ದಲಿತ, ದಮನಿತರ ‘ಚಲೋ ಉಡುಪಿ’ ಮತ್ತು ವೈದಿಕಶಾಹಿಯ ಪ್ರತಿಕ್ರಿಯೆ
ಭಾಗ-2
ಊರೆಲ್ಲ ಸ್ವಚ್ಛಗೊಳಿಸಬೇಕು ನಿಜ, ಆದರೆ ಮೊದಲು ತನ್ನದೆ ಮನೆಯಂಗಳವನ್ನು ಸ್ವಚ್ಛಗೊಳಿಸುವುದು ವಿಹಿತವಲ್ಲವೇ? ಹಾಗೆ ನೋಡಿದರೆ ಅಸಮಾನತೆಯನ್ನು ಪೋಷಿಸುವಂಥಾ ಪಂಕ್ತಿಭೇದ ಆಚರಣೆಯನ್ನು ನಿಲ್ಲಿಸುವುದು ಭಾರತದ ಪ್ರಜೆಯಾಗಿರುವ ಪೇಜಾವರರ ಸಾಂವಿಧಾನಿಕ ಕರ್ತವ್ಯ (ವಿಧಿ 51A {e}) ಅಲ್ಲವೇ? ಇದರ ಮೊದಲ ಹೆಜ್ಜೆಯಾಗಿ ಇಂದಿಗೂ ಅಸ್ಪಶ್ಯತೆಯ ಸಂಕೇತವಾಗಿರುವ ಕನಕನ ಕಿಂಡಿಯನ್ನು ಮುಚ್ಚಿಸಿ ಅವನ ಮೂರ್ತಿಯನ್ನು ಗರ್ಭಗುಡಿಯೊಳಗೆ ಕೃಷ್ಣನ ಮೂರ್ತಿ ಪಕ್ಕದಲ್ಲಿ ಪ್ರತಿಷ್ಠಾಪಿಸಲು ಸಿದ್ಧರಿದ್ದಾರೆಯೆ ಎಂದು ಕೇಳಬೇಕಾಗುತ್ತದೆ. ವಾಸ್ತವದಲ್ಲಿ ಜಾತಿವ್ಯವಸ್ಥೆ/ ಅಸ್ಪಶ್ಯತೆ/ ಬ್ರಾಹ್ಮಣಶ್ರೇಷ್ಠತೆಯನ್ನು ಎತ್ತಿಹಿಡಿಯುವವರಾದ ಪೇಜಾವರರ ಪ್ರಕಾರ ಅಸ್ಪಶ್ಯತೆಯನ್ನು ಬ್ರಾಹ್ಮಣರು ಹುಟ್ಟುಹಾಕಿಲ್ಲವಂತೆ. ಮೇ 2013ರಲ್ಲಿ ಮಂಗಳೂರಿನಲ್ಲಿ ನಡೆದ ವಿಪ್ರ ಜಾಗೃತಿ ಸಮ್ಮೇಳನದಲ್ಲಿ ಮಾತನಾಡಿದ್ದ ಅವರು ‘‘ಅಸ್ಪಶ್ಯತೆ ಬ್ರಾಹ್ಮಣರಿಗಿಂತಲೂ ಮೊದಲೇ ಸಮಾಜದಲ್ಲಿ ರೂಢಿಯಲ್ಲಿತ್ತು’’ ಎಂದಿದ್ದರು. ಆದರೆ ಸನ್ಮಾನ್ಯರು ಇದಕ್ಕೆ ಯಾವುದೇ ಸಾಕ್ಷ್ಯಾಧಾರಗಳನ್ನು ನೀಡಿಲ್ಲ. ಭಾರತದಲ್ಲಿ ಬ್ರಾಹ್ಮಣರಿಗಿಂತ ಮೊದಲೇ ಇದ್ದ ಜನವರ್ಗ ಯಾವುದೆಂದು ತಿಳಿಸಿಲ್ಲ. ಅವರಿದ್ದುದು ಯಾವ ಕಾಲಘಟ್ಟದಲ್ಲಿ, ಅವರು ಇಲ್ಲಿನವರೆ ಅಥವಾ ಹೊರಗಿನಿಂದ ಬಂದವರೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆ ಜನರಲ್ಲಿ ಅಸ್ಪಶ್ಯತೆ ಎಲ್ಲಿ, ಎಂತು, ಏಕೆ, ಎಂದಿನಿಂದ ಆರಂಭವಾಯಿತು, ಬ್ರಾಹ್ಮಣ ಮತ್ತಿತರ ಜಾತಿಗಳು ಯಾವ ಕಾಲಘಟ್ಟದಲ್ಲಿ ಸೃಷ್ಟಿಯಾದವೆಂದೂ ಹೇಳಲಿಲ್ಲ.
ಖ್ಯಾತ ವಿದ್ವಾಂಸರ ಅಭಿಮತದಲ್ಲಿ ವೇದ, ಪುರಾಣಗಳಲ್ಲೆಲ್ಲೂ ಅಸ್ಪಶ್ಯತೆಯ ವಿಚಾರ ಉಲ್ಲೇಖವಾಗಿಲ್ಲ. ಬದಲು ಜಾತಿಪದ್ಧತಿ ಮತ್ತು ಅಸ್ಪಶ್ಯತೆ ರಾಜಾಡಳಿತದೊಂದಿಗೆ ಹುಟ್ಟಿಕೊಂಡಿದೆ ಎಂಬ ಪ್ರತಿಪಾದನೆ ಇದೆ. ಇದಕ್ಕೆ ಆಧಾರವಾಗಿರುವುದು ಬ್ರಾಹ್ಮಣಶ್ರೇಷ್ಠತೆಯನ್ನು ಎತ್ತಿಹಿಡಿಯುವ ಮನುಸ್ಮತಿ. ಮನುಸ್ಮತಿಯ ಅಧ್ಯಾಯ 10:31, 32, 54 ಮತ್ತು 56ರನ್ನು ಓದಿದರೆ ಅಂದು ಚಂಡಾಲರು (ಶೂದ್ರ ಪುರುಷ ಮತ್ತು ಬ್ರಾಹ್ಮಣ ಸ್ತ್ರೀಗೆ ಜನಿಸಿದವರು) ಮತ್ತು ಕೊಳಕು ಜನರಿಗೆ ಯಾವೆಲ್ಲ ಕಟ್ಟುಪಾಡುಗಳನ್ನು ವಿಧಿಸಲಾಗುತ್ತಿತ್ತೆಂದು ತಿಳಿಯಬಹುದು. ಪ್ರತ್ಯೇಕ ಗುರುತುಗಳು, ಊರ ಹೊರಗೆ ವಾಸ, ಹಗಲು ಮಾತ್ರ ಊರೊಳಗೆ ಪ್ರವೇಶ, ಒಳ್ಳೆ ಪಾತ್ರೆಗಳಲ್ಲಿ ಅಡುಗೆ ನಿಷಿದ್ಧ, ಒಡೆದ ಮಣ್ಣಿನ ಪಾತ್ರೆಗಳಲ್ಲಿ ಊಟ, ನಾಯಿ ಕತ್ತೆಗಳನ್ನೆ ಸಾಕಬೇಕು, ಅನಾಥ ಶವಗಳನ್ನು ಹೊರಬೇಕು....ಇತ್ಯಾದಿ.
