ಕರ್ನಾಟಕಕ್ಕೆ ಅರುವತ್ತು ಇದು ಆಪತ್ತು ತಡೆಯುವ ಹೊತ್ತು
ಕರ್ನಾಟಕ ಉದಯವಾಗಿ ನವೆಂಬರ್ 1ಕ್ಕೆ ಅರುವತ್ತು ತುಂಬುತ್ತದೆ. ಈ ಮೈಲುಗಲ್ಲನ್ನು ರಾಜ್ಯ ಅದ್ದೂರಿಯಾಗಿ ಆಚರಿಸುತ್ತಿದ್ದರೂ, ಇದು ರಾಜ್ಯದ ಪ್ರಗತಿ, ಸಾಮಾಜಿಕ ಒಗ್ಗಟ್ಟು, ರಾಜಕೀಯ ಸ್ವರೂಪ, ಬಲಾಬಲ ಹಾಗೂ ಸಮಗ್ರ ಆರ್ಥಿಕತೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಸಕಾಲ.
ಹಿಂದಿನ ಮೈಸೂರು ರಾಜ್ಯದ ಶ್ರೀಮಂತ ಸಂಪ್ರದಾಯವನ್ನು ಮೈಗೂಡಿಸಿಕೊಂಡಿರುವ ಕರ್ನಾಟಕ ದೇಶದಲ್ಲಿ 8ನೆ ಅತಿದೊಡ್ಡ ರಾಜ್ಯ. ದೇಶದ ಜಿಡಿಪಿಗೆ ಶೇ.7ರಷ್ಟು ಕೊಡುಗೆ ನೀಡುತ್ತಿರುವ ಕನ್ನಡನಾಡು, ದೇಶದ ಒಟ್ಟು ಭೂಭಾಗದ ಶೇ.5.8ರಷ್ಟನ್ನು ಹೊಂದಿದೆ. ಹೊಸ ತಂತ್ರಜ್ಞಾನಗಳ ಹಬ್ ಎನಿಸಿಕೊಂಡಿರುವ ರಾಜಧಾನಿ ಬೆಂಗಳೂರು, ಈ ಕಾರಣಕ್ಕಾಗಿ ಜಾಗತಿಕ ಮನ್ನಣೆಯನ್ನೂ ಪಡೆದಿದೆ. ಬಹುಶಃ ಭಾರತದ ಯಾವ ರಾಜ್ಯ ಕೂಡಾ ಹೊಸ ತಂತ್ರಜ್ಞಾನ ತೆರೆದಿಟ್ಟಿರುವ ವಿಸತ್ತೃತ ಶ್ರೇಣಿಯ ಸಾಧ್ಯತೆಯನ್ನು ಬೆಂಗಳೂರಿನಷ್ಟು ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂದೇ ಹೇಳಬಹುದು. ಇದು ಜನರ ಜೀವನಶೈಲಿ, ವಹಿವಾಟು, ಮನರಂಜನೆ ಹೀಗೆ ಎಲ್ಲ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ಆದರೆ ಬೆಂಗಳೂರು ಎಷ್ಟರ ಮಟ್ಟಿಗೆ ರಾಜ್ಯವನ್ನು ಪ್ರತಿನಿಧಿಸುತ್ತದೆ ಎನ್ನುವ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ.
