ಸಮಾನತೆಯೋ ಸಮವಸ್ತ್ರವೋ?
ಸಮಾನ ನಾಗರಿಕ ಸಂಹಿತೆ ಎಂದರೆ ತಲಾಖ್ ಒಂದೇ ಎಂಬಂತೆ ಬಿಂಬಿಸಲಾಗುತ್ತಿದೆ. ಸಮಾನ ನಾಗರಿಕ ಸಂಹಿತೆಯಲ್ಲಿ ವಾರಸುದಾರಿಕೆ ಪ್ರಶ್ನೆ, ದತ್ತು ತೆಗೆದುಕೊಳ್ಳುವುದು, ಆಸ್ತಿಯ ವಿಭಜನೆ, ವಿವಾಹ ಪದ್ಧತಿಗಳು, ವಿಚ್ಛೇದನವೂ ಸೇರಿದಂತೆ ಮಕ್ಕಳ ಪೋಷಣೆ, ಇನ್ನಿತರ ಅನೇಕ ವಿಚಾರಗಳು ಅಡಕವಾಗಿವೆ. ಏಕಾಏಕಿ ‘ಮಹಿಳಾವಾದಿ’ಗಳು?
ತಮ್ಮದೇ ಸಮುದಾಯದ, ಕುಟುಂಬದ ಹೆಣ್ಣು ಮಕ್ಕಳನ್ನು ಪಶುವಿಗಿಂತ ಕೀಳಾಗಿ ನಡೆಸಿಕೊಳ್ಳುವವರೆಲ್ಲಾ ಏಕಾಏಕಿ ‘ಮಹಿಳಾವಾದಿ’ಗಳಾಗಿ ಬಿಟ್ಟಿದ್ದಾರೆ. ಇದು ಹೇಗಿದೆಯೆಂದರೆ, ಇತ್ತೀಚೆಗೆ ಬಜರಂಗದಳದವರು ಮುಸ್ಲಿಂ ಹೆಣ್ಣು ಮಗಳಿಗೂ ಹಿಂದೂ ಪುರುಷನೊಬ್ಬನಿಗೆ ಮದುವೆ ಮಾಡಿಸಿ ನಾವು ಅಂತರ್ಧರ್ಮೀಯ ವಿವಾಹದ ಪರ ಎಂಬಂತೆ. ಮುಸ್ಲಿಂ ಹೆಣ್ಣುಮಕ್ಕಳಿಗಾಗಿ ತುಡಿಯುವ ಇವರ ಹೃದಯಗಳು ತಮ್ಮದೇ ಸಮುದಾಯದಲ್ಲಿರುವ ಮಹಿಳೆಯರನ್ನು ಕಂಡರೆ ತುಚ್ಛವಾಗಿ ನೋಡುತ್ತಾರೆ. ಒಂದು ಆಸಕ್ತಿಕರ ವಿಚಾರ ಗಮನಿಸಿ. ಆದಾಯ ತೆರಿಗೆ ವಿಚಾರದಲ್ಲಿ ಓರ್ವ ಹಿಂದೂ ವ್ಯಕ್ತಿಯ ಆದಾಯ ಮತ್ತು ಆತನ ಹಿಂದೂ ಅವಿಭಕ್ತ ಕುಟುಂಬದ ಆದಾಯಗಳನ್ನು ಬೇರೆ ಬೇರೆ ಎಂದು ಪರಿಗಣಿಸಲಾಗುತ್ತಿದೆ. ಇದರಿಂದಾಗಿ ಸಾವಿರಾರು ಕೋಟಿ ರೂ. ಆದಾಯ ತೆರಿಗೆ ಸರಕಾರಕ್ಕೆ ಅಧಿಕೃತವಾಗಿ ಸೇರುತ್ತಿಲ್ಲ. ಯಾವ ಹಿಂದೂ ಸಂಘಟನೆಯೂ ಇದು ದೇಶಕ್ಕಾಗುತ್ತಿರುವ ಅನ್ಯಾಯ ಎಂದು ಹೇಳುತ್ತಿಲ್ಲ. ಹಿಂದೂ ಹೆಣ್ಣು ಮಕ್ಕಳಿಗೆ ಆಸ್ತಿಯ ಹಕ್ಕು ಸಮಾನವಾಗಿರಬೇಕು ಎಂದು ವಾದಿಸಿ ಬಾಬಾ ಸಾಹೇಬರು 1950ರಲ್ಲೇ ರಾಜೀನಾಮೆ ಇತ್ತರೂ, ಈ ಹಕ್ಕು ತಮ್ಮದಾಗಿಸಿಕೊಳ್ಳಲು 2005ರ ವರೆಗೆ ಕಾಯಬೇಕಾಯಿತು. ಸ್ವಾತಂತ್ರ್ಯ ಕಸಿಯುವ ಕೈಗಳು ಎಲ್ಲೆಡೆಯೂ ಇವೆ
ಕಾನೂನು ಏನೇ ಹೇಳಲಿ, ಇಂದು ಕಾರಣವಿಲ್ಲದೆ ಹೆಂಡತಿಯನ್ನು ಬೀದಿಗೆ ಹಾಕುವುದು, ಮಕ್ಕಳನ್ನು ತೊರೆಯುವುದು, ಬಹುಪತ್ನಿತ್ವ, ವಿವಾಹ ಬಾಹಿರ ಸಂಬಂಧಗಳು, ಇತ್ಯಾದಿಗಳು ಹಿಂದೂ ಮುಸ್ಲಿಂ ಸೇರಿದಂತೆ ಎಲ್ಲ ಧರ್ಮೀಯರಲ್ಲೂ ಇವೆ. ಹೆಣ್ಣುಮಕ್ಕಳಿಗೆ ಸಮಾನ ವಿದ್ಯಾಭ್ಯಾಸ, ಆರ್ಥಿಕ ಹಕ್ಕು, ದುಡಿಯುವ ಸ್ವಾತಂತ್ರ್ಯ ಕಸಿಯುವ ಕೈಗಳು ಎಲ್ಲೆಡೆಯೂ ಇವೆ. ಹಿಂದೂಗಳು ತಮ್ಮ ವೈಯಕ್ತಿಕ ಕಾನೂನನ್ನು ಸರಿಯಾಗಿ ಪಾಲಿಸಿಕೊಂಡಿ ದ್ದರೆ, ಖಾಪ್ ಪಂಚಾಯತ್, ಮರ್ಯಾದೆಗೇಡಿ ಹತ್ಯೆಗಳು, ಮಲ ಹೊರುವ ಪದ್ಧತಿ, ಅಸ್ಪೃಶ್ಯತೆ ಇತ್ಯಾದಿಗಳಿಗೆ ನಮ್ಮ ಸಮಾಜದಲ್ಲಿ ಜಾಗವೇ ಇರುತ್ತಿರಲಿಲ್ಲ. ಹಿಂದೂ ಕಾನೂನು ಒಂದೇ ಇಲ್ಲ. ಕೇರಳ ಬಂಗಾಳದಲ್ಲಿ ಮತ್ತು ನಮ್ಮದೇ ರಾಜ್ಯದ ದಕ್ಷಿಣ ಕನ್ನಡದಲ್ಲಿ ಬೇರೆ ವೈಯಕ್ತಿಕ ಕಾನೂನಿದೆ. ಅವರು ಹಿಂದೂಗಳಲ್ಲವೇ? ಹಿಂದೂ ಕಾನೂನಿನಲ್ಲೇ ದಯಭಾಗ ಮತ್ತು ಮಿತಾಕ್ಷರ ಪದ್ಧತಿಗಳಲ್ಲಿ ಗಣನೀಯ ಭೇದಗಳಿವೆ. ನೈಋತ್ಯ ರಾಜ್ಯಗಳು, ಪರಿಶಿಷ್ಟ ಪಂಗಡಗಳು, ಬುಡಕಟ್ಟು