ಸಮಾನತೆಯ ಈ ನಂದಾದೀಪ ಆರದಿರಲಿ
ಈ ದೇಶದಲ್ಲಿ ಜಾತೀಯತೆ, ಅಂಧಶ್ರದ್ಧೆ, ಲಿಂಗಭೇದ, ಅಸ್ಪಶ್ಯತೆ, ಕಂದಾ ಚಾರದಂತಹ ಅನಿಷ್ಠಗಳ ವಿರುದ್ಧ ಆರಂಭವಾದ ಸಮಾಜ ಸುಧಾರಣಾ ಆಂದೋಲನಕ್ಕೆ ಎರಡು ಶತಮಾನಗಳ ಇತಿಹಾಸವಿದೆ. ಜ್ಯೋತಿಬಾ ಫುಲೆ, ಸಾವಿತ್ರಿಬಾ ಫುಲೆ, ಶಾಹು ಮಹಾರಾಜ, ಆಗರಕರ್ ಅವರಿಂದ ಆರಂಭಗೊಂಡು ಡಾ. ಅಂಬೇಡ್ಕರ್ ಮತ್ತು ಪೆರಿಯಾರ ಕಾಲದಲ್ಲಿ ಎತ್ತರಕ್ಕೆ ಬೆಳೆದು ನಿಂತ ಸಮಾನತೆಯ ಈ ಸಂಘರ್ಷ 200 ವರ್ಷಗಳ ನಂತರ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಅಸಮಾನತೆಯನ್ನೇ ಉಸಿರಾಡುವ ಕರಾಳ ಶಕ್ತಿಗಳು ಸಾಮಾಜಿಕ ನ್ಯಾಯದ ಈ ರಥಕ್ಕೆ ಅಡ್ಡಿ ಉಂಟು ಮಾಡುತ್ತಲೇ ಇವೆ. ಶೂದ್ರಾತಿಶೂದ್ರರಿಗೆ ಶಾಲೆಯನ್ನು ತೆರೆದ ಫುಲೆ ದಂಪತಿ ಎದುರಿಸಿದ ಅಸಹನೀಯ ಹಿಂಸೆ ಬಾಬಾ ಸಾಹೇಬರು ಅನುಭವಿಸಿದ ಪ್ರಾಣ ಸಂಕಟ ಇವನ್ನೆಲ್ಲ ದಾಟಿ, ದೇಶ ಇಲ್ಲಿಗೆ ಬಂದು ನಿಂತಿದೆ. ಸಮಾಜ ಬದಲಾವಣೆಗಾಗಿ ನಡೆದ ಈ ಸಂರ್ಷಕ್ಕೆ ಬರೀ 200 ವರ್ಷದ ಇತಿಹಾಸ ಮಾತ್ರವಲ್ಲ ಬೇರು ಹುಡುಕುತ್ತ ಹೊರಟರೆ ಸಾವಿರ ವರ್ಷಗಳ ಚರಿತ್ರೆ ಬಿಚ್ಚಿಕೊಳ್ಳುತ್ತದೆ. ಬುದ್ಧ, ಬಸವಣ್ಣ, ಸಂತ ತುಕಾರಾಮ, ನಾಮದೇವ, ಚಕ್ರಧರ, ಕನಕದಾಸ ಹೀಗೆ ಮನುಷ್ಯರ ನಡುವಿನ ಅಸಮಾನತೆಯನ್ನು ವಿರೋಧಿಸಿ ಹೋರಾಡುತ್ತಲೇ ಬೆಳಕು ನೀಡಿದ ಚೇತನಗಳು ಈ ದೇಶವನ್ನು ಇಲ್ಲಿಗೆ ತಂದು ನಿಲ್ಲಿಸಿವೆ. ಈ ವ್ಯವಸ್ಥೆ ಚರಿತ್ರೆಯಲ್ಲಿ ಅನೇಕ ಬೆಳಕಿನ ಕಿರಣಗಳನ್ನು ಬಲಿ ತೆಗೆದುಕೊಂಡಿದೆ. ಹೀಗೆ ಬಂಡಾಯವೆದ್ದ ಮಹಾಪುರುಷರೆಲ್ಲ, ವ್ಯವಸ್ಥೆಯ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ. 12ನೆ ಶತಮಾನದಲ್ಲಿ ಜಾತಿರಹಿತ ಮದುವೆ ಮಾಡಲು ಹೋಗಿ ಕಲ್ಯಾಣದಿಂದ ಗಡಿಪಾರಾದ ಬಸವಣ್ಣ ಕೂಡಲಸಂಗಮಕ್ಕೆ ಬಂದು ಬದುಕನ್ನು ಕೊನೆಗೊಳಿಸಿಕೊಂಡರು. ಅವರು ಐಕ್ಯವಾಗಿಲ್ಲ ಜಾತಿವಾದಿಗಳಿಂದ ಕೊಲೆ ನಡೆಯಿತು ಎಂದು ಹಿರಿಯ ಸಾಹಿತಿ ಬಸವರಾಜ ಕಟ್ಟೀಮನಿ ಹೇಳುತ್ತಿದ್ದರು. ಮಹಾರಾಷ್ಟ್ರದಲ್ಲಿ ಜಾತಿ ತಾರತಮ್ಯದ ವಿರುದ್ಧ ಅಭಂಗಗಳನ್ನು ರಚಿಸಿದ ಸಂತ ತುಕಾರಾಮ ಅವರನ್ನು ಮುಗಿಸಿ, ದೇವಲೋಕಕ್ಕೆ ಹೋದರೆಂದು ಕತೆ ಕಟ್ಟಲಾಯಿತು. ಇದೆಲ್ಲ ಎಲ್ಲರಿಗೂ ಗೊತ್ತಿರುವ ಸಂಗತಿ.