ಕರ್ನಾಟಕ ಇನಿಂಗ್ಸ್ ಆರಂಭಕ್ಕೆ ಪ್ರಬಲ ಹಿನ್ನೆಲೆಯ ಬೆಂಬಲ ಕೂಡಾ ಇತ್ತು. ಹಿಂದಿನ ರಾಜ ಸಾಮ್ರಾಜ್ಯದ ಬುದ್ಧಿವಂತ ಆಡಳಿತಗಾರರು ರಾಜ್ಯಕ್ಕೆ ಭದ್ರ ಬುನಾದಿಯನ್ನೇ ಹಾಕಿಕೊಟ್ಟಿದ್ದರು. ರಾಜ್ಯ ವಿಧಾನಸಭೆೆ, ರಾಜ್ಯ ವಿಷಯಗಳನ್ನು ಸಮರ್ಪಕವಾಗಿ ಚರ್ಚಿಸಲು ಸಮರ್ಥವಾದ ನೆಲೆಗಟ್ಟು ಒದಗಿಸಿದ್ದರು. ಜತೆಗೆ ಹಿಂದಿನ ದಿವಾನರು ಆರ್ಥಿಕತೆಯಲ್ಲಿ ಕೈಗಾರಿಕೀಕರಣದ ಬೀಜ ಬಿತ್ತಿದ್ದರು. ವಿಶಾಲ ಮನೋಭಾವ ರಾಜ್ಯದ ಸಂಸ್ಕೃತಿಯಾಗಿ ಇದ್ದ ಕಾರಣದಿಂದ ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲೂ, ಈ ಸಂಪ್ರದಾಯ ಮುಂದುವರಿಯಿತು. ಅಂದರೆ ಯಾವುದೇ ಪ್ರಬಲ ಸೈದ್ಧಾಂತಿಕ ತಿರುವುಗಳು ಇಲ್ಲದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ರಾಜಕೀಯ ಸ್ಥಿರತೆ ನೆಲೆಸಿತು. ಇದರಿಂದಾಗಿ ಸಹಜವಾಗಿಯೇ ಕೃಷಿ ಭೂಸುಧಾರಣೆ, ಐತಿಹಾಸಿಕವಾಗಿ ತುಳಿತಕ್ಕೊಳಗಾದವರ ಸ್ಥಿತಿಗತಿ ಸುಧಾರಣೆಯ ಅಂಶಗಳು, ದೇಶದ ಆಡಳಿತ ವ್ಯವಸ್ಥೆಯ ಮೂರನೆ ಸ್ತರವಾಗಿ ಪಂಚಾಯತ್‌ರಾಜ್ ವ್ಯವಸ್ಥೆ ಅಭಿವೃದ್ಧಿಗೆ ಅವಕಾಶವಾಯಿತು. ಇದು ಅಭಿವೃದ್ಧಿ ಹಾಗೂ ರಾಜಕೀಯ ಕ್ಷೇತ್ರಕ್ಕೆ ನೆರವಾಗುವ ಜತೆಜತೆಗೆ, ಇದು ಈ ಮಣ್ಣಿನ ಜನರಲ್ಲಿ ವಿಭಿನ್ನ ಅಭಿಮಾನ ಬಲಗೊಳ್ಳದಿರಲು ಕೂಡಾ ಕಾರಣವಾಯಿತು.
ಪ್ರಮುಖ ರಾಜಕೀಯ ಪಕ್ಷಗಳಲ್ಲಿ, ವಿಭಿನ್ನ ಸಾಮಾಜಿಕ ಶಕ್ತಿಗಳ ಸಮ್ಮಿಶ್ರ ಮೈತ್ರಿ ಕಂಡುಬಂದು, ಬಹುತೇಕ ರಾಜ್ಯ ರಾಜಕೀಯ ಸಂಘಟಿತ ನಾಯಕತ್ವ ಹೊಂದಿತು. ಬಹುತೇಕ ನಾಯಕರು ತಳಮಟ್ಟದಿಂದಲೇ ಬೆಳೆದವರು. ಪ್ರಬಲ ನಾಯಕರು ಎನಿಸಿಕೊಂಡ ಗುಂಡೂರಾವ್, ಬಂಗಾರಪ್ಪ, ಯಡಿಯೂರಪ್ಪ ಅವರಂಥವರಿಗೂ ಅಲ್ಪ ಅವಧಿಯ ಅಧಿಕಾರವನ್ನಷ್ಟೇ ನೀಡಿ, ಪಕ್ಷಗಳು ಅವರಿಗೆ ನಿರ್ಗಮನ ಬಾಗಿಲು ತೋರಿಸಿವೆ. ಸ್ವಾತಂತ್ರ್ಯ ಬಳಿಕ ರಾಜ್ಯದಲ್ಲಿ 35 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ನಡೆಸಿ ಸಾಮಾಜಿಕ- ಆರ್ಥಿಕ ರಂಗದಲ್ಲಿ ಕೆಲ ವಿಶಿಷ್ಟ ಸಾಧನೆಗಳನ್ನು ಮಾಡಿತು. ಆದರೂ 1980ರ ದಶಕದಲ್ಲೇ ಪರ್ಯಾಯ ಆಡಳಿತಕ್ಕೆ ನಾಂದಿ ಹಾಡಿದ ಹೆಗ್ಗಳಿಕೆ ನಮ್ಮದು. ಇದು ನಾಯಕರನ್ನು ಜವಾಬ್ಧಾರಿಯುತವಾಗಿ ನಡೆದುಕೊಳ್ಳುವಂಥ ಎಚ್ಚರಿಕೆ ಗಂಟೆಯಾಗಿಯೂ ಪರಿಣಮಿಸಿದೆ.
