ವಿಡಂಬನೆ
ಪೊಲೀಸ್ ಪರೀಕ್ಷೆಗೆ ಪ್ರಶ್ನೆಗಳು!
ಭೋಪಾಲ್‌ನಲ್ಲಿ ಎಂಟು ವಿಚಾರಣಾಧೀನ ಮುಸ್ಲಿಂ ಕೈದಿಗಳ ನಕಲಿ ಎನ್‌ಕೌಂಟರ್ ನಂತರ, ಇನ್ನು ಮುಂದೆ ನಡೆಯಲಿರುವ ಮಧ್ಯಪ್ರದೇಶ ಪೊಲೀಸ್ ಸಿಬ್ಬಂದಿ ನೇಮಕಕ್ಕೆ ನಡೆಯಲಿರುವ ಪರೀಕ್ಷೆಗಳಲ್ಲಿ ಕೌನ್ ಬಾನೆಗಾ ಕರೋಡ್‌ಪತಿ ಸ್ಟೈಲಿನಲ್ಲಿ ಈ ಕೆಳಗಿನ ಮಾದರಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ!
ಕೈದಿಯು ಪತಂಜಲಿ ಟೂತ್ ಬ್ರಶ್ (ಕಹಿಬೇವಿನ ಕಡ್ಡಿ) ಯಾವುದಕ್ಕೆಲ್ಲಾ ಬಳಸಬಹುದು?
-ಹಲ್ಲುಜ್ಜಲು, ತಲೆ ಬಾಚಲು, ಬೆನ್ನು ಕೆರೆಯಲು, ಜೈಲಿನ ಭಾರಿ ಬೀಗ ತೆರೆಯಲು.
ಕೈದಿ ಸ್ಟೀಲ್ ಚಮಚ ಯಾವುದಕ್ಕೆ ಬಳಸಬಹುದು?
-ಚಹಕ್ಕೆ ಸಕ್ಕರೆ ಹಾಕಲು, ಪಾಯಸ ತಿನ್ನಲು, ಜೈಲಿನ ಕಾಂಕ್ರಿಟ್ ಗೋಡೆಗೆ ತೂತು ಮಾಡಲು. ಚಾಕುವಿನಂತೆ ವೈರಿಯನ್ನು ಇರಿಯಲು
ಕೈದಿ ಸ್ಟೀಲ್ ತಾಟನ್ನು ಯಾವುದಕ್ಕೆ ಬಳಸಬಹುದು?
-ಊಟ ತಿಂಡಿ ಹಾಕಲು, ರೊಟ್ಟಿ ಕಾಯಿಸಲು. ಸ್ವಚ್ಛ ಭಾರತ್ ಕಸ ಬಾಚಲು, ವೈರಿಯ ಕತ್ತು ಕೊಯ್ಯಲು.
ಕೈದಿ ಬೆಡ್ ಶೀಟನ್ನು ಯಾವುದಕ್ಕೆ ಬಳಸಬಹುದು?
-ನೆಲದ ಮೇಲೆ ಹಾಸಿ ಮಲಗಲು, ಚಾದರಿನಂತೆ ಹೊದ್ದುಕೊಳ್ಳಲು, ಫ್ಯಾನಿಗೆ ಕಟ್ಟಿ ಆತ್ಮಹತ್ಯೆ ಮಾಡಿಕೊಳ್ಳಲು, ಮುವ್ವತ್ತು ಅಡಿ ಎತ್ತರದ ಜೈಲಿನ ಗೋಡೆ ಏರಲು.
ಕೈದಿ ಕೈಯ ಉಗುರನ್ನು ಯಾವುದಕ್ಕೆ ಬಳಸಬಹುದು?
-ತನ್ನ ಮೈ ಪರಚಲು, ಇನ್ನೊಬ್ಬರ ಬೆನ್ನು ಕೆರೆಯಲು, ಮುಖದ ಮೊಡವೆ ಚಿವುಟಲು, ಜೈಲಿನ ಕಾಂಕ್ರಿಟ್ ಗೋಡೆ ಕೊರೆದು ಕನ್ನ ಮಾಡಲು.
