ಹೆಮ್ಮೆಯ ಮಗಳು ತಂದ ಆಘಾತ...
ಧಾರಾವಾಹಿ-40
ತ್ಯಾಂಪಣ್ಣ, ನಿನ್ನ ಅಮ್ಮನ, ನಿನ್ನ ಅಜ್ಜನ ರಕ್ಷಣೆಗೆ ನಿಂತಿದ್ದಾರೆ ಎಂದು ತಿಳಿದ ಮೇಲೆ ಊರಿನ ಎಲ್ಲರ ಎಲ್ಲ ರೀತಿಯ ಉಪಟಳವೂ ಬಂದಾಗಿತ್ತು. ವರ್ಷ ಕಳೆಯುವುದರೊಳಗೆ ನಿನ್ನ ಅಮ್ಮ ಕಾಲೇಜಿಗೆ ಹೋಗುವ ವಿಷಯವನ್ನೇ ಇಡೀ ಊರು ಮರೆತು ಬಿಟ್ಟಿತ್ತು.
ನಿನ್ನಮ್ಮನ ಓದು ಎರಡು ವರ್ಷ ಕಳೆದು ಮೂರನೇ ವರ್ಷಕ್ಕೆ ಕಾಲಿಡುತ್ತಿದ್ದಂತೆಯೇ ಅಜ್ಜನಿಗೆ ಮತ್ತೆ ಚಿಂತೆ ಕಾಡತೊಡಗಿತು. ಓದು ಮುಗಿದ ತಕ್ಷಣ ಮಗಳಿಗೆ ಮದುವೆ ಮಾಡಿಬಿಡಬೇಕು. ಈಗಲೇ ವರ ಹುಡುಕಿ ಇಡಬೇಕು. ಇಷ್ಟು ಓದಿದ ಹುಡುಗಿಗೆ ಕನಿಷ್ಠ ಅಷ್ಟೇ ಓದಿದ ಹುಡುಗನಾದರೂ ಎಲ್ಲಿ ಸಿಗುತ್ತಾನೆ. ಈ ಊರಿನಲ್ಲಂತೂ ಇಲ್ಲ. ಪಕ್ಕದ ಊರುಗಳಲ್ಲೂ ಸಿಗಲಿಕ್ಕಿಲ್ಲ. ಅಜ್ಜ ಕಾಲಿಗೆ ಚಕ್ರ ಕಟ್ಟಿದರು. ಊರೂರು ಅಲೆದರು. ಇಲ್ಲ, ಅಷ್ಟು ಓದಿದ ಹುಡುಗ ಅವರಿಗೆ ಸಿಗಲಿಲ್ಲ. ಕೊನೆಗೆ ಅವರು ಪೇಟೆಯತ್ತ ಮುಖ ಮಾಡಿದರು. ಒಂದೆರಡು ಹುಡುಗನನ್ನು ನೋಡಿದರಾದರೂ ಅದು ಅವರ ಮಗಳ ರೂಪಕ್ಕೆ, ಎತ್ತರಕ್ಕೆ ಸರಿ ಹೊಂದಲಿಲ್ಲ. ಕೊನೆಗೆ ಕುದ್ರೋಳಿಯ ದೊಡ್ಡ ಮನೆತನದ, ಅಗರ್ಭ ಶ್ರೀಮಂತರ ಮಗನೊಬ್ಬನನ್ನು ನಿನ್ನಜ್ಜ ಕಂಡು ಹಿಡಿದೇ ಬಿಟ್ಟರು. ಹುಡುಗ ಗುಣದಲ್ಲಿ, ರೂಪದಲ್ಲಿ, ವಿದ್ಯೆಯಲ್ಲಿ ಯಾವುದರಲ್ಲೂ ಕಡಿಮೆ ಇರಲಿಲ್ಲವಂತೆ. ಅಜ್ಜ ತನ್ನ ಅಳಿಯಂದಿರು, ಊರಿನ ನಾಲ್ಕು ಮಂದಿ ಹಿರಿಯರನ್ನು ಕರೆದುಕೊಂಡು ಹೋಗಿ ಮಾತುಕತೆ ಮುಗಿಸಿದರು. ಆಗ ನಿನ್ನಜ್ಜನ ಸಂತೋಷ ನೋಡಬೇಕಿತ್ತು. ಅವರ ಕಾಲು ನೆಲದ ಮೇಲೆ ಇರಲಿಲ್ಲ. ಸಿಕ್ಕಿದವರಲ್ಲೆಲ್ಲಾ ತನ್ನ ಮಗಳಿಗೆ ಗಂಡು ಗೊತ್ತಾಗಿದ್ದನ್ನು, ಅವನ ವಿದ್ಯೆ, ಗುಣ, ರೂಪ, ಮನೆತನ ಎಲ್ಲವನ್ನೂ ಅಭಿಮಾನದಿಂದ ಹೇಳಿ ಹೆಮ್ಮೆ ಪಟ್ಟುಕೊಳ್ಳುತ್ತಿದ್ದರು. ಅಜ್ಜಿಯಂತೂ ಅವರು ಹೇಳಿದ ಮಾತಿಗೆಲ್ಲ ಹೂಂ ಗುಟ್ಟುತ್ತಾ ಅವರ ನೆರಳಿನಂತೆ ನಡೆಯತೊಡಗಿದ್ದರು. ಅವರಿಗೆ ಗಂಡನ ಜೊತೆ ಕೇಳಲು ಪ್ರಶ್ನೆಗಳೇನೂ ಇರಲಿಲ್ಲ. ತನ್ನ ಪ್ರೀತಿಯ ಮಗಳಿಗೆ ಅಸಾಮಾನ್ಯ ಗಂಡೇ ಹುಡುಕಿರುತ್ತಾರೆ ಎಂಬ ವಿಶ್ವಾಸ ಅವರಿಗೆ.
ನಿನ್ಮಮ್ಮನ ಪರೀಕ್ಷೆ ಮುಗಿಯಿತು. ರಿಸಲ್ಟ್ ಬಂತು. ನಿನ್ನಮ್ಮ ಮೊದಲ ದರ್ಜೆಯಲ್ಲಿ ಪಾಸಾಗಿದ್ದಳು. ನಿನ್ನಜ್ಜನ ಸಂಭ್ರಮ ಹೇಳ ತೀರದು. ಅವರು ಈ ಸುದ್ದಿಯನ್ನು ಗಂಡಿನ ಮನೆಯವರಿಗೂ ತಿಳಿಸಿದರು.
ಗಂಡಿನ ಮನೆಯವರು ಹೆಣ್ಣು ನೋಡಲು ಬರುವ ದಿನ ನಿಗದಿಯಾಯಿತು. ಬಂಧುಗಳಿಗೆ, ಊರವರಿಗೆ ಕರೆ ಹೋಯಿತು. ಅಂಗಳ ತುಂಬಾ ಚಪ್ಪರ ತಲೆ ಎತ್ತಿತು.
ಅಂದು ಗಂಡಿನ ಕಡೆಯವರು ಹೆಣ್ಣು ನೋಡಲು ಬರುವ ದಿನ. ನಿನ್ನಮ್ಮ ಬೆಳಗ್ಗೆ ಬೇಗ ಎದ್ದಿದ್ದಳು. ಸ್ನಾನ ಮಾಡಿ ಬಂದು ಒಳ್ಳೆಯ ಬಟ್ಟೆ ಧರಿಸಿದಳು. ಸುಂದರವಾಗಿ ಅಲಂಕರಿಸಿಕೊಂಡಳು. ತಿಂಡಿ ತಿಂದಳು.
‘‘ಅಮ್ಮಾ, ನಾನೀಗ ಬರ್ತೇನೆ. ಸ್ವಲ್ಪ ಕಾಲೇಜುವರೆಗೆ ಹೋಗಿ ಬರಬೇಕು. ಒಂದು ಗಂಟೆಯಲ್ಲಿ ಬರ್ತೇನೆ’’ ಎಂದಳು.
ಅಜ್ಜಿಗೆ ಆಶ್ಚರ್ಯವಾಗಿತ್ತು.
‘‘ಇವತ್ತು ನಿನ್ನನ್ನು ನೋಡ್ಲಿಕ್ಕೆ ಬರ್ತಾರೆ, ನೀನೆಲ್ಲಿ ಹೊರಟಿದ್ದಿಯಾ?’’ ಕೇಳಿದರು.
‘‘ಅವರು ಬರುವುದು ಮಧ್ಯಾಹ್ನ ಅಲ್ವಮ್ಮಾ. ನಾನೀಗ ಬರ್ತೇನೆ’’ ಅವಳು ಅವಸರ ಮಾಡಿದಳು. ನಿನ್ನಮ್ಮನ ಮಾತು ಅಂದರೆ ಅದು ಹಾಗೆಯೇ ಅಷ್ಟೊಂದು ಖಡಕ್ಕ್. ಆ ಮಾತಿಗೆ ಎದುರೇ ಇಲ್ಲ. ನಿನ್ನಜ್ಜನೂ ಮನೆಯಲ್ಲಿರಲಿಲ್ಲ. ನಿನ್ನಮ್ಮ ಅವಸರವಸರವಾಗಿ ಹೊರಟು ಹೋದಳು.
ಚಪ್ಪರದಲ್ಲಿ ಒಂದು ಕಡೆ ಬಿರಿಯಾನಿ ಬೇಯುತ್ತಿತ್ತು. ಇನ್ನೊಂದು ಕಡೆ ನೈಚೋರು ಬೇಯುತ್ತಿತ್ತು. ಮತ್ತೊಂದು ಕಡೆ ಕೋಳಿ ಹುರಿಯುತ್ತಿದ್ದರು. ಒಳಗೆ ಹೆಂಗಸರು ಬಾಳೆಪ್ಪ, ನೈಯಪ್ಪ, ಗುಳಿಯಪ್ಪ, ಕಲ್ತಪ್ಪಾಂತ ವಿವಿಧ ಬಗೆಯ ಅಪ್ಪ, ತಿಂಡಿ ಮಾಡುವುದರಲ್ಲಿ ತೊಡಗಿದ್ದರು. ಮನೆಯಲ್ಲಿದ್ದ ಎಲ್ಲರಿಗೂ ಕೈ ತುಂಬ ಕೆಲಸ. ಎಲ್ಲ ಅಚ್ಚು ಕಟ್ಟಾಗಿ ಆಗಬೇಕು. ಯಾವುದಕ್ಕೂ ಕೊರತೆಯಾಗಬಾರದು. ಬರುವವರು ಬಹಳ ದೊಡ್ಡ ಮನೆತನದವರು. ಬಹಳ ದೊಡ್ಡ ಶ್ರೀಮಂತರು. ಅವರ ಘನತೆಗೆ ತಕ್ಕುದಾಗಿ ಎಲ್ಲವೂ ಮಾಡಬೇಕು. ಅಜ್ಜ ಅಡುಗೆಗಾಗಿ ಕೇರಳದಿಂದ ವಿಶೇಷ ಬಾಣಸಿಗರನ್ನು ಕರೆಸಿಕೊಂಡಿದ್ದರು. ಅಜ್ಜನ ನೆರಳಿನಂತೆ ನಿಂತಿದ್ದ ತ್ಯಾಂಪಣ್ಣ ಎಲ್ಲ ಜವಾಬ್ದಾರಿಯನ್ನು ವಹಿಸಿದ್ದರು.
ಮಧ್ಯಾಹ್ನವಾಗುತ್ತಲೇ ಮನೆ ತುಂಬ ನೆಂಟರು, ಇಷ್ಟರು ಸೇರಿದರು.
ಗಂಡಿನ ಕಡೆಯವರೂ ಬಂದು ಚಪ್ಪರದಲ್ಲಿ ನೆರೆದರು. ತ್ಯಾಂಪಣ್ಣ ಬಿಳಿ ರೇಷ್ಮೆ ಅಂಗಿ, ರೇಷ್ಮೆ ಲುಂಗಿ, ಹೆಗಲಲ್ಲಿ ರೇಷ್ಮೆ ಶಾಲು ಹಾಕಿಕೊಂಡು ನಿನ್ನಜ್ಜನ ಜೊತೆ ನಿಂತು ಬಂದವರನ್ನೆಲ್ಲ ನಗುಮೊಗದಿಂದ, ಆದರದಿಂದ ಸ್ವಾಗತಿಸಿದರು. ಎಳ್ಳು, ಬೆಲ್ಲ, ಬನ್ನಂಗಾಯಿ, ಹಾಕಿ ಕಲಸಿದ ಅವಲಕ್ಕಿ, ಬಾಳೆ ಹಣ್ಣು, ನನ್ನಾರ್ನ ಶರಬತ್ನ ಫಲಾಹಾರ ಆಯಿತು.
