ವ್ಯವಸ್ಥೆ ಮಾಡಿದೆ. ‘ನೋಡಿ, ರಾಜಕುಮಾರ್ ಅವರ ಪಾರ್ಥಿವ ಶರೀರ ಅವರ ಸ್ವಗೃಹ ಸದಾಶಿವನಗರದಲ್ಲಿದೆ, ಅಲ್ಲಿಯೂ ಜನ ಜಮಾಯಿಸಿದ್ದಾರೆ. ಬೇರೆ ಬೇರೆ ಪ್ರದೇಶಗಳಿಂದ ನಗರದ ಕೇಂದ್ರ ಸ್ಥಳಕ್ಕೆ ಆಗಮಿಸುತ್ತಿದ್ದ ಅಭಿಮಾನಿಗಳು ಅಲ್ಲಲ್ಲಿ ಗುಂಪುಗೂಡಿದ್ದಾರೆ.

ಆ ಕಾರಣದಿಂದಾಗಿ ಎಲ್ಲ ರಸ್ತೆಗಳಲ್ಲಿ ಜನ. ನಮ್ಮಲ್ಲಿ ಪೊಲೀಸ್ರ್ಸ್ ಪೋಸ್ ಎಷ್ಟಿದೆ? ಎಲ್ಲಿಗೆ ಅಂತ ನಾವು ನಿಯೋಜಿಸುವುದು? ಪರಿಸ್ಥಿತಿ ಯನ್ನು ಹ್ಯಾಂಡಲ್ ಮಾಡುವ ಬಗೆ ಹೇಗೆ?’ ಎಂಬ ಪ್ರಶ್ನೆಗಳನ್ನಿಟ್ಟೆ. ಮುಂದುವರಿದು, ‘ನಿಮಗೆ ತೋರಿಸಿರುವ ಈ ವೀಡಿಯೊ ನಮ್ಮ ಇಲಾಖೆಯದ್ದು ಮತ್ತು ನಿಮ್ಮ ಕೆಲವು ಟಿವಿ ಚಾನಲ್‌ಗಳ ಕವರೇಜ್‌ಗಳ ಪುಟೇಜ್‌ಗಳಿಂದ ತೆಗೆದದ್ದು. ಈಗ ನಿಮ್ಮಿಂದ ನಮಗೆ ಒಂದು ಸಹಾಯ ಆಗಬೇಕಿದೆ, ಅದೇನೆಂದರೆ ನಾವಿಲ್ಲಿ ನೋಡಿ ಗುರುತಿಸಿರುವ, ನೀವು ಕೂಡ ನೋಡಿರುವ ಕೆಲವು ಸಮಾಜಘಾತುಕ ಶಕ್ತಿಗಳ ಚಿತ್ರಗಳನ್ನು ಆ ವೀಡಿಯೊದಿಂದ ಹೆಕ್ಕಿ, ನಿಮಗೆ ಕೊಡುತ್ತೇವೆ, ನೀವು ಅವರ ಪೋಟೋಗಳನ್ನು ನಿಮ್ಮ ಸುದ್ದಿ ಮಾಧ್ಯಮಗಳಲ್ಲಿ ಪಬ್ಲಿಷ್ ಮಾಡಿ, ದುಷ್ಕರ್ಮಿಗಳನ್ನು ಹಿಡಿಯುವಲ್ಲಿ, ಶಿಕ್ಷಿಸುವಲ್ಲಿ ಸಹಕರಿಸಬೇಕು’ ಎಂದು ಮನವಿ ಮಾಡಿಕೊಂಡೆ.

ಹೆಚ್ಚಿನ ಪತ್ರಕರ್ತರು, ಇದು ಒಳ್ಳೆಯ ಕೆಲಸ, ಆಗಲಿ ಎಂದು ನಮ್ಮ ಜೊತೆ ಕೈಜೋಡಿಸಿದರು. ಹೇಳಿದಂತೆ ಅವರವರ ಸುದ್ದಿ ಮಾಧ್ಯಮಗಳಲ್ಲಿ ೆಟೋ ಪಬ್ಲಿಷ್ ಮಾಡಿದರು. ಅದರ ಆಧಾರದ ಮೇಲೆ ನಾವು 30-35 ಜನ ದುಷ್ಕರ್ಮಿಗಳನ್ನು ಹಿಡಿದೆವು. ಇದು ನನ್ನ ಪ್ರಕಾರ ಸಕಾರಾತ್ಮಕ ಬೆಳವಣಿಗೆ. ಸಹಯೋಗದಿಂದ ಸಮಾಜಕ್ಕೆ ಅನುಕೂಲ ವಾಗಿದ್ದು, ಇಬ್ಬರಿಂದಲೂ ಆದ ಒಳ್ಳೆಯ ಕೆಲಸವೆಂದೇ ಭಾವಿಸುವೆ.