ಕೈದಿ ಕೈ ಬೆರಳನ್ನು ಯಾವುದಕ್ಕೆ ಬಳಸಬಹುದು?
-ಮೂಗಿನ ಹೊಲಸು ತೆಗೆಯಲು, ಇತರರಿಗೆ ಕಚಗುಳಿ ಇಡಲು, ಭೂಗತ ದೊರೆಯಂತೆ ಎಲ್ಲಾ ಬೆರಳಿಗೆ ಉಂಗುರ ಹಾಕಲು, ಜೈಲಿನ ಬೀಗ ಕಿರುಬೆರಳಿಂದ ಮುರಿಯಲು.
ಕೈದಿ ಕೈಗಳನ್ನು ಯಾವುದಕ್ಕೆ ಬಳಸಬಹುದು?
-ಊಟ ಮಾಡಲು, ಕುಂಡೆ ತೊಳೆಯಲು, ಬಾಕ್ಸಿಂಗ್ ಆಡಲು, ಇನ್ನೊಬ್ಬರ ಕಪಾಳಕ್ಕೆ ಬಾರಿಸಲು, ಸ್ಪೈಡರ್ ಮ್ಯಾನ್‌ನಂತೆ ಜೈಲಿನ ಗೋಡೆ ಹತ್ತಲು.
ಕೈದಿ ಕಾಲನ್ನು ಯಾವುದಕ್ಕೆ ಬಳಸಬಹುದು?
-ನಡೆಯಲು, ಇನ್ನೊಬ್ಬರಿಗೆ ಒದೆಯಲು, 30 ಅಡಿ ಗೋಡೆ ಹತ್ತಿ ಆಚೆ ಜಿಗಿಯಲು, ಜೈಲಿನಿಂದ ತಪ್ಪಿಸಿಕೊಂಡು ಓಡಲು, ಇಬ್ಬರು ಪೊಲೀಸರು ಗಟ್ಟಿಯಾಗಿ ಹಿಡಿದು ಮತ್ತೊಬ್ಬ ಪೊಲೀಸ್ ಕೈದಿಯ ಎದೆಗೆ ಪಾಯಿಂಟ್ ಬ್ಲಾಂಕ್ ಗುಂಡು ಹೊಡೆದಾಗ ಕೈದಿ ನೆಲಕ್ಕೆ ಬಿದ್ದು ಕಾಲು ಝಾಡಿಸುತ್ತಾ ಜೀವ ಬಿಡಲು.
ಪೊಲೀಸರ ನಾಲಿಗೆ ಯಾವುದಕ್ಕೆ ಉಪಯೋಗ? -ಆಹಾರದ ರುಚಿ ನೋಡಲು, ಮಾತನಾಡಲು, ಮುಸ್ಲಿಮರ ಮೇಲೆ ವಿಷ ಕಾರಲು, ನಕಲಿ ಎನ್‌ಕೌಂಟರ್ ಮಾಡಿ ಮಾಧ್ಯಮದ ಮುಂದೆ ಹಸಿ ಸುಳ್ಳು ಹೇಳಲು.
ಪೊಲೀಸರ ಮೂಗಿನ ಉಪಯೋಗವೇನು?
-ವಾಸನೆ ನೋಡಲು, ನಶ್ಯ ಏರಿಸಲು, ಉಸಿರಾಡಿ ಜೀವಂತವಿರಲು, ನಕಲಿ ಎನ್‌ಕೌಂಟರ್ ಮಾಡಿ ಮೂಗೆತ್ತಿ ನಡೆಯಲು.
ಪೊಲೀಸರ ಬಾಯಿಯ ಉಪಯೋಗವೇನು?