ಆದರೆ ನಿನ್ನಮ್ಮ... ನಿನ್ನಮ್ಮ ಇಲ್ಲ!
‘‘ಹುಡುಗಿ ಎಲ್ಲಿದ್ದಾಳೆ... ಹುಡುಗಿ ಎಲ್ಲಿ..’’ ಮನೆಯೊಳಗೆ ಹೆಂಗಸರ ಗುಸುಗುಸು ಶುರುವಾಯಿತು. ಅದು ಗಂಡಸರ ಕಿವಿಗೂ ಬಿತ್ತು.
ನಿನ್ನಜ್ಜನ ಎದೆ ಬಡಿದುಕೊಳ್ಳತೊಡಗಿತ್ತು. ಅವರು ಹುಚ್ಚರಂತಾಗಿ ಬಿಟ್ಟಿದ್ದರು.
‘‘ಈಗ ಬರ್ತಾಳೆ... ಈಗ ಬರ್ತಾಳೆ.. ಸೀರೆ ಉಡಲಿಕ್ಕೆ ಹೋಗಿದ್ದಾಳೆ’’ ಅಜ್ಜ ಸುಳ್ಳು ಹೇಳಿದರು. ನಾಲ್ಕು ದಿಕ್ಕಿಗೂ ಜನ ಕಳುಹಿಸಿದರು. ತ್ಯಾಂಪಣ್ಣ ಚಡಪಡಿಸತೊಡಗಿದರು. ಅಜ್ಜಿಯ ಕೈಕಾಲು ನಡುಗತೊಡಗಿತ್ತು.
ಎಲ್ಲರನ್ನೂ ಒತ್ತಾಯವಾಗಿ ಊಟಕ್ಕೆ ಎಬ್ಬಿಸಲಾ ಯಿತು. ಊಟ ಆಯಿತು. ಜಿಲೇಬಿ, ಲಡ್ಡು, ಮಾಲ್ಪುರಿ, ಹಲ್ವ ವಿವಿಧ ಬಗೆಯ ಅಪ್ಪಗಳು. ಚಹಾ ಆಯಿತು. ತಾಂಬೂಲ ಆಯಿತು. ಸಿಗರೇಟು ಆಯಿತು. ನಿನ್ನಮ್ಮ ಬರಲಿಲ್ಲ. ಚಪ್ಪರ ತುಂಬಾ ಮತ್ತೆ ಗುಸುಗುಸು ಪ್ರಾರಂಭವಾಯಿತು. ಹೆಂಗಸರೆಲ್ಲ ಹೊರಡಲು ಗಂಡಸರ ಅನುಮತಿಗಾಗಿ ಬುರ್ಖಾ ಹಾಕಿ ಕಾಯತೊಡಗಿದರು. ಎಲ್ಲರ ಮುಖ ಕಪ್ಪಿಟ್ಟಿತು...
ಮಸೀದಿಯಿಂದ ಸಂಜೆಯ ಬಾಂಗ್ ಮೊಳಗಿತು. ನಿನ್ನಮ್ಮನ ಪತ್ತೆ ಇಲ್ಲ!
ಎಲ್ಲರೂ ಎದ್ದು ನಿಂತರು.
ತ್ಯಾಂಪಣ್ಣ ‘‘ಈಗ ಬರ್ತಾಳೆ, ಕುಳಿತುಕೊಳ್ಳಿ ಹೋಗಬೇಡಿ’’ ಎಂದು ಅಂಗಲಾಚತೊಡಗಿದರು.