*****

ಇಲಾಖೆಯಿಂದ ಪತ್ರಕರ್ತರನ್ನು ಆಹ್ವಾನಿಸಿ ಪತ್ರಿಕಾಗೋಷ್ಠಿ ಆಯೋಜಿಸಿದೆವು. ನಾನಾಗ ಕಿರಿಯ ಅಕಾರಿಯಾಗಿದ್ದೆ. ನನ್ನ ಹಿರಿಯ ಅಕಾರಿಗಳ ಜೊತೆಗೆ ವೇದಿಕೆಯ ಮೇಲೆ ಕೂತಿದ್ದೆ. ಯಾವುದೋ ಒಂದು ವಿಷಯಕ್ಕೆ ಸಂಬಂಸಿದಂತೆ, ನಮ್ಮ ಇಲಾಖೆಯಿಂದ ಅಂಕಿಅಂಶಗಳನ್ನು ಬಿಡುಗಡೆ ಮಾಡಿ, ನಮ್ಮಿಂದ 100% ಕೆಲಸ ಆಗಿದೆ, ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇವೆ ಎಂದು ನಮ್ಮ ಹಿರಿಯ ಅಕಾರಿಗಳು ಪತ್ರಕರ್ತರಿಗೆ ವಿವರಿಸು ತ್ತಿದ್ದರು. ನನಗೆ ಇದರಲ್ಲಿ ಡೌಟು ಬಂತು. ಇಲ್ಲ, ನಾವು ಈ ಕಾರ್ಯದಲ್ಲಿ 100% ಮಾಡಿಲ್ಲ. ನಾವು ಸುಳ್ಳು ಹೇಳುತ್ತಿದ್ದೇವೆ ಎನ್ನಿಸಿತು. ಆಶ್ಚರ್ಯವೆಂದರೆ, ಪತ್ರಿಕಾಗೋಷ್ಠಿ ಮುಗಿದ ಮೇಲೆ ಕೆಲವು ಪತ್ರಕರ್ತರು ನನಗೆ ನೇರವಾಗಿ ಪ್ರಶ್ನೆ ಮಾಡಿ, ‘100% ಎಲ್ಲಿ ಆಗಿದೆ ಸಾರ್’ ಎಂದರು. ‘ನಾನು ನಮ್ಮ ಇಲಾಖೆಯ ಲೋಪ ದೋಷಗಳನ್ನು, ಸುಳ್ಳು ಹೇಳಿಕೆಯನ್ನು ಒಪ್ಪಿ, ನನಗೂ ಹಾಗೆ ಅನ್ನಿಸಿತು’ ಎಂದೆ. ನಾನು ಹೇಳಲು ಹೊರಟಿದ್ದೇನೆಂದರೆ, ನಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಅಪ್ರಾಮಾಣಿಕರಾಗ ಬಾರದು. ನಮ್ಮ ತಪ್ಪನ್ನು ನಾವು ಒಪ್ಪಿಕೊಳ್ಳಬೇಕು. 


ಇದು ನಮ್ಮ ಕಡೆಯಿಂದ, ಪೊಲೀಸರ ಕಡೆಯಿಂದ ಆದ ತಪ್ಪು. ಆದರೆ ಕೆಲವು ಸಲ ಸುದ್ದಿ ಮಾಧ್ಯಮಗಳಿಂದಲೂ ತಪ್ಪಾಗುತ್ತದೆ. ಅದಕ್ಕೊಂದು ಘಟನೆಯನ್ನು ವಿವರಿಸಿದರೆ, ಸುದ್ದಿ ಮಾಧ್ಯಮಗಳು ಯಾವ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು, ಸಾಮಾಜಿಕವಾಗಿ ಅವುಗಳ ಪಾತ್ರವೇನು ಎನ್ನುವುದು ನಿಮಗೆ ಅರಿವಾಗಬಹುದು.

