ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆರೆಸ್ಸೆಸ್ ಹಸ್ತಕ್ಷೇಪ?
ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ನ ಶೈಕ್ಷಣಿಕ ಕಾರ್ಯಸೂಚಿಯನ್ನು ಪ್ರಚಾರಪಡಿಸುವ ಹೊಣೆಗಾರಿಕೆ ವಹಿಸಿಕೊಂಡಿರುವ ‘ಶಿಕ್ಷಾ ಸಂಸ್ಕೃತಿ ಉತ್ಥಾನ ನ್ಯಾಸ್’ ಸಂಸ್ಥೆಯು ಕೇಂದ್ರ ಮಾನವಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ಗೆ ನೂತನ ಶಿಕ್ಷಣ ನೀತಿಯ ಬಗ್ಗೆ ಐದು ಪುಟಗಳ ವಿಮರ್ಶನಾಪತ್ರವೊಂದನ್ನು ಸಲ್ಲಿಸಿದ್ದು ಅದನ್ನು ಕಳೆದ ಜೂನ್ನಲ್ಲಿ ಬಹಿರಂಗಗೊಳಿಸಲಾಗಿತ್ತು.
‘‘ನೂತನ ಶಿಕ್ಷಣ ನೀತಿಯು ಹಳೆಯ ಶಿಕ್ಷಣ ನೀತಿಗಿಂತ ಎಷ್ಟು ವಿಭಿನ್ನವೆಂಬುದು ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಇದು ಸಮಗ್ರವಾದ ದೂರದೃಷ್ಟಿ, ಪ್ರಚಾರ, ಗುರಿ, ಸಂದೇಶದ ಕೊರತೆಯನ್ನು ಹೊಂದಿದೆ’’ಯೆಂದು ವಿಮರ್ಶನಾಪತ್ರವು ಹೇಳಿದೆ.
ನೂತನ ಶಿಕ್ಷಣ ನೀತಿಯ ಕರಡು ಹಾಗೂ ಶಿಕ್ಷಾ ಸಂಸ್ಕೃತಿ ಉತ್ಥಾನ ನ್ಯಾಸದ ದಾಖಲೆಯು ಯಾವ ವಿಷಯದಲ್ಲಿ ಭಿನ್ನಾಭಿಪ್ರಾಯವನ್ನು ಹೊಂದಿವೆಯೆಂದರೆ, ಶಿಕ್ಷಾ ಸಂಸ್ಕೃತಿ ಉತ್ಥಾನ ನ್ಯಾಸವು ಸಾಮಾಜಿಕ ಸಹಬಾಳ್ವೆಯ ಬಗ್ಗೆ ಮಾತನಾಡುವಾಗ ಭಾರತದ ವೈವಿಧ್ಯತೆಯ ಬಗ್ಗೆ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ.
2005ನೆ ಸಾಲಿನ ರಾಷ್ಟ್ರೀಯ ಪಠ್ಯವಿಷಯ ಕಾರ್ಯಚೌಕಟ್ಟನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕೆಂದು ಕರೆ ನೀಡಿರುವ ವಿಮರ್ಶನಾ ಪತ್ರದಲ್ಲಿ ವ್ಯಕ್ತಪಡಿಸಲಾದ ಅಭಿಪ್ರಾಯಗಳು ಖಚಿತತೆಯ ಕೊರತೆಯನ್ನು ಹೊಂದಿವೆ.
ಶಿಕ್ಷಾ ಸಂಸ್ಕೃತಿ ಉತ್ಥಾನ ನ್ಯಾಸವು ಜಾವ್ಡೆೇಕರ್ ಅವರಿಗೆ ತನ್ನ ಸಲಹೆಗಳ ಟಿಪ್ಪಟಿ ಪ್ರತಿಯೊಂದನ್ನು ಕೂಡಾ ನೀಡಲಾಗಿದ್ದು, ಅದರಲ್ಲಿ ರಾಷ್ಟ್ರೀಯ ಕರಡು ಶಿಕ್ಷಣ ನೀತಿಯು ಹಲವಾರು ಉತ್ತಮ ವಿಷಯಗಳನ್ನು ಒಳಗೊಂಡಿದೆಯೆಂಬುದನ್ನು ಅದು ಒಪ್ಪಿಕೊಂಡಿದೆ. ಬುಡಕಟ್ಟು ಪ್ರದೇಶಗಳ ವಿದ್ಯಾರ್ಥಿಗಳಿಗಾಗಿ ವಿಶೇಷ ಪಠ್ಯಕ್ರಮ, ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣಮಾಧ್ಯಮವಾಗಿ ಮಾತೃಭಾಷೆ ಹಾಗೂ ಶಿಕ್ಷಕರಲ್ಲಿ ವೃತ್ತಿಯಲ್ಲಿ ಪ್ರಗತಿಯನ್ನು ಸಾಧಿಸಲು ಭಡ್ತಿ ನೀತಿಯ ಜಾರಿ ಸೇರಿದಂತೆ ಸಂಘಟನೆಯ ಈ ಹಿಂದೆ ಮಾಡಿದ್ದ ಹಲವಾರು ಪ್ರಸ್ತಾಪಗಳನ್ನು ನೂತನ ಶಿಕ್ಷಣ ನೀತಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಆದಾಗ್ಯೂ ಸಂಘಟನೆಯು ತನಗಿರುವ ರಾಜಕೀಯ ಸಂಪರ್ಕ ಹಾಗೂ ಮಾನವಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸಚಿವರ ಜೊತೆ ಬಲವಾದ ನಂಟನ್ನು ಹೊಂದಿರುವುದರಿಂದ ಕರಡು ನೀತಿಯಲ್ಲಿ ತನ್ನ ಕೆಲವು ಪ್ರಸ್ತಾಪಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಸ್ಪಷ್ಟವಾದ ಭರವಸೆಯನ್ನು ಹೊಂದಿದೆ, ಈ ಕೆಲವು ಪ್ರಸ್ತಾಪಗಳು ಆರೆಸ್ಸೆಸ್ನ ಶೈಕ್ಷಣಿಕ ಸಂಘಟನೆಗಳಿಂದ ನಾವು ನಿರೀಕ್ಷಿಸುವಂತಹದ್ದೇ ಆಗಿದೆ. ಇವುಗಳಲ್ಲಿ ಪಠ್ಯಪುಸ್ತಕಗಳನ್ನು ಹಾಗೂ ಪ್ರಕಟಿತ ಸಂಶೋಧನೆಯ ಅಂಶಗಳನ್ನು ನಿಯಂತ್ರಿಸುವ ಪ್ರಸ್ತಾಪವೂ ಇದೆ. ‘ಶಿಕ್ಷಾ ಸಂಸ್ಕೃತಿ ಉತ್ಥಾನ ನ್ಯಾಸ’ವು ಭಾರತೀಯ ಸಂಸ್ಕೃತಿ, ಪರಂಪರೆ, ಪಂಗಡಗಳು, ಗಣ್ಯ ವ್ಯಕ್ತಿಗಳು ಹಾಗೂ ಸತ್ಯಾಂಶಗಳ ತಪ್ಪು ವ್ಯಾಖ್ಯಾನಗಳ ಅಪಮಾನಕಾರಿ ಪ್ರಸ್ತಾಪಗಳೆಂದು ತಾನು ಭಾವಿಸುವ ವಿಷಯಗಳನ್ನು ಶಿಕ್ಷಣ ಪಠ್ಯದಿಂದ ಹೊರಗಿಡಲು ಬದ್ಧತೆಯುಳ್ಳ ಹಿರಿಯ ವ್ಯಕ್ತಿಗಳನ್ನು ಹಾಗೂ ಸಂಪನ್ಮೂಲಗಳನ್ನು ನಿಯೋಜಿಸಿದೆ. ಪಠ್ಯಪುಸ್ತಕ ಗಳನ್ನು ತಿರುಚಲು ಹಾಗೂ ಪುಸ್ತಕಗಳನ್ನು ನಿಷೇಧಿಸಲು ನ್ಯಾಸವು ಆರೆಸ್ಸೆಸ್ನ ಪುಂಡು ಸಂಘಟನೆಗಳ ಬೆಂಬಲದೊಂದಿಗೆ ಸಾರ್ವಜನಿಕ ಅಭಿಯಾನವನ್ನು ಯಶಸ್ವಿಯಾಗಿ ಕೈಗೊಳ್ಳುತ್ತಿದೆ.
