ಹಿರಿಯ ಕಲಾವಿದ ಸಿದ್ದಪ್ಪ ನಿಂಗಪ್ಪ ಗುಳ್ಳೆಯವರಿಗೆ
ಗದುಗಿನ ಹಿರಿಯ ಕಲಾವಿದ ಸಿದ್ದಪ್ಪನಿಂಗಪ್ಪಗುಳ್ಳೆ ಅವರಿಗೆ ಪ್ರಸಕ್ತ ಸಾಲಿನ ನಾಟಕ ಅಕಾಡಮಿ ವಾರ್ಷಿಕ ಪ್ರಶಸ್ತಿ ಲಭಿಸಿದೆ. ಸದ್ಯ 80ರ ಹೊಸ್ತಿಲು ದಾಟಿರುವ ಅವರು, ಕಳೆದ 5 ದಶಕಗಳಿಂದ ಪಂಚಾಕ್ಷರ ಗವಾಯಿಗಳ ನಾಟಕ ಕಂಪೆನಿಯಲ್ಲಿ ತಬಲಾ, ವಯ–ಲಿನ್, ಹಾರ್ಮೋನಿಯಂ ವಾದಕರಾಗಿ ದುಡಿಯುತ್ತಿದ್ದಾರೆ. ಎಲೆಮರೆ ಕಾಯಿ–ಯಂತಿದ್ದ ಈ ಕಲಾವಿದನನ್ನು ಅಕಾಡಮಿ ಗುರುತಿಸಿರುವುದು ವಿಶೇಷ.
ಆಂಧ್ರಪ್ರದೇಶ ಮೂಲದ ಸಿದ್ದಪ್ಪ, 3 ವರ್ಷದ ಮಗುವಿದ್ದಾಗಲೇ ಕಣ್ಣಿನ ಸಮ–ಸ್ಯೆ–ಯುಂಟಾಗಿ ದೃಷ್ಟಿ ಕಳೆದುಕೊಂಡ–ವರು. 13 ವರ್ಷದ ಬಾಲಕನಿದ್ದಾಗ ತಂದೆ-ತಾಯಿ, ಸಿದ್ದಪ್ಪನನ್ನು ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಕರೆತಂದು, ಪುಟ್ಟರಾಜ ಕವಿ ಗವಾಯಿಗಳ ಮಡಿಲಿಗೊಪ್ಪಿಸಿ ಹೋದರು. ಅಲ್ಲಿಯೇ ಸಂಗೀತ ಕಲಿತು ಹಾರ್ಮೋನಿಯಂ ವಿಶಾರದ ತರಬೇತಿ ಪಡೆದರು. ನಂತರ 1962 ರಲ್ಲಿ ಪಂಚಾಕ್ಷರ ಗವಾಯಿಗಳ ನಾಟಕ ಕಂಪನಿಯಲ್ಲಿ ವಯಲಿನ್ ವಾದಕರಾಗಿ ವೃತ್ತಿ ಜೀವನ ಆರಂಭಿಸಿದರು. ಈಗಲೂ ಅದೇ ನಾಟಕ ಕಂಪೆನಿಯಲ್ಲಿದ್ದಾರೆ.
ಇದುವರೆಗೆ ಸಿದ್ದಪ್ಪನವರು ಧಾರವಾಡ, ಬೆಂಗಳೂರು, ಬಳ್ಳಾರಿ ಆಕಾಶವಾಣಿ ಕೇಂದ್ರಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರದರ್ಶಿಸಲಾದ ಪೌರಾಣಿಕ, ಸಾಮಾಜಿಕ ನಾಟಕಗಳಿಗೆ ಹಾರ್ಮೋನಿಯಂ ಸಾಥ್ ನೀಡಿದ್ದಾರೆ. ಕುಮಾರೇಶ್ವರ ಪ್ರಶಸ್ತಿ, ಪಂಚಾಕ್ಷರ ಪ್ರಶಸ್ತಿ ಹಾಗೂ ಪುಟ್ಟರಾಜ ಗುರು ಪ್ರಶಸ್ತಿಗಳು ಅವರಿಗೆ ಲಭಿಸಿವೆ.
