varthabharthi


magazine

ಕವಿ ಐಲು ಗುಡ್ಡಪ್ಪ

ವಾರ್ತಾ ಭಾರತಿ : 13 Oct, 2016
ಕಲೀಮುಲ್ಲಾಇಂಥ ಗುಡ್ಡಪ್ಪ ಇತ್ತೀಚೆಗೆ ಹುಚ್ಚನಂತಾಗಿದ್ದಾನೆ ಎಂದು ಯಾವ ಮಗನಾದರೂ ಹೇಳಬಹುದಾಗಿತ್ತು. ಅವನಿಗಿದ್ದ ಸನ್ನಿ ಪಕ್ಕನೆ ಗೊತ್ತಾಗುವಂಥದ್ದಲ್ಲ. ಅದು ಮಾತಿಗೆ ಮಾತು ಬೆಳೆದಂತೆ ನಿಧಾನವಾಗಿ ಬಯಲಾಗುವಂಥದ್ದು. ಈ ಮೊದಲಿನಿಂದ ಇವನು ಹೀಗೆಯೇ ಇದ್ದನೆ? ಎಂದರೆ ‘ಇಲ್ಲ’ ಎನ್ನುವ ಗೆಳೆಯರಿರುವಷ್ಟೇ ‘ಹೌದು’ ಎಂದು ಕತ್ತು ಕುಣಿಸುವ ದುಷ್ಮನ್‌ಗಳೂ ಇದ್ದರು.

‘‘ಸಾರ್ ಅವನ ಸವಾಸಕ್ಕೆ ಮಾತ್ರ ಹೋಗ್ಬೇಡಿ ದೊಡ್ಡ್ ಹುಚ್ಚ ನನ್ಮಗ ಅವನು’’ ಎಂದು ಎಲ್ಲರೂ ನನಗೆ ತಿಳಿ ಹೇಳಿದ್ದರು. ಈ ಕಾರಣಕ್ಕೆ ಅವನ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನನಗೆ ಜಾಸ್ತಿಯಾಗತೊಡಗಿತ್ತು. ಸಿಕ್ಕವರೆಲ್ಲಾ ಅವನ ಬಗ್ಗೆ ಥರಾವರಿ ಕತೆೆಗಳನ್ನು ಹೇಳುತ್ತಲೇ ಇದ್ದರು. ಇಂಥವನೊಬ್ಬ ಉಪನ್ಯಾಸಕನಾಗಿ ಹೇಗಿರಲು ಸಾಧ್ಯ, ಮಕ್ಕಳಿಗೆ ಏನು ತಾನೆ ಒಳ್ಳೆಯದನ್ನು ಹೇಳಬಲ್ಲ? ಎಂದು ಚಿಂತಿಸಿ ನನ್ನ ತಲೆ ಹನ್ನೆರಡಾಣೆಯಾಯಿತೋ ಹೊರತು ಅವನ ಬಗೆಗಿನ ಚಿತ್ರಣ ಸ್ಪಷ್ಟವಾಗಿ ಮೂಡಲಿಲ್ಲ. ಅವನೊಮ್ಮೆ ಸಿಕ್ಕರೂ, ಅವನೇ ಆ ಆಸಾಮಿ ಎಂದು ನನ್ನ ದಡ್ಡ ತಲೆಗೂ ಪಕ್ಕನೆ ತೋಚಲಿಲ್ಲ. ‘ಎಲ್ಲಿ ಹೋಗ್ತಾನೆ ಇನ್ನೊಮ್ಮೆ ಸಿಕ್ಕೇ ಸಿಗುತ್ತಾನೆ ಬಿಡು’ ಎಂದು ಕಾಯುತ್ತಿದ್ದೆ.

  ಒಂದು ಸಲ ನೂರಾರು ಉಪನ್ಯಾಸಕರು ಸೇರಿದ ಕನ್ನಡ ಪಠ್ಯದ ಪುನಃಶ್ಚೇೀತನ ಶಿಬಿರ ನಡೆಯುತ್ತಿತ್ತು. ನಾವು ಕರೆಸಿದ ಅ‘ತಿಥಿ’ಯೊಬ್ಬರು ನಾಗಚಂದ್ರನ ಕಾವ್ಯದ ಬಗ್ಗೆ ಸೊಗಸಾಗಿ ಹೇಳುತ್ತಿದ್ದರು. ಅವರ ಮಾತನ್ನು ಹತ್ತು ನಿಮಿಷಕ್ಕೊಮ್ಮೆ ತಡೆದು ನಿಲ್ಲಿಸಿ ‘‘ರೀ ಸ್ವಾಮಿ, ಅದು ಹಂಗಲ್ಲ ಕಂಡ್ರಿ’’ ಎಂದು ಗಟ್ಟಿಯಾಗಿ ಹೇಳಿ ಮತ್ತೆ ಆತ ಕೂತು ಬಿಡುತ್ತಿದ್ದ. ಆತ ಹೀಗೆ ಪದೇಪದೇ ಕ್ಯಾತೆ ತೆಗೆದು ಪೀಡಿಸುತ್ತಲೇ ಇದ್ದ. ‘‘ಮತ್ತೆ ಅದು ಹ್ಯಾಗೇಂತ ನೀವೆ ಹೇಳಿ, ಬನ್ನಿ ಸಾರ್’’ ಎಂದು ಅ‘ತಿಥಿ’ ಕೆರಳಿ ಪ್ರಶ್ನಿಸಿದರೆ, ‘‘ಕರೆಸಿರೋದು ನಿಮಗಲ್ವ. ನೀವು ಸರಿಯಾಗಿ ಹೇಳ್ರಿ. ತಪ್ಪು ಕಂಡು ಹಿಡಿಯೋದಷ್ಟೆ ನನ್ನ ಕೆಲಸ’’ ಎಂದು ತಾನೊಬ್ಬನೇ ನಕ್ಕು ಸುಮ್ಮನಾಗುತ್ತಿದ್ದ. ಇವನ ಈ ವಿಪರೀತದ ನಡವಳಿಕೆಗೆ ಅಲ್ಲಿದ್ದ ಕೆಲವರು ರೋಸಿ ಹೋಗಿದ್ದರು. ‘‘ರೀ ಸ್ವಾಮಿ ನಿಮಗಿಷ್ಟ ಇದ್ರೆ ಕೇಳ್ರಿ. ಇಲ್ಲ ಎದ್ದೋಗ್ರಿ’’ ಎಂದು ತನ್ಮಯರಾಗಿ ಕೇಳುತ್ತಿದ್ದ ಹಿರಿಯ ಉಪನ್ಯಾಸಕರೊಬ್ಬರು ಅವನನ್ನು ಗದರಿದರು. ಆಗ ಕೆರಳಿದ ಆತ, ‘‘ಹೊರಗೆ ಬರ್ತೀರ ಒಂದ್ ಕೈ ನೋಡ್ಕೋತೀನಿ. ನಾನೂ ಕನ್ನಡ ಕಂಡ ಶ್ರೇಷ್ಠ ಕವಿ. ಆ ಪಂಪ, ಚಂಪಾ, ಕೆಂಪ, ಹಂಪ ಎಲ್ಲರನ್ನೂ ಮೀರಿಸುವಂಥ ಹತ್ತು ಜೊತೆ ಜವಾರಿ ಪದ್ಯ ಬರದು ಮಡಗಿದ್ದೀನ್ರಿ ಕಂಡ್ರಿ. ಇಲ್ಲೇ ಬ್ಯಾಗಲ್ಲಿ ಮಿಡಿನಾಗರ ಮರಿ ಥರ ಮಲಗಿದ್ದಾವೆ. ಎಬ್ಬಿಸಿ ಹೊರಗೆಳದು ಸ್ಯಾಂಪಲ್ಲಿಗೆ ಇಲ್ಲೇ ನಾಲ್ಕು ಹೇಳ್ಲಾ’’ ಎಂದು ಆವೇಶದಿಂದ ಬ್ಯಾಗು ಬಿಡಿಸತೊಡಗಿದ್ದ.

ಆತ ಕುಡಿದಿರಬಹುದೇ ಎಂಬ ಅನುಮಾನವೂ ಕೆಲವರಿಗೆ ಕಾಡತೊಡಗಿತ್ತು. ಅವನ ಈ ಅನಪೇಕ್ಷಿತ ನಡವಳಿಕೆ ಸಹಿಸಲಾಗದೆ ಕೂತವರೆಲ್ಲಾ ದನಿ ಎತ್ತರಿಸಿ ‘‘ಸಭೆೆಯ ಲಯವನ್ನೇ ಈ ಅವಿವೇಕಿ ಹಾಳು ಮಾಡುತ್ತಿದ್ದಾನೆ ಆಯೋಜಕರು ಮೊದ್ಲು ಇವರನ್ನು ಹೊರಗೆ ಕಳಿಸಬೇಕು’’ ಎಂದು ಎಲ್ಲರೂ ಬಿಪಿಗಳ ಏರಿಸಿಕೊಂಡು ಎದ್ದು ನಿಂತರು. ಅಲ್ಲಿನ ರಂಪಾಟ, ಕೂಗಾಟಗಳಿಗೆ ಕರೆಸಲಾಗಿದ್ದ ಅ‘ತಿಥಿ’ಗಳು ಹೆದರಿ ಹೋಗಿದ್ದರು. ಇದು ಯಾಕೋ ಸರಿಯಾಗುತ್ತಿಲ್ಲ ಎಂದರಿತ ನಾನು ಆ ಕವಿಗೆ, ‘‘ಅಣ್ಣ, ನೀವು ಹೇಳೋದೆಲ್ಲಾ ಸರಿಯಾಗಿದೆ. ಅದನ್ನು ಅರ್ಥ ಮಾಡ್ಕೊಳ್ಳೋ ತಾಕತ್ತು ಇಲ್ಯಾರಿಗೂ ಇದ್ದಂಗಿಲ್ಲ. ನೀವು ಹೊರಗೆ ಬನ್ನಿ ನಾವಿಬ್ಬರೇ ಮಾತಾಡೋಣ’’ ಎಂದು ಅವರನ್ನು ತಳ್ಳಿಕೊಂಡು ಹೊರಗೆ ತಂದೆ. ಆತನ ಜೊತೆಗೇ ನನ್ನ ಗೆಳೆಯರು ಒಂದಿಬ್ಬರು ಎದ್ದು ಇನ್ನೇನು ಅವನ ಚಚ್ಚೇ ಬಿಡುತ್ತಾರೆ ಎನ್ನುವ ರೀತಿ ಬಂದರು. ಆತ ಯಾರೆಂದು ತಿಳಿಯದ ನಾನು ‘‘ಲೇ.. ಯಾರೋ ಇವನು ಯಡವಟ್ಟು’’ ಎಂದು ಪಿಸುದನಿಯಲ್ಲಿ ಗೆಳೆಯರ ಕೇಳಿದಾಗ ಯೋಗೀಶ ‘‘ಅದೇ ನಿ ಥರ ಹುಡುಕ್ತಾ ಇದ್ದೀಯಲ್ಲಪ್ಪ ಅವನೇ ಇವನು’’ ಎಂದು ವ್ಯಂಗ್ಯವಾಗಿ ಹೇಳಿ ನನ್ನ ಸುಪರ್ದಿಗೆ ಅವನ ಒಪ್ಪಿಸಿ ಸಿಗರೇಟು ಸೆಳೆಯಲು ಹೊರಟು ಹೋದರು. ‘‘ಅಣ್ಣ ಬನ್ನಿ’’ ಎಂದು ಒಂದು ಮರದ ನೆರಳಿಗೆ ಅವನನ್ನು ಕರೆದುಕೊಂಡು ಹೊರಟೆ. ಕ್ಷಣವೂ ಸುಮ್ಮನಿರಲಾರದ ಆತ ವಟವಟಿಸುತ್ತಲೇ ಇದ್ದ. ‘‘ನನ್ನ ಸರಿಯಾಗಿ ಅರ್ಥ ಮಾಡಿಕೊಂಡಿರೋ ಗೆಳೆಯ ಅಂದ್ರೆ ನೀನೊಬ್ಬನೇ ನೋಡಪ್ಪ’’ ಎಂದು ಆತ ನನ್ನ ಹೊಗಳತೊಡಗಿದ. ಮೇಲು ನೋಟಕ್ಕೆ ಎಲ್ಲಾ ಸರಿಯಿದೆ ಅನ್ನಿಸಿದರೂ, ಒಳಗೊಳಗೇ ಕೆಲವು ನಟ್ಟುಗಳು ಲೂಸಾಗಿರುವುದು ಗೋಚರವಾಗುತ್ತಿತ್ತು.

ಪಕ್ಕಾ ಮೆಂಟಲ್ ಕೇಸಿನ ಜೊತೆ ಸಿಕ್ಕಿ ಬಿದ್ದಿರುವ ಸಂಗತಿ ನನಗೆ ನಿಧಾನಕ್ಕೆ ಸ್ಪಷ್ಟವಾಗತೊಡಗಿತು. ಅರ್ಧ ಗಂಟೆ ಒಂದಕ್ಕೊಂದು ಲಿಂಕ್ ಇಲ್ಲದ ವಿಷಯಗಳನ್ನು ಕೇಳಿದೆ. ಅಸಡಬಸಡವಾಗಿದ್ದ ರಾಶಿ ಪದ್ಯಗಳ ಆಲಿಸಿ ಸುಸ್ತಾಗಿ ಇವನಿಂದ ಕಳಚಿಕೊಳ್ಳುವ ಪರಿ ಹೇಗೆಂದು ಯೋಚಿಸಿತೊಡಗಿದೆ. ಯಾವ ನೆವವೂ ಹೇಳಿ ತಪ್ಪಿಸಿಕೊಳ್ಳದಂತೆ ಅವನು ನನ್ನ ಕೈಯನ್ನು ಬಲವಾಗಿ ಹಿಡಿದು ಕೂತಿದ್ದ. ‘‘ಇಂಥ ತಲೆ ಇಲ್ಲದ ಒಣ ಪಂಡಿತರನ್ನ ನಿಮ್ಮಥೋರು ಕರಿಸಬಾರದಿತ್ತು ಕಣಪ್ಪ! ಸಣ್ಣ ಹುಡುಗರಿಗೆ ಬುದ್ಧಿ ಹೇಳೊನಂಗೆ ಆ ಅವಿವೇಕಿ ಮಾತಾಡ್ತಾನೆ. ಇಪ್ಪತ್ತು ವರ್ಷ ಪಾಠ ಮಾಡಿರೋ ನಾನು ಇವನ ಹತ್ರ ಕಲಿಯೋದು ಏನಾದ್ರೂ ಇದ್ದೀತಾ ನೀನೆ ಹೇಳು. ಪದ್ಯ ಬರಿಯೋ ಯೋಗ್ಯತೆ ಇರೋನಿಗಷ್ಟೇ ಕಾವ್ಯದ ಬಗ್ಗೆ ಮಾತಾಡೋಕೆ ಪುಲ್ ಪವರ್ರು ಇರೋದು. ಹಾದಿ ಬೀದಿಲಿ ಓಡಾಡೋ ಇಂಥ ಗುಜರಿ ನನಮಕ್ಕಳೆಲ್ಲಾ ಇದೆಲ್ಲಾ ಹೇಳಂಗಾಂದ್ರೆ ಕನ್ನಡ ಸಾಹಿತ್ಯ ಮಾನ, ಮರ್ವಾದೆ ಎಲ್ಲಿಗೆ ಬಂದಗಾತು ಹೇಳು?’’ ಎಂದು ಬೈದ. ಮಾತು ಮಾತಿನ ನಡುವೆ ಲಂಗುಲಗಾಮಿಲ್ಲದೆ ಸುರಿಯುತ್ತಿದ್ದ ಜೊಲ್ಲನ್ನು ಒರೆಸಿಕೊಂಡ ಅವನ ಕರ್ಚಿಪು ನೆನೆದು ತೊಪ್ಪೆಯಾಗಿತ್ತು. ಅದನ್ನು ಹಿಂಡಿ ಅಲ್ಲೆ ಒಣಗಲು ಹಾಕಿ ನನ್ನ ಕಡೆಗೆ ತಿರುಗಿ ಒಂದಷ್ಟು ಸುಧಾರಿಸಿಕೊಂಡತಾಗಿ ‘‘ಥೋ.. ಅದೆಲ್ಲಾ ಬಿಟ್ಟಾಕು. ಇವತ್ತು ದೇವರಂಥ ಸಹೃದಯಿ ನೀನು ಛಾನ್ಸಲ್ಲಿ ಸಿಕ್ಕಿದ್ದೀಯ. ಕುಂತ್ಕೋ ನನ್ನ ಉಳಿದಿರುವ ಎಲ್ಲಾ ಕವನಗಳ ಇಲ್ಲೇ ಝಡಾಯಿಸಿಯೇ ಬಿಡ್ತೀನಿ’’ ಎಂದು ಮತ್ತೆ ರೆಡಿಯಾಗತೊಡಗಿದ.