ಭಾರತೀಯ ಭಾಷೆಗಳನ್ನು ಬೋಧನಾ ಮಾಧ್ಯಮವಾಗಿ ಮಾಡುವ ಬಗ್ಗೆಯೂ ನ್ಯಾಸ್ ಅಪಾರ ಕಾಳಜಿಯನ್ನು ಹೊಂದಿದೆ. ದೀರ್ಘಸಮಯದಿಂದಿಲೂ ಆರೆಸ್ಸೆಸ್ ಭಾರತೀಯ ಭಾಷೆಯನ್ನು ಅದರಲ್ಲೂ ಹಿಂದಿಯಲ್ಲಿ ಶಿಕ್ಷಣ ನೀಡುವ ಮೂಲಕ ತನ್ನ ಕಲ್ಪನೆಯ ಭಾರತೀಯ ಸಂಸ್ಕೃತಿಯೊಂದಿಗೆ ದೇಶದ ಜನತೆಯನ್ನು ಬೆಳೆಸ ಬಹುದೆಂದು ಪ್ರತಿಪಾದಿಸುತ್ತಾ ಬಂದಿದೆ. ಆದರೆ ಹಿಂದಿ ಯೇತರ ರಾಜ್ಯಗಳು ಶಿಕ್ಷಣಮಾಧ್ಯಮವಾಗಿ ಹಿಂದಿಯನ್ನು ಒಪ್ಪಿಕೊಳ್ಳುವುದು ಅಸಾಧ್ಯವೆಂದು ಮನವರಿಕೆಯಾಗಲು ಅದಕ್ಕೆ ಹಲವು ವರ್ಷಗಳೇ ಬೇಕಾದವು. ಹೀಗಾಗಿ ಅದು ಐದನೆ ತರಗತಿಯವರೆಗೆ ಮಾತೃಭಾಷೆ ಯಲ್ಲಿ ಅಥವಾ ಯಾವುದೇ ಪ್ರಾದೇಶಿಕ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಮಾಡಬೇಕೆಂದು ಅದು ಪ್ರಸ್ತಾಪವನ್ನು ಸಲ್ಲಿಸಿದೆ.
ಐದನೆ ತರಗತಿಯ ಆನಂತರ ಬೋಧನಾ ಮಾಧ್ಯಮವು ಯಾವ ಭಾಷೆಯಲ್ಲಿರಬೇಕೆಂಬುದನ್ನು ನ್ಯಾಸ್ ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ. ಆದರೆ ಇಂಗ್ಲಿಷ್ ಅಥವಾ ಯಾವುದೇ ವಿದೇಶಿ ಭಾಷೆಯನ್ನು ಶಿಕ್ಷಣ ವ್ಯವಸ್ಥೆಯ ಯಾವುದೇ ಹಂತದಲ್ಲಿಯೂ ಕಡ್ಡಾಯಗೊಳಿಸಕೂಡದೆಂದು ಹೇಳಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ ಹಾಗೂ ಭಾರತೀಯ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ನಂತಹ ಸಂಸ್ಥೆಗಳು ತಕ್ಷಣವೇ ಎಲ್ಲಾ ಭಾರತೀಯ ಭಾಷೆಗಳಲ್ಲಿಯೂ ಬೋಧನಾ ಸೌಲಭ್ಯವನ್ನು ಒದಗಿಸಬೇಕೆಂದು ಅದು ಆಗ್ರಹಿಸಿದೆ.
ರಾಷ್ಟ್ರೀಯ ಕರಡು ಶಿಕ್ಷಣ ನೀತಿ(ಎನ್ಇಪಿ)ಯ ಕುರಿತು ಜಾವ್ಡೇಕರ್ಗೆ ಸಲ್ಲಿಸಲಾದ ವಿಮರ್ಶನಾಪತ್ರವು ಹೀಗೆ ಹೇಳಿದೆ. ‘‘ರಾಷ್ಟ್ರೀಯ ಕರಡು ನೀತಿಯು, ಅದರ ರಚನಾಕಾರರ ‘ಆಂಗ್ಲ ಮನಸ್ಥಿತಿ’ಯನ್ನು ಸೂಚಿಸುತ್ತದೆ.ಯಾಕೆಂದರೆ ಅದು ಇಂಗ್ಲಿಷನ್ನು ದ್ವಿತೀಯ ಭಾಷೆಯಾಗಿ ಕಡ್ಡಾಯಗೊಳಿಸಬೇಕೆಂದು ಶಿಫಾರಸು ಮಾಡಿದೆ’’.
ಆರೆಸ್ಸೆಸ್ನ ಶಿಕ್ಷಣ ಮಾದರಿ
ನೂತನ ಶಿಕ್ಷಣ ನೀತಿ ಕುರಿತ 9 ಪುಟಗಳ ಈ ವಿಮರ್ಶನಾಪತ್ರದಲ್ಲಿ ನೀಡಲಾದ ಸಲಹೆಗಳು ಬಹುತೇಕವಾಗಿ ಸಾಮಾನ್ಯ ಶಿಕ್ಷಣದ ಸಂಘ ಪರಿವಾರ ಹೊಂದಿರುವ ತಿಳುವಳಿಕೆ ಹಾಗೂ ನಿಲುವನ್ನು ಹಾಗೂ ಅದರ ಸಾಂಸ್ಕೃತಿಕ ಹಾಗೂ ಬೌದ್ಧಿಕ ದೃಷ್ಟಿಕೋನಗಳನ್ನು ಅನಾವರಣಗೊಳಿಸುತ್ತದೆ.
ವಿಮರ್ಶನಾ ಪತ್ರದಲ್ಲಿ ‘ಪಠ್ಯವಿಷಯ ಹಾಗೂ ಪಠ್ಯಕ್ರಮ’ ಎಂಬ ಹೆಸರಿನ ಪ್ರವರ್ಗವು, ‘‘ಭಾರತೀಯ ಸಂಸ್ಕೃತಿ, ಇತಿಹಾಸ ಹಾಗೂ ವೈಜ್ಞಾನಿಕ ಪರಂಪರೆಯನ್ನು ಎಲ್ಲಾ ಹಂತಗಳಲ್ಲೂ ಮೂಲಭೂತ ಪಠ್ಯಕ್ರಮವಾಗಿ ಸೇರ್ಪಡೆಗೊಳಿಸುವಂತೆ ಕರೆ ನೀಡಿದೆ ಹಾಗೂ ವೇದಗಣಿತದಂತಹ ಜಗತ್ತಿಗೆ ಭಾರತ ನೀಡಿದ ಕೊಡುಗೆಗಳನ್ನು ಕಡ್ಡಾಯವಾಗಿ ಪಠ್ಯವಿಷಯವಾಗಿ ಸೇರ್ಪಡೆಗೊಳಿಸಬೇಕೆಂದು ಅದು ಆಗ್ರಹಿಸಿದೆ.
ಪಠ್ಯಪುಸ್ತಕಗಳಲ್ಲಿರುವ ತಾನು ಅಪಮಾನಕಾರಿಯೆಂದು ನಂಬಿರುವ ಪ್ರಸ್ತಾವನೆಗಳನ್ನು ತೆಗೆದುಹಾಕುವ ಜೊತೆಗೆ ವಿದೇಶಗಳಲ್ಲಿ ಶೈಕ್ಷಣಿಕ ಪಠ್ಯಗಳಲ್ಲಿ ಭಾರತವನ್ನು ಹೇಗೆ ಬಿಂಬಿಸಲಾಗಿದೆ ಹಾಗೂ ಅದನ್ನು ಆಧರಿಸಿ ಮುಂದೆ ಯಾವ ಕ್ರಮವನ್ನು ಕೈಗೊಳ್ಳಬೇಕೆಂಬ ಬಗ್ಗೆ ನೂತನ ಶಿಕ್ಷಣ ನೀತಿಯು ಪರಾಮರ್ಶೆಯನ್ನು ನಡೆಸಬೇಕೆಂದು ಅದು ಬಯಸಿದೆ.
ಸಂಶೋಧನೆ ಕುರಿತು ವಿಮರ್ಶನಾ ಪತ್ರದ ಪ್ರವರ್ಗದಲ್ಲಿ ನ್ಯಾಸಾವು ಕೆಲವು ಮಹತ್ತರವಾದ ಪ್ರಸ್ತಾಪಗಳನ್ನು ಮಾಡಿದೆ. ಉದಾಹರಣೆಗೆ ಸ್ಥಳೀಯ ಹಾಗೂ ದೇಶೀಯ ಪತ್ರಿಕೆಗಳಲ್ಲಿ ಸಂಶೋ ಧನಾ ವರದಿಯನ್ನು ಪ್ರಕಟಿಸಿದ ಬಳಿಕವೇ ಅದನ್ನು ವಿದೇಶಗಳಿಗೆ ಕಳುಹಿಸಬೇಕೆಂಬ ನಿಯಮವನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಲಾಗಿದೆ.