ದಲಿತ ಕೇರಿಗಳಿಗೆ ಭೇಟಿ
ಪೇಜಾವರರು ದಲಿತ ಕೇರಿಗಳಲ್ಲಿ ಸಂಚರಿಸಿರುವುದನ್ನು ದಲಿತೋದ್ಧಾರದ ದಿಕ್ಕಿನಲ್ಲಿ ಒಂದು ಪ್ರಮುಖ ಹಾಗೂ ಕ್ರಾಂತಿಕಾರಿ ಹೆಜ್ಜೆಯೆಂದು ಕೊಂಡಾಡಲಾಗುತ್ತಿದೆ. ಆದರೆ ಅಂತಹ ಸಂದರ್ಭಗಳಲ್ಲಿ ದಲಿತರು ಅನ್ಯ ಧರ್ಮಗಳಿಗೆ ಮತಾಂತರಗೊಳ್ಳುವುದು ಪಾಪಕೃತ್ಯ; ಹಿರಿಯರು ಶಪಿಸುವರೆನ್ನುತ್ತಾ ಅವರಿಗೆ ವೈಷ್ಣವದೀಕ್ಷೆ ನೀಡಿ ಭಗವದ್ಗೀತೆಯ ಪ್ರತಿಗಳನ್ನು ಹಂಚುವುದು ಮತಾಂತರ ಅಲ್ಲವೆ ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕು. ಪ್ರಾಯಶಃ ಹೀಗೆ ಇದ್ದಕ್ಕಿದ್ದಂತೆ ದಲಿತರ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿರುವುದರ ಮೂಲವನ್ನು ಮನುವಾದಿಯೂ, ಹಿಂದೂತ್ವ ಸಿದ್ಧಾಂತದ ಜನಕನೂ ಆದ ವಿನಾಯಕ ದಾಮೋದರ ಸಾವರ್ಕರ್ರ ನಡೆನುಡಿಗಳಲ್ಲಿ ಗುರುತಿಸಬಹುದು. ಪೇಜಾವರರು ಸಾವರ್ಕರ್ರನ್ನು ಚಾಚೂತಪ್ಪದೆ ಅನುಸರಿಸುವಂತಹ, ಮನುಸ್ಮತಿಯನ್ನು ಜಾರಿಗೊಳಿಸಲು ಬಯಸುವಂಥಾ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಅಂಗಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್ತಿನ ಹಿರಿಯ ಪದಾಧಿಕಾರಿ ಎಂಬುದನ್ನು ಮರೆಯಬಾರದು. ಸಾವರ್ಕರ್ರ ಮಾತು ಹಾಗೂ ಕೃತಿ ಮತ್ತು ‘‘ನಾವು ಹಿಂದೂ ನಾವೆಲ್ಲ ಒಂದು’’ ಎಂಬ ಘೋಷಣೆಗಳೇ ಪೇಜಾವರರ ಪಾದಯಾತ್ರೆಗಳಿಗೆ ಸ್ಫೂರ್ತಿಯಾಗಿರುವಂತಿದೆ. ದಲಿತರನ್ನು ಹಿಂದೂ ಧರ್ಮದೊಳಗೆ ಬಂಧಿಸಿಡುವುದೇ ಸಾವರ್ಕರ್ ಉದ್ದೇಶವಾಗಿತ್ತು. ಅದಕ್ಕೆ ಸಮರ್ಥನೆಯಾಗಿ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳಲ್ಲಿ ಹೆಚ್ಚಿನ ಸಾಮಾಜಿಕ ಸಮಾನತೆ ದೊರಕುವ ಭರವಸೆ ಇರುವುದರಿಂದ ಅಸ್ಪಶ್ಯರು ಏಕಪ್ರಕಾರವಾಗಿ ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದುತ್ತಿದ್ದಾರೆ. ಮತಾಂತರದ ಪರಿಣಾಮವಾಗಿ ಹಿಂದೂಗಳ ಜನಸಂಖ್ಯೆ ಕ್ಷೀಣಿಸುತ್ತಿದೆ ಎಂದಾತ ಹುಯಿಲೆಬ್ಬಿಸಿದ್ದರು. ಸಾವರ್ಕರರ ಈ ಹುಯಿಲನ್ನು ಹಿಂದೂತ್ವವಾದಿಗಳು ಇಂದಿಗೂ ಪುನರುಚ್ಚರಿಸುತ್ತಲೆ ಇರುವುದನ್ನು ಗಮನಿಸಬಹುದು. ಮುಂದುವರಿದು ಆತ, ಅಸ್ಪಶ್ಯರನ್ನು ಹಿಂದೂ ಧರ್ಮದ ತೆಕ್ಕೆಯೊಳಗೆ ಇರಿಸಿಕೊಳ್ಳದಿದ್ದಲ್ಲಿ ಮೇಲ್ಜಾತಿ ಹಿಂದೂಗಳಿಗೆ ಇನ್ನಷ್ಟು ದುರಂತ ಕಾದಿದೆಯಲ್ಲದೆ ಅವರಿಂದ ನಮಗೆ ಸಿಗುವ ಪ್ರಯೋಜನಗಳು ಇಲ್ಲವಾಗಲಿವೆ ಎಂದಿದ್ದರು. ಜಾತಿ ವ್ಯವಸ್ಥೆಯನ್ನು ನೈಸರ್ಗಿಕ ನಿಯಮ ಎಂದು ಕರೆದಿದ್ದ ಸಾವರ್ಕರ್ ಮನುಸ್ಮತಿಯೇ ಹಿಂದೂಗಳ ಮೂಲ ಕಾನೂನು. ಅದನ್ನು ಅಳವಡಿಸಿದರೆ ಹಿಂದೂ ರಾಷ್ಟ್ರವು ಅಜೇಯವಾಗುವುದು ಮತ್ತು ವಿಜಯಿಯಾಗಲು ಶಕ್ತವಾಗುವುದು ಎಂದು 1940ರಲ್ಲಿ ಹಿಂದೂ ಮಹಾಸಭಾದ ಮಧುರೆಯ ಅಧಿವೇಶನದ ವೇಳೆ ಹೇಳಿದ್ದರು. ಹಿಂದೂತ್ವದ ಅಲ್ಪಸಂಖ್ಯಾತ ವಿರೋಧಿ ಕಾರ್ಯಾಚರಣೆಗಳಿಗೆ ದಲಿತರ ಕಾಲಾಳುಪಡೆಯ ಭಾರೀ ಆವಶ್ಯಕತೆಯಿದೆ ಎಂಬುದನ್ನು ಮನಗಂಡಿದ್ದ ಸಾವರ್ಕರ್ ಆ ನಿಟ್ಟಿನಲ್ಲಿ ಕೆಲವೊಂದು ತಂತ್ರಗಳನ್ನು ಅಳವಡಿಸಿಕೊಂಡಿದ್ದರು. ಆತ ಹಿಂದೂಗಳು ಅಸ್ಪಶ್ಯರನ್ನು ಸಾಮಾಜಿಕವಾಗಿ ಮೇಲಕ್ಕೆತ್ತಬೇಕೆಂದು ಹೇಳುತ್ತಿದ್ದುದು, ಅಸ್ಪಶ್ಯತೆಯ ವಿರುದ್ಧ ಕಾರ್ಯಕ್ರಮ ಏರ್ಪಡಿಸಿದ್ದು, ಕೆಲವೊಮ್ಮೆ ಅವರಿಗೆ ದೇವಸ್ಥಾನಗಳೊಳಗೆ ಮುಕ್ತ ಪ್ರವೇಶ ದೊರೆಯಬೇಕೆಂದು ಹೇಳಿದ್ದು, ಮೇಲ್ಜಾತಿ ಜನ ತಮ್ಮ ಕೆರೆ ಬಾವಿಗಳ ನೀರನ್ನು ಅವರೊಂದಿಗೆ ಹಂಚಿಕೊಳ್ಳುವಂತೆ ಕರೆ ನೀಡಿದ್ದು ಮುಂತಾದುವೆಲ್ಲ ಯಾವುದೇ ಸಮಾನತಾ ಭಾವನೆಯಿಂದ ಮಾಡಿರುವುದಲ್ಲ. ಇದರ ಹಿಂದೆ, ಮೇಲ್ಜಾತಿ ಯುವಕರಿರುವುದು