ಸ್ತ್ರೀಭ್ರೂಣ ಹತ್ಯೆ ಭಾರತದ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ
ಲಿಂಗ ಆಯ್ಕೆಯ ವಿರುದ್ಧ ಹೋರಾಡುವ ಭಾರತದ ಪ್ರಯತ್ನಕ್ಕೆ ಕೇಂದ್ರೀಯ ಮೇಲ್ವಿಚಾರಣಾ ಕಾರ್ಯವಿಧಾನದ ಕೊರತೆಂದಾಗಿ ಹಿನ್ನಡೆಯುಂಟಾಗಿದೆ. ಪ್ರಸ್ತುತ ಹೆಣ್ಣುಭ್ರೂಣ ಹತ್ಯೆಯ ವಿರುದ್ಧ ಹೋರಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಪಿಸಿ ಹಾಗೂ ಪಿಎನ್‌ಡಿಟಿ ಕಾಯ್ದೆಯನ್ನು ಜಾರಿಗೊಳಿಸಿದೆ. ಆದರೆ ವೈದ್ಯಕೀಯ ಲಾಬಿಯ ಹಿತಾಸಕ್ತಿಗಳು ಕೂಡಾ ಸಚಿವಾಲಯದ ಮೇಲೆ ಪ್ರಭಾವ ಬೀರುತ್ತಿವೆ.
‘ಪಿಸಿ ಹಾಗೂ ಪಿಎನ್‌ಡಿಟಿ ಕಾಯ್ದೆಯ ಸ್ಥಿತಿಗತಿ: ಸ್ತ್ರೀಭ್ರೂಣ ಹತ್ಯೆ ವಿರುದ್ಧದ ಸಮರದಲ್ಲಿ ಸೋಲಪ್ಪುತ್ತಿರುವ ಭಾರತ’ ಎಂಬ ತನ್ನ 290 ಪುಟಗಳ ವರದಿಯನ್ನು ಮಾನವಹಕ್ಕುಗಳ ಏಶ್ಯ ಕೇಂದ್ರವು ಇತ್ತೀಚೆಗೆ ಬಿಡುಗಡೆಗೊಳಿಸಿದೆ. 1994ರಲ್ಲಿ ಜಾರಿಗೊಂಡ ‘ಗರ್ಭಧಾರಣೆ ಪೂರ್ವ ಹಾಗೂ ಪ್ರಸವ ಪೂರ್ವ ದೈಹಿಕ ಪರೀಕ್ಷೆ ತಂತ್ರಜ್ಞಾನ (ಪಿಸಿ ಹಾಗೂ ಪಿಎನ್‌ಡಿಟಿ) ಕಾಯ್ದೆ’ ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿದೆಯೆಂದು ತಿಳಿಸುವ ಸಮಗ್ರ ಅಧ್ಯಯನ ವರದಿ ಇದಾಗಿದೆ.
ಈ ವರದಿಯ ಕೆಲವು ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.
1994ರಿಂದ 2014ರ ನಡುವಿನ ಅವಧಿಯಲ್ಲಿ ನಡೆದ ಶಿಶುಹತ್ಯೆ ಅಪರಾಧದ ಬಹುತೇಕ ಪ್ರಕರಣಗಳನ್ನು ಪಿಸಿ ಹಾಗೂ ಪಿಎನ್‌ಡಿಟಿ ಕಾಯ್ದೆಯ ಬದಲಿಗೆ ಭಾರತೀಯ ದಂಡಸಂಹಿತೆ ಯಡಿ ದಾಖಲಿಸಿ ಕೊಳ್ಳಲಾಗಿತ್ತು. ಇದು ‘ಪಿಸಿ ಹಾಗೂ ಪಿಎನ್‌ಡಿಟಿ’ ಕಾಯ್ದೆಯ ಅನುಷ್ಠಾನದಲ್ಲಿ ಆಗಿರುವ ಘೋರ ವೈಫಲ್ಯವನ್ನು ಅನಾವರಣಗೊಳಿಸುತ್ತದೆ. ಭಾರತವು 1994-2014ರ ಮಧ್ಯೆ ಭಾರತೀಯ ದಂಡಸಂಹಿತೆಯ ಸೆಕ್ಷನ್ 315 ಹಾಗೂ 316ರಡಿಯಲ್ಲಿ ಶಿಶುಹತ್ಯೆಯ 2,266 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರೆ, ಪಿಸಿ ಹಾಗೂ ಪಿಎನ್‌ಡಿಟಿ ಕಾಯ್ದೆಯಡಿ 2,021 ಪ್ರಕರಣಗಳನ್ನು ದಾಖಲಿಸಿತ್ತು.