-ತುತ್ತೂರಿ ಊದಲು, ಉಗುಳಲು, ಆಧೀನ ಸಿಬ್ಬಂದಿಗೆ ಮತ್ತು ಕೈದಿಗೆ ಅವಾಚ್ಯ ಬಯ್ಯಲು, ನಕಲಿ ಎನ್‌ಕೌಂಟರ್ ಮಾಡಲು ಆರ್ಡರ್ ಕೊಡಲು.
ಪೊಲೀಸರ ಕಿವಿಯ ಉಪಯೋಗವೇನು?
-ಡ್ರಿಲ್ ಆದೇಶ ಕೇಳಲು, ಮೇಲಧಿಕಾರಿಯ ಬಯ್ಗಳ ಕೇಳಲು, ಮೇಲಧಿಕಾರಿಯ ನಕಲಿ ಎನ್‌ಕೌಂಟರ್ ಪ್ಲಾನ್ ಸರಿಯಾಗಿ ಕೇಳಿಸಿಕೊಳ್ಳಲು.
ಪೊಲೀಸ್ ವ್ಯಾನುಗಳ ಉಪಯೋಗವೇನು?
-ಸಿಬ್ಬಂದಿ ಸಾಗಿಸಲು, ಮೇಲಧಿಕಾರಿಯ ಹೆಂಡತಿಯನ್ನು ಶಾಪಿಂಗ್‌ಗೆ ಕರೆದೊಯ್ಯಲು, ವಿಚಾರಣಾಧೀನ ಕೈದಿಗಳನ್ನು ಕೋರ್ಟಿಗೆ ಕರೆದೊಯ್ಯಲು, ಮುಸ್ಲಿಂ ಕೈದಿಗಳನ್ನು ದೂರದ ನಿರ್ಜನ ಪ್ರದೇಶಕ್ಕೆ ಕೊಂಡು ಹೋಗಿ ಗುಂಡು ಹೊಡೆದು ಸಾಯಿಸಲು.
ಪೊಲೀಸ್ ಯುನಿಫಾರ್ಮಿನ ಉಪಯೋಗವೇನು?
-ಮೈಮುಚ್ಚಿಕೊಳ್ಳಲು, ಮೇಲಧಿಕಾರಿಯ ಹೆಂಡತಿ ಮಕ್ಕಳಿಗೆ ತಾನು ಅವರ ಸೇವಕ ಎಂದು ಗೊತ್ತಾಗಲು, ಬೀದಿ ವ್ಯಾಪಾರಿಗಳಿಂದ ಹಫ್ತಾ ವಸೂಲು ಮಾಡಲು, ರಾತ್ರಿ ಕತ್ತಲಲ್ಲಿ ನಕಲಿ ಎನ್‌ಕೌಂಟರ್ ಮಾಡುವಾಗ ಪೊಲೀಸ್ ಯಾರು ಕೈದಿ ಯಾರು ಎಂಬ ಭೇದ ಗೊತ್ತಾಗಲು.
ಪೊಲೀಸರ ಪ್ಯಾಂಟ್ ಜೇಬಿನ ಉಪಯೋಗವೇನು?
-ಪರ್ಸ್ ಇಡಲು, ಲಂಚದ ಕಾಸು ಇಡಲು, ನಕಲಿ ಎನ್‌ಕೌಂಟರ್ ಮಾಡಿದಕ್ಕೆ ರಾಜ್ಯ ಸರಕಾರ ಹಾಗೂ ಸಂಘಪರಿವಾರಗಳು ಗುಟ್ಟಾಗಿ ಕೊಟ್ಟ ಲಕ್ಷ-ಲಕ್ಷ ಹಣ ಇಡಲು.
ಪೊಲೀಸರ ಬಂದೂಕಿನ ಉಪಯೋಗವೇನು?
-ಹಿಂಬದಿಯಿಂದ ಅಡಿಕೆ ಜಜ್ಜಲು, ವ್ಯಾಯಾಮ ಮಾಡುವಾಗ ಡಂಬೆಲ್ಸ್‌ನಂತೆ ಉಪಯೋಗಿಸಲು, ದೊಡ್ಡ ಪೇಪರ್ ವೇಟ್ ನಂತೆ ಬಳಸಲು, ನಕಲಿ ಎಂಕೌಂಟರಿಗೆ ಬಳಸಲು.