ಅಷ್ಟರಲ್ಲಿ ನನ್ನ ಪುಣ್ಯಕ್ಕೆ ಟೀ ವಿರಾಮವೆಂದು ಶಿಬಿರದ ಆಯೋಜಕರು ಎಲ್ಲಾ ಉಪನ್ಯಾಸಕರಿಗೆ ಬಿಡುವು ಕೊಟ್ಟರು. ಅವರೆಲ್ಲಾ ಏನಾಯಿತೆಂದು ವಿಚಾರಿಸಲು ಗುಂಪಾಗಿ ಮರದ ಕೆಳಗೆ ಬಂದು ನಿಂತರು. ಅವನಿಗೆ ಪರಿಚಯವಿದ್ದ ಕೆಲವರು ‘‘ಲೇ ಮುಳ್ಳಿಕಂಟಿ ಗುಡ್ಡಪ್ಪ, ಎಲ್ಲಿ ಹೋದ್ರೂ ನಿಂದು ಇದೇ ರಗಳೆ, ಇದೇ ತಲೆಬ್ಯಾನಿಯಲ್ಲೋ ಮಾರಾಯ. ಸುಮ್ನೆ ಇರಕ್ಕಾಗದವನು ಬೆಚ್ಚಗೆ ಹೊದ್ಕೊಂಡ್ ಬಿದ್ಕೋಬೇಕು. ಅದು ಬಿಟ್ಟು ಎಲ್ಲಾ ಕಡೆ ಬಂದು ಕ್ಯಾತೆ ತೆಗಿತಿಯಲ್ಲೋ ಓತಿಕ್ಯಾತ ನನಮಗನೆ’’ ಎಂದು ಉಗಿಯತೊಡಗಿದರು. ಅವರ ಜೊತೆಗೂ ಮಾತಿಗೆ ಮಾತು ಬೆಳೆಸಿ ನಿಂತ. ಈ ಸಂದರ್ಭವೇ ವರದಾನವಾಗಿ ಕಂಡು ಜಾಣಬೆಕ್ಕಿನಂತೆ ಆ ಜಾಗ ಖಾಲಿ ಮಾಡಿದೆ. ಅಲ್ಲಿ ನೆರೆದವರೆಲ್ಲಾ ತಲೆಗೊಂದರಂತೆ ಮಾತಾಡುತ್ತಾ ಅವನ ರೇಗಿಸುತ್ತಿದ್ದರು. ರುಸ್ತುಮ ಗುಡ್ಡಪ್ಪ ಮಾತ್ರ ಎಲ್ಲರಿಗೂ ಗಡದ್ದಾಗಿ ಉತ್ತರ ಎಸೆಯುತ್ತಾ ನಿಂತಿದ್ದ.

ಇಂಥ ಗುಡ್ಡಪ್ಪ ಇತ್ತೀಚೆಗೆ ಹುಚ್ಚನಂತಾಗಿದ್ದಾನೆ ಎಂದು ಯಾವ ಮಗನಾದರೂ ಹೇಳಬಹುದಾಗಿತ್ತು. ಅವನಿಗಿದ್ದ ಸನ್ನಿ ಪಕ್ಕನೆ ಗೊತ್ತಾಗುವಂಥದ್ದಲ್ಲ. ಅದು ಮಾತಿಗೆ ಮಾತು ಬೆಳೆದಂತೆ ನಿಧಾನವಾಗಿ ಬಯಲಾಗುವಂಥದ್ದು. ಈ ಮೊದಲಿನಿಂದ ಇವನು ಹೀಗೆಯೇ ಇದ್ದನೆ? ಎಂದರೆ ‘ಇಲ್ಲ’ ಎನ್ನುವ ಗೆಳೆಯರಿರುವಷ್ಟೇ ‘ಹೌದು’ ಎಂದು ಕತ್ತು ಕುಣಿಸುವ ದುಷ್ಮನ್‌ಗಳೂ ಇದ್ದರು.
  
‘‘ಇವನು ಹೀಗೆಲ್ಲಾ ಆಗಲು ಅವನ ಸಹದ್ಯೋಗಿಗಳೇ ಕಾರಣ ಕಂಡ್ರಿ. ಅದಕ್ಕಿಂತ ಮೊದ್ಲು ವಸಿ ಐಲುಪೈಲಾದರೂ ತಕ್ಕಮಟ್ಟಿಗಿದ್ದ. ಅದ್ಯಾವುದೋ ಹೆಣ್ಣೆಂಗ್ಸು ಇವರ ಕಲೀಗಂತಲ್ಲ. ಆ ಯಮ್ಮನೆ ಇವನ ಹೆಣ್ಗಹೆಣ್ಗ ಅಂತ ರೇಗ್ಸಿ ಈ ಗತಿಗೆ ಬರೋ ಹಂಗೆ ಮಾಡ್ಬಿಟ್ಟಳಂತೆ. ಇವುನು ನಾನು ಗೆಣ್ಗ ಅಲ್ಲ್ಲ ಅಂತ ತೋರ್ಸೋಕೆ ಆ ಪೇಪರ್‌ಗಳಲ್ಲಿ ಬರೋ ಲೈಂಗಿಕ ವರ್ಧಕ ಜಪಾನಿ ತೈಲ, ಗುಳಿಗೆ ಎಲ್ಲಾ ನುಂಗಿ ಅದರ ಸೈಡ್ ಎೆಕ್ಟ್ ಜಾಸ್ತಿಯಾಗಿ ಹಿಂಗಾಗಿದ್ದಾನೆ’’ ಎಂದು ಪಿಸುದನಿಯಲ್ಲಿ ನನ್ನ ಕಿವಿಯಲ್ಲೊಬ್ಬರು ಉಸಿರಿದರು. ‘‘ರೀ ಲೇಡೀಸ್ ಬಗ್ಗೆ ಹಂಗೆಲ್ಲ ಹಗುರವಾಗಿ ಮಾತಾಡಬೇಡಿ. ಸುಮ್ಮಸುಮ್ಮನೆ ಅವರ್ಯಾಕ್ರಿ ಇವನಿಗೆ ರೇಗಿಸ್ತಾರೆ’’ ಎಂದು ನಾನು ಆ ಚಾಡಿಕೋರ ಮನುಷ್ಯನನ್ನ ದಬಾಯಿಸಿ ಸುಮ್ಮನಾಗಿಸಿದೆ. ‘‘ನಿಜ ಹೇಳೋರಿಗೆ ಈಗ ಕಾಲ ಇಲ್ಲ’’ ಎಂದು ಗೊಣಗಿಕೊಂಡ ಅವನು ಉರಿಮುಖ ತಂದುಕೊಂಡು ದೂರ ಹೋದ. ಆದರೂ ಜೊತೆಗೆ ಕೆಲಸ ಮಾಡುವ ಸಹದ್ಯೋಗಿಗಳು ಒಬ್ಬನನ್ನು ಹೀಗೆ ಗುರಿಯಾಗಿಟ್ಟುಕೊಂಡು ಕಿಚಾಯಿಸಿ ಹುಚ್ಚನನ್ನಾಗಿಸಲು ಸಾಧ್ಯವೇ? ಎಂಬ ಪ್ರಶ್ನೆ ಮಾತ್ರ ನನ್ನೊಳಗೇ ಉಳಿದು ಬಿಟ್ಟಿತ್ತು. ಈ ಬಗ್ಗೆ ಹೆಚ್ಚು ತಿಳಿದಿರುವ ಯೋಗೀಶನನ್ನು ಕೇಳಿದರೆ ಹೇಗೆಂದು ಅವನನ್ನು ಕಂಡು ‘‘ಈ ಗುಡ್ಡಪ್ಪನ ಕಥೆ ಎಂಥದ್ದೋ ಮಾರಾಯ’’ ಎಂದು ಕೇಳಿದಾಗ ಅವನೊಂದು ಪುರಾಣವನ್ನೇ ಬಿಚ್ಚಿಟ್ಟ.

ಈ ಗುಡ್ಡಪ್ಪ ಇದ್ದಿದ್ದೇ ಊರ ಹೊರಗಿದ್ದ ಒಂಟಿ ಕಾಲೇಜಿನಲ್ಲಿ. ಅಲ್ಲಿ ಕಲಿಯುತ್ತಿರುವ ಹುಡುಗರ ಸಂಖ್ಯೆಯೂ ಮೂರು ಮತ್ತೊಂದು. ಹೆಚ್ಚು ಕೆಲಸವಿಲ್ಲದ ಅಲ್ಲಿನ ಉಪನ್ಯಾಸಕರು ಕಾಡು ಹರಟೆಗಳಲ್ಲೇ ಕಾಲ ಕಳೆಯುವುದು ಅಲ್ಲಿ ಮಾಮೂಲಿ ಸಂಗತಿಯಾಗಿತ್ತು. ಬೆಳಗ್ಗೆ ಲೋಕಲ್ ಬಸ್ಸಿಗೆ ಡ್ಯೂಟಿಗೆ ಬಂದವರು ಸಂಜೆಯ ಅದೇ ಬಸ್ಸಿನ ಮುಸುಡಿ ಕಾಣಿಸಿಕೊಳ್ಳುವ ತನಕವೂ ಕಾಲ ನೂಕಲೇ ಬೇಕಿತ್ತು. ಜೊತೆಗೆ ಸುತ್ತ ದಟ್ಟವಾಗಿ ಬೆಳೆದು ನಿಂತ ಸಹ್ಯಾದ್ರಿಯ ಕಾಡು. ಹೀಗಾಗಿ ಅಲ್ಲಿದ್ದವರು ಮನಸ್ಸಿಗೆ ಬಂದ ಹರಕು ಮುರುಕು ವಿಷಯಗಳನ್ನೆಲ್ಲಾ ಮಾತಾಡುತ್ತಿದ್ದರು. ಸಾಹಿತ್ಯ, ಸಂಗೀತ, ಕಲೆಗಳ ಗಂಧಗಾಳಿಯಿಲ್ಲದ ಅವರು ತಮ್ಮ ಕುಟುಂಬದ ಸಮಸ್ಯೆಗಳು, ಲೈಂಗಿಕ ಜೋಕುಗಳು, ಅವರಿವರ ಮನೆಯ ಬಿಸಿಬಿಸಿ ವಿಷಯಗಳು, ಕಾಲೇಜು ಮಕ್ಕಳ ಪ್ರೇಮದ ಕಥೆಗಳು, ತರಕಾರಿ ಬೆಲೆ, ಇಂಕ್ರಿಮೆಂಟು, ಅರಿಯರ್ಸ್‌, ಸಂಬಳದ ಬಿಲ್ಲು ಇಂಥವೇ ಸುಡುಗಾಡು ವಿಷಯಗಳ ಮಾತಾಡಿ ದಿನಗಳ ಕರಗಿಸುತ್ತಿದ್ದರು. ಇವರ ನಡುವೆ ಒಂದಿಷ್ಟು ಕವನ ಗೀಚುವ ಖಯಾಲಿಯುಳ್ಳ ಗುಡ್ಡಪ್ಪ ದಿನಕ್ಕೆ ನಾಲ್ಕು ಪದ್ಯ ಗೀಚಿ ಎಲ್ಲರ ತಲೆತಿನ್ನುತ್ತಿದ್ದ. ಅವನ ಯಪರತಪರಾ ವರ್ತನೆಗಳನ್ನೇ ತಮ್ಮ ಕುಚೋದ್ಯದ ತಾಂಬೂಲ ಮಾಡಿಕೊಂಡಿದ್ದ ಉಳಿದವರು ಅವನ ಹಂಗಿಸಿ, ಕಾಡಿಸಿ, ನಗುತ್ತಿದ್ದರು. ಅದಕ್ಕೆ ಬದಲಿಯಾಗಿ ಗುಡ್ಡಪ್ಪನೂ ತಾನು ಕಲಿತ ಹಲ್ಕಾ ಬೈಗುಳಗಳನ್ನೆಲ್ಲಾ ಅವರ ಮೇಲೆ ಧಾರಾಳವಾಗಿ ಖರ್ಚು ಮಾಡುತ್ತಿದ್ದ. ಸಹದ್ಯೋಗಿಗಳ ಕೀಟಲೆ ಹೀಗೆ ಹೆಚ್ಚಾದಾಗ ಪದ್ಯ ಬರೆಯುವುದ ನಿಲ್ಲಿಸಿದ ಗುಡ್ಡಪ್ಪ ಎಲ್ಲರ ಮೇಲೂ ದಿನಕ್ಕೊಂದರಂತೆ ಮೂಕರ್ಜಿ ಬರೆಯಲು ಶುರು ಮಾಡಿಕೊಂಡ. ಇಲಾಖೆಗೆ, ಶಿಕ್ಷಣ ಮಂತ್ರಿಗಳಿಗೆ ಸಹದ್ಯೋಗಿಗಳ ಎಲ್ಲಾ ವಿಷಯಗಳನ್ನೂ ಸಂಗ್ರಹಿಸಿ ಬರೆಯತೊಡಗಿದ.

