ತಳಪಾಯ ಇಲ್ಲದ ಕಟ್ಟಡಗಳು ಉಳಿಯುವುದು ಸಾಧ್ಯವೇ?
ಎರಡೂವರೆ ವರ್ಷಗಳ ಹಿಂದೆ, ಎನ್‌ಡಿಎಯವರು ನಾವು ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ನಾಗರಿಕನ ಖಾತೆಗೆ ಹದಿನೈದು ಲಕ್ಷ ರೂಪಾಯಿಗಳನ್ನು ತುಂಬುತ್ತೇವೆಂದು ಕೊಟ್ಟ ಒಂದು ‘ಕಾಗಕ್ಕ-ಗುಬ್ಬಕ್ಕ’ನ ಆಶ್ವಾಸನೆ ಎಷ್ಟರ ಮಟ್ಟಿಗೆ ಅವರ ದಮ್ಮು ಕಟ್ಟಿಸಿತ್ತೆಂಬುದಕ್ಕೆ ಮೊನ್ನೆ ಸಂಜೆ ಸ್ವತಃ ದೇಶದ ಪ್ರಧಾನಮಂತ್ರಿಯವರೇ ಮುಂದೆ ನಿಂತು ಯಕಶ್ಚಿತ್ ರಿಸರ್ವ್ ಬ್ಯಾಂಕಿನ ಗವರ್ನರ್ ಒಬ್ಬರು ಮಾಡಬೇಕಾದ ಕೆಲಸ ಮಾಡಿದ್ದೇ ಸಾಕ್ಷಿ. ಇವತ್ತು ದೇಶದಲ್ಲಿ ‘ಕರೆನ್ಸಿ ರದ್ದತಿ’ಯ ಕುರಿತು ಎಲ್ಲೆಡೆ ಆತಂಕ, ತಳಮಳ, ಗೊಂದಲ ಉಂಟಾಗಲು, ಈ ‘ಓವರ್ ಪ್ಲೇ’ ಬಹುಮುಖ್ಯ ಕಾರಣ.
ಕಪ್ಪು ಹಣದ ಬಗ್ಗೆ ದೇಶದ ಮನೆ ಮನೆಗಳಲ್ಲಿ ಚರ್ಚೆ ಆರಂಭ ಆಗಿದೆ. ಎಂದೋ ಆಗಬೇಕಿದ್ದ ಕೆಲಸ ಇದು.
ಸ್ವಾಯತ್ತವಾಗಿರಬೇಕಾದ ‘ರಿಸರ್ವ್ ಬ್ಯಾಂಕ್’ ಎಂಬ ಸಂಸ್ಥೆಯಲ್ಲಿ ದೇಶ ಆಳುವವರು ‘ತನ್ನ ಜನಗಳನ್ನು’ ಕುಳ್ಳಿರಿಸುವ ಸಂಪ್ರದಾಯ ಹೊಸದೇನಲ್ಲ. ಈ ಸ್ವಾಯತ್ತ ಸಂಸ್ಥೆ ಕೇಂದ್ರ ಸರಕಾರದ ಹಣಕಾಸು ಇಲಾಖೆಯ ಜೊತೆ ಚರ್ಚಿಸಿದ ಬಳಿಕ ನಿರ್ಧಾರ ತೆಗೆದುಕೊಂಡು ಪ್ರಕಟಿಸಬೇಕಾದ ವಿಚಾರವೊಂದನ್ನು ಸ್ವತಃ ಪ್ರಧಾನಮಂತ್ರಿಗಳೇ ನಿಂತು ಪ್ರಕಟಿಸುವ ಮೂಲಕ ರಾಜಕೀಯ ಮೈಲೇಜ್ ಪಡೆದುಕೊಂಡರು ಎಂಬ ಒಂದು ಅಂಶ ಬಿಟ್ಟರೆ 500, 1000 ರೂ. ಕರೆನ್ಸಿ ರದ್ದತಿಯಲ್ಲಿ ಬೇರೆ ವಿಶೇಷ ಏನಿಲ್ಲ. ಕಪ್ಪುಹಣ ನಿವಾರಣೆಗೆ ಇಂತಹದೊಂದು ತೀರ್ಮಾನ ತೆಗೆದುಕೊಳ್ಳುವಲ್ಲಿ ‘ರಿಸರ್ವ್ ಬ್ಯಾಂಕ್’ ವಿಳಂಬ ಮಾಡಿದ್ದು, ಇವತ್ತು ನಮ್ಮ ದೇಶ ತಲುಪಿರುವ ಸ್ಥಿತಿಗೆ ಮೂಲ ಕಾರಣ. ದೇಶದ ಆರ್ಥಿಕ ಸ್ಥಿತಿ ಸುಧಾರಣೆ, ದೇಶದ ಆಂತರಿಕ ಮತ್ತು ಬಾಹ್ಯ ಸಾಲಗಳ ಮರುಪಾವತಿ, ಸಬ್ಸಿಡಿ ನಿವಾರಣೆಗಳಂತಹ ಹಲವು ಅಂತಾರಾಷ್ಟ್ರೀಯ ಒತ್ತಡಗಳಿಗೆ ಸಿಲುಕಿರುವ ಕೇಂದ್ರ ಸರಕಾರ ಇಂತಹದೊಂದು ‘ಕಠಿಣ’ ನಿರ್ಧಾರ ತೆಗೆದುಕೊಳ್ಳದೆ ಬೇರೆ ದಾರಿ ಇರಲಿಲ್ಲ ಎಂಬುದು ವಾಸ್ತವ.
ಎರಡೂವರೆ ವರ್ಷಗಳ ಹಿಂದೆ, ಎನ್‌ಡಿಎಯವರು ನಾವು ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ನಾಗರಿಕನ ಖಾತೆಗೆ ಹದಿನೈದು ಲಕ್ಷ ರೂಪಾಯಿಗಳನ್ನು ತುಂಬುತ್ತೇವೆಂದು ಕೊಟ್ಟ ಒಂದು ‘ಕಾಗಕ್ಕ-ಗುಬ್ಬಕ್ಕ’ನ ಆಶ್ವಾಸನೆ ಎಷ್ಟರ ಮಟ್ಟಿಗೆ ಅವರ ದಮ್ಮು ಕಟ್ಟಿಸಿತ್ತೆಂಬುದಕ್ಕೆ ಮೊನ್ನೆ ಸಂಜೆ ಸ್ವತಃ ದೇಶದ ಪ್ರಧಾನಮಂತ್ರಿಯವರೇ ಮುಂದೆ ನಿಂತು ಯಕಶ್ಚಿತ್ ರಿಸರ್ವ್ ಬ್ಯಾಂಕಿನ ಗವರ್ನರ್ ಒಬ್ಬರು ಮಾಡಬೇಕಾದ ಕೆಲಸ ಮಾಡಿದ್ದೇ ಸಾಕ್ಷಿ. ಇವತ್ತ್ತು ದೇಶದಲ್ಲಿ ‘ಕರೆನ್ಸಿ ರದ್ದತಿ’ಯ ಕುರಿತು ಎಲ್ಲೆಡೆ ಆತಂಕ, ತಳಮಳ, ಗೊಂದಲ ಉಂಟಾಗಲು, ಈ ‘ಓವರ್ ಪ್ಲೇ’ ಬಹುಮುಖ್ಯ ಕಾರಣ. ರಿಸರ್ವ್ ಬ್ಯಾಂಕಿನ ಗವರ್ನರ್ ದೂರದರ್ಶನದಲ್ಲಿ ಪ್ರತ್ಯಕ್ಷರಾಗಿ ಈ ವಿಚಾರ ಪ್ರಕಟಿಸಿದ್ದರೆ, ಪ್ರಕಟನೆಯ ಫಲಿತಾಂಶವೇನೂ ಬದಲಾಗುತ್ತಿರಲಿಲ್ಲ; ಆದರೆ ಸರಕಾರಕ್ಕೆ ಮೈಲೇಜ್ ಸಿಗುತ್ತಿರಲಿಲ್ಲ. ಇರಲಿ.
