ಅಕ್ರಮ ಸಾಗಾಟದ ಮರದ ದಿಮ್ಮಿ ವಶ
ವಿಟ್ಲ, ನ.4: ಕೇರಳಕ್ಕೆ ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿದ್ದ 70 ಸಾವಿರ ರೂ. ವೌಲ್ಯದ ಮರದ ದಿಮ್ಮಿ ಸಹಿತ ಲೋಡ್ ಮಾಡಿದ್ದ ಟೆಂಪೊವೊಂದನ್ನು ಕೇಪು ಗ್ರಾಮದ ಕಲ್ಲುರ್ಟಿಯಡ್ಕದಲ್ಲಿ ವಿಟ್ಲ ಪೊಲೀಸರು ಶುಕ್ರವಾರ ವಶಕ್ಕೆ ಪಡೆದುಕೊಂಡಿದ್ದಾರೆ. ಪುಣಚ ಮೂಲದಿಂದ ಕನ್ಯಾನ ಮಾರ್ಗವಾಗಿ ಬಾಕ್ರಬೈಲು ಮೂಲಕ ಕೇರಳಕ್ಕೆ ಅಕ್ರಮವಾಗಿ ಹಲಸು, ಹೆಬ್ಬಲಸು, ಮ್ಯಾಂಜಿಯಮ್ ಜಾತಿಯ ಮರಗಳ ದಿಮ್ಮಿಯನ್ನು ಟೆಂಪೊದಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದಾಗ ಟೆಂಪೊವನ್ನು ರಸ್ತೆಯಲ್ಲೇ ಬಿಟ್ಟು ದಂಧೆಕೋರರು ಪರಾರಿಯಾಗಿದ್ದಾರೆ. ಲಾರಿಯಲ್ಲಿ ಸುಮಾರು 23 ವಿವಿಧ ಜಾತಿಯ ಬೇರೆ ಬೇರೆ ಗಾತ್ರದ ದಿಮ್ಮಿಗಳು ಪತ್ತೆಯಾಗಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story