‘‘ಆ ಮಾನಕೆಟ್ಟ ಹೆಣ್ಣನ್ನು ಮನೆ ತುಂಬಿಸಿಕೊಳ್ಳಲಿಕ್ಕೆ ನಮಗೇನು ತಲೆ ಕೆಟ್ಟಿಲ್ಲ. ಇನ್ನು ಬಂದರೆ ಅವಳ ಕೈಕಾಲು ಕಟ್ಟಿ ಯಾವುದಾದರೂ ಹಾಳು ಬಾವಿಗೆ ಎತ್ತಿ ಹಾಕಿ. ನಿಮ್ಮ ಸಂಬಂಧ ಒಪ್ಪಿಬಂದೆವಲ್ಲ ನಮಗೆ ಹೊಡೆಯಬೇಕು ಹಳೆಯದರಲ್ಲಿ...’’ ಬಂದವರಲ್ಲಿ ಹಿರಿಯರೊಬ್ಬರು ಎದ್ದು ನಿಂತು ಕೋಪದಿಂದ ಅಬ್ಬರಿಸಿ ನಡೆದರು. ಅವರ ಹಿಂದೆ ಇರುವೆಗಳಂತೆ ಹೆಂಗಸರು-ಗಂಡಸರು ಎಲ್ಲ ಸಾಗಿದರು. ನಿನ್ನಜ್ಜ ತಲೆಯನ್ನು ಎರಡು ಕೈಗಳಿಂದಲೂ ಗಟ್ಟಿಯಾಗಿ ಹಿಡಿದುಕೊಂಡು ಕುಸಿದು ಗೋಳೋ ಎಂದು ಅಳತೊಡಗಿದರು. ತ್ಯಾಂಪಣ್ಣ ಇನ್ನೂ ಅಂಗಲಾಚುತ್ತಾ ದಾರಿಯುದ್ದಕ್ಕೂ ಅವರ ಹಿಂದೆ ನಡೆಯುತ್ತಲೇ ಇದ್ದರು. ಕ್ಷಣಾರ್ಧದಲ್ಲಿ ಚಪ್ಪರ ಖಾಲಿಯಾಗಿತ್ತು. ಮನೆ ಸ್ಮಶಾನವಾಗಿತ್ತು. ಅಜ್ಜಿ ಒಂದು ಮೂಲೆಯಲ್ಲಿ ಕುಸಿದು ಕಣ್ಣೀರು ಹಾಕುತ್ತಿದ್ದರು.
‘‘ಅಬ್ಬು ಬ್ಯಾರಿಗಳೇ, ನೀವೀಗ ತಾಳ್ಮೆ ಕಳೆದುಕೊಳ್ಳ ಬಾರದು. ಅವಳು ಒಳ್ಳೆಯ ಹೆಣ್ಣು. ಹಾಗೆಲ್ಲ ಬೇಡದ್ದು ಮಾಡಿಕೊಳ್ಳುವವಳಲ್ಲ. ಅವಳಿಗೇನೋ ಆಪತ್ತು ಸಂಭವಿಸಿರ ಬೇಕು. ನಡೀರಿ ಹೋಗೋಣ...’’
‘‘ಎಲ್ಲಿಗೆ?’’ ಅಬ್ಬು ಕಾಕ ತಲೆ ಎತ್ತಿದರು. ಅವರ ಕಣ್ಣುಗಳು ಕೆಂಡದಂತಾಗಿತ್ತು.