ದಲಿತ, ದಮನಿತರ ಮೇಲೆ ಅಧಿಕಾರ ಚಲಾಯಿಸಲೇ ಹೊರತು ಕಾಲಾಳು ಪಡೆ ಆಗಲಲ್ಲ, ಅದಕ್ಕೆ ದಲಿತ, ಹಿಂದುಳಿದ ಯುವಕರೇ ಆಗಬೇಕು ಎಂಬ ನಿರ್ದಿಷ್ಟ ಲೆಕ್ಕಾಚಾರ ಇದೆ (ಸಾವರ್ಕರ್ - ಸತ್ಯ ಮತ್ತು ಮಿಥ್ಯ, ಶಂಸುಲ್ ಇಸ್ಲಾಂ). ಭಾರತದಲ್ಲಿ ಹಿಂದೂ ರಾಷ್ಟ್ರವನ್ನು ಬಲಾತ್ಕಾರದಿಂದ ಸ್ಥಾಪಿಸಲು ಹೊರಟಿರುವ ಆರೆಸ್ಸೆಸ್ ಗೋಹತ್ಯೆ, ಮತಾಂತರ, ಲವ್ ಜಿಹಾದ್ ಇತ್ಯಾದಿಗಳ ಹೆಸರಿನಲ್ಲಿ ಬೀದಿಬೀದಿಗಳಲ್ಲಿ ಹಿಂಸಾಕೃತ್ಯ ನಡೆಸಲು, ಕೋಮು ಗಲಭೆಗಳಲ್ಲಿ ಭಾಗವಹಿಸಲು ದಲಿತರು, ಹಿಂದುಳಿದವರನ್ನೆ ಬಳಸುತ್ತಿರುವುದು ಇದೇ ಕಾರಣಕ್ಕೆ! ದುರಂತ ಏನೆಂದರೆ ‘ನಾವು ಹಿಂದೂ ನಾವೆಲ್ಲ ಒಂದು’ ಎನ್ನುವವರ ಬಲೆಗೆ ಬೀಳುವ ದಲಿತರಿಗೆ ಮಾತ್ರ ತಾವು ಎಂದೆಂದಿಗೂ ದಲಿತರಾಗಿಯೆ ಉಳಿಯುವೆವು, ಎರಡನೆ, ಮೂರನೆ ದರ್ಜೆಯ ನಿಕೃಷ್ಟ ಬದುಕು ತಮ್ಮದಾಗಲಿದೆ ಎಂಬ ಕಟುಸತ್ಯದ ಅರಿವು ಇರುವಂತಿಲ್ಲ. ಅವಿಭಜಿತ ದ.ಕ.ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ವಿರುದ್ಧ ಭಾರೀ ಅಟ್ಟಹಾಸ ತೋರಿಸುತ್ತಿರುವ ಹಿಂದೂತ್ವವಾದಿ ಹಂತಕ ಪಡೆಗಳ ಸದಸ್ಯರಲ್ಲಿ ಹೆಚ್ಚಿನವರು ದಲಿತ, ಹಿಂದುಳಿದ ಯುವಕರೆಂಬುದು ಗಮನಾರ್ಹ. ಮುಸಲ್ಮಾನ ಜಾನುವಾರು ಸಾಗಾಟಗಾರರನ್ನು ನಾಯಿಗೆ ಬಡಿದಂತೆ ಬಡಿದು, ಅವರ ಸೊತ್ತುಗಳನ್ನು ಕದ್ದು, ಕೆಲವರನ್ನು ಊನಾಂಗರನ್ನಾಗಿಸುವ, ಕೆಲವೊಮ್ಮೆ ಕೊಂದು ಹಾಕುವ ಘಟನೆಗಳು; (ಅ)ನೈತಿಕ ಪೊಲೀಸ್ಗಿರಿ; ಲವ್ ಜಿಹಾದ್, ಮತಾಂತರ ಎಂದು ಗುಲ್ಲೆಬ್ಬಿಸಿ ಹಲ್ಲೆ ನಡೆಸುವುದು ಮುಂತಾದ ಕೋಮುವಾರು ಕುಕೃತ್ಯಗಳು ಇಲ್ಲಿ ಅನಿರ್ಬಂಧಿತವಾಗಿ ನಡೆಯುತ್ತಲೆ ಇವೆ. ಉದಾಹರಣೆಗೆ ಜಾನುವಾರು ಸಾಗಾಟಕ್ಕೆ ಸಂಬಂಧಪಟ್ಟಂತೆ ಕಳೆದ ಮೂರು ವರ್ಷಗಳ ಅಂಕಿಅಂಶಗಳನ್ನು ನೋಡಬಹುದು.