ಕೆಲವು ವಾಸ್ತವಾಂಶಗಳು
ಭಾರತದಂತಹ ಪ್ರಜಾಪ್ರಭುತ್ವ, ತನ್ನೊಳಗಿನ ಭ್ರಷ್ಟಾಚಾರವನ್ನು ಹೇಗೆ ನಿಭಾಯಿಸಬೇಕು?
ಅಭಿವೃದ್ಧಿಯ ಹಾದಿಯಲ್ಲಿರುವ ದೇಶಗಳ ಬಹುದೊಡ್ಡ ಲಕ್ಷಣ ಎಂದರೆ, ಅದರ ಮಧ್ಯಮ ವರ್ಗದ ಗಾತ್ರ ಹಿಗ್ಗುವುದು. ಭಾರತಕ್ಕೂ ಅದು ಅನ್ವಯ. 135 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಅಲ್ಟ್ರಾ ಸಿರಿವಂತರ ಸಂಖ್ಯೆ ಅಂದಾಜು 2,60,000. (ವಿವರಗಳಿಗೆ ಬಾಕ್ಸ್ ನೋಡಿ). ಇದೇ ವೇಳೆ, ಸರಕಾರಿ ದಾಖಲೆಗಳಲ್ಲಿ ಅಧಿಕೃತವಾಗಿ ದೇಶದಲ್ಲಿರುವ ಬಡವರ ಪ್ರಮಾಣ ಸುಮಾರು ಶೇ. 24, ಅಂದರೆ ಅಂದಾಜು 33 ಕೋಟಿ ಜನ ವರ್ಷಕ್ಕೆ 40,000 ರೂಪಾಯಿಗಳಿಗಿಂತ ಕಡಿಮೆ ಆದಾಯದಲ್ಲಿ ಬದುಕುತ್ತಿದ್ದಾರೆ. ಅಲ್ಲಿಗೆ, ಈ ದೇಶದಲ್ಲಿರುವ ಮಧ್ಯಮ ವರ್ಗದ ಪ್ರಮಾಣ ಅಂದಾಜು 100 ಕೋಟಿ.
ಯಾವುದೇ ಕೋನದಿಂದ ನೋಡಿದರೂ, ಸರಕಾರ ಭ್ರಷ್ಟಾಚಾರವನ್ನು ನಿಗ್ರಹಿಸಲು ಈ ಮಧ್ಯಮ ವರ್ಗವನ್ನೇ ಗುರಿ ಮಾಡಬೇಕಾದುದು ಅನಿವಾರ್ಯ. ಅಗತ್ಯ ಬಿದ್ದರೆ ಎರಡೂವರೆ ಲಕ್ಷ ಅತಿಶ್ರೀಮಂತರನ್ನು, ಒಬ್ಬೊಬ್ಬರ ಮನೆಹೊಕ್ಕ್ಕು ಜಾಲಾಡುವ ಕೆಲಸ ಸರಕಾರಕ್ಕೆ ಕಷ್ಟದ್ದೇನಲ್ಲ. ಅದಕ್ಕೆ ಇಚ್ಛಾಶಕ್ತಿ ಬೇಕು; ಅಷ್ಟೇ. ಇವರೆಲ್ಲ ಈಗಾಗಲೇ ತೆರಿಗೆ ಬಲೆಯಲ್ಲಿದ್ದು, ಇವರ ಲೆಕ್ಕಕ್ಕೆ ಸಿಗದ ವ್ಯವಹಾರಗಳನ್ನು ಹುಡುಕುವುದಷ್ಟೆ ಸರಕಾರದ ಆದ್ಯತೆ. ಆದರೆ, ಮಧ್ಯಮ ವರ್ಗದವರದೇ ಬೇರೆ ಕಥೆ. ಇಲ್ಲಿ 100 ಕೋಟಿಯೊಳಗೆ ಬಹುದೊಡ್ಡ ವರ್ಗವೊಂದು ಈವತ್ತಿನ ತನಕವೂ ಆದಾಯ ತೆರಿಗೆಯ ಬಲೆಗೆ ಸಿಲುಕದೇ ಉಳಿದಿದೆ. ಈ ವರ್ಗ ಪ್ರತೀ ಊರು, ಪ್ರತೀ ವಾರ್ಡುಗಳಲ್ಲಿ ಇದೆ. ಗಮನಿಸಬೇಕಾದ ಸಂಗತಿ ಎಂದರೆ, 2012-13ನೆ ಸಾಲಿಗೆ ದೇಶದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದವರ, ತೆರಿಗೆ ಕಟ್ಟಿದವರ ಒಟ್ಟು ಸಂಖ್ಯೆ ಕೇವಲ 4.72 ಕೋಟಿ. ಹಾಗಾಗಿ ಈ ವರ್ಗದಿಂದ ತೆರಿಗೆ ತಪ್ಪಿಸಿಕೊಂಡ ಮಿಕಗಳನ್ನು ‘‘ಸ್ಮೋಕ್ ಔಟ್’’ ಮಾಡಲು ಕಠಿಣ ಕ್ರಮ ಅನಿವಾರ್ಯವಾಗಿತ್ತು.
ಯಾವತ್ತೋ ಆಗಬೇಕಿತ್ತು
ನಮ್ಮಲ್ಲಿ, ಅದರಲ್ಲೂ ಕರ್ನಾಟಕದಂತಹ ಮಧ್ಯಮವರ್ಗ ಬಾಹುಳ್ಯ ಇರುವ ರಾಜ್ಯದಲ್ಲಿ ಕಪ್ಪುಹಣದ ಪರಿಸ್ಥಿತಿ ಹೇಗಿದೆ? ಎಲ್ಲರಿಗೂ ಗೊತ್ತಿರುವಂತೆ ಮುಖ್ಯಮಂತ್ರಿಗಳೋ ಅಥವಾ ಪ್ರಧಾನಮಂತ್ರಿಗಳೋ, ಇಲ್ಲವೇ ಕೇಂದ್ರ ಹಣಕಾಸು ಮಂತ್ರಿಗಳೋ ಅಥವಾ ಸ್ವತಃ ಆದಾಯ ತೆರಿಗೆ ಕಮಿಷನರೋ, ಒಂದು ಸೈಟನ್ನೋ ಅಥವಾ ಫ್ಲಾಟನ್ನೋ ಖರೀದಿಸ ಬೇಕಿದ್ದರೆ, ಅವರೂ ‘ಬ್ಲ್ಯಾಕಲ್ಲಿ ಎಷ್ಟು- ವೈಟಲ್ಲಿ ಎಷ್ಟು ಕೊಡಬೇಕು?’ ಎಂದು ಕೇಳುವ ಸ್ಥಿತಿ ಇದೆ. ಒಂದು ಸರಕಾರಿ ಕಚೇರಿಗೆ ಹೋದರೆ, ಅಲ್ಲಿ ದುಡ್ಡು ಕಕ್ಕದೆ ಅವರು ನಿಮ್ಮತ್ತ ತಲೆ ಎತ್ತಿ ನೋಡುವ ಪರಿಸ್ಥಿತಿಯೂ ಇಲ್ಲ. ಬಡವರು, ಅಗತ್ಯ ಇರುವವರ ಪರಿಸ್ಥಿತಿ ಹೇಳಿತೀರದು. ಈ ಸಂಗತಿ ಗೊತ್ತಿಲ್ಲದವರೂ ಇಲ್ಲ. ಇಂತಹದೊಂದು ಸ್ಥಿತಿ ಬರಲು ಇರುವ ಏಕೈಕ ಕಾರಣ-ಅಕೌಂಟಬಿಲಿಟಿ ಇಲ್ಲದಿರುವುದು.
ಖಾಸಗಿ ರಂಗದಲ್ಲಿ, ನೇರ ನಗದು ಬಳಸಿ ಟ್ರೇಡಿಂಗ್ ನಡೆಸುವವರು, ಖಾಸಗಿ ಧಾರ್ಮಿಕ ಸಂಸ್ಥೆಗಳು, ರಿಯಲ್ ಎಸ್ಟೇಟಿನ ಏಜಂಟರು... ಹೀಗೆ ಹಲವು ಮಂದಿ ತಿಂಗಳಿಗೆ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಸುತ್ತಿದ್ದರೂ (ಸರಕಾರಕ್ಕೆ ತನ್ನ ಡೇಟಾಬೇಸ್‌ಗಳ ಮೂಲಕ ಈ ಚಿತ್ರಣ ಪಡೆಯುವುದು ಈಗ ಕಷ್ಟ ಇಲ್ಲ!) ಒಂದು ರೂಪಾಯಿ ತೆರಿಗೆಯನ್ನೂ ಕಟ್ಟುವುದಿಲ್ಲ. ಮೇಲಾಗಿ, ಸರಕಾರದಿಂದ ಬಡವರಿಗೆ ಸಿಗಬೇಕಾದ ಸವಲತ್ತುಗಳನ್ನೂ ಇವರೇ ಕಸಿದುಕೊಳ್ಳುತ್ತಾರೆ! ಇದಕ್ಕೂ ಕಾರಣ ನೈತಿಕತೆ ಮತ್ತು ಅಕೌಂಟಬಿಲಿಟಿ ಇಲ್ಲದಿರುವುದು.
ಹೆಚ್ಚಿನ ಪ್ರಮಾಣದಲ್ಲಿ ಜನ ತೆರಿಗೆ ಬಲೆಯೊಳಗೆ ಬರುವಂತೆ ಮಾಡು ವುದಕ್ಕೆ (ಹೀಗೆ ಮಾಡಬೇಕೆಂದು ವಿಶ್ವ ಬ್ಯಾಂಕ್ ಆದಿಯಾಗಿ ಹಲವು ಅಂತಾರಾಷ್ಟ್ರೀಯ ಒತ್ತಡಗಳೂ ಕೇಂದ್ರ ಸರಕಾರದ ಮೇಲಿವೆ) ಸರಕಾರ ಇಂತಹದೊಂದು ಕ್ರಮ ಕೈಗೊಳ್ಳಲೇ ಬೇಕಿತ್ತು.
ಮನಮೋಹನ್ ಸಿಂಗ್ ಈ ವಿಚಾರ ಗೊತ್ತಿಲ್ಲದವರೇನಲ್ಲ. ಆದರೆ, ಅಂತಾರಾಷ್ಟ್ರೀಯ ಒತ್ತಡಗಳ ಹೊರತಾಗಿಯೂ ಅವರು ತಮ್ಮ ರಾಜಕೀಯ ಅನಿವಾರ್ಯತೆಗಳ ಹಿತಾಸಕ್ತಿ ಕಾಪಾಡಿದರು. ಯುಪಿಎಯಂತಹ ಸರಕಾರವೊಂದು ಇಂತಹ ಕ್ರಮ ಕೈಗೊಂಡಿದ್ದರೆ, ಅವರು ಸುಲಭವಾಗಿ ‘ಪೊಲೀಸ್ ರಾಜ್’ ಎಂಬ ದೂರು ಕೇಳಬೇಕಾಗುತ್ತಿತ್ತು. ಆದರೆ, ಎನ್‌ಡಿಎ ಅಧಿಕಾರಕ್ಕೆ ಬಂದಮೇಲೆ, ಮಧ್ಯಮ ವರ್ಗದ ದೇಶಪ್ರೇಮ, ದೇಶ ಭಕ್ತಿಗಳ ಪ್ರಮಾಣ ಹಠಾತ್ತಾಗಿ ಏರಿದ್ದು, ನರೇಂದ್ರ ಮೋದಿಯವರ ಸರಕಾರಕ್ಕೆ ವರವಾಗಿಯೇ ಪರಿಣಮಿಸಿತು. ವಣಿಕವರ್ಗದ ಪರವೆಂದೇ ಬಿಂಬಿತವಾಗಿರುವ ಬಿಜೆಪಿ ಸುಲಭವಾಗಿ ತೆರಿಗೆ ತಪ್ಪಿಸಿಕುಳಿತಿರುವ ಅದೇ ವರ್ಗವನ್ನು ತೆರಿಗೆ ಪಾವತಿದಾರರನ್ನಾಗಿಸುವ ಖೆಡ್ಡಾಕ್ಕೆ ಕರೆತಂದಿದೆ. ‘‘ತೆರಿಗೆ ಕಟ್ಟುವುದು ಕೂಡ ದೇಶಪ್ರೇಮದ ಅವಿಭಾಜ್ಯ ಭಾಗ’’, ಕಟ್ಟಿದ ತೆರಿಗೆ ಸರಕಾರದಲ್ಲಿ ಸರಿಯಾಗಿ ಬಳಕೆಯಾಗುವಂತೆ ಎಚ್ಚರ ವಹಿಸುವುದು ಕೂಡ ‘‘ದೇಶಪ್ರೇಮ’’ ಎಂಬ ಹೊಸ ಎಚ್ಚರವೊಂದು ಮೂಡು ವಂತಾದರೆ, ಅದು ಒಳ್ಳೆಯದೆ.
ಟೀಕೆಯ ಹಾದಿ
ರಿಸರ್ವ್ ಬ್ಯಾಂಕ್ ಪ್ರಕಟಿಸಿರುವ ಕರೆನ್ಸಿ ರದ್ದತಿ ಬಗ್ಗೆ ಬರುತ್ತಿರುವ ಟೀಕೆಗಳ ಪ್ಯಾಟರ್ನ್ ಗಮನಿಸಿದಾಗ ಒಂದು ಸಂಗತಿ ಸ್ಪಷ್ಟವಾಗುತ್ತದೆ. ಇದು ‘ತುಘಲಕ್ ದರ್ಬಾರ್’ ಎಂದು ಆರಂಭಗೊಳ್ಳುವ ಹೆಚ್ಚಿನ ಟೀಕೆಗಳು ಕೊನೆಗೊಳ್ಳುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸುವುದರೊಂದಿಗೆ. ಇಂತಹದೊಂದು ಪರಿಸ್ಥಿತಿ ತಂದುಕೊಂಡದ್ದು ನರೇಂದ್ರಮೋದಿಯವರ ಸ್ವಯಂಕೃತಾಪರಾಧವೇ ಹೊರತು ರಿಸರ್ವ್ ಬ್ಯಾಂಕಿನ ತಪ್ಪಲ್ಲ. ಇದರಿಂದ ಅವರಿಗೆ ನಿಜವಾಗಿಯೂ ಮೈಲೇಜ್ ಸಿಗಲಿದೆಯೇ ಅಥವಾ ಅವರ ಪಕ್ಷದ ಮೂಲ ಬೆಂಬಲಿಗರಾದ ವಣಿಕ ವರ್ಗ ಅವರ ವಿರುದ್ಧ ತಿರುಗಿಬೀಳಲಿದೆಯೇ ಎಂಬುದು ಕಾದು ನೋಡಬೇಕಾಗಿರುವ ಸಂಗತಿ.