ಲಿಂಗ ಆಯ್ಕೆಯ ಕಾರಣದಿಂದಾಗಿ 1991ರಿಂದ 2011ರ ಅವಧಿಯಲ್ಲಿ ಒಟ್ಟು 2.55 ಕೋಟಿ ಹೆಣ್ಣು ಮಕ್ಕಳು ಅಂದರೆ ಪ್ರತಿ ವರ್ಷ 10.30 ಲಕ್ಷ ಹೆಣ್ಣು ಭ್ರೂಣಗಳು ನಾಪತ್ತೆಯಾಗಿವೆ. 1994ರಿಂದ 2014ರ ಮಧ್ಯೆ ಪಿಸಿ ಹಾಗೂ ಪಿಎನ್‌ಡಿಟಿ ಕಾಯ್ದೆಯಡಿ ಕೇವಲ 2,021 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಲಿಂಗ ಆಯ್ಕೆಯ 12,614 ಪ್ರಕರಣಗಳ ಪೈಕಿ ಸರಾಸರಿ ಕೇವಲ ಒಂದು ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಲಾಗಿದೆ. 1994-2014ರ ಅವಧಿಯಲ್ಲಿ ಕೇವಲ 206 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ. ಇದರಿಂದಾಗಿ ಲಿಂಗ ಆಯ್ಕೆಯ ಪ್ರತಿ 1,23,755 ಪ್ರಕರಣಗಳಲ್ಲಿ ಕೇವಲ 1 ಪ್ರಕರಣದಲ್ಲಿ ಮಾತ್ರವೇ ಶಿಕ್ಷೆಯಾಗಿದೆಯೆಂಬುದು ಮನದಟ್ಟಾಗುತ್ತದೆ.
20 ರಾಜ್ಯಗಳ ಪೈಕಿ 17 ರಾಜ್ಯಗಳಲ್ಲಿ ಹಾಗೂ ಏಳು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಆರರಲ್ಲಿ, ಪಿಸಿಹಾಗೂ ಪಿಎನ್‌ಡಿಟಿ ಕಾಯ್ದೆಯಡಿ ಯಾವುದೇ ಪ್ರಕರಣ ದಾಖಲಾಗಿಲ್ಲ ಅಥವಾ ಯಾವುದೇ ಆರೋಪಿಗೆ ಶಿಕ್ಷೆ ವಿಧಿಸಲು ಸಾಧ್ಯವಾಗಿಲ್ಲ. ಈ ಎಲ್ಲಾ ರಾಜ್ಯಗಳು ‘‘ಬೇಟಿ ಬಚಾವೋ ಬೇಟಿ ಪಡಾವೋ’’ ಕಾರ್ಯಕ್ರಮದ ವ್ಯಾಪ್ತಿಗೊಳಪಟ್ಟಿವೆ. 0-6 ವರ್ಷ ವಯಸ್ಸಿನೊಳಗಿನ ಮಕ್ಕಳ ಲಿಂಗಾನುಪಾತದಲ್ಲಿ ಕುಸಿತವುಂಟಾಗಿರುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ‘‘ಬೇಟಿ ಪಡಾವೋ ಬೇಟಿ ಬಚಾವೋ’ ಆಂದೋಲನ ಕಾರ್ಯಕ್ರಮವನ್ನು ಆರಂಭಿಸಿದ್ದರು. 