ಕಿಡ್ನಿ ಹಾಕಿಸಬೇಕು, ಮನೆ ತಗೊಳ್ಳಿ..!
ಬೆಂಗಳೂರು, ಅ.13: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು, ತಮಗೆ ಆಸರೆಯಾಗಿದ್ದ ಮನೆಯನ್ನೆ ಮಾರಾಟ ಮಾಡಲು ಮುಂದಾಗಿದ್ದಾರೆ. ಆದರೆ, ಅಚ್ಚರಿಯೆಂದರೆ, ಬೀದಿಯಲ್ಲಿ ‘ಕಿಡ್ನಿ ಹಾಕಿಸಲು ಮನೆ ಮಾರುತ್ತಿದ್ದೇವೆ’ ಎನ್ನುವ ಭಿತ್ತಿಪತ್ರಗಳನ್ನು ಹಾಕಿ, ಗಿರಾಕಿಗಳಾಗಿ ಕಾಯುತ್ತಿರುವುದು.
ನಗರದ ಬನಶಂಕರಿಯ 2ನೆ ಹಂತದ ಕಾವೇರಿನಗರದ ನಿವಾಸಿ ಗುರುಸಿದ್ದಯ್ಯ ಎನ್ನುವವರು ಮೂರು ವರ್ಷಗಳಿಂದ ಮೂತ್ರಪಿಂಡ ರೋಗದಿಂದ ಬಳಲುತ್ತಿದ್ದು, ಒಂದು ದಿನದ ಜೀವನ ನಡೆಸಲೂ ಸಹ ಆಗದ ಸ್ಥಿತಿಯಲ್ಲಿ ಇರುವ ತಮಗೆ ಆಸರೆಯಾಗಿದ್ದ ಮನೆ ಮಾರಾಟಕ್ಕೆ ಮುಂದಾಗಿದ್ದಾರೆ. ಜೊತೆಗೆ ಸಹಾಯ ಹಸ್ತಕ್ಕಾಗಿ ಎದುರು ನೋಡುತ್ತಿದ್ದಾರೆ.
ಗುರುಸಿದ್ದಯ್ಯ ಹಿನ್ನಲೆ: ಮೂಲತಃ ಹಾಸನ ಜಿಲ್ಲೆಯ ದೊಡ್ಡಾಲದವರಾದ ಗುರುಸಿದ್ದಯ್ಯ, 25 ವರ್ಷವಿದ್ದಾಗ ವಿದ್ಯುತ್ ಕಂಬಕ್ಕೆ ಚುನಾವಣೆ ಬ್ಯಾನರ್ ಕಟ್ಟುವ ಸಂದರ್ಭದಲ್ಲಿ ಕರೆಂಟ್ ಹೊಡೆದ ಪರಿಣಾಮ, ಕೆಳಗೆ ಬಿದ್ದು ಬೆನ್ನು ಮೂಳೆ ಮುರಿಯಿತು. ಇದರಿಂದ ಸೊಂಟದ ಶಕ್ತಿಯನ್ನು ಕಳೆದುಕೊಂಡರು. ಅಂದಿನಿಂದ ಇನ್ನೊಬ್ಬರ ನೆರವಿಲ್ಲದೆ ಓಡಾಡಲು ಸಾಧ್ಯವಾಗುತ್ತಿಲ್ಲ. ಇಷ್ಟು, ಸಾಲದು ಎಂಬಂತೆ ಕಿಡ್ನಿ ವೈಫಲ್ಯ, ಸಕ್ಕರೆ ಕಾಯಿಲೆಯಿಂದಲೂ ಬಳಲುತ್ತಿದ್ದಾರೆ. ಪ್ರತೀ ದಿನ ಡಯಾಲಿಸಿಸ್ ಮಾಡಿಸಿಕೊಂಡರೆ ಮಾತ್ರ ಎದ್ದು ಓಡಾಡುವ ಸ್ಥಿತಿ ತಲುಪಿದ್ದಾರೆ. ಓಡಾಡಿ ಮನೆ ಮಾರಾಟ ಮಾಡೋಣ ಅಂದರೆ, ಓಡಾಡೋಕೆ ಸಾಧ್ಯವಿಲ್ಲ. ಹೀಗಾಗಿಯೇ ಬನಶಂಕರಿ ವ್ಯಾಪ್ತಿಯಲ್ಲಿ ‘ಕಿಡ್ನಿ ಹಾಕಿಸಲು ಮನೆ ಮಾರುತ್ತಿದ್ದೇವೆ’ ಎಂದು ಭಿತ್ತಿಪತ್ರ ಅಂಟಿಸಿದ್ದಾರೆ.
55 ವರ್ಷದ ಗುರುಸಿದ್ದಯ್ಯ ಅವರನ್ನು 25 ವರ್ಷದಿಂದ ಅವರ ಪತ್ನಿ ಸುಶೀಲ ಮಗುವಿವಂತೆ ಪಾಲಿಸುತ್ತಿದ್ದಾರೆ. ಇವರಿಗೆ ಮಕ್ಕಳಿಲ್ಲ. ಸಾಕು ಮಗಳ ಮದುವೆ ಮಾಡಲು, ಮನೆ ಕಟ್ಟಿಸಲು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾರೆ. ಮನೆ ಮಾರಾಟ ಮಾಡಿದರೆ, ಸಾಲ ತೀರಿಸಿ ಚಿಕಿತ್ಸೆ ಪಡೆಯಬಹುದು ಎಂಬುದು ಇವರ ಯೋಚನೆ.
ಬಂಧು-ಬಾಂಧವರು ಇವರ ಕಷ್ಟ ನೋಡಿ ದೂರ ಉಳಿದಿದ್ದಾರೆ. ನೋಡಿಕೊಳ್ಳಲು ಸ್ವಂತ ಮಕ್ಕಳಿಲ್ಲ. ಯಾರನ್ನೋ ಗೆಲ್ಲಿಸಲು ಹೋಗಿ ತನ್ನ ಸುಂದರ ಬದುಕನ್ನೇ ಹಾಳು ಮಾಡಿಕೊಂಡ ಗುರುಸಿದ್ದಯ್ಯ, ದುಡಿಯುವ ವಯಸ್ಸಲ್ಲೇ ಹಾಸಿಗೆ ಹಿಡಿದಿದ್ದು, ಪ್ರತೀದಿನ ಕಣ್ಣೀರಲ್ಲೇ ಕೈ ತೊಳೆಯುತ್ತಿದ್ದಾರೆ.
ಸಹಾಯಕ್ಕೆ ಮನವಿ: ಗುರುಸಿದ್ದಯ್ಯ ಅವರು ದಾನಿಗಳ ಸಹಾಯಕ್ಕೆ ಕಾಯುತ್ತಿದ್ದು, ಆಸಕ್ತರು ಮೊಬೈಲ್ ಸಂಖ್ಯೆ 9741163777ನ್ನು ಸಂಪರ್ಕಿಸಬಹುದು.