ನಾನು ಕಮಿಷನರ್ ಆಗಿರುವಾಗಲೇ, ರಾಮಮೂರ್ತಿನಗರ ಠಾಣೆ ಲಿಮಿಟ್‌ನಲ್ಲಿ ಒಂದು ಮಗು ಕಿಡ್ನಾಪ್ ಆಯಿತು. ಹತ್ತಿರದ ಠಾಣೆಗೆ ಬಂದ ಪೋಷಕರು, ಕೆಲವರ ಮೇಲೆ ಗುಮಾನಿ ಇದೆ ಎಂದು ಹೇಳಿ ದೂರು ನೀಡಿದರು. ತನಿಖಾ ತಂಡ ರಚನೆಯಾಯಿತು. ಒಂದೆರಡು ದಿನಗಳಾದ ಮೇಲೆ, ಸ್ವಲ್ಪ ಮಾಹಿತಿಯೂ ಸಿಕ್ಕಿತು. ನಮ್ಮ ಪೊಲೀಸ್ ತಂಡ, ಹಗಲುರಾತ್ರಿ ಶ್ರಮವಹಿಸಿ, ಕಿಡ್ನಾಪರ್‌ಗಳನ್ನು ಟ್ರೇಸ್‌ಔಟ್ ಮಾಡಿತು, ಅವರು ಎಲ್ಲಿದ್ದಾರೆ ಎನ್ನುವುದೂ ಗೊತ್ತಾಯಿತು. ತುಂಬಾ ಸೂಕ್ಷ್ಮ ವಿಚಾರ, ಅದನ್ನು ನಮ್ಮ ತಂಡವೂ ಅಷ್ಟೇ ಜಾಗರೂಕತೆಯಿಂದ ಹ್ಯಾಂಡಲ್ ಮಾಡುತ್ತಿತ್ತು. ಮಗುವಿನ ಜೀವಕ್ಕೆ ಅಪಾಯವಿದೆ ಎಂದರಿತ ನಾವು ಸುದ್ದಿ ಮಾಧ್ಯಮಗಳಿಗೆ ಸುದ್ದಿ ಬಿತ್ತರಿಸಲಿಲ್ಲ. ಸಹಜವಾಗಿಯೇ ಪತ್ರಕರ್ತರು ನಮ್ಮ ಮೇಲೆ ಪ್ರೆಷರ್ ತರಲಾರಂಭಿಸಿದರು. ಡೆವಲಪ್‌ಮೆಂಟ್ಸ್‌ನ್ನಾದರೂ ಹೇಳಿ ಎಂದು ಪೀಡಿಸತೊಡಗಿದರು. ನಾನು ಅವರಿಗೆಲ್ಲ, ‘ಎಲ್ಲವೂ ನಮ್ಮ ಕಂಟ್ರೋಲ್‌ನಲ್ಲಿದೆ, ದಯವಿಟ್ಟು ಸಹಕರಿಸಿ, ಸ್ವಲ್ಪ ಸಾವಧಾನವಾಗಿರಿ’ ಎಂದು ಕೇಳಿಕೊಂಡೆ. ಅದೂ ಆಯಿತು. ಇಷ್ಟರ ನಡುವೆ, ಕೆಲವು ಪತ್ರಕರ್ತರು, ಅದು ಹೇಗೋ ಮಗುವಿನ ಪೋಷಕರನ್ನು ಪತ್ತೆ ಹಚ್ಚಿ, ಮನವೊಲಿಸಿ, ಅವರ ಸಂದರ್ಶನ ಮಾಡಿಬಿಟ್ಟರು. ಅದು ನನಗೆ ಗೊತ್ತಾಯಿತು. ಆಗಲೂ ನಾನು, ಅವರನ್ನು ಕರೆದು, ‘ದಯವಿಟ್ಟು ಪಬ್ಲಿಷ್ ಮಾಡಬೇಡಿ, ತನಿಖೆ ಪ್ರಗತಿಯಲ್ಲಿದೆ, ನಮ್ಮ ಪೊಲೀಸರು ಅವರ ಜಾಡು ಹಿಡಿದಿದ್ದಾರೆ, ಈ ಹಂತದಲ್ಲಿ ಪಬ್ಲಿಷ್ ಮಾಡುವುದು ಬೇಡ’ ಎಂದು ವಿನಂತಿಸಿಕೊಂಡೆ. ಬ್ರೇಕಿಂಗ್ ನ್ಯೂಸ್ ಹಪಾಹಪಿಗೆ ಬಿದ್ದು, ನಮ್ಮಲ್ಲಿಯೇ ಮೊದಲು ಎಂಬ ಕಿಕ್ಕರ್ ಹಾಕಿ ಸಂದರ್ಶನವನ್ನು ಪಬ್ಲಿಷ್ ಮಾಡಿಯೇಬಿಟ್ಟರು. ಮಗುವಿನ ಪೋಷಕರು ಎಲ್ಲವನ್ನು ಹೇಳಿ ಬಿಟ್ಟಿದ್ದರು. ಇದು ಪ್ರಕಟವಾದ ಮರುದಿನವೇ ಕೋಲಾರದಲ್ಲಿ ಮಗುವಿನ ಡೆಡ್ ಬಾಡಿ ಸಿಕ್ಕಿತು. 