ಆದರೆ ಈ ಸಮಾಜ ಸುಧಾರಕರ ನಂತರ ಅವರು ಕಟ್ಟಿದ ಚಳವಳಿ ಎಲ್ಲಿಗೆ ಬಂದು ನಿಂತಿವೆಯೆಂದು ನಾವು ಪರಾಮರ್ಶಿಸಬೇಕಿದೆ. ಪೇಜಾವರರನ್ನು ಎದುರಿಸಲು ನಾವು ಬಸವಣ್ಣನವರ ವಚನಗಳನ್ನು ಪದೇ ಪದೇ ಉಲ್ಲೇಖಿಸಿದರೂ ಬಸವಣ್ಣನವರ ಹೆಸರು ಹೇಳುವ ಕರ್ನಾಟಕದ ಬಹುತೇಕ ಬಸವಧರ್ಮೀಯರು ಈಗ ಬಿಜೆಪಿಯ ವೋಟು ಬ್ಯಾಂಕ್ ಆಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಬೆಳಗಾವಿ, ಧಾರವಾಡ, ಭಾಗಲಕೋಟೆ, ಬಿಜಾಪುರ, ಹಾವೇರಿ ಜಿಲ್ಲೆಗಳಲ್ಲಿ ಬಿಜೆಪಿಯಿಂದ ಅತಿ ಹೆಚ್ಚು ಶಾಸಕರು ಗೆದ್ದು ಬಂದಿದ್ದಾರೆ. ಬಸವಣ್ಣನವರ ಕರ್ಮಭೂಮಿ ಹೈದರಾಬಾದ್-ಕರ್ನಾಟಕದಲ್ಲಿ ಸಂಘ ಪರಿವಾರ ನೆಲೆ ಕಟ್ಟಿಕೊಳ್ಳಲು ಯತ್ನಿಸುತ್ತಿದ್ದರೂ ಇನ್ನೂ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಶರಣ ಚಳವಳಿಯೊಂದೇ ಅಲ್ಲ, ಈ ಭಾಗದಲ್ಲಿ ಕಳೆದ ಶತಮಾನದ 40ರ ದಶಕದಲ್ಲಿ ಆಗಿ ಹೋದ ಅಂಬೇಡ್ಕರ್ ಸಮಕಾಲೀನರಾದ ಬಿ.ಶಾಮಸುಂದರ ಅವರ ಕೊಡುಗೆ ಸಾಕಷ್ಟು ಇದೆ. ಅವರ ಪ್ರಭಾವದಿಂದಾಗಿ ಈ ಜಿಲ್ಲೆಯನ್ನು ಆಕ್ರಮಿಸಲು ಕೋಮುವಾದಿ ಶಕ್ತಿಗಳಿಗೆ ಈವರೆಗೆ ಸಾಧ್ಯವಾಗಿಲ್ಲ. ಬೀದರ್, ರಾಯಚೂರು ಜಿಲ್ಲೆಗಳಲ್ಲಿ ಬಹುತೇಕ ರೈತರು ಬೌದ್ಧ ಧರ್ಮ ಸ್ವೀಕರಿಸಿದ್ದಾರೆ. ಜನಸಾಮಾನ್ಯರಿಂದ ತಲಾ 10 ಪೈಸೆ ಸಂಗ್ರಹಿಸಿ ಸಂಘಟನೆ ಕಟ್ಟಿದ ಬಿ.ಶಾಮಸುಂದರ ಅಂತಹವರು ದಮನಿತ ಸಮುದಾಯದಲ್ಲಿ ಹೋರಾಟದ ಛಲ ಮೂಡಿಸಿದರು.ಅಂತಲೇ ಉತ್ತರ ಕರ್ನಾಟಕದ ಇತರ ಭಾಗಗಳಂತೆ ಇಲ್ಲಿ ಸಂಘ ಪರಿವಾರ ಬಲವಾಗಿ ನೆಲೆಯೂರಲು ಸಾಧ್ಯವಾಗಿಲ್ಲ. ಕರ್ನಾಟಕದ ಉಳಿದ ಭಾಗಗಳಿಗೆ ಹೋಲಿಸಿದರೆ, ಹೈದರಾಬಾದ್-ಕರ್ನಾಟಕದಲ್ಲಿ ಬಸವ ಚಳವಳಿಯ ಪ್ರಭಾವ ದಟ್ಟವಾಗಿದೆ.