ಸದ್ಯ ವೀರೇಶ್ವರ ಪುಣ್ಯಾಶ್ರಮದ ಹಿಂಭಾಗದಲ್ಲಿರುವ ಪಂಚಾಕ್ಷರಿ ನಗರದ ಪುಟ್ಟ ಮನೆಯಲ್ಲಿ ಅವರು ವಾಸವಿದ್ದಾರೆ. ನಾಟಕ ಅಕಾಡಮಿ ಪ್ರಶಸ್ತಿ ಬಂದಿದೆ ಎನ್ನುವ ಮಾಹಿತಿಯೇ ಸಿದ್ದಪ್ಪ ಅವರಿಗೆ ಇರಲಿಲ್ಲ. ‘‘ಪ್ರಶಸ್ತಿ ಬಂದಿದೆಯಲ್ಲಾ’’ ಎಂದು ಅವರನ್ನು ಮಾತಿಗೆಳೆದ ನಂತರ, ಪತ್ರಿಕೆ ನೋಡಿ ಮಾಹಿತಿ ಖಚಿತಪಡಿಸಿ–ಕೊಂಡರು. ನಾಟಕ ಕಂಪೆನಿಯಿಂದ ತಿಂಗಳಿಗೆ ರೂ. 10 ಸಾವಿರ ವೇತನ ನೀಡಲಾಗುತ್ತಿದೆ. ಸರಕಾರದಿಂದ ರೂ. 1,500 ಮಾಸಾಶನ ಬರುತ್ತದೆ.
‘‘ಬರುವ ಸಂಬಳದಲ್ಲೇ ಹೊಟ್ಟೆ ಬಟ್ಟೆ ಕಟ್ಟಿ ಮಗಳನ್ನು ಓದಿಸುತ್ತಿದ್ದೇನೆ. ಅಕಾಡಮಿ ನನ್ನಂಥ ಕಲಾವಿದನನ್ನು ಗುರುತಿಸಿರುವುದು ಸಂತೋಷ ತಂದಿದೆ. ಬಿಡುವಿದ್ದಾಗ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತೇನೆ. ಶಿಷ್ಯರಲ್ಲಿ ಕೆಲವರು ಆಕಾ ಶವಾಣಿ, ದೂರದರ್ಶನ ಹಾಗೂ ವಿವಿಧ ಸಂ, ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರಕಾರ ಹಿರಿಯ ಕಲಾವಿದರಿಗೆ ಅಗತ್ಯ ಆರ್ಥಿಕ ನೆರವು ಒದಗಿಸಬೇಕಿದೆ’’ ಎನ್ನುತ್ತಾರೆ ಅವರು.
ಪ್ರತಿಫಲ ಎಂದುಕೊಳ್ಳುತ್ತೇನೆ...
ಪುಟ್ಟರಾಜರ ಆಶೀರ್ವಾದಿಂದ ನನಗೆ ಪ್ರಶಸ್ತಿ ಲಭಿಸಿದೆ. 54 ವರ್ಷ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಇದು ಪ್ರತಿಫಲ ಎಂದುಕೊಳ್ಳುತ್ತೇನೆ-ಸಿದ್ದಪ್ಪ ನಿಂಗಪ್ಪಗುಳ್ಳೆ
ಕಡು ಬಡತನದಲ್ಲಿ ಅರಳಿದ ಪ್ರತಿಭಾವಂತ ಕಲಾವಿದ...
ಕಡು ಬಡತನದಿಂದ ಬೆಳೆದು ಬಂದ ಸಿದ್ದಪ್ಪಒಳ್ಳೆಯ ಕಲಾವಿದ. 54 ವರ್ಷಗಳಿಂದ ಒಂದೇ ನಾಟಕ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕಲಾ ಸೇವೆ ಅನುಪಮ ಎನ್ನುತ್ತಾರೆ ಪಂಚಾಕ್ಷರ ಗವಾಯಿಗಳ ನಾಟಕ ಕಂಪನಿಯ ಮತ್ತೋರ್ವ ಕಲಾವಿದ ರೇವಣಸಿದ್ದಯ್ಯ ಹೊಸೂರಮಠ.