ರಾಜಕೀಯ ಕ್ಷೇತ್ರದ ಮೇಲಷ್ಟೇ ನನ್ನ ಸಂಪೂರ್ಣ ಗಮನ : ರಮ್ಯಾ
ವಿವಾದಗಳನ್ನು ಯಾರೂ ಬಯಸುವುದಿಲ್ಲ. ಕೆಲವೊಂದು ಬಾರಿ ನಮ್ಮ ಕೆಲವು ಮಾಧ್ಯಮಗಳು ನನ್ನ ಮಾತಿನ ಉದ್ದೇಶ ಅರ್ಥವಾಗಿದ್ದರೂ ಸಹ ಮುಖ್ಯ ಅಂಶಗಳನ್ನು ಮರೆಮಾಡಿ ಅದನ್ನು ಅನಗತ್ಯವಾಗಿ ಬೇರೆಯದೇ ತರದಲ್ಲಿ ತೋರಿಸುವ ಪ್ರಯತ್ನ ಮನಸ್ಸಿಗೆ ನೋವುಂಟು ಮಾಡುವಂತಹದ್ದು. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದು.
ರಾಜಕೀಯದ ನಡುವೆ ನಿಮ್ಮನ್ನು ಸಿನೆಮಾ ಕಾಡುತ್ತಿಲ್ಲವೇ? ಭವಿಷ್ಯದಲ್ಲಿ ಸಿನೆಮಾದಲ್ಲಿ ನಟಿಸುವ ಉದ್ದೇಶವಿಲ್ಲವೇ?
ರಮ್ಯಾ: ತುಂಬ ಜನ ಕೇಳ್ತಾ ಇರ್ತಾರೆ ಸಿನೆಮಾ ಮಾಡಿ ಅಂತ, ಒಳ್ಳೆಯ ಪಾತ್ರ ಬಂದಾಗ ಅದರ ಬಗ್ಗೆ ಯೋಚನೆ ಮಾಡ್ತೀನಿ. ಕೆಲ ದಿನಗಳಲ್ಲೇ ನಾಗರಹಾವು ರಿಲೀಸ್ ಆಗ್ತಿದೆ. ಸಾಕಷ್ಟು ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಕ್ತಿದೆ. ನನ್ನನ್ನು ತೆರೆ ಮೇಲೆ ನೋಡಬೇಕೆಂದಿದ್ದ ನನ್ನ ಅಭಿಮಾನಿಗಳಿಗೆ ಖಂಡಿತ ನಿರಾಸೆ ಆಗೋದಿಲ್ಲ. ಎಲ್ಲರೂ ಈ ಚಿತ್ರವನ್ನು ಇಷ್ಟಪಡ್ತಾರೆ ಅನ್ನೋ ಭರವಸೆ ಇದೆ. ಅಕಾರದಲ್ಲಿ ಇಲ್ಲದೇ ಇದ್ರು ಸದ್ಯಕ್ಕೆ ನನ್ನ ಗಮನ ಮಂಡ್ಯ ಜನರಿಗೋಸ್ಕರ ನನ್ನ ಪರಿಮಿತಿಯಲ್ಲಿ ಕೈಲಾದಷ್ಟು ಕೆಲಸ ಮಾಡೋದು.
ಹಲವರು ಸಿನೆಮಾ ನಿರ್ದೇಶನ, ನಿರ್ಮಾಣ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ನಿರ್ಮಾಣ, ನಿರ್ದೇಶನ ಕ್ಷೇತ್ರದಲ್ಲಿ ಮಿಂಚುವ ಉದ್ದೇಶ ನಿಮಗಿದೆಯೇ?
ರಮ್ಯಾ: ರಾಜಕೀಯ ಕ್ಷೇತ್ರದ ಮೇಲಷ್ಟೇ ನನ್ನ ಸಂಪೂರ್ಣ ಗಮನ.
ನೀವು ನಟಿಸಿದ ಚಿತ್ರಗಳಲ್ಲಿ ಇಷ್ಟವಾದ ಚಿತ್ರಗಳು, ಪಾತ್ರಗಳು?
ರಮ್ಯಾ: ಇಷ್ಟವಾದ ಪಾತ್ರ ‘ಸಂಜು ವೆಡ್ಸ್ ಗೀತಾ’ದ ಗೀತಾ.
(ಯಾವುದೇ ಭಾಷೆಯಲ್ಲಿ) ನಿಮ್ಮ ಅಚ್ಚುಮೆಚ್ಚಿನ ಸಿನೆಮಾ, ನಟ, ನಟಿ ಹಾಗೂ ನಿರ್ದೇಶಕ ಯಾರು? ಯಾಕೆ?
ರಮ್ಯಾ: ಬಹಳಷ್ಟು ಜನ ಪ್ರತಿಭಾವಂತರು ಇದಾರೆ.ಕೆಲವೇ ಹೆಸರು ತೆಗೆದುಕೊಳ್ಳೋಕಾಗಲ್ಲ. ರಾಜಕೀಯ ನಿಮ್ಮನ್ನು ಹೇಗೆ ಸ್ವೀಕರಿಸಿದೆ?
ಇಲ್ಲಿ ನಿಮಗೆ ಎದುರಾದ ಅಡೆತಡೆಗಳ ಕುರಿತು.. ರಮ್ಯಾ: ರಾಜಕೀಯ ನನ್ನನ್ನು ಚೆನ್ನಾಗಿಯೇ ಸ್ವೀಕರಿಸಿದೆ. ಸೋಲು ಗೆಲುವು ಎರಡನ್ನೂ ನೋಡಿದ್ದೀನಿ. ಸಾಕಷ್ಟು ಕಲಿತಿದ್ದೀನಿ ಆದರೆ ಇನ್ನೂ ಕಲಿಯೋದು ಸಮುದ್ರದಷ್ಟಿದೆ.