ಕೋಮುಗಲಭೆ, ಭಯೋತ್ಪಾದಕ ಕೃತ್ಯಗಳು, ರೌಡಿಗಳ ಕಾದಾಟ... ಪೊಲೀಸರಿಗೆ ಕಾಮನ್. ಆದರೆ ಒಂದು ವರ್ಗದ ಜನರಿಗೆ, ರಾಜಕೀಯ ಪಕ್ಷಕ್ಕೆ ಬೇರೆಯದೆ ಲಾಭ-ನಷ್ಟದ ಲೆಕ್ಕಾಚಾರಗಳಿರುತ್ತವೆ ಎನ್ನುವುದನ್ನು ನನ್ನ ಅನುಭವದಿಂದ ಅರಿತಿದ್ದೇನೆ. ನಾನೊಂದು ಸಲ ಬಾಂಬ್ ಬ್ಲಾಸ್ಟ್‌ಗೆ ಸಂಬಂಸಿದ ಒಬ್ಬ ಆರೋಪಿಯನ್ನು ಅರೆಸ್ಟ್ ಮಾಡಿದೆ. ಆತ ಭಯೋತ್ಪಾದಕ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ. ಆರೋಪಿಯನ್ನು ಸುದ್ದಿ ಮಾಧ್ಯಮಗಳು ಮತ್ತು ಕೋರ್ಟ್ ಮುಂದೆ ತರಲೇಬೇಕು, ಹೆಸರನ್ನು ತಿಳಿಸಲೇಬೇಕು. ಮುಚ್ಚಿಡಲಾಗುವುದಿಲ್ಲ. ನಾನು ಎಲ್ಲ ಕೇಸಿ ನಂತೆಯೇ ಎಂದು ತಿಳಿದು ಹೇಳಿದೆ. ತಕ್ಷಣ ನನಗೆ ಕೆಲ ಸಮಾಜಸೇವಕರು, ರಾಜಕೀಯ ನಾಯಕರಿಂದ ೆನ್ ಕರೆಗಳು ಬಂದವು. ಯಾಕೆ ಒಂದು ವರ್ಗದ ಜನರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದೀರ ಎಂದು. ನಾನು, ಯಾರು ಆರೋಪಿ ಇದಾನೆ, ಅವನನ್ನು ಅರೆಸ್ಟ್ ಮಾಡಿದ್ದೇನೆ. ಆತನನ್ನು ನಾನು ವ್ಯಕ್ತಿಗತ ನೆಲೆಯಲ್ಲಿ ನೋಡಿದ್ದೇನೆ. ಕೆಟ್ಟ ಕೆಲಸ ಮಾಡಿದವನು ಎಂದು ಪರಿಗಣಿಸಿ, ಆತನನ್ನು ಕಾನೂನಿನ ಚೌಕಟ್ಟಿನಡಿ ತರುವುದು, ಆತನ ಹೆಸರು ಬಹಿರಂಗಪಡಿಸುವುದು ನನ್ನ ಕರ್ತವ್ಯ. ಆದರೆ ಮೀಡಿಯಾ ಅದನ್ನು ಹೇಗೆ ಹ್ಯಾಂಡಲ್ ಮಾಡುತ್ತದೆ, ಮಾಡಬೇಕು ಎನ್ನುವುದು ಅವರ ವಿವೇಚನೆಗೆ ಬಿಟ್ಟಿದ್ದು ಅಂದೆ. ಆದರೆ ಅದು ಅಷ್ಟಕ್ಕೇ ನಿಲ್ಲದೆ ವಿಕೋಪಕ್ಕೆ ಹೋಗುವಂತೆ ಕಾಣತೊಡಗಿತು. ಆಗ ನಾನು ಒಂದಷ್ಟು ಪತ್ರಕರ್ತರನ್ನು ಕರೆದು, ಸಮಸ್ಯೆಯನ್ನು