ಪೊಲೀಸರು ನಕಲಿ ಎನ್‌ಕೌಂಟರ್‌ನಲ್ಲಿ ಕೈದಿಯ ಯಾವ ಭಾಗಕ್ಕೆ ಗುಂಡು ಹಾರಿಸಿ ಕೊಲ್ಲಬೇಕು?
-ಪಾದಕ್ಕೆ, ಬೆನ್ನಿಗೆ, ತಲೆಗೆ, ಎದೆಗೆ, ಮೊಳಕಾಲಿಗೆ.
ಯಾರು ಯಾರು ನಕಲಿ ಎನ್‌ಕೌಂಟರ್ ಮಾಡಲು ಸಾಧ್ಯ?
-ನ್ಯಾಯಾಲಯ ಮತ್ತು ನ್ಯಾಯಾಧೀಶರಲ್ಲಿ ನಂಬಿಕೆಯೇ ಇಲ್ಲದವರು, ಧಾರ್ಮಿಕ ದ್ವೇಷ ಮೈಯಿಡೀ ತುಂಬಿಕೊಂಡವರು, ಸರ್ವಾಧಿಕಾರಿ ಮನೋವೃತ್ತಿಯವರು, ದೇವರು ಮತ್ತು ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಲ್ಲದವರು.
ಹೇಳಿ ಸರಿಯೋ ತಪ್ಪೋ ?
-ಪೊಲೀಸ್ ಕೆಲಸಕ್ಕೆ ಮೆದುಳು ಮತ್ತು ಮನುಷ್ಯತ್ವ ಬೇಕು, ಹೌದು ಸ್ವಲ್ಪಬೇಕು, ಇಲ್ಲ ಬೇಕಾಗಿಯೇ ಇಲ್ಲ, ಮೆದುಳಿಲ್ಲದವರು ಮಾತ್ರ ನಕಲಿ ಎನ್‌ಕೌಂಟರ್ ಮಾಡಲು ಸಾಧ್ಯ
ಇವೇ ಮೇಲಿನ ಪ್ರಶ್ನೆಗಳನ್ನು 15 ವರ್ಷಗಳ ಹಿಂದೆ ಗುಜರಾತಿನ ಪೊಲೀಸರಿಗೆ ಕೇಳಿಯೇ ಅವರನ್ನು ಆರಿಸಿದ್ದು. ಇದು 15 ವರ್ಷಗಳಿಂದಲೂ ಗುಜರಾತಿನಲ್ಲಿ ಅತ್ಯುತ್ತಮ ರಿಸಲ್ಟ್ ಕೊಡುತ್ತಿದೆ. ಈಗ ಮೊನ್ನೆ ಭೋಪಾಲ್‌ನಲ್ಲಿ ಮಧ್ಯ ಪ್ರದೇಶದ ಮೊದಲ ಬ್ಯಾಚಿನ ಪ್ರ್ಯಾಕ್ಟಿಕಲ್ ಫೀಲ್ಡ್ ಟೆಸ್ಟ್ ನಡೆದು ಎಲ್ಲ ಪೊಲೀಸರೂ ಪಾಸಾದರು. ಸದ್ಯದಲ್ಲಿಯೇ ಇತರ ಬಿಜೆಪಿ ಆಡಳಿತದ ರಾಜ್ಯಗಳಲ್ಲಿಯೂ ಇಂತಹದ್ದೇ ಪ್ರಶ್ನಾವಳಿ ಅಲ್ಲಿಯ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಕೇಳಲಾಗುತ್ತದೆ ಹಾಗೂ ನಕಲಿ ಎಂಕೌಂಟರಿನ ಪ್ರ್ಯಾಕ್ಟಿಕಲ್ ಟೆಸ್ಟ್ ಸಹ ಇರಲಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