ರಾಜಕೀಯಕ್ಕಿಳಿಯಲು ನೀವು ಕಾಂಗ್ರೆಸನ್ನೇ ಆರಿಸಿಕೊಳ್ಳಲು ಕಾರಣವೇನು?
ರಮ್ಯಾ: ರಾಜಕೀಯಕ್ಕೆ ಕಾಂಗ್ರೆಸ್ ಆಯ್ಕೆ ಮಾಡಿಕೊಳ್ಳೋಕೆ ಕಾರಣ ಪಕ್ಷದ ಎಲ್ಲರನ್ನೂ ಸಮಾನವಾಗಿ ನೋಡುವ, ಜಾತ್ಯತೀತ ಪಕ್ಷವಾಗಿ ಎಲ್ಲರನ್ನೂ ಪರಿಗಣಿಸಿವ, ಸಮಾಜದಲ್ಲಿ ಸಹಬಾಳ್ವೆಯನ್ನು ಬೆಂಬಲಿಸುವ ಮತ್ತು ಬಡವರ ಪರವಾಗಿರುವಂತಹ ಸಿದ್ಧಾಂತಗಳು ನನ್ನ ವೈಯುಕ್ತಿಕ ಸಿದ್ಧಾಂತಗಳಿಗೆ ಹೆಚ್ಚು ಹೊಂದುತ್ತದೆ.
ಪಾಕಿಸ್ತಾನದ ನಿಮ್ಮ ಭೇಟಿಯ ಕೆಲವು ಕ್ಷಣಗಳನ್ನು ಹಂಚಿಕೊಳ್ಳಬಹುದೇ?
ರಮ್ಯಾ: ಇದರ ಬಗ್ಗೆ ನಾನು ಈ ಹಿಂದೆಯೇ ಮಾತಾಡಿದ್ದೇನೆ. ಅದರ ಮೇಲೆ ಸಾಕಷ್ಟು ಚರ್ಚೆ ಕೂಡ ಈಗಾಗಲೇ ಆಗಿದೆ.
ಇತ್ತೀಚೆಗೆ ನಿಮ್ಮನ್ನು ಕಾಡಿದ ವಿವಾದಗಳ ಬಗ್ಗೆ ಏನು ಹೇಳುತ್ತೀರಿ?
ರಮ್ಯಾ: ವಿವಾದಗಳನ್ನು ಯಾರೂ ಬಯಸುವುದಿಲ್ಲ. ಕೆಲವೊಂದು ಬಾರಿ ನಮ್ಮ ಕೆಲವು ಮಾಧ್ಯಮಗಳು ನನ್ನ ಮಾತಿನ ಉದ್ದೇಶ ಅರ್ಥವಾಗಿದ್ದರೂ ಸಹ ಮುಖ್ಯ ಅಂಶಗಳನ್ನು ಮರೆಮಾಡಿ ಅದನ್ನು ಅನಗತ್ಯವಾಗಿ ಬೇರೆಯದೇ ತರದಲ್ಲಿ ತೋರಿಸುವ ಪ್ರಯತ್ನ ಮನಸ್ಸಿಗೆ ನೋವುಂಟು ಮಾಡುವಂತಹದ್ದು. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದು.
ಕಾವೇರಿ ನೀರಿನ ಕುರಿತಂತೆ ಸರಕಾರ ತೆಗೆದುಕೊಂಡ ಕ್ರಮದ ಬಗ್ಗೆ ನಿಮಗೆ ಸಮಾಧಾನ ಇದೆಯೇ?
ರಮ್ಯಾ: ಕಷ್ಟದ ತೀರ್ಮಾನವಾದರೂ ಮೊದಲಿಗೆ ನಾವು ಸುಪ್ರೀಂ ಕೋರ್ಟ್‌ನ ಆದೇಶ ಪಾಲನೆ ಮಾಡಿದ್ವಿ. ನಮ್ಮ ರೈತರಿಗೂ ನೀರೊದಗಿಸುವ ಪ್ರಯತ್ನವನ್ನೂ ಮಾಡಿದ್ವಿ. ಆದರೆ ಕೋರ್ಟ್ ಮೇಲಿಂದ ಮೇಲೆ ಹೆಚ್ಚು ನೀರನ್ನು ಇಲ್ಲಿಯ ನೆಲದ ನೈಜ ಪರಿಸ್ಥಿತಿಯನ್ನು ಪರಿಗಣಿಸದೆ ತೀರ್ಪು ಕೊಟ್ಟಾಗ, ಅದನ್ನು ಪಾಲಿಸದಿರಲು ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಯಿತು. ಇದು ಕಾನೂನು ಉಲ್ಲಂಘನೆ ಮಾಡಿ ಕೋರ್ಟ್‌ಗೆ ಅಗೌರವ ತೋರಬೇಕೆಂದಾಗಲಿ ಅಥವಾ ನಮಗೆ ನೆರೆ ರಾಜ್ಯದ ರೈತರ ಮೇಲೆ ಕಾಳಜಿ ಇಲ್ಲ ಎಂದಾಗಲಿ ಅಲ್ಲ ನಮಗೇ ಇಲ್ಲಿ ನೀರು ಇಲ್ಲ ಹಾಗಾಗಿ ನೀರು ಬಿಡಲು ಸಾಧ್ಯವೇ ಇಲ್ಲ ಅನ್ನುವ ಸಂದರ್ಭ.