ಅವರ ಮುಂದಿಟ್ಟೆ. ಅವರು ಒಂದು ಸಭೆ ಕರೀರಿ, ಡಿಸ್ಕಸ್ ಮಾಡೋಣ ಎಂದರು. ನನಗೂ ಸರಿ ಎನ್ನಿಸಿತು. ವಿಶೇಷವಾಗಿ ಟಿವಿ ಜರ್ನಲಿಸ್ಟ್‌ಗಳು, ಉರ್ದು ಪೇಪರ್‌ಗಳ ಪತ್ರಕರ್ತರು ಹೆಚ್ಚಾಗಿದ್ದರು. ನಾನು, ಎಲ್ಲಾ ಕೇಸ್‌ಗಳಂತೆಯೇ ಇದನ್ನು ಪರಿಗಣಿಸಿದೆ, ಆರೋಪಿಯನ್ನು ಹಿಡಿದು, ಆತನನ್ನು ಕೋರ್ಟಿಗೆ ಪ್ರೊಡ್ಯೂಸ್ ಮಾಡಿದೆ.

ಇದರಲ್ಲಿ ನನ್ನದೇನು ತಪ್ಪಿದೆ ಎಂದು ಕೇಳಿದೆ. ಅದಕ್ಕೆ ಪತ್ರಕರ್ತರು ಸಕಾರಾತ್ಮಕವಾಗಿ ಸ್ಪಂದಿಸಿದರು. ಅಷ್ಟೇ ಅಲ್ಲ, ಮಾರನೆ ದಿನದ ಪತ್ರಿಕೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಉರ್ದು ಪತ್ರಿಕೆಗಳಲ್ಲಿ, ನಿಜಸ್ಥಿತಿಯನ್ನು ಯಥಾವತ್ತಾಗಿ ಬರೆದು, ತಪ್ಪು ತಿಳುವಳಿಕೆಯನ್ನು ದೂರ ಮಾಡಿದ್ದರು. ನಾವು ಪೊಲೀಸ್‌ನವರು, ಪಬ್ಲಿಕ್ ಸರ್ವೆಂಟ್ಸ್. ನಮ್ಮ ಚಟುವಟಿಕೆಗಳು, ಕಾರ್ಯವಿಧಾನ ಜನಪರವಾಗಿದೆಯಾ ಅಂತ ಪ್ರಶ್ನಿಸಿಕೊಳ್ಳಬೇಕು. ಇದನ್ನೇ ಸುದ್ದಿ ಮಾಧ್ಯಮಗಳೂ ಕೂಡ ಮಾಡಬೇಕು. ಆದರೆ ಇವತ್ತು ಏನಾಗಿದೆ, ಬಾಂಬ್ ಹಾಕಿದಾಗ ಒಬ್ಬ ಕ್ರಿಮಿನಲ್ ಹಾಕಿದ್ದಾನೆ ಅಂತ ಆಗಲ್ಲ. ಆತನ ಕುಟುಂಬ, ಜಾತಿ, ಧರ್ಮ, ದೇಶವನ್ನೂ ಎಳೆದು ತರಲಾಗುತ್ತಿದೆ. ಅದರಲ್ಲೂ ಮೀಡಿಯಾದವರು ತಾರತಮ್ಯ ತೋರುವುದುಂಟು. ಮುಸ್ಲಿಮನಾದರೆ, ಸಿಕ್ಕಾಪಟ್ಟೆ ತೋರಿಸೋದು; ಹಿಂದೂವಾದರೆ ಎಷ್ಟು ಬೇಕೋ ಅಷ್ಟನ್ನು, ಕೆಲವೊಮ್ಮೆ ತೋರಿಸದೆ ಬಿಟ್ಟ ಪ್ರಸಂಗಗಳೂ ಉಂಟು. ಅದು ಆಗಬಾರದು. ಅದರಲ್ಲೂ ಒಂದು ಕಮ್ಯುನಿಟಿಯನ್ನು ಮಾತ್ರ ಟಾರ್ಗೆಟ್ ಮಾಡುವುದು ಆರೋಗ್ಯವಂತ ಸಮಾಜದ ಲಕ್ಷಣವಲ್ಲ.