‘‘ಬನ್ನಿ ನೀವು’’ ತ್ಯಾಂಪಣ್ಣ ನಿನ್ನಜ್ಜನನ್ನು ಎಳೆದುಕೊಂಡೇ ಹೋಗಿ ಕಾರಿನಲ್ಲಿ ಕುಳ್ಳಿರಿಸಿದರು. ಮೊದಲು ಹೋಗಿ ಪೊಲೀಸರಿಗೆ ದೂರು ಕೊಟ್ಟರು. ಆನಂತರ ರಾತ್ರಿ ಬೆಳಗಾಗುವ ತನಕ ಎಲ್ಲೆಲ್ಲೆಲ್ಲಾ ಸುತ್ತಾಡಿದರು. ಇಲ್ಲ, ನಿನ್ನಮ್ಮನ ಸುಳಿವೇ ಸಿಗಲಿಲ್ಲ. ಅಜ್ಜ ಬೆಳಗ್ಗೆ ಮನೆಗೆ ಬಂದವರು ಆಮೇಲೆ ಮನೆಯಿಂದ ಹೊರಗೆ ಕಾಲಿಡಲಿಲ್ಲ. ಊಟ, ನಿದ್ದೆ ಇಲ್ಲದೆ ಕೋಣೆಯೊಳಗೆ ಕಿಟಿಕಿ ಬಾಗಿಲು ಮುಚ್ಚಿ ಕಣ್ಣೀರು ಹಾಕುತ್ತಾ ಕುಳಿತು ಬಿಟ್ಟಿದ್ದರು. ಅಜ್ಜಿ ಮಲಗಿ ಬಿಟ್ಟಿದ್ದರು. ಯಾರಿಗೂ ಯಾರೂ ಸಾಂತ್ವನ ಹೇಳುವ ಸ್ಥಿತಿಯಲ್ಲಿರಲಿಲ್ಲ.
ತ್ಯಾಂಪಣ್ಣ ಮಾತ್ರ ಸುಮ್ಮನಿರಲಿಲ್ಲ. ಅವರಿಗೆ ಎಲ್ಲೆಲ್ಲ ಬಂಧುಗಳಿದ್ದಾರೆ, ಪರಿಚಿತರು, ಗೆಳೆಯರಿದ್ದಾರೆ ಅವರಿಗೆಲ್ಲ ಸುದ್ದಿ ಮುಟ್ಟಿಸಿದ್ದರು. ಹೀಗೆ 15 ದಿನ ಕಳೆಯಿತು. ಅಜ್ಜ ಮನೆಯಿಂದ ಹೊರಗೆ ಕಾಲಿಡಲಿಲ್ಲ. ಅಜ್ಜಿ ಎದ್ದು ನಿಲ್ಲಲಿಲ್ಲ.
ಒಂದು ದಿನ ತ್ಯಾಂಪಣ್ಣ ಒಂದು ಸುದ್ದಿ ತಂದರು.
‘‘ನಿನ್ನಮ್ಮ ಬೆಂಗಳೂರಿನಲ್ಲಿದ್ದಾಳೆ. ಅವಳು ಒಬ್ಬನನ್ನು ಮದುವೆಯಾಗಿದ್ದಾಳೆ. ಗಂಡ-ಹೆಂಡತಿ ಒಂದು ಮನೆಯಲ್ಲಿ ಒಟ್ಟಿಗೆ ಇದ್ದಾರೆ. ನೀವು ಈಗಲೇ ಬಂದರೆ ಅವರನ್ನು ಹಿಡಿಯಬಹುದು’’ ಎಂದು ತ್ಯಾಂಪಣ್ಣನ ಒಬ್ಬ ಅಳಿಯ ಹೇಳಿ ಕಳಿಸಿದ್ದಾನಂತೆ.
ವಿಷಯ ತಿಳಿದ ಅಜ್ಜ ಮಾತನಾಡಲಿಲ್ಲ.
‘‘ಏಳಿ ಅಬ್ಬು ಬ್ಯಾರಿ, ನಾವು ಹೋಗಿ ಅವಳನ್ನು ಕರೆದುಕೊಂಡು ಬರುವ’’ ತ್ಯಾಂಪಣ್ಣ ಅಜ್ಜನನ್ನು ಒತ್ತಾಯಿಸಿದರು.
‘‘ಬ್ಯಾಡ ತ್ಯಾಂಪಣ್ಣ. ಅವಳು ಇನ್ನು ಈ ಊರಿಗೆ ಬರುವುದು ಬೇಡ. ಅವಳು ಜೀವಂತ ಇದ್ದಾಳಲ್ಲಾ. ಮದುವೆಯಾಗಿದ್ದಾಳಲ್ಲಾ, ಸುಖವಾಗಿದ್ದಾಳಲ್ಲಾ - ಅಷ್ಟು ಸಾಕು. ಅವಳ ಸಂತೋಷಕ್ಕೆ ನಾವು ಅಡ್ಡಿ ಪಡಿಸು ವುದು ಬೇಡ’’. ಅಜ್ಜನ ಮಾತಿನಲ್ಲಿ ನೋವು ತುಂಬಿತ್ತು.