ಇನ್ನು, ಇದರಿಂದ ಬಡಜನರಿಗೆ ತೊಂದರೆ ಆಗುತ್ತದೆ ಎಂಬ ವಾದ ಹೂಡುವವರು ‘ಇನ್ನೊಬ್ಬರ ತಲೆಗೆ ಹೊಕ್ಕು ಯೋಚಿಸುವವರು’. ವರ್ಷಕ್ಕೆ 40,000 ರೂಪಾಯಿಗಳಲ್ಲಿ ದಿನ ಕಳೆಯುವ ಬಡವರು, ಹಲವು ವರ್ಷಗಳಿಂದ ವಾರಾನ್ನದಲ್ಲೋ, ಮಾಸಾನ್ನದಲ್ಲೋ ಬದುಕುತ್ತಿದ್ದಾರೆ. ಅವರ ಆರೋಗ್ಯ, ವಸತಿ, ಆಹಾರಗಳ ಬಗ್ಗೆ ಯಾವತ್ತೂ ಇರದ ಕಾಳಜಿ ಈಗ ಹಠಾತ್ ಎದ್ದುಬಂದಿರುವುದಕ್ಕೆ ‘ವಾದ ಮಾಡುವ ಚಟ’ ಬಿಟ್ಟರೆ ಬೇರೇನೂ ಕಾರಣ ಕಾಣುತ್ತಿಲ್ಲ. ದಿನದ ಕೂಲಿ, ವಾರದ ಸಂಬಳ, ತಿಂಗಳ ಸಂಬಳ ಆಧರಿಸಿರುವ ಆ ಕುಟುಂಬಗಳಿಗೆ ಪ್ರತಿದಿನ ಇಂತಹ ‘ಎಮರ್ಜನ್ಸಿ’ ಅನುಭವಿಸಿ ಗೊತ್ತಿರುತ್ತದೆ. ಹಳ್ಳಿಗಳಲ್ಲಿ ಅಗತ್ಯ ಬಿದ್ದರೆ ಅವರು ಹಂಚಿತಿನ್ನುವ ವ್ಯವಸ್ಥೆಯನ್ನೋ, ಇದ್ದದ್ದರಲ್ಲೇ ಬದುಕುವ ವ್ಯವಸ್ಥೆಯನ್ನೋ ಮಾಡಿಕೊಂಡಿರುತ್ತಾರೆ. ಎಲ್ಲೋ ಸ್ವಲ್ಪ ನಗರಗಳಲ್ಲಿ ‘ಮನುಷ್ಯತ್ವ’ದ ಪ್ರಮಾಣ ಇಳಿದು, ಹಂಚಿ ತಿನ್ನುವ ಬುದ್ಧಿ ಕಳೆದುಹೋಗಿರುವಲ್ಲಿ, ಕೆಲವರು ತೊಂದರೆ ಅನುಭವಿಸಿರಬಹುದು. ಇಂತಹದನ್ನು ಕಂಡ ‘ಪ್ರಜ್ಞಾವಂತರು’ ಅವರೊಂದಿಗೆ ಒಂದುವಾರ ಹಂಚಿತಿಂದರೆ, ನಗರಗಳ ಬಡವರೂ ಸಮಾಧಾನದಿಂದಿದ್ದಾರು. ಅವರ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಸ್ಟೇಟಸ್ ಅಪ್‌ಡೇಟ್ ಮಾಡುವುದು, ಅವರ ಸಮಸ್ಯೆಗಳಿಗೆ ಖಂಡಿತಾ ಪರಿಹಾರ ಅಲ್ಲ.
ದೀರ್ಘಕಾಲಿಕ ಪರಿಣಾಮ
ತೆರಿಗೆ ಬಲೆಯೊಳಗೆ ಬರುವವರ ಪ್ರಮಾಣ ಹೆಚ್ಚಾದರೆ, ಸರಕಾರದ ಆದಾಯ ಹೆಚ್ಚುತ್ತದೆ. ಆ ಆದಾಯವನ್ನು ವ್ಯಯಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ, ಜನಸಾಮಾನ್ಯರ ಕೆಲಸಗಳನ್ನು ಮಾಡಿಕೊಡುವ ಅಧಿಕಾರಿಗಳು ಭ್ರಷ್ಟಾಚಾರ ಮಾಡದೆ, ಪ್ರತೀ ಪೈಸೆ ಸರಿಯಾದ ಜಾಗಕ್ಕೆ ಸರಿಯಾದ ರೀತಿ ಯಲ್ಲಿ ತಲುಪುವಂತೆ ಮಾಡಿದರೆ ದೇಶ ಉದ್ಧಾರವಾದಂತೆ. ನಗದು ವ್ಯವಹಾರಕ್ಕೆ ಕಡಿವಾಣ ಬಿತ್ತೆಂದರೆ, ಕಪ್ಪುಹಣ ಉತ್ಪತ್ತಿ ಆಗುವುದು ಬಹು ತೇಕ ನಿಯಂತ್ರಣಕ್ಕೆ ಬರುತ್ತದೆ. ಇದಕ್ಕೆ ಜನರಲ್ಲಿ ‘ಪ್ರಾಮಾಣಿಕತೆ’ ಎಂಬ ಒಂದು ಸರಳ ಗುಣ ಮತ್ತು ಸರಕಾರದಲ್ಲಿ ‘ಇಚ್ಛಾಶಕ್ತಿ’ ಇದ್ದರೆ ಸಾಕು.