ಪ್ರಬಲ ಪ್ರಾದೇಶಿಕ ಪಕ್ಷಗಳಿಲ್ಲದ ಕಾರಣ ಕರ್ನಾಟಕ ಸಾಮಾನ್ಯವಾಗಿ ರಾಷ್ಟ್ರೀಯ ಪಕ್ಷಗಳ ಅಖಾಡ. ಆದರೆ ಎಂದೂ ದಿಲ್ಲಿ (1984ರ ಸಿಖ್ ಹತ್ಯಾಕಾಂಡ), ಪಂಜಾಬ್ (ಬ್ಲೂಸ್ಟಾರ್ ಕಾರ್ಯಾಚರಣೆ), ಗುಜರಾತ್ (ಗೋಧ್ರೋತ್ತರ ಹಿಂಸಾಚಾರ)ದಂಥ ಭಯಾನಕ ಚಿತ್ರಣಕ್ಕೆ ಸಾಕ್ಷಿಯಾಗಲಿಲ್ಲ. 1977ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಇತಿಹಾಸವನ್ನು ನೋಡಿದರೆ, ತುರ್ತುಪರಿಸ್ಥಿತಿಯಂಥ ಕರಾಳ ಅಧ್ಯಾಯದ ಬಳಿಕ ಕೂಡಾ ಅಧಿಕಾರಸ್ಥರನ್ನು ರಾಜ್ಯದ ಜನ ಬದಲಿಸಲಿಲ್ಲ. ರಾಜ್ಯದ ಆಡಳಿತ ವ್ಯವಸ್ಥೆಯನ್ನು ಜನ ಅತ್ಯಂತ ಗೌರವಯುತವಾಗಿ ನಡೆಸಿಕೊಂಡು ಬಂದಿದ್ದಾರೆ. ಸರಕಾರಗಳು ಬದಲಾದಾಗಲೂ ಹಿಂದಿನ ಸರಕಾರಕ್ಕೆ ಇದ್ದ ನಿಷ್ಠೆ ಅಥವಾ ವ್ಯಕ್ತಿಪೂಜೆಯ ಅಧಿಕಾರಿಗಳನ್ನು ಗುರಿಮಾಡಿದ ಅಥವಾ ಹಿಂದಿನ ಸರಕಾರಗಳು ಜಾರಿಗೆ ತಂದ ನೀತಿಗಳನ್ನು ಬುಡಮೇಳು ಮಾಡಿದ ನಿದರ್ಶನಗಳು ಇಲ್ಲ. ಸಣ್ಣಪುಟ್ಟ ಹೊಂದಾಣಿಕೆಯೊಂದಿಗೆ ಬಹುತೇಕ ನೀತಿಗಳು ಮುಂದುವರಿದಿವೆ. ಇದರ ಪರಿಣಾಮವಾಗಿ ಒಟ್ಟಾರೆ ಅಭಿವೃದ್ಧಿ ಚಿತ್ರಣ ಗಣನೀಯ ಲಾಭವನ್ನೂ ರಾಜ್ಯಕ್ಕೆ ತಂದುಕೊಟ್ಟಿದೆ.
ಕೃಷಿ ಸುಧಾರಣೆಗಳು ರಾಜ್ಯದಲ್ಲಿ ಎರಡು ಮಹತ್ವದ ಪರಿಣಾಮ ತಂದಿದೆ. ಕೃಷಿ ಕ್ಷೇತ್ರದ ಯಜಮಾನಿ ಪದ್ಧತಿಗೆ ಮಂಗಳ ಹಾಡಿರುವುದು ಒಂದು; ಜಾತಿಯು ಶ್ರೇಣೀಕೃತ ವ್ಯವಸ್ಥೆಯ ಬದಲು ಭಿನ್ನತೆಯ ಸೂಚಕವಾಗಿರುವುದು. ಮೇಲ್ಜಾತಿಗೆ ಸೇರಿರುವುದು ಯಾವುದೇ ದೊಡ್ಡ ಲಾಭವನ್ನು ತಂದುಕೊಟ್ಟಿಲ್ಲ ಅಥವಾ ಕೆಳಜಾತಿಯವರಿಗೆ ಯಾವುದೇ ದೊಡ್ಡ ನಷ್ಟಕ್ಕೂ ಜಾತಿ ಕಾರಣವಾಗಿಲ್ಲ. ಆದರೆ ಜಾತಿ ಎನ್ನುವುದು ಆಂತರಿಕವಾಗಿ ಬುಡಮೇಲು ಮಾಡುವಂಥ ಪರಿಣಾಮಗಳನ್ನು ತರಬಲ್ಲದು. ಇದಕ್ಕೆ ಕರ್ನಾಟಕವೂ ಹೊರತಲ್ಲ. ಐತಿಹಾಸಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದ ಜಾತಿಗಳು ಅಧಿಕಾರದ ಮಾರ್ಗವನ್ನು ಕಳೆದುಕೊಂಡರೂ, ಖಾಸಗಿ ವೃತ್ತಿಪರ ಕಾಲೇಜುಗಳು, ಬ್ಯಾಂಕ್ ಹಾಗೂ ಸಹಕಾರ ಸಂಸ್ಥೆಯಂತಹ ಪರ್ಯಾಯ ಮಾರ್ಗಗಳ ಮೂಲಕ ಅದನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಎರಡು ಪ್ರಬಲ ಹಾಗೂ ಪ್ರತಿಸ್ಪರ್ಧಿ ಸಮುದಾಯಗಳು ಎರಡು ಭಿನ್ನ ಪ್ರದೇಶಗಳಿಂದ ಬಂದಿರುವ ಕಾರಣದಿಂದ ರಾಜಕೀಯ ಸಮತೋಲನ ಸಾಧ್ಯವಾಗಿದೆ. ಹಸಿರು, ಸಮೃದ್ಧ, ಶ್ರೀಮಂತ ದಕ್ಷಿಣ ಭಾಗದ ಒಕ್ಕಲಿಗರು ಹಾಗೂ ಒಣ, ಬಡ ಹಾಗೂ ಉತ್ತರ ಭಾಗದ ಲಿಂಗಾಯತರು ಹೀಗೆ ಅಧಿಕಾರ ಉಭಯ ಭಾಗಗಳ ನಡುವೆ ಪರ್ಯಾಯವಾಗುತ್ತಲೇ ಸಾಗಿದೆ. ಆದರೆ ಇದು ದುರ್ಬಲ ವರ್ಗದವರನ್ನು ಅಧಿಕಾರದಿಂದ ಹೊರಗಿಡಲು ಕೂಡಾ ಕಾರಣವಾಗಿದೆ.
ರಾಜ್ಯದ ಕೈಗಾರಿಕಾ ಚಿತ್ರಣದ ಯಶೋಗಾಥೆಯನ್ನು ಹೇಳುವ ಅಗತ್ಯವಿಲ್ಲ. ಸಾವಿರಾರು ಬಹುರಾಷ್ಟ್ರೀಯ ಕಂಪೆನಿಗಳು ರಾಜಧಾನಿ ಬೆಂಗಳೂರಿನಲ್ಲಿ ಠಿಕಾಣಿ ಹೂಡಿರುವುದೇ ಸಮಗ್ರ ಚಿತ್ರಣವನ್ನು ತೆರೆದಿಡುತ್ತದೆ. ಸ್ವಾತಂತ್ರ್ಯ ಲಭಿಸಿದ ತಕ್ಷಣವೇ ದೊಡ್ಡ ಪ್ರಮಾಣದ ಸಾರ್ವಜನಿಕ ಉದ್ದಿಮೆಗಳು ನಿರ್ಮಾಣವಾದರೆ, 1990ರ ದಶಕದಲ್ಲಿ ಇತರ ಕೈಗಾರಿಕೆಗಳು ದೊಡ್ಡ ಪ್ರಮಾಣದಲ್ಲಿ ಲಗ್ಗೆ ಇಟ್ಟವು.