ಅದರಲ್ಲಿ ಅವರು ಆ ದಿನ ತಂದು ತಿಂದ ತಿಂಡಿಯಿಂದ ಹಿಡಿದು ಧಂಡಿಯಾಗಿ ಮಾತಾಡಿದ ಪೋಲಿ ಜೋಕುಗಳನ್ನೂ ಸಂಗ್ರಹಿಸಿ ಬರೆಯುತ್ತಿದ್ದ. ನಂತರದ ದಿನಗಳಲ್ಲಿ ಎಲ್ಲರ ಮಾತಿಗೂ ವಿಚಿತ್ರ ಉತ್ತರ ಕೊಡುವ ಹೊಸ ಸಂಪ್ರದಾಯ ರೂಢಿಸಿಕೊಂಡ. ತಾನು ಹೀಗಿದ್ದರಷ್ಟೇ ಈ ನನ್ಮಕ್ಕಳಿಗೆ ಬುದ್ಧಿ ಕಲಿಸಲು ಸಾಧ್ಯ ಎಂದು ಆತ ನಿರ್ಧರಿಸಿದ. ಏನ್ರಿ ಗುಡ್ಡಪ್ಪ ಊಟ ಆಯ್ತಿ ಎಂದು ಔಪಚಾರಿಕವಾಗಿ ಯಾರಾದರೂ ಕೇಳಿದರೆ ನಾನೀಗ ಹಸಿ ಹುಲ್ಲು, ಸೀಮೆ ಗೊಬ್ರ ತಿಂತಿದ್ದೀನಿ ಏನೀಗ, ನೀವೇನು ಆಗಿಲ್ಲ ಅಂದ್ರೆ ತಂದು ಕೊಡ್ತೀರಾ, ಊಟ ಆಯ್ತೆ ಅಂದ್ರೆ ಏನು ಆ ಮಾತಿನ ಅರ್ಥ, ಅಲ್ಲಿಗೆ ನಾನು ಸತ್ತೋಗ್ತೀನಿ ಅಂತ ಲೆಕ್ಕಾನ? ಊಟ ಮುಗಿತು ಅಂದ್ರೆ ಜೀವನವೇ ಮುಗಿದಂಗೆ. ಎಂಥ ಅಸಂಬದ್ಧ ಪ್ರಶ್ನೆ ಕೇಳ್ತಿರಲ್ರಿ. ನಾನ್ಸೆನ್ಸ್ ಎಂದು ರೇಗಾಡುತ್ತಿದ್ದ. ಮೊದಲೇ ಒಂದಿಷ್ಟು ಲೂಸು ಲೂಸಾಗಿದ್ದ ಗುಡ್ಡಪ್ಪ ಮಲೆನಾಡಿನ ಆ ಕಾಡಿಗೆ, ಅಲ್ಲಿನ ಮಳೆಗೆ, ಜಿಗಣೆಗಳ ಕಾಟಕ್ಕೆ, ಅಲ್ಲಿನ ಊಟಕ್ಕೆ, ಒಂಟಿತನಕ್ಕೆ, ಸಹದ್ಯೋಗಿಗಳ ಕಾಟಕ್ಕೆ ರೋಸಿ ರೋಸಿ ವಿಚಿತ್ರವಾಗಿ ಬದಲಾಗತೊಡಗಿದ. ಒಬ್ಬನೇ ಸ್ವಗತದಲ್ಲಿ ಗೊಣಗಾಡತೊಡಗಿದ. ಕೆಲವೊಮ್ಮೆ ಸಹಜವಾಗಿ ಮಾತಾಡುತ್ತಿದ್ದ ಗುಡ್ಡಪ್ಪ ಒಮ್ಮೆ ಗುಡ್ಡಪ್ಪ ಕಾಲೇಜಿನ ಇಬ್ಬರು ಲೇಡೀಸ್ ಸಹದ್ಯೋಗಿಗಳು ಲೋಕಾಭಿರಾಮವಾಗಿ ಸ್ಟಾಪ್ ರೂಮಿನಲ್ಲಿ ಹರಟೆ ಹೊಡೆಯುತ್ತಿದ್ದರು. ದೂರದಲ್ಲಿ ಕೂತಿದ್ದ ಗುಡ್ಡಪ್ಪ ಮೂಕರ್ಜಿ ಬರೆಯುತ್ತಿದ್ದ. ಆಗ ಒಬ್ಬಾಕೆ ‘‘ನೋಡ್ರಿ ಹೇಮಾ ಸಾಕ್ಸ್ ಹಾಕಿದ್ರೆ ಕಾಲು ಎಷ್ಟು ಬೆಳ್ಳಗಾಗುತ್ತೆ ಅಲ್ವಾ? ಇಲ್ಲಿ ಡರ್ಟಿ ಕೆಸರು ಬೇರೆ ಇರುತ್ತೆ ನೋಡಿ ಹಂಗಾಗಿ ನಾನು ಶೂ ಜೊತೆ ಸಾಕ್ಸೂ ಹಾಕ್ತೀನಿ’’ ಎಂದರು. ಇದನ್ನು ಕೇಳಿಸಿಕೊಂಡ ಗುಡ್ಡಪ್ಪ ಅವರ ಮಾತಿನ ನಡುವೆ ಹುಲಿಯಂತೆ ನುಗ್ಗಿ ಹೋಗಿ ನ್ಯಾಯಕ್ಕೆ ನಿಂತ. ಇದು ಗುಡ್ಡಪ್ಪನಿಗೆ ಬೇಡವಾದ ವಿಷಯವಾಗಿತ್ತು. ‘‘ಏನ್ರಿ ಸಯನ್ಸ್ ಟೀಚರ್ ಆಗಿ ಬರೀ ಸುಳ್ಳೇ ವದರ್ತೀರಲ್ರಿ. ಅದು ಹೆಂಗ್ರಿ ಕಾಲುಚೀಲ ಹಾಕಿದ್ರೆ ಕಾಲು ಬೆಳ್ಳಗಾಗ್ತಾವೆ? ನಾನು ಹುಟ್ಟದಾಗಿಂದ ಚೆಡ್ಡಿ ಹಾಕ್ತಾ ಇದ್ದೀನಿ. ‘ಆ ಭಾಗ’ ಮಾತ್ರ ಅದ್ಯಾಕೆ ಬೆಳ್ಳಗಾಗಿಲ್ಲ; ಮೊದ್ಲು ಅದನ್ನ ಹೇಳ್ರಿ’’ ಎಂದು ಜಗಳಕ್ಕೆ ನಿಂತನು. ಇದರಿಂದ ಕೆರಳಿದ ಲೇಡೀಸ್ ಸಹದ್ಯೋಗಿಗಳು ‘‘ಥೂ ಹೆಣ್ಣಮಕ್ಕಳ ಹತ್ರ ಮಾತಾಡೋ ಮ್ಯಾನೆರ್ಸ್ ಇಲ್ವಲ್ರಿ ಈಯಪ್ಪನಿಗೆ. ನಮ್ಮ ಕಾಲಿನ ಸಾಕ್ಸಿಗೂ, ಇವನು ಚಡ್ಡಿಗೂ ಏನ್ರಿ ಸಂಬಂಧ’’ ಎಂದು ಮೂಗು ಮುರಿದರು.

ಈ ವಿಷಯವನ್ನು ಅಲ್ಲಿಗೇ ಬಿಡದೆ ಪ್ರಿನ್ಸಿಪಾಲರ ಮಟ್ಟಕ್ಕೆ ಒಯ್ದರು. ಇಂಥವರ ನಡುವೆ ಸಿಕ್ಕಿ ಹಾಕಿಕೊಂಡು ಆ ಪ್ರಿಸಿಪಾಲನೂ ಅರೆ ಹುಚ್ಚನಾಗಿದ್ದ. ಬಂದ ಹೊಸದರಲ್ಲಿ ಬರೀ ಶುಗರ್ ಮಾತ್ರೆ ನುಂಗುತ್ತಿದ್ದ ಆತನೀಗ ಬಿಪಿ ಮಾತ್ರೆಗಳ ಜೊತೆಗೆ ಟೆನ್ಷನ್ ಆಗದಂತೆ ತಡೆಯುವ ಆಂಗ್ಸೀಟ್ ಗುಳಿಗೆಯನ್ನೂ ನುಂಗುತ್ತಿದ್ದ. ತನ್ನ ಸುತ್ತ ರಕ್ಷಣೆಗೆಂದು ಗೊತ್ತಿರುವ ದೇವಾನುದೇವತೆಗಳ ೆಟೋಗಳನ್ನೂ ತಂದು ತಗಲಾಕಿಕೊಂಡಿದ್ದ. ಗುಡ್ಡಪ್ಪನಿಗಿಂತ ಮುಂಚೆ ತಾನೇ ಹುಚ್ಚನಾಗಬಹುದೆಂಬ ಭೀತಿಯಲ್ಲಿದ್ದ ಅವನು ಯಾಕಾದರೂ ಈ ಹಾಳು ಕೊಂಪೆಗೆ ಬಂದೆನೋ ಎಂದು ದಿನದಿನವೂ ಕೊರಗುತ್ತಿದ್ದ.

