ಏಕಾಏಕಿ ಬ್ರೇಕ್ ಹಾಕಿದ ಸ್ವಿಫ್ಟ್ ಕಾರು: ಕಾರಿನೊಳಕ್ಕೆ ನುಗ್ಗಿದ ಕಬ್ಬಿಣದ ರಾಡ್ಗಳು
ತಪ್ಪಿದ ಭಾರೀ ಅಪಾಯ
ಬಂಟ್ವಾಳ, ನ.1: ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಸ್ವಿಫ್ಟ್ ಕಾರೊಂದು ಏಕಾಏಕಿ ಬ್ರೇಕ್ ಹಾಕಿದ್ದು, ಹಿಂಭಾಗದಿಂದ ಕಬ್ಬಿಣದ ರಾಡ್ಗಳನ್ನು ಹೇರಿಕೊಂಡು ಬರುತ್ತಿದ್ದ ಓಮ್ನಿಯ ಮೇಲಿದ್ದ ರಾಡ್ಗಳು ಸ್ವಿಫ್ಟ್ ಕಾರಿನೊಳಗೆ ನುಗ್ಗಿದ ಘಟನೆ ಕಲ್ಲಡ್ಕ ಸಮೀಪದ ಸೂರಿಕುಮೇರು ಬಳಿಯ ದಾಸಕೋಡಿ ಎಂಬಲ್ಲಿ ಸಂಭವಿಸಿದೆ. ಘಟನೆಯಲ್ಲಿ ಸ್ವಿಫ್ಟ್ ಕಾರಿನಲ್ಲಿದ್ದವರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಮಂಗಳೂರಿನಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಸ್ವಿಫ್ಟ್ ಕಾರಿನ ಚಾಲಕ ದಾಸಕೋಡಿ ಬಳಿ ಏಕಾಏಕಿ ಬ್ರೇಕ್ ಹಾಕಿದ್ದರು. ಈ ಸಂದರ್ಭ ಕಬ್ಬಿಣದ ರಾಡ್ಗಳನ್ನು ಹೇರಿಕೊಂಡು ಓಮ್ನಿಯೊಂದು ಸ್ವಿಫ್ಟ್ ಕಾರಿನ ಹಿಂಭಾಗದಿಂದ ಬರುತ್ತಿದ್ದು, ಸ್ವಿಫ್ಟ್ ಕಾರು ಏಕಾಏಕಿ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ಓಮ್ನಿ ಕಾರು ಚಾಲಕ ಕೂಡಾ ದಿಢೀರ್ ಬ್ರೇಕ್ ಹಾಕಿದ್ದರು. ಈ ಸಂದರ್ಭ ಓಮ್ನಿಯ ಮೇಲಿದ್ದ ಕಬ್ಬಿಣದ ರಾಡ್ಗಳು ನೇರವಾಗಿ ಎದುರಿದ್ದ ಸ್ವಿಫ್ಟ್ ಕಾರಿನ ಹಿಂಭಾಗದ ಗಾಜನ್ನು ಒಡೆದು ಕಾರಿನೊಳಕ್ಕೆ ನುಗ್ಗಿವೆ.
ಸ್ವಿಫ್ಟ್ ಕಾರಿನಲ್ಲಿ ಮಗು ಸಹಿತ ದಂಪತಿ ಪ್ರಯಾಣಿಸುತ್ತಿದ್ದರು. ಪತಿ ಮತ್ತು ಪತ್ನಿ ಎದುರುಭಾಗದಲ್ಲಿ ಕೂತಿದ್ದರೆ ಮಗು ಹಿಂಭಾಗದ ಸೀಟ್ನಲ್ಲಿತ್ತು. ಕಾರಿನೊಳಕ್ಕೆ ನುಗ್ಗಿದ ರಾಡ್ಗಳು ಎದುರು ಕೂತಿದ್ದ ಮಹಿಳೆಯ ತಲೆಯ ಮೇಲ್ಭಾಗದಲ್ಲೇ ಹಾದುಹೋಗಿದ್ದು, ಮುಂಭಾಗದ ಗಾಜು ಒಡೆದು ಹೊರಬಂದಿವೆ ಎನ್ನಲಾಗಿದೆ. ಅದೃಷ್ಟವಶಾತ್ ಆಕೆ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.
ಘಟನೆಯಿಂದ ಟ್ರಾಫಿಕ್ ಜಾಂ ಉಂಟಾಗಿದ್ದು, ಸ್ಥಳಕ್ಕೆ ಧಾವಿಸಿದ ವಿಟ್ಲ ಠಾಣಾ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.