ಇದರ ಜೊತೆಗೆ ಸಂಶೋಧನಾ ಕಾರ್ಯವು ಸ್ವತಂತ್ರವಾಗಿರಬೇಕು ಹಾಗೂ ಅದಕ್ಕೆ ಸಮಯದ ಮಿತಿಯನ್ನು ವಿಧಿಸಕೂಡದು. ಜೊತೆಗೆ ವಿವಿಗಳ ಹೊರಗೂ ಉಪಯುಕ್ತವಾದ ಸಂಶೋಧನಾ ಕಾರ್ಯವನ್ನು ಮಾಡುತ್ತಿರುವವರಿಗೂ ಪದವಿಗಳನ್ನು ನೀಡಬೇಕೆಂದು ಅದು ಆಗ್ರಹಿಸಿದೆ.
ಸಂಶೋಧನೆಯು ಸ್ವತಂತ್ರವಾಗಿರಬೇಕೆಂಬ ಪ್ರಸ್ತಾವನೆಯ ಮೊದಲ ಭಾಗವನ್ನು ದೇಶಾದ್ಯಂತ ವಿಶ್ವವಿದ್ಯಾನಿಲಯಗಳ ಸಂಶೋಧಕರು ಸ್ವಾಗತಿಸುತ್ತಾರೆ. ಸಂಶೋಧನೆ ಕಾರ್ಯವನ್ನು ಕಾಲದ ಮಿತಿಗೆ ಒಳಪಡಿಸಬಾರದೆಂಬ ಪ್ರಸ್ತಾಪದಿಂದ ಕೆಲವರಿಗೆ ಸಂತಸವಾಗಿರಬಹುದು. ಆದರೆ ಸಂಶೋಧನೆಯು ಸ್ವತಂತ್ರವಾಗಿರಬೇಕೆಂದು ನ್ಯಾಸ್ ಯಾವ ಅರ್ಥದಲ್ಲಿ ಹೇಳಿದೆ?. ಅಂದರೆ ಯಾವುದು ಸರಿಯಾದ ವಾಖ್ಯಾನ ಹಾಗೂ ಸಂಶೋಧನೆ ಯಲ್ಲಿ ಯಾವುದು ಸ್ವೀಕಾರಾರ್ಹ ಎಂಬುದನ್ನು ನಿರ್ಧರಿಸುವ ಹಕ್ಕನ್ನು ಅದು ತನಗೆ ತಾನೇ ನೀಡಿಕೊಂಡಿದೆ ಹಾಗೂ ಅದನ್ನು ಒಪ್ಪದವರನ್ನು ನಿಷೇಧಿಸುವ ಕುರಿತಾದ ಎಲ್ಲಾ ಅವಕಾಶಗಳನ್ನು ಅದು ಮುಕ್ತವಾಗಿರಿಸಿದೆ. ಭಾರತದಲ್ಲಿ ಸರಕಾರಗಳು ಹಾಗೂ ನಿರ್ದಿಷ್ಟವಾಗಿ ಹಾಲಿ ಬಿಜೆಪಿ ಸರಕಾರವು ತನ್ನ ರಾಜಕೀಯ ನಿಲುವಿಗೆ ಬದ್ಧರಾಗಿರುವ ಉಪಕುಲಪತಿ ಹಾಗೂ ಆಡಳಿತಗಾರರನ್ನು ನೇಮಿಸುವ ಮೂಲಕ ವಿಶ್ವವಿದ್ಯಾನಿಲಯಗಳನ್ನು ನಿಯಂತ್ರಿಸುತ್ತಿದೆ.