 ತನ್ನ ಅರೆಬೋಳು ಮಂಡೆಯ ರಪರಪ ಕೆರೆದುಕೊಂಡ ಪ್ರಿನ್ಸಿಪಾಲ ‘‘ಮಕ್ಕಳ ಪಾಠದ ವಿಷಯ ಮಾತಾಡ್ರಿ ಅಂದ್ರೆ, ಕಪ್ಪು ಬಿಳಿಪಿನ ವಿಷಯ, ಚೆಡ್ಡಿ, ಸಾಕ್ಸಿನ ವಿಷಯ ತೆಕ್ಕೊಂಡ್ ಜಗಳಕ್ಕ ನಿಂತಿದ್ದೀರಲ್ರಿ. ಊರ ಜನ ಬಂದು ಮಾರಿಮ್ಯಾಲ ಉಗಿಯೋದಿಲ್ಲಾಂತ ನೀವೆಲ್ಲಾ ಕೆಟ್ಟು ಕೆರ ಹಿಡ್ದೀರಿ. ರೀ ಗುಡ್ಡಪ್ಪ ಮಕ್ಕಳ ಟೆಸ್ಟ್ ಪೇಪರ್ ವ್ಯಾಲೂವೇಷನ್ ಮಾಡೋದು ಬಿಟ್ಟು ಇಲ್ಲಿ ಹೆಂಗಸ್ರ ಮಾತು ಕೇಳ್ಕೋತಾ ಜಗಳಕ್ಕೆ ನಿಂತಿದ್ದೀರಲ್ರಿ ಹೋಗ್ರಿ ಸುಮ್ನೆ’’ ಎಂದು ರೇಗಿದರು. ಆಗ ಗುಡ್ಡಪ್ಪ ‘‘ಅವರೊಬ್ಬರು ಸಯನ್ಸ್ ಟೀಚರ್ ಆಗಿ ಹಿಂಗೆ ಸುಳ್ಳು ಸುಳ್ಳು ಥಿಯೇರಿಯಯನ್ನೆಲ್ಲಾ ಹೇಳೋದು ಸರಿನಾ, ಮಕ್ಕಳಿಗೆ ರಾಂಗ್ ಇಂಟರ್‌ಪಿಟೇಶನ್ ಕೊಟ್ಟರೆ ತಪ್ಪಾಗಲ್ವಾ ಸಾರ್? ಅದನ್ನ ತಡೆಯೋ ಸದಾಶಯ ದಿಂದ ನಾನು ಹೇಳಿದ್ದು’’ ಎಂದು ಗೊಣಗತೊಡಗಿದ. ರೀ ತೊಲಗ್ರಿ ಇಲ್ಲಿಂದ ಎಂದು ಟೇಬಲ್ ಬಡೆದ ಪ್ರಿನ್ಸ್ಸಿ ಟೆನ್ಷನ್ ಮಾತ್ರೆ ಡಬ್ಬಿ ಹುಡುಕತೊಡಗಿದ. ಇವೆಲ್ಲಾ ಕೇಳಲು ನಿಮಗೆ ವಿಚಿತ್ರ ಎನಿಸಿದರೂ ಅಲ್ಲಿನ ಕಾಲೇಜಿಗೆ ಇವು ದಿನನಿತ್ಯದ ವಿಷಯಗಳಾಗಿದ್ದವು. ಒಂದು ದಿನ ರೀಸಸ್‌ಗೆ ಅಂತ ಕಾಡಿನೊಳಗೆ ಹೋದ ಗುಡ್ಡಪ್ಪ ಗಂಟೆ ಕಳೆದರೂ ಬಾರಲಿಲ್ಲ. ಏನಾದರೂ ಅನಾಹುತವಾಗಿದೆಯೋ ನೋಡಿ ಬನ್ನಿ ಎಂದು ಪ್ರಿನ್ಸಿ ಹುಡುಗರ ಅಟ್ಟಿದರು. ಕಾಡಿನಲ್ಲಿ ಮಂಗಗಳಿಗೆ ಕಲ್ಲು ಹೊಡೆಯುತ್ತಾ ಗುಡ್ಡಪ್ಪ ಕಾಲ ಕಳೆಯುವುದ ನೋಡಿ ಬಂದ ಹುಡುಗರು ಯಥಾವತ್ತಾದ ವರದಿ ಒಪ್ಪಿಸಿದವು. ಎಷ್ಟೋ ಹೊತ್ತಿನ ಮೇಲೆ ಬಂದ ಗುಡ್ಡಪ್ಪನ ಕುರಿತು ಅಲ್ರಿ ಮೂತ್ರಕ್ಕಂತ ಯಾರಾದ್ರೂ ಗಂಟೆಗಟ್ಲೆ ಹೋಗತಾರೇನ್ರಿ. ಅಲ್ಲಿ ಮಂಗಿನ ಮಾರಿಗೆ ಕಲ್ಲು ಒಗೀತಾ ನಿಂತಿದ್ದರಂತಲ್ಲ! ಮಂಗ್ಯಾನ ಜೊತೆ ಸರಸ ಆಡಕ್ಕೇನ್ರಿ ಸರಕಾರದೋರು ಸಂಬ್ಳ ಕೊಡೋದು ಎಂದು ಗಂಭೀರವಾಗಿ ಪ್ರಿನ್ಸಿ ಕೇಳಿದರು.

ಇದಕ್ಕೆ ಸರಳವಾಗಿ ಉತ್ತರಿಸಿದ ಗುಡ್ಡಪ್ಪ ‘‘ಸಾರ್ ನೀವು ರೂಲ್ಸ್ ಪ್ರಕಾರ ಶೌಚಾಲಯ ಕಟ್ಟಿಸಿಲ್ಲ. ಹಿಂಗಾಗಿ ಕಾಡಿನ ಜಾಗದಲ್ಲಿ ನಾವು ಅಂಥ ತುರ್ತು ಕೆಲಸಗಳನ್ನ ನಿಭಾಯಿಸಬೇಕಿದೆ. ಅಲ್ಲಿ ನಾವು ನೈಸರ್ಗಿಕ ಕರೆಯೋಲೆಗಳನ್ನು ಮಾಡುವಾಗ ಹುಳ ಹುಪಟೆ, ಹಾವು ಚೇಳು, ಇತ್ಯಾದಿ ಹರಿದಾಡೋದನ್ನ ಸೂಕ್ಷ್ಮವಾಗಿ ಗಮನಿಸಿ ಎಲ್ಲವನ್ನೂ ಮಾಡಬೇಕಾಗುತ್ತದೆ. ಅದಕ್ಕೆ ಟೈಮು ಹಿಡಿಯುತ್ತೆ. ನೀವು ಇದೆಲ್ಲಾ ಬ್ಯಾಡಾಂದ್ರೆ ಇಲ್ಲೇ ನಿಮ್ಮ ಮುಂದೆ ಮೈದಾನದಲ್ಲೇ ಬೇಕಾದ್ರೆ ಕೂರ್ತಿನಿ. ನಿಮ್ಮ ಪರ್ಮಿಷನ್ ಬೇಕಷ್ಟೆ’’ ಎಂದು ಅವಲತ್ತುಕೊಂಡ. ಚಲೋ ಆತು ಬಿಡ್ರಿ. ಈಗ ಅದೊಂದು ಕರ್ಮ ನೋಡೋದು ಬಾಕಿ ಇತ್ತು. ಆ ದೇವ್ರ ನನ್ನ ನರಕಾನ ಈ ಕಾಲೇಜಲ್ಲೇ ಮಡಗ್ಯಾನಲ್ಲಪ್ಪ ಎಂದು ಹಣೆ ಚಚ್ಚಿಕೊಂಡ ಪ್ರಿನ್ಸಿ ಇನ್ನು ಈ ಜನ್ಮದಲ್ಲಿ ಇವರ್ಯಾರಿಗೂ ಬುದ್ಧಿ ಕಲಿಸೋಕೆ ಆಗಲ್ಲ. ಮೊದ್ಲು ಇಲ್ಲಿಂದ ಗಂಟುಮೂಟೆ ಕಟ್ಟಬೇಕು ಎಂದು ವದರಾಡುತ್ತಾ ಕಚೇರಿ ಒಳಗೆ ಸೇರಿಕೊಂಡರು.

 ಒಂದು ದಿನ ಇಂಥ ಗುಡ್ಡಪ್ಪನ ಹುಡುಕಿ ಕೊಂಡು ಶಿಕ್ಷಣ ಮಂತ್ರಿಗಳೇ ಆ ಕಾಲೇಜಿಗೆ ಬಂದರು. ಎಲ್ಲರೂ ಎದ್ದೆವೋ ಬಿದ್ದೆವೋ ಎಂದು ಓಡೋಡಿ ಬಂದು ಮಂತ್ರಿಗಳಿಗೆ ಸೆಲ್ಯೂಟ್ ಕುಕ್ಕಿದರು. ಬಂದವರೆ ‘‘ಇಲ್ಲಿ ಗುಡ್ಡಪ್ಪ ಅಂದ್ರೆ ಯಾರ್ರಿ’’ ಮೊದಲಿಗೇ ಕೇಳಿದರು. ಹುಡುಕಿದರೆ ಗುಡ್ಡಪ್ಪ ಕಾಲೇಜಿನ ಯಾವ ಮೂಲೆ ಯಲ್ಲೂ ಇರಲಿಲ್ಲ. ಪರಿಶೀಲಿಸಿದಾಗ ಗುಡ್ಡಪ್ಪ ತನ್ನ ಪ್ಯಾಂಟನ್ನು ಪ್ರಿನ್ಸಿಪಾಲರ ರೂಮಿನಲ್ಲಿ ನೇತಾಕಿ ತನ್ನ ಪಟ್ಟೆಪಟ್ಟೆ ಚಡ್ಡಿಯಲ್ಲಿ ಕಾಡಿನ ಕಡೆ ಹೋಗಿದ್ದ. ಮಂತ್ರಿಗಳು ಬಂದು ಅದೇ ರೂಮಿನಲ್ಲಿ ಕೂತು ಎಲ್ಲರನ್ನೂ ಸೇರಿಸಿ ಸಭೆ ಶುರು ಮಾಡಿದರು. ಏನ್ರಿ ನಿಮ್ಮ ಕಾಲೇಜಿನ ಸಮಸ್ಯೆ. ಇಲ್ಲಿ ತನಕ ರಾಜ್ಯದ ಯಾವ ಮೂಲೆಯಿಂದಲೂ ಬಾರದಷ್ಟು ಮೂಕರ್ಜಿಗಳು ನಿಮ್ಮಲ್ಲಿಂದ ಬರ್ತಿವೆ ಅಂದ್ರೆ ಏನಾಗಿದೆ ನಿಮಗೆ ಬಾಯ್ಬಿಡ್ರಿ ಎಂದು ತುಸು ಸಿಟ್ಟಿನಲ್ಲೇ ಕೇಳಿದರು. ಎಲ್ಲರೂ ಮುಖ ಕೆಳಗೆ ಹಾಕಿ ನಿಂತವರೇನೆ. ಯಾರ ಬಾಯಲ್ಲೂ ಮಾತಿಲ್ಲ. ಇಷ್ಟಕ್ಕೆಲ್ಲಾ ಕಾರಣನಾದ ಗುಡ್ಡಪ್ಪನೂ ಅಲ್ಲಿರಲಿಲ್ಲ. ಮಂತ್ರಿಗಳೊಬ್ಬರೇ ಏಕಪಾತ್ರಾಭಿನಯ ಸ್ಪರ್ಯಂತೆ ಅರ್ಧ ತಾಸು ಕಿರುಚಾಡಿ, ಕೂಗಾಡಿ, ರೇಗಾಡಿ, ಎಗರಾಡಿ ತಮ್ಮ ಮಾತು ಮುಗಿಸಿ ಕೂತರು. ಎಲ್ಲಾ ಅಪರಾಗಳಂತೆ ಜೋಲು ಮೋರೆ ಹಾಕಿಕೊಂಡು ನಿಂತಿದ್ದರು. ಇಡೀ ಪ್ರಿನ್ಸಿಪಾಲರ ಛೇಂಬರ್‌ನಲ್ಲಿ ಶ್ರದ್ಧಾಂಜಲಿ ಸಲ್ಲಿಸುವಾಗಿನ ವೌನ ಆವರಿಸಿತ್ತು.

ಆಗ ಹೊರಗಡೆಯಿಂದ ಮಾತುಗಳು ಕೇಳಿದವು. ಎಲ್ಲರ ಗಮನವೂ ಅತ್ತ ಸರಿದವು. ಅರಣ್ಯವಾಸಕ್ಕೆ ಹೋಗಿದ್ದ ಗುಡ್ಡಪ್ಪ ಪ್ರಭುಗಳು ತಮ್ಮ ಪಟ್ಟೆಪಟ್ಟೆ ಚಡ್ಡಿಯಲ್ಲಿ ಇದಕ್ಕೆ ಒಳ್ಳೆ ಮಸಾಲೆ ಹಾಕಿ ಸಾರು ಮಾಡಿದ್ರೆ, ಹತ್ತು ರೊಟ್ಟಿ ಉಣ್ಣಬಹುದು. ಅದೃಷ್ಟ ಇರೋರಿಗಷ್ಟೇ ಇದು ಸಿಗೋದು ಎಂದು ತಮ್ಮ ದೊಡ್ಡ ಕರ್ಚೀಪಿನಲ್ಲಿ ಕಟ್ಟಿಕೊಂಡ ಗಂಟೊಂದನ್ನು ಹಿಡಿದು ಉಲ್ಲಾಸದಿಂದ ಛೇಂಬರ್ ಒಳಗೆ ಬಂದರು. ಸಾರ್ ಇವರೇ ನೋಡಿ ಮೂಕರ್ಜಿ ಗುಡ್ಡಪ್ಪ ಎಂದು ಪ್ರಿನ್ಸಿಪಾಲರು ಮಂತ್ರಿಗಳಿಗೆ ಪರಿಚಯಿಸಿದರು. ಮಂತ್ರಿಗಳು ಬಂದಿರುವುದು ತಾನು ಚಡ್ಡಿಯಲ್ಲಿ ನಿಂತಿರುವುದು ಗುಡ್ಡಪ್ಪನಿಗೂ ಸಹ್ಯವೆನಿಸಲಿಲ್ಲ. ನಾನು ವಂದಕ್ಕೆ ಹೋಗ್ತೀನಿ ಅಂದ್ರೂ ಈಯಪ್ಪ ನಂಬಲ್ಲ ಸಾರ್. ಹಂಗಾಗಿ ಸಾಕ್ಷಿ ಖರೇ ಇರಲೀಂತ ಪ್ಯಾಂಟು ಇವರ ಛೇಂಬರಿನಲ್ಲಿ ನೇತಾಕಿ ಹೋಗ್ತಿನಿ ಸಾರ್. ಈ ಮಳೆಗೆ ಅಣಬೆ ಜಾಸ್ತಿ ಸಾರ್. ನಾಟಿ ಅಣಬೆ ಸಿಕ್ಕದೇ ಅಪರೂಪ. ಅಲ್ಲೇ ಸಿಕ್ಕವು ಕಿತ್ತು ತಂದೆ. ನೀವು ಒಯ್ತೀನಂದ್ರೆ ಕೊಡ್ತೀನಿ ಸಾರ್. ಬಾಳ ಟೇಸ್ಟ್ ಇರ್ತಾವೆ ಎಂದು ಇನ್ನೂ ಏನೇನೋ ಹೇಳುವವನಿದ್ದ.