ಇತ್ತೀಚೆಗೆ ಇವರ ಕೈಯಲ್ಲಿ ಹತನಾದ ಪ್ರವೀಣ್ ಪೂಜಾರಿ ಹಿಂದುಳಿದ ಬಿಲ್ಲವ ಜನಾಂಗದವರಾಗಿದ್ದರು. ಬಿಜೆಪಿ ಕಾರ್ಯಕರ್ತನಾಗಿದ್ದ ಪ್ರವೀಣ್ರ ಹತ್ಯೆಯನ್ನು ಖಂಡಿಸಿರುವೆನೆಂದು ಹೇಳಿರುವ ಪೇಜಾವರರು ಆರೆಸ್ಸೆಸ್ನ ಹಿಂದೂತ್ವವಾದಿ ಸಂಘಟನೆೆಗಳು ಕಳೆದ ಹತ್ತಾರು ವರ್ಷಗಳಿಂದ ಅಲ್ಪಸಂಖ್ಯಾತರ ವಿರುದ್ಧ ನಡೆಸುತ್ತಿರುವ ದುಷ್ಕೃತ್ಯಗಳನ್ನು, ದಲಿತರ ಮೇಲಿನ ದಬ್ಬಾಳಿಕೆಗಳನ್ನು ನಿಲ್ಲಿಸಲು ಏನು ಪ್ರಯತ್ನ ಮಾಡಿದ್ದಾರೆಂದು ತಿಳಿಸಿದರೆ ಒಳ್ಳೆಯದಿತ್ತು.
ಮದ್ರಾಸ್ ಐಐಟಿಯಿಂದ ಪ್ರಾರಂಭವಾಗಿ ರೋಹಿತ್ ವೇಮುಲಾ ಆತ್ಮಹತ್ಯೆಯಿಂದ ಬಿರುಸುಗೊಂಡು ‘ಉನಾ ಚಲೊ’, ‘ಚಲೊ ಉಡುಪಿ’ಗಳಿಂದ ಚುರುಕು ಪಡೆದುಕೊಂಡಿರುವ ದಲಿತ, ದಮನಿತರ ಸ್ವಾಭಿಮಾನಿ ಸಂಘರ್ಷ ಇನ್ನೂ ತೀವ್ರಗೊಂಡು ದೇಶದಾದ್ಯಂತ ಅಸಂಖ್ಯಾತ ಚಳವಳಿಗಳು ಹುಟ್ಟಿಕೊಳ್ಳಲು ಸಾಧ್ಯವಾಯಿತೆಂದಾದರೆ ಭಾರತೀಯ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಯೊಂದನ್ನು ನಿರೀಕ್ಷಿಸಬಹುದು ಅನಿಸುತ್ತದೆ.