1994ರಿಂದೀಚೆಗೆ ಪಿಸಿ ಹಾಗೂ ಪಿಎನ್‌ಡಿಟಿ ಕಾಯ್ದೆಯ ಒಂದೇ ಒಂದು ಪ್ರಕರಣದಲ್ಲೂ ಶಿಕ್ಷೆಯಾಗದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೆಂದರೆ, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಕೇರಳ, ಮಣಿಪುರ, ಮೇಘಾಲಯ,ಮಿರೆರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ, ದಾದ್ರಾ-ನಗರ್‌ಹವೇಲಿ, ದಿಯು-ದಾಮನ್, ಲಕ್ಷದ್ವೀಪ ಹಾಗೂ ಪುದುಚೇರಿ, ಆಂಧ್ರಪ್ರದೇಶ, ಚತ್ತೀಸ್‌ಗಢ, ಗೋವಾ, ಜಾರ್ಖಂಡ್, ಕರ್ನಾಟಕ, ತಮಿಳುನಾಡು, ಉತ್ತರಖಂಡ ಹಾಗೂ ಪಶ್ಚಿಮಬಂಗಾಳ ಮತ್ತು ಚಂಡೀಗಢ. ಇವುಗಳ ಪೈಕಿ ಅರುಣಾಚಲಪ್ರದೇಶ, ಹಿಮಾಚಲ ಪ್ರದೇಶ, ಕೇರಳ, ಮಣಿಪುರ, ಮೇಘಾಲಯ, ಮಿರೆರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ, ದಾದ್ರಾ ಮತ್ತು ನಗರ್ ಹವೇಲಿ, ದಿಯು-ದಾಮನ್, ಲಕ್ಷದ್ವೀಪ, ಪುದುಚೇರಿಗಳಲ್ಲಿ 1994ರಿಂದೀಚೆಗೆ ಪಿಸಿ ಹಾಗೂ ಪಿಎನ್‌ಡಿಟಿ ಕಾಯ್ದೆಯಡಿ ಒಂದೇ ಒಂದು ಪ್ರಕರಣ ಕೂಡಾ ದಾಖಲಾಗಿಲ್ಲ.
2011ರ ಜನಗಣತಿಯಲ್ಲಿ 919ರಷ್ಟಿದ್ದ ಶಿಶು ಲಿಂಗಾನುಪಾತವು ಪ್ರಸ್ತುತ 900ಕ್ಕೆ ಕುಸಿದಿರುವುದಾಗಿ ಮಾದರಿ ನೋಂದಣಿ ವ್ಯವಸ್ಥೆ (ಎಸ್‌ಆರ್‌ಎಸ್) ಬಿಡುಗಡೆಗೊಳಿಸಿರುವ ಅಂಕಿಅಂಶಗಳು ವರದಿ ಮಾಡಿವೆ.