ಜನಾಂಗಗಳಲ್ಲಿ ತಮ್ಮದೇ ರೀತಿ ರಿವಾಜುಗಳಿವೆ. ದೇಶದಲ್ಲಿರುವ ಎಲ್ಲರಿಗೂ ಒಂದೇ ಸಮವಸ್ತ್ರ ತೊಡಿಸಲು ಹೊರಟಂತೆ ಒಂದೇ ಸಂಹಿತೆ ಮಾಡಲು ಹೊರಟರೆ ಅದು ಸಂವಿಧಾನದ ಮೂಲಭೂತ ಹಕ್ಕಾಗಿರುವ ಧಾರ್ಮಿಕ ಸ್ವಾತಂತ್ರ್ಯಕ್ಕೆ (25ನೆ ಪರಿಚ್ಛೇದ) ಚ್ಯುತಿಯಾಗುತ್ತದೆ. ಸಮುದಾಯಗಳ ಧಾರ್ಮಿಕ ಸ್ವಾತಂತ್ರ್ಯ ಮೂಲಭೂತ ಹಕ್ಕಾದರೆ, ಸಮಾನ ನಾಗರಿಕ ಸಂಹಿತೆ ಸಂವಿಧಾನದ ನಿರ್ದೇಶನ ತತ್ವ ಮತ್ತು ಆಶಯ ಮಾತ್ರ. ಮೂಲಭೂತ ಹಕ್ಕಿಗೂ ಆಶಯಕ್ಕೂ ತಾಕಲಾಟ ಬಂದಾಗ ಮೂಲಭೂತ ಹಕ್ಕೇ ಪ್ರಮುಖವಾಗುತ್ತದೆ. ಕಾನೂನಿನ ದೃಷ್ಟಿಯಲ್ಲಿ ಹಿಂದೂಗಳೇ ಎನಿಸಿಕೊಂಡಿರುವ ಬೌದ್ಧರು, ಸಿಖ್ಖರು ಮತ್ತು ಜೈನರ ಆಚರಣೆ ಮತ್ತು ಸಂಪ್ರದಾಯಗಳಲ್ಲಿ ಅನೇಕಾನೇಕ ಮೂಲಭೂತ ವಿರೋಧಾಭಾಸಗಳಿವೆ. ತಲಾಖ್ ಬಗ್ಗೆ ಅಣಿಮುತ್ತುದುರಿಸುವ ಅನೇಕರು ಇತ್ತೀಚೆಗೆ 13 ವರ್ಷದ ಜೈನ ಬಾಲಕಿ ಧಾರ್ಮಿಕ ಉಪವಾಸ ಮಾಡಿ ಅಸುನೀಗಿದಾಗ ಚಕಾರವೆತ್ತಲಿಲ್ಲ! ಐತಿಹಾಸಿಕ ಕಾರಣಗಳಿಂದ ನಮ್ಮ ದೇಶದಲ್ಲಿ ಧಾರ್ಮಿಕ ಅಸಹಿಷ್ಣುತೆ ಹೊಗೆಯಾಡುತ್ತಿದೆ. ಇತ್ತೀಚೆಗೆ ಇದು ಇನ್ನಷ್ಟು ಜಾಸ್ತಿಯಾಗಿದೆ. ಸಮುದಾಯಗಳ ನಡುವಿನ ಕಂದರಗಳು ಇನ್ನಷ್ಟು ಆಳಕ್ಕೂ ಹೋಗುತ್ತಿವೆ, ಉದ್ದಕ್ಕೂ ಸಾಗುತ್ತಿವೆ. ಇದನ್ನು ಎಲ್ಲ ಧರ್ಮಗಳ ಮೂಲಭೂತವಾದಿಗಳು ತಮ್ಮ ಸ್ವಾರ್ಥಕ್ಕೆ ದುರುಪಯೋಗ ಪಡಿಸಿಕೊಳುತ್ತಿದ್ದಾರೆ. ‘ಹಿಂದೂಗಳೆಲ್ಲಾ ಒಂದೇ’ ಎಂದಾದರೆ?