ವಿಶ್ವವಿದ್ಯಾನಿಲಯಗಳ ಹೊರಗೆ ಉಪಯುಕ್ತ ಸಂಶೋಧನೆಗಳನ್ನು ನಡೆಸುವವರಿಗೂ ಪದವಿಗಳನ್ನು ನೀಡಬೇಕೆಂಬ ಪ್ರಸ್ತಾಪವು ತನ್ನ ಸಿದ್ಧಾಂತಗಳನ್ನು ಪ್ರಚಾರ ಮಾಡುವ ಪತ್ರಕರ್ತರನ್ನು ಹಾಗೂ ಹವ್ಯಾಸಿ ಬರಹಗಾರರನ್ನು, ವಿಶ್ವವಿದ್ಯಾನಿಲಯಗಳಲ್ಲಿ ಪರಿಶ್ರಮದಿಂದ ಕೆಲಸ ಮಾಡಿ, ಸಂಶೋಧನಾ ಡಿಗ್ರಿಯನ್ನು ಪಡೆಯುವ ವಿದ್ವಾಂಸರ ಸಾಲಿನಲ್ಲಿ ಸರಿಮಾನವಾಗಿ ನಿಲ್ಲಿಸುವ ಹುನ್ನಾರ ಇದಾಗಿದೆ.
‘ಶಿಕ್ಷಾ ಸಂಸ್ಕೃತಿ ಉತ್ಥಾನ ನ್ಯಾಸ್’ನಂತಹ ಆರೆಸ್ಸೆಸ್ ಸೃಷ್ಟಿಯ ಸಂಘಟನೆಗಳು ಬಿಜೆಪಿ ನೇತೃತ್ವದ ಸರಕಾರದ ಸಚಿವರ ಜೊತೆ ಅಭೂತಪೂರ್ವವಾದ ಸಂಪರ್ಕವನ್ನು ಹೊಂದಿವೆ. ಈ ಪ್ರಸ್ತಾಪಗಳು ರಾಜಕೀಯವಾಗಿ ಹೇಗೆ ಸ್ವೀಕಾರಾರ್ಹವೆಂಬುದನ್ನು ಸರಕಾರದ ನೀತಿಯು ಅವಲಂಬಿಸಿದೆ. ಒಂದು ವೇಳೆ ರಾಷ್ಟ್ರೀಯ ಕರಡು ಶಿಕ್ಷಣ ನೀತಿಯಲ್ಲಿ ಸೇರ್ಪಡೆಯಾಗಿರದ ಶಿಕ್ಷಾ ಸಂಸ್ಕೃತಿ ಉತ್ಥಾನ ನ್ಯಾಸದ ಪ್ರಸ್ತಾಪಗಳು, ಅಂತಿಮ ನೀತಿ ದಾಖಲೆಯಲ್ಲಿ ಸ್ಥಾನ ಪಡೆಯುವುದೋ ಎಂಬುದನ್ನು ಕಾದುನೋಡಬೇಕಾಗಿದೆ.
‘ಶಿಕ್ಷಾ ಸಂಸ್ಕೃತಿ ಉತ್ಥಾನ ನ್ಯಾಸ್’ನಂತಹ ಆರೆಸ್ಸೆಸ್ ಸೃಷ್ಟಿಯ ಸಂಘಟನೆಗಳು ಬಿಜೆಪಿ ನೇತೃತ್ವದ ಸರಕಾರದ ಸಚಿವರ ಜೊತೆ ಅಭೂತಪೂರ್ವವಾದ ಸಂಪರ್ಕವನ್ನು ಹೊಂದಿವೆ. ಈ ಪ್ರಸ್ತಾಪಗಳು ರಾಜಕೀಯವಾಗಿ ಹೇಗೆ ಸ್ವೀಕಾರಾರ್ಹವೆಂಬುದನ್ನು ಸರಕಾರದ ನೀತಿಯು ಅವಲಂಬಿಸಿದೆ. ಒಂದು ವೇಳೆ ರಾಷ್ಟ್ರೀಯ ಕರಡು ಶಿಕ್ಷಣ ನೀತಿಯಲ್ಲಿ ಸೇರ್ಪಡೆಯಾಗಿರದ ಶಿಕ್ಷಾ ಸಂಸ್ಕೃತಿ ಉತ್ಥಾನ ನ್ಯಾಸದ ಪ್ರಸ್ತಾಪಗಳು, ಅಂತಿಮ ನೀತಿ ದಾಖಲೆಯಲ್ಲಿ ಸ್ಥಾನ ಪಡೆಯುವುದೋ ಎಂಬುದನ್ನು ಕಾದುನೋಡಬೇಕಾಗಿದೆ.