 ನಿರ್ಧಾರಕ್ಕೆ ಬಂದ ಮಂತ್ರಿಗಳು ಕೆಂಗಣ್ಣಾಗಿ ಎದ್ದು ನಿಂತರು. ಪಕ್ಕದಲ್ಲಿ ಡೈರಿ ಹಿಡಿದು ಅವರ ಅಮೂಲ್ಯ ಅಣತಿಗೆ ಕಾಯುತ್ತಾ ತುಸು ಸೊಂಟ ಬಗ್ಗಿಸಿ ನಿಂತಿದ್ದ ಸಹಾಯಕನಿಗೆ ಇವರ ಸಸ್ಪೆನ್ಸನ್ ಆರ್ಡರ್ ರೆಡಿ ಮಾಡ್ಸಿ. ಈ ಕಾಲೇಜಿನ ಮೇಲೊಂದು ಎನ್‌ಕ್ವಾರಿ ಆಗಬೇಕು. ಅದರ ರಿಪೋರ್ಟ್ ಒಂದು ವಾರದೊಳಗೆ ನನ್ನ ಟೇಬಲ್ ಮೇಲಿರಬೇಕು ಎಂದು ಹೇಳಿ ಬುಸು ಗುಡುವ ನಾಗರಹಾವಿನಂತೆ ಹೊರಟೇ ಬಿಟ್ಟರು. ಸಾರ್ ಈ ಕಾಲೇಜಿನ ಬಗ್ಗೆ ನಾನೇ ಹೈಕ್ಲಾಸ್ ರಿಪೋರ್ಟ್ ರೆಡಿ ಮಾಡಿದ್ದೀನಿ ಒಂದ್ನಿಮಿಷ ನಿಲ್ಲಿ ಸಾರ್ ಕೊಡ್ತೀನಿ. ಹಂಗೆ ಇಲ್ಲಿನ ಅವ್ಯವಸ್ಥೆ ಕುರಿತು ತುಂಬಾ ಪದ್ಯ ಬರ್ದಿದ್ದೀನಿ ಎನ್ನುತ್ತಾ ಚಡ್ಡಿಯಲ್ಲಿದ್ದ ಗುಡ್ಡಪ್ಪ ಅವರ ಹಿಂದೆಯೇ ಓಡಿದ. ಅಷ್ಟರಲ್ಲಾಗಲೇ ಮಂತ್ರಿಗಳು ಕಾರು ಧೂಳೆಬ್ಬಿಸುತ್ತಾ ಹೊರಟೇ ಹೋಯಿತು. ಗುಡ್ಡಪ್ಪ ತನ್ನ ಜೊಲ್ಲು ಒರೆಸುವ ಕರ್ಚೀಪಿನಲ್ಲಿ ಕಟ್ಟಿದ್ದ ಅಣಬೆ ನೋಡುತ್ತಾ ಇದ್ನ್ ತಿನ್ನೋದಕ್ಕೂ ಪುಣ್ಯ ಪಡ್ಕೊಂಡು ಬಂದಿರಬೇಕು.

ಕೊಡ್ತೀನಿ ಅಂದ್ರೂ ಬ್ಯಾಡಂತ ಮುಕ್ಳಿ ತಿರ್ಗಿಸ್ಕೊಂಡ್ ಹೋಗೋನಿಗೆ ನಾನೇನು ಮಾಡಕ್ಕಾಗುತ್ತೆ. ಮಂತ್ರಿಯಾದ್ರೆ ಅವುನ ಮನಿಗಿದ್ದಾನು. ಲೀಝರ್ ಟೈಮಲ್ಲಿ ಚಡ್ಡೀಲಿ ಇರೋದೂ ಅಪರಾಧವೆ ಸ್ವಾಮಿ; ನಾನೇ ಮುಖ್ಯ ದೂರುದಾರ ನನ್ನ ವಿಚಾರಿಸದೆ ಉರ್ಕೊಂಡ್ ಹೋದ ಇವುನು ಒಬ್ಬ ಮಂತ್ರಿನೇ; ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಬೆಲೇನೆ ಇಲ್ವೆ? ಮೊದಲು ಈ ನನ್ಮಗನ ಮೇಲೆ ಮುಖ್ಯಮಂತ್ರಿಗೆ ಅರ್ಜಿ ಬರೀಬೇಕು. ಐ ಟೋಂಡ್ ಕೇರ್ ಾರ್ ..... ಎನ್ನುತ್ತಾ ತಿರುಗಿದ. ಅವನನ್ನೇ ದುರುದುರು ನೋಡುತ್ತಾ ನಿಂತಿದ್ದ ಸಹದ್ಯೋಗಿಗಳ ಮುಖಕ್ಕೆ ಕ್ಯಾಕ್ ಥೂ ಎಂದು ಉಗಿದ ಗುಡ್ಡಪ್ಪ ಬಹಳ ಹೊತ್ತು ಸುಮ್ಮನೇ ಕೂತು ಬಿಟ್ಟ. ಅವನ ತಲೆಯೊಳಗೆ ಏನೇನೋ ಅರಿವಿಗೆ ಬಾರದ ನೂರಾರು ವಿಷಯಗಳು ಕಾ...ಕಾ ಎಂದು ಕಿರುಚತೊಡಗಿದವು. ಎದ್ದು ನಿಂತು ಜನಗಣಮನ ಹಾಡಿದ ಗುಡ್ಡಪ್ಪ ಅವತ್ತು ನಡೆದೇ ಹೊರಟು ಬಿಟ್ಟ. ಯಾರಿಗೂ ಬೈಯಲಿಲ್ಲ; ಬಸ್ಸಿಗೂ ಕಾಯಲಿಲ್ಲ. ಯಾರು ಕರೆದರೂ ತಿರುಗಿ ನೋಡಲಿಲ್ಲ. ಪ್ರಿನ್ಸಿಪಾಲರೇ ಅವನ ಪ್ಯಾಂಟನ್ನೂ, ಬ್ಯಾಗನ್ನೂ ಹುಡುಗರ ಕೈಲಿ ಕೊಟ್ಟು ಬೇಗ ತಲುಪಿಸಿ ಬನ್ನಿ ಎಂದು ಕಳಿಸಿದರು. ಹಾಗೆ ಹಿಂದೆ ಹೋದ ಹುಡುಗರಿಗೂ ಕಲ್ಲು ಬೀರಿ ಗುಡ್ಡಪ್ಪ ಹೊಡೆದು ಕಳಿಸಿದನಂತೆ.

ಅರೆ ಹುಚ್ಚನಂತೆ ಓಡಾಡಿಕೊಂಡಿರುವ ಅವನು ಈಗಲೂ ಅಲ್ಲಲ್ಲಿ ಸಿಗುತ್ತಾನೆ. ನನ್ ಸಸ್ಪೆಂಡ್ ಮಾಡೋ ತಾಕತ್ತು ಯಾವ .... ಮಗನಿಗಿದೆ ಎನ್ನುತ್ತಾ ತನ್ನ ಬ್ಯಾಗಿನಿಂದ ಹಲವಾರು ರೈಲುಗಳ ತೆಗೆಯುತ್ತಾನೆ. ಸಿಕ್ಕವರಿಗೆಲ್ಲಾ ಎಂದೂ ಅರ್ಥವಾಗದ ತನ್ನ ಕಥೆ ಹೇಳು ತ್ತಾನೆ. ತನ್ನ ಅಪೂರ್ಣ ಪದ್ಯಗಳನ್ನು ಒರಟು ರಾಗದಲ್ಲಿ ಹಾಡುತ್ತಾನೆ. ಇತ್ತೀಚಿಗೆ ಉಲ್ಬಣವಾಗಿರುವ ಶುಗರ್ ಬಿ.ಪಿ.ಗಳಿಂದ, ಬಿಸಿಲ ತಿರುಗಾಟ ದಿಂದ ಅವನ ಮುಖವೆಲ್ಲಾ ಬತ್ತು ಸುಟ್ಟು ಹೋಗಿದೆ. ನಮ್ಮೂರಿ ನಲ್ಲಿ ಯಾವುದೇ ಸಭೆ ಸಮಾರಂಭ ನಡೆಯುವ ಜಾಗದಲ್ಲಿ ಆಯೋಜಕರಿಗೂ ಪ್ರೇಕ್ಷಕನಿಗೂ ಸುಖಾಸುಮ್ಮನೆ ಜಗಳ, ಮಾರಾಮಾರಿ ನಡೆಯುತ್ತಿದೆ ಎಂದರೆ ಅಲ್ಲಿ ಗುಡ್ಡಪ್ಪ ಇದ್ದಾನೆಂದೇ ಅರ್ಥ. ಬಾಯಲ್ಲಿ ನೊರೆ ಕಿತ್ತು ಬರುವವರೆಗೂ ಜಗಳ ವಾಡುತ್ತಲೇ ಇರುತ್ತಾನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)