ಲಿಂಗ ಆಯ್ಕೆಯಿಂದಾಗಿ ನಾಪತ್ತೆಯಾಗಿರುವ ಹೆಣ್ಣು ಶಿಶುಗಳ ನಿಖರ ಸಂಖ್ಯೆಯ ಬಗ್ಗೆ ಸರಕಾರ ಪ್ರಕಟಿಸಿರುವ ವರದಿಗಳು ಸಮರ್ಪಕವಾಗಿಲ್ಲ. ಅಂಕಿಅಂಶ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ‘‘2012ರಲ್ಲಿ ಭಾರತದ ಮಕ್ಕಳು’’ ಕುರಿತ ಅಂಕಿಅಂಶ ವರದಿಯೊಂದನ್ನು ಪ್ರಕಟಿಸಿತ್ತು. 2001ರ ಜನಗಣತಿಯ ಪ್ರಕಾರ 0-6 ವರ್ಷ ವಯಸ್ಸಿನೊಳಗಿನ 7.88 ಕೋಟಿ ಹಾಗೂ 2011ರ ಜನಗಣತಿಯ ಪ್ರಕಾರ 7.58 ಕೋಟಿ ಮಕ್ಕಳ ಜನಸಂಖ್ಯೆಯನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿತ್ತು.. 2001ಕ್ಕೆ ಹೋಲಿಸಿದರೆ 2011ರಲ್ಲಿ ಸುಮಾರು 30 ಲಕ್ಷ ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆಂದು ವರದಿ ತಿಳಿಸಿತ್ತು. ಆದರೆ ಎರಡು ವಿಷಯಗಳಲ್ಲಿ ಅದು ಸಂಪೂರ್ಣ ತಪ್ಪಾಗಿದೆ. ಮೊದಲನೆಯದಾಗಿ 2001ರಲ್ಲಿ 102.8 ಕೋಟಿಯಷ್ಟಿದ್ದ ಜನಸಂಖ್ಯೆಯು 2011ರಲ್ಲಿ 120.8 ಕೋಟಿಗೆ ಏರಿರುವುದನ್ನು ವರದಿಯು ಗಣನೆಗೆ ತೆಗೆದುಕೊಂಡಿಲ್ಲ. ವಾಸ್ತವಿಕವಾಗಿ ಈ ಜನಗಣತಿಯ ಅಂಕಿಅಂಶಗಳನ್ನು ಗಮನಿಸಿದಾಗ 2001ರಿಂದ 2011ರ ನಡುವಿನ ಅವಧಿಯಲ್ಲಿ ವಾಸ್ತವಿಕವಾಗಿ ಹೆಣ್ಣು ಮಕ್ಕಳು ಅಧಿಕ ಸಂಖ್ಯೆಯಲ್ಲಿ ಜನಿಸಿರುವುದು ಖಚಿತ. ಎರಡನೆಯದಾಗಿ ಜನಗಣತಿಯನ್ನು ಪ್ರತಿ ಹತ್ತು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ ಹಾಗೂ ಶಿಶು ಲಿಂಗಾನುಪಾತವು 0-6 ವರ್ಷದೊಳಗಿನ ಶಿಶುಗಳನ್ನು ಮಾತ್ರ ಒಳಗೊಂಡಿರುತ್ತದೆ ಹಾಗೂ ಅದು 07-10 ವರ್ಷದ ವಯೋಗುಂಪಿನ ಮಕ್ಕಳನ್ನು ಹೊರಗಿಡುತ್ತದೆ. ಇದರಿಂದಾಗಿ ಇಡೀ ದಶಕದಲ್ಲಿ ನಾಪತ್ತೆಯಾದ ಹೆಣ್ಣು ಶಿಶುಗಳ ನಿಖರ ಸಂಖ್ಯೆಯನ್ನು ಈ ವರದಿಯು ಸಮರ್ಪಕವಾಗಿ ಪ್ರತಿಬಿಂಬಿಸುವುದಿಲ್ಲ.
ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯು ಪಿಸಿ ಹಾಗೂ ಪಿಎನ್‌ಡಿಟಿ ಕಾಯ್ದೆಗೆ 2016ರ ಮಾರ್ಚ್‌ನಲ್ಲಿ ಕೆಲವು ತಿದ್ದುಪಡಿಗಳನ್ನು ಪ್ರಸ್ತಾಪಿಸಿತ್ತು. ಪ್ರಸ್ತಾಪಿತ ತಿದ್ದುಪಡಿಯು, ಲಿಂಗ ನಿರ್ಧಾರ/ಆಯ್ಕೆ ಅಥವಾ ಪ್ರಸವಪೂರ್ವ ದೇಹಪರೀಕ್ಷೆಯನ್ನು ಕಾಯ್ದೆಯ ಉಪವರ್ಗ(2) ಹಾಗೂ ಸೆಕ್ಷನ್ 4ರಡಿಯಲ್ಲಿ ವಿವರಿಸಲಾದ ಕಾರಣಗಳಿಗೆ ಹೊರತಾಗಿ ಇತರ ಉದ್ದೇಶಗಳಿಗೆ ಬಳಸುವ ಚಟುವಟಿಕೆಗಳಲ್ಲಿ ಆರೋಪಿ ವೃತ್ತಿಪರ ವೈದ್ಯನು ನಿರತನಾದ ಪ್ರಕರಣಗಳಿಗೆ ಮಾತ್ರ ಕಾಯ್ದೆಯ ಸೆಕ್ಷನ್ 23(1)ನ್ನು ಸೀಮಿತಗೊಳಿಬೇಕೆಂದು ಈ ತಿದ್ದುಪಡಿಯು ಪ್ರತಿಪಾದಿಸುತ್ತದೆ. ಈ ಪ್ರಸ್ತಾಪಿತ ತಿದ್ದುಪಡಿಯು ತನ್ನ ಆರೋಪಕ್ಕೆ ಪುರಾವೆಯನ್ನು ನೀಡುವ ಹೊಣೆಗಾರಿಕೆಯನ್ನು ಫಿರ್ಯಾದುದಾರನಿಗೆ ವಹಿಸುತ್ತದೆ ಹಾಗೂ ಇನ್ನೊಂದೆಡೆ ಸಾಕ್ಷಾಧಾರದ ಗುಣಮಟ್ಟವನ್ನು ಕೂಡಾ ಅತ್ಯಂತ ಕಟ್ಟುನಿಟ್ಟುಗೊಳಿಸಿದೆ.
ಭಾರತದ ಮಹಾಲೇಖಪಾಲರು (ಸಿಎಜಿ) ಇತ್ತೀಚೆಗೆ ಪ್ರಕಟಿಸಿದ ‘‘ಮಹಿಳಾ ಸಬಲೀಕರಣ ಕುರಿತು ಉತ್ತರಪ್ರದೇಶ ಸರಕಾರದ ಸಾಧನೆಯ ವೌಲ್ಯಮಾಪನ’’ ವರದಿಯು 2010-11ರ ವಿತ್ತವರ್ಷದಿಂದ ಹಿಡಿದು 2014-2015ರವರೆಗಿನ ಹಣಕಾಸು ವರ್ಷಗಳ ಅವಧಿಯಲ್ಲಿ ಪಿಸಿ ಹಾಗೂ ಪಿಎನ್‌ಡಿಟಿ ಕಾಯ್ದೆಯ ಅನುಷ್ಠಾನದಲ್ಲಿ ವ್ಯಾಪಕವಾದ ಲೋಪದೋಷಗಳಿರುವುದನ್ನು ಬೆಟ್ಟು ಮಾಡಿ ತೋರಿಸಿದೆ. ನಿಧಿಗಳ ಅಸಮರ್ಪಕ ಬಳಕೆ, ಚಿಕಿತ್ಸಾರ್ಥಿಗಳ ವಿವರಗಳು ಹಾಗೂ ದೇಹಪರೀಕ್ಷೆಯ ದಾಖಲೆಗಳನ್ನು ಕಾಯ್ದುಕೊಳ್ಳದೆ ಇರುವುದು, ಭ್ರೂಣ ಪರೀಕ್ಷೆ ನಡೆಸುವ ಅಲ್ಟ್ರಾಸೋನೋಗ್ರಫಿ (ಯುಎಸ್‌ಜಿ) ಕೇಂದ್ರಗಳನ್ನು ನಿಯಮಿತವಾಗಿ ಪರೀಕ್ಷಿಸದೆ ಇರುವುದು, ಯುಎಸ್‌ಜಿ ಉಪಕರಣದ ಮ್ಯಾಪಿಂಗ್ ಹಾಗೂ ತಪಾಸಣೆಯ ಕೊರತೆ, ಯುಎಸ್‌ಜಿ ಯಂತ್ರಗಳ ಕಾರ್ಯನಿರ್ವಹಣೆಯ ಜಾಡುಹಿಡಿಯುವ ವ್ಯವಸ್ಥೆಯ ಕೊರತೆ ಇತ್ಯಾದಿ ಕಾರಣಗಳನ್ನು ವರದಿಯು ಪಟ್ಟಿ ಮಾಡಿದೆ.