ಧರ್ಮಗಳ ನಡುವೆ ಮಾತ್ರವಲ್ಲ, ಜಾತಿಗಳ ನಡುವಿನ ಕಂದರಗಳೂ ಹಿರಿದಾಗುತ್ತಿವೆ. ಅಸ್ಪೃಶ್ಯರ ಮೇಲಿನ ದೌರ್ಜನ್ಯಗಳು ಅವರನ್ನು ಇನ್ನಷ್ಟು ಅಸುರಕ್ಷತೆಯೆಡೆ ದೂಡುತ್ತಿದ್ದರೆ, ಬಲಾಢ್ಯ ಕೋಮುಗಳು ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿವೆ. ಇದಕ್ಕೆ ದೇಶದ ಎರಡೂ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಕೈಲಾದ ಸಹಾಯ ಮಾಡುತ್ತಿವೆ. ರಾಜಕೀಯ ಕೈವಾಡವಿಲ್ಲದಿದ್ದರೆ, ಮಹಾರಾಷ್ಟ್ರದಲ್ಲಿ ಮರಾಠರು, ಹರ್ಯಾಣದ ಜಾಟರು ಮತ್ತು ಗುಜರಾತಿನ ಪಟೇಲರು ಇಷ್ಟು ಬೃಹತ್ ಸಂಖ್ಯೆಯಲ್ಲಿ ಸೇರಿ ಶಕ್ತಿ ಪ್ರದರ್ಶನ ಮಾಡಲು ಸಾಧ್ಯವಾಗುತ್ತಿತ್ತೇ? ಹಿಂದೂಗಳೆಲ್ಲರೂ ಒಂದು ಎಂದು ವಾದಿಸಿ ಸಂಘಪರಿವಾರದ ಬೆನ್ನೆಲುಬಾಗಿ ನಿಲ್ಲುವ ಈ ಜಾತಿಗಳು, ಅಸ್ಪೃಶ್ಯರು ತಮ್ಮ ಹಕ್ಕುಗಳನ್ನು ಕೇಳಿದರೆ ತುಳಿಯುತ್ತಾರೆ. ಇವರು ಹೇಳಿದ ಹಾಗೆ ‘ಹಿಂದೂಗಳೆಲ್ಲಾ ಒಂದೇ’ ಎಂದಾದರೆ ಯಾವ ಜಾತಿಗೆ ಪ್ರಾತಿನಿಧ್ಯ ಸಿಕ್ಕರೆ ಇವರಿಗೇನು? ತಮ್ಮ ಜಾತಿಯನ್ನು ಮಾತ್ರ ಮೀಸಲಾತಿಗೆ ಪರಿಗಣಿಸಬೇಕು ಎಂದು ಏಕೆ ಕೇಳುತ್ತಾರೆ? ಹಿಂದೂಗಳಲ್ಲೇ ಪ್ರಾತಿನಿಧ್ಯದಂತಹ ಸಂವಿಧಾನಾತ್ಮಕ ಮತ್ತು ಮೂಲಭೂತ ವಿಚಾರದಲ್ಲಿಯೇ ಒಮ್ಮತವಿಲ್ಲದಿದ್ದರೆ ನಾಗರಿಕ ಸಂಹಿತೆಯಲ್ಲಿ ಒಗ್ಗಟ್ಟು ಬರಲು ಸಾಧ್ಯವೇ? ಪ್ರತಿ ಹಿಂದೂ ಹೆಣ್ಣು ಮಕ್ಕಳೂ ಹತ್ತು ಮಕ್ಕಳನ್ನು ಹೆರಬೇಕು ಎಂದು ಹೆಣ್ಣುಮಕ್ಕಳ ಗರ್ಭವನ್ನು ತಮ್ಮ ಗುತ್ತಿಗೆಯೆಂದುಕೊಂಡಿರುವ ತಥಾಕಥಿತ ಧರ್ಮರಕ್ಷಕರಿಗೆ ಮುಸ್ಲಿಮರ ವಿಚಾರದಲ್ಲಿ ಮಾತನಾಡುವ ಹಕ್ಕಿದೆಯೇ? ನಿಜ. ಹೆಣ್ಣು ಮಕ್ಕಳಿಗೆ ಸಮಾನ ಅವಕಾಶಗಳನ್ನು ಯಾವ ಧರ್ಮ ದಿಂದಲೂ ನಿರೀಕ್ಷಿಸುವಂತಿಲ್ಲ. ಆಯಾ ಐತಿಹಾಸಿಕ ಕಾಲಘಟ್ಟಗಳ ವಾಸ್ತವ ಗಳಾದ ಧರ್ಮಗಳು ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಇದು ನಿರಂತರ ಪ್ರಕ್ರಿಯೆ. ನಮ್ಮಲ್ಲಿ ಜಾತಿ ಹೋಗಿದೆಯೇ? ಇನ್ನಿಷ್ಟು ಬಲವಾಗಿದೆ. ಸಿಖ್ಖರಿಗೆ ಆಯುಧಗಳೇಕೆ ಬೇಕು? ಅವರು ಪಗಡಿ ಧರಿಸುವುದಿಲ್ಲವೇ? ಜೈನರ ಧರ್ಮ ಗುರುಗಳು ವಿವಸ್ತ್ರರೇಕೆ? ಮುಸ್ಲಿಮರ ಆಚರಣೆಗಳನ್ನಿಟ್ಟುಕೊಂಡು ಮಾತ್ರ ಮಾತನಾಡುವ ನಾವು ನಮ್ಮ ತಟ್ಟೆಯಲ್ಲಿ ಬಿದ್ದದ್ದನ್ನು ನೋಡು ವುದಿಲ್ಲ. ಅಸ್ಪೃಶ್ಯತೆ ಆಚರಿಸುವುದನ್ನು ಧಾರ್ಮಿಕತೆಯ ಹೆಸರಿನಲ್ಲಿ ಸಮರ್ಥಿಸುವವರಿಗೆ, ಪಂಕ್ತಿಭೇದ ಮಾಡುವವರಿಗೆ, ವಿಧವೆಯರ ಹಕ್ಕನ್ನು ಕಸಿದವರಿಗೆ, ವರದಕ್ಷಿಣೆ ಪದ್ಧತಿ ಆಚರಿಸುವವರಿಗೆ, ಹೆಣ್ಣು ಭ್ರೂಣ ಹತ್ಯೆ ಮಾಡುವವರಿಗೆ, ಬೇರೆಯವರ ಧರ್ಮದ ಬಗ್ಗೆ ಮಾತನಾಡುವ ಯಾವ ಹಕ್ಕಿದೆ? ಚುನಾವಣಾ ‘ಸಂಹಿತೆ’
ಮಹಿಳೆಯರ ಹಕ್ಕನ್ನು ರಕ್ಷಿಸಲು ಮಾತ್ರ ನಾಗರಿಕ ಸಂಹಿತೆಯ ಪ್ರಸ್ತಾವನೆ ಬಂದಿದೆ ಎಂದರೆ ಯಾರೂ ನಂಬುವ ಸ್ಥಿತಿಯಲ್ಲಿಲ್ಲ. ಉತ್ತರ ಪ್ರದೇಶದ ಚುನಾವಣೆಗೆ ಯಾವುದಾದರೂ ಭಾವನಾತ್ಮಕ ವಿಚಾರಗಳು ರಾಜಕೀಯ ಪಕ್ಷಗಳಿಗೆ ಬೇಕಾಗುತ್ತವೆ. ಮೂಲ ಉದ್ದೇಶಗಳು ಮೇಲ್ನೋಟಕ್ಕೆ ಕಾಣಸಿಗದಿರುವಂತಿರುವ ನಾಗರಿಕ ಸಂಹಿತೆಯಂಥ ವಿಷಯಗಳನ್ನು ಉತ್ತರ ಪ್ರದೇಶದಂಥ ಮಹತ್ವಪೂರ್ಣ ರಾಜ್ಯದ ಚುನಾವಣಾ ಸಂದರ್ಭದಲ್ಲಿ ಪ್ರಸ್ತಾಪಿಸಿದರೆ ಸಮಾಜ ಹೋಳಾಗುತ್ತದೆ ಎಂಬುದು ಕೇಂದ್ರ ಸರಕಾರಕ್ಕೂ ಗೊತ್ತಿದೆ. ಹಾಗೆಯೆ ಮುಸ್ಲಿಮರ ಹೆಸರಿನಲ್ಲಿ ಓಟ್ ಬ್ಯಾಂಕ್ ರಾಜಕಾರಣ ಮಾಡುವವರಿಗೂ ಇದರಿಂದ ಅನುಕೂಲ. ಹಾಗಾಗಿ ಇಲ್ಲಿ ರಾಜಕೀಯವೂ ಸಾಕಷ್ಟು ಬೆರೆತುಕೊಂಡಿದೆ ಎಂಬುದರಲ್ಲಿ ಸಂಶಯವಿಲ್ಲ. ಮುಸ್ಲಿಂ ಹೆಣ್ಣು ಮಕ್ಕಳ ಸಮಸ್ಯೆಗಳಿಗೆ ಸಮುದಾಯದಿಂದ ಒಳಗಿಂದಲೇ ಸ್ಪಂದನೆ ಸಿಗಬೇಕು. ನಿಜ. ಮುಸ್ಲಿಮರ ಬಗ್ಗೆ ಕಾಳಜಿಯಿರುವ ಸರಕಾರಗಳು ಮೊದಲು ಸಾಚಾರ್ ವರದಿ ಜಾರಿ ಮಾಡಲಿ. ಭಾಜಪ ಇದನ್ನು ಜಾರಿ ಮಾಡುವುದಿಲ್ಲವೆಂದು ಮೊದಲೇ ಹೇಳಿತ್ತು. ಅದು ಹೋಗಲಿ. ಹತ್ತು ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷ ಸಾಚಾರ್ ವರದಿಯನ್ನು ಏಕೆ ಜಾರಿ ಮಾಡಲಿಲ್ಲ? ಮುಸ್ಲಿಮರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ಹೆಚ್ಚಿದರೆ, ಅವರ ಸಮಾಜದೊಳಗಡೆಯಿಂದಲೇ ಸಮಾನತೆಯ ಕೂಗು ಕೇಳಿಬರುತ್ತದೆ. ಅದು ಸಹಜವಾಗಿರುತ್ತದೆ; ಸ್ವಾಭಾವಿಕವಾಗಿರುತ್ತದೆ. ಮುಂದಿನದ್ದು ಆಮೇಲೆ
ಹಿಂದೂ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಅವಕಾಶ ಕಲ್ಪಿಸಲು ಹೊರಟಾಗ ಬಾಬಾ ಸಾಹೇಬರನ್ನು ಬಲಿ ತೆಗೆದುಕೊಂಡ, 2005ರ ವರೆಗೂ ಹೆಣ್ಣು ಮಕ್ಕಳಿಗೆ ಸಮಾನತೆ ಕೊಡಿಸಲು ಬಿಡದ ಮನಸ್ಥಿತಿಗಳೇ ಇಂದು ಮುಸ್ಲಿಂ ಹೆಣ್ಣು ಮಕ್ಕಳನ್ನು ಮುಂದೆ ಮಾಡಿ ಸಮಾನತೆಯ ಹೆಸರಿನಲ್ಲಿ ತಮ್ಮದೇ ಸಮವಸ್ತ್ರವನ್ನು ತೊಡಿಸಿ ಸಮಾನತೆ ಸ್ಥಾಪಿಸುವ ಸೋಗುಹಾಕುತ್ತಿವೆ. ಮೊದಲು ಇವರು ಯಾರನ್ನು ಹಿಂದೂಗಳು ಎಂದು ಹೇಳುತ್ತಾರೋ ಅವರೆಲ್ಲರನ್ನೂ ಮುಟ್ಟಿಸಿಕೊಳ್ಳಲಿ; ಮುಂದಿನದ್ದು ಆಮೇಲೆ. ಸಮವಸ್ತ್ರ ಯಾವ ಬಣ್ಣದ್ದಾಗಿರುತ್ತದೆ?
ಸಮಗ್ರ ಸಮಾಜವೇ ಮನುವಾದಿ ವ್ಯವಸ್ಥೆಯಲ್ಲಿ ಅದ್ದಿ ಹೋದಾಗ ಶಾಸನ ಮಾತ್ರದಿಂದಲೇ ಸಮಾನತೆ ಸಾಧ್ಯವಿಲ್ಲ. ಅದರಲ್ಲೂ ಶಾಸನ ಮಾಡುವ ಅಧಿಕಾರವೇ ಮನುವಾದಿಗಳ ಕೈಯಲ್ಲಿದ್ದರೆ, ಯಾರೂ ಅವರನ್ನು ನಂಬುವುದಿಲ್ಲ. ಒಂದು ಪಕ್ಷ ಮುಸ್ಲಿಮರು ಒಪ್ಪಿದರೂ, ಸಮಾನ ನಾಗರಿಕ ಸಂಹಿತೆಯಲ್ಲಿ ಹಿಂದೂ ಅವಿಭಕ್ತ ಕುಟುಂಬದ ಆದಾಯ ತೆರಿಗೆ ವಿನಾಯತಿಗಳು ಹೋದರೆ, ಹಿಂದೂ ಬಂಡವಾಳಶಾಹಿಗಳೇ ಇದಕ್ಕೆ ಕಲ್ಲು ಹಾಕುತ್ತಾರೆ. ಒಬ್ಬ ವ್ಯಕ್ತಿಗೆ ಒಂದೇ ಮತವಿದ್ದರೂ, ಒಬ್ಬ ವ್ಯಕ್ತಿ ಒಂದೇ ಮೌಲ್ಯವಿರಲು ಈ ಮನುವಾದಿ ವ್ಯವಸ್ಥೆಯಡಿ ಸಾಧ್ಯವೇ ಇಲ್ಲ.