‘‘ಮಕ್ಕಳು - ಚಿಕ್ಕ ಪ್ರಾಯ - ತಪ್ಪುಮಾಡ್ತಾರೆ- ನಾವು ಕ್ಷಮಿಸಬೇಕು.’’
‘‘ಕ್ಷಮಿಸಿದ್ದೇನೆ. ಎದೆ ತುಂಬ ಹರಸಿದ್ದೇನೆ...’’ ಅಜ್ಜನ ತುಟಿ ಅದುರಿತು. ಗಂಟಲು ಕಟ್ಟಿತು.
‘‘ನೀವು ಹಾಗೆಲ್ಲ ಯೋಚಿಸಬಾರದು. ಅವಳು ಒಳ್ಳೆಯ ಹುಡುಗಿ. ತುಂಬಾ ಜಾಣೆ. ಏನೋ ಕೆಟ್ಟ ಗಳಿಗೆ ನಡೆದು ಹೋಯಿತು’’ ತ್ಯಾಂಪಣ್ಣ ಸಮಾಧಾನ ಹೇಳಿದರು.
‘‘ಹೌದು. ಒಳ್ಳೆಯವಳು. ನನ್ನ ಮಗಳು ತುಂಬಾ ಒಳ್ಳೆಯವಳು. ತುಂಬ ಜಾಣೆ, ತುಂಬ ಪ್ರತಿಭಾವಂತೆ...’’ ಅಜ್ಜ ಎರಡು ಕೈಗಳಿಂದಲೂ ಮುಖ ಮುಚ್ಚಿ ಬಿಕ್ಕಿ ಬಿಕ್ಕಿ ಅಳತೊಡಗಿದರು. ಸ್ವಲ್ಪಹೊತ್ತಿನ ನಂತರ ಅಳು ನಿಲ್ಲಿಸಿ ಹೇಳಿದರು.
‘‘ಅವಳನ್ನು ನಾನು ನನ್ನ ಮಗಳಂತೆ ನೋಡಲಿಲ್ಲ. ನನ್ನ ತಾಯಿಯಂತೆ ಸಾಕಿದೆ. ಅವಳು ಕೇಳಿದ್ದೆಲ್ಲವನ್ನೂ ಕೊಟ್ಟೆ. ಹೇಳಿದ್ದೆಲ್ಲವನ್ನೂ ಮಾಡಿದೆ. ಆದರೆ ಅವಳು, ನನಗೆ ಮಾತ್ರವಲ್ಲ ಇಡೀ ಈ ಮನೆಗೆ ಬೆಂಕಿ ಇಟ್ಟು ಹೋದಳಲ್ಲ ತ್ಯಾಂಪಣ್ಣ. ನಾನು ಇನ್ನು ಈ ಊರಿನಲ್ಲಿ ಹೇಗೆ ತಲೆ ಎತ್ತಿ ನಡೆಯಲಿ. ನಾನು ಈ ಬದುಕಿನಲ್ಲಿ ಗಳಿಸಿದ್ದೆಲ್ಲವೂ ವ್ಯರ್ಥವಾಯಿತಲ್ಲ. ನನ್ನ ಕನಸುಗಳೆಲ್ಲ ನುಚ್ಚು ನೂರಾಯಿತಲ್ಲ ತ್ಯಾಂಪಣ್ಣ. ಯಾವುದು ಮನುಷ್ಯನಿಗೆ ಮುಖ್ಯ ಎಂದು ತಿಳಿದಿದ್ದೇನೋ ಅದನ್ನು ಕಳೆದು ಕೊಂಡುಬಿಟ್ಟೆ. ಇನ್ನು ನಾನು ಬದುಕಿದ್ದರೂ ಒಂದೇ ಸತ್ತರೂ ಒಂದೇ. ಅವಳು ನನ್ನನ್ನು ಜೀವಂತ ಕೊಂದು ಬಿಟ್ಟಳು. ಜೀವಂತ ಸಮಾಧಿ ಮಾಡಿಬಿಟ್ಟಳು ತ್ಯಾಂಪಣ್ಣ..’’ ಅಜ್ಜ ಮತ್ತೆ ಅಳತೊಡಗಿದರು.