ಲಿಂಗ ಆಯ್ಕೆಯ ವಿರುದ್ಧ ಹೋರಾಡುವ ಭಾರತದ ಪ್ರಯತ್ನಕ್ಕೆ ಕೇಂದ್ರೀಯ ಮೇಲ್ವಿಚಾರಣಾ ಕಾರ್ಯವಿಧಾನದ ಕೊರತೆಂದಾಗಿ ಹಿನ್ನಡೆಯುಂಟಾಗಿದೆ. ಪ್ರಸ್ತುತ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಹೋರಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಪಿಸಿ ಹಾಗೂ ಪಿಎನ್‌ಡಿಟಿ ಕಾಯ್ದೆಯನ್ನು ಜಾರಿಗೊಳಿಸಿದೆ. ಆದರೆ ವೈದ್ಯಕೀಯ ಲಾಬಿಯ ಹಿತಾಸಕ್ತಿಗಳು ಕೂಡಾ ಸಚಿವಾಲಯದ ಪ್ರಭಾವ ಬೀರುತ್ತಿವೆ. ಇನ್ನೊಂದೆಡೆ ಹೆಣ್ಣು ಮಗುವಿಗಾಗಿನ ಎಲ್ಲಾ ಕಾರ್ಯಕ್ರಮಗಳು ಮಹಿಳಾ ಹಾಗೂ ಶಿಶು ಕಲ್ಯಾಣ ಸಚಿವಾಲಯದ ವ್ಯಾಪ್ತಿಗೊಳಪಟ್ಟಿದೆ. ಆದರೆ ಜನನ ನೋಂದಣಿಯು ಗೃಹ ಸಚಿವಾಲಯದ ಹೊಣೆಗಾರಿಕೆಯಾಗಿದೆ.
ಹೆಣ್ಣು ಭ್ರೂಣ ಹತ್ಯೆಯ ಪ್ರಕರಣಗಳಲ್ಲಿ ಮಧ್ಯಪ್ರದೇಶವು ಮೊದಲ ಸ್ಥಾನದಲ್ಲಿದೆ. ರಾಜಸ್ಥಾನ, ಪಂಜಾಬ್, ಮಹಾರಾಷ್ಟ್ರ, ಚತ್ತೀಸ್‌ಗಢ, ಹರ್ಯಾಣ, ಉತ್ತರಪ್ರದೇಶ, ದಿಲ್ಲಿ, ಕರ್ನಾಟಕ ಹಾಗೂ ಗುಜರಾತ್ ರಾಜ್ಯಗಳು ಕ್ರಮವಾಗಿ ಆನಂತರದ ಸ್ಥಾನಗಳಲ್ಲಿವೆ.
ಹರ್ಯಾಣದಲ್ಲಿ ಶಿಶುಲಿಂಗಾನುಪಾತದ ಅಸಮತೋಲನವು ಅತ್ಯಧಿಕವಾಗಿದೆ. ಪಂಜಾಬ್, ಜಮ್ಮುಕಾಶ್ಮೀರ, ದಿಲ್ಲಿ, ಚಂಡೀಗಢ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಉತ್ತರಖಂಡ ಹಾಗೂ ಉತ್ತರಪ್ರದೇಶಗಳು ಆನಂತರದ ಸ್ಥಾನ ಪಡೆದಿವೆ.
ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟಲು ಈ ವರದಿಯು ಸರಕಾರಕ್ಕೆ ಕೆಲವು ಶಿಫಾರಸುಗಳನ್ನು ಮಾಡಿದ್ದು, ಅವುಗಳನ್ನು ಇಲ್ಲಿ ನೀಡಲಾಗಿದೆ.