ಆದರೆ ಈ ಅಭಿವೃದ್ಧಿ ಹಾಗೂ ಧನಾತ್ಮಕ ಅಂಶಗಳ ಚಿತ್ರಣ, ರಾಜ್ಯದ ಎಲ್ಲೆಮೀರಿದ ಭ್ರಷ್ಟಾಚಾರ ಹಾಗೂ ಪ್ರಾದೇಶಿಕ ಅಸಮತೋಲನದಿಂದಾಗಿ ಮಬ್ಬಾಗಿದೆ. ಹೈದರಾಬಾದ್ ಕರ್ನಾಟಕ ಇಂದಿಗೂ 19ನೆ ಶತಮಾನದ ಸ್ಥಿತಿಯಲ್ಲೇ ಉಳಿದಿದೆ. ಸಮೃದ್ಧ ದಕ್ಷಿಣ ಭಾಗದ ಅಭಿವೃದ್ಧಿಯ ಗಾಳಿ, ಏಕೀಕರಣವಾಗಿ ಆರು ದಶಕ ಕಳೆದರೂ, ತುಂಗಭದ್ರೆಯ ಆಚೆಗೆ ಇದು ಇನ್ನೂ ತಲುಪಿಲ್ಲ. ಆರ್ಥಿಕತೆಗೆ ಮಹಿಳೆಯರ ಕೊಡುಗೆಯನ್ನು 1970ರ ದಶಕದ ಆರಂಭದಲ್ಲೇ ಗುರುತಿಸಿದ ಮತ್ತು ಮೂರನೆ ಸ್ತರದ ಆಡಳಿತ ವ್ಯವಸ್ಥೆಯಲ್ಲಿ ಶೇ.33ರಷ್ಟು ಮೀಸಲಾತಿಯನ್ನು ನೀಡುವಲ್ಲಿ ದೇಶಕ್ಕೆ ಮಾದರಿಯಾದ ಹೆಗ್ಗಳಿಕೆ ಕರ್ನಾಟಕದ್ದು. ಆದರೆ ಉನ್ನತ ಹಂತದ ರಾಜಕೀಯದಲ್ಲಾಗಲೀ, ಆರ್ಥಿಕತೆಯ ಯಾವುದೇ ವಲಯದಲ್ಲಾಗಲೀ ಇದರ ಪ್ರತಿಫಲ ಇನ್ನೂ ಕಂಡುಬರುತ್ತಿಲ್ಲ. ನೀರಿನ ಹಂಚಿಕೆ ಬಗ್ಗೆ ನೆರೆ ರಾಜ್ಯಗಳ ಜತೆಗಿನ ವ್ಯಾಜ್ಯ ಇನ್ನೂ ದೊಡ್ಡ ತಲೆನೋವಾಗಿಯೇ ಮುಂದುವರಿದಿದೆ. ಭ್ರಷ್ಟಕೂಪವಾಗಿರುವ ನಗರಾಡಳಿತದ ಪರಿಣಾಮವಾಗಿ ರಾಜ್ಯದ ಘನತೆಗೆ ಧಕ್ಕೆ ಬಂದಿದೆ. 60ನೆ ರಾಜ್ಯೋತ್ಸವ ಇವೆಲ್ಲದರ ಆತ್ಮಾವಲೋಕನದ ವೇದಿಕೆಯಾಗಬೇಕು. ಸಂಭ್ರಮದ ಜತೆಗೆ ಇಂಥ ಆಪತ್ತುಗಳನ್ನು ತಡೆಯುವ ಹೊತ್ತಾಗಬೇಕು.
(ಲೇಖಕರು: ಬೆಂಗಳೂರು ಮೂಲದ ಪತ್ರಕರ್ತ. 17 ವರ್ಷ ಕಾಲ ಬಿಬಿಸಿ ವರ್ಲ್ಡ್ ಸರ್ವಿಸ್‌ನಲ್ಲಿ ಕೆಲಸ ಮಾಡಿದ್ದಾರೆ)
ಹಿಂದಿನ ಮೈಸೂರು ರಾಜ್ಯದ ಶ್ರೀಮಂತ ಸಂಪ್ರದಾಯವನ್ನು ಮೈಗೂಡಿಸಿಕೊಂಡಿರುವ ಕರ್ನಾಟಕ ದೇಶದಲ್ಲಿ 8ನೆ ಅತಿದೊಡ್ಡ ರಾಜ್ಯ. ದೇಶದ ಜಿಡಿಪಿಗೆ ಶೇ.7ರಷ್ಟು ಕೊಡುಗೆ ನೀಡುತ್ತಿರುವ ಕನ್ನಡನಾಡು, ದೇಶದ ಒಟ್ಟು ಭೂಭಾಗದ ಶೇ.5.8ರಷ್ಟನ್ನು ಹೊಂದಿದೆ. ಹೊಸ ತಂತ್ರಜ್ಞಾನಗಳ ಹಬ್ ಎನಿಸಿಕೊಂಡಿರುವ ರಾಜಧಾನಿ ಬೆಂಗಳೂರು, ಈ ಕಾರಣಕ್ಕಾಗಿ ಜಾಗತಿಕ ಮನ್ನಣೆಯನ್ನೂ ಪಡೆದಿದೆ. ಬಹುಶಃ ಭಾರತದ ಯಾವ ರಾಜ್ಯ ಕೂಡಾ ಹೊಸ ತಂತ್ರಜ್ಞಾನ ತೆರೆದಿಟ್ಟಿರುವ ವಿಸತ್ತೃತ ಶ್ರೇಣಿಯ ಸಾಧ್ಯತೆಯನ್ನು ಬೆಂಗಳೂರಿನಷ್ಟು ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂದೇ ಹೇಳಬಹುದು.