‘‘ನಾನು ಹೋಗಿ ಅವಳನ್ನು ಕರೆದುಕೊಂಡು ಬರಲಾ’’ ತ್ಯಾಂಪಣ್ಣ ಕೇಳಿದರು.
ನಿನ್ನಜ್ಜ ಒಮ್ಮೆಲೆ ಬೆಚ್ಚಿ ಬಿದ್ದವರಂತೆ ‘‘ಬೇಡ... ಬೇಡ ತ್ಯಾಂಪಣ್ಣ... ದಮ್ಮಯ ನಿಮಗೆ... ಕರೆದುಕೊಂಡು ಬರಬೇಡಿ.. ನೋಡಿ ಅಲ್ಲಿ, ನಿಮ್ಮ ತಂಗಿ, ನನ್ನ ಫಾತಿಮಾ, ಅನ್ನ ನೀರಿಲ್ಲದೆ ಬಿದ್ದುಕೊಂಡಿದ್ದಾಳೆ. ಅವಳು ನನ್ನೊಡನೆ ಮಾತನಾಡದೆ ಅದೆಷ್ಟೋ ದಿನಗಳಾದವು. ನನಗೆ ಅವಳ ಮುಖ ನೋಡಲು ಸಾಧ್ಯವಾಗುತ್ತಿಲ್ಲ. ಎಲ್ಲಿ ಎದೆ ಒಡೆದು ಸತ್ತು ಬಿಡುತ್ತಾಳೇನೋ ಎಂದು ಭಯವಾಗುತ್ತಿದೆ ತ್ಯಾಂಪಣ್ಣ... ಹೆತ್ತ ಒಡಲಿಗೆ ಕೊಳ್ಳಿ ಇಟ್ಟಳಲ್ಲಾ ತ್ಯಾಂಪಣ್ಣ. ಅವಳನ್ನು ನೀವು ಸಮಾಧಾನ ಪಡಿಸಬೇಕು. ಸಾಂತ್ವನ ಹೇಳಬೇಕು. ಅವಳು ಬದುಕಬೇಕು. ಈ ಹುಣ್ಣನ್ನು ಹೊಟ್ಟೆಯಲ್ಲಿಟ್ಟುಕೊಂಡು ಇನ್ನೆಷ್ಟು ದಿನ ನಾವು ಬದುಕಲು ಸಾಧ್ಯ ಹೇಳಿ. ಇದ್ದರೆ ಒಟ್ಟಿಗೆ ಇರಬೇಕು. ಸತ್ತರೆ ಒಂದೇ ದಿನ ಸಾಯಬೇಕು. ಇನ್ನು ನನಗಿರುವುದು ಇದೊಂದೇ ಆಸೆ’’ ಅಜ್ಜನ ಕಣ್ಣೀರಿಗೆ ಕೊನೆಯೇ ಇಲ್ಲವಾಯಿತು.
ದಿನಗಳು ಉರುಳುತ್ತಿದ್ದವು.
ತ್ಯಾಂಪಣ್ಣ ಪ್ರತಿದಿನ ಒಮ್ಮೆಯಾದರೂ ಬಂದು ಅಜ್ಜ-ಅಜ್ಜಿಗೆೆ ಸಮಾಧಾನ ಹೇಳುತ್ತಿದ್ದರು. ಈ ಮನೆಗೆ ಯಾರೂ ಕಿರುಕುಳ ನೀಡಬಾರದೆಂದು ಅಂಗಳ ದಲ್ಲಿ ಸ್ವಲ್ಪ ಹೊತ್ತು ನಿಂತು ಸುತ್ತಲೂ ನೋಡುತ್ತಾ ಕಾವಲುಗಾರನಂತೆ ಜೋರು ಧ್ವನಿಯಲ್ಲಿ ಮಾತನಾ ಡುತ್ತಿದ್ದರು. ಮನೆಗೆ ಅಕ್ಕಿ, ಸಾಮಾನು, ಮೀನು ಹೊತ್ತು ತರುತ್ತಿದ್ದರು.