ಹೆಣ್ಣು ಭ್ರೂಣ ಹತ್ಯೆ ಪಿಡುಗಿನ ವಿರುದ್ಧ ಹೋರಾಡಲು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವಾಲಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಸಹಯೋಗದೊಂದಿಗೆ ನೋಡಲ್ ಏಜೆನ್ಸಿ ಒಂದನ್ನು ಸ್ಥಾಪಿಸುವುದು:
(1) ಪ್ರಸ್ತುತ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ವ್ಯಾಪ್ತಿಗೊಳಪಟ್ಟಿರುವ ಪಿಸಿ ಹಾಗೂ ಪಿಎನ್‌ಡಿಟಿ ಕಾಯ್ದೆಗೆ ಸಂಬಂಧಿಸಿದ ಇಲಾಖೆಗಳ ಉತ್ತರದಾಯಿತ್ವವನ್ನು ಹೆಚ್ಚಿಸಬೇಕು.
(2) ಮಹಿಳಾ ಹಾಗೂ ಶಿಶು ಕಲ್ಯಾಣ ಇಲಾಖೆಯ ನಿಯಂತ್ರಣ ದಲ್ಲಿರುವ ಹೆಣ್ಣು ಮಕ್ಕಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಎಲ್ಲಾ ಆರ್ಥಿಕವರ್ಗಕ್ಕೂ ವಿಸ್ತರಿಸಬೇಕು.
(3) ಪ್ರಸ್ತುತ ಗೃಹ ಸಚಿವಾಲಯದ ಉಸ್ತುವಾರಿಯಲ್ಲಿರುವ ಜನನ ನೋಂದಣಿಯನ್ನು ಕಡ್ಡಾಯಗೊಳಿಸಬೇಕು.
ಬೇಟಿ ಬಚಾವೋ, ಬೇಟಿ ಪಡಾವೊ ಕಾರ್ಯಕ್ರಮದ ವ್ಯಾಪ್ತಿಗೆ ಬರುವ ಜಿಲ್ಲೆಗಳಲ್ಲಿ ಪಿಸಿ ಹಾಗೂ ಪಿಎನ್‌ಡಿಟಿ ಕಾಯ್ದೆಯ ಜಾರಿಗಾಗಿ ಪೈಲಟ್ ಯೋಜನೆಗಳನ್ನು ಜಾರಿಗೊಳಿಸಬೇಕು.
2016ರ ಮಾರ್ಚ್‌ನಲ್ಲಿ ಮಂಡಿಸಲಾದ ಪಿಸಿ ಹಾಗೂ ಪಿಎನ್‌ಡಿಟಿ ಕಾಯ್ದೆಗೆ ಇನ್ನು ಮುಂದೆ ಯಾವುದೇ ತಿದ್ದುಪಡಿ ಮಾಡುವುದನ್ನು ತಿರಸ್ಕರಿಸಬೇಕು. ಭಾರತದ ಮಹಾನೋಂದಣಾಧಿಕಾರಿಯಿಂದ ಜನನ ಲಿಂಗ ಅನುಪಾತವನ್ನು ಪ್ರತಿ ದಶಕದ ಬದಲಿಗೆ ವಾರ್ಷಿಕವಾಗಿ ಗಣತಿ ಮಾಡಬೇಕು.
ಭಾರತ ಸರಕಾರವು ಬೇಟಿ ಪಡಾವೋ ಬೇಟಿ ಬಚಾವೋ ಆಂದೋಲನವನ್ನು ಬಲಪಡಿಸಬೇಕು ಅಥವಾ ಪೋಷಕರ ಆದಾಯವನ್ನು ಪರಿಗಣಿಸದೆ ಹೆಣ್ಣು ಮಗುವಿರುವ ಕುಟುಂಬಕ್ಕೆ ಆರ್ಥಿಕ ನೆರವನ್ನು ಒದಗಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.