ಬಸವಣ್ಣ ಮತ್ತು ಇತರ ಸಮಾಜ ಸುಧಾರಕರ ಚಳವಳಿಗಳು ಕಾಲಕ್ರಮೇಣ ವ್ಯವಸ್ಥೆಯೊಂದಿಗೆ ಲೀನವಾದವು. ಬಸವಣ್ಣನನ್ನು ಕಲ್ಲಿನ ಮೂರ್ತಿಯನ್ನಾಗಿ ಮಾಡಿ ಪೂಜೆ ಮಾಡತೊಡಗಿದವು. ಬಸವ ಧರ್ಮ ಪ್ರತಿಪಾದಿಸುವ ಅನೇಕ ಮಠಾಧೀಶರು ನಮ್ಮ ನಡುವೆ ಇದ್ದರೂ ಭಕ್ತರು ಅವರ ನಿಯಂತ್ರಣದಲ್ಲಿ ಇಲ್ಲ. ಸಂಘ ಪರಿವಾರದ ಮನುವಾದಿ ಶಕ್ತಿಗಳೇ ಇವರನ್ನು ನಿಯಂತ್ರಿಸುತ್ತಿವೆ. ಆದರೂ ಗದುಗಿನ ತೋಂಟದಾರ್ಯ ಶ್ರೀಗಳು, ಸಾಣೆಹಳ್ಳಿಯ ಪಂಡಿತಾರಾಧ್ಯರು ಬಸವ ತತ್ವದ ಜ್ಯೋತಿಯನ್ನು ಎತ್ತಿ ಹಿಡಿಯಲು ಮನುವಾದಿ, ಕೋಮುವಾದಿ ಶಕ್ತಿಗಳನ್ನು ಎದುರಿಸಿ ಅನೇಕ ತೊಂದರೆಗಳನ್ನು ಬರಮಾಡಿಕೊಂಡ ಉದಾಹರಣೆಗಳಿವೆ. ಹಿಂದೊಮ್ಮೆ ಬಾಗಲಕೋಟೆ ಬಳಿ ಈ ಕರಾಳ ಶಕ್ತಿಗಳು ತೋಂಟದಾರ್ಯ ಶ್ರೀಗಳ ಮೇಲೆ ಹಲ್ಲೆಗೂ ಯತ್ನಿಸಿದ್ದವು. ಆದರೆ ಬಸವಧರ್ಮೀಯರು ಬಸವ ಸಂದೇಶವನ್ನು ಎತ್ತಿ ಹಿಡಿದು ಗಟ್ಟಿಯಾಗಿ ನಿಂತಿದ್ದರೆ, ಮನುವಾದಿಗಳು ಕರ್ನಾಟಕದಲ್ಲಿ ಬಾಲ ಬಿಚ್ಚಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅಂಬೇಡ್ಕರ್ ಕಟ್ಟಿದ ಚಳವಳಿ ಹಾಗಲ್ಲ. ಅದನ್ನು ಜೀರ್ಣಿಸಿಕೊಳ್ಳಲು ಹಿಂದೂತ್ವವಾದಿ ಶಕ್ತಿಗಳಿಗೆ ಸಾಧ್ಯವಾಗಲೇ ಇಲ್ಲ. ಉಳಿದ ಮಹಾಪುರುಷರ ಹೆಸರುಗಳನ್ನು ಬಳಸಿಕೊಂಡು ಬಿಸಾಡಿದಂತೆ ಅಂಬೇಡ್ಕರ್ ಹೆಸರನ್ನು ಉಪಯೋಗಿಸಿಕೊಂಡು ಬಿಸಾಡಲು ಆರೆಸ್ಸೆಸ್‌ಗೆ ಈವರೆಗೆ ಸಾಧ್ಯವಾಗಿಲ್ಲ. ಅಂತಲೇ ಅಂಬೇಡ್ಕರ್ ಅವರು ಬದುಕಿದ್ದಾಗ ಮತ್ತು ನಂತರ ಅವರ ಚಾರಿತ್ರ್ಯವಧೆ ಮಾಡಲು ಜಾತಿವಾದಿ ಶಕ್ತಿಗಳು ನಾನಾ ಮಸಲತ್ತು ನಡೆಸಿದವು. ಬಿಜೆಪಿಯು ಅರುಣ್ ಶೌರಿ ಮೂಲಕ ಪುಸ್ತಕವೊಂದನ್ನು ಬರೆಸಿ ಅಂಬೇಡ್ಕರ್ ಅವರ ತೇಜೋವಧೆ ಮಾಡಲು ಯತ್ನಿಸಿತು. ಆದರೆ ಅದಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾದಾಗ, ಹಿಂದೆ ಸರಿದು ಈಗ ಅಂಬೇಡ್ಕರ್ ಭಜನೆಯಲ್ಲಿ ತೊಡಗಿದೆ. ಬಸವಣ್ಣ, ಶಿವಾಜಿ ಮುಂತಾದ ಮಹಾಪುರುಷರನ್ನು ಬುಟ್ಟಿಗೆ ಹಾಕಿಕೊಂಡಂತೆ ಅಂಬೇಡ್ಕರ್ ಅವರನ್ನು ಬುಟ್ಟಿಗೆ ಹಾಕಿಕೊಳ್ಳಲು ಆಗಲಿಲ್ಲ. ಇದಕ್ಕೆ ಕಾರಣವೇನೆಂದರೆ, ಕಳೆದ ಒಂದು ಶತಮಾನದ ಕಾಲಾವಧಿಯಲ್ಲಿ ಬಾಬಾ ಸಾಹೇಬರ ಅನುಯಾಯಿಗಳು ತಮ್ಮ ಬದುಕಿಗೆ ಬೆಳಕನ್ನು ನೀಡಿದ ಆ ನಂದಾದೀಪ ನಂದಿ ಹೋಗದಂತೆ ನೋಡಿಕೊಂಡಿದ್ದಾರೆ. ಮನುವಾದದ ಕತ್ತಲು ತಮ್ಮ ಸುತ್ತಲೂ ಕವಿಯದಂತೆ ಎಚ್ಚರ ವಹಿಸಿದ್ದಾರೆ. ಅಂತಲೇ ಮನುವಾದಿ ಹಿಂದೂರಾಷ್ಟ್ರ ಕಟ್ಟುವ ಹಿಡನ್ ಅಜೆಂಡಾಗೆ ದಲಿತ ಸಮುದಾಯ ಪ್ರಮುಖ ಅಡ್ಡಿಯಾಗಿದೆ. ಆದರೆ ಬಸವಣ್ಣನವರ ಹೆಸರನ್ನು ಬಳಸಿಕೊಳ್ಳುವ ಸಮುದಾಯ ಮಾತ್ರ ಹಾಗಿಲ್ಲ. ಯಡಿಯೂರಪ್ಪ ಅವರನ್ನು ಬಿಜೆಪಿ ಮುಂದು ಮಾಡಿದರೆ, ಬಹುತೇಕ ಲಿಂಗಾಯತರು ಬಸವ ಪರಂಪರೆಯನ್ನು ಮರೆತು ಬಿಜೆಪಿಗೆ ಮತ ಹಾಕಿದರೆಂದೇ ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಜೆಪಿಯ ಭದ್ರ ಕೋಟೆಯಾಯಿತು. ಅಧಿಕಾರ ಸ್ವಾಧೀನಪಡಿಸಿಕೊಂಡ ನಂತರವೇ ಸಂಘ ಪರಿವಾರ ಕರ್ನಾಟಕದಲ್ಲಿ ತನ್ನ ಕಾರ್ಯಸೂಚಿ ಜಾರಿಗೆ ಮುಂದಾಯಿತು. ಅದಕ್ಕೆ ಯಡಿಯೂರಪ್ಪ ಅವರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಾಯ ಮಾಡಿದರು. ಬಸವಣ್ಣನವರ ವಚನಗಳನ್ನು ನಾವು ಕೆಲವರೇ ಹೇಳತೊಡಗಿದೆವು. ಉಳಿದಂತೆ, ಅನೇಕ ಯುವಕರು ನಮಸ್ತೆ ಸದಾ ವತ್ಸಲೇ ಮಂತ್ರ ಪಠಿಸತೊಡಗಿದರು. ಈ ದೌರ್ಬಲ್ಯದಿಂದಾಗಿಯೇ ಕಲ್ಬುರ್ಗಿಯವರಂತಹ ವಿದ್ವಾಂಸರ ಪ್ರಾಣ ತೆಗೆಯಲು ಫ್ಯಾಶಿಸ್ಟ್ ಶಕ್ತಿಗಳು ಹಿಂಜರಿಯಲಿಲ್ಲ. ಕಲ್ಬುರ್ಗಿ ಹತ್ಯೆ ವಿರುದ್ಧದ ಪ್ರತಿಭಟನೆಯಲ್ಲೂ ಕೂಡ ನಾವು ಎಡಪಂಥೀಯರು ಮತ್ತು ಪ್ರಗತಿಪರರು ಮಾತ್ರ ದನಿಯೆತ್ತಿದೆವು. ಆದರೆ ಉತ್ತರ ಕರ್ನಾಟಕದಲ್ಲಿ ಅಂತಹ ತೀವ್ರ ಪ್ರತಿರೋಧ ಬರಲಿಲ್ಲ. ಆ ರೀತಿ ಸಂಘ ಪರಿವಾರ ಜನರ ಅದರಲ್ಲೂ ಯುವಕರ ಬ್ರೈನ್ ವಾಶ್ ಮಾಡಿದೆ.
ಕರ್ನಾಟಕದಲ್ಲಿ ಬಸವಣ್ಣನವರ ಅನುಯಾಯಿಗಳನ್ನು ಮನುವಾದದ ಬುಟ್ಟಿಗೆ ಹಾಕಿಕೊಂಡಂತೆ ಕೇರಳದಲ್ಲಿ ನಾರಾಯಣಗುರುಗಳ ಅನುಯಾಯಿಗಳನ್ನು ಸೆಳೆದುಕೊಳ್ಳಲು ಸಂಘ ಪರಿವಾರಕ್ಕೆ ಸಾಧ್ಯವಾಗಲಿಲ್ಲ. ಕೇರಳದ ದಮನಿತ ಈಳವ ಸಮುದಾಯ ನಾರಾಯಣಗುರುಗಳ ಪರಂಪರೆಯ ಮುಂದುವರಿಕೆಯಾಗಿ ಕಮ್ಯುನಿಸ್ಟ್ ಚಳವಳಿಗೆ ಒತ್ತಾಸೆಯಾಗಿ ನಿಂತರು. ಅಲ್ಲಿ ಏನೆಲ್ಲ ಹತ್ಯಾ ರಾಜಕೀಯ ಮಾಡಿದರೂ ಆರೆಸ್ಸೆಸ್ ಪ್ರಭಾವಿ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗಿಲ್ಲ. ಆದರೆ ಉಳಿದ ರಾಜ್ಯಗಳ ಪರಿಸ್ಥಿತಿ ಹಾಗಿಲ್ಲ. ಸಾಮಾಜಿಕ ನ್ಯಾಯಕ್ಕಾಗಿ ದನಿಯೆತ್ತಿದ ದಲಿತ, ಹಿಂದುಳಿದ ವರ್ಗಗಳ ಕೊರಳನ್ನು ಹಿಸುಕಲು ಅದೇ ಸಮುದಾಯದ ತರುಣರನ್ನು ಸಿದ್ಧಪಡಿಸಿ ಅವರಿಗಾಗಿ ಬಜರಂಗ ದಳ ಎಂಬ ಸಂಘಟನೆಯನ್ನು ಕಟ್ಟಿ ಅದರ ಮೂಲಕ ದೇಶದಲ್ಲಿ ನಡೆಸಿರುವ ಕ್ರಿಮಿನಲ್ ರಾಜಕಾರಣ ಎಲ್ಲರಿಗೂ ಗೊತ್ತಿದೆ.
ಕರ್ನಾಟಕದ ಲಿಂಗಾಯತರಂತೆ ಮಹಾರಾಷ್ಟ್ರದ ಮರಾಠರು ಕೂಡ ಬ್ರಾಹ್ಮಣ ಶಾಹಿ ಪರಂಪರೆಗೆ ಸೇರಿದವರಲ್ಲ. ಆದರೆ ಈಗ ಅವರು ಕೂಡ ಮನುವಾದದ ಬಲೆಗೆ ಬಿದ್ದಿದ್ದಾರೆ. ಶಿವಾಜಿ ಮಹಾರಾಜರ ಹೆಸರನ್ನು ದುರ್ಬಳಕೆ ಮಾಡಿಕೊಂಡ ಕೋಮು ವಾದಿ ಶಕ್ತಿಗಳು ಮಹಾರಾಷ್ಟ್ರದಲ್ಲಿ ಫುಲೆ, ಅಂಬೇಡ್ಕರ್ ಮತ್ತು ಶಾಹು ಮಹಾರಾಜರು ಕಟ್ಟಿದ ಚಳವಳಿಯನ್ನು ನಾಶಪಡಿಸಲು ಮಸಲತ್ತು ನಡೆಸಿವೆ. ಮೂಢನಂಬಿಕೆ ವಿರೋಧಿ ಹೋರಾಟಗಾರ ನರೇಂದ್ರ ದಾಭೋಲ್ಕರ ಮತ್ತು ಎಡಪಂಥೀಯ ಹೋರಾಟಗಾರ ಗೋವಿಂದ ಪನ್ಸಾರೆಯವರನ್ನು ಹತ್ಯೆ ಮಾಡಿ, ದಕ್ಕಿಸಿಕೊಳ್ಳುವ ಮಟ್ಟಿಗೆ ನಿಂತಿವೆ. ಆದರೂ ಬಾಬಾ ಸಾಹೇಬರು ನೀಡಿದ ಬೆಳಕನ್ನು ಹಿಮ್ಮೆಟ್ಟಿಸಲು ಈ ಶಕ್ತಿಗಳಿಗೆ ಸಾಧ್ಯವಾಗಿಲ್ಲ. ಇತ್ತೀಚೆಗೆ ಪುಣೆಯಲ್ಲಿ ನಡೆದ ಸಾಹಿತ್ಯಗೋಷ್ಠಿಯಲ್ಲಿ ದಲಿತ ಲೇಖಕರಾದ ರಾವಸಾಹೇಬ್ ಕಸಬೆ ಮತ್ತು ಪವಾರ್ ಅವರನ್ನು ಈ ಫ್ಯಾಶಿಸ್ಟ್ ಶಕ್ತಿಗಳು ವೇದಿಕೆಯಿಂದ ಕೆಳಗಿಳಿಸಿ ಸಭೆಯಿಂದ ಹೊರಗಡೆ ಕಳುಹಿಸಿದವು.
ಸಂಘ ಪರಿವಾರಕ್ಕೂ ಶತಮಾನದ ಇತಿಹಾಸವಿದೆ. ಕಳೆದ ಶತಮಾನದ ಎರಡನೆ ದಶಕದಲ್ಲಿ ಜ್ಯೋತಿಬಾ ಫುಲೆ ಮತ್ತು ಶಾಹು ಮಹಾರಾಜರ ನೇತೃತ್ವದ ಶೂದ್ರಾತಿಶೂದ್ರರ ಆಂದೋಲನ ಹಿಮ್ಮೆಟ್ಟಿಸಲು ಜನ್ಮತಾಳಿದ ಈ ಸಂಘಟನೆ ತನ್ನ ಐಡೆಂಟಿಟಿಗಾಗಿ ಶಿವಾಜಿ ಮಹಾರಾಜರ ಹೆಸರನ್ನು ಬಳಿಸಿಕೊಳ್ಳುತ್ತಿದೆ. ಆದರೆ ಶಿವಾಜಿ ಬದುಕಿದ್ದಾಗ, ಆತ ಕ್ಷತ್ರಿಯನಲ್ಲ ಎಂಬ ಕಾರಣಕ್ಕೆ ಆತನ ಪಟ್ಟಾಭಿಷೇಕ ನೆರವೇರಿಸಲು ಪುರೋಹಿತಶಾಹಿ ಶಕ್ತಿಗಳು ನಿರಾಕರಿಸಿದವು. ಮನುಷ್ಯರನ್ನು ಜಾತಿಯಾಧಾರದಲ್ಲಿ ಕೀಳಾಗಿ ಕಾಣುವ ಈ ಪ್ರವೃತ್ತಿ ಹೊಸದಲ್ಲ. ಉಡುಪಿಯಲ್ಲಿ ದಲಿತ ಸಂಘಟನೆಗಳು ಜಾಥಾ ನಡೆಸಿದ ನಂತರ ಮಲಿನಗೊಂಡ ಉಡುಪಿಯ ಶುದ್ಧೀಕರಣಕ್ಕಾಗಿ ಸಂಘ ಪರಿವಾರ ಕಾರ್ಯಕ್ರಮವೊಂದನ್ನು ರೂಪಿಸಿದೆ. ಈ ಮಡಿವಂತಿಕೆ ಅದಕ್ಕೆ ಹೊಸದಲ್ಲ. ಉತ್ತರ ಪ್ರದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಪೂರ್ಣಾನಂದ ಅವರ ಪ್ರತಿಮೆಯನ್ನು ಬಾಬು ಜಗಜೀವನರಾಂ ಅವರು ಅನಾವರಣಗೊಳಿಸಿದಾಗ, ಇದೇ ಬ್ರಾಹ್ಮಣಶಾಹಿಗಳು ಅಪವಿತ್ರವಾಯಿತೆಂದು ನಂತರ ಪ್ರತಿಮೆಯನ್ನು ಗಂಗಾ ಜಲದಿಂದ ತೊಳೆದಿದ್ದರು. ಅದೇ ರೀತಿ ಅಯೋಧ್ಯೆಯ ಬಾಬರಿ ಮಸೀದಿಯನ್ನು ಕೋಮುವಾದಿಗಳು ನೆಲಸಮಗೊಳಿಸಿದಾಗ, ಕಮ್ಯುನಿಸ್ಟ್ ಸಂಸದರ ತಂಡ ಅಲ್ಲಿಗೆ ಭೇಟಿ ನೀಡಿತು. ಆಗಲೂ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಕಮ್ಯುನಿಸ್ಟರಿಂದ ಅಪವಿತ್ರಗೊಂಡ ಪ್ರದೇಶವನ್ನು ಗಂಗಾಜಲದಿಂದ ಶುದ್ಧೀಕರಣಗೊಳಿಸಿದ್ದರು. ಈಗ ತಮ್ಮ ಮಠಕ್ಕೆ ಮುತ್ತಿಗೆ ಹಾಕುವ ಹುನ್ನಾರ ನಡೆದಿದೆ ಎಂದು ಪೇಜಾವರರು ರಾದ್ಧಾಂತ ನಡೆಸಿದ್ದಾರೆ. ಬ್ರಾಹ್ಮಣರು ಮತ್ತು ದಲಿತರು ಒಂದಾಗುವುದನ್ನು ಪ್ರಗತಿಪರರು ತಡೆಯುತ್ತಿದಾರೆ ಎಂದು ಪೇಜಾವರರಿಗೆ ಅಸಮಾಧಾನವಾಗಿದೆ. ಆದರೆ ಇಡೀ ಭಾರತೀಯರು ಒಂದಾಗು ವುದನ್ನು ವಿಶ್ವ ಹಿಂದೂ ಪರಿಷತ್ತು ತಡೆಯುತ್ತಿದೆ. ಹಿಂದೂ, ಮುಸ್ಲಿಮರಲ್ಲೇ ಕಲಹದ ಕಿಡಿ ಹೊತ್ತಿಸಿದೆ. ಈ ವಿಶ್ವ ಹಿಂದೂ ಪರಿಷತ್ತಿಗೆ ಪೇಜಾವರರೇ ಮಾರ್ಗದರ್ಶಕರು. ಇದೆಲ್ಲ ಸಾಧ್ಯವಾಗಿದ್ದು ಕರ್ನಾಟಕದಲ್ಲಿ ಬಿಜೆಪಿ ರಾಜಕೀಯ ಪ್ರಬಲ ಶಕ್ತಿಯಾಗಿ ಬೆಳೆದು ಬಂದ ನಂತರ. ಹಾಗೆ ಅದು ಬೆಳೆಯಲು ಬಸವಧರ್ಮೀಯರು ಮಾತ್ರವಲ್ಲ ದಲಿತೇತರ ಶೂದ್ರ ಸಮುದಾಯವು ಕಾರಣವಾಗಿದೆ. ಈ ಸತ್ಯವನ್ನು ಮನಗಾಣದೇ ಅಡ್ಡಹಾದಿ ಹಿಡಿದ ಶೂದ್ರ ಸಮುದಾಯವನ್ನು ಸರಿ ದಾರಿಗೆ ತರದೇ ಮನುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಸಾಧ್ಯವಾಗುವುದಿಲ್ಲ. ದನದ ರಕ್ಷಣೆ ಹೆಸರಿನಲ್ಲಿ ದೇಶದಲ್ಲಿ ಸೃಷ್ಟಿಯಾದ ಸಮೂಹಸನ್ನಿ ಈಗ ಕರ್ನಾಟಕಕ್ಕೂ ಬಂದಿದೆ. ಈ ಹಿಂದೆಲ್ಲ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ದಾಳಿಗಳು ಈಗ ದಲಿತ ಸಮುದಾಯದತ್ತ ಹೊರಳಿದೆ. ದನದ ಹೆಸರಿನಲ್ಲಿ ಕೊಲೆ ಮಾಡುವ ಮಟ್ಟಕ್ಕೂ ಪರಿಸ್ಥಿತಿ ಉಲ್ಬಣಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನ ಹತ್ಯೆಯೇ ನಡೆಯಿತು. ಆದರೂ ಈ ಹತ್ಯೆ ವಿರುದ್ಧ ಶೂದ್ರ ಸಮುದಾಯದಿಂದ ಬರಬೇಕಾದಷ್ಟು ಪ್ರತಿರೋಧ ಬರಲಿಲ್ಲ. ತಮ್ಮ ಯಜಮಾನಿಕೆಯನ್ನು ಪ್ರಶ್ನಿಸಿ ಹಿಮ್ಮೆಟ್ಟಿಸಿದ ಪುರೋಗಾಮಿ ಶಕ್ತಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟ ಮನುವಾದಿ ಶಕ್ತಿಗಳು ಈಗ ಹಿಂದೂತ್ವದ ವೇಷ ಹಾಕಿಕೊಂಡಿವೆ. ಹಿಂದೂರಾಷ್ಟ್ರ ನಿರ್ಮಾಣಕ್ಕೆ ಅಡ್ಡಿಯಾಗಿರುವ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಆಕ್ರಮಣಕ್ಕೆ ಮುಂದಾಗಿವೆ. ಅಸ್ಪಶ್ಯ ದಲಿತ ಸಮುದಾಯದ ಮೇಲೆ ಈಗ ಬ್ರಾಹ್ಮಣ ಪುರೋಹಿತಶಾಹಿಗಳಿಂದ ಮಾತ್ರವೇ ದಾಳಿ ನಡೆದಿಲ್ಲ. ಬ್ರಾಹ್ಮಣೇತರ ಶೂದ್ರ ಸಮುದಾಯಗಳು ಈಗ ದಲಿತರನ್ನು ಗುರಿಯಾಗಿಸಿಕೊಂಡು ದಾಳಿಗೆ ಮಸಲತ್ತು ನಡೆಸಿವೆ. ದಲಿತರಿಗೆ ನೀಡಿರುವ ಮೀಸಲಾತಿ ವಿರುದ್ಧ ಗುಜರಾತಿನ ಪಟೇಲರು, ಮಹಾರಾಷ್ಟ್ರದ ಮರಾಠರು, ಹರ್ಯಾಣದ ಜಾಟರು, ರಾಜಸ್ಥಾನದ ರಜಪೂತರು ಈಗಾಗಲೇ ದನಿಯೆತ್ತಿ ತಮಗೂ ಮೀಸಲಾತಿ ಬೇಕೆಂದು ಹೋರಾಟಕ್ಕೆ ಇಳಿದಿದ್ದಾರೆ. ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯವು ದಲಿತರ ರಕ್ಷಣೆಗೆ ಇರುವ ದೌರ್ಜನ್ಯ ತಡೆ ಕಾಯ್ದೆ ರದ್ದುಪಡಿಸುವಂತೆ ಒತ್ತಾಯಿಸಿ ಬೀದಿಗಿಳಿದಿವೆ. ಕರ್ನಾಟಕದಲ್ಲಿ ಇನ್ನೂ ಅಂತಹ ಸ್ಥಿತಿ ನಿರ್ಮಾಣವಾಗಿಲ್ಲ. ಆದರೆ ಹಿಂದೆ ಹಾವನೂರು ಆಯೋಗದ ವಿರುದ್ಧ ಬಸವಣ್ಣನ ಅನುಯಾಯಿಗಳೆಂದು ಹೇಳುವವರೇ ಬೀದಿಗೆ ಇಳಿದಿದ್ದರು ಎಂಬುದನ್ನು ಮರೆಯಲು ಆಗುವುದಿಲ್ಲ. ದಲಿತರನ್ನು ಒಂಟಿಯಾಗಿ ಮಾಡಿ, ಹಿಂದುತ್ವದ ವಿಷವರ್ತುಲದೊಳಗೆ ಸೇರಿಸಿಕೊಳ್ಳುವ ಹುನ್ನಾರ ನಡೆದಿದೆ. ಇನ್ನೊಂದೆಡೆ ಅಲ್ಪಸಂಖ್ಯಾತ ಮುಸ್ಲಿಮರನ್ನು ಒಂಟಿಯಾಗಿ ಮಾಡಿ, ಅವರ ಬದುಕಿನ ತಳಹದಿಯನ್ನೇ ನಾಶಪಡಿಸುವ ಹುನ್ನಾರ ನಡೆದಿದೆ. ಇದನ್ನು ತಡೆಯಬೇಕೆಂದರೆ, ಉಳಿದ ಪ್ರಗತಿಪರ ಸಂಘಟನೆಗಳ ಜೊತೆಗೆ ಸಮಾನ ಮನಸ್ಕ ಶಕ್ತಿಗಳ ಜೊತೆ ಸೇರಿ ಸಂಘಟನೆಗಳು ಹೋರಾಟ ರೂಪಿಸಿಕೊಳ್ಳಬೇಕಿದೆ. ಸಂಘ ಪರಿವಾರದ ಫ್ಯಾಶಿಸ್ಟ್ ಹುನ್ನಾರಗಳ ವಿರುದ್ಧ ರಾಜಿ ರಹಿತ ಹೋರಾಟ ಮಾಡಿಕೊಂಡು ಬಂದ, ಅನೇಕ ಬಾರಿ ಪ್ರಾಣತ್ಯಾಗ ಮಾಡಿದ ಕಮ್ಯುನಿಸ್ಟರೇ ದಲಿತ ಸಂಘಟನೆಗಳ ನೈಜ ಮಿತ್ರರಾಗಿದ್ದಾರೆ. ಇವೆರಡೂ ಶಕ್ತಿಗಳ ನಡುವೆ ಒಡಕು ಹುಟ್ಟಲು ಅವಕಾಶ ನೀಡಬಾರದು. ನಮ್ಮ ಶಕ್ತಿ ದುರ್ಬಲವಾದರೆ ಮನುವಾದಿಗಳು ಗೆಲುವಿನ ಬಾವುಟ ಹಾರಿಸುತ್ತಾರೆ. ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿ, ಮನುವಾದಿ ಹಿಂದೂ ರಾಷ್ಟ್ರ ನಿರ್ಮಿಸಲು ಹೊರಟಿರುವ ಫ್ಯಾಶಿಸ್ಟ್ ಶಕ್ತಿಗಳನ್ನು ನಾವು ಬರೀ ಬಸವಣ್ಣ, ಗಾಂಧೀಜಿ, ಬುದ್ಧನ ಉಪದೇಶಗಳನ್ನು ಹೇಳಿ ತಡೆಯಲು ಸಾಧ್ಯವಾಗುವುದಿಲ್ಲ. ಹಿಂದುತ್ವದ ವಿರುದ್ಧ ನಿರಂತರವಾಗಿ ಹೋರಾಡುತ್ತ ಬಂದ ಶಕ್ತಿಗಳೆಲ್ಲ ಒಂದೆಡೆ ಸೇರಬೇಕಿದೆ. ಅಂಬೇಡ್ಕರ್ ಅನುಯಾಯಿಗಳು ಮತ್ತು ಎಡಪಂಥೀಯರು ಎಷ್ಟೇ ಲೋಪಗಳಿದ್ದರೂ ಈ ದೇಶದಲ್ಲಿ ಇಂತಹ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದಾರೆ. ದಲಿತ ಮತ್ತು ಕಮ್ಯುನಿಸ್ಟ್ ಶಕ್ತಿಗಳಿಗೆ ತಮ್ಮ ಇತಿಮಿತಿಗಳ ಅರಿವಾಗಿದೆ. ಕಮ್ಯುನಿಸ್ಟರು ತುಂಬಾ ನಂಬಿಕೊಂಡಿದ್ದ ಕಾರ್ಮಿಕ ವರ್ಗ ಜಾತಿ, ಧರ್ಮದ ಹೆಸರಿನಲ್ಲಿ ವಿಭಜನೆಗೊಂಡಿವೆ. ದಲಿತ ಚಳವಳಿಯೂ ಹೋಳಾಗಿದೆ. ಅಲ್ಲೂ ರಾಮವಿಲಾಸ ಪಾಸ್ವಾನ್, ಉದಿತ ರಾಜ್ ಮತ್ತು ಶಿವರಾಮರಂತಹ ಅವಕಾಶವಾದಿಗಳು ಹುಟ್ಟಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ದೇಶದ ಜಾತ್ಯತೀತ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದ ಸಿದ್ಧಾಂತ ಉಳಿಸಿಕೊಳ್ಳಲು ದಲಿತ ಮತ್ತು ಎಡಪಂಥೀಯ ಚಳವಳಿಗಳು ಸೇರಿದಂತೆ ಸಮಾನ ಮನಸ್ಕ ಶಕ್ತಿಗಳು ಜೊತೆಗೂಡುವುದು ಚಾರಿತ್ರಿಕ ಅನಿವಾರ್ಯತೆ ಆಗಿದೆ. ಇದೇ ಮಾತನ್ನು ಜಿಗ್ನೇಶ್ ಮೇವಾನಿ ಹೇಳಿದ್ದಾರೆ.