ಇನ್ನು ಬಹಳ ಮಂದಿ ಅರ್ಥಶಾಸ್ತ್ರಜ್ಞರು ಕರೆನ್ಸಿ ರದ್ದತಿ ಕ್ರಮದಿಂದ ಆರ್ಥಿಕತೆಯ ಮೇಲೆ ಹೊಡೆತ, ಮಾರುಕಟ್ಟೆಯ ಮೇಲೆ ಪರಿಣಾಮಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇದು ರಾಕೆಟ್ ಸಯನ್ಸ್. ಇವತ್ತ್ತು ಆ ರಾಕೆಟ್ ಸಯನ್ಸ್ ಬದಲು, ದೇಶಕ್ಕೆ ಅಗತ್ಯ ಇರುವುದು ಬೇಕಾದಷ್ಟೇ ಉತ್ಪಾದನೆ, ಉತ್ಪಾದಿಸಿದ್ದರ ಸುಯೋಜಿತ ಬಳಕೆ, ಅಗತ್ಯಕ್ಕೆ ತಕ್ಕ ಮೂಲಭೂತ ವ್ಯವಸ್ಥೆ. ಅಷ್ಟಾದರೆ, ಪರಿಸರವೂ ಸುರಕ್ಷಿತ, ದೇಶದ ಜನರೂ ಸುಭಿಕ್ಷ. ದೇಶದ ಮಾರುಕಟ್ಟೆಯಲ್ಲಿ, ಹಣಕಾಸು ವ್ಯವಸ್ಥೆಯಲ್ಲಿ ಹೊಡೆತ, ಕುಸಿತಗಳೆಲ್ಲ ಆಗುತ್ತಿವೆ ಎಂದಾದರೆ ಅದು ಆ ‘‘ರಾಕೆಟ್ ಸಯನ್ಸ್’’ಗಳ ಮಿತಿ; ಅಂತಹ ‘‘ಸಯನ್ಸ್, ಎಕನಾಮಿಕ್ಸ್’’ಗಳು ನಾವೀಗ ತಲುಪಿರುವ ಪರಿಸ್ಥಿತಿಗೆ ತಕ್ಕಂತೆ ಬದಲಾಗಬೇಕು.
ಒಟ್ಟಿನಲ್ಲಿ, ಪ್ರಾಮಾಣಿಕತೆ, ನೈತಿಕತೆ, ವಿವೇಚನೆಯಂತಹ ಸರಳ ಸಂಗತಿ ಗಳನ್ನು ಸುತ್ತಿ, ಬಳಸಿ ‘‘ರಾಕೆಟ್ ಸಯನ್ಸ್’’ ಮಾಡಿ, ಆ ಸಿದ್ಧಾಂತಗಳನ್ನು ಅರೆದು, ಕುಡಿದು ಏನೇನೂ ಪ್ರಯೋಜನ ಇಲ್ಲ. ತಳಪಾಯ ಇಲ್ಲದೇ ಕಟ್ಟಿದ ಕಟ್ಟಡಗಳು ಉಳಿಯುವುದೂ ಸಾಧ್ಯವಿಲ್ಲ.