ಚಿತ್ರೀಕರಣದ ವೇಳೆ ನಟರಿಬ್ಬರ ಸಾವು ಹಲವರ ವಿರುದ್ಧ ಎಫ್‌ಐಆರ್
ಬೆಂಗಳೂರು, ನ. 8: ನಟ ದುನಿಯಾ ವಿಜಯ್ ಅಭಿನಯದ ‘ಮಾಸ್ತಿಗುಡಿ’ ಚಿತ್ರದ ಅಂತಿಮ ಹಂತದ ಚಿತ್ರೀಕರಣದ ವೇಳೆ ಹೆಲಿಕಾಫ್ಟರ್‌ನಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಬಿದ್ದ ಯುವ ನಟರಿಬ್ಬರು ಮೃತಪಟ್ಟ ಪ್ರಕರಣ ಸಂಬಂಧ ರಾಮನಗರ ಜಿಲ್ಲೆಯ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಚಿತ್ರತಂಡದ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಐಪಿಸಿ 304 ಮತ್ತು 188 ರ ಅಡಿಯಲ್ಲಿ ಚಿತ್ರ ನಿರ್ದೇಶಕ, ನಿರ್ಮಾಪಕ, ಸಾಹಸ ನಿರ್ದೇಶಕ ಸೇರಿ ಚಿತ್ರತಂಡದ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಗುಪ್ತ, ನಿರ್ಲಕ್ಷ ಆರೋಪದ ಮೇಲೆ ಹಲವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಅಲ್ಲದೆ, ಬೆಳಗ್ಗೆಯಿಂದಲೇ ಶವಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ. ಈ ಘಟನೆ ಸಂಭವಿಸಿದ ವೇಳೆ ಸ್ಥಳದಲ್ಲಿ ಯಾರು ಇದ್ದರು, ಕಾನೂನು ಉಲ್ಲಂಘನೆ ಮಾಡಲಾಗಿದೆಯೇ, ಚಿತ್ರೀಕರಣಕ್ಕೆ ಅನುಮತಿ ಪಡೆಯಲಾಗಿತ್ತೆ ಎಂಬುವ ಮಾಹಿತಿ ಪಡೆಯಲಾಗುತ್ತಿದೆ ಎಂದರು.
Next Story