ಟಾರ್ಗೆಟ್ ಮಾಡೋದು ಡಿಸ್‌ಹಾನೆಸ್ಟಿ. ನಿಜಸಂಗತಿ ಹೇಳೋದು ಸುದ್ದಿ ಮಾಧ್ಯಮಗಳ ಜವಾಬ್ದಾರಿ. ನಮ್ಮ ದೇಶದ ರಾಜಕೀಯ ವ್ಯವಸ್ಥೆ ಜಾತಿ, ಧರ್ಮವನ್ನು ಅವಲಂಬಿಸಿದೆ. ಅದು ಪೊಲೀಸ್ ಇಲಾಖೆ ಮತ್ತು ಪತ್ರಿಕೋದ್ಯಮದಲ್ಲೂ ಪ್ರತಿಲನವಾಗುತ್ತಿದೆ. ಹಾಗಾಗಿ ಕೆಲವು ಸಂದರ್ಭಗಳಲ್ಲಿ, ಮೀಡಿಯಾ ಮತ್ತು ಪೊಲೀಸ್, ಎರಡೂ ಒಂದಾಗಿ ವೈಯಕ್ತಿಕ ಲಾಭಕ್ಕಾಗಿ ಅಕಾರವನ್ನು ದುರುಪಯೋಗಪಡಿಸಿಕೊಳ್ಳುವ, ಸಮಾಜದ ದಿಕ್ಕು ತಪ್ಪಿಸುವಂತಹ ಕೆಲಸವೂ ನಡೆಯುತ್ತಿದೆ. ಇದು ಬೇರೆ ರಾಜ್ಯಗಳಿಗೆ ಹೋಲಿಸಿ ನೋಡಿದಾಗ, ನಮ್ಮ ರಾಜ್ಯದಲ್ಲಿ ಅತಿಗೆ, ಅಪಾಯದ ಮಟ್ಟಕ್ಕೆ ಹೋಗಿಲ್ಲ ಅನ್ನುವುದು ನನ್ನ ಭಾವನೆ. ಹಾಗಂತ ಇದು ಸರಿ ಅಂತಲ್ಲ, ತಪ್ಪು.

 ನಾನು, ಯಾವಾಗಲೂ ನಮ್ಮ ಅಕಾರಿಗಳಿಗೆ ಹೇಳುತ್ತಿದ್ದುದನ್ನೇ ಇಲ್ಲೂ ಹೇಳಲು ಇಷ್ಟಪಡುತ್ತೇನೆ. ನಮ್ಮ ಹಿರಿಯ ಅಕಾರಿಗಳು ನಿವೃತ್ತರಾದಾಗ, ಗೌರವಯುತವಾಗಿ ಬೀಳ್ಕೊಡಬೇಕೆಂದು ಬಯಸುತ್ತಾರೆ. ಆದರೆ ವೃತ್ತಿಜೀವನದಲ್ಲಿ ಸ್ವಜನಪಕ್ಷಪಾತ, ಅಕಾರ ದುರುಪಯೋಗ, ಭ್ರಷ್ಟಾಚಾರಕ್ಕೆ ಒಳಗಾಗಿ ಭಾರೀ ಹಣ ಸಂಪಾದಿಸಿರುತ್ತಾರೆ. ಇಂತಹವರನ್ನು ಗೌರವಯುತವಾಗಿ ಬೀಳ್ಕೊಡುವುದು ಹೇಗೆ? ಗೌರವಯುತವಾಗಿ ಬೀಳ್ಕೊಡಬೇಕಾದರೆ ಅವರೂ ಗೌರವಯುತವಾಗಿ, ಒಳ್ಳೆಯವರಾಗಿ ನಡೆದುಕೊಳ್ಳಬೇಕಲ್ಲವೇ? ಇದನ್ನು ನಾನು ಕೆಲವರಿಗೆ ನೇರವಾಗಿಯೇ ಪ್ರಶ್ನಿಸಿದ್ದೇನೆ. ಅವರು ಕಷ್ಟ, ನಿಮ್ಮ ಹಾಗೆ ಇರಲು ಆಗುವುದಿಲ್ಲ ಎನ್ನುತ್ತಾರೆ. ನಾನು ಹೇಳುವುದೇನೆಂದರೆ, 40 ಡಿಗ್ರಿ ಸೆಲ್ಸಿಯಸ್ ಬಿಸಿಲು, ನನಗೂ ಅವರಿಗೂ- ಇಬ್ಬರಿಗೂ ಒಂದೇ ಅಲ್ಲವೇ, ಎಂದು. ಇದನ್ನೇ ಸುದ್ದಿ ಮಾಧ್ಯಮಗಳಿಗೂ ಅಪ್ಲೆ ಮಾಡಬಹುದು. ಇವತ್ತು ಬ್ರೇಕಿಂಗ್ ನ್ಯೂಸ್ ಪೈಪೋಟಿಗೆ ಬಿದ್ದಿರುವ ಪತ್ರಕರ್ತರು, ಪತ್ರಿಕೋದ್ಯಮವನ್ನು ವಿಕೋಪಕ್ಕೆ ಕೊಂಡೊಯ್ಯುತ್ತಿದ್ದಾರೆ. ಈ ಬಗ್ಗೆ ನಾನು ಹಿರಿಯರೊಂದಿಗೆ ಚರ್ಚಿಸುವಾಗ ಅವರು, ಭವಿಷ್ಯದಲ್ಲಿ ಮೀಡಿಯಾ ಆಂಟಿ ಸೋಷಿಯಲ್ ಆಗಲಿದೆ ಎಂದರು. ಇದು ಅತಿ ಅನ್ನಿಸಬಹುದು, ಆದರೆ ನಿಜ.

ಈಗಲೇ ನಾವು ಅದನ್ನು ಕಾಣುತ್ತಿದ್ದೇವೆ. ನ್ಯೂಸ್ ಟೈಮ್ ಮನರಂಜನೆಯಾಗಿದೆ. ಮನುಷ್ಯತ್ವ ಕಳೆದುಕೊಳ್ಳುತ್ತಿದೆ. ಈ ಸ್ಥಿತಿಯಿಂದ ಹೊರಬರಬೇಕಾದರೆ, ಸರಕಾರ ಕಾಯ್ದೆ ಕಾನೂನುಗಳ ಮೂಲಕ ಸರಿದಾರಿಗೆ ತರಬೇಕು; ಪತ್ರಕರ್ತರೇ, ನಾವು ಜನಪರವೇ ಎಂದು ಪ್ರಶ್ನೆ ಕೇಳಿಕೊಳ್ಳಬೇಕು; ಸಾಮಾಜಿಕವಾಗಿ ಮೀಡಿಯಾಗಳು ನಂಬಿಕೆ ಕಳೆದುಕೊಳ್ಳುದ ಸ್ಥಿತಿ ನಿರ್ಮಾಣವಾಗಬೇಕು. ನನ್ನ ಪ್ರಕಾರ, ಸರಕಾರ ಗಳು ಸುದ್ದಿಮಾಧ್ಯಮಗಳನ್ನು ನಿಯಂತ್ರಿಸುವ ಕೆಲಸಕ್ಕೆ ಕೈಹಾಕುವುದಿಲ್ಲ, ರಿಪೇರಿಯನ್ನೂ ಮಾಡುವುದಿಲ್ಲ. ಇನ್ನು ಜನರಿಗೆ ಸುದ್ದಿಮಾಧ್ಯಮಗಳ ಬಗ್ಗೆ ನಂಬಿಕೆ ಹೊರಟು ಹೋಗಿದೆ. ನ್ಯೂಸ್ ಅನ್ನು ಸಹ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಿಲ್ಲ. ಅಂದಮೇಲೆ, ಉಳಿದಿರುವುದು, ಸುದ್ದಿ ಮಾಧ್ಯಮಗಳೇ, ಪತ್ರಕರ್ತರೇ ‘ನಾವು ಜನಪರವೇ’ ಎಂದು ಪ್ರಶ್ನೆ ಕೇಳಿಕೊಳ್ಳುವುದು.        

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)